ಪದ್ಯ ೨೮: ಕುಂತಿಯು ಪಾಂಡುವನ್ನು ಯಾವುದರ ಬಗ್ಗೆ ಎಚ್ಚರಿಸಿದಳು?

ಧರೆಯ ರಾಜ್ಯಸ್ಥಿತಿಗೆ ಸುತರವ
ತರಿಸುವರು ಗಾಂಧಾರಿಗಾ ಪು
ತ್ರರಿಗೆ ಸುತರಾ ಸುತರ ಸುತರಾ ಸುತರ ಸೂನುಗಳು
ಧರೆ ಪರಂಪರೆಯಿಂದಲತ್ತಲೆ
ಸರಿವುದೀ ನಿಮ್ಮಡಿಗೆ ದರ್ಭ್ರಾ
ಸ್ತರಣ ಸಮಿಧಾಧಾನವೇ ಕಡೆಗೆಂದಳಾ ಕುಂತಿ (ಆದಿ ಪರ್ವ, ೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಗಾಂಧಾರಿಗೆ ಮಕ್ಕಳು ಹುಟ್ಟಿ ರಾಜರಾಗುತ್ತಾರೆ. ಅವರ ಮಕ್ಕಳು, ಮಕ್ಕಳ ಮಕ್ಕಳು ಹೀಗೆಯೇ ಪರಂಪರೆಯಿಂದ ರಾಜ್ಯವು ಅವರಿಗೆ ಸೇರುತ್ತದೆ. ನಿಮಗೆ ದರ್ಭಾಸ್ತರಣ ಸಮಿಧಾಧಾನಗಳೇ ಗತಿ ಎಂದು ಕುಂತಿಯು ಹೀಳಿದಳು.

ಅರ್ಥ:
ಧರೆ: ಭೂಮಿ; ರಾಜ್ಯ: ರಾಷ್ಟ್ರ; ಸ್ಥಿತಿ: ಅವಸ್ಥೆ, ರೀತಿ; ಸುತ: ಮಕ್ಕಳು, ಮಗ; ಅವತರಿಸು: ಹುಟ್ಟು; ಪುತ್ರ: ಮಗ; ಸುತ: ಮಗ; ಸೂನು: ಮಕ್ಕಳು; ಪರಂಪರೆ: ಒಂದರ ನಂತರ ಮತ್ತೊಂದು ಬರುವುದು, ಸಾಲು, ಪರಿವಿಡಿ; ಅತ್ತ: ಆ ಕಡೆ; ಸರಿ: ಜಾರು; ಅಡಿ: ಪಾದ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ಕಡೆ: ಕೊನೆ;

ಪದವಿಂಗಡಣೆ:
ಧರೆಯ +ರಾಜ್ಯಸ್ಥಿತಿಗೆ +ಸುತರ್+ಅವ
ತರಿಸುವರು +ಗಾಂಧಾರಿಗ್+ಆ+ ಪು
ತ್ರರಿಗೆ +ಸುತರ್+ಆ+ ಸುತರ +ಸುತರ್+ಆ +ಸುತರ +ಸೂನುಗಳು
ಧರೆ +ಪರಂಪರೆಯಿಂದಲ್+ಅತ್ತಲೆ
ಸರಿವುದ್+ಈ+ ನಿಮ್ಮಡಿಗೆ+ ದರ್ಭ್ರಾ
ಸ್ತರಣ+ ಸಮಿಧಾಧಾನವೇ +ಕಡೆಗೆಂದಳಾ +ಕುಂತಿ

ಅಚ್ಚರಿ:
(೧) ಸುತರ ಪದದ ಬಳಕೆ – ಪುತ್ರರಿಗೆ ಸುತರಾ ಸುತರ ಸುತರಾ ಸುತರ ಸೂನುಗಳು

ಪದ್ಯ ೨೬: ಸಂಜಯನು ಯಾವ ಪ್ರಶ್ನೆಯನ್ನು ದುರ್ಯೋಧನನಿಗೆ ಕೇಳಿದನು?

ಏನು ಸಂಜಯ ಕೌರವೇಶ್ವರ
ನೇನ ಮಾಡಿದನಲ್ಲಿ ಕುಂತೀ
ಸೂನುಗಳೊಳಾರಳಿದರುಳಿದರು ನಮ್ಮ ಥಟ್ಟಿನಲಿ
ಏನು ಹದನೈ ಶಕುನಿ ರಣದೊಳ
ಗೇನ ಮಾಡಿದನೆಂದು ಬೆಸಗೊಳ
ಲೇನನೆಂಬೆನು ತಾಯಿ ಗಾಂಧಾರಿಗೆ ರಣೋತ್ಸವವ (ಗದಾ ಪರ್ವ, ೩ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಲೈ ಕೌರವೇಶ್ವರ, ನಿನ್ನ ತಾಯಿ ಗಾಂಧಾರಿಯು ನನ್ನನ್ನು ಕಂಡು, ಎಲೈ ಸಂಜಯ ದುರ್ಯೋಧನನು ಏನು ಮಾಡಿದ? ಕುಂತಿಯ ಮಕ್ಕಳಲ್ಲಿ ಯಾರು ಅಳಿದರು, ಯಾರು ಉಳಿದರು? ನಮ್ಮ ಸೇನೆಯಲ್ಲಿ ಯಾರು ಉಳಿದಿದ್ದಾರೆ? ಶಕುನಿಯು ಯುದ್ಧದಲ್ಲಿ ಏನು ಮಾಡಿದೆ ಎಂದು ಕೇಳಿದರೆ ಯುದ್ಧದ ವಾರ್ತೆಯನ್ನು ನಾನು ಏನೆಂದು ಹೇಳಲಿ ಎಂದು ಕೌರವನನ್ನು ಪ್ರಶ್ನಿಸಿದ.

ಅರ್ಥ:
ಸೂನು: ಮಕ್ಕಳು; ಅಳಿ: ಸಾವು; ಉಳಿ: ಜೀವಿಸು; ಥಟ್ಟು: ಗುಂಪು; ಹದ: ಸ್ಥಿತಿ; ರಣ: ಯುದ್ಧ; ಬೆಸ:ಅಪ್ಪಣೆ, ಆದೇಶ; ತಾಯಿ: ಮಾತೆ; ಉತ್ಸವ: ಸಂಭ್ರಮ;

ಪದವಿಂಗಡಣೆ:
ಏನು +ಸಂಜಯ +ಕೌರವೇಶ್ವರನ್
ಏನ+ ಮಾಡಿದನಲ್ಲಿ +ಕುಂತೀ
ಸೂನುಗಳೊಳ್+ಆರ್+ಅಳಿದರ್+ಉಳಿದರು +ನಮ್ಮ ಥಟ್ಟಿನಲಿ
ಏನು +ಹದನೈ+ ಶಕುನಿ+ ರಣದೊಳಗ್
ಏನ +ಮಾಡಿದನೆಂದು +ಬೆಸಗೊಳಲ್
ಏನನೆಂಬೆನು +ತಾಯಿ +ಗಾಂಧಾರಿಗೆ +ರಣೋತ್ಸವವ

ಅಚ್ಚರಿ:
(೧) ಅಳಿ, ಉಳಿ – ವಿರುದ್ಧಾರ್ಥಕ ಪದ
(೨) ಏನು, ಏನ ಪದದ ಬಳಕೆ ಎಲ್ಲಾ ಸಾಲುಗಳ ಮೊದಲ ಪದ (೩ ಸಾಲು ಹೊರತುಪಡಿಸಿ)

ಪದ್ಯ ೬೦: ಧರ್ಮಜನ ರಕ್ಷಣೆಗೆ ಯಾರು ಬಂದರು?

ತೀರಿತಿನ್ನೇನರಿನೃಪನ ಸಂ
ಸಾರವಿನ್ನರೆ ಘಳಿಗೆಯಲಿ ಗಾಂ
ಧಾರಿ ನೆರೆ ನೋಂಪಿಯಲಿ ಪಡೆದಳು ಕೌರವೇಶ್ವರನ
ಸಾರ ಹೇಳೋ ಸಾಹಸಿಕರೆಂ
ದಾರುತಿರೆ ಬಲವಿತ್ತಲಾಹವ
ಧೀರ ಸಾತ್ಯಕಿ ಭೀಮ ಪಾರ್ಥಕುಮಾರರನುವಾಯ್ತು (ದ್ರೋಣ ಪರ್ವ, ೨ ಸಂಧಿ, ೬೦ ಪದ್ಯ)

ತಾತ್ಪರ್ಯ:
ಶತ್ರುರಾಜನ ಸಂಸಾರ ಇನ್ನರೆಗಳಿಗೆಯಲ್ಲಿ ಕೊನೆಯಾಗುತ್ತದೆ. ಗಾಂಧಾರಿಯು ವ್ರತಮಾಡಿ ಕೌರವೇಶ್ವರನನ್ನು ಪಡೆದಳು, ಸಾಹಸವಿರುವವರನ್ನು ಧರ್ಮಜನ ರಕ್ಷಣೆಗೆ ಕರೆಯಿರಿ ಎಂದು ಸೈನ್ಯವು ಕೂಗಿಕೊಳ್ಳಲು, ಸಾತ್ಯಕಿ, ಭೀಮ, ಅಭಿಮನ್ಯರು ಧರ್ಮಜನ ರಕ್ಷಣೆಗೆ ರಣರಂಗಕ್ಕೆ ಬಂದರು.

ಅರ್ಥ:
ತೀರು: ಮುಗಿಸು; ಅರಿ: ವೈರಿ; ನೃಪ: ರಾಜ; ಸಂಸಾರ: ಪರಿವಾರ, ಕುಟುಂಬ; ಅರೆ: ಸ್ವಲ್ಪ, ಅರ್ಧ; ಘಳಿಗೆ: ಸಮಯ; ನೆರೆ: ಗುಂಪು; ನೋಂಪು: ವ್ರತ; ಪಡೆ: ಹೊಂದು, ತಾಳು; ಸಾರ: ಶ್ರೇಷ್ಠವಾದ; ಹೇಳು: ತಿಳಿಸು; ಸಾಹಸಿ: ಪರಾಕ್ರಮಿ; ಆರು: ಘರ್ಷಿಸು, ತೃಪ್ತಿಪಡು; ಬಲ: ಸೈನ್ಯ; ಆಹವ: ಯುದ್ಧ; ಧೀರ: ಪರಾಕ್ರಮ; ಕುಮಾರ: ಮಗ; ಅನುವು: ಸೊಗಸು, ರೀತಿ;

ಪದವಿಂಗಡಣೆ:
ತೀರಿತ್+ಇನ್ನೇನ್+ಅರಿ+ನೃಪನ +ಸಂ
ಸಾರವ್+ಇನ್ನ್+ಅರೆ +ಘಳಿಗೆಯಲಿ +ಗಾಂ
ಧಾರಿ +ನೆರೆ +ನೋಂಪಿಯಲಿ +ಪಡೆದಳು +ಕೌರವೇಶ್ವರನ
ಸಾರ +ಹೇಳೋ +ಸಾಹಸಿಕರೆಂದ್
ಆರುತಿರೆ+ ಬಲವ್+ಇತ್ತಲ್+ಆಹವ
ಧೀರ +ಸಾತ್ಯಕಿ+ ಭೀಮ +ಪಾರ್ಥ+ಕುಮಾರರ್+ಅನುವಾಯ್ತು

ಅಚ್ಚರಿ:
(೧) ಅರಿ, ಅರೆ – ಪದಗಳ ಬಳಕೆ

ಪದ್ಯ ೩೨: ಗಾಂಧಾರಿಯು ಏನೆಂದು ಗೋಳಾಡಿದಳು?

ಸಂತವಿಡಿರೇ ಮಗನ ನಿಜ ದೇ
ಹಾಂತ ಕೃತ ಸಂಕಲ್ಪ ಗಡ ನೃಪ
ನಂತರಂಗರ ಕರೆಸಿಯೆಂದಳಲಿದಳು ಗಾಂಧಾರಿ
ಭ್ರಾಂತಿ ಬಿಗಿದಿದೆ ಚತುರ ಚಿತ್ತಕೆ
ಚಿಮ್ತೆ ಬೇರೊಂದಾಯ್ತು ರಾಯನ
ಹಂತಿಕಾರರು ಬರಲಿ ಹಿಡಿಯಲಿ ನಿರಶನವ್ರತವ (ಅರಣ್ಯ ಪರ್ವ, ೨೨ ಸಂಧಿ, ೩೨ ಪದ್ಯ)

ತಾತ್ಪರ್ಯ:
ಗಾಂಧಾರಿಯು ಮಗನನ್ನು ಸಂತೈಸಿರಿ, ಇವನು ಆಮರಣಾಂತ ಉಪವಾಸದ ಸಂಕಲ್ಪಮಾಡಿದ್ದಾನಂತೆ. ಅವನ ಅಂತರಂಗ ಮಿತ್ರರನ್ನು ಕರೆಸಿರಿ. ಮನಸ್ಸಿಗೆ ಭ್ರಾಂತಿ ಹಿಡಿದಿದೆ. ಚಿಂತೆ ಆವರಿಸಿದೆ. ಮಗನ ಆಪ್ತಮಿತ್ರರೂ ಬಂದು ನಿರಶನವ್ರತವನ್ನು ಹಿಡಿಯಲಿ ಎಂದು ಗೋಳಾಡಿದಳು.

ಅರ್ಥ:
ಸಂತವಿಡಿ: ಸಂತೈಸು; ಮಗ: ಸುತ; ನಿಜ: ದಿಟ, ತನ್ನ; ದೇಹಾಂತ: ಸಾವು; ಕೃತ: ಮಾಡಿದ; ಸಂಕಲ್ಪ: ನಿರ್ಧಾರ, ನಿರ್ಣಯ; ಗಡ: ಅಲ್ಲವೆ; ನೃಪ: ರಾಜ; ಅಂತರಂಗ: ಒಳಗೆ; ಕರೆಸು: ಬರೆಮಾಡು; ಅಳಲು: ದುಃಖ; ಭ್ರಾಂತಿ: ತಪ್ಪು ತಿಳಿವಳಿಕೆ, ಭ್ರಮೆ; ಬಿಗಿದು: ಕಟ್ಟು; ಚತುರ: ನಿಪುಣ; ಚಿತ್ತ: ಮನಸ್ಸು; ಚಿಂತೆ: ಯೋಚನೆ; ಬೇರೆ: ಅನ್ಯ; ರಾಯ: ರಾಜ; ಹಂತಿಕಾರ: ಸರದಿಯವನು; ಬರಲಿ: ಆಗಮಿಸಲಿ; ಹಿಡಿ: ಬಂಧಿಸು; ನಿರಶನ: ಊಟವಿಲ್ಲದ ಸ್ಥಿತಿ; ವ್ರತ: ನಿಯಮ;

ಪದವಿಂಗಡಣೆ:
ಸಂತವಿಡಿರೇ+ ಮಗನ +ನಿಜ +ದೇ
ಹಾಂತ +ಕೃತ +ಸಂಕಲ್ಪ +ಗಡ +ನೃಪನ್
ಅಂತರಂಗರ+ ಕರೆಸಿ+ಎಂದ್+ಅಳಲಿದಳು +ಗಾಂಧಾರಿ
ಭ್ರಾಂತಿ +ಬಿಗಿದಿದೆ +ಚತುರ +ಚಿತ್ತಕೆ
ಚಿಂತೆ+ ಬೇರೊಂದಾಯ್ತು +ರಾಯನ
ಹಂತಿಕಾರರು +ಬರಲಿ +ಹಿಡಿಯಲಿ +ನಿರಶನ+ವ್ರತವ

ಅಚ್ಚರಿ:
(೧) ನೃಪನಂತರಂಗರು, ರಾಯನ ಹಂತಿಕಾರರು – ಸಾಮ್ಯಾರ್ಥ ಪದಗಳು
(೨) ಚ ಕಾರದ ತ್ರಿವಳಿ ಪದ – ಚತುರ ಚಿತ್ತಕೆ ಚಿಂತೆ

ಪದ್ಯ ೩೨: ಧರ್ಮರಾಯನು ಭೀಮನಿಗೆ ಏನು ಹೇಳಿದ?

ಬೊಪ್ಪನವರಟ್ಟಿದರೆ ಶಿವ ಶಿವ
ತಪ್ಪು ನೆನೆವರೆ ಭೀಮ ಸೈರಿಸು
ತಪ್ಪನಾಡಿದೆ ನಮಗೆ ಮುನಿವಳೆ ತಾಯಿ ಗಾಂಧಾರಿ
ತಪ್ಪಲೊಮ್ಮಿಗೆ ಪಾಂಡು ಕುಂತಿಗೆ
ಮುಪ್ಪಿನಲಿ ಮರುಳಾಟವಾಗಲಿ
ತಪ್ಪುವನೆ ಧೃತರಾಷ್ಟ್ರನೆಂದನು ನಗುತ ಯಮಸೂನು (ಸಭಾ ಪರ್ವ, ೧೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಧರ್ಮರಾಯನು ಪ್ರಾತಿಕಾಮಿಕನ ಮಾತನ್ನು ಕೇಳಿ, ದೊಡ್ಡಪ್ಪನವರು ನಿನ್ನನ್ನು ಕಳಿಸಿದರೆ? ಭೀಮ ಇದರಲ್ಲಿ ಕಪಟವಿದೆಯೆಂದು ಯೋಚಿಸಬೇಡ. ಗಾಂಧಾರಿಯು ನಮ್ಮ ಮೇಲೆ ಕೋಪಿಸುವಳೆಂದು ಭಾವಿಸುವುದು ತಪ್ಪು. ಪಾಂಡುವೇ ನಮ್ಮ ವಿಷಯದಲ್ಲಿ ತಪ್ಪಲಿ, ಕುಂತಿಗೆ ಮುಪ್ಪಿನ ಅರೆ ಮರುಳು ಆಡಸಲಿ, ಆದರೆ ಧೃತರಾಷ್ಟ್ರನು ಎಂದಿಗೂ ತಪ್ಪುವುದಿಲ್ಲ ಎಂದನು.

ಅರ್ಥ:
ಬೊಪ್ಪ: ತಂದೆ; ಅಟ್ಟು: ಕಳಿಸು; ತಪ್ಪು: ಸರಿಯಲ್ಲದ; ನೆನೆ: ಜ್ಞಾಪಿಸಿಕೋ; ಸೈರಿಸು: ತಾಳು, ಸಹಿಸು; ಮುನಿ: ಕೋಪ; ತಾಯಿ: ಮಾತು; ಮುಪ್ಪು: ವೃದ್ಧಾಪ್ಯ; ಮರುಳು: ಬುದ್ಧಿಭ್ರಮೆ, ಹುಚ್ಚು; ಆಟ: ಕ್ರೀಡೆ; ಸೂನು: ಮಗ;

ಪದವಿಂಗಡಣೆ:
ಬೊಪ್ಪನವರ್+ಅಟ್ಟಿದರೆ+ ಶಿವ+ ಶಿವ
ತಪ್ಪು +ನೆನೆವರೆ +ಭೀಮ +ಸೈರಿಸು
ತಪ್ಪನಾಡಿದೆ+ ನಮಗೆ +ಮುನಿವಳೆ +ತಾಯಿ +ಗಾಂಧಾರಿ
ತಪ್ಪಲೊಮ್ಮಿಗೆ +ಪಾಂಡು +ಕುಂತಿಗೆ
ಮುಪ್ಪಿನಲಿ +ಮರುಳಾಟವಾಗಲಿ
ತಪ್ಪುವನೆ +ಧೃತರಾಷ್ಟ್ರನೆಂದನು +ನಗುತ +ಯಮಸೂನು

ಅಚ್ಚರಿ:
(೧) ಧರ್ಮರಾಯನ ನಂಬಿಕೆ – ನಮಗೆ ಮುನಿವಳೆ ತಾಯಿ ಗಾಂಧಾರಿ

ಪದ್ಯ ೩೧: ಭೀಮನು ಪ್ರಾತಿಕಾಮಿಕನಿಗೆ ಏನೆಂದು ಹೇಳಿದ?

ಮರಳಿ ಕರೆಸುವುದೆಂದು ಕಂಬನಿ
ವೆರಸಿ ಕುರುಪತಿ ಪಿತನ ಚಿತ್ತವ
ಕರಗಿಸಿದನೋ ಮೇಣು ತಾ ಕರೆಸಿದಳೊ ಗಾಂಧಾರಿ
ಕರೆಸುವವದಿರು ಭಂಡರೋ ಮೇ
ಣ್ಮರಳಿ ಹೋಹರು ಭಂಡರೋ ನೀ
ನರಿವುದೇನೈ ಪ್ರಾತಿಕಾಮಿಕನೆಂದನಾ ಭೀಮ (ಸಭಾ ಪರ್ವ, ೧೭ ಸಂಧಿ, ೩೧ ಪದ್ಯ)

ತಾತ್ಪರ್ಯ:
ಭೀಮನು ಪ್ರಾತಿಕಾಮಿಕನ ಮಾತನ್ನು ಕೇಳಿ, ಎಲೈ ಪ್ರಾತಿಕಾಮಿಕ, ನಮ್ಮನ್ನು ಮತ್ತೆ ಕರೆಸಿ ಎಂದು ದುರ್ಯೋಧನನು ಧೃತರಾಷ್ಟ್ರನ ಮನಸ್ಸನ್ನು ಕರಗಿಸಿದನೋ? ಅಥವ ಗಾಂಧಾರಿಯು ನಮ್ಮನ್ನು ಕರೆತರಲು ನಿನ್ನನ್ನು ಕಳಿಸಿದಳೋ? ಇಷ್ಟೆಲ್ಲಾ ಆದಮೇಲೆ, ನಮ್ಮನ್ನು ಕರೆಸುವವರು ಭಂಡರೋ ಅಥವ ಅವರು ಕರೆದರೆಂದು ಮತ್ತೆ ಹೋಗುವವರು ಭಂಡರೋ ಹೇಳು ಎಂದು ಪ್ರಾತಿಕಾಮಿಕನಿಗೆ ಭೀಮ ಕೇಳಿದ.

ಅರ್ಥ:
ಮರಳಿ: ಪುನಃ, ಮತ್ತೆ;ಕರೆಸು: ಬರೆಮಾಡು; ಕಂಬನಿ: ಕಣ್ಣೀರು; ಎರಸು: ಚೆಲ್ಲು; ಪಿತ: ತಂದೆ; ಚಿತ್ತ: ಮನಸ್ಸು; ಕರಗಿಸು: ಕನಿಕರ ಪಡು, ನೀರಾಗಿಸು; ಮೇಣ್: ಅಥವ; ಕರೆಸು: ಬರೆಮಾಡು; ಅವದಿರು: ಅವರು; ಭಂಡ: ನಾಚಿಕೆ, ಲಜ್ಜೆ; ಹೋಹರು: ತೆರಳು; ಅರಿ: ತಿಳಿ;

ಪದವಿಂಗಡಣೆ:
ಮರಳಿ +ಕರೆಸುವುದೆಂದು +ಕಂಬನಿವ್
ಎರಸಿ +ಕುರುಪತಿ +ಪಿತನ +ಚಿತ್ತವ
ಕರಗಿಸಿದನೋ +ಮೇಣು +ತಾ +ಕರೆಸಿದಳೊ +ಗಾಂಧಾರಿ
ಕರೆಸುವ್+ಅವದಿರು +ಭಂಡರೋ +ಮೇಣ್
ಮರಳಿ+ ಹೋಹರು+ ಭಂಡರೋ +ನೀನ್
ಅರಿವುದೇನೈ+ ಪ್ರಾತಿಕಾಮಿಕನೆಂದನಾ +ಭೀಮ

ಅಚ್ಚರಿ:
(೧) ಯಾರು ಭಂಡರು ಎಂದು ಹೇಳುವ ಪರಿ – ಕರೆಸುವವದಿರು ಭಂಡರೋ ಮೇಣ್ಮರಳಿ ಹೋಹರು ಭಂಡರೋ
(೨) ಕುರುಪತಿ ಪಿತನ – ಪತಿ, ಪಿತ ಪದದ ಬಳಕೆ

ಪದ್ಯ ೬೦: ಧೃತರಾಷ್ಟ್ರನು ಧರ್ಮರಾಯನಲ್ಲೆ ಏನು ಬೇಡಿದನು?

ಎನ್ನನೀಕ್ಷಿಸಿ ಮಗನೆ ಮರೆ ನಿನ
ಗನ್ಯಳೇ ಗಾಂಧಾರಿ ಪಿತನೆಂ
ದೆನ್ನ ಕಾಬಿರಿ ವೃದ್ಧನೆಂದು ಗತಾಕ್ಷ ತಾನೆಂದು
ಮನ್ನಿಸುವಿರೆಲೆ ಮಕ್ಕಳಿರ ಸಂ
ಪನ್ನ ಸತ್ಯರು ನೀವು ಕರ್ಮಿಗ
ಳೆನ್ನವರು ದೋಶಾಭಿಸಂಧಿಯ ಮರೆದು ಕಳೆಯೆಂದ (ಸಭಾ ಪರ್ವ, ೧೬ ಸಂಧಿ, ೬೦ ಪದ್ಯ)

ತಾತ್ಪರ್ಯ:
ನನ್ನನ್ನು ನೋಡು ಮಗು ಧರ್ಮರಾಯ, ನನ್ನನ್ನು ನೋಡಿ ನಡೆದುದೆಲ್ಲವನ್ನು ಮರೆತುಬಿಡು, ಗಾಂಧಾರಿ ನಿನಗೆ ಬೇರೆಯವಳೆ, ನಾನು ವೃದ್ಧನೂ, ಕುರುಡನೂ ಆಗಿದ್ದರು ನನ್ನನ್ನು ತಂದೆಯಸಮಾನನಾಗಿ ನೀವು ಕಾಣುವಿರಿ, ನೀವು ಸತ್ಯವಂತರು, ನನ್ನ ಮಕ್ಕಳು ದುಷ್ಕರ್ಮಿಗಳು ಅವರ ದೋಷವನ್ನು ನೀವು ಮರೆತುಬಿಡಿ ಎಂದು ಬೇಡಿಕೊಂಡನು.

ಅರ್ಥ:
ಈಕ್ಷಿಸು: ನೋಡು; ಮಗ: ಪುತ್ರ; ಮರೆ: ನೆನಪಿನಿಂದ ದೂರ ತಳ್ಳು; ಅನ್ಯ: ಬೇರೆ; ಪಿತ: ತಂದೆ; ಕಾಬ: ನೋಡುವ; ವೃದ್ಧ: ವಯಸ್ಸಾದ; ಗತ: ಕಳೆದ; ಅಕ್ಷ: ಕಣ್ಣು; ಮನ್ನಿಸು: ಒಪ್ಪು, ಅಂಗೀಕರಿಸು, ದಯಪಾಲಿಸು; ಮಕ್ಕಳು: ಪುತ್ರ; ಸಂಪನ್ನ: ಶ್ರೇಷ್ಠವಾದ; ಸತ್ಯ: ದಿಟ; ಕರ್ಮಿ: ದುಷ್ಕರ್ಮಿ, ಪಾಪಿಷ್ಠ; ದೋಷ: ತಪ್ಪು; ಕಳೆ: ತೊರೆ;

ಪದವಿಂಗಡಣೆ:
ಎನ್ನನೀಕ್ಷಿಸಿ+ ಮಗನೆ+ ಮರೆ +ನಿನ
ಗನ್ಯಳೇ +ಗಾಂಧಾರಿ +ಪಿತನೆಂದ್
ಎನ್ನ +ಕಾಬಿರಿ+ ವೃದ್ಧನೆಂದು +ಗತಾಕ್ಷ +ತಾನೆಂದು
ಮನ್ನಿಸುವಿರ್+ಎಲೆ+ ಮಕ್ಕಳಿರ+ ಸಂ
ಪನ್ನ +ಸತ್ಯರು +ನೀವು +ಕರ್ಮಿಗಳ್
ಎನ್ನವರು +ದೋಷಾಭಿಸಂಧಿಯ +ಮರೆದು +ಕಳೆಯೆಂದ

ಅಚ್ಚರಿ:
(೧) ಧೃತರಾಷ್ಟ್ರನ ಕೋರಿಕೆ – ಎನ್ನನೀಕ್ಷಿಸಿ ಮಗನೆ ಮರೆ; ಕರ್ಮಿಗಳೆನ್ನವರು ದೋಶಾಭಿಸಂಧಿಯ ಮರೆದು ಕಳೆಯೆಂದ
(೨) ಪಾಂಡವರನ್ನು ಹೊಗಳುವ ಪರಿ – ಸಂಪನ್ನ ಸತ್ಯರು ನೀವು
(೩) ಕುರುಡನೆಂದು ಹೇಳಲು – ಗತಾಕ್ಷ ಪದದ ಬಳಕೆ

ಪದ್ಯ ೧೦: ಮಗನ ಕಪಟವನು ಕೇಳಿ ಧೃತರಾಷ್ಟ್ರನು ಹೇಗೆ ಬೇಸರಗೊಂಡನು?

ಅವನಿಪತಿ ಕೇಳಿದನು ಕನಲಿದು
ಶಿವಶಿವೆಂದನು ವಿದುರ ಕರೆ ಕೌ
ರವನು ಮಗನೇ ಮೃತ್ಯುವಲ್ಲಾ ಭರತ ಸಂತತಿಗೆ
ಅವಳ ಬರಹೇಳಿತ್ತ ಮಗನಾ
ಟವನು ನೋಡಲಿ ಹೆತ್ತ ಮೋಹದ
ಹವಣುಗಳ ಬೆಸಗೊಳ್ವ ಗಾಂಧಾರಿಯನು ಕರೆಯೆಂದ (ಉದ್ಯೋಗ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಷ್ಮರು ಹೇಳಿದ ಮಾತುಗಳನ್ನು ಕೇಳಿದ ಧೃತರಾಷ್ಟ್ರ ಬೇಸರಗೊಂಡು ಶಿವಶಿವ ಇವನು ನನ್ನ ಮಗನೇ ಎಂದು ಸಂಕಟಪಟ್ಟನು, ಅಲ್ಲಾ ಇವನು ಭರತವಂಶಕ್ಕೆ ಮೃತ್ಯುವಾಗಿರುವನಲ್ಲಾ! ವಿದುರನನ್ನು ಬರೆಮಾಡಲು ಹೇಳಿ, ಗಾಂಧಾರಿಯನ್ನು ಇಲ್ಲಿಗೆ ಬರಲು ಹೇಳು, ಅವಳ ಮಗನ ಆಟವನ್ನು ಆಕೆಯೂ ನೋಡಲಿ, ಮಗನನ್ನು ಎಂತಹ ಮೋಹದಿಂದ ಹೆತ್ತಳೋ ಕೇಳೋಣ ಎಂದು ಗಾಂಧಾರಿಯನ್ನು ಬರಲು ಹೇಳಿದನು.

ಅರ್ಥ:
ಅವನಿ: ಭೂಮಿ; ಅವನಿಪತಿ: ರಾಜ; ಕೇಳು: ಆಲಿಸು; ಕನಲು:ಸಂಕಟಪಡು; ಕರೆ: ಬರೆಮಾಡು; ಮೃತ್ಯು: ಸಾವು; ಸಂತತಿ: ವಂಶ; ಬರಹೇಳು: ಆಗಮಿಸು, ಬರೆಮಾಡು; ಆಟ: ಸೋಗು, ಉಪಾಯ; ನೋಡು: ವೀಕ್ಷಿಸು; ಹೆತ್ತ: ಜನ್ಮನೀಡಿದ; ಮೋಹ: ಆಸೆ; ಹವಣು:ನಿಯಮ, ಕಾರ್ಯ; ಬೆಸಗೊಳ್ಳು:ಕೇಳುವುದು;

ಪದವಿಂಗಡಣೆ:
ಅವನಿಪತಿ +ಕೇಳಿದನು +ಕನಲಿದು
ಶಿವಶಿವೆಂದನು +ವಿದುರ+ ಕರೆ+ ಕೌ
ರವನು +ಮಗನೇ +ಮೃತ್ಯುವಲ್ಲಾ +ಭರತ +ಸಂತತಿಗೆ
ಅವಳ+ ಬರಹೇಳ್+ಇತ್ತ +ಮಗನ
ಆಟವನು +ನೋಡಲಿ +ಹೆತ್ತ +ಮೋಹದ
ಹವಣುಗಳ+ ಬೆಸಗೊಳ್ವ +ಗಾಂಧಾರಿಯನು +ಕರೆಯೆಂದ

ಅಚ್ಚರಿ:
(೧) ಶಿವಶಿವ – ಆಡು ಭಾಷೆಯ ಪ್ರಯೋಗ
(೨) ಬರಹೇಳು, ಕರೆ – ಸಮನಾರ್ಥಕ ಪದ

ಪದ್ಯ ೭೩: ಕುಂತಿಯು ಗಾಂಧಾರಿಯನ್ನು ಹೇಗೆ ಆಹ್ವಾನಿಸಿದಳು?

ತಂದು ಮಂಚದೊಳೊಲಿದು ಶುಭಕರ
ದಿಂದ ಕುಳ್ಳಿರಿಸಿದರೆ ಬಳಿಕಾ
ಗೆಂದಳಾ ಗಾಂಧಾರಿದೇವಿಗೆ ಕುಂತಿ ಕೈಮುಗಿದು
ತಂದನೈರಾವತವನರ್ಜುನ
ನಿಂದು ನೀವೈತಂದು ಮನದೊಲ
ವಿಂದ ನೋಂಪಿಯನೋನ ಬರಬೇಕೆಂದಳಾ ಕುಂತಿ (ಆದಿ ಪರ್ವ, ೨೧ ಸಂಧಿ, ೭೩ ಪದ್ಯ)

ತಾತ್ಪರ್ಯ:
ಕುಂತಿಯ ವಂದನೆಯನ್ನು ಸ್ವೀಕರಿಸಿ ಸ್ನೇಹದಿಂದ ಆಕೆಯನ್ನು ಪೀಠದ ಮೇಲೆ ಕುಳ್ಳಿರಿಸಲು, ಕುಂತಿಯು ಗಾಂಧಾರಿಗೆ ಕೈಮುಗಿದು “ಅರ್ಜುನನು ಐರಾವತವನ್ನು ಸ್ವರ್ಗದಿಂದ ತಂದಿದ್ದಾನೆ, ನೀವೀಗ ಮನಸ್ಸಂತೋಷದಿಂದ ಬಂದು ವ್ರತವನ್ನು ಆಚರಿಸಬೇಕು” ಎಂದು ನುಡಿದಳು.

ಅರ್ಥ:
ತಂದು: ಬರಮಾಡು; ಮಂಚ: ಆಸನ, ಪೀಠ; ಒಲಿ: ಒಪ್ಪು; ಶುಭ: ಮಂಗಳ; ಕುಳ್ಳಿರಿಸು: ಕೂರಿಸು, ಆಸನವನ್ನು ಗ್ರಹಿಸು; ಬಳಿಕ: ನಂತರ; ಕೈ: ಕರ, ಹಸ್ತ; ಮುಗಿದು: ನಮಸ್ಕರಿಸು; ತಂದೆನು: ಬರೆಮಾಡಿಕೊಂಡೆನು; ಮನ: ಮನಸ್ಸು; ಒಲವು: ಪ್ರೀತಿ; ನೋಂಪು: ವ್ರತ; ಬರಬೇಕು: ಆಗಮಿಸು;

ಪದವಿಂಗಡಣೆ:
ತಂದು +ಮಂಚದೊಳ್+ ಒಲಿದು+ ಶುಭಕರ
ದಿಂದ +ಕುಳ್ಳಿರಿಸಿದರೆ +ಬಳಿಕಾಗ್
ಎಂದಳಾ+ ಗಾಂಧಾರಿ+ದೇವಿಗೆ +ಕುಂತಿ +ಕೈಮುಗಿದು
ತಂದನ್+ಐರಾವತವನ್+ಅರ್ಜುನನ್
ಇಂದು +ನೀವೈ+ತಂದು +ಮನದ್+ಒಲ
ವಿಂದ +ನೋಂಪಿಯನೋನ+ ಬರಬೇಕೆಂದಳಾ+ ಕುಂತಿ

ಅಚ್ಚರಿ:
(೧) ೪ ಸಾಲಿನಲ್ಲಿ ಒಂದೆ ಪದವಾಗಿರುವುದು

ಪದ್ಯ ೧೨: ದೂತರು ಗಾಂಧಾರಿ ಬಳೆ ಏತಕ್ಕೆ ಹೋದರು?

ಚಂದವಾದುದು ಸುರಪನಾ ಗಜ
ದಿಂದವೆಗ್ಗಳ ಸುಬಲರಾಯನ
ನಂದನೆಯ ಬರಹೇಳ್ವುದೈರಾವತವ ನೋನುವೊಡೆ
ಎಂದು ಸಚಿವರು ಕಳುಹೆ ದೂತರು
ಬಂದರಾ ಗಾಂಧಾರಿದೇವಿಗೆ
ನಿಂದು ಮೈಯಿಕ್ಕಿದರು ಕರಗಳ ಮುಗಿದು ಬಿನ್ನೈಸಿ (ಆದಿ ಪರ್ವ, ೨೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ಆನೆಯ ರಚನೆ ಮುಗಿದ ಮೇಳೆ, ಮಂತ್ರಿಗಳು ಆ ಅನೆಯ ವಿಗ್ರಹವನ್ನು ನೋಡಿ, ಇದು ಅಂದದಲ್ಲಿ ಇಂದ್ರನ ಐರಾವತವನ್ನು ಮೀರಿಸುತ್ತದೆ, ವ್ರತಕ್ಕೆ ಆನೆಯು ಸಿದ್ಧವಾಗಿದೆ ಎಂದು ಗಾಂಧಾರಿಯ ಬಳಿ ತಿಳಿಸಿ ಎಂದು ಸಚಿವರು ಹೇಳಲು, ದೂತರು ಗಾಂಧಾರಿಯ ಬಳಿ ಹೋಗೆ ನಮಸ್ಕರಿಸಿ, ಕೈ ಮುಗಿದು ಬಿನ್ನವಿಸಿದರು.

ಅರ್ಥ:
ಚಂದ: ಅಂದ, ಸೊಗಸು; ಸುರಪ: ಇಂದ್ರ; ಗಜ: ಆನೆ; ವೆಗ್ಗಳ: ಶ್ರೇಷ್ಠತೆ, ಹಿರಿಮೆ; ರಾಯ: ರಾಜ; ನಂದನೆ: ಮಗಳು; ಬರಹೇಳು: ಆಗಮಿಸು; ನೋನು: ವ್ರತ; ಸಚಿವ: ಮಂತ್ರಿ; ಕಳುಹೆ: ಹೇಳಿಕಳುಹಿಸು; ದೂತರು: ದಾಸ; ಮೈಯಿಕ್ಕು: ನಮಸ್ಕರಿಸು; ಕರ: ಕೈ, ಹಸ್ತ; ಬಿನ್ನೈಸು: ಹೇಳು;

ಪದವಿಂಗಡಣೆ:
ಚಂದವಾದುದು+ ಸುರಪನ+ಆ +ಗಜ
ದಿಂದ+ವೆಗ್ಗಳ +ಸುಬಲರಾಯನ
ನಂದನೆಯ +ಬರಹೇಳ್ವುದ್+ಐರಾವತವ +ನೋನುವೊಡೆ
ಎಂದು +ಸಚಿವರು +ಕಳುಹೆ +ದೂತರು
ಬಂದರಾ +ಗಾಂಧಾರಿ+ದೇವಿಗೆ
ನಿಂದು +ಮೈಯಿಕ್ಕಿದರು +ಕರಗಳ+ ಮುಗಿದು +ಬಿನ್ನೈಸಿ

ಅಚ್ಚರಿ:
(೧) ಸುಬಲರಾಯನ ನಂದನೆ, ಗಾಂಧಾರಿ – ೨ ರೀತಿಯ ಪ್ರಯೋಗ, ೨, ೫ ಸಾಲು
(೨) ಗೌರವ ಸೂಚಿಸುವುದಕ್ಕೆ ಉಪಯೋಗಿಸಿದ ಪದ – ನಿಂದು ಮೈಯಿಕ್ಕಿದರು ಕರಗಳ ಮುಗಿದು