ಪದ್ಯ ೨೩: ಧರ್ಮಜನು ಅಭಿಮನ್ಯುವಿನ ಬಗ್ಗೆ ಏನು ಹೇಳಿದನು?

ಅರಿನೃಪಾಲರ ನೂರು ಮಕ್ಕಳ
ಶಿರವನರಿದನು ಷಡುರಥರ ಮಿಗೆ
ಪರಿಭವಿಸಿದನು ರಿಪುಬಲವನಡಹಾಯ್ದಾನೆವರಿವರಿದು
ಧುರಕೆ ಹೆರತೆಗೆದೆಮ್ಮ ನಾಲ್ವರ
ಸರಿದು ಹೋದಭಿಮಾನವನು ಕಾ
ಯ್ದುರವಣಿಸಿ ಮಗನೇರಿದನು ವಾಸವನ ಗದ್ದುಗೆಯ (ದ್ರೋಣ ಪರ್ವ, ೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕೌರವನ ನೂರು ಮಕ್ಕಳ ತಲೆಗಳನ್ನು ಕಡಿದನು. ಆರು ರಥದಲ್ಲಿ ಬಂದ ಮಹಾ ಪರಾಕ್ರಮಿಗಳನ್ನು ಸೋಲಿಸಿದನು. ಶತ್ರುಸೈನ್ಯದ ನಡುವೆ ಆನೆ ನುಗ್ಗಿದಂತೆ ನುಗ್ಗಿ ತಿರುಗಾಡಿ, ಯುದ್ಧಕ್ಕೆ ಹೋಗಲಾರದೆ ಸೋತು ಬಂದ ನಮ್ಮ ಗೌರವವನ್ನು ಕಾಪಾಡಿ ಇಂದ್ರನ ಸಿಂಹಾಸನವನ್ನೇರಿದನು ಎಂದು ಅಭಿಮನ್ಯುವಿನ ಬಗ್ಗೆ ಧರ್ಮಜನು ಹೇಳಿದನು.

ಅರ್ಥ:
ಅರಿ: ವೈರಿ; ನೃಪಾಲ: ರಾಜ; ನೂರು: ಶತ; ಮಕ್ಕಳು: ಸುತರು; ಶಿರ: ತಲೆ; ಅರಿ: ಸೀಳು; ಷಡು: ಆರು; ರಥ: ಬಂಡಿ; ಮಿಗೆ: ಅಧಿಕ; ಪರಿಭವ: ಸೋಲು; ರಿಪು: ವೈರಿ; ಬಲ: ಸೈನ್ಯ; ಅಡಹಾಯ್ದು: ಅಡ್ಡಬಂದು ಹೊಡೆ; ಆನೆ: ಗಜ; ಅರಿ: ಕತ್ತರಿಸು; ಧುರ: ಯುದ್ಧ; ಹೆರರ: ಬೇರೆಯವರ; ತೆಗೆ: ಹೊರತರು; ಸರಿ: ಹೋಗು, ಗಮಿಸು; ಅಭಿಮಾನ: ಗೌರವ; ಕಾಯ್ದು: ಕಾಪಾಡು; ಉರವಣಿಸು: ಆತುರಿಸು; ಮಗ: ಪುತ್ರ; ಏರು: ಮೇಲೆ ಹತ್ತು; ವಾಸವ: ಇಂದ್ರ; ಗದ್ದುಗೆ: ಪೀಠ;

ಪದವಿಂಗಡಣೆ:
ಅರಿ+ನೃಪಾಲರ +ನೂರು +ಮಕ್ಕಳ
ಶಿರವನ್+ಅರಿದನು +ಷಡುರಥರ+ ಮಿಗೆ
ಪರಿಭವಿಸಿದನು +ರಿಪುಬಲವನ್+ಅಡಹಾಯ್ದ್+ಆನೆವರಿವ್+ಅರಿದು
ಧುರಕೆ+ ಹೆರತೆಗೆದ್+ಎಮ್ಮ +ನಾಲ್ವರ
ಸರಿದು +ಹೋದ್+ಅಭಿಮಾನವನು +ಕಾ
ಯ್ದುರವಣಿಸಿ+ ಮಗನೇರಿದನು +ವಾಸವನ +ಗದ್ದುಗೆಯ

ಅಚ್ಚರಿ:
(೧) ಅಭಿಮನ್ಯುವಿನ ಪರಾಕ್ರಮ -ರಿಪುಬಲವನಡಹಾಯ್ದಾನೆವರಿವರಿದು
(೨) ಅರಿ, ರಿಪು – ಸಮಾನಾರ್ಥಕ ಪದಗಳು

ಪದ್ಯ ೨೩: ವಿರಾಟನು ದ್ರೋಣರ ಬಗ್ಗೆ ಏನು ಹೇಳಿದನು?

ಗೆದ್ದರೆಯು ಗೆಲವಿಲ್ಲ ಹಾರುವ
ರುದ್ದುರುಟುತನಕೇನನೆಂಬೆನು
ಗದ್ದುಗೆಯ ಹೊರೆಗರಸ ಕರೆದರೆ ಹವವ ಮರೆದಿರಲ
ಹದ್ದು ಕಾಗೆಯ ಮನೆಯ ಬಾಣಸ
ವಿದ್ಯೆಯೆಮ್ಮದು ಯಮನ ನಿಳಯಕೆ
ಬಿದ್ದಿನರು ನೀವೆಂದೆನುತ ಕಲಿ ಮತ್ಸ್ಯನಿದಿರಾದ (ಭೀಷ್ಮ ಪರ್ವ, ೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ಆಗ ವಿರಾಟನು, ಇವರೊಡನೆ ಕಾದಿ ಗೆದ್ದರೂ ಬ್ರಾಹ್ಮಣರಾದ್ದರಿಂದ ಗೆದ್ದ ಹಾಗಲ್ಲ. ಬ್ರಾಹ್ಮಣರ ಮೊಂಡತನದ ಯುದ್ಧಕ್ಕೆ ನಾನೇನು ಹೇಳಲಿ, ದೊರೆಯು ಆಸ್ಥಾನಕ್ಕೆ ಕರೆದರೆ ಬ್ರಾಹ್ಮಣರು ನಾವೆಂಬ ಹಿರಿಮೆಯನ್ನು ಮರೆತಿರಲ್ಲವೇ? ಹದ್ದು ಕಾಗೆಗಳಿಗೆ ಆಹಾರ ಕೊಡುವ ಕೆಲಸ ನಮ್ಮದು, ನೀವಾದರೋ ಯಮನ ಮನೆಯ ಅತಿಥಿಗಳು ಎಂದು ದ್ರೋಣಾದಿಗಳನ್ನು ಎದುರಿಸಿದನು.

ಅರ್ಥ:
ಗೆದ್ದು: ಗೆಲುವು, ಜಯ; ಗೆಲುವು: ಜಯ; ಹಾರುವ: ಬ್ರಾಹ್ಮಣ; ಉರುಟು: ಒರಟಾದ; ಗದ್ದುಗೆ: ಪೀಠ; ಹೊರೆ: ಭಾರ; ಅರಸ: ರಾಜ; ಕರೆ: ಬರೆಮಾಡು; ಭವ: ಇರುವಿಕೆ, ಅಸ್ತಿತ್ವ; ಮರೆ: ಮೊರೆ, ಶರಣಾಗತಿ; ಹದ್ದು: ಒಂದು ಬಗೆಯ ಹಕ್ಕಿ, ಗೃಧ್ರ; ಮನೆ: ಆಲಯ; ಬಾಣಸ:ಅಡುಗೆ; ವಿದ್ಯೆ: ಜ್ಞಾನ; ಯಮ: ಜವ; ನಿಳಯ: ಮನೆ; ಕಲಿ: ಶೂರ; ಇದಿರು: ಎದುರು;

ಪದವಿಂಗಡಣೆ:
ಗೆದ್ದರೆಯು +ಗೆಲವಿಲ್ಲ +ಹಾರುವ
ರುದ್+ಉರುಟುತನಕ್+ಏನನೆಂಬೆನು
ಗದ್ದುಗೆಯ +ಹೊರೆಗ್+ಅರಸ +ಕರೆದರೆ +ಭವವ +ಮರೆದಿರಲ
ಹದ್ದು +ಕಾಗೆಯ +ಮನೆಯ +ಬಾಣಸ
ವಿದ್ಯೆಯೆಮ್ಮದು +ಯಮನ +ನಿಳಯಕೆ
ಬಿದ್ದಿನರು +ನೀವೆಂದೆನುತ+ ಕಲಿ+ ಮತ್ಸ್ಯನ್+ಇದಿರಾದ

ಅಚ್ಚರಿ:
(೧) ದ್ರೋಣರ ಬಗ್ಗೆ ನುಡಿದ ಮಾತು – ಗದ್ದುಗೆಯ ಹೊರೆಗರಸ ಕರೆದರೆ ಹವವ ಮರೆದಿರಲ

ಪದ್ಯ ೧೦: ಕೃಷ್ಣನು ದ್ರೋಣರನ್ನು ಹೇಗೆ ವಿವರಿಸಿದನು?

ಮಿಸುಪ ತುದಿವೆರಳಂಬುಗೊಲೆಗೇ
ರಿಸಿದ ಬಿಲು ಮಣಿಮಯದ ಗದ್ದುಗೆ
ರಸುಮೆಗಳ ಜೋಡಿನಲಿ ಹೊಂದೇರಿನ ವಿಡಾಯಿಯಲಿ
ಮಸೆಗಣೆಯ ಬತ್ತಳಿಕೆ ತಿಗುರೇ
ರಿಸಿದ ಮೈ ಕತ್ತುರಿಯ ತಿಲಕದ
ನೊಸಲಿನಾತನ ನೋಡು ಗರುಡಿಯ ಜಾಣ ದ್ರೋಣನನು (ಭೀಷ್ಮ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ತುದಿಬೆರಳಿನ ಬಾಣವನ್ನು ಗೊಲೆಗೇರಿಸಿ, ಬಂಗಾರದ ರಥದಲ್ಲಿ ರತ್ನಖಚಿತವಾದ ಪೀಠದಲ್ಲಿ ಕುಳಿತಿದ್ದಾನೆ, ಅವನ ಬತ್ತಳಿಕೆಯಲ್ಲಿ ಹರಿತವಾದ ಬಾಣಗಳಿವೆ, ಮೈಗೆ ಸುಗಂಧವನ್ನು ಲೇಪಿಸಿಕೊಂಡಿದ್ದಾನೆ, ಕಸ್ತುರಿಯ ತಿಲಕವು ಅವನ ಹಣೆಯನ್ನು ಶೋಭಿಸುತ್ತಿದೆ, ಅವನೇ ಗರುಡಿಯ ಗುರು ದ್ರೋಣಾಚಾರ್ಯ ಎಂದು ಕೃಷ್ಣನು ತೋರಿಸಿದನು.

ಅರ್ಥ:
ಮಿಸುಪ: ಹೊಳೆವ, ಸುಂದರ; ತುದಿ: ಕೊನೆ; ವೆರಳು: ಬೆರಳು, ಅಂಗುಲಿ; ಅಂಬು: ಬಾಣ; ಗೋಳು: ಪಕ್ಕ, ಪಾರ್ಶ್ವ; ಏರಿಸು: ಆರೋಹಿಸು, ಹತ್ತು; ಬಿಲು: ಬಿಲ್ಲು, ಚಾಪ; ಮಣಿ: ಬೆಲೆಬಾಳುವ ರತ್ನ; ಗದ್ದುಗೆ: ಪೀಠ; ರಸುಮೆ: ರಶ್ಮಿ, ಕಿರಣ; ಜೋಡು: ಜೊತೆ, ಯುಗಳ; ಹೊಂದೇರು: ಚಿನ್ನದ ತೇರು; ವಿಡಾಯಿ: ಶಕ್ತಿ, ಆಡಂಬರ; ಮಸೆ: ಹರಿತವಾದುದು; ಕಣೆ: ಬಾಣ; ಬತ್ತಳಿಕೆ: ಬಾಣಗಳನ್ನಿಡುವ ಕೋಶ, ತೂಣೀರ; ತಿಗುರು: ಸುಗಂಧ ವಸ್ತು, ಪರಿಮಳದ್ರವ್ಯ; ಏರಿಸು: ಆರೋಹಿಸು; ಕತ್ತುರಿ: ಕಸ್ತೂರಿ; ತಿಲಕ: ಹಣೆಯಲ್ಲಿಡುವ ಬೊಟ್ಟು; ನೊಸಲು: ಹಣೆ; ನೋಡು: ವೀಕ್ಷಿಸು; ಗರುಡಿ: ವ್ಯಾಯಾಮ ಶಾಲೆ; ಜಾಣ: ಬುದ್ಧಿವಂತ;

ಪದವಿಂಗಡಣೆ:
ಮಿಸುಪ +ತುದಿ+ಬೆರಳ್+ಅಂಬು+ಗೊಲೆಗ್
ಏರಿಸಿದ+ ಬಿಲು +ಮಣಿಮಯದ +ಗದ್ದುಗೆ
ರಸುಮೆಗಳ +ಜೋಡಿನಲಿ+ ಹೊಂದೇರಿನ +ವಿಡಾಯಿಯಲಿ
ಮಸೆಗಣೆಯ +ಬತ್ತಳಿಕೆ +ತಿಗುರೇ
ರಿಸಿದ +ಮೈ +ಕತ್ತುರಿಯ+ ತಿಲಕದ
ನೊಸಲಿನ್+ಆತನ+ ನೋಡು +ಗರುಡಿಯ +ಜಾಣ +ದ್ರೋಣನನು

ಅಚ್ಚರಿ:
(೧) ದ್ರೋಣನನ್ನು ವಿವರಿಸಿದ ಪರಿ – ಕತ್ತುರಿಯ ತಿಲಕದ ನೊಸಲಿನಾತನ ನೋಡು ಗರುಡಿಯ ಜಾಣ ದ್ರೋಣನನು

ಪದ್ಯ ೨೧: ವಿರಾಟನು ತಾನೇಕೆ ಸುಕೃತನೆಂದು ತಿಳಿದನು?

ಶಿರವನೆತ್ತಿ ವಿರಾಟಭೂಪನ
ಕರೆದು ಹತ್ತಿರ ಪೀಠದಲಿ ಕು
ಳ್ಳಿರಿಸಲೊಡೆಮುರುಚಿದನು ಕೆಲದಲಿ ಗದ್ದುಗೆಯ ಸರಿದು
ಪರಮ ಸುಕೃತವಲಾ ಧರಾಧೀ
ಶ್ವರನ ದರುಶನವಾಯ್ತು ಧನ್ಯರು
ಧರೆಯೊಳೆಮಗಿನ್ನಾರು ಸರಿಯೆಂದನು ವಿರಾಟನೃಪ (ವಿರಾಟ ಪರ್ವ, ೧೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ವಿರಾಟನನ್ನು ಮೇಲೆತ್ತಿ ಸಿಂಹಾಸನದಲ್ಲಿ ತನ್ನ ಹತ್ತಿರ ಕುಳ್ಳಿರಿಸಿಕೊಳ್ಳಲು ಅವನು ಧರ್ಮಜನಿಂದ ದೂರ ಸರಿದು ಪಕ್ಕದ ಪೀಠದಲ್ಲಿ ಕುಳಿತು ಚಕ್ರವರ್ತಿಯಾದ ನಿನ್ನ ದರ್ಶನವಾದುದು ನಮ್ಮ ಪರಮಪುಣ್ಯ, ನಾನು ಧನ್ಯನಾದೆ, ಈ ಭೂಮಿಯಲ್ಲಿ ನನಗೆ ಇನ್ನಾರು ಸರಿ ಎಂದು ಹೇಳಿದನು.

ಅರ್ಥ:
ಶಿರ: ತಲೆ; ಎತ್ತು: ಮೇಲೆ ನೋಡು; ಭೂಪ: ರಾಜ; ಕರೆ: ಬರೆಮಾಡು; ಹತ್ತಿರ: ಸಮೀಪ; ಪೀಠ: ಆಸನ; ಕುಳ್ಳಿರಿಸು: ಆಸೀನನಾಗು; ಮುರುಚು: ಹಿಂತಿರುಗಿಸು; ಕೆಲ: ಪಕ್ಕ, ಮಗ್ಗುಲು; ಗದ್ದುಗೆ: ಸಿಂಹಾಸನ; ಸರಿ: ಹೋಗು, ಗಮಿಸು; ಪರಮ: ಶ್ರೇಷ್ಠ್; ಸುಕೃತ: ಚೆನ್ನಾಗಿ ಮಾಡಿದ; ಧರಾಧೀಶ್ವರ: ರಾಜ; ದರುಶನ: ನೋಡು, ವೀಕ್ಷಿಸು; ಧನ್ಯ: ಪುಣ್ಯವಂತ; ಧರೆ: ಭೂಮಿ; ಸರಿ: ಸಮಾನ, ಸದೃಶ; ನೃಪ: ರಾಜ;

ಪದವಿಂಗಡಣೆ:
ಶಿರವನೆತ್ತಿ+ ವಿರಾಟ+ಭೂಪನ
ಕರೆದು +ಹತ್ತಿರ +ಪೀಠದಲಿ +ಕು
ಳ್ಳಿರಿಸಲೊಡೆ+ಮುರುಚಿದನು +ಕೆಲದಲಿ +ಗದ್ದುಗೆಯ +ಸರಿದು
ಪರಮ +ಸುಕೃತವಲಾ +ಧರಾಧೀ
ಶ್ವರನ+ ದರುಶನವಾಯ್ತು +ಧನ್ಯರು
ಧರೆಯೊಳ್+ಎಮಗಿನ್ನಾರು +ಸರಿಯೆಂದನು+ ವಿರಾಟ+ನೃಪ

ಅಚ್ಚರಿ:
(೧) ಧರಾಧೀಶ್ವರ, ನೃಪ, ಭೂಪ – ಸಮಾನಾರ್ಥಕ ಪದ
(೨) ದ ಕಾರದ ಪದಗಳು – ಧರಾಧೀಶ್ವರನ ದರುಶನವಾಯ್ತು ಧನ್ಯರು ಧರೆಯೊಳೆಮಗಿನ್ನಾರು

ಪದ್ಯ ೮೪: ಅರ್ಜುನನು ಹೇಗೆ ಪ್ರಜ್ವಲಿಸಿದನು?

ನೂರು ಪಶುಗೆಡಹಿಗೆ ಸುರೇಂದ್ರನು
ಮಾರುವನು ಗದ್ದುಗೆಯ ಬರಿದೇ
ಸೂರೆಗೊಂಡನು ಸುರಪತಿಯ ಸಿಂಹಾಸನದ ಸಿರಿಯ
ಮೂರು ಯುಗದರಸುಗಳೊಳೀತಗೆ
ತೋರಲೆಣೆಯಿಲ್ಲೆನಲು ಶಕ್ರನ
ನೂರು ಮಡಿ ತೇಜದಲಿ ತೊಳತೊಳಗಿದನು ಕಲಿಪಾರ್ಥ (ಅರಣ್ಯ ಪರ್ವ, ೮ ಸಂಧಿ, ೮೪ ಪದ್ಯ)

ತಾತ್ಪರ್ಯ:
ನೂರು ಅಶ್ವಮೇಧಗಳನ್ನು ಮಾಡಿದಂತವನಿಗೆ ಇಂದ್ರನು ತನ್ನ ಸಿಂಹಾಸನದಲ್ಲಿ ಸ್ಥಳ ಕೊಡುತ್ತಾನೆ. ಇವನಾದರೋ ಏನೂ ಇಲ್ಲದೆ ಇಂದ್ರನ ಸಿಂಹಾಸನವನ್ನು ಏರಿದನು. ಕೃತ, ತ್ರೇತಾ, ದ್ವಾಪರ ಯುಗಗಳ ಯಾವ ಅರಸರೂ ಇವನಿಗೆ ಸಮನಲ್ಲ ಎನ್ನುವಂತೆ ಅರ್ಜುನನು
ಇಂದ್ರನ ನೂರು ಪಟ್ಟು ತೇಜಸ್ಸಿನಿಂದ ಬೆಳಗಿದನು.

ಅರ್ಥ:
ನೂರು: ಶತ; ಪಶು: ಮೃಗ; ಕೆಡಹು: ಸಾಯಿಸು, ಬಲಿಕೊಡು; ಸುರೇಂದ್ರ: ಇಂದ್ರ; ಮಾರು: ನೀಡು; ಗದ್ದುಗೆ: ಪೀಠ; ಬರಿ: ಪಕ್ಕ, ಸುಮ್ಮನೆ; ಸೂರೆ: ಸುಲಿಗೆ; ಸುರಪತಿ: ಇಂದ್ರ; ಸಿಂಹಾಸನ: ರಾಜರ ಆಸನ; ಸಿರಿ: ಐಶ್ವರ್ಯ; ಯುಗ: ದೀರ್ಘವಾದ ಕಾಲಖಂಡ; ಅರಸು: ರಾಜ; ತೋರಲು: ಗೋಚರಿಸಲು ಎಣೆ: ಸರಿಸಾಟಿ; ಶಕ್ರ: ಇಂದ್ರ; ಮಡಿ: ಪಟ್ಟು; ತೇಜ: ಪ್ರಕಾಶ; ತೊಳ: ಪ್ರಕಾಶಿಸು; ಕಲಿ: ಶೂರ;

ಪದವಿಂಗಡಣೆ:
ನೂರು +ಪಶುಗೆಡಹಿಗೆ+ ಸುರೇಂದ್ರನು
ಮಾರುವನು +ಗದ್ದುಗೆಯ+ ಬರಿದೇ
ಸೂರೆಗೊಂಡನು+ ಸುರಪತಿಯ+ ಸಿಂಹಾಸನದ+ ಸಿರಿಯ
ಮೂರು +ಯುಗದ್+ಅರಸುಗಳೊಳ್+ಈತಗೆ
ತೋರಲ್+ಎಣೆಯಿಲ್ಲ್+ಎನಲು +ಶಕ್ರನ
ನೂರು +ಮಡಿ +ತೇಜದಲಿ+ ತೊಳತೊಳಗಿದನು +ಕಲಿಪಾರ್ಥ

ಅಚ್ಚರಿ:
(೧) ಸ ಕಾರದ ಸಾಲು ಪದ – ಸೂರೆಗೊಂಡನು ಸುರಪತಿಯ ಸಿಂಹಾಸನದ ಸಿರಿಯ
(೨) ಸುರೇಂದ್ರ, ಸುರಪತಿ, ಶಕ್ರ – ಇಂದ್ರನನ್ನು ಕರೆದ ಬಗೆ

ಪದ್ಯ ೪೫: ಧರ್ಮರಾಯನು ಯಾವ ಪೀಠಕ್ಕೆ ಬಂದನು?

ಹಲವು ಮಾತಿನಲೇನು ಭೂಪತಿ
ಕೆಲಕೆ ಸಿಲುಕಿದನವದಿರೊಡ್ಡಿದ
ಬಲೆಗೆ ಬಂದನು ನೆತ್ತಸಾರಿಯ ಗುರಿಯ ಗದ್ದುಗೆಗೆ
ಕೆಲದಲನುಜರು ವಾಮದಲಿ ಮಣಿ
ವಳಯ ಮಂಚದಲಂಧನೃಪನಿದಿ
ರಲಿ ಸುಯೋಧನ ಕರ್ಣ ಶಕುನಿ ಜಯದ್ರಥಾದಿಗಳು (ಸಭಾ ಪರ್ವ, ೧೪ ಸಂಧಿ, ೪೫ ಪದ್ಯ)

ತಾತ್ಪರ್ಯ:
ಜನಮೇಜಯ ಹೆಚ್ಚು ಮಾತೇನು, ಕೌರವರೊಡ್ಡಿದ ಬಲೆಗೆ ಧರ್ಮಜನು ಸಿಕ್ಕಿ ಹಾಕಿಕೊಂಡು ಪಗಡೆಯಾಟದ ಕಟ್ಟೆಗೆ ಬಂದನು. ಅವನ ಪಕ್ಕದಲ್ಲಿ ತಮ್ಮಂದಿರಿದ್ದರು. ಎಡಕ್ಕೆ ಮಣಿಪೀಠದ ಮೇಲೆ ಧೃತರಾಷ್ಟ್ರನು ಕುಳಿತಿದ್ದನು. ಎದುರಿನಲ್ಲಿ ದುರ್ಯೋಧನ, ಕರ್ಣ, ಶಕುನಿ, ಜಯದ್ರಥರೇ ಮೊದಲಾದವರು ಕುಳಿತಿದ್ದರು.

ಅರ್ಥ:
ಹಲವು: ಬಹಳ; ಮಾತು: ವಾಣಿ; ಭೂಪತಿ: ರಾಜ; ಕೆಲ: ಪಕ್ಕ, ಮಗ್ಗಲು; ಸಿಲುಕು: ಸಿಕ್ಕುಹಾಕಿಕೊಳ್ಳು; ಅವದಿರ: ಅವರ; ಒಡ್ಡು: ಬೀಸು, ತೋರಿದ; ಬಲೆ: ಮೋಸ, ವಂಚನೆ, ಜಾಲ; ಬಂದು: ಆಗಮಿಸು; ನೆತ್ತ: ಪಗಡೆಯ ದಾಳ ; ಸಾರಿ: ಪಗಡೆಯಾಟದಲ್ಲಿ ಉಪಯೋಗಿ ಸುವ ಕಾಯಿ; ಗುರಿ: ಉದ್ದೇಶ, ಲಕ್ಷ್ಯ; ಗದ್ದುಗೆ: ಪೀಠ; ಅನುಜ: ತಮ್ಮ; ವಾಮ: ಎಡ; ಮಣಿ: ಬೆಲೆಬಾಳುವ ರತ್ನ; ವಳಯ: ಆವರಣ; ಮಂಚ: ಪಲ್ಲಂಗ, ಪೀಠ; ಅಂಧ: ಕುರುಡ; ನೃಪ: ರಾಜ; ಇದಿರು: ಎದುರು; ಆದಿ: ಮುಂತಾದ;

ಪದವಿಂಗಡಣೆ:
ಹಲವು +ಮಾತಿನಲ್+ಏನು +ಭೂಪತಿ
ಕೆಲಕೆ +ಸಿಲುಕಿದನ್+ಅವದಿರ್+ಒಡ್ಡಿದ
ಬಲೆಗೆ+ ಬಂದನು +ನೆತ್ತಸಾರಿಯ +ಗುರಿಯ +ಗದ್ದುಗೆಗೆ
ಕೆಲದಲ್+ಅನುಜರು +ವಾಮದಲಿ+ ಮಣಿ
ವಳಯ +ಮಂಚದಲ್+ಅಂಧನೃಪನ್+ಇದಿ
ರಲಿ +ಸುಯೋಧನ +ಕರ್ಣ +ಶಕುನಿ+ ಜಯದ್ರಥಾದಿಗಳು

ಅಚ್ಚರಿ:
(೧) ಧರ್ಮಜನು ಬಂದ ಪರಿ – ಭೂಪತಿ ಕೆಲಕೆ ಸಿಲುಕಿದನವದಿರೊಡ್ಡಿದ ಬಲೆಗೆ ಬಂದನು ನೆತ್ತಸಾರಿಯ ಗುರಿಯ ಗದ್ದುಗೆಗೆ

ಪದ್ಯ ೯೫: ಭೀಮನು ಶತ್ರುಸೇನೆಗೆ ಏನು ಹೇಳಿದನು?

ವೀಳೆಯವ ಕೊಂಡನು ವರೂಥದ
ಮೇಲುವಲಗೆಯ ಗದ್ದುಗೆಯ ರಿಪು
ಕಾಲಭೈರವನಡರಿದನು ತುಡುಕಿದನು ನಿಜಧನುವ
ಕಾಳೆಗಕೆ ಕಡೆಹಾರವೇ ತೆಗೆ
ಯಾಳನಾಗಲಿ ಬಂದು ಕುರುಭೂ
ಪಾಲ ಬೀಳಲಿ ಧರ್ಮರಾಯನ ಚರಣಕಮಲದಲಿ (ಕರ್ಣ ಪರ್ವ, ೧೯ ಸಂಧಿ, ೯೫ ಪದ್ಯ)

ತಾತ್ಪರ್ಯ:
ಶತ್ರು ಸೇನೆಗೆ ಕಾಲಭೈರವನಾದ ಭೀಮನು ವೀಳೆಯವನ್ನು ಹಾಕಿಕೊಂಡು, ರಥದ ಗದ್ದುಗೆಯನ್ನೇರಿ ತನ್ನ ಬಿಲ್ಲನ್ನು ಹಿಡಿದು, ಇವನೇ ಕಾಳಗಕ್ಕೆ ಕೊನೆಯಗ್ರಾಸವಾಗಲಿ, ಕೌರವನು ಸಮರಸನ್ನದ್ಧ ಸೇನೆಯನ್ನು ತೆಗೆಸಿ, ಬಂದು ಧರ್ಮರಾಯನ ಪಾದಗಳಿಗೆ ಶರಣಾಗತನಾಗಲಿ ಎಂದನು.

ಅರ್ಥ:
ವೀಳೆ: ತಾಂಬೂಲ; ವರೂಥ: ರಥ; ಮೇಲುವಲಗೆ: ರಥದ ಗದ್ದುಗೆ; ರಿಪು: ವೈರಿ; ಕಾಲಭೈರವ: ಶಿವನ ಸ್ವರೂಪ (ಗಣ); ಅಡರು: ಮೇಲಕ್ಕೆ ಹತ್ತು; ತುಡುಕು: ಆತುರದಿಂದ ಹಿಡಿ; ನಿಜಧನು: ಸ್ವಂತ ಬಿಲ್ಲು; ಕಾಳೆಗ: ಯುದ್ಧ; ಕಡೆ: ಕೊನೆ; ತೆಗೆ: ಈಚೆಗೆ ತರು, ಹೊರತರು; ಆಳು: ಸೈನಿಕ; ಬಂದು: ಆಗಮಿಸು; ಭೂಪಾಲ: ರಾಜ; ಬೀಳು: ಎರಗು; ಚರಣಕಮಲ:ಪಾದ ಪದ್ಮ;

ಪದವಿಂಗಡಣೆ:
ವೀಳೆಯವ +ಕೊಂಡನು +ವರೂಥದ
ಮೇಲುವಲಗೆಯ +ಗದ್ದುಗೆಯ +ರಿಪು
ಕಾಲಭೈರವನ್+ಅಡರಿದನು +ತುಡುಕಿದನು +ನಿಜಧನುವ
ಕಾಳೆಗಕೆ+ ಕಡೆಹಾರವೇ+ ತೆಗೆ
ಯಾಳನಾಗಲಿ+ ಬಂದು +ಕುರುಭೂ
ಪಾಲ+ ಬೀಳಲಿ +ಧರ್ಮರಾಯನ +ಚರಣ+ಕಮಲದಲಿ

ಪದ್ಯ ೩೧: ಯುದ್ಧಭೂಮಿಯಲ್ಲಿ ಯಾವ ವಸ್ತುಗಳು ಬಿದ್ದಿದ್ದವು?

ಕಡಿದ ಹಕ್ಕರಿಕೆಗಳ ಸೀಳಿದ
ದಡಿಯ ನೆಗ್ಗಿದ ಗುಳದ ರೆಂಚೆಯ
ಸಿಡಿದ ಸೀಸಕ ಬಾಹುರಕ್ಷೆಯ ಜೋಡು ಮೊಚ್ಚೆಯದ
ಉಡಿದ ಮಿಣಿ ಮೊಗರಂಬ ಗದ್ದುಗೆ
ಬಡಿಗೆಗಳ ಸೂತ್ರಿಕೆಯ ಕಬ್ಬಿಯ
ಕಡಿಯಣದ ಕುಸುರಿಗಳಲೆಸೆದುದು ಕೂಡೆ ರಣಭೂಮಿ (ಕರ್ಣ ಪರ್ವ, ೧೫ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕಡಿದು ಬಿದ್ದ ಕುದುರೆಯ ಪಕ್ಕರೆ, ತುಂಡಾಗಿ ಬಿದ್ದ ಕುದುರೆಯ ಬೆನ್ನಿನ ಮೇಲೆ ಹಾಕುವ ಹಲ್ಲಣ, ನುಗ್ಗಾಗಿದ್ದ ಆನೆ ಕುದುರೆಗಳ ಪಕ್ಷರಕ್ಷೆ, ಸ್ಫೋಟಗೊಂಡಿದ್ದ ಶಿರಸ್ತ್ರಾಣಗಳು, ತುಂಡಾಗಿದ್ದ ಬಾಹು ಮತ್ತು ದೇಹ ಕವಚಗಳು, ಪಾದರಕ್ಷೆಗಳು, ಹರಿದು ಬಿದ್ದ ಹಗ್ಗ, ಮುಖವಾಡ, ಪೀಠ, ಕೈಗೋಲು, ಕಡಿವಾಣ, ಕಬ್ಬಿ ಇವುಗಳು ರಣಭೂಮಿಯಲ್ಲಿ ಚೆಲ್ಲಿದ್ದವು.

ಅರ್ಥ:
ಕಡಿ: ಸೀಳು; ಹಕ್ಕರಿಕೆ: ಕುದುರೆಯ ಜೀನು, ಪಕ್ಕರೆ; ಸೀಳು: ಚೂರು, ತುಂಡು; ದಡಿ: ಕುದುರೆಯ ಬೆನ್ನಿನ ಮೇಲೆ ಹಾಕುವ ಹಲ್ಲಣ, ಜೀನು; ವಸ್ತ್ರಗಳ ಅಂಚು; ನೆಗ್ಗು:ಕುಗ್ಗು, ಕುಸಿ; ಗುಳ:ಆನೆ ಕುದುರೆಗಳ ಪಕ್ಷರಕ್ಷೆ; ರೆಂಚೆ:ಆನೆ, ಕುದುರೆಗಳ ಪಕ್ಕರಕ್ಕೆ, ಜೂಲು; ಸಿಡಿ:ಸ್ಫೋಟ; ಸೀಸಕ: ಶಿರಸ್ತ್ರಾಣ; ಬಾಹು: ಭುಜ; ರಕ್ಷೆ: ಕವಚ; ಜೋಡು: ಜೊತೆ, ಜೋಡಿ; ಮೊಚ್ಚೆ:ಪಾದರಕ್ಷೆ, ಚಪ್ಪಲಿ; ಉಡಿ: ಮುರಿ, ತುಂಡು ಮಾಡು; ಮಿಣಿ:ಚರ್ಮದ ಹಗ್ಗ; ಮೊಗ: ಮುಖ; ಮೊಗರಂಬ: ಮುಖವಾಡ; ಗದ್ದುಗೆ: ಪೀಠ; ಬಡಿಗೆ: ಕೋಲು, ದೊಣ್ಣೆ; ಸೂತ್ರಿಕೆ: ದಾರ, ನೂಲು; ಕಬ್ಬಿ: ಕುದುರೆ ಬಾಯಲ್ಲಿ ಸೇರಿಸಿ ಕಟ್ಟುವ ಉಕ್ಕಿನ ತುಂಡು; ಕಡಿ:ತುಂಡು, ಹೋಳು; ಕುಸುರಿ: ತುಂಡು,ಸೂಕ್ಷ್ಮವಾದ ಮತ್ತು ನಾಜೂ ಕಾದ ಕೆಲಸ; ಕೂಡೆ: ಜೊತೆ; ರಣಭೂಮಿ: ಯುದ್ಧರಂಗ;

ಪದವಿಂಗಡಣೆ:
ಕಡಿದ +ಹಕ್ಕರಿಕೆಗಳ +ಸೀಳಿದ
ದಡಿಯ +ನೆಗ್ಗಿದ +ಗುಳದ +ರೆಂಚೆಯ
ಸಿಡಿದ +ಸೀಸಕ+ ಬಾಹುರಕ್ಷೆಯ+ ಜೋಡು +ಮೊಚ್ಚೆಯದ
ಉಡಿದ +ಮಿಣಿ +ಮೊಗರಂಬ+ ಗದ್ದುಗೆ
ಬಡಿಗೆಗಳ+ ಸೂತ್ರಿಕೆಯ +ಕಬ್ಬಿಯ
ಕಡಿಯಣದ +ಕುಸುರಿಗಳಲ್+ಎಸೆದುದು +ಕೂಡೆ +ರಣಭೂಮಿ

ಅಚ್ಚರಿ:
(೧) ಕಡಿ, ದಡಿ, ಸಿಡಿ, ಉಡಿ, ಬಡಿ – ಪ್ರಾಸ ಪದಗಳು
(೨) ಹಕ್ಕರಿ, ದಡಿ, ರೆಂಚೆ, ಸೀಸಕ, ಬಾಹುರಕ್ಷೆ, ಮಿಣಿ, ಮೊಗರಂಬ, ಗದ್ದುಗೆ, ಸೂತ್ರಿಕೆ – ರಣರಂಗದಲ್ಲಿ ಚೆಲ್ಲಿದ ವಸ್ತುಗಳು

ಪದ್ಯ ೮: ಕೃಷ್ಣನು ಕರ್ಣನಿಗೆ ಯಾವ ಆಸೆಗಳನ್ನು ತೋರಿದನು?

ನಿನಗೆ ಹಸ್ತಿನಪುರದ ರಾಜ್ಯದ
ಘನತೆಯನು ಮಾಡುವೆನು ಕೌರವ
ಜನಪ ಪಾಂಡವ ಜನಪರೋಲೈಸುವರು ಗದ್ದುಗೆಯ
ನಿನಗೆ ಕಿಂಕರವೆರಡು ಸಂತತಿ
ಯೆನಿಸಲೊಲ್ಲದೆ ನೀನು ದುರ್ಯೋ
ಧನನ ಬಾಯ್ದಂಬುಲಕೆ ಕೈಯಾನುವರೆ ಹೇಳೆಂದ (ಉದ್ಯೋಗ ಪರ್ವ, ೧೧ ಸಂಧಿ, ೮ ಪದ್ಯ)

ತಾತ್ಪರ್ಯ:
ಕರ್ಣನಿಗೆ ಕೃಷ್ಣನು ಆಸೆ ಆಮೀಶಗಳನ್ನು ನೀಡಲು ಶುರುಮಾಡಿದ. ನಿನಗೆ ಹಸ್ತಿನಾಪುರದ ರಾಜನೆಂಬ ಹಿರಿಮೆಯನ್ನು ಕೊಡಿಸುತ್ತೇನೆ. ಕೌರವ ಪಾಂಡವ ರಾಜರಿಬ್ಬರೂ ನಿನ್ನನ್ನು ಓಲಿಅಸಿಕೊಂಡಿರುತ್ತಾರೆ. ಈ ಎರಡು ಸಂತತಿಯವರೂ ನಿನಗೆ ಸೇವಕರೆನ್ನಿಸಿಕೊಳ್ಳುವ ಹಿರಿಮೆಯನ್ನು ತಿರಸ್ಕರಿಸಿ ದುರ್ಯೋಧನನ ಬಾಯ್ದಂಬುಲಕ್ಕೆ ಕೈಯೊಡ್ದಿನಿಲ್ಲುವೆಯಾ? ಎಂದು ಕೃಷ್ಣನು ಕರ್ಣನನ್ನು ಕೇಳಿದ.

ಅರ್ಥ:
ರಾಜ್ಯ: ರಾಷ್ಟ್ರ; ಘನತೆ: ಶ್ರೇಷ್ಠತೆ; ಜನಪ: ರಾಜ; ಓಲೈಸು:ಉಪಚರಿಸು; ಗದ್ದುಗೆ: ಪೀಠ; ಕಿಂಕರ: ಸೇವಕ; ಸಂತತಿ: ವಂಶ, ಪೀಳಿಗೆ; ಒಲ್ಲದೆ: ಇಷ್ಟಪಡದೆ; ಬಾಯ್ದಂಬುಲ: ಬಾಯಿಯಲ್ಲಿರುವ ತಾಂಬೂಲ;ಕೈಯಾನು: ಕೈಚಾಚಿ;

ಪದವಿಂಗಡಣೆ:
ನಿನಗೆ +ಹಸ್ತಿನಪುರದ +ರಾಜ್ಯದ
ಘನತೆಯನು +ಮಾಡುವೆನು +ಕೌರವ
ಜನಪ +ಪಾಂಡವ +ಜನಪರ್+ಓಲೈಸುವರು +ಗದ್ದುಗೆಯ
ನಿನಗೆ +ಕಿಂಕರವ್+ಎರಡು +ಸಂತತಿ
ಯೆನಿಸಲ್+ಒಲ್ಲದೆ +ನೀನು +ದುರ್ಯೋ
ಧನನ +ಬಾಯ್ದಂಬುಲಕೆ +ಕೈಯಾನುವರೆ+ ಹೇಳೆಂದ

ಅಚ್ಚರಿ:
(೧) ಜನಪ – ೩ ಸಾಲಿನಲ್ಲಿ ೨ ಬಾರಿ ಪ್ರಯೋಗ
(೨) ಕರ್ಣನನ್ನು ಹೀಯಾಳಿಸುವ ಬಗೆ: ದುರ್ಯೋಧನನ ಬಾಯ್ದಂಬುಲಕೆ ಕೈಯಾನುವರೆ

ಪದ್ಯ ೩೦: ದರ್ಬಾರು ಹೇಗೆ ಕಂಗೊಳಿಸುತ್ತಿತ್ತು?

ಬಲದ ಗದ್ದುಗೆಗಳಲಿ ಭಟರ
ಗ್ಗಳೆಯ ರವಿಸುತ ನದಿಯ ಮಗ ನೃಪ
ತಿಲಕ ದುಶ್ಯಾಸನ ಕೃಪ ದ್ರೋಣಾದಿ ನಾಯಕರು
ಹೊಳೆವ ರತುನದ ಸಾಲ ಮಕುಟದ
ಚೆಲುವಿಕೆಯ ಸೌರಂಭದಲಿ ಗಜ
ಗಲಿಸಿದರು ಮಾಣಿಕ್ಯಮಯ ಭೂಷಣ ವಿಳಾಸದಲಿ (ಉದ್ಯೋಗ ಪರ್ವ, ೮ ಸಂಧಿ, ೩೦ ಪದ್ಯ)

ತಾತ್ಪರ್ಯ:
ಒಡ್ಡೋಲಗವು ರಾಜರ, ಶ್ರೇಷ್ಠ ವ್ಯಕ್ತಿಗಳಿಂದ ಅಲಂಕೃತವಾಗಿತ್ತು. ಸಾಮರ್ಥ್ಯವುಳ್ಳ ಸೈನಿಕರು, ಶ್ರೇಷ್ಠನಾದ ಕರ್ಣನು, ಭೀಷ್ಮರು, ಧೃತರಾಷ್ಟ್ರ, ದುರ್ಯೋಧನ, ದುಶ್ಯಾಸನ, ಕೃಪಾಚಾರ್ಯರು, ದ್ರೋಣ ಮುಂತಾದ ನಾಯಕರು ಚಿನ್ನದ ಆಸನದಲ್ಲಿ ಆಸೀನರಾಗಿದ್ದರು. ಅವರು ಧರಿಸಿದ್ದ ಕಿರೀಟದಿಂದ ಹೊಳೆವ ಕಾಂತಿಯು, ಸಾಲಿನಲ್ಲಿ ಕಾಣುವ ಅವರ ಮುಕುಟದ ಸೌಂದರ್ಯವು ಮತ್ತು ಕಾಂತಿಯು ಇಡೀ ಸಭೆಯನ್ನು ಮಾಣಿಕ್ಯಮಯವಂತಾಗಿಸಿತು.

ಅರ್ಥ:
ಬಲ: ಶಕ್ತಿ, ಸಾಮರ್ಥ್ಯ; ಗದ್ದುಗೆ: ಸಿಂಹಾಸನ; ಭಟ: ಸೈನಿಕ, ಶೂರ; ಅಗ್ಗ:ಶ್ರೇಷ್ಠತೆ; ರವಿಸುತ: ಕರ್ಣ; ಸುತ: ಮಗ; ರವಿ: ಸೂರ್ಯ; ನದಿಯಮಗ: ಭೀಷ್ಮ; ನದಿ: ಹೊಳೆ, ತೊರೆ; ನೃಪ: ರಾಜ; ತಿಲಕ: ಅಗ್ರಗಣ್ಯ, ಶ್ರೇಷ್ಠ; ಆದಿ: ಮುಂತಾದ; ನಾಯಕ: ಮುಖಂಡ; ಹೊಳೆ: ಪ್ರಕಾಶಿಸು; ರತುನ: ಮಣಿ; ಸಾಲ: ಆವಳಿ, ಪ್ರಾಕಾರ; ಮಕುಟ: ಕಿರೀಟ; ಚೆಲುವು: ಸುಂದರ; ಸೌರಂಭ: ಸಂಭ್ರಮ, ಸಡಗರ; ಗಜಗಲಿಸು: ಹೊಳೆ, ಪ್ರಕಾಶಿಸು; ಮಾಣಿಕ್ಯ: ರತ್ನ; ಮಯ: ವ್ಯಾಪಿಸಿರುವುದು; ಭೂಷಣ: ಅಲಂಕರಿಸುವುದು; ವಿಳಾಸ: ಆಸ್ಥಾನ, ನಿವಾಸ;

ಪದವಿಂಗಡಣೆ:
ಬಲದ +ಗದ್ದುಗೆಗಳಲಿ +ಭಟರ್
ಅಗ್ಗಳೆಯ +ರವಿಸುತ +ನದಿಯ ಮಗ+ ನೃಪ
ತಿಲಕ+ ದುಶ್ಯಾಸನ +ಕೃಪ +ದ್ರೋಣಾದಿ +ನಾಯಕರು
ಹೊಳೆವ +ರತುನದ+ ಸಾಲ +ಮಕುಟದ
ಚೆಲುವಿಕೆಯ +ಸೌರಂಭದಲಿ +ಗಜ
ಗಲಿಸಿದರು +ಮಾಣಿಕ್ಯಮಯ +ಭೂಷಣ +ವಿಳಾಸದಲಿ

ಅಚ್ಚರಿ:
(೧) ಕರ್ಣ ಮತ್ತು ಭೀಷ್ಮರನ್ನು ರವಿಸುತ, ನದಿಯ ಮಗ ಎಂದು ಕರೆದಿರುವುದು
(೨) ಮಗ, ಸುತ; ರತುನ, ಮಾಣಿಕ್ಯ; ಹೊಳೆ, ಗಜಗಲಿಸು – ಸಮನಾರ್ಥಕ ಪದ