ಪದ್ಯ ೩೩: ದ್ರೌಪದಿಯು ಮುಂದಾಗುವ ಅನುಹುತದ ಬಗ್ಗೆ ಹೇಗೆ ಹೇಳಿದಳು?

ಕುಲದೊಳೊಬ್ಬನು ಜನಿಸಿ ವಂಶವ
ನಳಿದನಕಟಕಟೆಂಬ ದುರ್ಯಶ
ವುಳಿವುದಲ್ಲದೆ ಲೇಸಗಾಣೆನು ಬರಿದೆ ಗಳಹದಿರು
ಕೊಲೆಗಡಿಕೆಯೋ ಪಾಪಿ ಹೆಂಗಸು
ಹಲಬರನು ಕೊಲಿಸಿದಳು ಸುಡಲೆಂ
ದಳಲುವರು ನಿನ್ನಖಿಳರಾಣಿಯರೆಂದಳಿಂದುಮುಖಿ (ವಿರಾಟ ಪರ್ವ, ೨ ಸಂಧಿ, ೩೩ ಪದ್ಯ)

ತಾತ್ಪರ್ಯ:
ವೃಥಾ ಮಾತಾಡಬೇಡ, ಅಯ್ಯೋ ಇವನೊಬ್ಬನು ಹುಟ್ಟಿ ವಂಶವನ್ನೇ ನಾಶ ಮಾಡಿದನೆಂಬ ಅಪಕೀರ್ತಿ ನಿನಗೆ ಬರುವುದು. ಅದು ಶಾಶ್ವತವಾಗಿ ಉಳಿಯುವುದು, ನಿನಗೊಬ್ಬನಿಗೇ ಅಪಕೀರ್ತಿ ಬಾರದು, ಈ ಪಾಪಿ ಹೆಂಗಸು ಕೊಲೆಗಡುಕಿ, ಇವಳಿಂದ ಹಲವರು ಸತ್ತರು, ಇವಳನ್ನು ಸುಡಬೇಕು ಎಂದು ನಿನ್ನ ರಾಣಿಯರು ಅಳುತ್ತಾರೆ, ಇದು ಖಂಡಿತ, ಎಂದು ದ್ರೌಪದಿಯು ಕೀಚಕನಿಗೆ ಹೇಳಿದಳು.

ಅರ್ಥ:
ಕುಲ: ವಂಶ; ಜನಿಸು: ಹುಟ್ಟು; ವಂಶ: ಅನ್ವಯ; ಅಳಿ: ನಾಶ; ಅಕಟಕಟ: ಅಯ್ಯೋ; ದುರ್ಯಶ: ಅಪಜಯ, ಕುಖ್ಯಾತಿ; ಉಳಿ: ಇರು; ಲೇಸು: ಒಳಿತು; ಕಾಣು: ತೋರು; ಬರಿ: ಶೂನ್ಯ; ಗಳಹು: ಪ್ರಲಾಪಿಸು, ಹೇಳು; ಕೊಲೆ: ಸಾಯಿಸು; ಪಾಪಿ: ದುಷ್ಟ; ಹೆಂಗಸು: ಹೆಣ್ಣು; ಹಲಬರು: ಹಲವಾರು; ಸುಡು: ದಹಿಸು; ಅಳು: ರೋದಿಸು, ದುಃಖಿಸು; ಅಖಿಳ: ಎಲ್ಲಾ; ರಾಣಿ: ಅರಸಿ; ಇಂದುಮುಖಿ: ಚಂದ್ರನಂತಿರುವ ಮುಖ;

ಪದವಿಂಗಡಣೆ:
ಕುಲದೊಳ್+ಒಬ್ಬನು +ಜನಿಸಿ+ ವಂಶವನ್
ಅಳಿದನ್+ಅಕಟಕಟೆಂಬ+ ದುರ್ಯಶ
ಉಳಿವುದಲ್ಲದೆ +ಲೇಸ+ಕಾಣೆನು +ಬರಿದೆ+ ಗಳಹದಿರು
ಕೊಲೆಗಡಿಕೆಯೋ +ಪಾಪಿ +ಹೆಂಗಸು
ಹಲಬರನು +ಕೊಲಿಸಿದಳು +ಸುಡಲೆಂದ್
ಅಳಲುವರು +ನಿನ್ನ್+ಅಖಿಳ+ರಾಣಿಯರ್+ಎಂದಳ್+ಇಂದುಮುಖಿ

ಅಚ್ಚರಿ:
(೧) ಕೀಚಕನ ಸ್ಥಿತಿಯನ್ನು ವರ್ಣಿಸಿದ ಪರಿ – ಕುಲದೊಳೊಬ್ಬನು ಜನಿಸಿ ವಂಶವನಳಿದನಕಟಕಟೆಂಬ ದುರ್ಯಶವುಳಿವುದಲ್ಲದೆ ಲೇಸಗಾಣೆನು

ಪದ್ಯ ೨೫: ಧರ್ಮರಾಯನು ಕರ್ಣನನ್ನು ಹೇಗೆ ಜರಿದನು?

ಗಳಹದಿರು ಕೆಲಬಲದ ಹಂಗಿನ
ಬಳಕೆಯೇ ಫಡ ಸೂತಸುತ ಬಾ
ಳ್ಗೊಲೆಯ ಬಾಹಿರ ಬಿನುಗ ಬೆದರಿಸಿ ಬರಿದ ಬೆರತೆಯಲ
ಉಲುಕಿದರೆ ನಾಲಗೆಯ ತೊಡಬೆಯ
ಕಳಚುವೆನು ನಿಲ್ಲೆನುತಲಾ ಕುಂ
ಡಳಿತ ಕಾರ್ಮುಕನೆಚ್ಚು ಕಡಿದನು ಕರ್ಣನಂಬುಗಳ (ಕರ್ಣ ಪರ್ವ, ೧೧ ಸಂಧಿ, ೨೫ ಪದ್ಯ)

ತಾತ್ಪರ್ಯ:
ಕರ್ಣನು ಏಳು ಶೂರನಾಗು ಎಂದು ಹೇಳಿದ ನಂತರ ಯುಧಿಷ್ಠಿರನು ಕೋಪಗೊಂಡು, ಸುಮ್ಮನೆ ಪ್ರಲಾಪಿಸದಿರು ಛಿ ಸೂತಪುತ್ರ, ಇನ್ನೊಬ್ಬರ ಹಂಗನ್ನು ಬಳಸಿಕೊಂಡು ಬದುಕುವವನೇ, ಪರಾಕ್ರಮ ವಿಹೀನರಾಗಿ ತಮ್ಮ ಬಾಳನ್ನೇ ಕೊಂದುಕೊಂಡ ಕ್ಷುದ್ರರನ್ನು ಬೆದರಿಸಿ ಹೊಡೆದು ವೃಥಾ ಗರ್ವವನ್ನು ತೋರಿಸುತ್ತಿರುವೆ? ಇನ್ನೊಂದು ಮಾತನಾಡಿದರೆ ನಿನ್ನ ನಾಲಗೆಯನ್ನು ಬೇರು ಸಹಿತ ಕಿತ್ತು ಹಾಕುತ್ತೇನೆ ಎಂದು ತನ್ನ ಬಿಲ್ಲನ್ನು ವೃತಾಕಾರಕ್ಕೆ ಬಾಗುವಂತೆ ಎಳೆದು ಕರ್ಣನ ಬಾಣಗಳನ್ನು ಕಡಿದನು.

ಅರ್ಥ:
ಗಳಹು: ಪ್ರಲಾಪಿಸು, ಹೇಳು; ಕೆಲ: ಸ್ವಲ್ಪ; ಬಲ: ಸೈನ್ಯ; ಹಂಗು: ದಾಕ್ಷಿಣ್ಯ, ಆಭಾರ; ಬಳಕೆ: ಉಪಯೋಗಿಸುವಿಕೆ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಸೂತಸುತ: ಸಾರಥಿಯ ಮಗ (ಕರ್ಣ); ಬಾಳು: ಜೀವನ; ಕೊಲೆ: ಸಾವು; ಬಾಹಿರ: ಹೊರಗಿನವ; ಬಿನುಗು:ಅಲ್ಪವ್ಯಕ್ತಿ, ಕ್ಷುದ್ರವ್ಯಕ್ತಿ; ಬೆದರಿಸು: ಹೆದರಿಸು; ಬರಿ: ಸುಮ್ಮನೆ, ಕೇವಲ; ಬೆರೆ: ಅಹಂಕಾರಪಡು; ಉಲುಕು:ಅಲ್ಲಾಡು, ನಡುಗು; ನಾಲಗೆ: ಜಿಹ್ವೆ; ತೊಡಬೆ: ಮೂಲ, ಬುಡ; ಕಳಚು: ಕೀಳು, ಕಿತ್ತುಹಾಕು; ನಿಲ್ಲು: ತಡೆ; ಕುಂಡಳಿತ: ವೃತ್ತಾಕಾರ; ಕಾರ್ಮುಕ: ಬಿಲ್ಲು; ಎಚ್ಚು: ಬಾಣಬಿಡು; ಕಡಿ: ಸೀಳು; ಅಂಬು: ಬಾಣ;

ಪದವಿಂಗಡಣೆ:
ಗಳಹದಿರು +ಕೆಲಬಲದ +ಹಂಗಿನ
ಬಳಕೆಯೇ +ಫಡ +ಸೂತಸುತ +ಬಾಳ್
ಕೊಲೆಯ +ಬಾಹಿರ +ಬಿನುಗ +ಬೆದರಿಸಿ+ ಬರಿದ +ಬೆರತೆಯಲ
ಉಲುಕಿದರೆ+ ನಾಲಗೆಯ+ ತೊಡಬೆಯ
ಕಳಚುವೆನು +ನಿಲ್ಲ್+ಎನುತಲ್+ಆ+ ಕುಂ
ಡಳಿತ+ ಕಾರ್ಮುಕನ್+ಎಚ್ಚು+ ಕಡಿದನು +ಕರ್ಣನ್+ಅಂಬುಗಳ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಬಾಳ್ಗೊಲೆಯ ಬಾಹಿರ ಬಿನುಗ ಬೆದರಿಸಿ ಬರಿದ ಬೆರತೆಯಲ
(೨) ಕರ್ಣನನ್ನು ಬಯ್ಯುವ ಪದಗಳು – ಗಳಹದಿರು, ಫಡ, ಸೂತಸುತ, ಉಲುಕಿದರೆ ನಾಲಗೆಯ ತೊಡಬೆಯ, ಕಳಚುವೆನು, ನಿಲ್ಲು