ಪದ್ಯ ೨೨: ಬಲರಾಮನು ಹೇಗೆ ಎದ್ದು ನಿಂತನು?

ಕಂಡನೀವ್ಯತಿಕರವನರಸನ
ಮಂಡೆಯಂಘ್ರಿಯ ಭೀಮಸೇನನ
ದಂಡಿಯನು ದಟ್ಟಯಿಸೆ ಸುಯಿ ದಳ್ಳುರಿಯ ಚೂಣಿಯಲಿ
ಗಂಡುಗೆದರಿದ ರೋಷಶಿಖಿ ಹುರಿ
ಗೊಂಡುದಕ್ಷಿಗಳಲಿ ವೃಕೋದರ
ಕೊಂಡನೇ ತಪ್ಪೇನೆನುತ ನಿಂದಿದ್ದನಾ ರಾಮ (ಗದಾ ಪರ್ವ, ೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಭೀಮನು ಕೌರವನ ತಲೆಯನೊದೆದುದನ್ನೂ, ತೊಡೆಯೊಡೆದುದನ್ನೂ ಕಂಡ ಬಲರಾಮನು ಉರಿಕಾರುವ ಬಿಸಿಯುಸಿರನ್ನು ಬಿಡುತ್ತಾ, ಕೋಪಾಗ್ನಿಯು ಕಣ್ಣುಗಳಲ್ಲಿ ಹೊರಹೊಮ್ಮಲು, ಭೀಮನು ತೊಡೆಯೊಡೆದು ತಲೆಯೊದೆದನೇ? ಹಾ ತಪ್ಪೇನು ಎನ್ನುತ್ತಾ ಎದ್ದು ನಿಂತನು.

ಅರ್ಥ:
ಕಂಡು: ನೋಡು; ವ್ಯತಿಕರ: ರಸ್ಪರ ಕೊಡುಕೊಳ್ಳುವುದು; ಅರಸ: ರಾಜ; ಮಂಡೆ: ಶಿರ; ಅಂಘ್ರಿ: ಪಾದ; ದಂಡಿ: ಘನತೆ, ಹಿರಿಮೆ, ಶಕ್ತಿ; ದಟ್ಟಯಿಸು: ನೋಡು; ಸುಯಿ: ನಿಟ್ಟುಸಿರು; ದಳ್ಳುರಿ: ಬಿಸಿ, ಝಳ, ತಾಪ; ಚೂಣಿ: ಮುಂದಿನ ಸಾಲು, ಮುಂಭಾಗ; ಗಂಡುಗೆದರು: ಶೌರ್ಯ, ಪರಾಕ್ರಮ; ಕೆದರು: ಹರಡು; ರೋಷ: ಕೋಪ; ಶಿಖಿ: ಬೆಂಕಿ; ಹುರಿ: ಕೆಚ್ಚು, ಬಲ, ಗಟ್ಟಿತನ; ಅಕ್ಷಿ: ಕಣ್ಣು; ತಪ್ಪು: ಸರಿಯಲ್ಲದು; ನಿಂದು: ನಿಲ್ಲು;

ಪದವಿಂಗಡಣೆ:
ಕಂಡನೀ+ವ್ಯತಿಕರವನ್+ಅರಸನ
ಮಂಡೆ+ಅಂಘ್ರಿಯ +ಭೀಮಸೇನನ
ದಂಡಿಯನು +ದಟ್ಟಯಿಸೆ +ಸುಯಿ +ದಳ್ಳುರಿಯ +ಚೂಣಿಯಲಿ
ಗಂಡು+ಕೆದರಿದ +ರೋಷಶಿಖಿ +ಹುರಿ
ಗೊಂಡುದ್+ಅಕ್ಷಿಗಳಲಿ +ವೃಕೋದರ
ಕೊಂಡನೇ +ತಪ್ಪೇನೆನುತ +ನಿಂದಿದ್ದನಾ+ ರಾಮ

ಅಚ್ಚರಿ:
(೧) ಕೋಪವನ್ನು ವರ್ಣಿಸುವ ಪರಿ – ಸುಯಿ ದಳ್ಳುರಿಯ ಚೂಣಿಯಲಿ ಗಂಡುಗೆದರಿದ ರೋಷಶಿಖಿ ಹುರಿ
ಗೊಂಡುದಕ್ಷಿಗಳಲಿ

ಪದ್ಯ ೩೨: ಭೀಮನ ಬಿರುನುಡಿಯು ಕೌರವನನ್ನು ಹೇಗೆ ಎಚ್ಚರಿಸಿತು?

ಮರೆದುದುದಕಸ್ತಂಭ ಸಲಿಲದ
ಹೊರಗೆ ಬೊಬ್ಬುಳಿಕೆಗಳ ತೆರೆ ನೊರೆ
ದುರುಗಿದವು ಘುಳುಘುಳಿಸಿ ಜಲಬುದ್ಬುದದ ಚೂಣಿಯಲಿ
ದುರುದುರಿಪ ಬಿಸುಸುಯ್ಲ ಸೆಕೆಯಲಿ
ಮರುಗಿ ಕುದಿದುದು ನೀರು ಭೀಮನ
ಬಿರುನುಡಿಯ ಬೇಳಂಬದಲಿ ಬೆಂಡಾದನಾ ಭೂಪ (ಗದಾ ಪರ್ವ, ೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ದುರ್ಯೋಧನನಿಗೆ ಜಲಸ್ತಂಭದ ಮಂತ್ರವು ಮರೆತುಹೋಯಿತು. ಆಗ ಅವನ ಸುತ್ತಲೂ ನೀರಿನ ಗುಳ್ಳೆಗಳನ್ನೊಳಗೊಂಡ ತೆರೆಗಳು ಆವರಿಸಿದವು. ಭೀಮನ ಬಿರುನುಡಿಗಳಿಂದ ಬೆಂಡಾಗಿ ಮರುಗಿ ಕೋಪಗೊಂಡು ಅವನು ನಿಟ್ಟುಸಿರು ಬಿಟ್ಟನು.

ಅರ್ಥ:
ಮರೆ: ಜ್ಞಾಪಕದಿಂದ ದೂರವಾಗು; ಉದಕ: ನೀರು; ಸ್ತಂಭ: ಗಟ್ಟಿಯಾಗಿ ನಿಲ್ಲುವ, ನಿಶ್ಚಲತೆ; ಹೊರಗೆ: ಆಚೆ; ಬೊಬ್ಬುಳಿ: ನೀರು ಗುಳ್ಳೆ; ತೆರೆ: ತೆಗೆ, ಬಿಚ್ಚು; ನೊರೆ: ಬುರುಗು, ಫೇನ; ಉರುಗು: ಪಕ್ಕಕ್ಕೆ ತಿರುಗು; ಘುಳು: ನೀರಿನ ಶಬ್ದವನ್ನು ವಿವರಿಸುವ ಪದ; ಜಲ: ನೀರು; ಬುದ್ಬುದ: ನೀರಿನ ಮೇಲಣ ಗುಳ್ಳೆ, ಬೊಬ್ಬುಳಿ; ಚೂಣಿ: ಮೊದಲು, ಕೊನೆ; ದುರುದುರಿಪ: ಒಂದೇ ಸಮನಾಗಿ ಹೊರಚಿಮ್ಮುವ; ಬಿಸುಸುಯ್ಲು: ನಿಟ್ಟುಸಿರು; ಸೆಕೆ: ಶಾಖ, ಕಾವು; ಮರುಗು: ತಳಮಳ, ಸಂಕಟ; ಕುದಿ: ಶಾಖದಿಂದ ಉಕ್ಕು, ಮರಳು; ನೀರು: ಜಲ; ಬಿರುನುಡಿ: ಒರಟಾದ ಮಾತು; ಬೇಳಂಬ: ಚಿಂತೆ, ವಿಚಾರ; ಬೆಂಡು:ತಿರುಳಿಲ್ಲದುದು, ಪೊಳ್ಳು; ಭೂಪ: ರಾಜ;

ಪದವಿಂಗಡಣೆ:
ಮರೆದುದ್+ಉದಕಸ್ತಂಭ +ಸಲಿಲದ
ಹೊರಗೆ +ಬೊಬ್ಬುಳಿಕೆಗಳ +ತೆರೆ +ನೊರೆದ್
ಉರುಗಿದವು +ಘುಳುಘುಳಿಸಿ +ಜಲಬುದ್ಬುದದ+ ಚೂಣಿಯಲಿ
ದುರುದುರಿಪ +ಬಿಸುಸುಯ್ಲ +ಸೆಕೆಯಲಿ
ಮರುಗಿ+ ಕುದಿದುದು +ನೀರು +ಭೀಮನ
ಬಿರುನುಡಿಯ +ಬೇಳಂಬದಲಿ +ಬೆಂಡಾದನಾ +ಭೂಪ

ಅಚ್ಚರಿ:
(೧) ಬ ಕಾರದ ಸಾಲು ಪದ – ಭೀಮನ ಬಿರುನುಡಿಯ ಬೇಳಂಬದಲಿ ಬೆಂಡಾದನಾ ಭೂಪ
(೨) ಕೌರವನ ಸಿಟ್ಟಿನ ಪ್ರಖರತೆ – ದುರುದುರಿಪ ಬಿಸುಸುಯ್ಲ ಸೆಕೆಯಲಿ ಮರುಗಿ ಕುದಿದುದು ನೀರು
(೩) ಉದಕ, ಜಲ, ನೀರು – ಸಮಾನಾರ್ಥಕ ಪದ
(೪) ರನ್ನ ಕವಿಯ ಈ ಕಾವ್ಯವು ದುರ್ಯೋಧನನ ಕೋಪವನ್ನು ತೋರಿಸುತ್ತದೆ:
ಅನಿಲತನುಜನ ಸಿಂಹಧ್ವನಿಯಂ ಕೇಳ್ದಲ್ಲಿತ
ತ್ಸರೋವರದೆರ್ದೆ ಪವ್ವನೆ ಪಾರುವಂತೆ
ಪಾರಿದು ವನಾಕುಳಂ ಕೊಳದೊಳಿರ್ದತದ್ವಿಹಗಕುಲಂ
ಆ ರವಮಂ ನಿರ್ಜಿತಕಂಠೀರವರವಮಂ
ನಿರಸ್ತಘನರವಮಂ ಕೋಪಾರುಣನೇತ್ರಂ ಕೇಳ್ದು
ನೀರೊಳಿರ್ದುಂ ಬೆಮರ್ದಂಉರಗಪತಾಕಂ

ಪದ್ಯ ೧೪: ಎರಡೂ ಸೈನ್ಯದ ಯುದ್ಧವು ಹೇಗೆ ನಡೆಯಿತು?

ಬಂದುದಾ ಮೋಹರ ಸಘಾಡದಿ
ನಿಂದುದೀ ಬಲ ಸೂಠಿಯಲಿ ಹಯ
ವೃಂದ ಬಿಟ್ಟವು ತೂಳಿದವು ಹೇರಾನೆ ಸರಿಸದಲಿ
ನೊಂದುದಾಚೆಯ ಭಟರು ಘಾಯದೊ
ಳೊಂದಿತೀಚೆಯ ವೀರರುಭಯದ
ಮಂದಿ ಬಿದ್ದುದು ಚೂಣಿಯದ್ದುದು ರುಧಿರಜಲಧಿಯಲಿ (ಗದಾ ಪರ್ವ, ೨ ಸಂಧಿ, ೧೪ ಪದ್ಯ)

ತಾತ್ಪರ್ಯ:
ಪಾಂಡವ ಸೈನ್ಯ ರಭಸದಿಂದ ಬಂದಿತು. ಈ ಸೈನ್ಯ ಚಕ್ಕನೆ ಇದಿರಾಯಿತು. ಆನೆ ಕುದುರೆಗಳು ನುಗ್ಗಿದವು. ಆ ಸೈನ್ಯದ ಈ ಸೈನ್ಯದ ಯೋಧರು ಗಾಯಗೊಂಡು, ರಕ್ತ ಸಮುದ್ರದಲ್ಲಿ ಎರಡೂ ಸೇನೆಗಳು ಮುಳುಗಿದವು.

ಅರ್ಥ:
ಬಂದು: ಆಗಮಿಸು; ಮೋಹರ: ಯುದ್ಧ; ಸಘಾಡ: ರಭಸ; ನಿಂದು: ನಿಲ್ಲು; ಬಲ: ಶಕ್ತಿ, ಸೈನ್ಯ; ಸೂಠಿ: ವೇಗ; ಹಯವೃಂದ: ಕುದುರೆಗಳ ಗುಂಪು; ಬಿಟ್ಟವು: ತೊರೆ, ಬಿಡು; ತೂಳು: ಆವೇಶ, ಉನ್ಮಾದ; ಹೇರಾನೆ: ದೊಡ್ಡದಾದ ಗಜ; ಸರಿಸ: ವೇಗ, ರಭಸ; ನೊಂದು: ನೋವು; ಆಚೆ: ಹೊರಭಾಗ; ಭಟ: ಸೈನಿಕ; ಘಾಯ: ಪೆಟ್ಟು; ಉಭಯ: ಎರಡು; ಮಂದಿ: ಜನ; ಬಿದ್ದು: ಬೀಳು; ಚೂಣಿ: ಮುಂದೆ; ಅದ್ದು: ತೋಯು; ರುಧಿರ: ರಕ್ತ; ಜಲಧಿ: ಸಾಗರ;

ಪದವಿಂಗಡಣೆ:
ಬಂದುದಾ+ ಮೋಹರ+ ಸಘಾಡದಿ
ನಿಂದುದ್+ಈ+ ಬಲ+ ಸೂಠಿಯಲಿ +ಹಯ
ವೃಂದ +ಬಿಟ್ಟವು +ತೂಳಿದವು +ಹೇರಾನೆ +ಸರಿಸದಲಿ
ನೊಂದುದ್+ಆಚೆಯ +ಭಟರು +ಘಾಯದೊ
ಳೊಂದಿತ್+ಈಚೆಯ +ವೀರರ್+ಉಭಯದ
ಮಂದಿ +ಬಿದ್ದುದು +ಚೂಣಿ+ಅದ್ದುದು +ರುಧಿರ+ಜಲಧಿಯಲಿ

ಅಚ್ಚರಿ:
(೧) ನೊಂದುದಾಚೆಯ ಭಟರು ಘಾಯದೊಳೊಂದಿತೀಚೆಯ ವೀರರ್ – ಆಚೆ, ಈಚೆ ಪದಗಳ ಪ್ರಯೋಗ

ಪದ್ಯ ೧೨: ಶಕುನಿಯ ಸೈನ್ಯದ ಸ್ಥಿತಿ ಏನಾಯಿತು?

ಅದೆ ಸುಯೋಧನನೊಡ್ಡು ನಸುದೂ
ರದಲಿ ಕವಿಕವಿಯೆನುತ ಧಾಳಿ
ಟ್ಟುದು ಚತುರ್ಬಲ ಭೀಮಪಾರ್ಥರ ರಥದ ಚೂಣಿಯಲಿ
ಹೊದರು ಹಳಚಿತು ಭಟರು ಭುಜಗ
ರ್ವದಲಿ ಗರುವರ ಗಾಢ ಶೌರ್ಯದ
ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ (ಗದಾ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಸ್ವಲ್ಪ ದೂರದಲ್ಲೇ ಅದೋ, ಸುಯೋಧನನ ಸೈನ್ಯ ಕಾಣುತ್ತಿದೆ. ಮುತ್ತಿರಿ ಎಂದು ಕೂಗುತ್ತಾ ಭೀಮಾರ್ಜುನಾರ ಚತುರಂಗ ಸೈನ್ಯವು ದಾಳಿಯಿಟ್ಟಿರು. ಶಕುನಿಯ ಸೈನ್ಯವು ಭುಜಬಲ ಪರಾಕ್ರಮದಿಂದ ಕಾದಿತು. ಆದರೆ ಅದರ ಮಾನ ಮೌನತಾಳಿತು (ಸೋತರು).

ಅರ್ಥ:
ಒಡ್ಡು: ರಾಶಿ, ಸಮೂಹ; ನಸು: ಸ್ವಲ್ಪ; ದೂರ: ಅಂತರ; ಕವಿ: ಆವರಿಸು; ಧಾಳಿ: ಲಗ್ಗೆ, ಮುತ್ತಿಗೆ; ರಥ: ಬಂಡಿ; ಚೂಣಿ: ಮೊದಲು; ಹೊದರು: ಗುಂಪು, ಸಮೂಹ; ಹಳಚು: ತಾಗು, ಬಡಿ; ಭಟ: ಸೈನಿಕ; ಭುಜ: ಬಾಹು; ಗರ್ವ: ಅಹಂಕಾರ; ಗರುವ: ಹಿರಿಯ, ಶ್ರೇಷ್ಠ; ಗಾಢ: ಹೆಚ್ಚಳ; ಶೌರ್ಯ: ಸಾಹಸ, ಪರಾಕ್ರಮ; ಮದ: ಅಹಂಕಾರ; ಮಡ: ಹಿಮ್ಮಡಿ, ಹರಡು; ಮುರಿ: ಸೀಳು; ಸಿಲುಕು: ಹಿಡಿ; ಮಾನ: ಮರ್ಯಾದೆ; ಮೋನ: ಮೌನ;

ಪದವಿಂಗಡಣೆ:
ಅದೆ+ ಸುಯೋಧನನ್+ಒಡ್ಡು +ನಸುದೂ
ರದಲಿ +ಕವಿಕವಿ+ಎನುತ +ಧಾಳಿ
ಟ್ಟುದು +ಚತುರ್ಬಲ +ಭೀಮಪಾರ್ಥರ +ರಥದ +ಚೂಣಿಯಲಿ
ಹೊದರು +ಹಳಚಿತು +ಭಟರು +ಭುಜ+ಗ
ರ್ವದಲಿ +ಗರುವರ +ಗಾಢ +ಶೌರ್ಯದ
ಮದಕೆ +ಮಡ+ಮುರಿಯಾಯ್ತು +ಸಿಲುಕಿತು+ ಮಾನ +ಮೋನದಲಿ

ಅಚ್ಚರಿ:
(೧) ಸೋತರು ಎಂದು ಹೇಳುವ ಪರಿ – ಗಾಢ ಶೌರ್ಯದ ಮದಕೆ ಮಡಮುರಿಯಾಯ್ತು ಸಿಲುಕಿತು ಮಾನ ಮೋನದಲಿ

ಪದ್ಯ ೪೫: ಧರ್ಮಜನ ಸಹಾಯಕ್ಕೆ ಯಾರು ಬಂದರು?

ಅರಸುಮೋಹರ ಸಿಲುಕಿದುದು ಮೊರೆ
ಬೆರಸಿ ಹೊಯ್ದನು ಬೇಹ ಸುಭಟರು
ಮರಳಿಯೆನೆ ಮುಂಚಿದರು ಪಂಚದ್ರೌಪದೀಸುತರು
ಧರಣಿಪತಿಯ ವಿಘಾತಿಗೊಪ್ಪಿಸಿ
ಶಿರವನೆನುತುಬ್ಬೆದ್ದು ಪಾಂಚಾ
ಲರು ಪ್ರಬುದ್ಧಕ ಸೃಂಜಯರು ರಂಜಿಸಿತು ಚೂಣಿಯಲಿ (ಗದಾ ಪರ್ವ, ೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ಕೌರವನು ನಮ್ಮ ಸೇನೆಯನ್ನು ಮನ್ನಿಸದೆ ನುಗ್ಗಿ ಹೊಯ್ಯುತ್ತಿದ್ದಾನೆ. ಸಮರ್ಥರಾದ ರಾಜರು ದೊರೆಯನ್ನು ರಕ್ಷಿಸಲು ಮುನ್ನುಗ್ಗಿರಿ, ಎಂದು ಕೂಗಲು, ಉಪಪಾಂಡವರು ಯುದ್ಧಕ್ಕೆ ಮುಂದಾದರು. ದೊರೆಗೆ ಅಪಾಯವನ್ನು ತಪ್ಪಿಸಲು ನಮ್ಮ ತಲೆಗಳನ್ನೇ ಕೊಡುತ್ತೇವೆ ಎನ್ನುತ್ತಾ ಪಾಂಚಾಲರು ಪ್ರಬುದ್ಧಕರು ಸೃಂಜಯರು ಅಣಿಯಾಗಿ ನಿಂತರು.

ಅರ್ಥ:
ಅರಸು: ರಾಜ; ಮೋಹರ: ಯುದ್ಧ; ಸಿಲುಕು: ಬಂಧನಕ್ಕೊಳಗಾಗು; ದೊರೆ: ರಾಜ; ಬೆರಸು: ಸೇರು, ಮಿಶ್ರಮಾಡು; ಹೊಯ್ದು: ಹೊಡೆ; ಬೇಹ: ಬೇಕು; ಸುಭಟ: ಪರಾಕ್ರಮಿ; ಮರಳಿ: ಹಿಂದಿರುಗಿ; ಮುಂಚೆ: ಮುಂದೆ; ಸುತ: ಮಗ; ಧರಣಿಪತಿ: ರಾಜ; ವಿಘಾತ: ನಾಶ, ಧ್ವಂಸ; ಒಪ್ಪಿಸು: ಸೇರಿಸು, ಅಂಗೀಕರಿಸು; ಶಿರ: ತಲೆ; ಉಬ್ಬೆದ್ದು: ಹೆಚ್ಚಾಗು; ರಂಜಿಸು: ಹೊಳೆ, ಪ್ರಕಾಶಿಸು; ಚೂಣಿ: ಮುಂದಿನ ಸಾಲು, ಮುಂಭಾಗ;

ಪದವಿಂಗಡಣೆ:
ಅರಸು+ಮೋಹರ +ಸಿಲುಕಿದುದು +ಮೊರೆ
ಬೆರಸಿ +ಹೊಯ್ದನು +ಬೇಹ +ಸುಭಟರು
ಮರಳಿ+ಎನೆ +ಮುಂಚಿದರು +ಪಂಚ+ದ್ರೌಪದೀ+ಸುತರು
ಧರಣಿಪತಿಯ +ವಿಘಾತಿಗೊಪ್ಪಿಸಿ
ಶಿರವನೆನುತ್+ಉಬ್ಬೆದ್ದು +ಪಾಂಚಾ
ಲರು +ಪ್ರಬುದ್ಧಕ +ಸೃಂಜಯರು +ರಂಜಿಸಿತು+ ಚೂಣಿಯಲಿ

ಅಚ್ಚರಿ:
(೧) ಪ್ರಮಾಣ ಮಾಡುವ ಪರಿ – ಧರಣಿಪತಿಯ ವಿಘಾತಿಗೊಪ್ಪಿಸಿ ಶಿರವನೆನುತ್

ಪದ್ಯ ೨: ಭೀಮನ ಜೊತೆ ಯಾರು ಹೋರಾಡಿದರು?

ಕೆದರಿದನು ಕಲಿಭೀಮ ಬಲವಂ
ಕದಲಿ ಸಾತ್ಯಕಿ ನಕುಲರೆಡವಂ
ಕದಲಿ ಚೂಣಿಗೆ ಚಿಮ್ಮಿದರು ಪಾಂಚಾಲನಾಯಕರು
ಮದಮುಖರನಿಕ್ಕಿದನು ಬಾಣೌ
ಘದಲಿ ಫಲುಗುಣನೊಂದು ಕಡೆಯಲಿ
ಸದೆದು ಸವರಿದರೊಂದು ಕಡೆಯಲಿ ದ್ರೌಪದೀಸುತರು (ಶಲ್ಯ ಪರ್ವ, ೩ ಸಂಧಿ, ೨ ಪದ್ಯ)

ತಾತ್ಪರ್ಯ:
ಭೀಮನು ಅಣ್ಣನ ಬಲಭಾಗದಲ್ಲಿ ವೈರಿಗಳನ್ನು ಬಡಿಯುತ್ತಿರಲು, ಸಾತ್ಯಕಿ ನಕುಲರು ಎಡಪಕ್ಕದಲ್ಲಿ ಹೋರಾಡಿದರು. ಪಾಂಚಾಲ ಸೇನೆ ಧರ್ಮಜನ ಮುಂದಿತ್ತು, ಒಂದು ಕಡೆ ಅರ್ಜುನನೂ ಮತ್ತೊಂದು ಕಡೆ ಉಪಪಾಂಡವರೂ ವೈರಿಗಳನ್ನು ಕಡಿದುರುಳಿಸಿದರು.

ಅರ್ಥ:
ಕೆದರು: ಹರಡು; ಕಲಿ: ಶೂರ; ಬಲ: ದಕ್ಷಿಣ ಭಾಗ; ಅಂಕ: ಕಾಳಗ ಇತ್ಯಾದಿಗಳು ನಡೆಯುವ ಸ್ಥಳ; ಎಡ: ವಾಮಭಾಗ; ಚೂಣಿ: ಮುಂಭಾಗ; ಚಿಮ್ಮು: ಹೊರಹೊಮ್ಮು; ನಾಯಕ: ಒಡೆಯ; ಮದ: ಅಹಂಕಾರ; ಮುಖ: ಆನನ; ಇಕ್ಕು: ಇರಿಸು, ಇಡು; ಬಾಣ: ಶರ; ಔಘ: ಗುಂಪು, ಸಮೂಹ; ಕಡೆ: ಭಾಗ; ಸದೆ: ಕುಟ್ಟು, ಪುಡಿಮಾಡು; ಸವರು: ನಾಶಮಾಡು; ಕಡೆ: ಭಾಗ; ಸುತ: ಮಗ;

ಪದವಿಂಗಡಣೆ:
ಕೆದರಿದನು +ಕಲಿಭೀಮ +ಬಲವಂ
ಕದಲಿ +ಸಾತ್ಯಕಿ +ನಕುಲರ್+ಎಡವಂ
ಕದಲಿ +ಚೂಣಿಗೆ +ಚಿಮ್ಮಿದರು +ಪಾಂಚಾಲ+ನಾಯಕರು
ಮದಮುಖರನ್+ಇಕ್ಕಿದನು+ ಬಾಣೌ
ಘದಲಿ+ ಫಲುಗುಣನೊಂದು +ಕಡೆಯಲಿ
ಸದೆದು +ಸವರಿದರ್+ಒಂದು +ಕಡೆಯಲಿ+ ದ್ರೌಪದೀ+ಸುತರು

ಅಚ್ಚರಿ:
(೧) ಬಲವಂಕ, ಎಡವಂಕ – ವಿರುದ್ಧ ಪದಗಳು
(೨) ಶೂರರನ್ನು ಸಾಯಿಸಿದರು ಎಂದು ಹೇಳುವ ಪರಿ – ಮದಮುಖರನಿಕ್ಕಿದನು
(೩) ಕಡೆಯಲಿ – ೫,೬ ಸಾಲಿನ ೩ನೇ ಪದ

ಪದ್ಯ ೫೯: ಧರ್ಮಜನ ಬೆಂಬಲಕ್ಕೆ ಯಾರು ಬಂದರು?

ನೆಲ ಬಿರಿಯಲಳ್ಳಿರಿವ ವಾದ್ಯದ
ಕಳಕಳದ ಕೊಲ್ಲಣಿಗೆಯಲಿ ಮುಂ
ಕೊಳಿಸಿದರು ಸಹದೇವ ಸಾತ್ಯಕಿ ನಕುಲ ಸೃಂಜಯರು
ದಳದ ಪದಹತಿಧೂಳಿಯಲಿ ಕ
ತ್ತಲಿಸೆ ದೆಸೆ ಪಾಂಚಾಲಬಲವಿ
ಟ್ಟಳಿಸಿ ನೂಕಿತು ಧರ್ಮಪುತ್ರನ ರಣದ ಚೂಣಿಯಲಿ (ಶಲ್ಯ ಪರ್ವ, ೨ ಸಂಧಿ, ೫೯ ಪದ್ಯ)

ತಾತ್ಪರ್ಯ:
ವಾದ್ಯದ ಘೋಷದಿಂದ ನೆಲವು ಬಿರಿಯಲು ಸಹದೇವ ಸಾತ್ಯಕಿ ನಕುಲ ಸೃಂಜಯರು ಧರ್ಮಜನ ಬೆಂಬಲಕ್ಕೆ ಬಂದರು. ಪಾದ ಧೂಳಿಯಿಂದ ದಿಕ್ಕುಗಳು, ಕತ್ತಲಿಸಿದಂತಾಗಲು ಪಾಂಚಾಲ ಸೇನೆಯು ಮುಂದಕ್ಕೆ ಬಂದಿತು.

ಅರ್ಥ:
ನೆಲ: ಭೂಮಿ; ಬಿರಿ: ಬಿರುಕು, ಸೀಳು; ಇರಿ: ಚುಚ್ಚು; ವಾದ್ಯ: ಸಂಗೀತದ ಸಾಧನ; ಕಳಕಳ: ಗೊಂದಲ; ಕೊಲ್ಲಣಿಗೆ: ಸಂದಣಿ; ಮುಂಕೊಳಿಸಿ: ಮುಂದೆ ಹೋಗು; ದಳ: ಸೈನ್ಯ; ಪದಹತ: ಪಾದದಿಂದ ತುಳಿಯಲ್ಪಟ್ಟ; ಧೂಳಿ: ಮಣ್ಣಿನ ಪುಡಿ; ಕತ್ತಲು: ಅಂಧಕಾರ; ದೆಸೆ: ದಿಕ್ಕು; ಇಟ್ಟಳಿಸು: ದಟ್ಟವಾಗು; ನೂಕು: ತಳ್ಳು; ಪುತ್ರ: ಸುತ; ರಣ: ಯುದ್ಧ; ಚೂಣಿ: ಮುಂದಿನ ಸಾಲು, ಮುಂಭಾಗ;

ಪದವಿಂಗಡಣೆ:
ನೆಲ +ಬಿರಿಯಲಳ್+ಇರಿವ +ವಾದ್ಯದ
ಕಳಕಳದ +ಕೊಲ್ಲಣಿಗೆಯಲಿ +ಮುಂ
ಕೊಳಿಸಿದರು +ಸಹದೇವ +ಸಾತ್ಯಕಿ +ನಕುಲ +ಸೃಂಜಯರು
ದಳದ +ಪದಹತಿ+ಧೂಳಿಯಲಿ +ಕ
ತ್ತಲಿಸೆ +ದೆಸೆ +ಪಾಂಚಾಲ+ಬಲವ್+
ಇಟ್ಟಳಿಸಿ+ ನೂಕಿತು+ ಧರ್ಮಪುತ್ರನ +ರಣದ +ಚೂಣಿಯಲಿ

ಅಚ್ಚರಿ:
(೧) ಯುದ್ಧದ ತೀವ್ರತೆ – ದಳದ ಪದಹತಿಧೂಳಿಯಲಿ ಕತ್ತಲಿಸೆ ದೆಸೆ

ಪದ್ಯ ೧೭: ಕೌರವರಲ್ಲಿ ಯಾರು ಯುದ್ಧಕ್ಕೆ ಅನುವಾದರು?

ಅರಸ ಕೇಳೈ ಹೊಕ್ಕ ಚೂಣಿಯ
ನೆರಡು ಬಲದಲಿ ಕಾಣೆನಗ್ಗದ
ದೊರೆಗಳನುವಾಯ್ತಾಚೆಯಲಿ ಧರ್ಮಜನ ನೇಮದಲಿ
ಗುರುಜ ಕೃಪ ಕೃತವರ್ಮ ಯವನೇ
ಶ್ವರ ಸುಶರ್ಮ ಸುಬಾಹು ಶಕುನಿಗ
ಳುರವಣಿಸಿತೀಚೆಯಲಿ ಶಲ್ಯನ ಬೆರಳ ಸನ್ನೆಯಲಿ (ಶಲ್ಯ ಪರ್ವ, ೨ ಸಂಧಿ, ೧೭ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಹೀಗೆ ಎರಡೂ ಕಡೆಯ ಮುಂಚೂಣಿಗಳು ನಾಶವಾಗಲು ಪಾಂಡವರ ಕಡೆಗೆ ಧರ್ಮಜನ ಅಪ್ಪಣೆಯಂತೆ ದೊರೆಗಳು ಯುದ್ಧಕ್ಕೆ ಸಿದ್ಧರಾದರು. ನಮ್ಮ ಸೈನ್ಯದಲ್ಲಿ ಅಶ್ವತ್ಥಾಮ, ಕೃಪ, ಕೃತವರ್ಮ, ಯವನರಾಜ, ಸುಶರ್ಮ, ಸುಬಾಹು ಶಕುನಿಗಳು ಶಲ್ಯನ ಅಪ್ಪಣೆಯಂತೆ ಯುದ್ಧಕ್ಕನುವಾದರು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಹೊಕ್ಕು: ಸೇರು; ಚೂಣಿ: ಮುಂಭಾಗ; ಬಲ: ಸೈನ್ಯ; ಕಾಣು: ತೋರು; ಅಗ್ಗ: ಶ್ರೇಷ್ಠ; ದೊರೆ: ರಾಜ; ಅನುವು: ಸೊಗಸು; ಆಚೆ: ಹೊರಗೆ; ಉರವಣಿಸು: ಆತುರಿಸು; ಬೆರಳು: ಅಂಗುಲಿ; ಸನ್ನೆ: ಗುರುತು;

ಪದವಿಂಗಡಣೆ:
ಅರಸ +ಕೇಳೈ +ಹೊಕ್ಕ +ಚೂಣಿಯನ್
ಎರಡು +ಬಲದಲಿ +ಕಾಣೆನ್+ಅಗ್ಗದ
ದೊರೆಗಳ್+ಅನುವಾಯ್ತ್+ಆಚೆಯಲಿ +ಧರ್ಮಜನ+ ನೇಮದಲಿ
ಗುರುಜ +ಕೃಪ +ಕೃತವರ್ಮ +ಯವನೇ
ಶ್ವರ +ಸುಶರ್ಮ +ಸುಬಾಹು +ಶಕುನಿಗಳ್
ಉರವಣಿಸಿತ್+ಈಚೆಯಲಿ +ಶಲ್ಯನ +ಬೆರಳ+ ಸನ್ನೆಯಲಿ

ಅಚ್ಚರಿ:
(೧) ಅರಸ, ದೊರೆ – ಸಮಾನಾರ್ಥಕ ಪದ
(೨) ೪, ೫ ಸಾಲುಗಳಲ್ಲಿ ಹೆಸರನ್ನು ಹೇಳಿರುವ ಪರಿ – ಗುರುಜ, ಕೃಪ, ಕೃತವರ್ಮ, ಯವನೇಶ್ವರ, ಸುಶರ್ಮ ಸುಬಾಹು, ಶಕುನಿ

ಪದ್ಯ ೪೫: ನಾರಾಯಣಾಸ್ತ್ರವು ಭೀಮನನ್ನು ಹೇಗೆ ಆವರಿಸಿತು?

ಗಿರಿಯ ಮುತ್ತಿದ ಮುಗಿಲವೊಲು ಹೊಗೆ
ಹೊರಳಿಗಟ್ಟಿತು ಮೇಲೆ ದಳ್ಳುರಿ
ಧರಧುರದಲೊಳಬೀಳುತಿದ್ದವು ಕಿಡಿಯ ಚೂಣಿಯಲಿ
ಉರಿಯೊಳದ್ದೈ ತಮ್ಮ ಹಾಯೆಂ
ದರಸ ಮೊದಲಾದಖಿಳಭೂಪರು
ಕರದ ಬಿರುವೊಯ್ಲುಗಳ ಬಾಯವರೊರಲಿ ಹೊರಳಿದರು (ದ್ರೋಣ ಪರ್ವ, ೧೯ ಸಂಧಿ, ೪೫ ಪದ್ಯ)

ತಾತ್ಪರ್ಯ:
ಭೀಮನ ಮೇಲೆ ಅಸ್ತ್ರವು ಮುತ್ತಲು, ಬೆಟ್ಟವನ್ನು ಆವರಿಸುವ ಮೋಡದಂತೆ ಹೊಗೆ ಸುತ್ತಿತು. ದಳ್ಳುರಿ ಒಳನುಗ್ಗುತ್ತಿತ್ತು. ಕಿಡಿಗಳು ಎಲ್ಲೆಲ್ಲೋ ಕಂಡವು. ಧರ್ಮಜನೇ ಮೊದಲಾದ ಪಾಂಡವರು ಅಯ್ಯೋ ತಮ್ಮಾ ಉರಿಯೊಳಗೆ ಸಿಕ್ಕಿಕೊಂಡೆಯೆಲ್ಲಾ ಎಂದು ಗೋಳಿಟ್ಟರು.

ಅರ್ಥ:
ಗಿರಿ: ಬೆಟ್ಟ; ಮುತ್ತು: ಆವರಿಸು; ಮುಗಿಲು: ಆಗಸ; ಹೊಗೆ: ಧೂಮ; ಹೊರಳು: ತಿರುವು, ಬಾಗು; ಕಟ್ಟು: ಬಂಧಿಸು; ದಳ್ಳುರಿ: ದೊಡ್ಡಉರಿ; ಕಿಡಿ: ಬೆಂಕಿ; ಚೂಣಿ: ಮುಂದಿನ ಸಾಲು, ಮುಂಭಾಗ; ಉರಿ: ಬೆಂಕಿ; ಅದ್ದು: ಮುಳುಗು; ತಮ್ಮ: ಸಹೋದರ; ಹಾ: ಅಯ್ಯೋ; ಅರಸ: ರಾಜ; ಮೊದಲಾದ: ಮುಕ್ಕ, ಉಳಿದ; ಅಖಿಳ: ಎಲ್ಲಾ; ಭೂಪ: ರಾಜ; ಕರ: ಕೈ; ಬಿರುವೊಯ್ಲು: ಬಿರುಸಾದ ಹೊಡೆತ; ಒರಲು: ಅರಚು, ಕೂಗಿಕೊಳ್ಳು; ಹೊರಳು: ಉರುಳಾಡು;

ಪದವಿಂಗಡಣೆ:
ಗಿರಿಯ +ಮುತ್ತಿದ +ಮುಗಿಲವೊಲು +ಹೊಗೆ
ಹೊರಳಿಗಟ್ಟಿತು+ ಮೇಲೆ +ದಳ್ಳುರಿ
ಧರಧುರದಲ್+ಒಳಬೀಳುತಿದ್ದವು +ಕಿಡಿಯ +ಚೂಣಿಯಲಿ
ಉರಿಯೊಳ್+ಅದ್ದೈ +ತಮ್ಮ +ಹಾ+ ಎಂದ್
ಅರಸ +ಮೊದಲಾದ್+ಅಖಿಳ+ಭೂಪರು
ಕರದ+ ಬಿರುವೊಯ್ಲುಗಳ +ಬಾಯವರೊರಲಿ+ ಹೊರಳಿದರು

ಅಚ್ಚರಿ:
(೧) ಅರಸ, ಭೂಪ – ಸಮಾನಾರ್ಥಕ ಪದ – ೫ ಸಾಲಿನ ಮೊದಲ ಮತ್ತು ಕೊನೆ ಪದ
(೨) ಉಪಮಾನದ ಪ್ರಯೋಗ – ಗಿರಿಯ ಮುತ್ತಿದ ಮುಗಿಲವೊಲು ಹೊಗೆ ಹೊರಳಿಗಟ್ಟಿತು

ಪದ್ಯ ೩೫: ನಾರಾಯಣಾಸ್ತ್ರವು ಹೇಗೆ ವೈರಿಸೈನ್ಯವನ್ನು ಬಂಧಿಸಿತು?

ಕಳವಳಿಸಿತರಿಸೇನೆ ಚೂಣಿಯ
ಕೊಳುಗಿಡಿಯ ಸೆಖೆ ತಾಗಿ ಸುಭಟಾ
ವಳಿಯ ಮೀಸೆಗಳುರಿಯೆ ನೆರೆ ಕಂದಿದವು ಮೋರೆಗಳು
ಬಲದ ಸುತ್ತಲು ಕಟ್ಟಿತುರಿ ಕೆಂ
ಬೆಳಗು ಕುಡಿದವು ಕರ್ಬೊಗೆಗಳ
ಗ್ಗಳದ ಬಾಣದ ಬಂದಿಯಲಿ ಸಿಲುಕಿತ್ತು ರಿಪುಸೇನೆ (ದ್ರೋಣ ಪರ್ವ, ೧೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ಶತ್ರು ಸೈನ್ಯವು ಕಳವಳಿಸಿತು. ಕಿಡಿಗಳ ಶಾಖದಿಂದ ಯೋಧರ ಮೀಸೆಗಳು ಉರಿದುಹೋದವು, ಮೋರೆಗಳು ಬಾಡಿದವು. ಸೈನ್ಯದ ಸುತ್ತಲೂ ಉರಿಹೊಗೆಗಳು ಆವರಿಸಿದವು. ಶ್ರೇಷ್ಠವಾದ ನಾರಾಯಣಾಸ್ತ್ರದ ಕಪ್ಪು ಹೊಗೆಗಳು ವೈರಿಸೈನ್ಯವನ್ನು ಆವರಿಸಿತು.

ಅರ್ಥ:
ಕಳವಳ: ಗೊಂದಲ; ಅರಿ: ವೈರಿ; ಸೇನೆ: ಸೈನ್ಯ; ಚೂಣಿ: ಮುಂದೆ; ಕಿಡಿ: ಬೆಂಕಿ; ಸೆಖೆ: ಧಗೆ; ತಾಗು: ಮುಟ್ತು; ಭಟಾವಳಿ: ಸೈನಿಕರ ಗುಂಪು; ಉರಿ: ದಹಿಸು; ನೆರೆ: ಗುಂಪು; ಕಂದು: ಕಳಂಕ; ಮೊರೆ: ಮುಖ; ಬಲ: ಸೈನ್ಯ; ಸುತ್ತ: ಬಳಸಿಕೊಂಡು; ಉರಿ: ಬೆಂಕಿ; ಕೆಂಬೆಳಗು: ಕೆಂಪಾದ ಪ್ರಕಾಶ; ಕುಡಿ: ತುದಿ, ಕೊನೆ; ಕರ್ಬೊಗೆ: ಕಪ್ಪಾದ ಹೊಗೆ; ಅಗ್ಗ: ಶ್ರೆಷ್ಠ; ಬಾಣ: ಸರಳು; ಬಂದಿ: ಸೆರೆ, ಬಂಧನ; ಸಿಲುಕು: ಬಂಧನಕ್ಕೊಳಗಾಗು; ರಿಪು: ವೈರಿ; ಸೇನೆ: ಸೈನ್ಯ;

ಪದವಿಂಗಡಣೆ:
ಕಳವಳಿಸಿತ್+ಅರಿಸೇನೆ +ಚೂಣಿಯ
ಕೊಳುಕಿಡಿಯ +ಸೆಖೆ +ತಾಗಿ +ಸುಭಟ
ಆವಳಿಯ +ಮೀಸೆಗಳ್+ಉರಿಯೆ +ನೆರೆ +ಕಂದಿದವು +ಮೋರೆಗಳು
ಬಲದ +ಸುತ್ತಲು +ಕಟ್ಟಿತ್+ಉರಿ +ಕೆಂ
ಬೆಳಗು +ಕುಡಿದವು +ಕರ್ಬೊಗೆಗಳ್
ಅಗ್ಗಳದ +ಬಾಣದ +ಬಂದಿಯಲಿ +ಸಿಲುಕಿತ್ತು +ರಿಪುಸೇನೆ

ಅಚ್ಚರಿ:
(೧) ಪರಾಕ್ರಮ ಕಡಿಮೆಯಾಯಿತು ಎಂದು ಹೇಳಲು – ಸುಭಟಾವಳಿಯ ಮೀಸೆಗಳುರಿಯೆ ನೆರೆ ಕಂದಿದವು ಮೋರೆಗಳು