ಪದ್ಯ ೪೭: ರಣವಾದ್ಯಗಳು ಹೇಗೆ ಉಲಿದವು?

ಸಿಡಿಲ ಕುಡುಹುಗಳಿಂದ ಕಮಲಜ
ಹೊಡೆಯಲಬುಜಭವಾಂಡ ಭೇರಿಯ
ಕಡುದನಿಗಳೆನಲೊದರಿದವು ನಿಸ್ಸಾಳ ಕೋಟಿಗಳು
ತುಡುಕಿದವು ತಂಬಟದ ದನಿ ಜಗ
ದಡಕಿಲನು ಫಡ ಕೌರವೇಂದ್ರನ
ತೊಡಕು ಬೇಡೆಂದೊದರುತಿದ್ದವು ಗೌರುಗಹಳೆಗಳು (ದ್ರೋಣ ಪರ್ವ, ೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ಬ್ರಹ್ಮನು ಸಿಡಿಲಿನ ಕುಡದಿಂದ ಬ್ರಹ್ಮಾಂಡ ಭೇರಿಯನ್ನು ಬಾರಿಸಿದನೋ ಎಂಬಂತೆ ಸಿಸ್ಸಾಳಗಳು ಸದ್ದುಮಾಡಿದವು. ತಮಟೆಯ ಸದ್ದು ಜಗದಡಕಿಲನ್ನು ಅಲುಗಾಡಿಸಿದವು. ಕೌರವನ ಗೊಂದಲ ಬೇಡವೆಂದೇನೋ ಎಂಬಂತೆ ರಣಕಹಳೆಗಳು ಒದರಿದವು.

ಅರ್ಥ:
ಸಿಡಿಲು: ಅಶನಿ; ಕುಡುಹು: ಬರೆಹಾಕುವ ಕುಡ, ಗುಳ; ಕಮಲಜ: ಬ್ರಹ್ಮ; ಹೊಡೆ: ಸೀಳು; ಅಬುಜಭವಾಂಡ: ಬ್ರಹ್ಮಾಂಡ; ಭೇರಿ: ನಗಾರಿ, ದುಂದುಭಿ; ಕಡು: ತುಂಬ; ದನಿ: ಶಬ್ದ; ಒದರು: ಕೊಡಹು, ಜಾಡಿಸು; ನಿಸ್ಸಾಳ: ಚರ್ಮವಾದ್ಯ; ಕೋಟಿ: ಅಸಂಖ್ಯಾತ; ತುಡುಕು: ಹೋರಾಡು, ಸೆಣಸು; ತಂಬಟ: ತಮಟೆ, ಚಪ್ಪಟೆಯಾದ ಚರ್ಮವಾದ್ಯ; ದನಿ: ಶಬ್ದ; ಜಗ: ಪ್ರಪಂಚ; ಅಡಕು: ನಿಯಮ, ರಾಶಿ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ತೊಡಕು: ಗೋಜು, ಗೊಂದಲ; ಬೇಡ: ತೊರೆ; ಗೌರು: ಕರ್ಕಶ ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ;

ಪದವಿಂಗಡಣೆ:
ಸಿಡಿಲ +ಕುಡುಹುಗಳಿಂದ +ಕಮಲಜ
ಹೊಡೆಯಲ್+ಅಬುಜಭವಾಂಡ +ಭೇರಿಯ
ಕಡುದನಿಗಳ್+ಎನಲ್+ಒದರಿದವು +ನಿಸ್ಸಾಳ +ಕೋಟಿಗಳು
ತುಡುಕಿದವು +ತಂಬಟದ +ದನಿ +ಜಗದ್
ಅಡಕಿಲನು +ಫಡ +ಕೌರವೇಂದ್ರನ
ತೊಡಕು +ಬೇಡೆಂದ್+ಒದರುತಿದ್ದವು +ಗೌರು+ಕಹಳೆಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ಸಿಡಿಲ ಕುಡುಹುಗಳಿಂದ ಕಮಲಜಹೊಡೆಯಲಬುಜಭವಾಂಡ ಭೇರಿಯ
ಕಡುದನಿಗಳೆನಲ್

ಪದ್ಯ ೭: ರಣವಾದ್ಯಗಳ ಶಬ್ದವು ಹೇಗೆ ಹೊಮ್ಮಿದವು?

ಉದಯವಾಗದ ಮುನ್ನ ಕಳನೊಳು
ಹೊದರುಗಟ್ಟಿದ ವೈರಿಸೇನೆಯ
ಹದನಿವರ ಪಾಳಯಕೆ ಬಂದುದು ದಳದ ಕಳಕಳಿಕೆ
ಸದೆದುದನಿಬರ ಕಿವಿಯನೊಡೆ ತುಂ
ಬಿದವು ನಿಸ್ಸಾಳೌಘ ದಿಕ್ಕಿನ
ತುದಿಯ ತಿವಿದವು ಮೀರಿ ಗಳಹುವ ಗೌರುಗಹಳೆಗಳು (ಭೀಷ್ಮ ಪರ್ವ, ೮ ಸಂಧಿ, ೭ ಪದ್ಯ)

ತಾತ್ಪರ್ಯ:
ಸೂರ್ಯನು ಇನ್ನೂ ಉದಯವಾಗದ ಮುಂಚೆಯೇ ರಣರಂಗದಲ್ಲಿ ವೈರಿ ಸೈನ್ಯವು ಹೊಕ್ಕ ಸುದ್ದಿ ನಮ್ಮವರ ಪಾಳಯಕ್ಕೆ ರಣವಾದ್ಯಗಳಾದ ನಿಸ್ಸಾಳ, ಕಹಳೆಗಳ ಸದ್ದಿನಿಂದ ತಿಳಿಯಿತು. ಆ ಶಬ್ದವು ಅಷ್ಟೂ ಜನರ ಕಿವಿಗಳನೊಡೆದು ಎಲ್ಲಾ ದಿಕ್ಕುಗಳನ್ನು ಆವರಿಸಿದವು.

ಅರ್ಥ:
ಉದಯ: ಹುಟ್ಟು; ಮುನ್ನ: ಮೊದಲು; ಕಳ: ರಣರಂಗ; ಹೊದರು: ಗುಂಪು, ಸಮೂಹ; ವೈರಿ: ಶತ್ರು; ಸೇನೆ: ಸೈನ್ಯ; ಹದ: ಸರಿಯಾದ ಸ್ಥಿತಿ; ಪಾಳಯ: ಬಿಡಾರ; ಬಂದು: ಆಗಮಿಸು; ದಳ: ಸೈನ್ಯ; ಕಳಕಳಿ: ಉತ್ಸಾಹ; ಸದೆ: ಹೊಡಿ, ಬಡಿ; ಕೊಲ್ಲು; ಅನಿಬರು: ಅಷ್ಟು ಜನ; ಕಿವಿ: ಕರ್ಣ; ಒಡೆ: ಚೂರುಮಾದು; ತುಂಬು: ಆವರಿಸು; ನಿಸ್ಸಾಳ: ಚರ್ಮವಾದ್ಯ; ಔಘ: ಗುಂಪು, ಸಮೂಹ; ದಿಕ್ಕು: ದಿಶೆ; ತುದಿ: ಅಗ್ರ, ಮೇಲ್ಭಾಗ; ತಿವಿ: ಚುಚ್ಚು; ಮೀರು: ಹೆಚ್ಚಾಗು; ಗಳಹು:ಪ್ರಲಾಪಿಸು; ಗೌರು:ಕರ್ಕಶ ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ;

ಪದವಿಂಗಡಣೆ:
ಉದಯವಾಗದ +ಮುನ್ನ +ಕಳನೊಳು
ಹೊದರುಗಟ್ಟಿದ +ವೈರಿ+ಸೇನೆಯ
ಹದನ್+ಇವರ+ ಪಾಳಯಕೆ +ಬಂದುದು +ದಳದ +ಕಳಕಳಿಕೆ
ಸದೆದುದ್+ಅನಿಬರ +ಕಿವಿಯನ್+ಒಡೆ +ತುಂ
ಬಿದವು +ನಿಸ್ಸಾಳ+ಔಘ +ದಿಕ್ಕಿನ
ತುದಿಯ +ತಿವಿದವು +ಮೀರಿ +ಗಳಹುವ+ ಗೌರು+ಕಹಳೆಗಳು

ಅಚ್ಚರಿ:
(೧) ಶಬ್ದದ ತೀವ್ರತೆ – ಸದೆದುದನಿಬರ ಕಿವಿಯನೊಡೆ ತುಂಬಿದವು ನಿಸ್ಸಾಳೌಘ ದಿಕ್ಕಿನ ತುದಿಯ ತಿವಿದವು

ಪದ್ಯ ೭: ಯುದ್ಧದ ಘೋಷವು ಹೇಗಿತ್ತು?

ಸಾರಿ ಸುಭಟರ ಜರೆವ ಕಹಳೆಯ
ಗೌರುಗಳ ತಿತ್ತಿರಿಯ ಚಿನ್ನದ
ಚೀರುಗಳ ನಿಡುಗೊಂಬುಗಳ ಚೆಂಬಕನ ನಿರ್ಘೋಷ
ಡೋರುಗಳೆದವು ನೆಲನನುದಧಿಯ
ಕಾರಿಸಿದವಡಿಮಳಲನೆನೆ ಹುರಿ
ಯೇರಿತಬ್ಬರವಿವರ ಬಲದಲಿ ಭೂಪ ಕೇಳೆಂದ (ಕರ್ಣ ಪರ್ವ, ೨೧ ಸಂಧಿ, ೭ ಪದ್ಯ)

ತಾತ್ಪರ್ಯ:
ಗೌರುಗಹಳೆಗಳ ಘೋಷ, ಚಿನ್ನದ ತಿತ್ತಿರಿಗಳ ಕೊಂಬುಗಳ ಚೆಂಬಕಗಳ ಸದ್ದು ಸುತ್ತಲೂ ಹಬ್ಬಿ ನೆಲವನ್ನೂ ಆಕಾಶವನ್ನೂ ಭೇದಿಸಿದವು. ಸಮುದ್ರವು ತಳದ ಮರಳನ್ನು ಮೇಲಕ್ಕೆ ಸೂಸಿತು ಎಂದು ಸಂಜಯನು ಧೃತರಾಷ್ಟ್ರನಿಗೆ ತಿಳಿಸಿದನು.

ಅರ್ಥ:
ಸಾರು: ಘೋಷಿಸು; ಸುಭಟ: ಸೈನಿಕರು; ಜರೆ: ಜೋರಾಗಿ ಕೂಗು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಗೌರು: ಗಟ್ಟಿಯಾದ ಕೀರಲು ಧ್ವನಿ, ಕರ್ಕಶ ಧ್ವನಿ; ತಿತ್ತಿರಿ: ತುತ್ತೂರಿ, ಒಂದು ವಾದ್ಯ ವಿಶೇಷ; ಚಿನ್ನ: ಬಂಗಾರ; ಚೀರು: ಕಿರಚು, ಕೂಗು; ನಿಡು: ಉದ್ದವಾದ; ಕೊಂಬು: ಒಂದು ಬಗೆಯ ವಾದ್ಯ; ಚೆಂಬು: ಕಳಶ; ನಿರ್ಘೋಷ: ಶಬ್ದ, ನಿನಾದ; ಡೋರುಗಳೆ: ತೂತುಮಾಡು, ರಂಧ್ರಮಾಡು; ನೆಲ: ಭೂಮಿ; ಉದಧಿ: ಸಮುದ್ರ; ಅಡಿ: ಆಳ; ಮಳಲು: ಮರಳು; ಹುರಿಯೇರು: ಧೈರ್ಯ ಹೆಚ್ಚಾಗು; ಅಬ್ಬರ: ಶಬ್ದ, ಆರ್ಭಟ; ಬಲ: ಶಕ್ತಿ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸಾರಿ +ಸುಭಟರ +ಜರೆವ +ಕಹಳೆಯ
ಗೌರುಗಳ +ತಿತ್ತಿರಿಯ +ಚಿನ್ನದ
ಚೀರುಗಳ +ನಿಡುಗೊಂಬುಗಳ+ ಚೆಂಬಕನ +ನಿರ್ಘೋಷ
ಡೋರುಗಳೆದವು+ ನೆಲನನ್+ಉದಧಿಯ
ಕಾರಿಸಿದವ್+ಅಡಿ+ಮಳಲನ್+ಎನೆ+ ಹುರಿ
ಯೇರಿತ್+ಅಬ್ಬರವ್+ಇವರ +ಬಲದಲಿ +ಭೂಪ +ಕೇಳೆಂದ (

ಅಚ್ಚರಿ:
(೧) ಗೌರು, ತಿತ್ತಿರಿ, ನಿಡುಗೊಂಬು, ಚೆಂಬಕ – ಯುದ್ಧದಲ್ಲಿ ಬಳಸುವ ವಾದ್ಯಗಳು
(೨) ಉಪಮಾನದ ಪ್ರಯೋಗ – ನೆಲನನುದಧಿಯಕಾರಿಸಿದವಡಿಮಳಲನೆನೆ