ಪದ್ಯ ೪೦: ಅಶ್ವತ್ಥಾಮನನ್ನು ಅರ್ಜುನನು ಹೇಗೆ ಹಂಗಿಸಿದನು?

ಅಕ್ರಮವೆ ತ್ರೈಲೋಕ್ಯವಿದ್ಯಾ
ಚಕ್ರವರ್ತಿಗಳೆಂದು ನೀವೀ
ವಿಕ್ರಮದ ಮಾತಿನೊಳು ಮೇಗರೆ ಮೆರೆವ ಭಟರುಗಳೆ
ಶಕ್ರನಳುಕುವ ಬಾಹುಬಲ ರಿಪು
ಚಕ್ರದೊಳಗಿನ್ನಾರಿಗುಂಟಿದು
ವಕ್ರಭಣಿತೆಯು ಸಲುವುದಶ್ವತ್ಥಾಮಗೆನುತೆಚ್ಚ (ವಿರಾಟ ಪರ್ವ, ೯ ಸಂಧಿ, ೪೦ ಪದ್ಯ)

ತಾತ್ಪರ್ಯ:
ನೀವಾದುವ ಮಾತುಗಳು ಸರಿಯಾಗಿವೆ, ಮೂರು ಲೋಕದಲ್ಲಿ ಧನುರ್ವಿದ್ಯಾ ಚಕ್ರವರ್ತಿಗಳೆಂದು ಜಂಬ ಕೊಚ್ಚಿಕೊಂಡು ಮೆರೆಯುವವರು ನೀವಲ್ಲ. ನಮ್ಮ ಶತ್ರುಗಳಲ್ಲಿ ಇಂದ್ರನನ್ನೂ ಅಳುಕಿಸುವ ಬಾಹು ಬಲವು ನಿಮಗಲ್ಲದೆ ಇನ್ನಾರಿಗುಂತು. ಈ ಕೊಂಕು ಮಾತುಗಳು ಅಶ್ವತ್ಥಾಮನಿಗೆ ಶೋಭಿಸುತ್ತದೆ ಎನ್ನುತ್ತಾ ಅರ್ಜುನನು ಅಶ್ವತ್ಥಾಮನನ್ನು ಬಾಣದಿಂದ ಹೊಡೆದನು.

ಅರ್ಥ:
ಅಕ್ರಮ: ತಪ್ಪಾದ ಕ್ರಿಯೆ; ತ್ರೈಲೋಕ: ಮೂರು ಜಗತ್ತು; ವಿದ್ಯ: ಜ್ಞಾನ; ಚಕ್ರವರ್ತಿ: ರಾಜ; ವಿಕ್ರಮ: ಶೂರ; ಮಾತು: ವಾಣಿ; ಮೇಗರೆ: ಮೇಲೆ ಮೇಲೆ, ವ್ಯರ್ಥವಾಗಿ; ಮೆರೆ: ಶೋಭಿಸು; ಭಟ: ಸೈನಿಕ; ಶಕ್ರ: ಇಂದ್ರ; ಅಳುಕು: ಹೆದರು; ಬಾಹುಬಲ: ಪರಾಕ್ರಮ; ರಿಪು: ವೈರಿ; ಚಕ್ರ: ಗೋಲಾಕಾರದ ರಚನೆ; ವಕ್ರ: ನೇರವಲ್ಲದ; ಭಣಿತೆ: ಮಾತು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಅಕ್ರಮವೆ +ತ್ರೈಲೋಕ್ಯ+ವಿದ್ಯಾ
ಚಕ್ರವರ್ತಿಗಳೆಂದು +ನೀವೀ
ವಿಕ್ರಮದ +ಮಾತಿನೊಳು+ ಮೇಗರೆ +ಮೆರೆವ +ಭಟರುಗಳೆ
ಶಕ್ರನ್+ಅಳುಕುವ +ಬಾಹುಬಲ +ರಿಪು
ಚಕ್ರದೊಳಗಿನ್+ಆರಿಗುಂಟ್+ಇದು
ವಕ್ರ+ಭಣಿತೆಯು +ಸಲುವುದ್+ಅಶ್ವತ್ಥಾಮಗೆನುತ್+ಎಚ್ಚ

ಅಚ್ಚರಿ:
(೧) ಮೇಗರೆ, ವಕ್ರಭಣಿತೆ – ಪದಗಳ ಬಳಕೆ
(೨) ಅಕ್ರಮ, ವಿಕ್ರಮ; ಚಕ್ರ, ಶಕ್ರ, ವಕ್ರ – ಪ್ರಾಸ ಪದಗಳು

ಪದ್ಯ ೬: ಬೃಹದಶ್ವನು ಯಾರ ಕಥೆಯನ್ನು ಹೇಳಲು ಪ್ರಾರಂಭಿಸಿದನು?

ಆತನೀತನ ಸಂತವಿಟ್ಟು
ದ್ಯೂತದಲಿ ನಳಚಕ್ರವರ್ತಿ ಮ
ಹೀತಳವ ಸೋತನು ಕಣಾ ಕಲಿಯಿಂದ ಪುಷ್ಕರಗೆ
ಭೂತಳವ ಬಿಸುಟಡವಿಗೈದಿದ
ನಾತ ನಿಜವಧು ಸಹಿತ ವನದಲಿ
ಕಾತರಿಸಿ ನಿಜಸತಿಯ ಬಿಸುಟನು ಹಾಯ್ದನಡವಿಯಲಿ (ಅರಣ್ಯ ಪರ್ವ, ೧೦ ಸಂಧಿ, ೬ ಪದ್ಯ)

ತಾತ್ಪರ್ಯ:
ಬೃಹದಶ್ವನು ಧರ್ಮಜನನ್ನು ಸಂತೈಸಿ ಅವನಿಗೆ ನಳನ ಕಥೆಯನ್ನು ಹೇಳಿದನು. ನಳ ಚಕ್ರವರ್ತಿಯು ಕಲಿಯ ದೆಸೆಯಿಂದ ಪುಷ್ಕರನಿಗೆ ರಾಜ್ಯವನ್ನು ಸೋತು, ಪತ್ನಿಯಾದ ದಮಯಂತಿಯೊಂದಿಗೆ ಕಾಡಿಗೆ ಹೋಗಿ, ಕಾಡಿನಲ್ಲಿ ಅವಳೊಬ್ಬಳನ್ನೇ ತ್ಯಜಿಸಿದನು.

ಅರ್ಥ:
ಸಂತವಿಡು: ಸಂತೈಸು; ದ್ಯೂತ: ಪಗಡೆಯಾಟ; ಚಕ್ರವರ್ತಿ: ರಾಜ; ಮಹೀತಳ: ಭೂಮಿ; ಸೋತು: ಪರಾಭವ; ಭೂತಳ: ಭೂಮಿ; ಬಿಸುಟು: ತ್ಯಜಿಸು, ಹೊರಹಾಕು; ಅಡವಿ: ಅರಣ್ಯ; ವಧು: ಹೆಂಡತಿ, ಹೆಣ್ಣು; ಸಹಿತ; ಜೊತೆ; ವನ: ಕಾಡು; ಕಾತರ: ಕಳವಳ; ಸತಿ: ಹೆಂಡತಿ; ಬಿಸುಟು: ಹೊರಹಾಕು; ಹಾಯ್ದು: ಮೇಲೆಬಿದ್ದು; ಅಡವಿ: ಕಾಡು;

ಪದವಿಂಗಡಣೆ:
ಆತನ್+ಈತನ +ಸಂತವಿಟ್ಟು
ದ್ಯೂತದಲಿ +ನಳ+ಚಕ್ರವರ್ತಿ +ಮ
ಹೀತಳವ +ಸೋತನು +ಕಣಾ +ಕಲಿಯಿಂದ +ಪುಷ್ಕರಗೆ
ಭೂತಳವ +ಬಿಸುಟ್+ಅಡವಿಗೈದಿದನ್
ಆತ +ನಿಜವಧು +ಸಹಿತ +ವನದಲಿ
ಕಾತರಿಸಿ +ನಿಜಸತಿಯ +ಬಿಸುಟನು +ಹಾಯ್ದನ್+ಅಡವಿಯಲಿ

ಅಚ್ಚರಿ:
(೧) ವಧು, ಸತಿ; ಅಡವಿ, ವನ; ಮಹೀತಳ, ಭೂತಳ – ಸಮನಾರ್ಥಕ ಪದ

ಪದ್ಯ ೧೩೨: ಯುಧಿಷ್ಠಿರನಿಗೆ ಸರಿಸಮಾನನಾದವರು ಯಾರು?

ಚಕ್ರವರ್ತಿಗಳಾರ್ವರೀ ಭೂ
ಚಕ್ರದೊಳಗವರಿಗೆ ಮುರಾರಿಯ
ಚಕ್ರವೇ ಬೆಸಕೈವುದಲ್ಲದೆ ಪಾಂಡುತನಯರಿಗೆ
ಚಕ್ರಿ ತಾ ಬಂದವರ ಸೇವಾ
ಚಕ್ರದೊಳಗಿಹನಾ ಯುಧಿಷ್ಠಿರ
ಚಕ್ರವರ್ತಿಗದಾವನೈ ಸರಿಯೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೩೨ ಪದ್ಯ)

ತಾತ್ಪರ್ಯ:
ಈ ಭೂಲೋಕವನ್ನಾಳಿದ ಆರು ಚಕ್ರವರ್ತಿಗಳಿಗೆ ಶ್ರೀಮಹಾವಿಷ್ಣುವಿನ ಸುದರ್ಶನ ಚಕ್ರದ ಬಲವಿತ್ತು. ಆದ್ದರಿಂದ ಅವರು ಪ್ರಖ್ಯಾತರಾದರು. ಆದರೆ ಯುಧಿಷ್ಠಿರ ಚಕ್ರವರ್ತಿಯ ಸೇವೆಯಲ್ಲಿ ಸುದರ್ಶನ ಚಕ್ರವನ್ನು ಹಿಡಿಯುವ ಶ್ರೀಕೃಷ್ಣನೇ ಇದ್ದಾನೆ ಎಂದ ಮೇಳೆ ಯುಧಿಷ್ಠಿರನಿಗೆ ಸರಿಸಮಾನನಾದವರು ಯಾರಿದ್ದಾರೆ ಎಂದು ವಿದುರ ಧೃತರಾಷ್ಟ್ರನನ್ನು ಪ್ರಶ್ನಿಸಿದ.

ಅರ್ಥ:
ಚಕ್ರವರ್ತಿ: ಮಹಾರಾಜ; ಆರು: ಷಟ್; ಭೂಚಕ್ರ: ಭೂಮಿ; ಮುರಾರಿ: ಕೃಷ್ಣ; ಚಕ್ರ: ಸುದರ್ಶನ; ಬೆಸ: ಕೆಲಸ, ಕಾರ್ಯ; ತನಯ: ಮಕ್ಕಳು; ಚಕ್ರಿ:ಚಕ್ರಾಯುಧವನ್ನು ಉಳ್ಳವನು, ವಿಷ್ಣು; ಸೇವ: ಶುಶ್ರೂಷೆ; ಚಕ್ರ: ಗಾಲಿ, ವರ್ತುಳ; ಸೇವಾಚಕ್ರ: ಸೇವೆಯಗಾಲಿ; ಇಹನು: ಇರುವನು, ಜೀವಿಸು; ಸರಿ: ಸಮನಾದ;

ಪದವಿಂಗಡಣೆ:
ಚಕ್ರವರ್ತಿಗಳ್+ಆರ್ವರ್+ಈ+ ಭೂ
ಚಕ್ರದೊಳಗ್+ಅವರಿಗೆ+ ಮುರಾರಿಯ
ಚಕ್ರವೇ +ಬೆಸಕೈವುದ್+ಅಲ್ಲದೆ +ಪಾಂಡು+ತನಯರಿಗೆ
ಚಕ್ರಿ +ತಾ +ಬಂದ್+ಅವರ+ ಸೇವಾ
ಚಕ್ರದೊಳಗ್+ಇಹನ್+ಆ+ ಯುಧಿಷ್ಠಿರ
ಚಕ್ರವರ್ತಿಗ್+ಅದಾವನೈ +ಸರಿಯೆಂದನಾ+ ವಿದುರ

ಅಚ್ಚರಿ:
(೧) ಚಕ್ರ – ೪ ಸಾಲು ಹೊರತುಪಡಿಸಿ ಮಿಕ್ಕೆಲ್ಲಾ ಸಾಲುಗಳ ಮೊದಲ ಪದ
(೨) ಭೂಚಕ್ರ, ಸೇವಾಚಕ್ರ – ಪದಗಳ ಪ್ರಯೋಗ; ೨, ೫ ಸಾಲು
(೩) ಚಕ್ರವರ್ತಿ – ೧, ೬ ಸಾಲಿನ ಮೊದಲ ಪದ