ಪದ್ಯ ೭: ರಣವಾದ್ಯಗಳ ಶಬ್ದವು ಹೇಗೆ ಹೊಮ್ಮಿದವು?

ಉದಯವಾಗದ ಮುನ್ನ ಕಳನೊಳು
ಹೊದರುಗಟ್ಟಿದ ವೈರಿಸೇನೆಯ
ಹದನಿವರ ಪಾಳಯಕೆ ಬಂದುದು ದಳದ ಕಳಕಳಿಕೆ
ಸದೆದುದನಿಬರ ಕಿವಿಯನೊಡೆ ತುಂ
ಬಿದವು ನಿಸ್ಸಾಳೌಘ ದಿಕ್ಕಿನ
ತುದಿಯ ತಿವಿದವು ಮೀರಿ ಗಳಹುವ ಗೌರುಗಹಳೆಗಳು (ಭೀಷ್ಮ ಪರ್ವ, ೮ ಸಂಧಿ, ೭ ಪದ್ಯ)

ತಾತ್ಪರ್ಯ:
ಸೂರ್ಯನು ಇನ್ನೂ ಉದಯವಾಗದ ಮುಂಚೆಯೇ ರಣರಂಗದಲ್ಲಿ ವೈರಿ ಸೈನ್ಯವು ಹೊಕ್ಕ ಸುದ್ದಿ ನಮ್ಮವರ ಪಾಳಯಕ್ಕೆ ರಣವಾದ್ಯಗಳಾದ ನಿಸ್ಸಾಳ, ಕಹಳೆಗಳ ಸದ್ದಿನಿಂದ ತಿಳಿಯಿತು. ಆ ಶಬ್ದವು ಅಷ್ಟೂ ಜನರ ಕಿವಿಗಳನೊಡೆದು ಎಲ್ಲಾ ದಿಕ್ಕುಗಳನ್ನು ಆವರಿಸಿದವು.

ಅರ್ಥ:
ಉದಯ: ಹುಟ್ಟು; ಮುನ್ನ: ಮೊದಲು; ಕಳ: ರಣರಂಗ; ಹೊದರು: ಗುಂಪು, ಸಮೂಹ; ವೈರಿ: ಶತ್ರು; ಸೇನೆ: ಸೈನ್ಯ; ಹದ: ಸರಿಯಾದ ಸ್ಥಿತಿ; ಪಾಳಯ: ಬಿಡಾರ; ಬಂದು: ಆಗಮಿಸು; ದಳ: ಸೈನ್ಯ; ಕಳಕಳಿ: ಉತ್ಸಾಹ; ಸದೆ: ಹೊಡಿ, ಬಡಿ; ಕೊಲ್ಲು; ಅನಿಬರು: ಅಷ್ಟು ಜನ; ಕಿವಿ: ಕರ್ಣ; ಒಡೆ: ಚೂರುಮಾದು; ತುಂಬು: ಆವರಿಸು; ನಿಸ್ಸಾಳ: ಚರ್ಮವಾದ್ಯ; ಔಘ: ಗುಂಪು, ಸಮೂಹ; ದಿಕ್ಕು: ದಿಶೆ; ತುದಿ: ಅಗ್ರ, ಮೇಲ್ಭಾಗ; ತಿವಿ: ಚುಚ್ಚು; ಮೀರು: ಹೆಚ್ಚಾಗು; ಗಳಹು:ಪ್ರಲಾಪಿಸು; ಗೌರು:ಕರ್ಕಶ ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ;

ಪದವಿಂಗಡಣೆ:
ಉದಯವಾಗದ +ಮುನ್ನ +ಕಳನೊಳು
ಹೊದರುಗಟ್ಟಿದ +ವೈರಿ+ಸೇನೆಯ
ಹದನ್+ಇವರ+ ಪಾಳಯಕೆ +ಬಂದುದು +ದಳದ +ಕಳಕಳಿಕೆ
ಸದೆದುದ್+ಅನಿಬರ +ಕಿವಿಯನ್+ಒಡೆ +ತುಂ
ಬಿದವು +ನಿಸ್ಸಾಳ+ಔಘ +ದಿಕ್ಕಿನ
ತುದಿಯ +ತಿವಿದವು +ಮೀರಿ +ಗಳಹುವ+ ಗೌರು+ಕಹಳೆಗಳು

ಅಚ್ಚರಿ:
(೧) ಶಬ್ದದ ತೀವ್ರತೆ – ಸದೆದುದನಿಬರ ಕಿವಿಯನೊಡೆ ತುಂಬಿದವು ನಿಸ್ಸಾಳೌಘ ದಿಕ್ಕಿನ ತುದಿಯ ತಿವಿದವು

ಪದ್ಯ ೧೦: ಕೌರವರನ್ನು ಖೇಚರರಿಂದ ಯಾರು ರಕ್ಷಿಸಿದರು?

ಹಿಂದೆ ಗಳಹುವನಿವನು ಬಾಯಿಗೆ
ಬಂದ ಪರಿಯಲಿ ಪಾಂಡುತನಯರ
ಕೊಂದನಾಗಳೆ ಕರ್ಣನಿನ್ನಾರೊಡನೆ ಸಂಗ್ರಾಮ
ಹಿಂದೆ ಹಮ್ಮಿದ ಸಮರದೊಳು ನಡೆ
ತಂದು ಖೇಚರನಡಸಿ ಕಟ್ಟಿದ
ಡಂದು ನಿನ್ನನು ಬಿಡಿಸಿದವನರ್ಜುನನೊ ರವಿಸುತನೊ (ಭೀಷ್ಮ ಪರ್ವ, ೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ದ್ರೋಣರು ತಮ್ಮ ಮಾತನ್ನು ಮುಂದುವರೆಸುತ್ತಾ, ಈ ಕರ್ಣನು ಬೆನ್ನ ಹಿಂದೆ ಬಾಯಿಗೆ ಬಂದಂತೆ ಬೊಗಳುತ್ತಾನೆ, ಕರ್ಣನು ಪಾಂಡವರನ್ನು ಆಗಲೇ ಕೊಂದುಬಿಟ್ಟಿರುವನಲ್ಲಾ, ಇನ್ನಾರ ಜೊತೆಗೆ ಯುದ್ಧಮಾಡುತ್ತಾನೆ? ಹಿಂದೆ ಘೋಷಯಾತ್ರೆಯ ಸಮಯದಲ್ಲಿ ಗಂಧರ್ವನು ನಿನ್ನನ್ನು ಹೆಡೆಮುರಿಗೆ ಕಟ್ಟಿ ತೆಗೆದುಕೊಂಡು ಹೋದನಲ್ಲಾ, ಆಗ ನಿನ್ನನ್ನು ಬಿಡಿಸಿದವನು ಕರ್ಣನೋ ಅರ್ಜುನನೋ ಎಂದು ಕೇಳಿದರು.

ಅರ್ಥ:
ಹಿಂದೆ: ಮೊದಲು, ಪೂರ್ವದಲ್ಲಿ; ಗಳಹು: ಪ್ರಲಾಪಿಸು, ಹೇಳು; ಪರಿ: ರೀತಿ; ತನಯ: ಮಗ; ಕೊಂದು: ಸಾಯಿಸು; ಸಂಗ್ರಾಮ: ಯುದ್ಧ; ಹಮ್ಮು: ಅಹಂಕಾರ; ಸಮರ: ಯುದ್ಧ; ನಡೆ: ಚಲಿಸು; ಖೇಚರ: ಆಕಾಶದಲ್ಲಿ ಸಂಚರಿಸುವವನು; ಗಂಧರ್ವ; ಅಡಸು: ಆಕ್ರಮಿಸು, ಮುತ್ತು; ಕಟ್ಟು: ಬಂಧಿಸು; ಬಿಡಿಸು: ಕಳಚು, ಸಡಿಲಿಸು; ರವಿಸುತ: ಸೂರ್ಯನ ಮಗ (ಕರ್ಣ);

ಪದವಿಂಗಡಣೆ:
ಹಿಂದೆ +ಗಳಹುವನ್+ಇವನು +ಬಾಯಿಗೆ
ಬಂದ +ಪರಿಯಲಿ +ಪಾಂಡು+ತನಯರ
ಕೊಂದನ್+ಆಗಳೆ +ಕರ್ಣನ್+ಇನ್ನಾರೊಡನೆ +ಸಂಗ್ರಾಮ
ಹಿಂದೆ +ಹಮ್ಮಿದ+ ಸಮರದೊಳು +ನಡೆ
ತಂದು +ಖೇಚರನ್+ಅಡಸಿ +ಕಟ್ಟಿದಡ್
ಅಂದು +ನಿನ್ನನು +ಬಿಡಿಸಿದವನ್+ಅರ್ಜುನನೊ +ರವಿಸುತನೊ

ಅಚ್ಚರಿ:
(೧) ಸಂಗ್ರಾಮ, ಸಮರ – ಸಮನಾರ್ಥಕ ಪದ