ಪದ್ಯ ೪೧: ಕೌರವರು ಯಾವ ಶಬ್ದಕ್ಕೆ ಹೆದರಿದರು?

ನಳಿನನಾಭನು ಪಾಂಚಜನ್ಯವ
ಮೊಳಗಿದನು ನಿಜದೇವದತ್ತವ
ಸೆಳೆದು ಫಲುಗುಣನೂದಿದನು ಗಾಂಡಿವವನೊದರಿಸುತ
ಪ್ರಳಯ ದಿನದಲಿ ತಿವಿವ ಸಿಡಿಲ
ವ್ವಳಿಸುವಂತಿರೆ ರೌದ್ರರವ ಘುಳು
ಘುಳಿಸಿ ತಲ್ಲಣಿಸಿತ್ತು ಕೌರವ ರಾಯ ಪರಿವಾರ (ದ್ರೋಣ ಪರ್ವ, ೮ ಸಂಧಿ, ೪೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಪಾಂಚಜನ್ಯ ಶಂಖವನ್ನು ಊದಿದನು. ಅರ್ಜುನನು ದೇವದತ್ತ ಶಂಖವನ್ನು ಊದಿದನು. ಅರ್ಜುನನು ಗಾಂಡಿವವನ್ನೆಳೆದುಕೊಂಡು ಧನುಷ್ಟಂಕಾರ ಮಾದಿದನು. ಈ ಭಯಂಕರ ಸದ್ದುಗಳು ಪ್ರಲಯಕಾಲದ ಸಿಡಿಲು ಮೊಳಗುವಂತೆ ಕಿವಿಯಲ್ಲಿ ಹೊಗಲು, ಕೌರವನ ಪರಿವಾರವು ಬೆದರಿತು.

ಅರ್ಥ:
ನಳಿನ: ಕಮಲ; ನಳಿನನಾಭ: ನಾಭಿಯಲ್ಲಿ ಕಮಲವನ್ನು ಧರಿಸಿದವ, ವಿಷ್ಣು; ಮೊಳಗು: ಧ್ವನಿ, ಸದ್ದು; ಸೆಳೆ: ಹಿಡಿ; ಊದು: ಬಾಯಿಯಿಂದ ಗಾಳಿಯನ್ನು ಹೊರಡಿಸು, ಉರುಬು; ಒದರು: ಕೊಡಹು, ಜಾಡಿಸು; ಪ್ರಳಯ: ಅಂತ್ಯ; ದಿನ: ವಾರ; ತಿವಿ: ಚುಚ್ಚು; ಸಿಡಿಲು: ಅಶನಿ; ಅವ್ವಳಿಸು: ತಟ್ಟು, ತಾಗು; ರೌದ್ರ: ಶಿವನ ರೂಪ; ರೌದ್ರರವ: ಭಯಂಕರ ಶಬ್ದ; ಘುಳು: ಶಬ್ದವನ್ನು ವಿವರಿಸುವ ಪದ; ತಲ್ಲಣ: ಅಂಜಿಕೆ, ಭಯ; ರಾಯ: ರಾಜ; ಪರಿವಾರ: ಪರಿಜನ;

ಪದವಿಂಗಡಣೆ:
ನಳಿನನಾಭನು+ ಪಾಂಚಜನ್ಯವ
ಮೊಳಗಿದನು +ನಿಜ+ದೇವದತ್ತವ
ಸೆಳೆದು +ಫಲುಗುಣನ್+ಊದಿದನು +ಗಾಂಡಿವವನ್+ಒದರಿಸುತ
ಪ್ರಳಯ +ದಿನದಲಿ +ತಿವಿವ +ಸಿಡಿಲ್
ಅವ್ವಳಿಸುವಂತಿರೆ+ ರೌದ್ರರವ+ ಘುಳು
ಘುಳಿಸಿ +ತಲ್ಲಣಿಸಿತ್ತು +ಕೌರವ+ ರಾಯ +ಪರಿವಾರ

ಅಚ್ಚರಿ:
(೧) ಪಾಂಚಜನ್ಯ, ದೇವದತ್ತ – ಕೃಷ್ಣಾರ್ಜುನರ ಶಂಖದ ಹೆಸರು
(೨) ಭಯದ ಶಬ್ದವನ್ನು ವರ್ಣಿಸುವ ಪರಿ – ರೌದ್ರರವ ಘುಳುಘುಳಿಸಿ ತಲ್ಲಣಿಸಿತ್ತು

ಪದ್ಯ ೪: ಸರೋವರವು ಹೇಗೆ ಶೋಭಿಸುತ್ತಿತ್ತು?

ತಿಳಿಗೊಳನ ಮಧ್ಯದಲಿ ಮೆರೆದಿಹ
ನಳಿನನೃಪನಿದಿರಿನಲಿ ಮಧುಪಾ
ವಳಿ ರವದ ಗಾಯಕರ ಪಿಕ ಪಾಠಕರ ನೃತ್ಯಗಳ
ಲಲಿತ ನವಿಲಿನ ವಾದ್ಯಗಳ ಘುಳು
ಘುಳಿಪ ಕೊಳರ್ವಕ್ಕಿಗಳ ಲಕ್ಷ್ಮೀ
ಲಲನೆಯರಮನೆಯೆನಲು ಮೆರೆದುದು ಭೂಪಕೇಳೆಂದ (ಅರಣ್ಯ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ತಿಳಿನೀರಿನ ಸರೋವರದ ಮಧ್ಯದಲ್ಲಿ ಕಮಲವೆಂಬ ರಾಜನೆದುರಿನಲ್ಲಿ ದುಂಬಿಗಳೆಂಬ ಗಾಯಕರು, ಕೋಗಿಲೆಗಳೆಂಬ ಸ್ತುತಿಪಾಠಕರ ನೃತ್ಯ, ನವಿಲಿನ ವಾದ್ಯ ಕೊಳದ ಹಕ್ಕಿಗಳ ಘುಳುಘುಳುವೆಂಬ ಶಬ್ದದವೆಲ್ಲವೂ ರಂಜಿಸುತ್ತಿರಲು ಸರೋವರವು ಲಕ್ಷ್ಮೀದೇವಿಯ ಅರಮನೆಯಂತೆ ಶೋಭಿಸುತ್ತಿತ್ತು.

ಅರ್ಥ:
ತಿಳಿ: ಸ್ವಚ್ಛ, ನಿರ್ಮಲ; ಕೊಳ: ಸರೋವರ; ಮಧ್ಯ: ನಡುವೆ; ಮೆರೆ: ಹೊಳೆ, ಪ್ರಕಾಶಿಸು; ನಳಿನ: ಕಮಲ; ನೃಪ: ರಾಜ; ಇದಿರು: ಎದುರು; ಮಧುಪಾವಳಿ: ದುಂಬಿಗಳ ಗುಂಪು; ಮಧು: ಜೇನು; ರವ: ಶಬ್ದ; ಗಾಯಕ: ಸಂಗೀತಗಾರ; ಪಿಕ: ಕೋಗಿಲೆ; ಪಾಠಕ: ಹೊಗಳುಭಟ್ಟ; ನೃತ್ಯ: ನಾಟ್ಯ, ನರ್ತನ; ಲಲಿತ: ಸುಂದರ; ನವಿಲು: ಮಯೂರ; ವಾದ್ಯ: ಸಂಗೀತದ ಸಾಧನ; ಘುಳು: ಶಬ್ದವನ್ನು ವಿವರಿಸುವ ಪದ; ಹಕ್ಕಿ: ಪಕ್ಷಿ; ಲಲನೆ: ಹೆಣ್ಣು; ಅರಮನೆ: ರಾಜರ ವಾಸಸ್ಥಾನ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ತಿಳಿ+ಕೊಳನ +ಮಧ್ಯದಲಿ +ಮೆರೆದಿಹ
ನಳಿನ+ನೃಪನ್+ಇದಿರಿನಲಿ +ಮಧುಪಾ
ವಳಿ+ ರವದ +ಗಾಯಕರ+ ಪಿಕ +ಪಾಠಕರ +ನೃತ್ಯಗಳ
ಲಲಿತ +ನವಿಲಿನ +ವಾದ್ಯಗಳ +ಘುಳು
ಘುಳಿಪ +ಕೊಳರ್ವಕ್ಕಿಗಳ +ಲಕ್ಷ್ಮೀ
ಲಲನೆಯರ್+ಅಮನೆ+ಎನಲು+ ಮೆರೆದುದು +ಭೂಪಕೇಳೆಂದ

ಅಚ್ಚರಿ:
(೧) ಸರೋವರವನ್ನು ಲಕ್ಷ್ಮೀದೇವಿಯ ಅರಮನೆಯಂತ ಚಿತ್ರಿಸುವ ಕವಿಯ ಕಲ್ಪನೆ

ಪದ್ಯ ೧೯: ಸಾಗರದ ತೆರೆಯನ್ನು ಹೇಗೆ ವರ್ಣಿಸುವುದು?

ಮೊರೆದು ಮಿಗೆ ತಲೆಯೊತ್ತಿ ತೆರೆ ಮೈ
ಮುರಿದು ಘುಳು ಘುಳು ಘುಳಿತ ಘನನಿ
ಷ್ಠುರ ನಿನಾದದ ಗಜರು ಗಾಢಿಸಿ ಬಹಳ ಲಹರಿಯಲಿ
ತೆರೆತೆರೆಯ ತಿವಿದೆದ್ದು ಗಗನವ
ನಿರದೊದೆದು ವಿತಳಕ್ಕೆ ಸುಳಿ ಭೋಂ
ಕರಿಸಿ ಸಾಗರನುಬ್ಬುಗವಳವ ಕೊಂಡವೊಲು ಕುಣಿದ (ಉದ್ಯೋಗ ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅರ್ಜುನನು ಸಾಗರವನ್ನು ತಲುಪಿದ. ಸಾಗರದಲ್ಲಿ ನಿರಂತರವಾಗಿ ಭೋರ್ಗರೆತವು ಕೇಳಿಸಿತು. ಒಂದರ ಹಿಂದೊಂದು ತೆರೆ ಸದ್ದು ಮಾಡುತ್ತಾ ಒಂದನ್ನೊಂದು ತಿವಿದು ಆಗಸವನ್ನು ಒದೆಯುವಂತೆ, ಪಾತಾಳವನ್ನು ಹೊಕ್ಕುವಂತೆ ಕಾಣುತ್ತಿದ್ದವು. ಸಾಗರನು ಬಹಳ ಹಸಿವಾಗಿದ್ದಂತೆ ಕಂಡಿತು ಹಾಗೆಯೆ ಅವಉ ಹೆಚ್ಚಾಗಿ ಊಟಮಾಡಿದನೋ ಎಂಬಂತೆ ಸದ್ದು ಕೇಳಿತು.

ಅರ್ಥ:
ಮೊರೆ: ಝೇಂಕಾರ; ಮಿಗೆ: ಮತ್ತು, ಅಧಿಕವಾಗಿ; ತಲೆ: ಶಿರ; ಒತ್ತಿ: ಒತ್ತಡ, ಸ್ಪರ್ಶ; ತೆರೆ:ತೆಗೆ, ಬಿಚ್ಚು; ಮೈ: ತನು; ಮುರಿ: ಸೀಳು; ಘುಳು: ನೀರಿನ ಶಬ್ದ; ಘನ: ಶ್ರೇಷ್ಠ; ನಿಷ್ಠುರ:ಕಠಿಣವಾದುದು, ಒರಟಾದುದು; ನಿನಾದ: ಶಬ್ದ; ಗಜರು: ಗದರು, ಬೆದರಿಸು; ಗಾಢಿಸಿ: ತುಂಬಿಕೊಳ್ಳು; ಬಹಳ; ತುಂಬ; ಲಹರಿ: ಅಲೆ, ತೆರೆ; ತೆರೆ:ತರಂಗ; ತಿವಿದು: ಚುಚ್ಚು; ಗಗನ: ಆಗಸ; ಒದೆ: ಹೊಡೆತ; ವಿತಳ: ಪಾತಾಳ; ಸುಳಿ: ಸುತ್ತು, ಆವರ್ತ; ಭೋಂಕರಿಸು: ಘರ್ಜಿಸು, ಜೋರಾದ ಶಬ್ದ; ಸಾಗರ: ಸಮುದ್ರ; ಉಬ್ಬುಗವಳ: ದೊಡ್ಡ ತುತ್ತು; ಕೊಂಡು: ಪಡೆದು; ಕುಣಿ: ನರ್ತಿಸು;

ಪದವಿಂಗಡಣೆ:
ಮೊರೆದು +ಮಿಗೆ +ತಲೆಯೊತ್ತಿ+ ತೆರೆ+ ಮೈ
ಮುರಿದು +ಘುಳು +ಘುಳು +ಘುಳಿತ +ಘನ+ನಿ
ಷ್ಠುರ +ನಿನಾದದ +ಗಜರು +ಗಾಢಿಸಿ +ಬಹಳ +ಲಹರಿಯಲಿ
ತೆರೆತೆರೆಯ +ತಿವಿದೆದ್ದು +ಗಗನವನ್
ಇರದ್+ಒದೆದು +ವಿತಳಕ್ಕೆ+ ಸುಳಿ +ಭೋಂ
ಕರಿಸಿ+ ಸಾಗರನ್+ಉಬ್ಬುಗವಳವ+ ಕೊಂಡವೊಲು+ ಕುಣಿದ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಸಮುದ್ರವು ಹೇಗೆ ಕುಣಿಯಿತು? ಸಾಗರನುಬ್ಬುಗವಳವ ಕೊಂಡವೊಲು ಕುಣಿದ
(೨) ಶಬ್ದಗಳ ಪ್ರಯೋಗ – ಘುಳು, ನಿನಾದ, ಭೋಂಕರಿಸು
(೩) ಸಾಗರದ ಅಲೆಗಳು ಮೇಲೆ ಕೆಳಗೆ ಹೋಗುವ ಪರಿ – ತೆರೆತೆರೆಯ ತಿವಿದೆದ್ದು ಗಗನವ;
ನಿರದೊದೆದು ವಿತಳಕ್ಕೆ ಸುಳಿ

ಪದ್ಯ ೫೭: ಖಾಂಡವ ವನದ ದಹಿಸುವ ಶಬ್ದ ಹೇಗೆ ಕೇಳುತ್ತಿತ್ತು?

ಛಿಳಿ ಛಿಳಿಲು ಛಿಳಿ ರವದ ಘುಳು ಘುಳು
ಘುಳು ಘುಳು ಧ್ವನಿಮಯದಿ ಕಪಿಗಳ
ಕಿಳಕಿಳಾಯತ ರವದಿ ಮೃಗ ಸಂಕುಳದ ಕಳಕಳದಿ
ಹಿಳಿದುರಿವ ಹೆಬ್ಬಿದಿರ ಗಂಟಿನ
ಠಳ ಠಳತ್ಕಾರದಿ ದಿಶಾ ಮಂ
ಡಳದ ಮೂಲೆಗಳೊಡೆದುದದ್ಭುತವಾಯ್ತು ವನದಹನ (ಆದಿ ಪರ್ವ, ೨೦ ಸಂಧಿ, ೫೭ ಪದ್ಯ)

ತಾತ್ಪರ್ಯ:
ಅಗ್ನಿಯಿಂದ ಖಾಂಡವ ವನವು ಸುಡತ್ತಿರುವಾಗ ಕೇಳಿ ಬಂದ ಶಬ್ದವಾದರು ಹೇಗೆ ಕೇಳಿರಬಹುದು, ಇದನ್ನು ಕುಮಾರವ್ಯಾಸ ಹೀಗೆ ಚಿತ್ರಿಸಿದ್ದಾರೆ. ಛಿಳಿ, ಛಿಳಿ, ಘುಳು, ಘುಳು ಶಬ್ದಗಳಿಂದಲೂ, ಕಪಿಗಳ ಕಿಳಕಿಳ ಧ್ವನಿಯಿಂದಲೂ, ಮೃಗಗಳ ಕಳಕಳದಿಂದಲೂ, ಹೆಬ್ಬಿದಿರು ಉರಿಯುವಾಗ ಗಂಟುಗಳು ಠಳಠಳ ಶಬ್ದ ಮಾಡುತ್ತಿರಲು, ದಿಕ್ಕುಗಳ ಮೂಲೆಗಳು ಒಡೆದುವೋ ಎಂಬಂತೆ ಖಾಂಡವ ದಹನವು ಅದ್ಭುತವಾಗಿತ್ತು.

ಅರ್ಥ:
ಧ್ವನಿ: ಶಬ್ದ; ಕಪಿ: ಮಂಗ; ರವ: ಧ್ವನಿ, ಶಬ್ದ; ಮೃಗ: ಪ್ರಾಣಿ; ಸಂಕುಲ:ಗುಂಪು; ಉರಿ: ಬೆಂಕಿ; ಬಿದಿರು: ಬೊಂಬು; ದಿಶ: ದಿಕ್ಕು; ಮಂಡಳ:ವರ್ತುಲಾಕಾರ;ಮೂಲೆ: ಕೋನೆ; ಒಡೆ:ಸೀಳು; ಅದ್ಭುತ: ವಿಸ್ಮಯ, ಆಶ್ಚರ್ಯ; ವನ: ಕಾಡು; ದಹನ: ಸುಡು;

ಪದವಿಂಗಡಣೆ:
ಛಿಳಿ+ ಛಿಳಿಲು+ ಛಿಳಿ+ ರವದ+ ಘುಳು +ಘುಳು
ಘುಳು +ಘುಳು +ಧ್ವನಿ+ಮಯದಿ +ಕಪಿಗಳ
ಕಿಳಕಿಳ +ಆಯತ +ರವದಿ +ಮೃಗ +ಸಂಕುಳದ +ಕಳಕಳದಿ
ಹಿಳಿದ್+ಉರಿವ +ಹೆಬ್ಬ್+ ಬಿದಿರ+ ಗಂಟಿನ
ಠಳ +ಠಳತ್+ಕಾರದಿ +ದಿಶಾ +ಮಂ
ಡಳದ +ಮೂಲೆಗಳ್+ಒಡೆದುದ್+ಅದ್ಭುತವಾಯ್ತು +ವನ+ದಹನ

ಅಚ್ಚರಿ:
(೧) ರವ, ಧ್ವನಿ – ಸಮನಾರ್ಥಕ ಪದ ೧, ೨, ೩ ಸಾಲಿನಲ್ಲಿ ಬರುವ ಪದಗಳು
(೨) ಶಬ್ದಗಳ ಬಳಕೆ – ಛಿಳಿ, ಘುಳು, ಕಿಳ, ಠಳ, ಕಳ