ಪದ್ಯ ೧೮: ದುರ್ಯೋಧನನು ಎಲ್ಲಿ ನಿಂತಿದ್ದನು?

ಶಕುನಿ ಸಹದೇವನನುಳೂಕನು
ನಕುಲನನು ಕುರುರಾಯನನುಜರು
ಚಕಿತ ಚಾಪನ ಕೆಣಕಿದರು ಪವಮಾನನಂದನನ
ಅಕಟ ಫಲುಗುಣ ಎನುತ ಸಮಸ
ಪ್ತಕರು ಕವಿದರು ನೂರು ಗಜದಲಿ
ಸಕಲದಳಕೊತ್ತಾಗಿ ನಿಂದನು ಕೌರವರಾಯ (ಗದಾ ಪರ್ವ, ೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಕುನಿಯು ಸಹದೇವನನ್ನು, ಉಲೂಕನು, ನಕುಲನನ್ನು, ಕೌರವನ ತಮ್ಮಂದಿರು ಭೀಮನನ್ನೂ, ಸಂಶಪ್ತಕರು ಅರ್ಜುನನನ್ನೂ ಎದುರಿಸಿದರು. ಇವರ ಹಿಂದೆ ನೂರಾನೆಗಳ ನಡುವೆ ದುರ್ಯೋಧನನು ಬೆಂಬಲವಾಗಿ ನಿಂತನು.

ಅರ್ಥ:
ಅನುಜ: ತಮ್ಮ; ಚಕಿತ: ವಿಸ್ಮಿತನಾದ; ಚಾಪ: ಬಿಲ್ಲು; ಕೆಣಕು: ರೇಗಿಸು; ಪವಮಾನ: ವಾಯು; ನಂದನ: ಮಗ; ಅಕಟ: ಅಯ್ಯೋ; ಸಮಸಪ್ತಕ: ಪ್ರಮಾಣ ಮಾಡಿ ಹೋರಾಟ ಮಾಡುವವರು; ಕವಿ: ಆವರಿಸು; ನೂರು: ಶತ; ಗಜ: ಆನೆ; ಸಕಲ: ಎಲ್ಲ; ದಳ: ಸೈನ್ಯ; ಒತ್ತು: ಮುತ್ತು; ನಿಂದು: ನಿಲ್ಲು; ರಾಯ: ರಾಜ;

ಪದವಿಂಗಡಣೆ:
ಶಕುನಿ +ಸಹದೇವನನ್+ಉಳೂಕನು
ನಕುಲನನು +ಕುರುರಾಯನ್+ಅನುಜರು
ಚಕಿತ +ಚಾಪನ +ಕೆಣಕಿದರು +ಪವಮಾನ+ನಂದನನ
ಅಕಟ +ಫಲುಗುಣ +ಎನುತ +ಸಮಸ
ಪ್ತಕರು +ಕವಿದರು +ನೂರು +ಗಜದಲಿ
ಸಕಲ+ದಳಕೊತ್ತಾಗಿ +ನಿಂದನು +ಕೌರವರಾಯ

ಅಚ್ಚರಿ:
(೧) ಚ ಕಾರದ ಜೋಡಿ ಪದ – ಚಕಿತ ಚಾಪನ
(೨) ಕುರುರಾಯ, ಕೌರವರಾಯ – ದುರ್ಯೋಧನನನ್ನು ಕರೆದ ಪರಿ

ಪದ್ಯ ೩೭: ದ್ರೋಣನು ಪಾಂಡವ ಸೈನ್ಯಕ್ಕೆ ಏನೆಂದು ಹೇಳಿದನು?

ಅಕಟ ಫಡ ಕುನ್ನಿಗಳಿಗಸುರಾಂ
ತಕನ ಕಪಟದ ಮಂತ್ರವೇ ಬಾ
ಧಕವಿದಲ್ಲದೆ ನಿಮಗೆ ಸೋಲುವುದುಂಟೆ ಕುರುಸೇನೆ
ಸಕಲ ಸನ್ನಾಹದಲಿ ಯಾದವ
ನಿಕರ ಸಹಿತೀಯಿರುಳು ರಣದಲಿ
ಚಕಿತರಾಗದೆ ಜೋಡಿಸೆನುತಿದಿರಾದನಾ ದ್ರೋಣ (ದ್ರೋಣ ಪರ್ವ, ೧೫ ಸಂಧಿ, ೩೭ ಪದ್ಯ)

ತಾತ್ಪರ್ಯ:
ಕೃಷ್ಣನ ಕಪಟಮಂತ್ರವೇ ನಮಗೆ ಬಾಧಕವಾಗಿ ಈ ಹಗಲು ನಾವು ಸೋತೆವು. ಅಯ್ಯೋ ಕುನ್ನಿಗಳೇ, ನೀವಲ್ಲ ಗೆದ್ದದ್ದು, ನಿಮಗೆ ಕುರುಸೇನೆ ಸೋತೀತೇ? ಸಮಸ್ತ ಸನ್ನಾಹದೊಡನೆ ಈ ರಾತ್ರಿ ನಾವು ಯಾದವರೊಡನೆ ಯುದ್ಧಕ್ಕೆ ಬಂದಿದ್ದೇವೆ, ವಿಸ್ಮಯ ಪಡದೆ ಯುದ್ಧಕ್ಕೆ ಬನ್ನಿ ಎಂದು ದ್ರೋಣನು ಕೂಗಿದನು.

ಅರ್ಥ:
ಅಕಟ: ಅಯ್ಯೋ; ಫಡ: ತಿರಸ್ಕಾರದ ಮಾತು; ಕುನ್ನಿ: ನಾಯಿ; ಅಸುರ: ರಾಕ್ಷಸ; ಅಂತಕ: ಸಾವು; ಅಸುರಾಂತಕ: ಕೃಷ್ಣ; ಕಪಟ: ಮೋಸ; ಮಂತ್ರ: ವಿಚಾರ, ಆಲೋಚನೆ; ಬಾಧಕ: ತೊಂದರೆ ಮಾಡುವವ; ಸೋಲು: ಪರಾಭವ; ಸಕಲ: ಎಲ್ಲಾ; ಸನ್ನಾಹ: ಸನ್ನೆ, ಸುಳಿವು; ನಿಕರ: ಗುಂಪು; ಸಹೀತ: ಜೊತೆ; ಇರುಳು: ರಾತ್ರಿ; ರಣ: ಯುದ್ಧ; ಚಕಿತ: ಬೆರಗುಗೊಂಡು; ಜೋಡಿಸು: ಸೇರಿಸು; ಇದಿರು: ಎದುರು;

ಪದವಿಂಗಡಣೆ:
ಅಕಟ+ ಫಡ +ಕುನ್ನಿಗಳಿಗ್+ಅಸುರಾಂ
ತಕನ +ಕಪಟದ +ಮಂತ್ರವೇ +ಬಾ
ಧಕವ್+ಇದಲ್ಲದೆ +ನಿಮಗೆ +ಸೋಲುವುದುಂಟೆ +ಕುರುಸೇನೆ
ಸಕಲ +ಸನ್ನಾಹದಲಿ +ಯಾದವ
ನಿಕರ+ ಸಹಿತ್+ಈ+ಇರುಳು +ರಣದಲಿ
ಚಕಿತರಾಗದೆ +ಜೋಡಿಸೆನುತ್+ಇದಿರಾದನಾ +ದ್ರೋಣ

ಅಚ್ಚರಿ:
(೧) ಕೌರವರಿಗೆ ತೊಂದರೆಯಾದದ್ದು – ಅಸುರಾಂತಕನ ಕಪಟದ ಮಂತ್ರವೇ ಬಾಧಕವ್
(೨) ಪಾಂಡವರನ್ನು ತೆಗಳುವ ಪರಿ – ಅಕಟ ಫಡ ಕುನ್ನಿಗಳ್

ಪದ್ಯ ೬೦: ದ್ರೋಣನು ದುರ್ಯೋಧನನಿಗೆ ಏನು ಹೇಳಿದನು?

ಮಕುಟವನು ನೆಗಹಿದನು ಭೂಪಾ
ಲಕ ನಿದಾನಿಸಿ ಕೇಳು ಶಶಿಕುಲ
ಮುಕುರವಿತ್ತಂಡದಲಿ ನೆನೆಯೆವು ಭೇದಬುದ್ಧಿಗಳ
ಯುಕುತಿಯಿನ್ನಿದಕಿಲ್ಲ ಪಾರ್ಥನ
ಶಕುತಿ ಘನವೀ ರಾಜಕಾರ್ಯಕೆ
ಚಕಿತರಾದೆವು ರಾಯ ಚಿತ್ತೈಸೆಂದನಾ ದ್ರೋಣ (ದ್ರೋಣ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ಕೌರವನ ಕಿರೀಟವನ್ನು ಮೇಲಕ್ಕೆತ್ತಿ, ದ್ರೋಣನು, ರಾಜ ಆಲೋಚಿಸಿ ಕೇಳು, ಚಂದ್ರವಂಶದ ಇತ್ತಂಡಕ್ಕೂ ನಾವು ಭೇದ ಬಗೆಯುವವರಲ್ಲ. ಈಗ ಬಂದಿರುವ ಸಮಸ್ಯೆಯನ್ನು ಪರಿಹರಿಸಲು ಯಾವ ಯುಕ್ತಿಗೂ ಸಾಧ್ಯವಿಲ್ಲ. ಅರ್ಜುನನ ಮಹಾಬಲಶಾಲಿ, ಈ ರಾಜಕಾರ್ಯದ ರೀತಿಯನ್ನು ನೋಡಿ ನನಗೆ ಆಶ್ಚರ್ಯವಾಗಿದೆ ಎಂದನು.

ಅರ್ಥ:
ಮಕುಟ: ಕಿರೀಟ; ನೆಗಹು: ಮೇಲೆತ್ತು; ಭೂಪಾಲಕ: ರಾಜ; ನಿದಾನ: ನಿಮಿತ್ತ; ಕೇಳು: ಆಲಿಸು; ಶಶಿ: ಚಂದ್ರ; ಕುಲ: ವಂಶ; ಮುಕುರ: ಕನ್ನಡಿ; ನೆನೆ: ಜ್ಞಾಪಿಸು; ಭೇದ: ಮುರಿಯುವುದು; ಬುದ್ಧಿ: ಜ್ಞಾನ; ಯುಕುತಿ: ತರ್ಕಬದ್ಧವಾದ ವಾದಸರಣಿ; ಶಕುತಿ: ಶಕ್ತಿ, ಬಲ; ಘನ: ಶ್ರೇಷ್ಠ; ಚಕಿತ: ಆಶ್ಚರ್ಯ; ರಾಯ: ರಾಜ; ಚಿತ್ತೈಸು: ಆಲಿಸು;

ಪದವಿಂಗಡಣೆ:
ಮಕುಟವನು +ನೆಗಹಿದನು +ಭೂಪಾ
ಲಕ+ ನಿದಾನಿಸಿ +ಕೇಳು +ಶಶಿಕುಲ
ಮುಕುರವ್+ಇತ್ತಂಡದಲಿ +ನೆನೆಯೆವು +ಭೇದ+ಬುದ್ಧಿಗಳ
ಯುಕುತಿ+ಇನ್ನಿದಕಿಲ್ಲ+ ಪಾರ್ಥನ
ಶಕುತಿ +ಘನವ್+ಈ+ ರಾಜಕಾರ್ಯಕೆ
ಚಕಿತರಾದೆವು +ರಾಯ +ಚಿತ್ತೈಸೆಂದನಾ +ದ್ರೋಣ

ಅಚ್ಚರಿ:
(೧) ರಾಯ, ಭೂಪಾಲಕ – ಸಮಾನಾರ್ಥಕ ಪದಗಳು

ಪದ್ಯ ೨೪: ಯಾವ ರೀತಿಯ ಮಳೆಗಾಳ ಸೃಷ್ಟಿಯಾಯಿತು?

ನಕುಲ ಕುಂತೀಭೋಜಸುತ ಸೋ
ಮಕ ಘಟೋತ್ಕಚ ದ್ರುಪದ ಪ್ರತಿವಿಂ
ಧ್ಯಕ ಶತಾನೀಕಾಭಿಮನ್ಯು ಯುಯುತ್ಸು ಸೃಂಜಯರು
ಸಕಲ ಸನ್ನಾಹದಲಿ ಯುದ್ಧೋ
ದ್ಯುಕುತರಾದರು ಚಕಿತಚಾಪರು
ಮುಕುತ ಶಸ್ತ್ರಾವಳಿಯ ಮಳೆಗಾಲವನು ನಿರ್ಮಿಸುತ (ಭೀಷ್ಮ ಪರ್ವ, ೮ ಸಂಧಿ, ೨೪ ಪದ್ಯ)

ತಾತ್ಪರ್ಯ:
ನಕುಲ, ಕುಂತೀಭೋಜನ ಮಗ, ಸೋಮಕ, ಘಟೋತ್ಕಚ, ದ್ರುಪದ, ಪ್ರತಿವಿಂಧ್ಯ, ಶತಾನೀಕ, ಅಭಿಮನ್ಯು, ಯುಯುತ್ಸು, ಸೃಂಜಯರು ಎಲ್ಲಾ ಯುದ್ಧಸನ್ನಾಹದೊಡನೆ ಬಿಲ್ಲನ್ನು ಒದರಿಸಿ ಬಾಣಗಳ ಮಳೆಗಾಲವನ್ನುಂಟು ಮಾಡಿದರು.

ಅರ್ಥ:
ಸಕಲ: ಎಲ್ಲಾ; ಸನ್ನಾಹ: ಯುದ್ಧಕ್ಕೆ ಸನ್ನದ್ಧವಾದ ಸೇನೆ; ಉದ್ಯುಕ್ತ: ತೊಡಗುವವನು; ಚಕಿತ: ಬೆರಗುಗೊಂಡ; ಚಾಪ: ಬಿಲ್ಲು, ಧನುಸ್ಸು; ಮುಕುತ: ಮುಕ್ತ; ಶಸ್ತ್ರಾವಳಿ: ಆಯುಧಗಳ ಗುಂಪು; ಮಳೆಗಾಲ: ವರ್ಷಧಾರೆ; ನಿರ್ಮಿಸು: ಕಟ್ಟು, ರಚಿಸು;

ಪದವಿಂಗಡಣೆ:
ನಕುಲ +ಕುಂತೀಭೋಜಸುತ +ಸೋ
ಮಕ +ಘಟೋತ್ಕಚ+ ದ್ರುಪದ+ ಪ್ರತಿ+ವಿಂ
ಧ್ಯಕ+ ಶತಾನೀಕ+ಅಭಿಮನ್ಯು+ ಯುಯುತ್ಸು +ಸೃಂಜಯರು
ಸಕಲ+ ಸನ್ನಾಹದಲಿ +ಯುದ್ಧೋ
ದ್ಯುಕುತರಾದರು +ಚಕಿತ+ಚಾಪರು
ಮುಕುತ +ಶಸ್ತ್ರಾವಳಿಯ +ಮಳೆಗಾಲವನು+ ನಿರ್ಮಿಸುತ

ಅಚ್ಚರಿ:
(೧) ಆಯುಧಗಳ ರಭಸವನ್ನು ತಿಳಿಸುವ ಪರಿ – ಚಕಿತಚಾಪರು ಮುಕುತ ಶಸ್ತ್ರಾವಳಿಯ ಮಳೆಗಾಲವನು ನಿರ್ಮಿಸುತ