ಪದ್ಯ ೪೬: ದ್ರೋಣನು ಕೌರವನಿಗೆ ಏನು ಕೊಟ್ಟನು?

ಆದಡೆಲೆ ಭೂಪಾಲ ನರನೊಳು
ಕಾದಲೀಶಂಗರಿದು ನೀನಿದಿ
ರಾದಡಪಜವಾಗದಿದ್ದರೆ ನಮ್ಮ ಪುಣ್ಯವದು
ಕಾದಲಾಪರೆ ಮಗನೆ ಪರರಿಗೆ
ಭೇದಿಸುವರಳವಲ್ಲ ಕವಚವ
ನಾದಿಯದು ಕೊಳ್ಳೆಂದು ಕೊಟ್ಟನು ಗವಸಣಿಗೆದೆಗೆದು (ದ್ರೋಣ ಪರ್ವ, ೧೦ ಸಂಧಿ, ೪೬ ಪದ್ಯ)

ತಾತ್ಪರ್ಯ:
ದ್ರೋಣನು ಉತ್ತರಿಸುತ್ತಾ, ದೊರೆಯೇ, ಅರ್ಜುನನೊಡನೆ ಕಾದಲು ಶಿವನಿಗೂ ಆಗುವುದಿಲ್ಲ, ನಿನಗೆ ಸೋಲಾಗದಿದ್ದರೆ ನಮ್ಮ ಪುಣ್ಯ, ಇಷ್ಟು ಹೇಳಿದರೂ ನೀನು ಕಾದಲು ಹೊರಟರೆ, ಈ ಅನಾದಿಯಾದ ಕವಾವನ್ನು ತೆಗೆದುಕೋ, ಇದನ್ನು ಮುರಿಯಲು ಬೇರಾರಿಗೂ ಸಾಧ್ಯವಿಲ್ಲ ಎಂದು ಹೇಳಿ ಮುಚ್ಚಿದ್ದ ಗವಸಣಿಗೆಯನ್ನು ತೆಗೆದು ದುರ್ಯೋಧನನಿಗೆ ಕವಚವನ್ನು ಕೊಟ್ಟನು.

ಅರ್ಥ:
ಭೂಪಾಲ: ರಾಜ; ನರ: ಅರ್ಜುನ; ಕಾದು: ಹೋರಾಡು; ಈಶ: ಶಿವ; ಅರಿ: ತಿಳಿ; ಇದಿರು: ಎದುರು; ಅಪಜ: ಸೋಲು; ಪುಣ್ಯ: ಸದಾಚಾರ; ಮಗ: ಸುತ; ಪರರು: ಅನ್ಯರು; ಭೇದಿಸು: ಛಿದ್ರಪಡಿಸು; ಕವಚ: ಹೊದಿಕೆ; ಅನಾದಿ: ಮೊದಲು ಕೊನೆಯಿಲ್ಲದ; ಕೊಳ್ಳು: ಪಡೆ; ಕೊಡು: ನೀಡು; ಗವಸಣಿಗೆ: ಆನೆಯ ಹೊದಿಕೆ;

ಪದವಿಂಗಡಣೆ:
ಆದಡ್+ಎಲೆ+ ಭೂಪಾಲ +ನರನೊಳು
ಕಾದಲ್+ಈಶಂಗ್+ಅರಿದು +ನೀನ್+ಇದಿ
ರಾದಡ್+ಅಪಜವಾಗದಿದ್ದರೆ +ನಮ್ಮ +ಪುಣ್ಯವದು
ಕಾದಲಾಪರೆ +ಮಗನೆ +ಪರರಿಗೆ
ಭೇದಿಸುವರಳವಲ್ಲ +ಕವಚವ್
ಅನಾದಿಯದು +ಕೊಳ್ಳೆಂದು +ಕೊಟ್ಟನು +ಗವಸಣಿಗೆ+ತೆಗೆದು

ಅಚ್ಚರಿ:
(೧) ಅರ್ಜುನನ ಪರಾಕ್ರಮ – ನರನೊಳುಕಾದಲೀಶಂಗರಿದು

ಪದ್ಯ ೫೫: ಭಗದತ್ತನು ಯಾವ ಅಸ್ತ್ರವನ್ನು ತೆಗೆದನು?

ಅನಿತು ಶರವನು ಕಡಿದು ಭಗದ
ತ್ತನ ಧನುವನಿಕ್ಕಡಿಗಡಿಯೆ ಕಂ
ಗನೆ ಕನಲಿ ಗವಸಣಿಗೆಯಿಂದುಗಿದನು ನಿಜಾಯುಧವ
ದಿನಪ ಕೋಟಿಯ ರಶ್ಮಿಯನು ತುದಿ
ಮೊನೆಯೊಳುಗುಳುವ ಬಾಯಿ ಧಾರೆಯ
ತನಿಯುರಿಯ ತೆಕ್ಕೆಯಲಿ ಥಳಥಳಿಸುವ ಮಹಾಂಕುಶವ (ದ್ರೋಣ ಪರ್ವ, ೩ ಸಂಧಿ, ೫೫ ಪದ್ಯ)

ತಾತ್ಪರ್ಯ:
ಅರ್ಜುನನು ಅವಿಷ್ಟೂ ಬಾಣಗಳನ್ನು ತುಂಡುಮಾಡಿ ಭಗದತ್ತನ ಬಿಲ್ಲನ್ನು ತುಂಡು ಮಾಡಿದನು. ಭಗದತ್ತ ಕಂಗನೆ ಕೆರಳಿ ಮುಸುಕಿನಲ್ಲಿಟ್ಟಿದ್ದ ತನ್ನ ಆಯುಧವೊಂದನ್ನು ತೆಗೆದನು. ಆ ಮಹಾ ಅಂಕುಶದ ಮೊನೆಯಿಂದ ಸೂರ್ಯಕೋಟಿ ಪ್ರಕಾಶವು ಹೊರ ಹೊಮ್ಮುತ್ತಿತ್ತು. ಸುತ್ತಲೂ ಉರಿಯ ತೆಕ್ಕೆಗಳೇಳುತ್ತಿದ್ದವು.

ಅರ್ಥ:
ಅನಿತು: ಸ್ವಲ್ಪ; ಶರ: ಬಾಣ; ಕಡಿ: ಕತ್ತರಿಸು; ಧನು: ಬಿಲ್ಲು; ಇಕ್ಕಡಿ; ಕಂಗನೆ: ಅಧಿಕವಾಗಿ; ಕನಲು: ಬೆಂಕಿ, ಉರಿ; ಗವಸಣಿಗೆ: ಮುಸುಕು; ಉಗಿ: ಹೊರಹಾಕು; ಆಯುಧ: ಶಸ್ತ್ರ; ದಿನಪ: ರವಿ; ಕೋಟಿ: ಅಸಂಖ್ಯಾತ; ರಶ್ಮಿ: ಕಿರಣ; ತುದಿ: ಕೊನೆ; ಮೊನೆ: ಹರಿತವಾದ; ಧಾರೆ: ವರ್ಷ; ತನಿ: ಹೆಚ್ಚಾಗು; ತೆಕ್ಕೆ: ಗುಂಪು; ಥಳಥಳಿ: ಹೊಳೆ; ಅಂಕುಶ:ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ;

ಪದವಿಂಗಡಣೆ:
ಅನಿತು +ಶರವನು+ ಕಡಿದು +ಭಗದ
ತ್ತನ+ ಧನುವನ್+ಇಕ್ಕಡಿ+ಕಡಿಯೆ +ಕಂ
ಗನೆ +ಕನಲಿ +ಗವಸಣಿಗೆಯಿಂದ್+ಉಗಿದನು +ನಿಜಾಯುಧವ
ದಿನಪ +ಕೋಟಿಯ +ರಶ್ಮಿಯನು +ತುದಿ
ಮೊನೆಯೊಳ್+ಉಗುಳುವ +ಬಾಯಿ +ಧಾರೆಯ
ತನಿ+ಉರಿಯ +ತೆಕ್ಕೆಯಲಿ +ಥಳಥಳಿಸುವ+ ಮಹಾಂಕುಶವ

ಅಚ್ಚರಿ:
(೧) ಆಯುಧದ ಪ್ರಕಾಶ – ದಿನಪ ಕೋಟಿಯ ರಶ್ಮಿಯನು ತುದಿಮೊನೆಯೊಳುಗುಳುವ ಬಾಯಿ

ಪದ್ಯ ೯: ಇಂದ್ರನು ಕರ್ಣನಿಗೆ ಏನನ್ನು ನೀಡಿದನು?

ಮೆಚ್ಚಿದೆನು ರವಿಸುತನೆ ನೀ ಮನ
ಮೆಚ್ಚಿದುದ ವರಿಸೆನಲು ತಾ ನೆನೆ
ದಚ್ಚರಿಯ ಬೇಡಿದನು ಶಕ್ತಿಯನೀವುದೆನಗೆನಲು
ಬಿಚ್ಚಿಗವಸಣಿಗೆಯಲಿ ತನ್ನಯ
ನಚ್ಚಿನಾಯುಧವನ್ನು ಕರ್ಣನ
ನಿಚ್ಚಟದ ಮನವೈದೆ ಹರುಷದಿ ಕೊಟ್ಟನಮರೇಂದ್ರ (ಅರಣ್ಯ ಪರ್ವ, ೨೩ ಸಂಧಿ, ೯ ಪದ್ಯ)

ತಾತ್ಪರ್ಯ:
ಎಲೈ ಕರ್ಣನೇ ನಿನ್ನ ಧೈರ್ಯ ಮತ್ತು ದಾನಕ್ಕೆ ನಾನು ಮೆಚ್ಚಿದ್ದೇನೆ, ನೀನು ಬಯಸಿದುದನ್ನು ಕೇಳು ಎಂದು ದೇವೇಂದ್ರನು ಹೇಳಲು, ಕರ್ಣನು ತನ್ನ ತಂದೆ ಸೂರ್ಯದೇವನು ಹೇಳಿದ ಮಾತುಗಳು ನೆನಪಾಗಿ, ಎಲೈ ದೇವ ನನಗೆ ಶಕ್ತಿಯನ್ನು ನೀಡು ಎಂದು ಕೇಳಲು, ಇಂದ್ರನು ತನ್ನ ನೆಚ್ಚಿನ ಶಕ್ತ್ಯಾಯುಧವನ್ನು ಅದರ ಒರೆಯಿಂದ ತೆಗೆದು ವೀರ ಕರ್ಣನಿಗೆ ಸಂತೋಷದಿಂದ ನೀಡಿದನು.

ಅರ್ಥ:
ಮೆಚ್ಚು: ಹೊಗಳು, ಪ್ರಶಂಶಿಸು; ರವಿಸುತ: ಸೂರ್ಯನ ಮಗ; ಮನ: ಮನಸ್ಸು; ವರಿಸು: ಅಂಗೀಕರಿಸು; ನೆನೆ: ಜ್ಞಾಪಿಸಿಕೋ; ಅಚ್ಚರಿ: ಆಶ್ಚರ್ಯ; ಬೇಡು: ಕೇಳು; ಶಕ್ತಿ: ಬಲ; ಈವುದು: ನೀಡು; ಬಿಚ್ಚು: ತೆರೆ; ನಚ್ಚು: ಹತ್ತಿರ, ಪ್ರಿಯ; ಆಯುಧ: ಶಸ್ತ್ರ; ನಿಚ್ಚಟ: ಕಪಟವಿಲ್ಲದುದು; ಇಚ್ಛೆ: ಆಸೆ; ಮನ: ಮನಸ್ಸು; ಹರುಷ: ಸಂತೋಷ; ಅಮರೇಂದ್ರ: ಇಂದ್ರ; ಅಮರ: ಸುರರು; ಗವಸಣಿಗೆ: ಒರೆ, ಶಸ್ತ್ರಕೋಶ;

ಪದವಿಂಗಡಣೆ:
ಮೆಚ್ಚಿದೆನು+ ರವಿಸುತನೆ+ ನೀ +ಮನ
ಮೆಚ್ಚಿದುದ +ವರಿಸೆನಲು +ತಾ +ನೆನೆದ್
ಅಚ್ಚರಿಯ +ಬೇಡಿದನು +ಶಕ್ತಿಯನ್+ಈವುದ್+ಎನಗ್+ಎನಲು
ಬಿಚ್ಚಿ+ಗವಸಣಿಗೆಯಲಿ+ ತನ್ನಯ
ನಚ್ಚಿನ್+ಆಯುಧವನ್ನು +ಕರ್ಣನ
ನಿಚ್ಚಟದ +ಮನವ್+ಐದೆ +ಹರುಷದಿ+ ಕೊಟ್ಟನ್+ಅಮರೇಂದ್ರ

ಅಚ್ಚರಿ:
(೧) ಇಂದ್ರನು ಶಸ್ತ್ರವನ್ನು ನೀಡಿದ ಪರಿ – ನಿಚ್ಚಟದ ಮನವೈದೆ ಹರುಷದಿ ಕೊಟ್ಟನಮರೇಂದ್ರ

ಪದ್ಯ ೨೪: ಪಾರ್ಥನು ಪಾಂಡವರಿಗೆ ಯಾವ ಆಭರಣವನ್ನು ತೊಡಿಸಿದನು?

ಬಿಗಿದ ಗವಸಣಿಗೆಯಲಿ ಸೂರ್ಯನ
ನುಗಿವವೋಲ್ ಮಾಣಿಕ್ಯ ಮಣಿರ
ಶ್ಮಿಗಳ ರಹಿರಂಜಿಸೆ ಸುರೇಶ್ವರನಿತ್ತ ಭೂಷಣವ
ತೆಗೆತೆಗೆದು ಯಮನಂದನಂಗೋ
ಲಗಿಸಿ ಭೀಮಂಗಿತ್ತು ನಕುಲಾ
ದಿಗಳ ಮೈಯಲಿ ತೊಡಿಸಿದನು ಕೈಯಾರೆ ಕಲಿಪಾರ್ಥ (ಅರಣ್ಯ ಪರ್ವ, ೧೨ ಸಂಧಿ, ೨೪ ಪದ್ಯ)

ತಾತ್ಪರ್ಯ:
ಮುಸುಕಿನಿಂದ ಸೂರ್ಯನನ್ನು ತೆಗೆದಂತೆ, ಮುತ್ತು ಮಾಣಿಕ್ಯಗಳ ಹೊಳಪಿನಿಂದ ರಂಜಿಸುವ ಭೂಷಣಗಳನ್ನು ಅರ್ಜುನನು ತೆಗೆದನು. ದೇವೇಂದ್ರನು ಕಳಿಸಿದ ಆ ಭೂಷಣಗಳನ್ನು ಧರ್ಮಜ, ಭೀಮನಿಗೆ ನೀಡಿ, ನಕುಲನೇ ಮೊದಲಾದವರಿಗೆ ತನ್ನ ಕೈಯಿಂದಲೇ ಧರಿಸಿದನು.

ಅರ್ಥ:
ಬಿಗಿ: ಬಂಧಿಸು; ಗವಸಣಿಗೆ: ಮುಸುಕು, ಮರೆ; ಸೂರ್ಯ: ರವಿ; ಉಗಿ:ಹೊರಕ್ಕೆ ತೆಗೆ; ಮಾಣಿಕ್ಯ: ಬೆಲೆಬಾಳುವ ಮಣಿ, ಕೆಂಪು ಹರಳು; ಮಣಿ: ರತ್ನ; ರಶ್ಮಿ: ಕಾಂತಿ; ರಹಿ:ಪ್ರಕಾರ, ಸಡಗರ; ರಂಜಿಸು: ಆನಂದಿಸು; ಸುರೇಶ್ವರ: ಇಂದ್ರ; ಭೂಷಣ: ಆಭರಣ; ತೆಗೆ: ಹೊರತರು; ನಂದನ: ಮಗ; ಓಲಗಿಸು: ಸೇವಿಸು; ಆದಿ: ಮುಂತಾದ; ಮೈ: ತನು; ತೊಡಿಸು: ಧರಿಸು; ಕಲಿ: ಶೂರ;

ಪದವಿಂಗಡಣೆ:
ಬಿಗಿದ +ಗವಸಣಿಗೆಯಲಿ +ಸೂರ್ಯನನ್
ಉಗಿವವೋಲ್ +ಮಾಣಿಕ್ಯ+ ಮಣಿ+ರ
ಶ್ಮಿಗಳ +ರಹಿ+ರಂಜಿಸೆ +ಸುರೇಶ್ವರನಿತ್ತ +ಭೂಷಣವ
ತೆಗೆತೆಗೆದು+ ಯಮನಂದನಂಗ್
ಓಲಗಿಸಿ +ಭೀಮಂಗಿತ್ತು+ ನಕುಲಾ
ದಿಗಳ+ ಮೈಯಲಿ +ತೊಡಿಸಿದನು +ಕೈಯಾರೆ +ಕಲಿಪಾರ್ಥ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಿಗಿದ ಗವಸಣಿಗೆಯಲಿ ಸೂರ್ಯನನುಗಿವವೋಲ್