ಪದ್ಯ ೩೨: ಆಗ್ನೇಯಾಸ್ತ್ರಕ್ಕೆ ಪ್ರತಿಯಾಗಿ ಅರ್ಜುನನು ಯಾವ ಬಾಣವನ್ನು ಬಿಟ್ಟನು?

ಆಹಹ ಬೆಂದುದು ಲೋಕವಿನ್ನಾ
ರಹಿಮುಖವ ಚುಂಬಿಸುವರೋ ವಿ
ಗ್ರಹದ ಫಲನಿಗ್ರಹವಲಾ ಶಿವ ಎನುತ ಸುರರುಲಿಯೆ
ವಹಿಲ ಮಿಗೆ ವರುಣಾಸ್ತ್ರದಲಿ ಹುತ
ವಹನ ಬಿಂಕವ ಬಿಡಿಸಿದನು ಜಯ
ವಹುದೆ ಪರರಿಗೆ ಪಾರ್ಥನಿರೆ ಜನನಾಥ ಕೇಳೆಂದ (ಕರ್ಣ ಪರ್ವ, ೨೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಓಹೋ ಲೋಕವು ಕರ್ಣನ ಆಗ್ನೇಯಾಸ್ತ್ರಕ್ಕೆ ಬೆಂದುಹೋಗುತ್ತದೆ ಕಾಳಸರ್ಪದ ಮುಖವನ್ನು ಚುಂಬಿಸುವವರಾರು? ಯುದ್ಧದ ಫಲವು ವಿನಾಶವಲ್ಲವೇ ಎಂದು ದೇವತೆಗಳು ಮಾತನಾಡುತ್ತಿರಲು, ಅರ್ಜುನನು ಅತಿವೇಗದಿಂದ ವರುಣಾಸ್ತ್ರವನ್ನು ಬಿಟ್ಟು ಅಗ್ನಿಯ ಆರ್ಭಟ, ಗರ್ವವನ್ನು ಮೊಟಕುಗೊಳಿಸಿದನು. ರಾಜ ಧೃತರಾಷ್ಟ್ರ ಅರ್ಜುನನಿರಲು ಎದುರಾಳಿಗೆ ಜಯವು ಲಭಿಸುವುದೇ ಎಂದು ಸಂಜಯನು ಹೇಳಿದನು.

ಅರ್ಥ:
ಅಹಹ: ಓಹೋ, ಅಬ್ಬ; ಬೆಂದು: ಸುಡು; ಲೋಕ: ಜಗತ್ತು; ಅಹಿ: ಹಾವು; ಮುಖ: ಆನನ; ಚುಂಬಿಸು: ಮುತ್ತಿಡು; ವಿಗ್ರಹ: ಯುದ್ಧ; ಫಲ: ಫಲಿತಾಂಶ, ಪರಿಣಾಮ; ನಿಗ್ರಹ: ಅಂಕೆ, ಹತೋಟಿ; ಶಿವ: ಮಹಾದೇವ; ಸುರ: ದೇವತೆ; ಉಲಿ: ಮಾತನಾಡು; ವಹಿಲ: ಬೇಗ, ತ್ವರೆ; ಮಿಗೆ: ಮತ್ತು; ವರುಣ: ನೀರಿನ ಅಧಿದೇವತೆ; ಅಸ್ತ್ರ: ಆಯುಧ; ಹುತ: ಹವಿಸ್ಸು; ಹುತವಹ: ಅಗ್ನಿ; ಬಿಂಕ: ಗರ್ವ, ಜಂಬ; ಬಿಡಿಸು: ಹೋಗಲಾಡಿಸು; ಜಯ: ಗೆಲುವು; ಪರರು: ಇತರರು; ಜನನಾಥ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆಹಹ +ಬೆಂದುದು +ಲೋಕವ್+ಇನ್ನಾರ್
ಅಹಿ+ಮುಖವ+ ಚುಂಬಿಸುವರೋ+ ವಿ
ಗ್ರಹದ+ ಫಲ+ನಿಗ್ರಹವಲಾ +ಶಿವ+ ಎನುತ +ಸುರರ್+ಉಲಿಯೆ
ವಹಿಲ +ಮಿಗೆ +ವರುಣಾಸ್ತ್ರದಲಿ +ಹುತ
ವಹನ+ ಬಿಂಕವ +ಬಿಡಿಸಿದನು+ ಜಯವ್
ಅಹುದೆ+ ಪರರಿಗೆ+ ಪಾರ್ಥನಿರೆ +ಜನನಾಥ +ಕೇಳೆಂದ

ಅಚ್ಚರಿ:
(೧) ಬೆಂಕಿಯನ್ನು ನಂದಿಸುವರಾರು ಎಂದು ಹೇಳಲು – ಚುಂಬಿಸು, ಮುತ್ತಿಡು ಪದದ ಬಳಕೆ – ಲೋಕವಿನ್ನಾರಹಿಮುಖವ ಚುಂಬಿಸುವರೋ
(೨) ಬೆಂಕಿಯನ್ನು ನಂದಿಸಿದನು ಎಂದು ಹೇಳಲು – ಬಿಂಕ ಪದದ ಬಳಕಿ – ವರುಣಾಸ್ತ್ರದಲಿ ಹುತವಹನ ಬಿಂಕವ ಬಿಡಿಸಿದನು

ಪದ್ಯ ೪೦: ಕರ್ಣನು ಹೇಗೆ ಧನ್ಯನಾಗುತ್ತಾನೆಂದು ಯೋಚಿಸಿದ?

ಅವನ ಮುಂದಲೆ ತನ್ನ ಕೈಯಲಿ
ಅವನ ಕೈಯಲಿ ತನ್ನ ಮುಂದಲೆ
ಅವನ ದೇಹದ ಘಾಯವೆನ್ನಯ ಘಾಯ ಚುಂಬಿಸುತ
ಅವನ ಖಡುಗದಲೆನ್ನ ಮೈ ನಾ
ತಿವಿದ ಖಡ್ಗಕೆ ನರನ ಮೈ ಲವ
ಲವಿಸಲಡಿಮೇಲಾಗಿ ಹೊರಳ್ದರೆ ಧನ್ಯ ತಾನೆಂದ (ಕರ್ಣ ಪರ್ವ, ೮ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನ ಮುಂಭಾಗದ ಕೂದಲು ಎಳೆದು ನನ್ನ ಕೈಯಲ್ಲಿ ಹಿಡಿದು, ನನ್ನ ಮುಂದಲೆಯು ಅವನು ಹಿಡಿದು, ಅವನ ಮೈಮೇಲಾದ ಘಾಯವು ನನ್ನ ಮೈಮೇಲಾದ ಘಾಯವು ಒಂದೊಂದನ್ನು ಮುಟ್ಟುತ್ತಿರಲು, ಅವನ ಖಡ್ಗದ ಹೊಡೆತಕ್ಕೆ ತನ್ನ ಮೈ ನನ್ನ ಖಡ್ಗದ ಹೊಡೆತಕ್ಕೆ ಅವನ ಮೈ ಹರ್ಷಿಸಲು, ನಾವಿಬ್ಬರು ಅಡಿಮೇಲಾಗಿ ಹೊರಳಿದರೆ ನಾನು ಧನ್ಯನೆಂದು ಕರ್ಣನು ತನ್ನ ಮತ್ತು ಅರ್ಜುನನ ಕಾಳಗದ ದೃಶ್ಯವನ್ನು ಕಲ್ಪಿಸಿಕೊಳ್ಳುತ್ತಿದ್ದ.

ಅರ್ಥ:
ಮುಂದಲೆ: ತಲೆಯ ಮುಂಭಾಗದಲ್ಲಿರುವ ಕೂದಲು; ಕೈ: ಹಸ್ತ, ಕರ; ಘಾಯ: ಪೆಟ್ಟು; ಚುಂಬಿಸು: ಮುತ್ತು, ತಾಗು; ಖಡುಗ: ಕತ್ತಿ; ಮೈ: ತನು, ದೇಹ; ತಿವಿ: ಚುಚ್ಚು; ನರ: ಅರ್ಜುನ; ಲವಲವಿಸು: ಹರ್ಷಿಸು; ಅಡಿ: ಪಾದ; ಹೊರಳು: ತಿರುವು, ಉರುಳಾಡು;

ಪದವಿಂಗಡಣೆ:
ಅವನ +ಮುಂದಲೆ +ತನ್ನ +ಕೈಯಲಿ
ಅವನ +ಕೈಯಲಿ +ತನ್ನ +ಮುಂದಲೆ
ಅವನ +ದೇಹದ +ಘಾಯವ್+ಎನ್ನಯ +ಘಾಯ +ಚುಂಬಿಸುತ
ಅವನ +ಖಡುಗದಲ್+ಎನ್ನ +ಮೈ +ನಾ
ತಿವಿದ+ ಖಡ್ಗಕೆ +ನರನ +ಮೈ +ಲವ
ಲವಿಸಲ್+ಅಡಿ+ಮೇಲಾಗಿ +ಹೊರಳ್ದರೆ+ ಧನ್ಯ +ತಾನೆಂದ

ಅಚ್ಚರಿ:
(೧) ಘಾಯ ಚುಂಬಿಸು, ಲವಲವಿಸು, ಹೊರಳಾಡು – ಯುದ್ಧವನ್ನು ಸರಸ ರೀತಿಯಲ್ಲಿ ನೋಡುವ ಪರಿಕಲ್ಪನೆ

ಪದ್ಯ ೫೦: ಅಗ್ನಿಯು ಯಾರನ್ನು ಹೇಗೆ ರಮಿಸಿತು?

ಕುರುಳ ತುಂಬಿಯ ತನಿಗೆದರಿ ಮುಖ
ಸರಸಿಜವ ಚುಂಬಿಸಿ ತಮಾಲದ
ತುರುಬಹಿಡಿದಧರ ಪ್ರವಾಳದರಸವ ನೆರೆ ಸವಿದು
ಉರು ಪಯೋಧರ ಬಿಲ್ವವನು ಹೊ
ಯ್ದೊರಸಿ ಕದಳಿಯ ನುಣ್ದೊಡೆಯ ನಿ
ಟ್ಟೊರಸಿ ರಮಿಸಿತು ವನಸಿರಿಯ ಪಿಪ್ಪಲದಳಾಂಗದಲಿ (ಆದಿ ಪರ್ವ, ೨೦ ಸಂಧಿ, ೫೦ ಪದ್ಯ)

ತಾತ್ಪರ್ಯ:
ಅಗ್ನಿಯ ಶಾಖ, ಧಗೆ ಇಡೀ ಕಾಡನ್ನು ಆವರಿಸಿಕೊಂಡಾಗ ಹೇಗಿರಬಹುದು, ಆದರೆ ಕವಿಯ ಕಣ್ಣಿಗೆ ಅದು ರಮಿಸುವಂತೆ ಕಾಣುತ್ತದೆ, ಆ ಭಯಾನಕ ದೃಶ್ಯವನ್ನು ಸೌಂದರ್ಯದ ಕಣ್ಣಿನಲ್ಲಿ ನೋಡಿ ಚಿತ್ರಿಸುವ ಕವಿಯ ಚಿತ್ರಣ ಅದ್ಭುತವಾಗಿದೆ. ಅಗ್ನಿಯು ಮುಂಗುರುಳಿನಂತಹ ದುಂಬಿಗಳ ಹಾಗೆ ತನ್ನ ರೆಕ್ಕೆಗಳನ್ನು ಕೆದರಿ ಕಮಲದ ಮುಖವನ್ನು ಚುಂಬಿಸಿ,ಹೊಂಗೆಯ ಮುಡಿಹಿಡಿದು ಅದರ ಚಿಗುರಿನ ರಸವನ್ನು ಸವಿದು, ವಿಶೇಷವಾದ ಸ್ತನಗಳುಲ್ಲ ಬಿಲ್ವಮರವನ್ನು ಹೊಯ್ದು, ಬಾಳೆಯ ಮೃದುವಾದ ತೊಡೆಗಳನ್ನು ಸಂಪೂರ್ಣವಾಗಿ ರಮಿಸಿ, ಬೋರೆಹಣ್ಣಿನ ಎಲೆಗಳನ್ನು ಹಿಡಿದು ಹೊಯ್ದು ಅಗ್ನಿಯು ಆ ವನಸಿರಿಯನ್ನು ರಮಿಸಿತು.

ಅರ್ಥ:
ಕುರುಳು: ಮುಂಗುರುಳು; ತುಂಬಿ: ದುಂಬಿ; ತನಿ:ಚೆನ್ನಾಗಿ ಬೆಳೆದ; ಕೆದರು: ಹರಡು; ಮುಖ: ಆನನ; ಸರಸಿಜ: ಕಮಲ; ಚುಂಬಿಸು: ಮುತ್ತು ಕೊಡು; ತಮಾಲ: ಹೊಂಗೆ; ತುರುಬು:ಮುಡಿ; ಅಧರ: ತುಟಿ; ಪ್ರವಾಳ:ಚಿಗುರು; ರಸ: ಸಾರ; ನೆರೆ:ಹೆಚ್ಚು; ಸವಿ:ರುಚಿ ನೋಡು; ಉರು:ವಿಶೇಷವಾದ; ಪಯೋಧರ: ಮೋಡ, ಸ್ತನ; ಹೊಯ್ದು: ಹೊಡೆದು; ಒರಸು: ನಾಶಮಾಡು; ನುಣ್:ಮೃದು; ತೊಡೆ:ಊರು, ಸೊಂಟದಿಂದ ಮಂಡಿಯವರೆಗಿನ ಭಾಗ; ನಿಟ್ಟೊರಸು: ಒಟ್ಟಾಗಿ ನಾಶಮಾಡು; ವನ: ಕಾಡು; ಸಿರಿ: ಸಂಪತ್ತು; ಪಿಪ್ಪಲ: ಬೋರೆಹಣ್ಣಿನ ಮರ; ಕದಳಿ: ಬಾಳೆ;

ಪದವಿಂಗಡಣೆ:
ಕುರುಳ +ತುಂಬಿಯ +ತನಿಗೆದರಿ+ ಮುಖ
ಸರಸಿಜವ+ ಚುಂಬಿಸಿ +ತಮಾಲದ
ತುರುಬ+ಹಿಡಿದ್+ಅಧರ +ಪ್ರವಾಳದ+ರಸವ+ ನೆರೆ +ಸವಿದು
ಉರು +ಪಯೋಧರ+ ಬಿಲ್ವವನು+ ಹೊ
ಯ್ದೊರಸಿ+ ಕದಳಿಯ +ನುಣ್+ತೊಡೆಯ +ನಿ
ಟ್ಟೊರಸಿ+ ರಮಿಸಿತು +ವನಸಿರಿಯ+ ಪಿಪ್ಪಲದಳಾಂಗದಲಿ

ಅಚ್ಚರಿ:
(೧) ಭಯಂಕರವಾದ ದೃಶ್ಯವನ್ನು ಸೌಂದರ್ಯದ ರೀತಿಯಲ್ಲಿ ವರ್ಣಿಸಿರುವುದು
(೨) ಮುಖ ಚುಂಬಿಸು, ಅಧರ ರಸ ಸವಿದು,ಪಯೋಧರ ಹೊಯ್ದರಸಿ,ನುಣ್ದೊಡೆ, ರಮಿಸು – ಸೌಂದರ್ಯವನ್ನು ಪಸರಿಸುವ ಪದಗಳು