ಪದ್ಯ ೩೨: ಕರ್ಣನು ತನ್ನ ಸೈನಿಕ ಸಮೂಹಕ್ಕೆ ಯಾವ ಕರೆ ನೀಡಿದನು?

ವೀರಭಟರಾಹವವ ಹೊಗಿ ಜ
ಝ್ಝಾರರಿತ್ತಲು ನಡೆಯಿ ಕದನವಿ
ಚಾರಶೀಲರು ಮುಂದೆ ಹೋಗಿ ಮಹಾರಥಾದಿಗಳು
ಆರು ಬಲ್ಲರು ಸಮರ ಯಜ್ಞದ
ಸಾರವನು ಪಾಪಿಗಳಿರಕಟ ಶ
ರೀರವನು ಕೊಡಿ ಪಡೆಯಿ ಮುಕ್ತಿಯನೆಂದನಾ ಕರ್ಣ (ಕರ್ಣ ಪರ್ವ, ೮ ಸಂಧಿ, ೩೨ ಪದ್ಯ)

ತಾತ್ಪರ್ಯ:
ವೀರ ಸೈನಿಕರು ಯುದ್ಧದಲ್ಲಿ ತೊಡಗಿರಿ, ಪರಾಕ್ರಮಿಗಳು ಇತ್ತ ನಡೆಯಿರಿ, ಕದನದ ಬಗ್ಗೆ ವಿಚಾರಮಾಡುವವ ಮಹಾಪರಾಕ್ರಮಿಗಳು ಮೊದಲಾದವರು ಮುನ್ನಡೆಯಿರಿ, ಯುದ್ಧ ಯಜ್ಞದ ಸಾರವನ್ನು ಯಾರು ಬಲ್ಲರು, ಅಯ್ಯೋ ಪಾಪಿಗಳಾ ಈ ಯುದ್ಧವೆಂಬ ಯಜ್ಞದಲ್ಲಿ ನಿಮ್ಮ ಶರೀರವನ್ನು ಧಾರೆಯೆರೆದು ಮುಕ್ತಿಗೆ ಪಾತ್ರರಾಗಿರಿ ಎಂದು ಕರ್ಣನು ತನ್ನ ಸೈನಿಕ ಸಮೂಹಕ್ಕೆ ಕರೆ ನೀಡಿದನು.

ಅರ್ಥ:
ವೀರ: ಪರಾಕ್ರಮಿ; ಭಟ: ಸೈನಿಕ; ಆಹವ: ಯುದ್ಧ; ಹೊಗಿ: ಹೋಗು; ಜಝ್ಝಾರಿ: ಪರಾಕ್ರಮಿ; ನಡೆ: ಬನ್ನಿ, ಹೋಗಿ; ಕದನ: ಯುದ್ಧ; ವಿಚಾರಶೀಲ: ವಿಷಯವನ್ನು ಕೂಲಂಕುಶವಾಗಿ ಅರಿಯುವ, ಮಗ್ನರಾಗಿರುವ; ಮುಂದೆ: ಮುಂಚೂಣಿ; ಮಹಾರಥ: ಶೂರ; ಆದಿ: ಮೊದಲಾದವರು, ಮುಂತಾದವರು; ಆರು: ಯಾರು; ಬಲ್ಲರು: ತಿಳಿದವರು; ಸಮರ: ಯುದ್ಧ; ಯಜ್ಞ: ಯಾಗ, ಯಜನ; ಸಾರ: ರಸ,ತಿರುಳು, ಗುಣ; ಪಾಪಿ: ದುಷ್ಟ; ಅಕಟ: ಅಯ್ಯೊ; ಶರೀರ: ಕಾಯ, ದೇಹ; ಕೊಡಿ: ನೀಡಿ; ಪಡೆ: ತೆಗೆದುಕೊಳ್ಳಿ; ಮುಕ್ತಿ:ಬಿಡುಗಡೆ, ವಿಮೋಚನೆ;

ಪದವಿಂಗಡಣೆ:
ವೀರಭಟರ್+ಆಹವವ +ಹೊಗಿ +ಜ
ಝ್ಝಾರರ್+ಇತ್ತಲು +ನಡೆಯಿ +ಕದನ+ವಿ
ಚಾರಶೀಲರು +ಮುಂದೆ +ಹೋಗಿ +ಮಹಾರಥಾದಿಗಳು
ಆರು +ಬಲ್ಲರು +ಸಮರ +ಯಜ್ಞದ
ಸಾರವನು +ಪಾಪಿಗಳಿರ್+ಅಕಟ+ ಶ
ರೀರವನು+ ಕೊಡಿ +ಪಡೆಯಿ +ಮುಕ್ತಿಯನೆಂದನಾ ಕರ್ಣ

ಅಚ್ಚರಿ:
(೧) ಕರ್ಣನ ನುಡಿ: ಶರೀರವನು ಕೊಡಿ ಪಡೆಯಿ ಮುಕ್ತಿಯನೆಂದನಾ ಕರ್ಣ
(೨) ಆಹವ, ಸಮರ, ಕದನ – ಸಮನಾರ್ಥಕ ಪದ
(೩) ವೀರಭಟ, ಜಝ್ಝಾರಿ, ಮಹಾರಥ – ಸಮನಾರ್ಥಕ ಪದ