ಪದ್ಯ ೬೨: ಶಿಶುಪಾಲನನ್ನು ಜಡಾತ್ಮನೆಂದು ಭೀಷ್ಮರು ಏಕೆ ಕರೆದರು?

ಇಂಗಿತಲರಿವುದು ಮಹಾತ್ಮರಿ
ಗಂಗವಿದು ಮಧ್ಯಮರು ಕರ್ಣಪ
ಥಂಗಳಲಿ ಗೋಚರಿಸಲರಿವುದು ಲೋಕವೃತ್ತಿಯಿದು
ಕಂಗಳಲಿ ಕಂಡರಿವರಧಮರು
ಕಂಗಳಲಿ ಕಿವಿಗಳಲಿ ಮೇಣ್ ಹರಿ
ಯಿಂಗಿತವನರಿಯದ ಜಡಾತ್ಮನು ಚೈದ್ಯನೃಪನೆಂದ (ಸಭಾ ಪರ್ವ, ೧೦ ಸಂಧಿ, ೬೨ ಪದ್ಯ)

ತಾತ್ಪರ್ಯ:
ಉತ್ತಮರಾದವರು ಆಶಯವನ್ನು ತಿಳಿದೇ ಕಾರ್ಯಪ್ರವೃತ್ತರಾಗುತ್ತಾರೆ, ಮಧ್ಯಮರು ಕೇಳಿ ತಿಳಿಯುತ್ತಾರೆ, ಅಧಮರು ಕಣ್ಣಿನಲ್ಲಿ ನೋಡಿ ತಿಳಿಯುತ್ತಾರೆ. ಈ ಶಿಶುಪಾಲನಾದರೋ ಕಣ್ಣಿನಿಂದ ನೋಡಿ, ಕಿವಿಯಿಂದ ಕೇಳಿ ಶ್ರೀಕೃಷ್ಣನ ಇಂಗಿತವನ್ನು ಅರಿಯದ ಜಡಾತ್ಮ ಎಂದು ಭೀಷ್ಮರು ಶಿಶುಪಾಲನನ್ನು ನಿಂದಿಸಿದರು.

ಅರ್ಥ:
ಇಂಗಿತ: ಆಶಯ, ಅಭಿಪ್ರಾಯ; ಅರಿ: ತಿಳಿ; ಮಹಾತ್ಮ: ಶ್ರೇಷ್ಠ; ಮಧ್ಯಮ: ತಾಮಸ ಜೀವಿ, ಸಾಧಾರಣವಾದ; ಕರ್ಣ: ಕಿವಿ; ಪಥ: ದಾರಿ; ಗೋಚರಿಸು: ತೋರು; ಲೋಕ: ಜಗತ್ತು; ವೃತ್ತಿ: ಸ್ಥಿತಿ, ನಡವಳಿಕೆ; ಕಂಗಳು: ನೇತ್ರ; ಕಂಡು: ನೋಡಿ; ಅರಿ: ತಿಳಿ; ಅಧಮ: ಕೀಳು, ನೀಚ; ಕಿವಿ: ಕರ್ಣ; ಮೇಣ್: ಅಥವ; ಹರಿ: ವಿಷ್ಣು; ಜಡ: ಅಚೇತನವಾದುದು, ಚಟುವಟಿಕೆಯಿಲ್ಲದ; ಚೈದ್ಯ: ಶಿಶುಪಾಲ; ನೃಪ: ರಾಜ;

ಪದವಿಂಗಡಣೆ:
ಇಂಗಿತಲ್+ಅರಿವುದು +ಮಹಾತ್ಮರಿಗ್
ಅಂಗವಿದು+ ಮಧ್ಯಮರು +ಕರ್ಣಪ
ಥಂಗಳಲಿ +ಗೋಚರಿಸಲ್+ಅರಿವುದು +ಲೋಕ+ವೃತ್ತಿಯಿದು
ಕಂಗಳಲಿ +ಕಂಡ್+ಅರಿವರ್+ಅಧಮರು
ಕಂಗಳಲಿ +ಕಿವಿಗಳಲಿ +ಮೇಣ್ +ಹರಿ
ಯಿಂಗಿತವನ್+ಅರಿಯದ +ಜಡಾತ್ಮನು +ಚೈದ್ಯ+ನೃಪನೆಂದ

ಅಚ್ಚರಿ:
(೧) ಉತ್ತಮ, ಮಧ್ಯಮ ಮತ್ತು ಅಧಮರ ಗುಣವಿಶೇಷಗಳನ್ನು ತಿಳಿಸುವ ಪದ್ಯ
(೨) ಪಥಂಗಳಲಿ, ಕಂಗಳಲಿ, ಕಿವಿಗಳಲಿ – ಪ್ರಾಸಪದಗಳ ಪ್ರಯೋಗ

ಪದ್ಯ ೧೦೨: ಮೃತ್ಯುದೇವತೆ ಯಾರನ್ನು ಬಿಡುವುದಿಲ್ಲ?

ಉತ್ತಮರುಗಳ ನಿಂದಿಸುತ ದು
ರ್ವೃತ್ತನಾಗಿಯಧರ್ಮಕೋಟಿಯೆ
ನಿತ್ಯವಿಧಿ ತನಗಾಗಿ ಧರ್ಮದ ತಾರತಮ್ಯವನು
ಎತ್ತಲೆಂದರಿಯದೆ ಜಗಕ್ಕೆ ಜ
ಡಾತ್ಮರಾಹಿಹ ವೇದಬಾಹ್ಯರ
ಮೃತ್ಯುದೇವತೆ ಮುರಿದು ಮೋದದೆ ಬಿಡುವಳೇಯೆಂದ (ಉದ್ಯೋಗ ಪರ್ವ, ೪ ಸಂಧಿ, ೧೦೨ ಪದ್ಯ)

ತಾತ್ಪರ್ಯ:
ಉತ್ತಮರನ್ನು ನಿಂದಿಸುತ್ತಾ, ಎಣಿಸಲಾಗದಷ್ಟು ಅಧರ್ಮವನ್ನಾಚರಿಸುವುದೇ ತನ್ನ ನಿತ್ಯವಿಧಿಯಾಗಿ, ಧರ್ಮದ ತಾರತಮ್ಯವನ್ನು ಅರಿಯದೇ, ಜಡಾತ್ಮರಾಗಿರುವ ವೇದಗಳನ್ನು ದೂರುವವರನ್ನು ಮೃತ್ಯುದೇವತೆ ಮುರಿದು ಆನಂದಿಸದೆ ಬಿಡುವಳೇ ಹೇಳೆಂದು ಸನತ್ಸುಜಾತರು ಧೃತರಾಷ್ಟ್ರನನ್ನು ಕೇಳಿದರು.

ಅರ್ಥ:
ಉತ್ತಮ: ಶ್ರೇಷ್ಠ; ನಿಂದಿಸು: ಬಯ್ಗಳು, ದೂಷಣೆ; ದುರ್ವೃತ್ತ: ಕೆಟ್ಟ ನಡತೆ; ಅಧರ್ಮ: ನ್ಯಾಯವಲ್ಲದುದು; ಕೋಟಿ: ಬಹಳ; ನಿತ್ಯ: ಯಾವಾಗಲು; ವಿಧಿ:ನಿಯಮ; ಧರ್ಮ: ಧಾರಣೆ ಮಾದಿದುದು, ನಿಯಮ, ಆಚಾರ; ತಾರತಮ್ಯ: ಹೆಚ್ಚು-ಕಡಿಮೆ, ಭೇದಭಾವ; ಅರಿ: ತಿಳಿ; ಜಗ: ಜಗತ್ತು; ಜಡ: ಚಲನೆಯಿಲ್ಲದ; ವೇದ: ಶೃತಿ; ಬಾಹ್ಯ: ಹೊರಗೆ; ಮೃತ್ಯು: ಸಾವು; ದೇವತೆ: ಸುರರು; ಮುರಿ: ಸೀಳು; ಮೋದ: ಸಂತೋಷ; ಬಿಡು: ತೊರೆ;

ಪದವಿಂಗಡಣೆ:
ಉತ್ತಮರುಗಳ +ನಿಂದಿಸುತ +ದು
ರ್ವೃತ್ತ+ನಾಗಿ+ಅಧರ್ಮ+ಕೋಟಿಯೆ
ನಿತ್ಯವಿಧಿ+ ತನಗಾಗಿ+ ಧರ್ಮದ +ತಾರತಮ್ಯವನು
ಎತ್ತಲೆಂದ್+ಅರಿಯದೆ +ಜಗಕ್ಕೆ+ ಜ
ಡಾತ್ಮರಾಹಿಹ +ವೇದ+ಬಾಹ್ಯರ
ಮೃತ್ಯುದೇವತೆ +ಮುರಿದು +ಮೋದದೆ +ಬಿಡುವಳೇಯೆಂದ

ಅಚ್ಚರಿ:
(೧) ‘ಮ’ಕಾರದ ಸಾಲು ಪದಗಳು – ಮೃತ್ಯುದೇವತೆ ಮುರಿದು ಮೋದದೆ
(೨) ಧರ್ಮ, ಅಧರ್ಮ – ವಿರುದ್ಧ ಪದಗಳು

ಪದ್ಯ ೪: ವ್ಯಾಸರಿಗೆ ಧೃತರಾಷ್ಟ್ರನು ಏನು ಹೇಳಿದನು?

ದೇವಮುನಿ ನಿಮ್ಮಡಿಯ ಕೃಪೆಯಿರ
ಲಾವು ಸುಕ್ಷೇಮಿಗಳೆ ಇಲ್ಲಿಗೆ
ನೀವು ಬಿಜಯಂಗೈದು ನಮ್ಮ ಜಡಾತ್ಮದೇಹಿಗಳ
ಪಾವನವ ಮಾಡಿದಿರಿ ಧನ್ಯರು
ನಾವು ವೇದವ್ಯಾಸಮುನಿ ಯೀ
ಜೀವ ನಿಮಗೆಯಧೀನ ಚಿತ್ತವಿಸೆಂದನಂಧನೃಪ (ಆದಿ ಪರ್ವ, ೨೧ ಸಂಧಿ, ೪ ಪದ್ಯ)

ತಾತ್ಪರ್ಯ:
ವೇದವ್ಯಾಸರೇ ನಿಮ್ಮ ಚರಣಾರವಿಂದದ ಕೃಪೆಯಿಂದ ನಾವು ಕ್ಷೇಮವಾಗಿದ್ದೀವಿ, ಇಲ್ಲಿಗೆ ನೀವು ಆಗಮಿಸಿರುವುದೇ ನಮ್ಮ ಜಡಾತ್ಮದೇಹಗಳೇ ಪಾವನವಾದವು ಇದಕ್ಕಾಗಿ ನಾವು ಧನ್ಯರು. ಈ ನಮ್ಮ ಜೀವನನೇ ನಿಮಗೆ ಅಧೀನ ಎಂದು ಧೃತರಾಷ್ಟ್ರನು ಹೇಳಿದನು.

ಅರ್ಥ:
ಮುನಿ: ಋಷಿ; ನಿಮ್ಮಡಿಯ: ನಿಮ್ಮ ಪಾದ; ಕೃಪೆ: ದಯೆ; ಸುಕ್ಶೇಮ: ಸುಖ; ಬಿಜಯಂಗೈ: ಆಗಮಿಸು; ಜಡ: ಆಲಸ್ಯ; ಪಾವನ:ಶುದ್ಧವಾದುದು; ಧನ್ಯ:ಕೃತಾರ್ಥ; ಅಧೀನ:ವಶ; ಚಿತ್ತ: ಮನಸ್ಸು;

ಪದವಿಂಗಡಣೆ:
ದೇವಮುನಿ+ ನಿಮ್ಮಡಿಯ +ಕೃಪೆಯಿರ
ಲಾವು +ಸುಕ್ಷೇಮಿಗಳೆ +ಇಲ್ಲಿಗೆ
ನೀವು +ಬಿಜಯಂಗೈದು +ನಮ್ಮ +ಜಡಾತ್ಮ+ದೇಹಿಗಳ
ಪಾವನವ+ ಮಾಡಿದಿರಿ+ ಧನ್ಯರು
ನಾವು +ವೇದವ್ಯಾಸಮುನಿ+ ಯೀ
ಜೀವ +ನಿಮಗೆಯಧೀನ+ ಚಿತ್ತವಿಸೆಂದನ್+ಅಂಧನೃಪ

ಅಚ್ಚರಿ:
(೧) ಆವು, ನೀವು, ನಾವು – ವು ಕಾರದಿಂದ ಕೊನೆಗೊಳ್ಳುವ ಪದ