ಪದ್ಯ ೧೯: ಪಾಯದಳದವರು ಹೇಗೆ ಸಿದ್ಧರಾದರು?

ತುರುಬ ಬಲಿದೊಳಗೌಕಿ ಮೊನೆ ಮುಂ
ಜೆರಗನಳವಡೆ ಸೆಕ್ಕಿ ಸುತ್ತಿನೊ
ಳಿರುಕಿ ಬಿಗಿದ ಕಠಾರಿ ದಾರದ ಗೊಂಡೆಯವ ಕೆದರಿ
ಒರಗಿದೆಡಬಲದವರನೆಬ್ಬಿಸಿ
ಜರೆದು ವೀಳೆಯಗೊಂಡು ಕೈದುವ
ತಿರುಹುತಾಯತವಾಯ್ತು ಪಡೆಯೆರಡರಲಿ ಪಾಯದಳ (ದ್ರೋಣ ಪರ್ವ, ೧೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ತಲೆಗೂದಲನ್ನು ಗಂಟುಕಟ್ಟಿ ಒಳಕ್ಕೆ ಸೇರಿಸಿ, ಸೆರಗಿನ ಮುಂಭಾಗವನ್ನು ಸರಿಯಾಗಿಸಿ, ಸಿಕ್ಕಿಸಿ, ಸೊಂಟಕ್ಕೆ ಬಿಗಿದಿದ್ದ ಕಠಾರಿಗಳ ದಾರದ ಕುಚ್ಚನ್ನು ಸರಿಮಾಡಿಕೊಂಡು, ಅಕ್ಕಪಕ್ಕದವರನ್ನು ಜರಿದು ಎಬ್ಬಿಸಿ, ಕರ್ಪೂರ ವೀಳೆಯವನ್ನು ಸ್ವೀಕರಿಸಿ ಆಯುಧಗಳನ್ನು ತಿರುಗಿಸುತ್ತಾ ಕಾಲಾಳುಗಳು ಸಿದ್ಧರಾದರು.

ಅರ್ಥ:
ತುರುಬು: ಕೂದಲಿನ ಗಂಟು, ಮುಡಿ; ಬಲಿ: ಗಟ್ಟಿಯಾಗು; ಔಕು: ಒತ್ತು; ಮೊನೆ: ತುದಿ, ಕೊನೆ; ಮುಂಜೆರಗು: ಸೆರಗಿನ ಮುಂಭಾಗ; ಸೆಕ್ಕು: ಒಳಸೇರುವಿಕೆ, ಕುಗ್ಗುವಿಕೆ; ಸುತ್ತು: ಬಳಸು; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಬಿಗಿ: ಭದ್ರವಾಗಿರುವುದು; ಕಠಾರಿ: ಬಾಕು, ಚೂರಿ, ಕತ್ತಿ; ದಾರ: ನೂಲು; ಗೊಂಡೆ: ಕುಚ್ಚು; ಕೆದರು: ಹರಡು; ಒರಗು: ಮಲಗು, ಕೆಳಕ್ಕೆ ಬಾಗು; ಎಬ್ಬಿಸು: ಏಳಿಸು; ಜರಿ:ಬಯ್ಯು, ಹಳಿ; ವೀಳೆ: ತಾಂಬೂಲ; ಕೈದು: ಆಯುಧ; ತಿರುಹು: ತಿರುಗಿಸು; ಆಯತ: ಉಚಿತವಾದ; ಪಡೆ: ಸೈನ್ಯ, ಬಲ; ಪಾಯದಳ: ಸೈನಿಕ;

ಪದವಿಂಗಡಣೆ:
ತುರುಬ +ಬಲಿದೊಳಗ್+ಔಕಿ +ಮೊನೆ +ಮುಂ
ಜೆರಗನ್+ಅಳವಡೆ+ ಸೆಕ್ಕಿ+ ಸುತ್ತಿನೊಳ್
ಇರುಕಿ +ಬಿಗಿದ +ಕಠಾರಿ +ದಾರದ +ಗೊಂಡೆಯವ +ಕೆದರಿ
ಒರಗಿದ್+ಎಡಬಲದವರನ್+ಎಬ್ಬಿಸಿ
ಜರೆದು +ವೀಳೆಯಗೊಂಡು +ಕೈದುವ
ತಿರುಹುತ್+ಆಯತವಾಯ್ತು +ಪಡೆ+ಎರಡರಲಿ +ಪಾಯದಳ

ಅಚ್ಚರಿ:
(೧) ಒರಗಿದೆಡಬಲದವರನೆಬ್ಬಿಸಿ – ಒಂದೇ ಪದವಾಗಿ ರಚನೆ

ಪದ್ಯ ೩೪: ತುಳುವ ಪಡೆಯು ಹೇಗೆ ಮುನ್ನುಗ್ಗಿತು?

ನೆಲಕೆ ನಿಗುರುವ ಗಂಗೆವಾಳದ
ಬಿಳಿಯ ಚೌರಿಗಳುಲಿವ ಗಂಟೆಯ
ತೊಳಪ ಬದ್ದುಗೆ ದಾರ ಕಾಂಚನಮಯದ ಗೊಂಡೆಯದ
ಉಲಿವ ಗೆಜ್ಜೆಯ ಚೆಲ್ಲಣದ ಹೊಂ
ಬಳಿದ ಹರಿಗೆಯ ಹೊಳೆವ ಕಡಿತಲೆ
ಗಳ ವಿಲಾಸದೊಳಂದು ಹೊಕ್ಕುದು ತುಳುವ ಪಡೆ ಕಡುಗಿ (ಭೀಷ್ಮ ಪರ್ವ, ೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ನೆಲಕ್ಕೆ ಜೋತು ಬಿದ್ದ ಗಂಗೆವಾಳ ಬಿಳಿಯ ಚೌರಿಗಳು, ಸದ್ದು ಮಾಡುವ ಗಂಟೆಗಳು, ಹೊಳೆಯುವ ಬದ್ದುಗೆಗಳು, ಗೆಜ್ಜೆಗಳಿರುವ ಚಲ್ಲಣಗಳು, ಬಂಗಾರದ ಬಣ್ಣದ ಗುರಾಣಿಗಳು, ಹೊಳೆಯುವ ಕತ್ತಿಗಳಿಂದ ಸಜ್ಜಾದ ತುಳುವ ಪಡೆಯು ಯುದ್ದಕ್ಕೆ ನುಗ್ಗಿತು.

ಅರ್ಥ:
ನೆಲ: ಭೂಮಿ; ನಿಗುರು: ಚಾಚಿರುವಿಕೆ, ಹರಡು; ಗಂಗೆವಾಳ: ಉದ್ದವಾದ ಕೂದಲು; ಬಿಳಿ: ಶ್ವೇತ, ಸಿತ; ಚೌರಿ: ಚಮರ; ಉಲಿ: ಧ್ವನಿ; ಗೆಜ್ಜೆ: ಕಿರುಗಂಟೆ, ಕಿಂಕಿಣಿ; ಗಂಟೆ: ಘಂಟೆ; ತೊಳಪ: ಹೊಳೆಯುವಿಕೆ; ಬದ್ದುಗೆ: ವಸ್ತ್ರದ ಕೊನೆ; ದಾರ: ನೂಲು; ಕಾಂಚನ: ಹೊನ್ನು, ಚಿನ್ನ; ಗೊಂಡೆ: ಕುಚ್ಚು; ಉಲಿ: ಧ್ವನಿ; ಗೆಜ್ಜೆ: ಕಿಂಕಿಣಿ; ಚೆಲ್ಲಣ: ಚಲ್ಲಣ ನೋಡಿ; ಹೊಂಬಳಿ: ಚಿನ್ನದ ಕಸೂತಿ ಮಾಡಿದ ಬಟ್ಟೆ, ಜರತಾರಿ ವಸ್ತ್ರ; ಹರಿಗೆ: ಚಿಲುಮೆ, ತಲೆಪೆರಿಗೆ; ಹೊಳೆ: ಪ್ರಕಾಶ; ಕಡಿತಲೆ: ಖಡ್ಗ; ವಿಲಾಸ: ಚೆಂದ; ಹೊಕ್ಕು: ಸೇರು; ತುಳುವ: ಪಶ್ಚಿಮ ಕರಾ ವಳಿಯ ಪ್ರದೇಶ; ಪಡೆ: ಸೈನ್ಯ, ಬಲ; ಕಡುಗು: ತೀವ್ರವಾಗು;

ಪದವಿಂಗಡಣೆ:
ನೆಲಕೆ +ನಿಗುರುವ +ಗಂಗೆವಾಳದ
ಬಿಳಿಯ +ಚೌರಿಗಳ್+ಉಲಿವ +ಗಂಟೆಯ
ತೊಳಪ +ಬದ್ದುಗೆ +ದಾರ +ಕಾಂಚನಮಯದ +ಗೊಂಡೆಯದ
ಉಲಿವ +ಗೆಜ್ಜೆಯ +ಚೆಲ್ಲಣದ +ಹೊಂ
ಬಳಿದ+ ಹರಿಗೆಯ +ಹೊಳೆವ +ಕಡಿತಲೆ
ಗಳ +ವಿಲಾಸದೊಳ್+ಅಂದು +ಹೊಕ್ಕುದು +ತುಳುವ +ಪಡೆ +ಕಡುಗಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೊಂಬಳಿದ ಹರಿಗೆಯ ಹೊಳೆವ

ಪದ್ಯ ೩೨: ಅರ್ಜುನನು ಹೇಗೆ ತೆರಳಿದನು?

ಬಿಗಿದ ಬತ್ತಳಿಕೆಯನು ಹೊನ್ನಾ
ಯುಗದ ಖಡುಗ ಕಠಾರಿ ಚಾಪವ
ತೆಗೆದನಳವಡೆಗಟ್ಟಿ ಬದ್ದುಗೆದಾರ ಗೊಂಡೆಯವ
ದುಗುಡ ಹರುಷದ ಮುಗಿಲ ತಲೆಯೊ
ತ್ತುಗಳಿಗೆಟ್ಟೆಡೆಯಾಗಿ ಗುಣ ಮೌ
ಳಿಗಳ ಮಣಿ ಕಲಿಪಾರ್ಥ ಬೀಳ್ಕೊಂಡನು ನಿಜಾಗ್ರಜನ (ಅರಣ್ಯ ಪರ್ವ, ೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಅರ್ಜುನನು ಬತ್ತಳಿಕೆಯನ್ನು ಬೆನ್ನಿಗೆ ಬಿಗಿದನು. ಬಿಲ್ಲನ್ನು ಹಿಡಿದನು. ಬಂಗಾರದ ಹಿಡಿಕೆಯುಳ್ಳ ಕತ್ತಿ, ಕಠಾರಿಗಳನ್ನು ಸೊಂಟಕ್ಕೆ ಕಟ್ಟಿಕೊಂಡು ಅದಕ್ಕೆ ಹೊಂದುವಹಾಗೆ ತನ್ನ ಬಟ್ಟೆಯನ್ನು ಸರಿಪಡಿಸಿಕೊಂಡನು. ಶಿವನನ್ನು ಕುರಿತ ತಪಸ್ಸಿನ ಸಂತಸ, ಅಣ್ಣ ತಮ್ಮಂದಿರನ್ನು ಬಿಡಬೇಕಾದ ನೋವು ಇವೆರಡು ಮನಸ್ಸನ್ನು ಆಗಸದವರೆಗೂ ಕೊರೆಯುತ್ತಿರಲು, ಪರಾಕ್ರಮಿ, ಗುಣಗಳಲ್ಲಿ ಶ್ರೇಷ್ಠನಾದ ಅರ್ಜುನನು ಧರ್ಮಜನನ್ನು ಬೀಳ್ಕೊಂಡು ತನ್ನ ತಪಸ್ಸಿಗೆ ತೆರಳಿದನು.

ಅರ್ಥ:
ಬಿಗಿ: ಬಂಧಿಸು, ಕಟ್ಟು; ಬತ್ತಳಿಕೆ: ಬಾಣಗಳನ್ನಿಡುವ ಕೋಶ, ತೂಣೀರ; ಹೊನ್ನ: ಚಿನ್ನ; ಖಡುಗ: ಕತ್ತಿ; ಯುಗ: ನೊಗ, ಹಿಡಿಕೆ; ಕಠಾರಿ: ಚೂರಿ, ಕತ್ತಿ; ಚಾಪ: ಬಿಲ್ಲು; ತೆಗೆದು: ಹೊರತಂದು; ಅಳವಡಿಸು: ಸರಿಪಡಿಸು; ಬದ್ದುಗೆ: ವಸ್ತ್ರದ ಕೊನೆ; ದಾರ: ಹಗ್ಗ; ಗೊಂಡೆ:ಕುಚ್ಚು; ದುಗುಡ: ದುಃಖ; ಹರುಷ: ಸಂತಸ; ಮುಗಿಲು: ಆಗಸ, ಮೇಲುಭಾಗ; ತಲೆ: ಶಿರ; ಒತ್ತು: ಒತ್ತಡ, ಮುತ್ತು; ಇಟ್ಟೆಡೆ: ಇಕ್ಕಟ್ಟು; ಗುಣ: ನಡತೆ, ಸ್ವಭಾವ; ಮೌಳಿ: ಶಿರ; ಮಣಿ: ಬೆಲೆಬಾಳುವ ರತ್ನ; ಕಲಿ: ಶೂರ; ಬೀಳ್ಕೊಂಡು: ತೆರಳು; ನಿಜ: ತನ್ನ; ಅಗ್ರಜ: ಅಣ್ಣ;

ಪದವಿಂಗಡಣೆ:
ಬಿಗಿದ +ಬತ್ತಳಿಕೆಯನು +ಹೊನ್ನಾ
ಯುಗದ +ಖಡುಗ +ಕಠಾರಿ +ಚಾಪವ
ತೆಗೆದನ್+ಅಳವಡೆಗಟ್ಟಿ+ ಬದ್ದುಗೆ+ದಾರ +ಗೊಂಡೆಯವ
ದುಗುಡ +ಹರುಷದ +ಮುಗಿಲ +ತಲೆ
ಒತ್ತುಗಳಿಗ್+ಎಟ್ಟೆಡೆಯಾಗಿ +ಗುಣ ಮೌ
ಳಿಗಳ ಮಣಿ +ಕಲಿಪಾರ್ಥ +ಬೀಳ್ಕೊಂಡನು +ನಿಜಾಗ್ರಜನ

ಅಚ್ಚರಿ:
(೧) ಅರ್ಜುನನ ಗುಣವಿಶೇಷಗಳು – ಗುಣ ಮೌಳಿಗಳ ಮಣಿ, ಕಲಿಪಾರ್ಥ
(೨) ಆಯುಧದ ವರ್ಣನೆ – ಹೊನ್ನಾಯುಗದ ಖಡುಗ ಕಠಾರಿ ಚಾಪ

ಪದ್ಯ ೧೭: ಕರ್ಣನು ಹೇಗೆ ಸಿದ್ಧನಾದನು?

ವರ ನಿಖಾರಿಯ ಬಳವಿನಲಿ ಬಲ
ಮುರಿಯ ಬಿಗಿದನು ಪದಮುಖಕೆ ಮುಂ
ಜೆರಗ ಬಿಟ್ಟನು ಬಿಗಿದ ಬುದ್ಧುಗೆ ದಾರ ಗೊಂಡೆಯವ
ಕಿರಣ ಲಹರಿಯ ವಜ್ರಮಾಣಿಕ
ಪರಿರಚಿತ ಭುಜಕಂಠಕರ್ಣಾ
ಭರಣ ಚರಣದ ಖಡೆಯದಲಿ ರಂಜಿಸಿದನಾ ಕರ್ಣ (ಕರ್ಣ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕರ್ಣನು ನಿಖಾರಿಯನ್ನು ಬಲಕ್ಕೆ ಬಿಗಿದು ಉಟ್ಟನು. ಮುಂಜೆರಗನು ಕೆಳಮುಖವಾಗಿ ಬಿಟ್ಟನು. ಸೊಂಟಪಟ್ಟಿಯ ದಾರ, ಕುಚ್ಚುಗಳನ್ನು ಸರಿಯಾಗಿ ಅಳವಡಿಸಿದನು. ಹೊಳೆಹೊಳೆವ ರತ್ನಾಭರಣ ಖಚಿತವಾದ ಭುಜ, ಕಂಠ ಕಿವಿಗಳ ಆಭರಣಗಳನ್ನು ಕಾಲಿನ ಕಡುಗವನ್ನು ಧರಿಸಿ ಕರ್ಣನು ಹೊಳೆದನು.

ಅರ್ಥ:
ವರ: ಶ್ರೇಷ್ಠ; ನಿಖಾರಿ: ನಿರ್ದಿಷ್ಟವಾದ, ವಸ್ತ್ರ; ಬಳವಿ: ಬೆಳವಣಿಗೆ, ವೃದ್ಧಿ; ಬಲ: ಬಲಗಡೆ; ಮುರಿ: ತಿರುವು; ಬಿಗಿ: ಗಟ್ಟಿ; ಪದಮುಖ: ಪಾದದ ಎದುರು; ಮುಂಜೆರಗ: ಅಂಚು, ಸೆರಗೆ ತುದಿ; ಬಿಟ್ಟನು: ಬಿಡು; ಬದ್ದುಗೆ: ವಸ್ತ್ರದ ಕೊನೆ; ದಾರ: ನೂಲು; ಗೊಂಡೆ: ಕುಚ್ಚು; ಕಿರಣ: ರಶ್ಮಿ, ಬೆಳಕಿನ ಕದಿರು; ಲಹರಿ: ಕಾಂತಿ, ಪ್ರಭೆ; ವಜ್ರಮಾಣಿಕ: ರತ್ನಾಭರಣ; ಪರಿರಚಿತ: ಮಾಡಲ್ಪಟ್ಟ; ಭುಜ: ತೋಳು, ಬಾಹು; ಕಂಠ: ಕೊರಳು; ಕರ್ಣಾಭರಣ: ಕರ್ಣಕುಂಡಲ; ಚರಣ: ಪಾದ; ಖಡೆ: ಕಾಲ ಕಡಗ; ರಂಜಿಸು: ಹೊಳೆ, ಪ್ರಕಾಶಿಸು;

ಪದವಿಂಗಡಣೆ:
ವರ +ನಿಖಾರಿಯ +ಬಳವಿನಲಿ +ಬಲ
ಮುರಿಯ +ಬಿಗಿದನು +ಪದಮುಖಕೆ +ಮುಂ
ಜೆರಗ +ಬಿಟ್ಟನು +ಬಿಗಿದ +ಬುದ್ಧುಗೆ +ದಾರ +ಗೊಂಡೆಯವ
ಕಿರಣ+ ಲಹರಿಯ+ ವಜ್ರಮಾಣಿಕ
ಪರಿರಚಿತ+ ಭುಜ+ಕಂಠ+ಕರ್ಣಾ
ಭರಣ+ ಚರಣದ+ ಖಡೆಯದಲಿ +ರಂಜಿಸಿದನಾ +ಕರ್ಣ

ಅಚ್ಚರಿ:
(೧) ನಿಖಾರಿ,ಮುಂಜೆರಗ, ಬುದ್ದುಗೆ, ಗೊಂಡೆ – ವಸ್ತ್ರಸಿಂಗಾರವನ್ನು ತಿಳಿಸುವ ಪದ
(೨) ವಜ್ರ ಮಾಣಿಕ, ಭುಜ ಕಂಠ ಕರ್ಣಾಭರಣ, ಖಡೆ – ಆಭರಣಗಳನ್ನು ತಿಳಿಸುವ ಪದ