ಪದ್ಯ ೨೯: ವಂಧಿ ಮಾಗಧರು ಭೀಮನನ್ನು ಹೇಗೆ ಹೊಗಳಿದರು?

ಭಾಪು ಮಝರೇ ಭೀಮ ಕೌರವ
ಭೂಪವಿಲಯಕೃತಾಂತ ಕುರುಕುಲ
ದೀಪಚಂಡಸಮೀರ ಕುರುನೃಪತಿಮಿರಮಾರ್ತಾಂಡ
ಕೋಪನಪ್ರತಿಪಕ್ಷಕುಲನಿ
ರ್ವಾಪಣೈಕಸಮರ್ಥ ಎನುತಭಿ
ರೂಪನನು ಹೊಗಳಿದರು ವಂದಿಗಳಬುಧಿ ಘೋಷದಲಿ (ಗದಾ ಪರ್ವ, ೭ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮಾ, ಭಲೇ, ಭೇಷ್, ಕೌರವ ರಾಜರಿಗೆ ಕಾಲಯಮ! ಕೌರವ ಕುಲದೀಪಕ್ಕೆ ಚಂಡಮಾರುತ!, ಕೌರವರೆಂಬ ಕತ್ತಲೆಗೆ ಸೂರ್ಯ!, ಅತಿಕೋಪದ ವೈರಿ ಕುಲವನ್ನು ನಾಶಮಾಡಲು ಸಮರ್ಥನಾದವನೇ ಎಂದು ವಂದಿ ಮಾಗಧರು ಭೀಮನನ್ನು ಹೊಗಳಿದರು.

ಅರ್ಥ:
ಭಾಪು: ಭಲೇ; ಮಝರೇ: ಭೇಷ್; ಭೂಪ: ರಾಜ; ವಿಲಯ: ನಾಶ, ಪ್ರಳಯ; ಕೃತಾಂತ: ಯಮ; ದೀಪ: ದೀವಿಗೆ, ಜೊಡರು; ಚಂಡಸಮೀರ: ಚಂಡಮಾರುತ; ನೃಪತಿ: ರಾಜ; ತಿಮಿರ: ಕತ್ತಲು, ಅಂಧಕಾರ; ಮಾರ್ತಾಂಡ: ಸೂರ್ಯ; ಕೋಪ: ಮುಳಿ, ಕುಪಿತ; ಪ್ರತಿಪಕ್ಷ: ಎದುರಾಳಿ; ಕುಲ: ವಂಶ; ನಿರ್ವಾಪಣ: ನಾಶಮಾಡಲು; ಸಮರ್ಥ: ಯೋಗ್ಯ; ಅಭಿರೂಪ: ಅನುರೂಪವಾದ; ಹೊಗಳು: ಪ್ರಶಂಶಿಸು; ವಂದಿ: ಹೊಗಳುಭಟ್ಟ; ಅಬುಧಿ: ಸಾಗರ; ಘೋಷ: ಕೂಗು;

ಪದವಿಂಗಡಣೆ:
ಭಾಪು +ಮಝರೇ +ಭೀಮ +ಕೌರವ
ಭೂಪ+ವಿಲಯ+ಕೃತಾಂತ +ಕುರುಕುಲ
ದೀಪ+ಚಂಡಸಮೀರ +ಕುರುನೃಪ+ತಿಮಿರ+ಮಾರ್ತಾಂಡ
ಕೋಪನ+ಪ್ರತಿಪಕ್ಷಕುಲ+ನಿ
ರ್ವಾಪಣೈಕ+ಸಮರ್ಥ+ ಎನುತ್+ಅಭಿ
ರೂಪನನು +ಹೊಗಳಿದರು +ವಂದಿಗಳ್+ಅಬುಧಿ +ಘೋಷದಲಿ

ಅಚ್ಚರಿ:
(೧) ಭೀಮನನ್ನು ಹೊಗಳುವ ಪರಿ – ಕೌರವ ಭೂಪವಿಲಯಕೃತಾಂತ; ಕುರುಕುಲ ದೀಪ ಚಂಡಸಮೀರ; ಕುರುನೃಪತಿಮಿರಮಾರ್ತಾಂಡ

ಪದ್ಯ ೩೦: ಎಲ್ಲರೂ ಸೇರಿ ಕೂಗುವ ಕೂಗು ಹೇಗಿತ್ತು?

ತನತನಗೆ ಸಾತ್ಯಕಿ ಯಮಳ ಫಲು
ಗುಣರು ಪಂಚದ್ರೌಪದೀನಂ
ದನರು ಧೃಷ್ಟದ್ಯುಮ್ನ ಸೃಂಜಯ ಸೋಮಕಾದಿಗಳು
ಅನುಚಿತವು ಸಲಿಲಪ್ರವೇಶವು
ಜನಪತಿಗೆ ಕರ್ತವ್ಯವೆಂಬುದು
ಜನಜನಿತವೆಂದುಲಿದುದೈದೆ ಸಮುದ್ರಘೋಷದಲಿ (ಗದಾ ಪರ್ವ, ೫ ಸಂಧಿ, ೩೦ ಪದ್ಯ)

ತಾತ್ಪರ್ಯ:
ಸಾತ್ಯಕಿ, ನಕುಲ, ಸಹದೇವರು, ಅರ್ಜುನ, ಉಪಪಾಂಡವರು, ಧೃಷ್ಟದ್ಯುಮ್ನ, ಸೃಂಜಯ ಸೋಮಕರೇ ಮೊದಲಾದವರು ರಾಜನು ಉದಕಪ್ರವೇಶ ಮಾಡುವುದು ಅನುಚಿತವೆಂದು ಎಲ್ಲರೂ ಹೇಳುತ್ತಾರೆ. ಹೊರಕ್ಕೆ ಬಾ ಎಂದು ಸಮುದ್ರದ ಮೊರೆತವನ್ನು ಹೋಲುವ ಧ್ವನಿಯಿಂದ ಕೂಗಿದರು.

ಅರ್ಥ:
ಯಮಳ: ಅವಳಿ ಮಕ್ಕಳು; ಫಲುಗುಣ: ಅರ್ಜುನ; ಪಂಚ: ಐದು; ನಂದನ: ಮಕ್ಕಳು; ಆದಿ: ಮುಂತಾದ; ಅನುಚಿತ: ಸರಿಯಲ್ಲದ; ಸಲಿಲ: ನೀರು; ಪ್ರವೇಶ: ಒಳಹೋಗುವಿಕೆ; ಜನಪತಿ: ರಾಜ; ಕರ್ತವ್ಯ: ಮಾಡಬೇಕಾದ ಕೆಲಸ; ಜನಜನಿತ: ಪ್ರಚಲಿತವಾದ ವಿಚಾರ; ಸಮುದ್ರ: ಸಾಗರ; ಘೋಷ: ಕೂಗು; ಉಲಿ: ಕೂಗು;

ಪದವಿಂಗಡಣೆ:
ತನತನಗೆ +ಸಾತ್ಯಕಿ +ಯಮಳ +ಫಲು
ಗುಣರು +ಪಂಚ+ದ್ರೌಪದೀ+ನಂ
ದನರು +ಧೃಷ್ಟದ್ಯುಮ್ನ +ಸೃಂಜಯ +ಸೋಮಕಾದಿಗಳು
ಅನುಚಿತವು +ಸಲಿಲ+ಪ್ರವೇಶವು
ಜನಪತಿಗೆ +ಕರ್ತವ್ಯವೆಂಬುದು
ಜನಜನಿತವ್+ಎಂದ್+ಉಲಿದುದೈದೆ +ಸಮುದ್ರ+ಘೋಷದಲಿ

ಅಚ್ಚರಿ:
(೧) ಲೋಕ ನೀತಿ: ಅನುಚಿತವು ಸಲಿಲಪ್ರವೇಶವು ಜನಪತಿಗೆ ಕರ್ತವ್ಯವೆಂಬುದು ಜನಜನಿತ

ಪದ್ಯ ೯: ಯಾವ ವಾದ್ಯಗಳು ಗರ್ಜಿಸುತ್ತಿದ್ದವು?

ಸೂಳು ಮಿಗಲಳ್ಳಿರಿವ ನಿಸ್ಸಾ
ಳೋಳಿಗಳ ತಂಬಟದ ಕೊಂಬಿನ
ಗಾಳುಗಜರಿನ ಕಹಳೆಗಳ ಕಳಕಳದ ಬೊಗ್ಗುಗಳ
ಮೇಳವಣೆ ಭುಗಿಲಿಡಲು ಬೊಬ್ಬೆಯ
ಘೋಳ ಘೋಷದ ರಭಸ ದೆಸೆಗಳ
ಸೀಳೆ ಸಿಡಿಲೆದ್ದೆರಡು ಬಲ ಹೊಯ್ದಾಡಿತೊಡಗಲಸಿ (ಭೀಷ್ಮ ಪರ್ವ, ೬ ಸಂಧಿ, ೯ ಪದ್ಯ)

ತಾತ್ಪರ್ಯ:
ಸರದಿಯ ಪ್ರಕಾರ ಭೇರಿ, ತಮ್ಮಟೆಯ ಕಹಳೆ ಕೊಂಬುಗಳು ಸದ್ದು ಮಾಡಿ ಮಹಾಶಬ್ದವನ್ನು ಮಾಡುತ್ತಿದ್ದವು. ಮೇಲಿಂದ ಮೇಲೆ ಕೇಕೆ ಗರ್ಜನೆಗಳು ದಿಕ್ಕುಗಳನ್ನಾವರಿಸಿದವು. ಎರಡು ಸೈನ್ಯಗಳು ಸಿಡಿಲಂತೆ ಶತ್ರುಗಳ ಮೇಲೆರಗಿದವು.

ಅರ್ಥ:
ಸೂಳು: ಸರದಿ, ಆವೃತ್ತಿ, ಬಾರಿ; ಮಿಗಲು: ಹೆಚ್ಚಾಗಲು; ಇರಿ: ತಿವಿ, ಚುಚ್ಚು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ತಂಬಟ: ತಮ್ಮಟೆ; ಕೊಂಬು: ಒಂದು ಬಗೆಯ ವಾದ್ಯ; ಗಾಳು: ಒರಟಾದುದು; ಗಜರು: ಗರ್ಜನೆ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಕಳಕಳ: ವ್ಯಥೆ; ಬೊಗ್ಗು: ಕಹಳೆ; ಮೇಳ: ಗುಂಪು; ಭುಗಿಲಿಡು: ಭುಗಿಲ್ ಎಂದು ಶಬ್ದ ಮಾಡು; ಬೊಬ್ಬೆ: ಆರ್ಭಟ; ಘೋಳ: ಕುದುರೆ; ಘೋಷ: ಕೂಗು; ರಭಸ: ವೇಗ; ದೆಸೆ: ದಿಕ್ಕು; ಸೀಳು: ಚೂರು, ತುಂಡು; ಸಿಡಿಲು: ಚೆದರು, ಹರಡು; ಬಲ: ಸೈನ್ಯ; ಹೊಯ್ದಾಡು: ಹೋರಾಡು; ಒಡಗಲಗು: ಒಟ್ಟಾಗಿ ಸೇರಿಸು; ಊಳಿಗ: ಕೆಲಸ;

ಪದವಿಂಗಡಣೆ:
ಸೂಳು+ ಮಿಗಲಳ್+ಇರಿವ+ ನಿಸ್ಸಾಳ್
ಊಳಿಗಳ +ತಂಬಟದ+ ಕೊಂಬಿನ
ಗಾಳು+ಗಜರಿನ+ ಕಹಳೆಗಳ +ಕಳಕಳದ+ ಬೊಗ್ಗುಗಳ
ಮೇಳವಣೆ +ಭುಗಿಲಿಡಲು+ ಬೊಬ್ಬೆಯ
ಘೋಳ +ಘೋಷದ +ರಭಸ +ದೆಸೆಗಳ
ಸೀಳೆ +ಸಿಡಿಲೆದ್ದ್+ಎರಡು +ಬಲ+ ಹೊಯ್ದಾಡಿತ್+ಒಡಗಲಸಿ

ಅಚ್ಚರಿ:
(೧) ನಿಸ್ಸಾಳ, ತಂಬಟ, ಕೊಂಬು, ಕಹಳೆ, ಬೊಗ್ಗು – ವಾದ್ಯಗಳ ಹೆಸರು
(೨) ಘ ಕಾರದ ಜೋಡಿ ಪದ – ಘೋಳ ಘೋಷದ

ಪದ್ಯ ೨: ಸೈನ್ಯವು ಕಾಳಗಕ್ಕೆ ಹೇಗೆ ಹೊರಟಿತು?

ಸೂಳು ವಿಗಲಳ್ಳಿರಿದವುರು ನಿ
ಸ್ಸಾಳಕೋಟಿಗಳುದಯದಲಿ ದಿಗು
ಜಾಲ ಜರಿಯಲು ಝಾಡಿಗೆದರುವ ಗೌರುಗಹಳೆಗಳ
ತೂಳುವರೆಗಳ ರಾಯ ಗಿಡಗನ
ಘೋಳ ಘೋರದ ಘೋಷವವನಿಯ
ಸೀಳೆ ನಡೆದುದು ಸೇವೆ ರವಿನಂದನನ ನೇಮದಲಿ (ಕರ್ಣ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಅನೇಕ ನಿಸ್ಸಾಳಗಳು ಮತ್ತೆ ಮತ್ತೆ ಸದ್ದು ಮಾದಿದವು. ರಣಕಹಳೆಗಳು ಮೊರೆದವು. ತಮಟೆಗಳನ್ನು ಬಡಿದರು. ರಾಯಗಿಡಿಗಗಳ ಘೋರ ಶಬ್ದ ಭೂಮಿಯನ್ನು ಸೀಳಿತು. ಕರ್ಣನ ಅಪ್ಪಣೆಯಂತೆ ಸೈನ್ಯವು ಕಾಳಗಕ್ಕೆ ಹೊರಟಿತು.

ಅರ್ಥ:
ಸೂಳು: ಆರ್ಭಟ, ಬೊಬ್ಬೆ; ಅಳ್ಳಿರಿ: ನಡುಗಿಸು, ಚುಚ್ಚು; ಉರು: ಹೆಚ್ಚಾದ, ಅತಿದೊಡ್ಡ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಕೋಟಿ: ಅನೇಕ; ಉದಯ: ಹುಟ್ಟು; ದಿಗು: ದಿಕ್ಕು; ಜಾಲ: ಬಲೆ; ಸಮೂಹ; ಜರಿ: ನಿಂದಿಸು, ತಿರಸ್ಕರಿಸು; ಝಾಡಿ: ಕಾಂತಿ; ಝಾಡಿಗೆದರು: ರಾಶಿಯಾಗಿ ಕೆದರು; ಗೌರು: ಗಟ್ಟಿಯಾದ ಕೀರಲು ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ; ತೂಳು: ಆವೇಶ, ಉನ್ಮಾದ; ರಾಯ: ರಾಜ; ಗಿಡಿಗ: ಒಂದು ಬಗೆಯ ಹಕ್ಕಿ; ಘೋಳ: ಕುದುರೆ; ಘೋರ: ಉಗ್ರವಾದುದು; ಘೋಷ: ಗಟ್ಟಿಯಾದ ಶಬ್ದ; ಅವನಿ: ಭೂಮಿ; ಸೀಳು: ಚೂರು, ತುಂಡು; ನಡೆ: ಜರಗು; ಸೇವೆ: ಕಾರ್ಯ; ರವಿ: ಸೂರ್ಯ; ನಂದನ: ಮಗ; ನೇಮ: ನಿಯಮ;

ಪದವಿಂಗಡಣೆ:
ಸೂಳು+ ವಿಗಲ್+ಅಳ್ಳಿರಿದವ್+ಉರು +ನಿ
ಸ್ಸಾಳ+ಕೋಟಿಗಳ್+ಉದಯದಲಿ +ದಿಗು
ಜಾಲ +ಜರಿಯಲು+ ಝಾಡಿಗೆದರುವ +ಗೌರು+ಕಹಳೆಗಳ
ತೂಳುವರೆಗಳ +ರಾಯ +ಗಿಡಗನ
ಘೋಳ +ಘೋರದ +ಘೋಷವ್+ಅವನಿಯ
ಸೀಳೆ +ನಡೆದುದು +ಸೇವೆ +ರವಿನಂದನನ+ ನೇಮದಲಿ

ಅಚ್ಚರಿ:
(೧) ಘ ಕಾರದ ತ್ರಿವಳಿ ಪದ – ಘೋಳ ಘೋರದ ಘೋಷವವನಿಯ

ಪದ್ಯ ೧೦: ಪಾಂಡವರು ಹೇಗೆ ಹೊಳೆದರು?

ದ್ರುಪದ ಗುಡಿಗಟ್ಟಿದನು ಕುಂತಿಯ
ವಿಪುಳ ಹರುಷವನೇನನೆಂಬೆನು
ದ್ರುಪದ ಯದು ಪರಿವಾರವುಲಿದುದು ಜಲಧಿ ಘೋಷದಲಿ
ಅಪದೆಸೆಯ ಮುಗಿಲೊಡೆದು ಹೊಳೆ ಹೊಳೆ
ದು ಪರಿಚರ ರವಿಯಂತೆ ತತ್ಕ್ಷಣ
ವಿಪುಳ ತೇಜಃಪುಂಜರೆಸೆದರು ಪಾಂಡುನಂದನರು (ಆದಿ ಪರ್ವ, ೧೭ ಸಂಧಿ, ೧೦ ಪದ್ಯ)

ತಾತ್ಪರ್ಯ:
ದ್ರುಪದ ಸಂತೋಷಗೊಂಡನು, ಕುಂತಿಯ ಸಂತೋಷದ ಪರಿ ಹೇಗೆ ತಾನೆ ಹೇಳಲಿ, ದ್ರುಪದ ಮತ್ತು ಯದು ಪರಿವಾರದವರು ಸಮುದ್ರದಂತೆ ಘೋಷಮಾಡಿದರು. ದುರಾದೃಷ್ಟದ ದೆಸೆಯ ಮೋಡವು ಚದುರಿ ಅಂತರಿಕ್ಷದಲ್ಲಿ ಕಾಣುವ ಸೂರ್ಯನಂತೆ ಪಾಂಡವರು ಅತಿಶಯ ತೇಜಸ್ಸಿನಿಂದ ಹೊಳೆದರು.

ಅರ್ಥ:
ಗುಡಿಕಟ್ಟು: ಸಂತೋಷಗೊಳ್ಳು; ವಿಪುಳ: ಬಹಳ; ಹರುಷ: ಸಂತೋಷ; ಪರಿವಾರ: ವಂಶ; ಉಲಿ: ಕೂಗು, ಧ್ವನಿ; ಜಲಧಿ: ಸಮುದ್ರ; ಘೋಷ: ಗಟ್ಟಿಯಾದ ಶಬ್ದ; ಅಪದೆಸೆ: ದುರಾದೃಷ್ಟ; ಮುಗಿಲ್: ಮೋಡ, ಆಕಾಶ; ಒಡೆದು: ಚೂರಾಗು; ಹೊಳೆ: ಕಾಂತಿ; ಪರಿಚರ: ಸೇವಕ, ಆಳು; ರವಿ: ಸೂರ್ಯ; ತೇಜಸ್ಸು: ಕಾಂತಿ; ನಂದನ: ಮಕ್ಕಳು;

ಪದವಿಂಗಡಣೆ:
ದ್ರುಪದ +ಗುಡಿಗಟ್ಟಿದನು +ಕುಂತಿಯ
ವಿಪುಳ +ಹರುಷವನ್+ಏನನೆಂಬೆನು
ದ್ರುಪದ+ ಯದು +ಪರಿವಾರ+ವುಲಿದುದು +ಜಲಧಿ +ಘೋಷದಲಿ
ಅಪದೆಸೆಯ +ಮುಗಿಲೊಡೆದು +ಹೊಳೆ +ಹೊಳೆ
ದು +ಪರಿಚರ+ ರವಿಯಂತೆ +ತತ್ಕ್ಷಣ
ವಿಪುಳ +ತೇಜಃಪುಂಜರ್+ಎಸೆದರು +ಪಾಂಡು+ನಂದನರು

ಅಚ್ಚರಿ:
(೧) ದ್ರುಪದ – ೧,೩ ಸಾಲಿನ ಮೊದಲ ಪದ, ವಿಪುಳ – ೨, ೬ ಸಾಲಿನ ಮೊದಲ ಪದ
(೨) ಉಲಿ, ಘೋಷ – ಶಬ್ದ, ಧ್ವನಿಯ ಸಮನಾರ್ಥಕ ಪದ
(೩) ಹೊಳೆ, ತೇಜ – ಸಮನಾರ್ಥಕ ಪದ
(೪) ಸಂತೋಷದ ಕೂಗು ಹೇಗಿತ್ತು – ಜಲಧಿ ಘೋಷದಲಿ ಸಮುದ್ರದಂತೆ