ಪದ್ಯ ೫೮: ಶಿಶುಪಾಲನು ಯುದ್ಧಕ್ಕೆ ಯಾರನ್ನು ಕರೆದನು?

ಡಾವರಿಸಿದುರು ವಿವಿಧವಾದ್ಯ ವಿ
ರಾವವಬುಜೋದ್ಭವನ ಭವನವ
ನಾವಿಗಡ ಭಟಕಟಕವಿದ್ದುದು ಬಲಿದ ಬೊಬ್ಬೆಯಲಿ
ಗೋವಳನ ಬರಹೇಳು ಧರೆಯಲಿ
ದೇವಗಡ ಬರಹೇಳು ತೋರಾ
ಕಾವವರ ತಾ ಕೊಲುವೆನೆಂದೊದರಿದನು ಕಲಿ ಚೈದ್ಯ (ಸಭಾ ಪರ್ವ, ೧೧ ಸಂಧಿ, ೫೮ ಪದ್ಯ)

ತಾತ್ಪರ್ಯ:
ರಾಜರ ಸೈನ್ಯದವರು ವಿವಿಧ ರಣ ವಾದ್ಯಗಳನ್ನು ಸದ್ದು ಮಾಡಲು ಶುರುಮಾಡಿದರು. ಈ ಶಬ್ದವು ಬ್ರಹ್ಮನ ಮನೆಯನ್ನು ಆವರಿಸಿತು. ವೀರರ ಸಮೂಹವು ಗರ್ಜಿಸುತ್ತಿತ್ತು. ಶಿಶುಪಾಲನು ಆ ಗೊಲ್ಲನನ್ನು ಬರಹೇಳು. ಅವನು ಭೂಮಿಯಲ್ಲಿರುವ ದೇವರಂತೆ, ಕರೆಯಿರಿ. ಅವನನ್ನು ನಾನು ಕೊಲ್ಲುತ್ತೇನೆ, ಕಾಯುವವರನ್ನು ತೋರಿಸಿ ಎಂದು ಶಿಶುಪಾಲನು ಅಬ್ಬರಿಸಿದನು.

ಅರ್ಥ:
ಡಾವರಿಸು: ತಿವಿ, ನೋಯಿಸು; ವಿವಿಧ: ಹಲವಾರು; ವಾದ್ಯ: ಸಂಗೀತದ ಸಾಧನ; ವಿರಾವ: ಧ್ವನಿ, ಕೂಗು; ಅಬುಜ: ತಾವರೆ; ಕಟಕ: ಗುಂಪು; ಉದ್ಭವ: ತಲೆದೋರುವುದು; ಭವನ: ಆಲಯ; ಭಟ: ಶೂರ; ಬಲಿ: ಗಟ್ಟಿ, ದೃಢ; ಬೊಬ್ಬೆ: ಗರ್ಜಿಸು; ಗೋವಳ: ಗೋಪಾಲ; ಬರಹೇಳು: ಆಗಮಿಸು; ಧರೆ: ಭೂಮಿ; ದೇವ: ಭಗವಂತ; ಗಡ: ಅಲ್ಲವೆ; ತೋರು: ಗೋಚರಿಸು; ಕಾವ: ರಕ್ಷಿಸು; ಕೊಲುವೆ: ಸಾಯಿಸು; ಒದರು: ಹೇಳು; ಕಲಿ: ಶೂರ; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಡಾವರಿಸಿದುರು+ ವಿವಿಧ+ವಾದ್ಯ +ವಿ
ರಾವವ್+ಅಬುಜೋದ್ಭವನ+ ಭವನವನ್
ಆವಿಗಡ+ ಭಟಕಟಕವ್+ಇದ್ದುದು +ಬಲಿದ +ಬೊಬ್ಬೆಯಲಿ
ಗೋವಳನ+ ಬರಹೇಳು +ಧರೆಯಲಿ
ದೇವಗಡ+ ಬರಹೇಳು +ತೋರಾ
ಕಾವ್+ಅವರ+ ತಾ +ಕೊಲುವೆನೆಂದ್+ಒದರಿದನು +ಕಲಿ +ಚೈದ್ಯ

ಅಚ್ಚರಿ:
(೧) ವ ಕಾರದ ಜೋಡಿ ಪದ – ವಿವಿಧವಾದ್ಯ ವಿರಾವವ
(೨) ಬ್ರಹ್ಮನನ್ನು ಅಬುಜೋದ್ಭವ ಎಂದು ಕರೆದಿರುವುದು
(೩) ಬರಹೇಳು – ೪, ೫ ಸಾಲಿನ ೨ನೇ ಪದ

ಪದ್ಯ ೩೭: ಕೋಪಗೊಂಡ ಶಿಶುಪಾಲ ಭೀಷ್ಮನಿಗೆ ಏನು ಹೇಳಿದ?

ಎಲವೋ ಗೋಪಕುಮಾರನೆನ್ನನು
ಕೊಲುವನೇ ತಾನಿವನ ಕೈಯಿಂ
ದಳಿವವನೆ ಶಿವಶಿವ ವಿಕಾರಿಯನೇನು ಮಾಡುವೆನು
ಗಳಹ ಭೀಷ್ಮ ವೃಕೋದರನ ಮೈ
ವಳಿಯ ಭಟನೋ ಮೇಣು ನೀ ಗೋ
ವಳರ ಹಳ್ಳಿಯ ಭಟ್ಟನೋ ಹೇಳೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೩೭ ಪದ್ಯ)

ತಾತ್ಪರ್ಯ:
ಎಲವೋ ಭೀಷ್ಮ, ಈ ಗೋಪಾಲಕನ ಕುಮಾರನು ನನ್ನನ್ನು ಸಾಯಿಸುವನೇ, ನಾನು ಇವನ ಕೈಯಲ್ಲಿ ಮರಣವನ್ನು ಹೊಂದುತ್ತೇನೆಯೇ? ಶಿವ ಶಿವಾ ಈ ಮೂರ್ಖನನ್ನು ಏನು ಮಾಡಲಿ! ಎಲವೋ ಬಾಯಿಬಡುಕ ಭೀಷ್ಮ, ನೀನು ಭೀಮನು ಸಾಕಿದ ಸೈನಿಕನೋ? ಗೊಲ್ಲರಹಟ್ಟಿಯ ಬಿರುದಾವಳಿಯ ಹೊಗಳುಭಟ್ಟನೋ ಹೇಳು ಎಂದು ಕೋಪದಿಂದ ಶಿಶುಪಾಲನು ನುಡಿದನು.

ಅರ್ಥ:
ಗೋಪಕುಮಾರ: ಕೃಷ್ಣ; ಕೊಲು: ಸಾಯಿಸು; ಅಳಿ: ಸಾವು; ವಿಕಾರಿ: ಮೂರ್ಖ; ವಿಕಾರ: ಮನಸ್ಸಿನ ವಿಕೃತಿ; ಗಳಹ: ಬಾಯಿಬಡುಕ; ವೃಕೋದರ: ತೋಳದಂತೆ ಹೊಟ್ಟೆಯುಳ್ಳವ (ಭೀಮ); ಮೈವಳಿ: ಅಧೀನ, ವಶ; ಭಟ: ಶೂರ, ವೀರ; ಮೇಣ್: ಅಥವ; ಗೋವಳ: ಗೋಪಾಲಕ; ಹಳ್ಳಿ: ಊರು; ಭಟ್ಟ: ಹೊಗಳುವವ; ಹೇಳು: ತಿಳಿಸು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಎಲವೋ+ ಗೋಪಕುಮಾರನ್+ಎನ್ನನು
ಕೊಲುವನೇ +ತಾನ್+ಇವನ +ಕೈಯಿಂದ್
ಅಳಿವವನೆ+ ಶಿವಶಿವ+ ವಿಕಾರಿಯನ್+ಏನು +ಮಾಡುವೆನು
ಗಳಹ +ಭೀಷ್ಮ +ವೃಕೋದರನ+ ಮೈ
ವಳಿಯ +ಭಟನೋ +ಮೇಣು +ನೀ +ಗೋ
ವಳರ+ ಹಳ್ಳಿಯ+ ಭಟ್ಟನೋ +ಹೇಳೆಂದನಾ+ ಚೈದ್ಯ

ಅಚ್ಚರಿ:
(೧) ಭಟ, ಭಟ್ಟ – ಪದಗಳ ಬಳಕೆ
(೨) ಅಳಿ, ಮೈವಳಿ – ಪ್ರಾಸ ಪದಗಳು
(೩) ಭೀಷ್ಮನನ್ನು ಬಯ್ಯುವ ಪರಿ – ಗಳಹ, ಎಲವೋ, ವಿಕಾರಿ

ಪದ್ಯ ೧೯: ಕೃಷ್ಣನ ಯಾವ ಪರಾಕ್ರಮವನ್ನು ವರ್ಣಿಸಲಿಲ್ಲ ಎಂದು ಶಿಶುಪಾಲ ಹೇಳಿದ?

ಆದರಿಸಿ ಬಣ್ಣಿಸಿದೆ ನಾಚದೆ
ಯಾದವನ ಕೌಳಿಕ ಪರಾಕ್ರಮ
ವಾದಿಯಾದ ಸಮಸ್ತಗುಣ ವಿಸ್ತಾರ ವೈಭವವ
ಆದರಾ ಗೋವಳರ ಹೆಂಡಿರ
ಹಾದರದ ಹೆಕ್ಕಳವ ಬಣ್ಣಿಸ
ದಾದೆ ನಿನಗೇಕಕಟ ನಾಚಿಕೆಯೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೈ ಭೀಷ್ಮ ನೀನು ಈ ಯಾದವನ ಸಮಸ್ತ ಪರಾಕ್ರಮದ ಮೋಸದ ಕೃತ್ಯಗಳನ್ನೆಲ್ಲಾ ವಿವರವಾಗಿ ವೈಭವಪೂರ್ಣವಾಗಿ ಹೇಳಿದ, ಆದರೆ ಗೋವಳರ ಹೆಂಡಿರ ಜೊತೆಗೆ ಇವನು ಮಾಡಿದ ಹಾದರವನ್ನು ಏಕೆ ವಿವರಿಸಲಿಲ್ಲ, ಅಯ್ಯೋ ನೀನಗೇಕೆ ನಾಚಿಕೆ ಎಂದು ಶಿಶುಪಾಲನು ಮೂದಲಿಸಿದನು.

ಅರ್ಥ:
ಆದರಿಸು: ಗೌರವಿಸು; ಬಣ್ಣಿಸು: ವರ್ಣಿಸು; ನಾಚು: ನಾಚಿಕೆಪಡು, ಸಿಗ್ಗಾಗು; ಕೌಳಿಕ:ಕಟುಕ, ಕಸಾಯಿಗಾರ, ಮೋಸ; ಪರಾಕ್ರಮ: ಶೌರ್ಯ; ವಾದಿ: ತರ್ಕಮಾಡುವವನು; ಸಮಸ್ತ: ಎಲ್ಲಾ; ಗುಣ: ನಡತೆ, ಸ್ವಭಾವ; ವಿಸ್ತಾರ: ವೈಶಾಲ್ಯ; ವೈಭವ: ಶಕ್ತಿ, ಸಾಮರ್ಥ್ಯ, ಆಡಂಬರ; ಗೋವಳ: ಗೋಪಾಲಕ; ಹೆಂಡಿರ: ಭಾರ್ಯ; ಹಾದರ: ವ್ಯಭಿಚಾರ, ಜಾರತನ; ಹೆಕ್ಕಳ: ಹೆಚ್ಚಳ, ಅತಿಶಯ; ಅಕಟ: ಅಯ್ಯೋ; ನಾಚಿಕೆ: ಲಜ್ಜೆ, ಸಿಗ್ಗು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಆದರಿಸಿ +ಬಣ್ಣಿಸಿದೆ +ನಾಚದೆ
ಯಾದವನ +ಕೌಳಿಕ +ಪರಾಕ್ರಮವ್
ಆದಿಯಾದ +ಸಮಸ್ತಗುಣ +ವಿಸ್ತಾರ +ವೈಭವವ
ಆದರ್+ಆ+ ಗೋವಳರ +ಹೆಂಡಿರ
ಹಾದರದ +ಹೆಕ್ಕಳವ +ಬಣ್ಣಿಸ
ದಾದೆ+ ನಿನಗೇಕ್+ಅಕಟ +ನಾಚಿಕೆ+ಎಂದನಾ +ಚೈದ್ಯ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೆಂಡಿರ ಹಾದರದ ಹೆಕ್ಕಳವ
(೨) ಬಣ್ಣಿಸಿದೆ, ಬಣ್ಣಿಸದಾದೆ – ಪದಗಳ ಬಳಕೆ
(೩) ಆದರಾ, ಹಾದರ – ಪದಗಳ ಬಳಕೆ