ಪದ್ಯ ೧೯: ಭೀಮನ ಆಕ್ರಮಣವು ಹೇಗಿತ್ತು?

ಹರಿಯ ಕುಲಿಶದ ಧಾಳಿಯಲಿ ಕುಲ
ಗಿರಿಗಳಿಬ್ಬಗಿಯಾದವೊಲು ಮಂ
ದರದ ಘಾರಾಘಾರಿಯಲಿ ಬಾಯ್ವಿಡುವ ಕಡಲಂತೆ
ಅರಿವರೂಥಿನಿ ಕೆದರಿ ತಳಿತವು
ತುರಗ ಕರಿ ರಥ ಪಾಯದಳ ಬಲ
ಹೊರಳಿಯೊಡೆದುದು ಹೊದರು ತಗ್ಗಿತು ಹೂಣಿಗರ ಮನದ (ದ್ರೋಣ ಪರ್ವ, ೧೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಇಂದ್ರನ ವಜ್ರಾಯುಧದ ದಾಳಿಯಿಂದ ಕುಲಗಿರಿಗಳು ಸೀಳಿದಮ್ತೆ ಮಂದರದಿಮ್ದ ಕಡೆದಾಗ ಸಮುದ್ರವು ಬಾಯಿಬಿಟ್ಟಂತೆ ಶತ್ರು ಸೈನ್ಯವು ಕೆದರಿತು. ಚತುರಂಗ ಸೈನ್ಯವು ಚೆಲ್ಲಾಪಿಲ್ಲಿಯಾಯಿತು. ಸಾಹಸಿಗರ ಮನಸ್ಸಿನ ಆವೇಗ ತಗ್ಗಿ ಹೋಯಿತು.

ಅರ್ಥ:
ಹರಿ: ಇಂದ್ರ; ಕುಲಿಶ: ವಜ್ರಾಯುಧ; ಧಾಳಿ: ಆಕ್ರಮಣ; ಕುಲಗಿರಿ: ದೊಡ್ಡ ಬೆಟ್ಟ; ಇಬ್ಬಗಿ: ಎರಡು ಭಾಗವಾಗು; ಮಂದರ: ಬೆಟ್ಟದ ಹೆಸರು; ಘಾರಘಾರಿ: ಕಡೆತದಿಂದ ಉಂಟಾದ ಹಿಂಸೆ; ಕಡಲು: ಸಾಗರ; ಅರಿ: ಶತ್ರು; ವರೂಥ: ತೇರು, ರಥ; ಕೆದರು: ಹರಡು, ಚದರಿಸು; ತಳಿತ: ಚಿಗುರು; ತುರಗ: ಅಶ್ವ; ಕರಿ: ಆನೆ; ರಥ: ಬಂಡಿ; ಪಾಯದಳ: ಸೈನಿಕ; ಬಲ: ಸೈನ್ಯ, ಶಕ್ತಿ; ಹೊರಳು: ಉರುಳು, ತಿರುಗು; ಹೊದರು: ಗುಂಪು, ಸಮೂಹ; ತಗ್ಗು: ಕಡಿಮೆಯಾಗು; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ, ಸಾಹಸಿ; ಮನ: ಮನಸ್ಸು;

ಪದವಿಂಗಡಣೆ:
ಹರಿಯ +ಕುಲಿಶದ +ಧಾಳಿಯಲಿ +ಕುಲ
ಗಿರಿಗಳ್+ಇಬ್ಬಗಿಯಾದವೊಲು +ಮಂ
ದರದ+ ಘಾರಾಘಾರಿಯಲಿ +ಬಾಯ್ವಿಡುವ +ಕಡಲಂತೆ
ಅರಿ+ವರೂಥಿನಿ+ ಕೆದರಿ+ ತಳಿತವು
ತುರಗ +ಕರಿ +ರಥ +ಪಾಯದಳ +ಬಲ
ಹೊರಳಿ+ಒಡೆದುದು +ಹೊದರು +ತಗ್ಗಿತು +ಹೂಣಿಗರ +ಮನದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹರಿಯ ಕುಲಿಶದ ಧಾಳಿಯಲಿ ಕುಲಗಿರಿಗಳಿಬ್ಬಗಿಯಾದವೊಲು ಮಂ
ದರದ ಘಾರಾಘಾರಿಯಲಿ ಬಾಯ್ವಿಡುವ ಕಡಲಂತೆ

ಪದ್ಯ ೩೧ : ಅರ್ಜುನನು ಯುಧಿಷ್ಠಿರನನ್ನು ಹೇಗೆ ಹಂಗಿಸಿದನು -೩?

ರಣದ ಘಾರಾಘಾರಿಯಾರೋ
ಗಣೆಯ ಮನೆಯಲ್ಲರಸ ಶಿರದಲಿ
ಕುಣಿದಡಾಯ್ದಕೆ ಸುಳಿವ ಸುರಗಿಗೆ ತಿವಿದ ಬಲ್ಲೆಹಕೆ
ಹಣಿವ ಲೌಡಿಗೆ ಪಾಯ್ದು ಬೀಳುವ
ಕಣೆಗೆ ಖಂಡದ ರುಧಿರ ರಣದೌ
ತಣವ ರಚಿಸದೆ ಬರಿದೆ ರಾಜ್ಯವ ಕೊಂಬೆ ನೀನೆಂದ (ಕರ್ಣ ಪರ್ವ, ೧೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಅರ್ಜುನನು ತನ್ನ ಬೈಗಳನ್ನು ಮುಂದುವರೆಸುತ್ತಾ, ರಾಜ ಯುದ್ಧವೆಂದರೆ ಊಟದ ಮನೆಯಲ್ಲ. ತಲೆಯ ಮೇಲೆರಗುವ ಕತ್ತಿಗೆ ಸುಳಿಯುವ ಸುರಗಿಗೆ, ತಿವಿಯುವ ಬಲ್ಲೆಯಹಕ್ಕೆ, ಹೊಡೆಯುವ ಲೌಡಿಗೆ, ಹಾರಿಬಂದು ತಾಗುವ ಬಾಣಕ್ಕೆ ಯುದ್ಧದಲ್ಲಿ ರಕ್ತದ ಮೃಷ್ಟಾನ ಭೋಜನವನ್ನು ಮಾಡಿಸದೇ ಸುಮ್ಮನಿದ್ದು ರಾಜ್ಯವನ್ನು ಪಡೆಯುವೆಯಾ ಎಂದು ಕೇಳಿದನು.

ಅರ್ಥ:
ರಣ: ಯುದ್ಧ; ಘಾರಾಘಾರಿ: ಕಡೆತದಿಂದ ಉಂಟಾದ ಹಿಂಸೆ; ಆರೋಗಣೆ: ಊಟ, ಭೋಜನ; ಮನೆ: ಆಲಯ; ಅರಸ: ರಾಜ; ಶಿರ: ತಲೆ; ಕುಣಿ: ನರ್ತಿಸು, ಆಡು; ಸುಳಿ: ತಿರುಗು; ಸುರಗಿ: ಸಣ್ಣ ಕತ್ತಿ, ಚೂರಿ; ತಿವಿ: ಚುಚ್ಚು; ಹಣಿವ: ಬಲ್ಲೆಹ: ಈಟಿ, ಆಯುಧದ ಬಗೆ; ಹಣಿತ: ಹೊಡೆಯುವ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ, ದೊಣ್ಣೆಯಂತಹ ಸಾಧನ; ಹಾಯ್ದು: ಮೇಲೆ ಬಿದ್ದು; ಬೀಳು: ಕೆಳಕ್ಕೆ ಕುಸಿ; ಕಣೆ:ಬಾಣ; ಖಂಡ: ತುಂಡು, ಚೂರು; ರುಧಿರ: ರಕ್ತ; ಔತಣ:ವಿಶೇಷವಾದ ಊಟ; ರಚಿಸು: ತಯಾರಿಸು; ಬರಿ: ಕೇವಲ; ರಾಜ್ಯ: ರಾಷ್ಟ್ರ; ಕೊಂಬೆ: ಪಡೆ;

ಪದವಿಂಗಡಣೆ:
ರಣದ +ಘಾರಾಘಾರಿ+ಆರೋ
ಗಣೆಯ +ಮನೆಯಲ್ಲ್+ಅರಸ +ಶಿರದಲಿ
ಕುಣಿದಡ್+ಆಯ್ದಕೆ +ಸುಳಿವ +ಸುರಗಿಗೆ +ತಿವಿದ +ಬಲ್ಲೆಹಕೆ
ಹಣಿವ +ಲೌಡಿಗೆ +ಪಾಯ್ದು +ಬೀಳುವ
ಕಣೆಗೆ +ಖಂಡದ +ರುಧಿರ +ರಣದೌ
ತಣವ +ರಚಿಸದೆ +ಬರಿದೆ +ರಾಜ್ಯವ +ಕೊಂಬೆ +ನೀನೆಂದ

ಅಚ್ಚರಿ:
(೧) ರಣರಂಗವನ್ನು ಅಡುಗೆಮನೆಗೆ ಹೋಲಿಕೆ ನೀಡಿರುವ ಪದ್ಯ
(೨) ರ ಕಾರದ ತ್ರಿವಳಿ ಪದ – ರುಧಿರ ರಣದೌತಣವ ರಚಿಸದೆ
(೩) ಆಯುಧಗಳ ಪದಗಳು – ಸುರಗಿ, ಬಲ್ಲೆಹ, ಲೌಡಿ,ಕಣೆ