ಪದ್ಯ ೩೮: ಸರೋವರವು ಹೇಗೆ ಕಂಗೊಳಿಸಿತು?

ಉಲಿವ ಕೋಕಿಲ ಪಾಥಕರ ಮೊರೆ
ವಳಿಕುಳದ ಗಾಯಕರ ಹಂಸಾ
ವಳಿಯ ಸುಭಟರ ಜಡಿವ ಕೊಳರ್ವಕ್ಕಿಗಳ ಪಡಿಯರರ
ಅಲರ್ದ ಹೊಂದಾವರೆಯ ನವಪರಿ
ಮಳದ ಸಿಂಹಾಸನದಿ ಲಕ್ಷ್ಮೀ
ಲಲನೆಯೋಲಗಶಾಲೆಯಂತಿರೆ ಮೆರೆದುದಾ ಸರಸಿ (ಗದಾ ಪರ್ವ, ೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕೋಗಿಲೆಗಳು ಪಾಠಕರು, ದುಂಬಿಗಳು ಗಾಯಕರು, ಹಂಸಗಳೇ ಸುಭಟರು, ಕೊಳರ್ವಕ್ಕಿಗಳೇ ದ್ವಾರಪಾಲಕರು, ಅರಳಿದ ಪರಿಮಳ ಭರಿತ ಹೊಂದಾವರೆಯೇ ಸಿಂಹಾಸನ, ಹೀಗೆ ಲಕ್ಷ್ಮೀದೇವಿಯ ಓಲಗಶಾಲೆಯಂತೆ ಸರೋವರವು ಕಂಗೊಳಿಸಿತು.

ಅರ್ಥ:
ಉಲಿ: ಶಬ್ದ; ಕೋಕಿಲ: ಕೋಗಿಲೆ; ಪಾಠಕ: ವಾಚಕ, ಭಟ್ಟಂಗಿ; ಮೊರೆ: ದುಂಬಿಯ ಧ್ವನಿ; ಝೇಂಕಾರ; ಅಳಿಕುಲ: ದುಂಬಿಯ ವಂಶ; ಗಾಯಕ: ಹಾಡುವವ; ಹಂಸ: ಒಂದು ಬಿಳಿಯ ಬಣ್ಣದ ಪಕ್ಷಿ, ಮರಾಲ; ಆವಳಿ: ಗುಂಪು; ಸುಭಟ: ಪರಾಕ್ರಮಿ; ಜಡಿ: ಬೆದರಿಕೆ, ಹೆದರಿಕೆ; ಕೊಳ: ಸರೋವರ; ಪಡಿ: ಎಣೆ, ಸಾಟಿ; ಅಲರ್: ಹೂವು; ಹೊಂದಾವರೆ: ಕಮಲ; ನವ: ಹೊಸ; ಪರಿಮಳ: ಸುಗಂಧ; ಸಿಂಹಾಸನ: ಪೀಠ; ಲಲನೆ: ಹೆಣ್ಣು; ಓಲಗ: ದರ್ಬಾರು; ಶಾಲೆ: ನೆಲೆ, ಆಲಯ; ಮೆರೆ: ಹೊಳೆ; ಸರಸಿ: ಸರೋವರ;

ಪದವಿಂಗಡಣೆ:
ಉಲಿವ +ಕೋಕಿಲ +ಪಾಠಕರ +ಮೊರೆವ್
ಅಳಿಕುಳದ +ಗಾಯಕರ+ ಹಂಸಾ
ವಳಿಯ +ಸುಭಟರ +ಜಡಿವ +ಕೊಳರ್ವಕ್ಕಿಗಳ +ಪಡಿಯರರ
ಅಲರ್ದ +ಹೊಂದಾವರೆಯ +ನವ+ಪರಿ
ಮಳದ +ಸಿಂಹಾಸನದಿ+ ಲಕ್ಷ್ಮೀ
ಲಲನೆ+ಓಲಗ+ಶಾಲೆಯಂತಿರೆ+ ಮೆರೆದುದಾ +ಸರಸಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಲಕ್ಷ್ಮೀ ಲಲನೆಯೋಲಗಶಾಲೆಯಂತಿರೆ ಮೆರೆದುದಾ ಸರಸಿ
(೨) ಸಿಂಹಾಸನವನ್ನು ಕಮಲದಲ್ಲಿ ಕಂಡ ಪರಿ – ಅಲರ್ದ ಹೊಂದಾವರೆಯ ನವಪರಿಮಳದ ಸಿಂಹಾಸನದಿ

ಪದ್ಯ ೯೫: ಗಾಯಕರ ಲಕ್ಷಣವೇನು?

ಗ್ರಾಮ ಮೂರರ ಸಂಚರಣೆಗಳ
ಸೀಮೆಯಲಿ ಸರಿಗಮಪದನಿಗಳ
ನೇಮ ತಪ್ಪದೆ ಹರಣಭರಣದ ಪರೆಪು ತಿರುಪುಗಳ
ಕೋಮಲಿತ ಶಾರೀರ ಹೃದಯದ
ರಾಮಣೀಯಕ ರಚನೆಗಳೊಳು ಸ
ನಾಮ ನೆನಿಸುವನವನೆ ಗಾಯಕನರಸ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೯೫ ಪದ್ಯ)

ತಾತ್ಪರ್ಯ:
ಮೂರು ಸ್ಥಾಯಿಗಳಾದ ಮಂದ್ರ, ಮಧ್ಯಮ, ತಾರ ಇವುಗಳಲ್ಲಿ ಸಪ್ತಸ್ವರಗಳನ್ನು ಹಾಡುವಾಗ ಸ್ವಲ್ಪವೂ ತಪ್ಪದೆ, ಸ್ವರದ ವಿಸ್ತಾರ ಮತ್ತು ತಿರುವುಗಳನ್ನು ಸರಿಯಾಗಿ ನಿರ್ವಹಿಸುವವನೂ, ಮಧುರ ಶಾರೀರವುಳ್ಳವನೂ, ಉತ್ತಮ ಮನೋಧರ್ಮವನ್ನುಳ್ಳ ಸುಂದರ ಗಾನದಲ್ಲಿ ಪ್ರಸಿದ್ಧನೂ ಆದವನು ಗಾಯಕರೆಂದು ಕರೆಯಬಹುದು ಎಂದು ವಿದುರ ಧೃತರಾಷ್ಟ್ರನಿಗೆ ತಿಳಿಸಿದ.

ಅರ್ಥ:
ಗ್ರಾಮ: ಸಂಗೀತದ ಸಪ್ತಸ್ವರಗಳಲ್ಲಿ ಷಡ್ಜ, ಮಧ್ಯಮ ಮತ್ತು ಗಾಂಧಾರವೆಂಬ ಮೂರು ಗುಂಪು; ಮೂರು: ತ್ರಿ; ಸಂಚರಣೆ: ಸಂಚಾರ, ಓಡಾಡುವಿಕೆ; ಸೀಮೆ: ಸರಹದ್ದು; ನೇಮ: ನಿಯಮ, ವ್ರತ; ತಪ್ಪದೆ: ಬಿಡದೆ, ಹಾದಿ ಬೇರೆ ಹೋಗದೆ; ಹರಣ:ಜೀವ, ಪ್ರಾಣ, ಕಿತ್ತುಕೊಳ್ಳುವುದು; ಭರಣ:ವಹಿಸುವುದು, ಧರಿಸುವುದು, ಕಾಪಾಡುವುದು; ಪರೆಪು: ವಿಸ್ತಾರ, ಹರಡು ; ತಿರುಪು: ಸುತ್ತುವುದು, ತಿರುಗಾಟ; ಕೋಮಲ:ಮಧುರ; ಶಾರೀರ: ಕಾಯ, ಶರೀರ, ಧ್ವನಿ; ಹೃದಯ: ವಕ್ಷ, ಎದೆ; ರಾಮಣೀಯಕ: ಮನೋಹರವಾದ; ರಚನೆ: ಸೃಷ್ಟಿ; ಸನಾಮ: ಶ್ರೇಷ್ಠವಾದ ಹೆಸರು, ಪ್ರಸಿದ್ಧ; ಗಾಯಕ: ಹಾಡುಗಾರ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಗ್ರಾಮ +ಮೂರರ +ಸಂಚರಣೆಗಳ
ಸೀಮೆಯಲಿ +ಸರಿಗಮಪದನಿಗಳ
ನೇಮ +ತಪ್ಪದೆ +ಹರಣ+ಭರಣದ +ಪರೆಪು +ತಿರುಪುಗಳ
ಕೋಮಲಿತ +ಶಾರೀರ +ಹೃದಯದ
ರಾಮಣೀಯಕ +ರಚನೆಗಳೊಳು +ಸ
ನಾಮ +ನೆನಿಸುವನವನೆ+ ಗಾಯಕನ್+ಅರಸ +ಕೇಳೆಂದ

ಅಚ್ಚರಿ:
(೧) ಸಂಗೀತದ ಸಪ್ತಸ್ವರವನ್ನು ತಂದಿರುವ ರೀತಿ – ಸರಿಗಮಪದನಿ
(೨) ‘ಸ’ ಕಾರದ ತ್ರಿವಳಿ ಪದ – ಸಂಚರಣೆಗಳ ಸೀಮೆಯಲಿ ಸರಿಗಮಪದನಿ
(೩) ಜೋಡಿ ಪದ – ಹರಣ ಭರಣ, ಪೆರಪು ತಿರುಪು

ಪದ್ಯ ೨೧: ರಾಜರನ್ನು ಬಿಟ್ಟು ಸ್ವಯಂವರ ಮಂಟಪ್ಪಕ್ಕೆ ಯಾರು ಬಂದು ಸೇರಿದ್ದರು?

ತೀವಿದರು ಹೊರವಳಯದಲಿ ನಾ
ನಾವಿಧದ ನಾಟಕದ ನರ್ತನ
ಭಾವಕದ್ರಾವಕ ಸುಗಾಯಕ ಮಲ್ಲ ಚಿತ್ರಕರು
ಕೋವಿದರು ಕರುಷಕರು ಪಣ್ಯಾ
ಜೀವಿ ವಾಮನ ಮೂಕ ಬಧಿರಾಂ
ಧಾವಳಿಗಳೊಪ್ಪಿದರು ಸಕಲ ದಿಶಾ ಸಮಾಗತರು (ಆದಿ ಪರ್ವ, ೧೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ದ್ರೌಪದಿಯ ಸ್ವಯಂವರವನ್ನು ವೀಕ್ಷಿಸಲು ಕೇವಲ ರಾಜರು ಮಾತ್ರವಲ್ಲ, ಆ ಮಂಟಪದ ಹೊರಗಡೆ ಎಲ್ಲ ದಿಕ್ಕುಗಳಿಂದಲೂ ಬಂದ ಜನರು ಸೇರಿದ್ದರು. ಅಲ್ಲಿ ನಾಟಕದವರು, ನರ್ತಕರು, ರಸಿಕರು, ಕಳ್ಳರು, ಒಳ್ಳೆಯ ಗಾಯಕರು, ಜಟ್ಟಿಗಳು, ಚಿತ್ರಕಲಾನಿಪುಣರು, ವಿದ್ವಾಂಸರು, ರೈತರು, ವ್ಯಾಪಾರಿಗಳು, ಕುಳ್ಳರು, ಮೂಕರು, ಕಿವುಡರು, ಅಂಧರು,ಹೀಗೆ ಸಮಾಜದ ಎಲ್ಲಾ ರೀತಿಯ ಜನರು ಬಂದು ಸೇರಿದ್ದರು.

ಅರ್ಥ:
ತೀವು: ತುಂಬು, ಭರ್ತಿಯಾಗು; ಹೊರವಳಯ: ಹೊರಗಡೆ, ಆಚೆ; ನಾನಾ: ಹಲವಾರು; ವಿಧ: ರೀತಿ; ನಾಟಕ: ಒಂದು ಬಗೆಯ ಪ್ರದರ್ಶನ ಕಲೆ; ನರ್ತನ: ಕುಣಿತ; ಭಾವಕ: ರಸಿಕ, ಸಹೃದಯ; ದ್ರಾವಕ: ಕಳ್ಳ, ಚೋರ; ಗಾಯಕ: ಹಾಡುಗಾರ; ಮಲ್ಲ: ಜಟ್ಟಿ; ಚಿತ್ರಕ: ಚಿತ್ರಬಿಡಿಸುವ; ಕೋವಿದ: ಪಂಡಿತ, ವಿದ್ವಾಂಸ; ಕರುಷ: ರೈತ; ಪಣ್ಯಾಜೀವಿ: ವ್ಯಾಪಾರಿ; ವಾಮನ: ಕುಳ್ಳ; ಮೂಕ: ಮಾತುಬಲ್ಲದವ; ಬಧಿರ: ಕಿವುಡ; ಅಂಧ: ಕುರುಡ; ಒಪ್ಪು: ಸಮ್ಮತಿಸು; ದಿಶಾ: ದಿಕ್ಕು; ಸಮಾಗತ: ಸೇರಿದ, ಒಟ್ಟಾಗಿ ಬಂದು; ಆವಳಿ: ಸಾಲು, ಗುಂಪು;

ಪದವಿಂಗಡಣೆ:
ತೀವಿದರು+ ಹೊರವಳಯದಲಿ+ ನಾ
ನಾ+ವಿಧದ+ ನಾಟಕದ+ ನರ್ತನ
ಭಾವಕ+ದ್ರಾವಕ+ ಸುಗಾಯಕ+ ಮಲ್ಲ+ ಚಿತ್ರಕರು
ಕೋವಿದರು+ ಕರುಷಕರು +ಪಣ್ಯಾ
ಜೀವಿ +ವಾಮನ +ಮೂಕ ಬಧಿರ+
ಅಂಧಾವಳಿಗಳ್+ಒಪ್ಪಿದರು+ ಸಕಲ+ ದಿಶಾ+ ಸಮಾಗತರು

ಅಚ್ಚರಿ:
(೧) ಸಮಾಜದ ಎಲ್ಲ ರೀತಿಯ ಜನರ ಪರಿಚಯ ಮಾಡುವ ಪದ್ಯ
(೨) “ಕ” ಕಾರದಿಂದ ಕೊನೆಗೊಳ್ಳುವ ಪದಗಳು – ಭಾವಕ, ದ್ರಾವಕ, ಗಾಯಕ, ಚಿತ್ರಕ
(೩) ೨ ಸಾಲಿನ ಎಲ್ಲಾ ಪದಗಳು “ನ” ಕಾರದಿಂದ ಪ್ರಾರಂಭ – ನಾವಿಧದ ನಾಟಕದ ನರ್ತನ