ಪದ್ಯ ೨೫: ಕಷ್ಟದ ಸಮಯದಲ್ಲಿ ಯಾವುದು ನಮ್ಮನ್ನು ರಕ್ಷಿಸುತ್ತದೆ?

ಜಲಧಿಯಲಿ ಪಣಿವದನದಲಿ ರಿಪು
ಬಲದ ಮುಖದಲಿ ಸಿಡಿಲ ಹೊಯ್ಲಲಿ
ಹಳುವದಲಿ ಗಿರಿಶಿಖರದಲಿ ದಾವಾಗ್ನಿ ಮಧ್ಯದಲಿ
ಸಿಲುಕಿದಡೆ ಬಿಡುಸುವವಲೇ ಪ್ರತಿ
ಫಲಿತ ಪೂರ್ವಾದತ್ತ ಪುಣ್ಯಾ
ವಳಿಗಳೆಂಬುದು ತನ್ನೊಳಾದುದು ಭೂಪ ಕೇಳೆಂದ (ಗದಾ ಪರ್ವ, ೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಮುದ್ರದಲ್ಲಿ, ಸರ್ಪದ ಬಾಯಲ್ಲಿ, ಶತ್ರು ಸೈನ್ಯದಿದಿರಿನಲ್ಲಿ, ಸಿಡಿಲು ಬಡಿತದಲ್ಲಿ, ಪರ್ವತ ಶಿಖರಾಲ್ಲಿ, ಕಾಡುಗಿಚ್ಚಿನಲ್ಲಿ ಸಿಕ್ಕಾಗ ನಾವು ಹಿಂದೆ ಮಾಡಿದ ಪುಣ್ಯದ ಫಲವು ಫಲಿಸಿ ನಮ್ಮನ್ನು ರಕ್ಷಿಸುತ್ತವೆ ಎಂಬುದು ನನ್ನ ಅನುಭವಕ್ಕೆ ಬಂದಿತು.

ಅರ್ಥ:
ಜಲಧಿ: ಸಾಗರ; ಫಣಿ: ಹಾವು; ವದನ: ಮುಖ; ರಿಪು: ವೈರಿ; ಬಲ: ಶಕ್ತಿ; ಮುಖ: ಆನನ; ಸಿಡಿಲು: ಅಶನಿ; ಹೊಯ್: ಹೊಡೆ; ಹಳುವ: ಕಾಡು; ಗಿರಿ: ಬೆಟ್ಟ; ಶಿಖರ: ತುದಿ; ದಾವಾಗ್ನಿ: ಕಾಡಿನ ಕಿಚ್ಚು, ಕಾಳ್ಗಿಚ್ಚು; ಮಧ್ಯ: ನಡುವೆ; ಸಿಲುಕು: ಸೆರೆಯಾದ ವಸ್ತು, ಬಂಧನಕ್ಕೊಳಗಾದುದು; ಬಿಡುಸು: ಕಳಚು, ಸಡಿಲಿಸು; ಪ್ರತಿ: ಸಾಟಿ, ಸಮಾನ; ಫಲಿತ: ಫಲ, ಪ್ರಯೋಜನ; ಪೂರ್ವಾದತ್ತ: ಹಿಂದೆ ಪಡೆದ; ಪುಣ್ಯ: ಸನ್ನಡತೆ; ಆವಳಿ: ಸಾಲು, ಗುಂಪು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಜಲಧಿಯಲಿ +ಪಣಿ+ವದನದಲಿ +ರಿಪು
ಬಲದ +ಮುಖದಲಿ+ ಸಿಡಿಲ+ ಹೊಯ್ಲಲಿ
ಹಳುವದಲಿ +ಗಿರಿಶಿಖರದಲಿ+ ದಾವಾಗ್ನಿ +ಮಧ್ಯದಲಿ
ಸಿಲುಕಿದಡೆ+ ಬಿಡುಸುವವಲೇ+ ಪ್ರತಿ
ಫಲಿತ+ ಪೂರ್ವಾದತ್ತ+ ಪುಣ್ಯಾ
ವಳಿಗಳೆಂಬುದು+ ತನ್ನೊಳಾದುದು +ಭೂಪ +ಕೇಳೆಂದ

ಅಚ್ಚರಿ:
(೧) ಕಷ್ಟದಿಂದ ನಮ್ಮನ್ನು ರಕ್ಷಿಸುವುದು – ಬಿಡುಸುವವಲೇ ಪ್ರತಿಫಲಿತ ಪೂರ್ವಾದತ್ತ ಪುಣ್ಯಾವಳಿಗಳ್
(೨) ಸಂಸ್ಕೃತದ ಸುಭಾಷಿತವನ್ನು ಈ ಕವನ ಹೋಲುತ್ತದೆ
वने रणे शत्रुजलाग्निमध्ये महार्णवे पर्वतमस्तके वा |
सुप्तं प्रमत्ते विषमस्थितं वा रक्षन्ति पुण्यानि पुराकृतानि ||

ಪದ್ಯ ೫: ಅರ್ಜುನನ ಹಿರಿಮೆಯನು ಶಲ್ಯನು ಹೇಗೆ ವರ್ಣಿಸಿದನು?

ಅವನೊಬ್ಬನ ಬಿಲ್ಲ ಬೊಬ್ಬೆಯ
ಡಾವರದಲೆದೆ ಬಿರುವುದಹಿತರಿ
ಗಾವನೊಬ್ಬನ ದನಿಗೆ ಬಿರುವುದು ಧೈರ್ಯಗಿರಿಶಿಖರ
ಅವನೊಬ್ಬನ ಕಂಡರರಿಗಳ
ಜೀವ ತಲೆಕೆಳಕಹುದು ಸುಭಟರ
ದೇವನಾತನು ಪಾರ್ಥ ಬೇಕೇ ತೋರಿಸುವೆನೆಂದ (ಕರ್ಣ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ಶಲ್ಯನು ಅರ್ಜುನನ ವೀರತ್ವದ ಬಗ್ಗೆ ತಿಳಿಸುತ್ತಾ, ಯಾರ ಭೀಷಣ ಧನುಷ್ಟಂಕಾರವನ್ನು ಕೇಳಿದ ಮಾತ್ರಕ್ಕೆ ಎದೆ ಬಿರಿದು ಹೋಗುವುದೋ, ಯಾರ ಗರ್ಜನೆಯನ್ನು ಕೇಳಿದರೆ ವಿರೋಧಿಯ ಧೈರ್ಯಬೆಟ್ಟದ ಶಿಖರವು ಸೀಳುವುದೋ, ಯಾರನ್ನು ನೋಡಿದೊಡನೆ ವೈರಿಗಳ ಜೀವವು ತಲೆಕೆಳಗಾಗುವುದೋ, ಒಳ್ಳೆಯ ಸೈನಿಕರ ಅಗ್ರಗಣ್ಯನಾದ ಪಾರ್ಥನು ನಿನಗೆ ಬೇಕೆ? ತೋರಿಸುವೆ ಬಾ ಎಂದು ಶಲ್ಯನು ಕರ್ಣನಿಗೆ ಅರ್ಜುನನ ಪರಾಕ್ರಮವನ್ನು ಹೇಳಿದನು.

ಅರ್ಥ:
ಬಿಲ್ಲು: ಧನಸ್ಸು; ಬೊಬ್ಬೆ: ಅಬ್ಬರ, ಜೋರಾದ ಶಬ್ದ; ಡಾವರ: ಭಯಂಕರವಾದುದು; ಎದೆ: ಉರ,ಹೃದಯ; ಬಿರಿ: ಬಿರುಕು, ಸೀಳು; ಅಹಿತ: ವೈರಿ;ದನಿ: ಶಬ್ದ; ಧೈರ್ಯ: ದಿಟ್ಟತನ; ಗಿರಿ: ಬೆಟ್ಟ; ಶಿಖರ: ತುದಿ; ಅರಿ: ವೈರಿ; ಜೀವ: ಪ್ರಾಣ; ತಲೆಕೆಳ:ಮೇಲುಕೀಳು; ಸುಭಟ: ಒಳ್ಳೆಯ ಸೈನಿಕರು; ದೇವ: ಭಗವಂತ; ತೋರಿಸು: ನೋಡು, ಗೋಚರ;

ಪದವಿಂಗಡಣೆ:
ಅವನೊಬ್ಬನ +ಬಿಲ್ಲ +ಬೊಬ್ಬೆಯ
ಡಾವರದಲ್+ಎದೆ+ ಬಿರುವುದ್+ಅಹಿತರಿಗ್
ಆವನೊಬ್ಬನ +ದನಿಗೆ +ಬಿರುವುದು +ಧೈರ್ಯ+ಗಿರಿ+ಶಿಖರ
ಅವನೊಬ್ಬನ +ಕಂಡರ್+ಅರಿಗಳ
ಜೀವ +ತಲೆಕೆಳಕಹುದು +ಸುಭಟರ
ದೇವನಾತನು+ ಪಾರ್ಥ +ಬೇಕೇ +ತೋರಿಸುವೆನೆಂದ

ಅಚ್ಚರಿ:
(೧) ಅಹಿತ, ಅರಿ – ಸಮನಾರ್ಥಕ ಪದ
(೨) ಉಪಮಾನಗಳ ಬಳಕೆ – ಆವನೊಬ್ಬನ ದನಿಗೆ ಬಿರುವುದು ಧೈರ್ಯಗಿರಿಶಿಖರ