ಪದ್ಯ ೨೧: ಧರ್ಮಜನು ಕೌರವನನ್ನು ಹೇಗೆ ಛೇಡಿಸಿದನು?

ಓಡಿ ಕೈದುವ ಹಾಯ್ಕಿ ಕಳನೊಳು
ಹೇಡಿಗರ ಹಿಡಿದಳುಕಿ ಬದುಕಿದ
ಗೂಡಿಹುದೆ ಗರುವಾಯಿಯಲಿ ಕಲ್ಪಾಂತಪರಿಯಂತ
ಓಡಿ ಪಾತಾಳವನು ಹೊಕ್ಕಡೆ
ಕೂಡೆ ಸಂಧಿಸಿ ನಿನ್ನ ಬೇಂಟೆಯ
ನಾಡದಿಹ ಠಾವುಂಟೆ ಕುರುಪತಿ ಕೈದುಗೊಳ್ಳೆಂದ (ಗದಾ ಪರ್ವ, ೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ಯುದ್ಧರಂಗದಲ್ಲಿ ಆಯುಧವನ್ನೆಸೆದು ಓಡಿ, ಹೇಡಿಗಳ ಮೇಲ್ಪಂಕ್ತಿಯಲ್ಲಿ ಬದುಕಿಕೊಂಡರೂ, ನಿನ್ನ ದೇಹವೇನು ಕಲ್ಪಾಂತರದವರೆಗೂ ಇರುತ್ತದೆಯೇ? ಈ ಕೊಳವಲ್ಲ, ನೀನು ಓಡಿಹೋಗಿ ಪಾತಾಳದಲ್ಲಿ ಅಡಗಿದ್ದರೂ ನಾವು ಬಂದು ನಿನ್ನನ್ನು ಹಿಡಿದು ಬೇಟೆಯಾಡದಂತಹ ಜಾಗವು ಎಲ್ಲಾದರೂ ಇದ್ದೀತೇ? ಕೌರವ ಬಾ, ಆಯುಧವನ್ನು ಹಿಡಿ ಎಂದು ಧರ್ಮಜನು ಕೌರವನನ್ನು ಛೇಡಿಸಿದನು.

ಅರ್ಥ:
ಓಡು: ಧಾವಿಸು; ಕೈದು: ಆಯುಧ; ಕಳ: ಯುದ್ಧರಂಗ; ಹೇಡಿ: ಅಂಜುಕುಳಿ, ಹೆದರುಪುಕ್ಕ; ಹಿಡಿ: ಗ್ರಹಿಸು; ಅಳುಕು: ಹೆದರು; ಬದುಕು: ಜೀವಿಸು; ಕೂಡು: ಜೋಡಿಸು; ಗರುವಾಯಿ: ದೊಡ್ಡತನ, ಠೀವಿ; ಕಲ್ಪಾಂತ: ಪ್ರಳಯ; ಪರಿ: ವರೆಗು; ಪಾತಾಳ: ಅಧೋಲೋಕ; ಹೊಕ್ಕು: ಸೇರು; ಸಂಧಿಸು: ಜೊತೆಗೂಡು; ಬೇಂಟೆ: ಬೇಟೆ, ಶಿಕಾರಿ, ಮೃಗವನ್ನು ಸಾಯಿಸುವುದು; ಠಾವು: ಎಡೆ, ಸ್ಥಳ;

ಪದವಿಂಗಡಣೆ:
ಓಡಿ +ಕೈದುವ +ಹಾಯ್ಕಿ +ಕಳನೊಳು
ಹೇಡಿಗರ +ಹಿಡಿದ್+ಅಳುಕಿ +ಬದುಕಿದ
ಕೂಡಿಹುದೆ+ ಗರುವಾಯಿಯಲಿ +ಕಲ್ಪಾಂತ+ಪರಿಯಂತ
ಓಡಿ +ಪಾತಾಳವನು +ಹೊಕ್ಕಡೆ
ಕೂಡೆ +ಸಂಧಿಸಿ+ ನಿನ್ನ +ಬೇಂಟೆಯನ್
ಆಡದಿಹ +ಠಾವುಂಟೆ +ಕುರುಪತಿ+ ಕೈದುಗೊಳ್ಳೆಂದ

ಅಚ್ಚರಿ:
(೧) ಪಾಂಡವರ ದೃಢ ನಿಶ್ಚಯ – ಓಡಿ ಪಾತಾಳವನು ಹೊಕ್ಕಡೆಕೂಡೆ ಸಂಧಿಸಿ ನಿನ್ನ ಬೇಂಟೆಯ
ನಾಡದಿಹ ಠಾವುಂಟೆ ಕುರುಪತಿ

ಪದ್ಯ ೨೦: ಭೀಮನ ರಥವನ್ನು ಯಾರು ತಡೆದರು?

ಓಡುವುದು ಗರುವಾಯಿಯೇ ಭಯ
ಬೇಡ ಭೂಮಿಪರೆನ್ನ ತೇರಿನ
ಕೂಡೆ ಗಡಣಿಸಿ ಸಾಕು ತಾರೆನು ನಿಮಗೆ ಕಾಳೆಗವ
ನೋಡಿ ನಿಮಿಷಕೆ ಭೀಮನಡಗಿನ
ಲೂಡುವೆನು ರಣಭೂತವನು ಭಯ
ಬೇಡೆನುತ್ತನಿಲಜನ ರಥವನು ತರುಬಿದನು ಕರ್ಣ (ದ್ರೋಣ ಪರ್ವ, ೧೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಆಗ ಕರ್ಣನು, ಓಡುವುದು ಗೌರವವೇ? ಹೆದರಬೇಡಿರಿ, ರಾಜರೆಲ್ಲಾ ನನ್ನ ರಥದ ಜೊತೆಗೆ ಬಂದು ಸೇರಿಕೊಳ್ಳಿ, ನೀವು ನೋಡುತ್ತಿರುವಂತೆ ನಿಮಿಷಮಾತ್ರದಲ್ಲಿ ಭೀಮನ ಮಾಂಸದಿಂದ ರಣಭೂತಗಳಿಗೆ ಊಟಮಾಡಿಸುತ್ತೇನೆ. ಭಯ ಪಡಬೇಡಿರಿ ಎಂದು ಭೀಮನ ರಥವನ್ನು ತಡೆದನು.

ಅರ್ಥ:
ಓಡು: ಧಾವಿಸು; ಗರುವ: ಹಿರಿಯ, ಶ್ರೇಷ್ಠ, ಬಲಶಾಲಿ; ಭಯ: ಅಂಜಿಕೆ; ಬೇಡ: ತೊರೆ; ಭೂಮಿಪ: ರಾಜ; ತೇರು: ಬಂಡಿ; ಕೂಡು: ಜೋಡಿಸು; ಗಡಣ: ಗುಂಪು, ಸಮೂಹ; ಸಾಕು: ನಿಲ್ಲಿಸು; ತಾರು: ಬರೆಮಾಡು; ಕಾಳೆಗ: ಯುದ್ಧ; ನೋಡು: ವೀಕ್ಷಿಸು; ನಿಮಿಷ: ಕ್ಷಣ; ಅಡಗು: ಮಾಂಸ; ಊಡು: ಭಕ್ಷಿಸು; ರಣ: ಯುದ್ಧ; ಭೂತ: ಪಿಶಾಚಿ; ಅನಿಲಜ: ವಾಯುಪುತ್ರ (ಭೀಮ); ರಥ: ಬಂಡಿ; ತರುಬು: ತಡೆ, ನಿಲ್ಲಿಸು;

ಪದವಿಂಗಡಣೆ:
ಓಡುವುದು +ಗರುವಾಯಿಯೇ +ಭಯ
ಬೇಡ +ಭೂಮಿಪರೆನ್ನ+ ತೇರಿನ
ಕೂಡೆ +ಗಡಣಿಸಿ +ಸಾಕು +ತಾರೆನು +ನಿಮಗೆ +ಕಾಳೆಗವ
ನೋಡಿ +ನಿಮಿಷಕೆ +ಭೀಮನ್+ಅಡಗಿನಲ್
ಊಡುವೆನು +ರಣಭೂತವನು +ಭಯ
ಬೇಡೆನುತ್ತ್+ಅನಿಲಜನ +ರಥವನು +ತರುಬಿದನು +ಕರ್ಣ

ಅಚ್ಚರಿ:
(೧) ಕರ್ಣನು ಧೈರ್ಯವನ್ನು ತುಂಬುವ ಪರಿ – ಓಡುವುದು ಗರುವಾಯಿಯೇ ಭಯಬೇಡ

ಪದ್ಯ ೩೫: ಭೀಷ್ಮನು ಅರ್ಜುನನಿಗೆ ಹೇಗೆ ಉತ್ತರಿಸಿದನು?

ಖೋಡಿ ಮಾಡದಿರೆಲೆ ಕಿರೀಟಿ ವಿ
ಭಾಡಿಸುವುದರಿದೇ ದೊಠಾರಿಸಿ
ಯಾಡುವುದು ದೊರೆಗುಚಿತವೇ ಗರುವಾಯಿಗಂಗವಿದೆ
ನೋಡು ನೋಡಾದರೆ ಕಪರ್ದಿಯ
ಕೂಡೆ ನೀ ಹೊಯಿದಾಡಿ ಬಿಲ್ಲ ಸ
ಘಾಡನಹೆ ದಿಟ ಕಾದುಕೊಳ್ಳೆನುತೆಚ್ಚನಾ ಭೀಷ್ಮ (ಭೀಷ್ಮ ಪರ್ವ, ೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ಭೀಷ್ಮನು ಉತ್ತರಿಸುತ್ತಾ, ಅರ್ಜುನ, ಅನುಮಾನಿಸಬೇಡ, ಸೋಲಿಸುವುದೇನೂ ಕಷ್ಟವಲ್ಲ. ರಾಜರಾದವರು ಮೂದಲಿಸಿ ತಮ್ಮ ಅಭಿಮಾನವನ್ನು ಸಿದ್ಧಪಡಿಸಿಕೊಳ್ಳುವುದು ಉಚಿತವೇ? ಹಾಗಾದರೆ ನೋಡು, ನೀನು ಶಿವನೊಡನೆ ಹೊಯ್ದಾಡಿದ ಬಿಲ್ಲುಗಾರ, ನಿಜ, ಮಹಾವೀರ, ಸ್ವಲ್ಪ ಸಹಿಸಿಕೋ? ಎಂದು ಭೀಷ್ಮನು ಬಾಣಗಳನ್ನು ಬಿಟ್ಟನು.

ಅರ್ಥ:
ಖೋಡಿ: ದುರುಳತನ, ನೀಚತನ; ಕಿರೀಟಿ: ಅರ್ಜುನ; ವಿಭಾಡಿಸು: ನಾಶಮಾಡು; ಅರಿ: ತಿಳಿ; ದೊಠಾರ: ಶೂರ, ಕಲಿ; ದೊರೆ: ರಾಜ; ಉಚಿತ: ಸರಿಯಾದ; ಗರುವ: ಶ್ರೇಷ್ಠವಾದ, ಉತ್ತಮವಾದ; ನೋಡು: ವೀಕ್ಷಿಸು; ಕಪರ್ದಿ: ಜಟಾಜೂಟವುಳ್ಳವ-ಶಿವ; ಹೊಯಿದಾಡು: ಹೋರಾಡು; ಬಿಲ್ಲು: ಚಾಪು; ಘಾಡಿಸು: ವ್ಯಾಪಿಸು; ದಿಟ: ನಿಜ, ಸತ್ಯ; ಕಾದುಕೊಳ್ಳು: ಸಹಿಸಿಕೋ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಖೋಡಿ +ಮಾಡದಿರ್+ಎಲೆ +ಕಿರೀಟಿ +ವಿ
ಭಾಡಿಸುವುದ್+ಅರಿದೇ +ದೊಠಾರಿಸಿ
ಆಡುವುದು+ ದೊರೆಗ್+ಉಚಿತವೇ +ಗರುವಾಯಿಗ್+ಅಂಗವಿದೆ
ನೋಡು +ನೋಡ್+ಆದರೆ+ ಕಪರ್ದಿಯ
ಕೂಡೆ +ನೀ +ಹೊಯಿದಾಡಿ +ಬಿಲ್ಲ+ ಸ
ಘಾಡನಹೆ +ದಿಟ +ಕಾದುಕೊಳ್ಳೆನುತ್+ಎಚ್ಚನಾ +ಭೀಷ್ಮ

ಅಚ್ಚರಿ:
(೧) ಅರ್ಜುನನಿಗೆ ಉತ್ತರಿಸಿದ ಪರಿ – ಖೋಡಿ ಮಾಡದಿರೆಲೆ ಕಿರೀಟಿ ವಿಭಾಡಿಸುವುದರಿದೇ ದೊಠಾರಿಸಿ
ಯಾಡುವುದು ದೊರೆಗುಚಿತವೇ

ಪದ್ಯ ೧೭: ದೇವತೆಗಳೇಕೆ ಕೋಪಗೊಂಡರು?

ಕುದುರೆ ಕಂಗೆಟ್ಟವು ಮುರಾರಿಯ
ಹೃದಯ ಸಂಚಲವಾಯ್ತು ಗಾಲಿಗ
ಳದುರಿದುವು ಗರುವಾಯಿಗೆಟ್ಟನು ಮೇಲೆ ಹನುಮಂತ
ಹೆದರಿದರು ನಾಯಕರು ಪಾಂಡವ
ರದಟು ಮುರಿದುದು ಸುರರು ಚಿಂತಿಸಿ
ಕುದಿದರರ್ಜುನಪಕ್ಷಪಾತ ವ್ಯರ್ಥವಾಯ್ತೆಂದ (ಭೀಷ್ಮ ಪರ್ವ, ೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಶತ್ರುಗಳ ಬಾಣಪ್ರಯೋಗದಿಂದ ಅರ್ಜುನನ ರಥದ ಕುದುರೆಗಳು ಕಂಗೆಟ್ಟವು. ಶ್ರೀಕೃಷ್ಣನ ಹೃದಯವು ಬಡಿದುಕೊಂಡಿತು. ರಥದ ಗಾಲಿಗಳು ಅದುರಿದವು. ರಥದಲ್ಲಿದ್ದ ಹನುಮಮ್ತನು ಗಾಮ್ಭೀರ್ಯವನ್ನು ಕಳೆದುಕೊಂಡು ಒರಲಿದನು. ಪಾಂಡವರ ಪರಾಕ್ರಮ ಮುರಿದು ಪಾಂಡವ ನಾಯಕರು ಹೆದರಿದರು. ಯುದ್ಧವನ್ನು ನೋಡುತ್ತಿದ್ದ ದೇವತೆಗಳು ತಾವು ಅರ್ಜುನನ ಪಕ್ಷವನ್ನು ಹಿಡಿದುದು ವ್ಯರ್ಥವಾಯಿತೆಂದು ಮನಸ್ಸಿನಲ್ಲೇ ಕುದಿದರು.

ಅರ್ಥ:
ಕುದುರೆ: ಅಶ್ವ; ಕಂಗೆಡು: ಗಾಬರಿಯಾಗು; ಮುರಾರಿ: ಕೃಷ್ಣ; ಹೃದಯ: ಎದೆ; ಸಂಚಲ: ಚಲನೆ, ಚಾಂಚಲ್ಯ; ಗಾಲಿ: ಚಕ್ರ; ಉದುರು: ಕೆಳಗೆ ಬೀಳು; ಗರುವಾಯಿ: ದೊಡ್ಡತನ, ಠೀವಿ; ಕೆಡು: ಹಾಳು; ಹೆದರು: ಭಯಗೊಳ್ಳು; ನಾಯಕ: ಒಡೆಯ; ಅದಟು: ಪರಾಕ್ರಮ, ಶೌರ್ಯ; ಮುರಿ: ಸೀಳು; ಸುರ: ದೇವತೆ; ಚಿಂತಿಸು: ಯೋಚಿಸು; ಕುದಿ: ಕೋಪಗೊಳ್ಳು; ಪಕ್ಷ: ಗುಂಪು; ವ್ಯರ್ಥ: ನಿರುಪಯುಕ್ತತೆ;

ಪದವಿಂಗಡಣೆ:
ಕುದುರೆ +ಕಂಗೆಟ್ಟವು +ಮುರಾರಿಯ
ಹೃದಯ +ಸಂಚಲವಾಯ್ತು +ಗಾಲಿಗಳ್
ಅದುರಿದುವು+ ಗರುವಾಯಿಗೆಟ್ಟನು +ಮೇಲೆ +ಹನುಮಂತ
ಹೆದರಿದರು+ ನಾಯಕರು+ ಪಾಂಡವರ್
ಅದಟು +ಮುರಿದುದು +ಸುರರು+ ಚಿಂತಿಸಿ
ಕುದಿದರ್+ಅರ್ಜುನ+ಪಕ್ಷಪಾತ +ವ್ಯರ್ಥವಾಯ್ತೆಂದ

ಅಚ್ಚರಿ:
(೧) ಕಂಗೆಟ್ಟು, ಸಂಚಲ, ಅದುರು, ಹೆದರು, ಅದಟು, ಮುರಿ – ಆತಂಕವನ್ನು ವಿವರಿಸಲು ಬಳಸಿದ ಪದಗಳು

ಪದ್ಯ ೫: ಕೃಷ್ಣನು ಕುದುರೆಯನ್ನು ಹೇಗೆ ನಡೆಸಿದನು?

ಚಟುಳ ಹಯಖುರ ಖಂಡಿತೋರ್ವೀ
ನಿಟಿಲ ನಿರ್ಗತ ಬಹಳ ಧೂಳೀ
ಪಟಲ ಧೂಸರ ಸಕಲ ಜಗದಸುರಾರಿ ನಲವಿನಲಿ
ಪಟುಗತಿಯ ಗರುವಾಯಿಯಲಿ ಸಂ
ಘಟಿಸಿ ಹಯವನು ಸುಳಿಸಿದನು ಚೌ
ಪಟದೊಳೊಯ್ಯಾರಿಸುತ ಬೋಳಯಿಸಿದನು ಕಂದರವ (ಭೀಷ್ಮ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ರಥದ ಕುದುರೆಗಳ ಖುರಪಟಗಳಿಂದ ಎದ್ದ ಧೂಳು ಸುತ್ತಲೂ ಹಬ್ಬಿತು. ರಾಕ್ಷಾಸಾಂತಕನಾದ ಕೃಷ್ಣನು ಕುದುರೆಗಳ ಕತ್ತನ್ನು ಸವರಿ, ರಥವನ್ನು ಗಂಭೀರ ಗತಿಯಿಂದ ವೇಗವಾಗಿ ನಡೆಸಿದನು.

ಅರ್ಥ:
ಚಟುಳ: ವೇಗ, ತ್ವರಿತ; ಹಯ: ಕುದುರೆ; ಖುರ: ಕುದುರೆ ದನಕರುಗಳ ಕಾಲಿನ ಗೊರಸು; ಖಂಡಿತ: ನಿಶ್ಚಿತವಾಗಿ; ಊರ್ವಿ:ಭೂಮಿ; ನಿಟಿಲ: ಹಣೆ, ಫಾಲ; ನಿರ್ಗತ: ಹೋದ; ಬಹಳ: ದೊಡ್ಡ; ಧೂಳೀಪಟಲ: ಧೂಳಿನ ಸಮೂಹ; ಧೂಸರ: ಕಂದ ಬಣ್ಣ; ಸಕಲ: ಎಲ್ಲಾ; ಜಗ: ಪ್ರಪಂಚ; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ); ನಲವು: ಸಂತೋಷ; ಪಟು: ಸಮರ್ಥನಾದವನು; ಗತಿ: ವೇಗ; ಗರುವಾಯಿ: ದೊಡ್ಡತನ, ಠೀವಿ; ಸಂಘಟಿಸು: ಕೂಡು, ಸೇರು; ಹಯ: ಕುದುರೆ; ಸುಳಿಸು: ಸುತ್ತುವಂತೆ ಮಾಡು, ತಿರುಗಿಸು; ಚೌಪಟ: ನಾಲ್ಕು ಕಡೆ; ಒಯ್ಯಾರ: ಬೆಡಗು, ಬಿನ್ನಾಣ; ಬೋಳಯಿಸು: ಸಂತೈಸು; ಕಂದರ: ಕುತ್ತಿಗೆ;

ಪದವಿಂಗಡಣೆ:
ಚಟುಳ+ ಹಯಖುರ +ಖಂಡಿತ+ಊರ್ವೀ
ನಿಟಿಲ +ನಿರ್ಗತ +ಬಹಳ +ಧೂಳೀ
ಪಟಲ +ಧೂಸರ +ಸಕಲ +ಜಗದ್+ಅಸುರಾರಿ +ನಲವಿನಲಿ
ಪಟುಗತಿಯ +ಗರುವಾಯಿಯಲಿ +ಸಂ
ಘಟಿಸಿ+ ಹಯವನು +ಸುಳಿಸಿದನು +ಚೌ
ಪಟದೊಳ್+ಒಯ್ಯಾರಿಸುತ +ಬೋಳಯಿಸಿದನು +ಕಂದರವ

ಅಚ್ಚರಿ:
(೧) ಕುದುರೆಯನ್ನು ಓಡಿಸಿದ ಪರಿ – ಪಟುಗತಿಯ ಗರುವಾಯಿಯಲಿ ಸಂಘಟಿಸಿ ಹಯವನು ಸುಳಿಸಿದನು ಚೌ
ಪಟದೊಳೊಯ್ಯಾರಿಸುತ ಬೋಳಯಿಸಿದನು ಕಂದರವ

ಪದ್ಯ ೮೯: ಅಪ್ಸರೆಯರು ಹೇಗೆ ಕಂಡರು?

ಉಗಿದರೋ ಕತ್ತುರಿಯ ತವಲಾ
ಯಿಗಳ ಮುಚ್ಚಳವೆನೆ ಕವಾಟವ
ತೆಗೆಯೆ ಕವಿದರು ದಿವ್ಯಪರಿಮಳ ಸಾರ ಪೂರವಿಸೆ
ಹೊಗರಲಗು ಹೊಳಹುಗಳ ಕಡೆಗ
ಣ್ಣುಗಳ ಬಲುಗರುವಾಯಿ ಮುಸುಕಿನ
ಬಿಗುಹುಗಳ ಬಿರುದಂಕಕಾಂತಿಯರಿಂದ್ರನೋಲಗದ (ಅರಣ್ಯ ಪರ್ವ, ೮ ಸಂಧಿ, ೮೯ ಪದ್ಯ)

ತಾತ್ಪರ್ಯ:
ಕಸ್ತೂರಿಯ ಭರಣಿಯ ಮುಚ್ಚಳವನ್ನು ತೆಗೆದರೆಮ್ಬಮ್ತೆ ಬಾಗಿಲನ್ನು ತೆಗೆಯಲು, ದಿವ್ಯ ದೇಹ ಗಂಧವು ಹಬ್ಬಲು ಅಪ್ಸರೆಯರು ಬಂದರು. ಅವರ ಕಡೆಗಣ್ನುಗಳ ಹೊಳಪು, ಚೂಪಾದ ಅಲಗುಗಳಂತಿದ್ದವು, ಮುಖಕ್ಕೆ ಮುಸುಕು ಹಾಕಿದ್ದರು, ಮನ್ಮಥ ಸಮರದಲ್ಲಿ ಮೇಲುಗೈಯೆಂಬ ಬಿರುದಿನ ಅನಂಗನ ಆಳುಗಳಂತೆ ತೋರಿದರು.

ಅರ್ಥ:
ಉಗಿ: ಹೊರಹಾಕು; ಕತ್ತುರಿ: ಕಸ್ತೂರಿ; ತವಲಾಯಿ: ಕರ್ಪೂರದ ಹಳಕು, ಬಿಲ್ಲೆ; ಮುಚ್ಚಳ: ಪೆಟ್ಟಿಗೆ, ಕರಡಿಗೆ ಪಾತ್ರೆ; ಕವಾಟ: ಬಾಗಿಲು; ತೆಗೆ: ಈಚೆಗೆ ತರು; ಕವಿ: ಆವರಿಸು; ದಿವ್ಯ: ಶ್ರೇಷ್ಠ; ಪರಿಮಳ: ಸುಗಂಧ; ಸಾರ: ರಸ; ಪೂರ: ಪೂರ್ತಿಯಾಗಿ; ಹೊಗರು: ಕಾಂತಿ, ಪ್ರಕಾಶ; ಅಲಗು: ಹರಿತವಾದ ಅಂಚು; ಹೊಳಹು: ಕಾಂತಿ; ಕಡೆ: ಕೊನೆ; ಕಣ್ಣು: ನಯನ; ಬಲು: ದೊಡ್ಡ; ಗರುವಾಯಿ: ಠೀವಿ; ಮುಸುಕು: ಹೊದಿಕೆ; ಯೋನಿ; ಬಿಗುಹು: ಬಿಗಿ; ಬಿರುದು: ಪ್ರಸಿದ್ಧಿ; ಕಾಂತಿ: ಪ್ರಕಾಶ; ಇಂದ್ರ: ಸುರಪತಿ; ಓಲಗ; ದರ್ಬಾರು;

ಪದವಿಂಗಡಣೆ:
ಉಗಿದರೋ+ ಕತ್ತುರಿಯ +ತವಲಾ
ಯಿಗಳ +ಮುಚ್ಚಳವ್+ಎನೆ +ಕವಾಟವ
ತೆಗೆಯೆ +ಕವಿದರು+ ದಿವ್ಯ+ಪರಿಮಳ +ಸಾರ +ಪೂರವಿಸೆ
ಹೊಗರ್+ಅಲಗು +ಹೊಳಹುಗಳ +ಕಡೆಗ
ಣ್ಣುಗಳ +ಬಲುಗರುವಾಯಿ +ಮುಸುಕಿನ
ಬಿಗುಹುಗಳ+ ಬಿರುದಂಕ+ಕಾಂತಿಯರ್+ಇಂದ್ರನ್+ಓಲಗದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉಗಿದರೋ ಕತ್ತುರಿಯ ತವಲಾಯಿಗಳ ಮುಚ್ಚಳವೆನೆ ಕವಾಟವ
ತೆಗೆಯೆ ಕವಿದರು ದಿವ್ಯಪರಿಮಳ ಸಾರ ಪೂರವಿಸೆ

ಪದ್ಯ ೫: ಸ್ವರ್ಗದಿಂದ ಅರ್ಜುನನನ್ನು ನೋಡಲು ಯಾರು ಬಂದರು?

ಹಿಡಿದ ಸಾಲಿನ ಸತ್ತಿಗೆಯ ಬಲ
ಕೆಡಕೆ ಕೆದರುವ ಸೀಗುರಿಯ ಮುಂ
ಗುಡಿಯ ವಿದ್ಯಾಧರ ಮಹೋರಗ ಯಕ್ಷ ರಾಕ್ಷಸರ
ಜಡಿವ ಕಹಳಾರವದ ನೆಲನು
ಗ್ಗಡಣೆಗಳ ಕೈವಾರಿಗಳ ಗಡ
ಬಡೆಯ ಗರುವಾಯಿಯಲಿ ಗಗನದಿನಿಳಿದನಮರೇಂದ್ರ (ಅರಣ್ಯ ಪರ್ವ, ೮ ಸಂಧಿ, ೫ ಪದ್ಯ)

ತಾತ್ಪರ್ಯ:
ಕೈಯಲ್ಲಿ ಹಿಡಿದ ಛತ್ರಿಗಳ ಸಾಲುಗಳು, ಎಡಕ್ಕೆ ಬಲಕ್ಕೆ ಬೀಸುವ ಚಾಮರಗಳು, ಯಕ್ಷರು, ರಾಕ್ಷಸರು, ವಿದ್ಯಾಧರರು, ಮಹಾ ಸರ್ಪಗಳೊಡನೆ ದೇವೇಂದ್ರನು ಬಂದನೆಂದು ಭೂಮಿಯಿಡೀ ಕೇಳುವಂತೆ ಸ್ತುತಿಪಾಠಕರು ಘೋಷಿಸಿದರು.

ಅರ್ಥ:
ಹಿಡಿ:ಮುಷ್ಟಿ, ಬಂಧನ; ಸಾಲು: ಆವಳಿ, ಓಲಿ, ಶ್ರೇಣಿ; ಸತ್ತಿಗೆ: ಛತಿ; ಬಲ: ಬಲಗಡೆ, ದಕ್ಷಿಣ ಭಾಗ; ಕೆದರು: ಹರಡು; ಸೀಗುರಿ: ಚಾಮರ; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ವಿದ್ಯಾಧರ: ದೇವತೆಗಳ ಒಂದು ವರ್ಗ; ಮಹ: ದೊಡ್ಡ, ಶ್ರೇಷ್ಠ; ಉರಗ: ಹಾವು; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ರಾಕ್ಷಸ: ದಾನವ; ಜಡಿ: ಹೊಡೆತ, ಗದರಿಸು; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ರವ: ಶಬ್ದ; ನೆಲ: ಭೂಪ್ರದೇಶ; ಉಗ್ಗಡ: ಅತಿಶಯ, ಶ್ರೇಷ್ಠ; ಕೈವಾರಿ: ಹೊಗಳು ಭಟ್ಟ; ಗಡಬಡ: ಗಟ್ಟಿಯಾದ ಶಬ್ದ; ಗರುವಾಯಿ: ದೊಡ್ಡತನ, ಠೀವಿ; ಗಗನ: ಆಗಸ; ಇಳಿ: ಕೆಳಕ್ಕೆ ಬಾ; ಅಮರೇಂದ್ರ: ಇಂದ್ರ, ಶಕ್ರ;

ಪದವಿಂಗಡಣೆ:
ಹಿಡಿದ+ ಸಾಲಿನ +ಸತ್ತಿಗೆಯ +ಬಲ
ಕೆಡಕೆ +ಕೆದರುವ +ಸೀಗುರಿಯ +ಮುಂ
ಗುಡಿಯ +ವಿದ್ಯಾಧರ+ ಮಹ+ಉರಗ+ ಯಕ್ಷ +ರಾಕ್ಷಸರ
ಜಡಿವ+ ಕಹಳಾ+ರವದ+ ನೆಲನ್
ಉಗ್ಗಡಣೆಗಳ +ಕೈವಾರಿಗಳ+ ಗಡ
ಬಡೆಯ +ಗರುವಾಯಿಯಲಿ +ಗಗನದಿನ್+ಇಳಿದನ್+ಅಮರೇಂದ್ರ

ಅಚ್ಚರಿ:
(೧) ಇಂದ್ರ ಬಂದನೆಂದು ಹೇಳುವ ಪರಿ – ನೆಲನುಗ್ಗಡಣೆಗಳ ಕೈವಾರಿಗಳ ಗಡ ಬಡೆಯ ಗರುವಾಯಿಯಲಿ ಗಗನದಿನಿಳಿದನಮರೇಂದ್ರ

ಪದ್ಯ ೪: ಸಾತ್ಯಕಿಯ ಎದುರು ಯಾರು ಯುದ್ಧ ಮಾಡಲು ನಿಂತರು?

ಬಾಯಿಬಡಿಕರು ನಾವು ನೀ ಗರು
ವಾಯಿಕಾರನು ಬಯ್ವ ಬಿರುದಿನ
ಬಾಯ ನೋಡಾಯೆನುತ ತೋಟಿಗೆ ತೆರಹುಗೊಡದೆಸಲು
ಸಾಯಕದ ಹೊದೆ ಹಲವು ಶಲ್ಯಗೆ
ಬೀಯವಾದವು ಬಳಿಕ ಕೌರವ
ರಾಯನನುಜನು ತರುಬಿ ನಿಂದನು ಸಾತ್ಯಕಿಯ ರಥವ (ಕರ್ಣ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಶಲ್ಯನು ಸಾತ್ಯಕಿಯನ್ನು ಎದುರಿಸುತ್ತಾ, ಎಲವೋ ಸಾತ್ಯಕಿ ನಾವು ಬಾಯಿಬಡಿಕರೋ, ನೀನು ವೀರ, ಬೈಯುವ ನಿನ್ನ ಬಾಯನ್ನೊಮ್ಮೆ ನೋಡು, ಎನ್ನುತ್ತಾ ಹಲವಾರು ಹೊರೆ ಬಾಣಗಳನ್ನು ಸಾತ್ಯಕಿಯ ಮೇಲೆ ಬಿಟ್ಟನು. ಆಗ ದುಶ್ಯಾಸನನು ಸಾತ್ಯಕಿಯ ರಥವನ್ನು ತಡೆದು ನಿಲ್ಲಿಸಿದನು.

ಅರ್ಥ:
ಬಾಯಿಬಡಿಕ: ಪೊಳ್ಳೆಮಾತು, ತಲೆಹರಟೆ; ಗರುವಾಯಿ: ದೊಡ್ಡತನ, ಗೌರವ;ಬಯ್ವ: ಬಯ್ಯುವ, ಜರಿ; ಬಿರುದು: ಗೌರವ ಸೂಚಕ ಹೆಸರು; ಬಾಯಿ: ಮುಖದ ಒಂದು ಅಂಗ; ನೋಡು: ವೀಕ್ಷಿಸು; ತೋಟಿ: ಯುದ್ಧ, ಜಗಳ; ತೆರಹು: ಬಿಚ್ಚು, ತೆರೆ, ಜಾಗ; ಸಾಯಕ: ಬಾಣ, ಶರ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಹಲವು: ಬಹಳ; ಬೀಯ: ವ್ಯಯ, ನಷ್ಟ, ಖರ್ಚು; ಬಳಿಕ: ನಂತರ; ರಾಯ: ರಾಜ; ಅನುಜ: ತಮ್ಮ; ತರುಬು: ಅಡ್ಡಗಟ್ಟು, ಬೆನ್ನಟ್ಟು; ನಿಂದನು: ಎದುರು ನಿಲ್ಲು; ರಥ: ಬಂಡಿ;

ಪದವಿಂಗಡಣೆ:
ಬಾಯಿಬಡಿಕರು+ ನಾವು +ನೀ +ಗರು
ವಾಯಿಕಾರನು +ಬಯ್ವ +ಬಿರುದಿನ
ಬಾಯ +ನೋಡಾ+ಯೆನುತ +ತೋಟಿಗೆ +ತೆರಹು+ಗೊಡದ್+ಎಸಲು
ಸಾಯಕದ +ಹೊದೆ +ಹಲವು +ಶಲ್ಯಗೆ
ಬೀಯವಾದವು+ ಬಳಿಕ+ ಕೌರವ
ರಾಯನ್+ಅನುಜನು +ತರುಬಿ +ನಿಂದನು +ಸಾತ್ಯಕಿಯ +ರಥವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಯ್ವ ಬಿರುದಿನ ಬಾಯ
(೨) ಬಾಯಿ, ಗರುವಾಯಿ – ಪ್ರಾಸ ಪದ
(೩) ಸಾತ್ಯಕಿ, ಶಲ್ಯ, ದುಶ್ಯಾಸನ – ಪದ್ಯದಲ್ಲಿ ಬಂದ ಹೆಸರುಗಳು