ಪದ್ಯ ೩೧: ಶಕುನಿಯ ಅಂತ್ಯವು ಹೇಗಾಯಿತು?

ಬಳಿಕ ಕಾಲಾಳಾಗಿ ಖಡುಗವ
ಝಳಪಿಸುತ ಬರೆ ಶಕ್ತಿಯಲಿ ಕೈ
ಚಳಕ ಮಿಗೆ ಸಹದೇವನಿಟ್ಟನು ಸುಬಲನಂದನನ
ಖಳನೆದೆಯನೊದೆದಪರಭಾಗಕೆ
ನಿಲುಕಿತದು ಗಾಂಧಾರಬಲ ಕಳ
ವಳಿಸೆ ಸುಳಿದನು ಶಕುನಿ ಸುರತರುಣಿಯರ ತೋಳಿನಲಿ (ಗದಾ ಪರ್ವ, ೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ಶಕುನಿಯು ಕತ್ತಿಯನ್ನು ಝಳಪಿಸುತ್ತಾ ಕಾಲಾಳಾಗಿ ಸಹದೇವನ ಮೇಲೆ ಹೋಗಲು, ಸಹದೇವನು ಶಕುನಿಯ ಮೇಲೆ ಶಕ್ತಿಯನ್ನು ಪ್ರಯೋಗಿಸಲು, ಅದು ಶಕುನಿಯ ಎದೆಯನ್ನು ಹೊಕ್ಕು ಬೆನ್ನಿನಲ್ಲಿ ಕಾಣಿಸಿಕೊಂಡಿತು. ಶಕುನಿಯು ಅಪ್ಸರೆಯರ ತೋಳಿನಲ್ಲಿ ಸುಳಿದನು. ಗಾಂಧಾರ ಬಲವು ಕಳವಳಗೊಂಡಿತು.

ಅರ್ಥ:
ಬಳಿಕ: ನಂತರ; ಕಾಲಾಳು: ಸೈನಿಕ; ಖಡುಗ: ಕತ್ತಿ; ಝಳಪಿಸು: ಹೆದರಿಸು, ಬೀಸು; ಬರೆ: ತಿದ್ದು; ಶಕ್ತಿ: ಬಲ; ಕೈಚಳಕ: ಚಾಣಾಕ್ಷತನ; ಮಿಗೆ: ಅಧಿಕ; ನಂದನ: ಮಗ; ಖಳ: ದುಷ್ಟ; ಎದೆ: ಉರ; ಒದೆ: ನೂಕು; ಅಪರಭಾಗ: ಹಿಂಭಾಗ; ನಿಲುಕು: ನಿಲ್ಲು; ಕಳವಳ: ಗೊಂದಲ; ಸುಳಿ: ಆವರಿಸು, ಮುತ್ತು; ಸುರತರುಣಿ: ಅಪ್ಸರೆ; ತೋಳು: ಬಾಹು;

ಪದವಿಂಗಡಣೆ:
ಬಳಿಕ +ಕಾಲಾಳಾಗಿ +ಖಡುಗವ
ಝಳಪಿಸುತ +ಬರೆ +ಶಕ್ತಿಯಲಿ +ಕೈ
ಚಳಕ+ಮಿಗೆ +ಸಹದೇವನಿಟ್ಟನು+ ಸುಬಲ+ನಂದನನ
ಖಳನ್+ಎದೆಯನ್+ಒದೆದ್+ಅಪರಭಾಗಕೆ
ನಿಲುಕಿತದು +ಗಾಂಧಾರಬಲ+ ಕಳ
ವಳಿಸೆ +ಸುಳಿದನು +ಶಕುನಿ +ಸುರತರುಣಿಯರ +ತೋಳಿನಲಿ

ಅಚ್ಚರಿ:
(೧) ಸತ್ತನು ಎಂದು ಹೇಳುವ ಪರಿ – ಸುಳಿದನು ಶಕುನಿ ಸುರತರುಣಿಯರ ತೋಳಿನಲಿ
(೨) ಪದದ ರಚನೆ – ಖಳನೆದೆಯನೊದೆದಪರಭಾಗಕೆ
(೩) ಶಕುನಿ, ಸುಬಲನಂದನ – ಶಕುನಿಯನ್ನು ಕರೆದ ಪರಿ