ಪದ್ಯ ೯: ಭೀಮನ ಶಿರಸ್ತ್ರಾಣವನ್ನು ದುರ್ಯೋಧನನು ಹೇಗೆ ಹೊಡೆದನು?

ಹೊಕ್ಕು ಕುರುಪತಿ ಭೀಮಸೇನನ
ನಿಕ್ಕಿದನು ಕಂದದಲಿ ಗದೆಯನು
ಸೆಕ್ಕಿದನು ವಾಮಾಂಗದಲಿ ಪವಮಾನನಂದನನ
ಜಕ್ಕುಲಿಸಿದವೊಲಾಯ್ತು ಜರೆದು ನ
ಭಕ್ಕೆ ಪುಟನೆಗೆದನಿಲಜನ ಸೀ
ಸಕ್ಕೆ ಹೊಯ್ದಾರಿದನು ಕೌರವನೃಪತಿ ಖಾತಿಯಲಿ (ಗದಾ ಪರ್ವ, ೭ ಸಂಧಿ, ೯ ಪದ್ಯ)

ತಾತ್ಪರ್ಯ:
ಕೌರವನು ಮುನ್ನುಗ್ಗಿ ಭೀಮನ ಹೆಗಲನ್ನು ಗದೆಯಿಮ್ದ ಹೊಡೆದು, ಎಡ ಪಕ್ಕೆಯಲ್ಲಿ ಗದೆಯನ್ನು ಸಿಕ್ಕಿಸಿದನು. ಭೀಮನನ್ನು ಜರೆದು ಮೇಲಕ್ಕೆ ಹಾರಿ ಭೀಮನ ಶಿರಸ್ತ್ರಾನವನ್ನು ಹೊಡೆದು ಕೋಪದಿಂದ ಗರ್ಜಿಸಿದನು.

ಅರ್ಥ:
ಹೊಕ್ಕು: ಸೇರು; ಇಕ್ಕು: ಹೊಡೆ; ಕಂದ: ಹೆಗಲು; ಗದೆ: ಮುದ್ಗರ; ಸೆಕ್ಕು: ಕುಗ್ಗುವಿಕೆ, ಹಿಡಿದೆಳೆ; ವಾಮಾಂಗ: ಎಡಭಾಗ; ನಂದನ: ಮಗ; ಪವಮಾನ: ವಾಯು; ಜಕ್ಕುಲಿ: ಕಂಕುಳು, ಕಕ್ಷ; ಜರೆ: ಬಯ್ಯು, ಬೀಳಿಸು; ನಭ: ಆಗಸ; ಪುಟ:ಪುಟಿಗೆ, ನೆಗೆತ; ನೆಗೆ: ಜಿಗಿ; ಅನಿಲಜ: ವಾಯುಪುತ್ರ; ಸೀಸಕ: ಶಿರಸ್ತ್ರಾಣ; ಹೊಯ್ದು: ಹೊಡೆ; ನೃಪತಿ: ರಾಜ; ಖಾತಿ: ಕೋಪ;

ಪದವಿಂಗಡಣೆ:
ಹೊಕ್ಕು +ಕುರುಪತಿ +ಭೀಮಸೇನನನ್
ಇಕ್ಕಿದನು +ಕಂದದಲಿ +ಗದೆಯನು
ಸೆಕ್ಕಿದನು +ವಾಮಾಂಗದಲಿ +ಪವಮಾನ+ನಂದನನ
ಜಕ್ಕುಲಿಸಿದವೊಲಾಯ್ತು +ಜರೆದು +ನ
ಭಕ್ಕೆ+ ಪುಟನೆಗೆದ್+ಅನಿಲಜನ +ಸೀ
ಸಕ್ಕೆ+ ಹೊಯ್ದಾರಿದನು+ ಕೌರವ+ನೃಪತಿ +ಖಾತಿಯಲಿ

ಅಚ್ಚರಿ:
(೧) ಭೀಮಸೇನ, ಪವಮಾನನಮ್ದನ, ಅನಿಲಜ – ಭೀಮನನ್ನು ಕರೆದ ಪರಿ
(೨) ಹೊಡೆದ ಪರಿ – ನಭಕ್ಕೆ ಪುಟನೆಗೆದನಿಲಜನ ಸೀಸಕ್ಕೆ ಹೊಯ್ದಾರಿದನು ಕೌರವನೃಪತಿ ಖಾತಿಯಲಿ

ಪದ್ಯ ೮: ಅರ್ಜುನನೇಕೆ ಧರ್ಮಜನನನ್ನು ಸಾಯಿಸಲು ಹೊರಟನು?

ದೇವ ಪೂರ್ವದಲೆನ್ನ ನುಡಿ ಗಾಂ
ಡೀವವೇತಕೆ ನಿನಗೆ ನಿನಗೀ
ದೇವಧನು ಸಾದೃಶ್ಯವೇ ತೆಗೆಯೆಂದು ರೋಷದಲಿ
ಆವನೊಬ್ಬನು ನುಡಿದನಾತನ
ಜೀವನವ ಜಕ್ಕುಲಿಸಿಯೆನ್ನ ವ
ಚೋವಿಳಾಸವ ಕಾಯ್ವೆನೆಂದೆನು ಕೃಷ್ಣ ಕೇಳೆಂದ (ಕರ್ಣ ಪರ್ವ, ೧೭ ಸಂಧಿ, ೮ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಷ್ಣ ಈ ಹಿಂದೆ ನಿನಗೆ ಈ ದೇವತೆಗಳ ಬಿಲ್ಲೇಕೆ, ತೆಗೆ ಎಂದು ಯಾರು ಹೇಳುವರೋ ಅವರ ಪ್ರಾಣವನ್ನು ತೆಗೆಯುತ್ತೇನೆ ಎಂದು ಶಪಥಮಾಡಿದ್ದೆ. ಈಗ ಧರ್ಮಜನು ಈ ಮಾತನ್ನು ಹೇಳಿದ್ದಾನೆ, ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ತನ್ನನ್ನು ಸಮರ್ಥಿಸಿಕೊಂಡನು.

ಅರ್ಥ:
ದೇವ: ಭಗವಂತ; ಪೂರ್ವ: ಈ ಹಿಂದೆ; ನುಡಿ: ಮಾತು; ಧನು: ಬಿಲ್ಲು; ಸಾದೃಶ್ಯ:ಹೋಲಿಕೆ; ತೆಗೆ: ಈಚೆಗೆ ತರು, ಹೊರತರು; ರೋಷ: ಕೋಪ; ನುಡಿ: ಮಾತು; ಜೀವ: ಬದುಕು, ಉಸಿರು; ಜಕ್ಕುಲಿಸು: ಗೇಲಿ, ಹಾಸ್ಯಮಾಡು; ವಚೋವಿಳಾಸ: ಮಾತಿನ ಸೌಂದರ್ಯ; ಕಾಯುವೆ: ಕಾಪಾಡು;

ಪದವಿಂಗಡಣೆ:
ದೇವ +ಪೂರ್ವದಲ್+ಎನ್ನ +ನುಡಿ +ಗಾಂ
ಡೀವವ್+ಏತಕೆ +ನಿನಗೆ +ನಿನಗೀ
ದೇವ+ಧನು+ ಸಾದೃಶ್ಯವೇ +ತೆಗೆ+ಯೆಂದು +ರೋಷದಲಿ
ಆವನೊಬ್ಬನು +ನುಡಿದನ್+ಆತನ
ಜೀವನವ+ ಜಕ್ಕುಲಿಸಿ+ ಎನ್ನ +ವ
ಚೋವಿಳಾಸವ +ಕಾಯ್ವೆನ್+ಎಂದೆನು +ಕೃಷ್ಣ +ಕೇಳೆಂದ

ಅಚ್ಚರಿ:
(೧) ಜೀವವನ್ನು ತೆಗೆಯುತ್ತೇನೆ ಎಂದು ಹೇಳಲು – ಜೀವನವ ಜಕ್ಕುಲಿಸಿ
(೨) ವಚೋವಿಳಾಸ – ಮಾತಿನ ಹಿರಿಮೆ – ಪದಬಳಕೆ