ಪದ್ಯ ೭: ಭೀಮನು ಶತ್ರುಸೇನಕ್ಕೆ ಹೇಗೆ ತೋರಿದನು?

ಭುಜವನೊದರಿಸಿ ಸಿಂಹರವದಲಿ
ಗಜರಿ ಗದೆಯನು ತಿರುಹಿ ರಿಪು ಭೂ
ಭುಜರನರಸಿದನಳವಿಗಾಮ್ತರೆ ಕೊಂದನತಿಬಳರ
ತ್ರಿಜಗ ಮಝ ಭಾಪೆನಲು ಪವಮಾ
ನಜನು ತಿರುಗಿಟ್ಟಣಿಸೆ ಸೇನಾಂ
ಬುಜಕೆ ಕುಂಜರನಾದನೈ ಜನಮೇಜಯ ಕ್ಷಿತಿಪ (ಭೀಷ್ಮ ಪರ್ವ, ೫ ಸಂಧಿ, ೭ ಪದ್ಯ)

ತಾತ್ಪರ್ಯ:
ತೋಳನ್ನು ತಟ್ಟಿ, ಸಿಂಹನಾದ ಮಾಡಿ, ಗದೆಯನ್ನು ತಿರುವಿ ಶತ್ರು ರಾಜರನ್ನು ಹುಡುಕಿ ಯುದ್ಧದಲ್ಲಿ ಕೊಂದನು. ಭೀಮನು ಮತ್ತೆ ಆಕ್ರಮಿಸಿ ಶತ್ರುಸೇನಾ ಕಮಲವನಕ್ಕೆ ಮದದಾನೆಯಾದನು.

ಅರ್ಥ:
ಭುಜ: ತೋಳು; ಒದರು: ಕೊಡುವು; ಸಿಂಹ: ಕೇಸರಿ; ರವ: ಶಬ್ದ; ಗಜರಿ: ಗರ್ಜಿಸು; ಗದೆ: ಮುದ್ಗರ; ತಿರುಹಿ: ತಿರುಗಿಸು; ರಿಪು: ವೈರಿ; ಭೂಭುಜ: ಅರಸು; ಅರಸಿ: ಹುಡುಕಿ; ಅಳವಿ: ಯುದ್ಧ; ಕೊಂದು: ಸಾಯಿಸು; ಅತಿಬಲ: ಪರಾಕ್ರಮಿ; ತ್ರಿಜಗ: ಮೂರು ಲೋಕ; ಮಝ: ಭಲೇ; ಪವಮಾನಜ: ವಾಯು ಪುತ್ರ; ತಿರುಗು: ಅಲೆದಾಡು; ಸೇನ: ಸೈನ್ಯ; ಅಂಬುಜ: ಕಮಲ; ಕುಂಜರ: ಆನೆ; ಕ್ಷಿತಿಪ: ರಾಜ;

ಪದವಿಂಗಡಣೆ:
ಭುಜವನ್+ಒದರಿಸಿ +ಸಿಂಹ+ರವದಲಿ
ಗಜರಿ+ ಗದೆಯನು +ತಿರುಹಿ +ರಿಪು +ಭೂ
ಭುಜರನ್+ಅರಸಿದನ್+ಅಳವಿಗಾಂತರೆ +ಕೊಂದನ್+ಅತಿಬಳರ
ತ್ರಿಜಗ +ಮಝ +ಭಾಪೆನಲು +ಪವಮಾ
ನಜನು +ತಿರುಗಿಟ್ಟಣಿಸೆ +ಸೇನಾಂ
ಬುಜಕೆ +ಕುಂಜರನಾದನೈ+ ಜನಮೇಜಯ +ಕ್ಷಿತಿಪ

ಅಚ್ಚರಿ:
(೧) ಉಪಮಾನದ ಪ್ರಯೋಗ – ಪವಮಾನಜನು ತಿರುಗಿಟ್ಟಣಿಸೆ ಸೇನಾಂಬುಜಕೆ ಕುಂಜರನಾದನೈ

ಪದ್ಯ ೫೪: ಧೃತರಾಷ್ಟ್ರನು ಯಾರ ಬಗ್ಗೆ ಚಿಂತಿಸಿದ?

ಕೇಳು ಜನಮೇಜಯ ಧರಿತ್ರೀ
ಪಾಲ ಧೃತರಾಷ್ಟ್ರಂಗೆ ಮಕ್ಕಳ
ಮೇಲೆ ನೆನಹಾಯ್ತಧಿಕಶೋಕೋದ್ರೇಕ ಪಲ್ಲವಿಸೆ
ಕಾಳೆಗದೊಳೇನಾದರೋ ಭೂ
ಪಾಲತಿಲಕರು ದೃಗುವಿಹೀನರ
ಬಾಳಿಕೆಯ ಸುಡಲೆನುತ ತನ್ನೊಳು ಹಿರಿದು ಚಿಂತಿಸಿದ (ಭೀಷ್ಮ ಪರ್ವ, ೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಇತ್ತ ಹಸ್ತಿನಾಪುರದಲ್ಲಿ ಧೃತರಾಷ್ಟ್ರನಿಗೆ ಮಕ್ಕಳ ಚಿಂತೆ ಕವಿದಿತು. ಶೋಕ ಹೆಚ್ಚಿತು, ನನ್ನ ಮಕ್ಕಳು ಯುದ್ಧದಲ್ಲಿ ಏನಾದರೋ ಏನೋ> ನಾನು ಹೋಗಿ ನೋಡುವಂತಿಲ್ಲ, ಕಣ್ಣಿಲ್ಲದವರ ಬಾಳುವೆಯನ್ನು ಸುಡಲಿ ಎಂದು ಅವನು ತನ್ನೊಳಗೆ ತಾನೆ ಚಿಂತಿಸಿದ.

ಅರ್ಥ:
ಧರಿತ್ರೀಪಾಲ: ರಾಜ; ಮಕ್ಕಳು: ಸುತ, ಕುಮಾರ; ನೆನಹು: ನೆನಪು; ಅಧಿಕ: ಹೆಚ್ಚು; ಶೋಕ: ದುಃಖ; ಉದ್ರೇಕ: ಉದ್ವೇಗ; ಪಲ್ಲವಿಸು: ಚಿಗುರು; ಕಾಳೆಗ: ಯುದ್ಧ; ಭೂಪಾಲ: ರಾಜ; ತಿಲಕ: ಶ್ರೇಷ್ಠ; ದೃಗು: ಣ್ಣು, ನೇತ್ರ; ವಿಹೀನ: ಇಲ್ಲದ; ಬಾಳಿಕೆ: ಜೀವನ; ಸುಡು: ದಹಿಸು; ಹಿರಿದು: ಬಹಳವಾಗಿ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಧೃತರಾಷ್ಟ್ರಂಗೆ +ಮಕ್ಕಳ
ಮೇಲೆ +ನೆನಹಾಯ್ತ್+ಅಧಿಕ+ಶೋಕ+ಉದ್ರೇಕ +ಪಲ್ಲವಿಸೆ
ಕಾಳೆಗದೊಳ್+ಏನಾದರೋ+ ಭೂ
ಪಾಲ+ತಿಲಕರು+ ದೃಗು+ವಿಹೀನರ
ಬಾಳಿಕೆಯ +ಸುಡಲೆನುತ+ ತನ್ನೊಳು +ಹಿರಿದು +ಚಿಂತಿಸಿದ

ಅಚ್ಚರಿ:
(೧) ದೃಷ್ಟಿಹೀನತೆಯನ್ನು ಕರುಬುವ ಪರಿ – ದೃಗುವಿಹೀನರ ಬಾಳಿಕೆಯ ಸುಡಲೆನುತ ತನ್ನೊಳು ಹಿರಿದು ಚಿಂತಿಸಿದ

ಪದ್ಯ ೧: ಕೌರವರು ಹೇಗೆ ಹಿಂದಿರುಗಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ಭಂಗದಲಖಿಳ ಕೌರವ
ಜಾಲ ತಿರುಗಿತು ದುಗುಡದಲಿ ಗಜಪುರಕೆ ನಡೆತಂದು
ಮೇಲು ಮುಸುಕಿನ ಮೊಗದ ವಾದ್ಯದ
ಮೇಳ ಮೌನದಲಖಿಳ ನೃಪರು ನಿ
ಜಾಲಯಂಗಳ ಬಂದು ಹೊಕ್ಕರು ಹೊತ್ತ ದುಗುಡದಲಿ (ವಿರಾಟ ಪರ್ವ, ೧೦ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸೋಲು ಅಪಮಾನಗಳಿಂದ ಭಂಗಪಟ್ಟ ಕೌರವರು ಹಸ್ತಿನಾಪುರಕ್ಕೆ ಬಂದರು. ಮುಖಕ್ಕೆ ಮುಸುಕು ಹಾಕಿಕೊಂಡು, ವಾದ್ಯದ ಅಬ್ಬರವಿಲ್ಲದೆ ದುಃಖಸಂತಪ್ತರಾಗಿ ತಮ್ಮ ಮನೆಗಳಿಗೆ ಹೊಕ್ಕರು.

ಅರ್ಥ:
ಧರಿತ್ರೀ: ಭೂಮಿ; ಪಾಲ: ರಕ್ಷಕ; ಭಂಗ: ತುಂಡು, ಚೂರು; ಅಖಿಳ: ಎಲ್ಲಾ; ಜಾಲ: ಕಪಟ, ಮೋಸ; ತಿರುಗು: ಚಲಿಸು, ಸುತ್ತು; ದುಗುಡ: ದುಃಖ; ಗಜಪುರ: ಹಸ್ತಿನಾಪುರ; ನಡೆ: ಚಲಿಸು; ಮುಸುಕು: ಹೊದಿಕೆ; ಮೊಗ: ಮುಖ; ವಾದ್ಯ: ಸಂಗೀತದ ಸಾಧನ; ಮೇಳ: ಗುಂಪು; ಮೌನ: ನಿಶ್ಯಬ್ದ, ನೀರವತೆ; ಅಖಿಳ: ಎಲ್ಲಾ; ನೃಪ: ರಾಜ; ನಿಜಾಲಯ: ತಮ್ಮ ಮನೆ; ಬಂದು: ಆಗಮಿಸು; ಹೊಕ್ಕು: ಸೇರು; ಹೊತ್ತು: ಕರಿಕಾಗು; ದುಗುಡ: ದುಃಖ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಭಂಗದಲ್+ಅಖಿಳ +ಕೌರವ
ಜಾಲ +ತಿರುಗಿತು +ದುಗುಡದಲಿ +ಗಜಪುರಕೆ+ ನಡೆತಂದು
ಮೇಲು +ಮುಸುಕಿನ+ ಮೊಗದ+ ವಾದ್ಯದ
ಮೇಳ +ಮೌನದಲ್+ಅಖಿಳ +ನೃಪರು +ನಿಜ
ಆಲಯಂಗಳ+ ಬಂದು +ಹೊಕ್ಕರು +ಹೊತ್ತ +ದುಗುಡದಲಿ

ಅಚ್ಚರಿ:
(೧) ಮ ಕಾರದ ಪದಗಳು – ಮೇಲು ಮುಸುಕಿನ ಮೊಗದ ವಾದ್ಯದ ಮೇಳ ಮೌನದಲಖಿಳ

ಪದ್ಯ ೨೦: ಧರ್ಮಜನು ಯಾರ ಸೇವಕನಾದನು?

ಓಲಗಕೆ ಬಂದಖಿಳರಾಯರ
ಮೌಳಿ ಮೌಕ್ತಿಕ ಮಣಿ ಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದ ಪದ್ಮಯುಗ
ಕಾಲವಾವನನಾವಪರಿಯಲಿ
ಕೀಳು ಮಾಡದು ಧರ್ಮಪುತ್ರನ
ನಾಳುಗೊಂಡನು ಮತ್ಸ್ಯನೆಲೆ ಜನಮೇಜಯ ಕ್ಷಿತಿಪ (ವಿರಾಟ ಪರ್ವ, ೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಆಸ್ಥಾನಕ್ಕೆ ಬಂದ ರಾಜರ ಕಿರೀಟಗಳ ಮುತ್ತು ರತ್ನಗಳು ಧರ್ಮಜನ ಪಾದಗಳಿಗೆ ನಿವಾಳಿಮಾಡುತ್ತಿದ್ದವು. ಆದರೆ ಕಾಲವು ಯಾರನ್ನು ಯಾವ ರೀತಿಯಲ್ಲಿ ಕೀಳುಗಳೆಯುತ್ತದೆ ಎನ್ನುವುದು ಮಾತಿಗೆ ಮೀರಿದ್ದು. ಹುಲು ಮಾಂಡಲಿಕನಾದ ವಿರಾಟನು ಧರ್ಮಜನನ್ನು ಇಂದು ತನ್ನ ಸೇವಕನಾಗಿಟ್ಟುಕೊಂಡನು.

ಅರ್ಥ:
ಓಲಗ: ದರ್ಬಾರು; ಬಂದು: ಆಗಮಿಸು; ಅಖಿಳ: ಎಲ್ಲಾ; ರಾಯ: ರಾಜ; ಮೌಳಿ: ಶಿರ; ರಾಜರಮೌಳಿ: ರಾಜರಲ್ಲಿ ಶ್ರೇಷ್ಠನಾದವ; ಮೌಕ್ತಿಕ: ಮುತ್ತು; ಮಣಿ: ಬೆಲೆಬಾಳುವ ರತ್ನ; ಮಯೂಖ: ಕಿರಣ, ರಶ್ಮಿ; ನಿವಾಳಿ: ನೀವಳಿಸುವುದು, ದೃಷ್ಟಿ ತೆಗೆಯುವುದು; ನೆರೆ: ಪಕ್ಕ, ಪಾರ್ಶ್ವ; ಮೆರೆ: ಪ್ರಕಾಶಿಸು; ಪಾದ: ಚರಣ; ಪದ್ಮ: ಕಮಲ; ಯುಗ: ಎರಡು; ಕಾಲ: ಸಮಯ; ಪರಿ: ರೀತಿ; ಕೀಳು: ನೀಅ; ಆಳು: ಸೇವಕ; ಕ್ಷಿತಿಪ: ರಾಜ;

ಪದವಿಂಗಡಣೆ:
ಓಲಗಕೆ +ಬಂದ್+ಅಖಿಳ+ರಾಯರ
ಮೌಳಿ +ಮೌಕ್ತಿಕ+ ಮಣಿ +ಮಯೂಖ +ನಿ
ವಾಳಿಯಲಿ +ನೆರೆ +ಮೆರೆವುದ್+ಆತನ +ಪಾದ +ಪದ್ಮಯುಗ
ಕಾಲವ್+ಆವನನ್+ಆವ+ಪರಿಯಲಿ
ಕೀಳು +ಮಾಡದು +ಧರ್ಮ+ಪುತ್ರನನ್
ಆಳು+ಕೊಂಡನು +ಮತ್ಸ್ಯನೆಲೆ+ ಜನಮೇಜಯ +ಕ್ಷಿತಿಪ

ಅಚ್ಚರಿ:
(೧) ರಾಜ, ಕ್ಷಿತಿಪ – ಸಮನಾರ್ಥಕ ಪದ
(೨) ಮ ಕಾರದ ಸಾಲು ಪದ – ಮೌಳಿ ಮೌಕ್ತಿಕ ಮಣಿ ಮಯೂಖ
(೩) ಧರ್ಮಜನ ಹಿಂದಿನ ಹಿರಿಮೆ – ಓಲಗಕೆ ಬಂದಖಿಳರಾಯರ ಮೌಳಿ ಮೌಕ್ತಿಕ ಮಣಿ ಮಯೂಖ ನಿ
ವಾಳಿಯಲಿ ನೆರೆ ಮೆರೆವುದಾತನ ಪಾದ ಪದ್ಮಯುಗ

ಪದ್ಯ ೨೨: ಅರ್ಜುನನ ಸ್ಥಿತಿ ಏನಾಯಿತು?

ಮೇಲನಾರೈಯುವನೆ ತೃಷ್ಣಾ
ಲೋಲ ಚಿತ್ತನು ಕಾಮಿ ಮೃಗಯಾ
ಕೇಳಿಲಂಪಟನರ್ಥಲಾಭದ್ಯೂತಲೋಲುಪನು
ಕೇಳು ಜನಮೇಜಯ ತಟಾಕದ
ಕಾಳಕೂಟವ ಕುಡಿದನರ್ಜುನ
ಕಾಲಿಡುತ ಡೆಂಡಣಿಸಿ ಮೈಮರೆದವರ ಕೂಡಿದನು (ಅರಣ್ಯ ಪರ್ವ, ೨೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಬಾಯಾರಿದವನು, ಕಾಮುಕನು, ಬೇಟೆಯಲ್ಲಿ ನಿರತನಾದವನು, ಹಣವನ್ನು ಗೆಲ್ಲುವ ಬಯಕೆಯಿಂದ ಜೂಜಾಟದಲ್ಲಿ ಮುಳಿಗಿದವನು, ಇವರೆಲ್ಲರು ಮುಂದೆ ಏನಾದೀತು ಎಂದು ಚಿಂತಿಸುವವರೇ? ಅರ್ಜುನನು ಸರೋವರದ ವಿಷಜಲವನ್ನು ಕುಡಿದು, ದಡಕ್ಕೆ ಹತ್ತಿ ಅತ್ತಿತ್ತ ತೂಗಾಡಿ ನಕುಲ ಸಹದೇವರೊಡನೆ ನೆಲಕ್ಕೆ ಬಿದ್ದನು.

ಅರ್ಥ:
ಮೇಲೆ: ಮುಂದೆ; ಅರಿ: ತಿಳಿ; ತೃಷ್ಣ: ಬಾಯಾರಿಕೆ; ಲೋಲ:ವಿಷಯ ಲಂಪಟ; ಚಿತ್ತ: ಮನಸ್ಸು; ಕಾಮಿ: ವಿಷಯಾಭಿಲಾಷೆಯಲ್ಲಿ ಆಸಕ್ತ; ಮೃಗಯಾಕೇಳಿ: ಬೇಟೆ; ಲಂಪಟ: ಯಾವುದಾದರೊಂದು ಚಟವುಳ್ಳವನು, ಕಾಮಾಸಕ್ತ; ಅರ್ಥ: ಸಂಪತ್ತು, ಐಶ್ವರ್ಯ; ಲಾಭ: ಹೆಚ್ಚಿನ ಗಳಿಕೆ; ದ್ಯೂತ: ಪಗಡೆ, ಜೂಜು; ಕೇಳು: ಆಲಿಸು; ತಟಾಕ: ಕೆರೆ, ಜಲಾಶಯ; ಕಾಳಕೂಟ: ವಿಷ; ಕುಡಿ: ಪಾನಮಾದು; ಕಾಲು: ಪಾದ; ಡೆಂಡಣಿಸು: ಕಂಪಿಸು, ಕೊರಗು; ಮೈಮರೆ: ಮೂರ್ಛಿತನಾಗು; ಕೂಡು: ಜೊತೆ;

ಪದವಿಂಗಡಣೆ:
ಮೇಲನ್+ಆರೈಯುವನೆ+ ತೃಷ್ಣಾ
ಲೋಲ +ಚಿತ್ತನು +ಕಾಮಿ +ಮೃಗಯಾ
ಕೇಳಿ+ಲಂಪಟನ್+ಅರ್ಥಲಾಭ+ದ್ಯೂತ+ಲೋಲುಪನು
ಕೇಳು +ಜನಮೇಜಯ +ತಟಾಕದ
ಕಾಳಕೂಟವ +ಕುಡಿದನ್+ಅರ್ಜುನ
ಕಾಲಿಡುತ +ಡೆಂಡಣಿಸಿ+ ಮೈಮರೆದ್+ಅವರ +ಕೂಡಿದನು

ಅಚ್ಚರಿ:
(೧) ಮುಂದಾಲೋಚನೆ ಮಾಡದವರು – ಮೇಲನಾರೈಯುವನೆ ತೃಷ್ಣಾಲೋಲ ಚಿತ್ತನು ಕಾಮಿ ಮೃಗಯಾಕೇಳಿಲಂಪಟನರ್ಥಲಾಭದ್ಯೂತಲೋಲುಪನು

ಪದ್ಯ ೧: ಯಾರ ಹಣವು ಲೂಟಿಯಾಯಿತು?

ಕೇಳು ಜನಮೇಜಯ ಧರಿತ್ರೀ
ಪಾಲ ಸಿಕ್ಕಿದನತ್ತ ಕುರು ಭೂ
ಪಾಲನದನೇಹೇಳುವೆನು ಪಾಳೆಯದ ಗಜಬಜವ
ಆಳು ಹಾಯ್ದುದು ಕಂಡ ಮುಖದಲಿ
ಕೀಳು ಮೇಲೊಂದಾಯ್ತು ಧನಿಕರ
ಪೀಳಿಗೆಯ ಧನ ಸೂರೆಯೋದುದು ಕೇರಿಕೇರಿಯಲಿ (ಅರಣ್ಯ ಪರ್ವ, ೨೧ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಕೌರವನು ಸೆರೆಸಿಕ್ಕು ಹೋಗಲು, ಕೌರವನ ಪಾಳೆಯದಲ್ಲಿ ಗಲಭೆಯಾಯಿತು, ಪುಂಡರು ದಿಕ್ಕುದಿಕ್ಕಿಗೆ ನುಗ್ಗಿ ಕೀಳು ಮೇಳೆಂದು ಲೆಕ್ಕಿಸದೆ ಕೇರಿಕೇರಿಗಳಲ್ಲಿದ್ದ ಧನಿಕರ ಹಣವನ್ನು ಕೊಳ್ಳೆ ಹೊಡೆದರು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ಸಿಕ್ಕು: ಪಡೆ; ಭೂಪಾಲ: ರಾಜ; ಪಾಳೆಯ: ಬೀಡು, ಶಿಬಿರ; ಗಜಬಜ: ಗಲಾಟೆ, ಕೋಲಾಹಲ; ಆಳು: ದಾಸ, ಸೇವಕ; ಹಾಯಿ: ಮೇಲೆಬೀಳು; ಕಂಡು: ನೋಡು; ಮುಖ: ಆನನ; ಕೀಳು: ಕಳಪೆಯಾದ; ಧನಿಕ: ಶ್ರೀಮಂತ; ಪೀಳಿಗೆ: ವಂಶ; ಧನ: ಐಶ್ವರ್ಯ; ಸೂರೆ: ಕೊಳ್ಳೆ, ಲೂಟಿ; ಕೇರಿ: ಬೀದಿ, ಓಣಿ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಸಿಕ್ಕಿದನತ್ತ +ಕುರು +ಭೂ
ಪಾಲನದನೇ+ಹೇಳುವೆನು +ಪಾಳೆಯದ +ಗಜಬಜವ
ಆಳು +ಹಾಯ್ದುದು +ಕಂಡ +ಮುಖದಲಿ
ಕೀಳು +ಮೇಲೊಂದಾಯ್ತು +ಧನಿಕರ
ಪೀಳಿಗೆಯ+ ಧನ +ಸೂರೆಯೋದುದು +ಕೇರಿಕೇರಿಯಲಿ

ಅಚ್ಚರಿ:
(೧) ಧರಿತ್ರೀಪಾಲ, ಭೂಪಾಲ – ಸಮನಾರ್ಥಕ ಪದ

ಪದ್ಯ ೧: ಪಾಂಡವರು ಎಷ್ಟು ವರ್ಷ ವನವಾಸ ಮುಗಿಸಿದ್ದರು?

ಕೇಳು ಜನಮೇಜಯ ಧರಿತ್ರೀ
ಪಾಲ ಪಾಂಡು ಕುಮಾರಕರು ವಿಪಿ
ನಾಲಯದೊಳನುಭವಿಸಿದರು ದಶಸಂವತ್ಸರಂಗಳನು
ಲೀಲೆಮಿಗೆಯೈತಂದು ಯಮುನಾ
ಕೂಲದಲಿ ವರತೀರ್ಥಸೇವಾ
ಶೀಲರಿದ್ದರು ಸಕಲ ಮುನಿಜನ ಸಹಿತ ಹರುಷದಲಿ (ಅರಣ್ಯ ಪರ್ವ, ೧೭ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಪಾಂಡವರು ವನವಾಸದಲ್ಲಿ ಹತ್ತು ವರ್ಷಗಳನ್ನು ಕಳೆದು, ಯಮುನಾ ನದಿಯ ತೀರಕ್ಕೆ ಬಂದು, ಸಮಸ್ತ ಮುನಿಗಳೊಡನೆ ತೀರ್ಥ ಸೇವೆಯನ್ನು ಮಾಡುತ್ತಿದ್ದರು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರಿ: ಭೂಮಿ; ಕುಮಾರ: ಮಕ್ಕಳು; ವಿಪಿನ: ಅರಣ್ಯ; ಆಲಯ: ಮನೆ; ಅನುಭವ: ಅನುಭಾವ; ದಶ: ಹತ್ತು; ಸಂವತ್ಸರ: ವರ್ಷ; ಲೀಲೆ: ಆನಂದ, ಸಂತೋಷ; ಕೂಲ:ದಡ, ತಟ; ವರ: ಶ್ರೇಷ್ಠ; ತೀರ್ಥ: ಪವಿತ್ರವಾದ ಜಲ; ಶೀಲ: ನಡತೆ, ಸ್ವಭಾವ; ಸಕಲ: ಎಲ್ಲಾ; ಮುನಿ: ಋಷಿ; ಸಹಿತ: ಜೊತೆ; ಹರುಷ: ಸಂತಸ; ಐತಂದು: ಬಂದು ಸೇರು;

ಪದವಿಂಗಡಣೆ:
ಕೇಳು+ ಜನಮೇಜಯ +ಧರಿತ್ರೀ
ಪಾಲ +ಪಾಂಡು +ಕುಮಾರಕರು +ವಿಪಿ
ನಾಲಯದೊಳ್+ಅನುಭವಿಸಿದರು +ದಶ+ಸಂವತ್ಸರಂಗಳನು
ಲೀಲೆಮಿಗೆ+ಐತಂದು +ಯಮುನಾ
ಕೂಲದಲಿ +ವರ+ತೀರ್ಥ+ಸೇವಾ
ಶೀಲರಿದ್ದರು +ಸಕಲ+ ಮುನಿಜನ +ಸಹಿತ +ಹರುಷದಲಿ

ಪದ್ಯ ೧: ಭೀಮನನ್ನು ಯಾರೆಲ್ಲ ಸಂತೈಸಿದರು?

ಚಿತ್ತವಿಸು ಜನಮೇಜಯ ಕ್ಷಿತಿ
ಪೋತ್ತಮನೆ ಧರ್ಮಜನು ಮುಖದಲಿ
ಕೆತ್ತದುಗುಡವ ಬಿಡಿಸಿ ಭೀಮನ ತಂದನಾಶ್ರಮಕೆ
ಮತ್ತಕಾಶಿನಿ ಧೌಮ್ಯನಿಖಿಲ ಮ
ಹೋತ್ತಮರು ಪೀಯೂಷ ಮಧುರರ
ಸ್ತೋತ್ಕರದ ನುಡಿಗಳಲಿ ನಾದಿದರನಿಲಜನ ಮನವ (ಅರಣ್ಯ ಪರ್ವ, ೧೫ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಆಲಿಸು, ಭೀಮನನ್ನು ಆಕ್ರಮಿಸಿದ ದುಃಖವನ್ನು ಹೋಗಲಾಡಿಸಿ ಧರ್ಮಜನು ಅವನನ್ನು ಆಶ್ರಮಕ್ಕೆ ಕರೆತಂದನು. ದ್ರೌಪದಿ, ಧೌಮ್ಯರು, ಋಷಿಗಳೆಲ್ಲರೂ ಅಮೃತೋಪಮವಾದ ಮಾತುಗಳಿಂದ ಭೀಮನ ಮನಸ್ಸನ್ನು ಹರ್ಷಗೊಳಿಸಿದರು.

ಅರ್ಥ:
ಚಿತ್ತವಿಸು: ಗಮನವಿಟ್ಟು ಕೇಳು; ಕ್ಷಿತಿ: ಭೂಮಿ; ಕ್ಷಿತಿಪೋತ್ತಮ: ರಾಜಶ್ರೇಷ್ಠ; ಕ್ಷಿತಿಪ: ರಾಜ; ಮುಖ: ಆನನ; ಕೆತ್ತ: ತೋರಿದ; ದುಗುಡ: ದುಃಖ; ಬಿಡಿಸು: ಹೋಗಲಾಡಿಸು; ಆಶ್ರಮ: ಕುಟೀರ; ಮತ್ತಕಾಶಿನಿ: ಸುಂದರಿ; ನಿಖಿಲ: ಎಲ್ಲಾ; ಮಹೋತ್ತಮ: ಶ್ರೇಷ್ಠ; ಪೀಯೂಷ: ಅಮೃತ, ಸುಧೆ; ಮಧುರ: ಸವಿ; ರಸ: ಸಾರ; ಉತ್ಕರ: ರಾಶಿ; ನುಡಿ: ಮಾತು; ನಾದು: ಹದಮಾಡು; ಅನಿಲಜ: ವಾಯುಪುತ್ರ (ಭೀಮ); ಮನ: ಮನಸ್ಸು;

ಪದವಿಂಗಡಣೆ:
ಚಿತ್ತವಿಸು +ಜನಮೇಜಯ +ಕ್ಷಿತಿ
ಪೋತ್ತಮನೆ +ಧರ್ಮಜನು+ ಮುಖದಲಿ
ಕೆತ್ತ+ ದುಗುಡವ+ ಬಿಡಿಸಿ +ಭೀಮನ +ತಂದನ್+ಆಶ್ರಮಕೆ
ಮತ್ತಕಾಶಿನಿ +ಧೌಮ್ಯ+ ನಿಖಿಲ+ ಮ
ಹೋತ್ತಮರು +ಪೀಯೂಷ +ಮಧುರ+ರಸ
ಉತ್ಕರದ +ನುಡಿಗಳಲಿ +ನಾದಿದರ್+ಅನಿಲಜನ +ಮನವ

ಅಚ್ಚರಿ:
(೧) ದ್ರೌಪದಿಯನ್ನು ಮತ್ತಕಾಶಿನಿ (ಸುಂದರಿ) ಎಂದು ವರ್ಣಿಸಿರುವುದು
(೨) ರಾಜ ಎಂದು ಹೇಳಲು ಕ್ಷಿತಿಪೋತ್ತಮ ಪದದ ಬಳಕೆ
(೩) ಹದ ಮಾಡು ಎಂದು ಹೇಳಲು – ನಾದಿದರು ಪದದ ಬಳಕೆ

ಪದ್ಯ ೧: ಯಾವ ವೃತ್ತಾಂತವನ್ನು ಧರ್ಮಜನು ಕೇಳಲು ಬಯಸಿದನು?

ಕೇಳು ಜನಮೇಜಯ ಧರಿತ್ರೀ
ಪಾಲ ಧರ್ಮಜನರ್ಜುನನನುಪ
ಲಾಲಿಸಿದನುರೆ ಮುಳುಗಿದನು ಪುಳಕಾಶ್ರುಪೂರದಲಿ
ಹೇಳು ಪಾರ್ಥ ಕಪರ್ದಿಯಸ್ತ್ರ
ವ್ಯಾಳಸಂಗ್ರಹಣ ಪ್ರಪಂಚವ
ನಾಲಿಸುವೆನೆನೆ ನೃಪತಿಗಭಿವರ್ಣಿಸಿದನಾ ಕಥೆಯ (ಅರಣ್ಯ ಪರ್ವ, ೧೩ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನ ಮಾತುಗಳನ್ನು ಕೇಳಿ ರೋಮಾಂಚನ ಗೊಂಡ ಯುಧಿಷ್ಠಿರನು ಆನಂದಾಶ್ರುಗಳನ್ನು ಸುರಿಸುತ್ತಾ, ಅರ್ಜುನ, ಶಿವನ ಪಾಶುಪತಾಸ್ತ್ರದ ಲಾಭವು ಹೇಗಾಯಿತೆಂಬುದನ್ನು ಹೇಳು, ಕೇಳಲು ಉತ್ಸುಕನಾಗಿದ್ದೇನೆ ಎಂದು ಧರ್ಮಜನು ಕೇಳಲು, ಅರ್ಜುನನು ಆ ಕಥೆಯೆಲ್ಲವನ್ನೂ ವಿಸ್ತಾರವಾಗಿ ಹೇಳಿದನು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ಒಡೆಯ, ರಾಜ; ಅನುಪಮ: ಉತ್ಕೃಷ್ಟವಾದುದು; ಲಾಲಿಸು: ಅಕ್ಕರೆಯನ್ನು ತೋರಿಸು, ಮುದ್ದಾಡು; ಉರೆ: ಹೆಚ್ಚು, ಅಧಿಕ; ಮುಳುಗು: ಮುಚ್ಚಿಹೋಗು; ಪುಳಕ: ರೋಮಾಂಚನ; ಅಶ್ರು: ಕಣ್ಣೀರು; ಪೂರ: ಪೂರ್ಣ; ಹೇಳು: ತಿಳಿಸು; ಕಪರ್ದಿ: ಜಟಾಜೂಟವುಳ್ಳವ-ಶಿವ; ಅಸ್ತ್ರ: ಶಸ್ತ್ರ, ಆಯುಧ; ವ್ಯಾಳ: ಸರ್ಪ; ಸಂಗ್ರಹ: ಹಿಡಿತ, ವಶ; ಪ್ರಪಂಚ: ಜಗತ್ತು; ಆಲಿಸು: ಕೇಳು; ನೃಪತಿ: ರಾಜ; ಅಭಿವರ್ಣಿಸು: ಹೆಚ್ಚಾಗಿ ವರ್ಣನೆ ಮಾಡು; ಕಥೆ: ವೃತ್ತಾಂತ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಧರ್ಮಜನ್+ಅರ್ಜುನನ್+ಅನುಪ
ಲಾಲಿಸಿದನ್+ಉರೆ+ ಮುಳುಗಿದನು+ ಪುಳಕ+ಅಶ್ರು+ಪೂರದಲಿ
ಹೇಳು +ಪಾರ್ಥ +ಕಪರ್ದಿಯಸ್ತ್ರ
ವ್ಯಾಳ+ಸಂಗ್ರಹಣ +ಪ್ರಪಂಚವನ್
ಆಲಿಸುವೆನ್+ಎನೆ +ನೃಪತಿಗ್+ಅಭಿವರ್ಣಿಸಿದನಾ+ ಕಥೆಯ

ಅಚ್ಚರಿ:
(೧) ರೋಮಾಂಚನವನ್ನು ವಿವರಿಸುವ ಪರಿ – ಮುಳುಗಿದನು ಪುಳಕಾಶ್ರುಪೂರದಲಿ
(೨) ಕೇಳು, ಹೇಳು – ಪ್ರಾಸ ಪದಗಳು

ಪದ್ಯ ೧: ಯುಧಿಷ್ಠಿರನೇಕೆ ಆಶ್ಚರ್ಯಗೊಂಡನು?

ಕೇಳು ಜನಮೇಜಯ ಯುಧಿಷ್ಠಿರ
ನೋಲಗದೊಳುತ್ಪಾತ ಶತವಿವ
ರಾಲಿಗಳನಂಜಿಸಿದುವತಿರಂಜಿಸಿದುವದ್ಭುತವ
ಕೇಳಿದನಿದೇನೆಂದು ವರವಿ
ಪ್ರಾಳಿಯನು ಧೌಮ್ಯಾದಿ ಋಷಿಗಳು
ಹೇಳಿದರು ತಚ್ಛಕುನಸಂಗತಿಗಳ ಫಲೋತ್ತರವ (ಅರಣ್ಯ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುಧಿಷ್ಠಿರನ ಓಲಗದಲ್ಲಿ ನೂರಕ್ಕೂ ಹೆಚ್ಚು ಉತ್ಪಾತಕಗಳು ಕಾಣಿಸಿಕೊಂಡು ಕಣ್ಣಿಗೆ ಭಯವನ್ನುಂಟುಮಾಡಿ ಅದ್ಭುತವನ್ನು ತೋರ್ಪಡಿಸಿದವು, ಇವುಗಳನ್ನು ನೋಡಿದ ಯುಧಿಷ್ಠಿರನು ಅಲ್ಲಿ ನೆರೆದಿದ್ದ ಬ್ರಾಹ್ಮಣ ಶ್ರೇಷ್ಠರನ್ನು ಕೇಳಲು, ಧೌಮ್ಯಾದಿಗಳು ಆ ಶಕುನಗಳ ಫಲವನ್ನು ತಿಳಿಸಿದರು.

ಅರ್ಥ:
ಕೇಳು: ಆಲಿಸು; ಓಲಗ: ದರ್ಬಾರು; ಉತ್ಪಾತ: ಆಕಸ್ಮಿಕವಾದ ಘಟನೆ; ಶತ: ನೂರು; ಆಲಿ: ಕಣ್ಣು; ಅಂಜಿಸು: ಹೆದರು; ಅತಿ: ಬಹಳ; ರಂಜಿಸು: ಹೊಳೆ, ಪ್ರಕಾಶಿಸು; ಅದ್ಭುತ: ಆಶ್ಚರ್ಯ; ವರ: ಶ್ರೇಷ್ಠ; ವಿಪ್ರಾಳಿ: ಬ್ರಹ್ಮಣರ ಸಮೂಹ; ಆದಿ: ಮುಂತಾದ; ಋಷಿ: ಮುನಿ; ಹೇಳು: ತಿಳಿಸು; ಸಂಗತಿ: ವಿವರ; ಫಲ: ಪ್ರಯೋಜನ; ಉತ್ತರ: ಅಭಿವೃದ್ಧಿ;

ಪದವಿಂಗಡಣೆ:
ಕೇಳು +ಜನಮೇಜಯ +ಯುಧಿಷ್ಠಿರನ್
ಓಲಗದೊಳ್+ಉತ್ಪಾತ +ಶತವ್+ಇವರ್
ಆಲಿಗಳ್+ಅಂಜಿಸಿದುವ್+ಅತಿ+ರಂಜಿಸಿದುವ್+ಅದ್ಭುತವ
ಕೇಳಿದನ್+ಇದೇನೆಂದು +ವರ+ವಿ
ಪ್ರಾಳಿಯನು +ಧೌಮ್ಯಾದಿ +ಋಷಿಗಳು
ಹೇಳಿದರು +ತತ್ ಶಕುನ+ಸಂಗತಿಗಳ +ಫಲೋತ್ತರವ

ಅಚ್ಚರಿ:
(೧) ೩ ಸಾಲು ಒಂದೇ ಪದವಾಗಿ ರಚಿಸಿದುದು – ರಾಲಿಗಳನಂಜಿಸಿದುವತಿರಂಜಿಸಿದುವದ್ಭುತವ
(೨) ಕೇಳಿ, ವಿಪ್ರಾಳಿ, ಹೇಳಿ – ಪ್ರಾಸ ಪದಗಳು