ಪದ್ಯ ೭೬: ರಾಜರ ಕರ್ತವ್ಯಗಳಾವುವು?

ದಾನವಿಷ್ಟಾಪೂರ್ತ ವಿನಯಸ
ಮಾನ ದೇವಾರ್ಚನೆ ಮಹೀಸುರ
ಧೇನು ಸಂತರ್ಪಣ ಸದಾತಿಥಿ ಪೂಜೆ ಗುರುಭಕ್ತಿ
ಧ್ಯಾನ ದೀನಾನಾಥ ಬಂಧುವಿ
ತಾನ ಶರಣಾಗತ ಸುರಕ್ಷಾ
ಸ್ನಾನ ತೀರ್ಥಂಗಳನು ಮಾಡಲು ಬೇಹುದವನಿಪರು (ಉದ್ಯೋಗ ಪರ್ವ, ೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ರಾಜನಾದವನ ಕರ್ತವ್ಯಗಳನ್ನು ವಿದುರರು ಇಲ್ಲಿ ತಿಳಿಸಿದ್ದಾರೆ. ರಾಜನಾದವನು ದಾನ, ಅಗ್ನಿಹೋತ್ರ, ಒಳ್ಳೆಯ ನಡತೆ, ಮುನ್ನಡೆಸುವಿಕೆಯ ಜಾಣ್ಮೆ, ದೇವತಾ ಪೂಜೆ, ಬ್ರಾಹ್ಮಣ ಮತ್ತು ಗೋವುಗಳನ್ನು ತೃಪ್ತಿ ಪಡಿಸಿ, ಅತಿಥಿಗಳನ್ನು ಸತ್ಕರಿಸಿ, ಗುರುಹಿರಿಯರಲ್ಲಿ ಭಕ್ತಿಭಾವ ಹೊಂದು, ಧ್ಯಾನವನ್ನು ಆಚರಿಸುತ್ತಾ, ದೀನರು, ಅನಾಥರು, ಬಂಧುಗಳು, ಶರಣಾಗತರನ್ನು ರಕ್ಷಿಸಿ, ಪವಿತ್ರ ಜಲಗಳಲ್ಲಿ ಅಭ್ಯಂಜನ ಮಾಡುವುದು ರಾಜನ ಕರ್ತವ್ಯಗಳು.

ಅರ್ಥ:
ದಾನ: ನೀಡುವಿಕೆ; ಇಷ್ಟ: ಅಪೇಕ್ಷೆ; ಪೂರ್ತ: ಪೂರೈಸುವ; ವಿನಯ: ನಮ್ರತೆ; ಸಮಾನ:ಎಣೆ, ಸಾಟಿ, ಯೋಗ್ಯ; ದೇವ: ಸುರರು, ಭಗವಂತ; ಅರ್ಚನೆ: ಪೂಜೆ, ಆರಾಧನೆ; ಮಹೀ: ಭೂಮಿ; ಮಹೀಸುರ: ಬ್ರಾಹ್ಮಣ; ಧೇನು: ಹಸು; ಸಂತರ್ಪಣ: ತೃಪ್ತಿ ಪಡಿಸುವಿಕೆ; ಸದಾ: ಯಾವಾಗಲು; ತಿಥಿ: ದಿನ; ಅತಿಥಿ: ಆಮಂತ್ರಣವಿಲ್ಲದೆ ಬರುವವ; ಪೂಜೆ: ಪ್ರಾರ್ಥನೆ, ಆರಾಧನೆ; ಗುರು: ಆಚಾರ್ಯ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಧ್ಯಾನ: ಚಿಂತನೆ, ಮನನ; ದೀನ: ಬಡವ, ದರಿದ್ರ; ಅನಾಥ: ತಬ್ಬಲಿ, ನಿರ್ಗತಿಕ; ಬಂಧು: ಬಂಧುಗಳು; ವಿತಾನ: ಆಧಿಕ್ಯ, ಹೆಚ್ಚಳ; ಶರಣಾಗತ: ಆಶ್ರಯವನ್ನು ಬೇಡುವವನು; ಸುರಕ್ಷಾ: ಕಾಪಾಡುವಿಕೆ; ಸ್ನಾನ: ಅಭ್ಯಂಜನ; ತೀರ್ಥ: ಪವಿತ್ರ ಜಲ; ಬೇಹುದು: ಬೇಕು; ಅವನಿಪ: ರಾಜ; ಅವನಿ: ಭೂಮಿ;

ಪದವಿಂಗಡಣೆ:
ದಾನವ್ + ಇಷ್ಟಾಪೂರ್ತ+ ವಿನಯ+ಸ
ಮಾನ +ದೇವಾರ್ಚನೆ +ಮಹೀಸುರ
ಧೇನು +ಸಂತರ್ಪಣ+ ಸದ್+ಅತಿಥಿ+ ಪೂಜೆ +ಗುರುಭಕ್ತಿ
ಧ್ಯಾನ+ ದೀನ+ಅನಾಥ +ಬಂಧು+ವಿ
ತಾನ +ಶರಣಾಗತ+ ಸುರಕ್ಷಾ
ಸ್ನಾನ+ ತೀರ್ಥಂಗಳನು +ಮಾಡಲು +ಬೇಹುದ್+ಅವನಿಪರು

ಅಚ್ಚರಿ:
(೧) ದಾನ, ವಿನಯ, ದೇವಾರ್ಚನೆ, ಸಂತರ್ಪಣ, ಗುರುಭಕ್ತಿ ಹೀಗೆ ೧೩ ಬಗೆಯ ಕರ್ತವ್ಯಗಳನ್ನು ಹೇಳಿರುವುದು
(೨) ಧ್ಯಾನ, ದಾನ, ಮಾನ, ಸ್ನಾನ – ಪ್ರಾಸ ಪದಗಳು