ಪದ್ಯ ೧೫: ಅರ್ಜುನನಿಗೆ ಭೂರಿಶ್ರವನು ಏನನ್ನು ಕೇಳಿದನು?

ಆರು ಕೊಟ್ಟರು ಶರವನಿದ ಮದ
ನಾರಿಯೋ ನಿಮ್ಮಯ್ಯನಹ ಜಂ
ಭಾರಿಯೋ ಮೇಣ್ ಕೃಷ್ಣ ದ್ರೋನರೊ ಹೇಳು ಹುಸಿಯದಿರು
ವೀರನಹೆಯೋ ಪಾರ್ಥ ನಿನ್ನವೊ
ಲಾರು ಬಿಲುಗಾರರು ಮಹಾಸ್ತ್ರವಿ
ದಾರು ಕಲಿಸಿದ ವಿದ್ಯವುಪಯೋಗಿಸಿತು ನಿನಗೆಂದ (ದ್ರೋಣ ಪರ್ವ, ೧೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೂರಿಶ್ರವನು ಮಾತನಾಡುತ್ತಾ, ಅರ್ಜುನ, ನಿನಗೆ ಈ ಭಾಣವನ್ನು ಕೊಟ್ಟವರಾರು? ಶಿವನೋ, ದೇವೇಂದ್ರನೋ, ಕೃಷ್ಣನೋ, ದ್ರೋಣನೋ, ಹೇಳು, ಸುಳ್ಳನ್ನು ಹೇಳಬೇಡ, ನೀನು ಶ್ರೇಷ್ಠ ಧನುರ್ಧರ, ನಿನ್ನ ಸಮಾನದ ವೀರನಾರು, ನೀನು ಬಳಸಿದ ಈ ಮಹಾಸ್ತ್ರವು ಯಾರು ಕಲಿಸಿದ ವಿದ್ಯೆ ಈ ದಿನ ನಿನ್ನ ಉಪಯೋಗಕ್ಕೆ ಬಂದಿತಲ್ಲವೇ ಎಂದು ಕೇಳಿದನು.

ಅರ್ಥ:
ಕೊಟ್ಟರು: ನೀಡಿದರು; ಶರ: ಬಾಣ; ಮದನಾರಿ: ಶಿವ; ಅಯ್ಯ: ತಂದೆ; ಜಂಭಾರಿ: ದೇವೇಂದ್ರ; ಮೇಣ್: ಅಥವ; ಹೇಳು: ತಿಳಿಸು; ಹುಸಿ: ಸುಳ್ಳು; ವೀರ: ಶೂರ; ಬಿಲುಗಾರ: ಬಿಲ್ವಿದ್ಯೆಯಲ್ಲಿ ನಿಪುಣ; ಅಸ್ತ್ರ: ಶಸ್ತ್ರ; ಕಲಿಸು: ಹೇಳಿಕೊಡು; ಉಪಯೋಗಿಸು: ಪ್ರಯೋಗಿಸು;

ಪದವಿಂಗಡಣೆ:
ಆರು +ಕೊಟ್ಟರು +ಶರವನ್+ ಇದ+ ಮದ
ನಾರಿಯೋ +ನಿಮ್ಮಯ್ಯನಹ ಜಂ
ಭಾರಿಯೋ +ಮೇಣ್ +ಕೃಷ್ಣ+ ದ್ರೋಣರೊ+ ಹೇಳು +ಹುಸಿಯದಿರು
ವೀರನಹೆಯೋ +ಪಾರ್ಥ +ನಿನ್ನವೊಲ್
ಆರು +ಬಿಲುಗಾರರು +ಮಹಾಸ್ತ್ರವಿದ್
ಆರು +ಕಲಿಸಿದ +ವಿದ್ಯ+ಉಪಯೋಗಿಸಿತು +ನಿನಗೆಂದ

ಅಚ್ಚರಿ:
(೧) ಶಿವ ಮತ್ತು ಇಂದ್ರನನ್ನು ಕರೆದ ಪರಿ – ಮದನಾರಿ, ಜಂಭಾರಿ

ಪದ್ಯ ೪೩: ಪತ್ರವನ್ನು ಓದಿದನಂತರ ಇಂದ್ರನ ಪ್ರತಿಕ್ರಿಯೆ ಹೇಗಿತ್ತು?

ಕೇಳಿದನು ಜಂಭಾರಿ ಫಲುಗುಣ
ನೋಲೆಯಲ್ಲಿಹ ಹದನನೆಲ್ಲವ
ಕಾಲರುದ್ರನ ಖತಿಗೆ ವೆಗ್ಗಳವೆನಲು ಕೋಪಿಸುತ
ಕಾಳುಗೆಡೆದನು ಪಾರ್ಥನೆಂಬವ
ಮೇಲನರಿಯದೆ ನುಡಿದನಲ್ಲದೆ
ಕಾಳಗಕೆ ನರರಿದಿರೆ ಸುರರಿಂಗೆಂದನಮರೇಂದ್ರ (ಆದಿ ಪರ್ವ, ೨೧ ಸಂಧಿ, ೪೩ ಪದ್ಯ)

ತಾತ್ಪರ್ಯ:
ಪತ್ರದಲ್ಲಿದ್ದ ವಿಷಯವನ್ನು ಇಂದ್ರನು ಕೇಳಿದನು. ಆ ಪತ್ರದಲ್ಲಿ ಅರ್ಜುನನು ಬರೆದಿದ್ದ ರೀತಿಯನ್ನು ಕೇಳಿ ಇಂದ್ರನಿಗೆ ಕಾಲರುದ್ರನಿಗಿಂತ ಹೆಚ್ಚಿನ ಕೋಪ ಬಂದಿತು. ಅವನು ಅರ್ಜುನನು ಮುಂದೇನು ಎಂದರಿಯದೆ ವೃಥಾ ಜಂಬಕೊಚ್ಚಿಕೊಂಡಿದ್ದಾನೆ, ಯುದ್ಧದಲ್ಲಿ ದೇವತೆಗಳಿಗೆ ಮನುಷ್ಯರು ಸಮಾನರೆ ಎಂದನು.

ಅರ್ಥ:
ಕೇಳು: ಆಲಿಸು; ಜಂಭಾರಿ: ಇಂದ್ರ; ಫಲುಗುಣ: ಅರ್ಜುನ; ಓಲೆ: ಪತ್ರ; ಹದ: ರೀತಿ; ಖತಿ: ಕೋಪ; ವೆಗ್ಗಳ: ಹೆಚ್ಚಿನ, ಅಧಿಕವಾದ; ಕಾಳು: ವ್ಯರ್ಥ, ಕೇಡು; ಅರಿ: ತಿಳಿ; ನುಡಿ: ಮಾತು;ಕಾಲಗ: ಯುದ್ಧ; ನರ: ಮನುಷ್ಯ; ಇದಿರು: ಎದುರು; ಸುರರು: ದೇವತೆಗಳು

ಪದವಿಂಗಡಣೆ:
ಕೇಳಿದನು+ ಜಂಭ+ಅರಿ +ಫಲುಗುಣನ್
ಓಲೆಯಲ್ಲಿಹ+ ಹದನನ್+ಎಲ್ಲವ
ಕಾಲರುದ್ರನ+ ಖತಿಗೆ +ವೆಗ್ಗಳವೆನಲು+ ಕೋಪಿಸುತ
ಕಾಳುಗೆಡೆದನು +ಪಾರ್ಥನೆಂಬವ
ಮೇಲನ್+ಅರಿಯದೆ +ನುಡಿದನ್+ಅಲ್ಲದೆ
ಕಾಳಗಕೆ+ ನರರ್+ಇದಿರೆ +ಸುರರಿಂಗ್+ಎಂದನ್+ಅಮರೇಂದ್ರ

ಅಚ್ಚರಿ:
(೧) ಜಂಭಾರಿ, ಅಮರೇಂದ್ರ; ಫಲುಗುಣ, ಪಾರ್ಥ – ಸಮನಾರ್ಥಕ ಪದ
(೨) ಇಂದ್ರನ ಕೋಪವನ್ನು ವರ್ಣಿಸಲು ಬಳಸಿದ ಉಪಮಾನ – ಕಾಲರುದ್ರನ ಖತಿಗೆ ವೆಗ್ಗಳವೆನಲು ಕೋಪಿಸುತ

ಪದ್ಯ ೨೫: ವಿವಾಹ ಮಂಟಪವವು ಯಾರ ಆಸ್ಥಾನಕ್ಕೆ ಸಮನಾಗಿತ್ತು?

ಚಾರಣರ ಕೈವಾರ ತುಂಬುರ
ನಾರದರ ಸಂಗೀತ ರಂಭೆಯ
ಚಾರುನರ್ತನ ಚಿತ್ರರಥನ ಮೃದಂಗ ಮೃದುಶಬ್ದ
ಆರುಭಟೆ ಮಿಗಲಳ್ಳಿರವ ಜಂ
ಭಾರಿಯೋಲಗದಲಿ ತದೀಯ ಮ
ಹಾರಭಸವಿತರೇತರ ಪ್ರತಿಬಿಂಬವಾಯ್ತೆಂದ (ಆದಿ ಪರ್ವ, ೧೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಇಂದ್ರಲೋಕದಲ್ಲಿ ಕಾಣುವ ಸ್ತುತಿಪಾಠಕರ ಹೊಗಳಿಕೆ, ತುಂಬುರು ನಾರದರ ಸಂಗೀತ, ರಂಭೆಯ ನರ್ತನ, ಸೂರ್ಯನ ಮೃದಂಗವಾದನ, ಇವುಗಳಿಂದ ಆದ ಮಹಾಕೋಲಾಹಲವು, ಈ ಭೂಮಿಯ ಮೇಲೆ ದ್ರೌಪದಿಯ ಸ್ವಯಂವರ ಮಂಟಪದಲ್ಲಿ ಆಗುತ್ತಿದ್ದ ಶಬ್ದಕ್ಕೆ ಪ್ರತಿಬಿಂಬವೋ ಎಂಬಂತೆ ವಿವಾಹ ಮಂಟಪವು ಇಂದ್ರಲೋಕಕ್ಕೆ ಸಮನಾಗಿ ಕಾಣುತ್ತಿತ್ತು.

ಅರ್ಥ:
ಚಾರಣ: ಸ್ತುತಿಪಾಠಕ, ಹೊಗಳುಭಟ್ಟ; ಕೈವಾರ: ಹೊಗಳಿಕೆ; ತುಂಬುರ: ಒಂದು ಬಗೆಯ ವೀಣೆ; ನಾರದ: ತ್ರಿಲೋಕಸಂಚಾರಿ; ಸಂಗೀತ: ಗಾಯನಕಲೆ; ರಂಭೆ: ದೇವಲೋಕದ ಅಪ್ಸರೆ; ಚಾರು: ಸುಂದರ; ನರ್ತನ: ಕುಣಿತ; ಚಿತ್ರರಥ: ಸೂರ್ಯ, ಅಗ್ನಿ; ಮೃದಂಗ: ತಾಳ ವಾದ್ಯ; ಮೃದು: ಮೆಲ್ಲನೆ, ಮೆತುವು, ಕೋಮಲ; ಶಬ್ದ: ಧ್ವನಿ; ಆರುಭಟೆ: ಆರ್ಭಟ, ಗರ್ಜನೆ; ಮಿಗಿಲು: ಮೀರಿ; ಜಂಭಾರಿ: ಇಂದ್ರ; ಓಲಗ: ದರ್ಬಾರು; ತದೀಯ: ಅದರ; ಮಹಾ: ತುಂಬ; ರಭಸ: ಜೋರು; ಪ್ರತಿಬಿಂಬ: ಪ್ರತಿಚ್ಛಾಯೆ;

ಪದವಿಂಗಡಣೆ:
ಚಾರಣರ +ಕೈವಾರ +ತುಂಬುರ
ನಾರದರ+ ಸಂಗೀತ +ರಂಭೆಯ
ಚಾರು+ನರ್ತನ+ ಚಿತ್ರರಥನ+ ಮೃದಂಗ +ಮೃದುಶಬ್ದ
ಆರುಭಟೆ+ ಮಿಗಲಳ್ಳಿರವ+ ಜಂ
ಭಾರಿ+ಯೋಲಗದಲಿ+ ತದೀಯ +ಮ
ಹಾ+ರಭಸ+ವಿತರೇತರ +ಪ್ರತಿಬಿಂಬವಾಯ್ತೆಂದ

ಅಚ್ಚರಿ:
(೧) ಇಂದ್ರನಿಗೆ ಜಂಭಾರಿ ಎಂದು ಬಳಕೆ
(೨) ಮೃದಂಗದ ಮೃದುಶಬ್ದ – ಮೃ ಕಾರದ ಜೋಡಿ ಪದಗಳು;
(೩) ತುಂಬುರ, ಮೃದಂಗ – ವಾದ್ಯಗಳ ಪದ ಬಳಕೆ