ಪದ್ಯ ೪೦: ಪಾಂಡವರೇಕೆ ದುಃಖಿಸಿದರು?

ಮಿಡಿದನರ್ಜುನ ಧನುವ ಯಮಳರು
ತುಡುಕಿದರು ಕಯ್ದುಗಳ ಸಾತ್ಯಕಿ
ಮಿಡುಕಿದನು ಮರುಗಿದರು ಪಂಚದ್ರೌಪದೀಸುತರು
ಒಡೆಯನಳಿವಿನಲೆಲ್ಲಿಯದು ನೃಪ
ನುಡಿದ ನುಡಿಯೆನುತನಿಲತನುಜನ
ಪಡೆ ಗಜಾಶ್ವವ ಬಿಗಿಯೆ ಗಜಬಜಿಸಿತು ಭಟಸ್ತೋಮ (ಗದಾ ಪರ್ವ, ೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನು ಧನುಷ್ಟಂಕಾರ ಮಾಡಿದನು. ನಕುಲ ಸಹದೇವರು ಆಯುಧಗಳನ್ನು ಹಿದಿದರು. ಉಪಪಾಂಡವರೂ, ಸಾತ್ಯಕಿ, ದುಃಖಿಸಿದರು. ನಮ್ಮ ಒಡೆಯನು ಮರಣ ಹೊಂದಿದನೇ? ಧರ್ಮಜನ ಪ್ರತಿಜ್ಞೆ ಏನಾಯಿತು? ಎಂದುಕೊಂಡು ಆನೆ, ಕುದುರೆಗಳನ್ನು ಯುದ್ಧಕ್ಕೆ ಅನುವು ಮಾಡಿಕೊಂಡರು.

ಅರ್ಥ:
ಮಿಡಿ: ತವಕಿಸು; ಧನು: ಬಿಲ್ಲು; ಯಮಳ: ಅವಳಿ ಮಕ್ಕಳು; ತುಡುಕು: ಹೋರಾಡು, ಸೆಣಸು; ಕಯ್ದು: ಆಯುಧ; ಮಿಡುಕು: ಅಲುಗಾಟ, ಚಲನೆ; ಮರುಗು: ತಳಮಳ, ಸಂಕಟ; ಪಂಚ: ಐದು; ಸುತ: ಮಕ್ಕಳು; ಒಡೆಯ: ನಾಯಕ, ರಾಜ; ಅಳಿ: ನಾಶ; ನೃಪ: ರಾಜ; ನುಡಿ: ಮಾತಾಡು; ಅನಿಲ: ವಾಯು; ತನುಜ: ಮಗ; ಪಡೆ: ಗುಂಪು, ಸೈನ್ಯ; ಗಜ: ಆನೆ; ಅಶ್ವ: ಕುದುರೆ; ಬಿಗಿ: ಬಂಧಿಸು; ಗಜಬಜ: ಗೊಂದಲ; ಭಟ: ಸೈನಿಕ; ಸ್ತೋಮ: ಗುಂಪು;

ಪದವಿಂಗಡಣೆ:
ಮಿಡಿದನ್+ಅರ್ಜುನ +ಧನುವ +ಯಮಳರು
ತುಡುಕಿದರು +ಕಯ್ದುಗಳ+ ಸಾತ್ಯಕಿ
ಮಿಡುಕಿದನು +ಮರುಗಿದರು+ ಪಂಚ+ದ್ರೌಪದೀ+ಸುತರು
ಒಡೆಯನ್+ಅಳಿವಿನಲ್+ಎಲ್ಲಿಯದು +ನೃಪ
ನುಡಿದ +ನುಡಿಯೆನುತ್+ಅನಿಲತನುಜನ
ಪಡೆ +ಗಜಾಶ್ವವ+ ಬಿಗಿಯೆ +ಗಜಬಜಿಸಿತು +ಭಟಸ್ತೋಮ

ಅಚ್ಚರಿ:
(೧) ನುಡಿ ಪದದ ಬಳಕೆ – ನೃಪನುಡಿದ ನುಡಿಯೆನುತನಿಲತನುಜನ

ಪದ್ಯ ೬೪: ಧರ್ಮರಾಯನು ಜೂಜಿನ ಜಾಲದಲ್ಲಿ ಸಿಲುಕಿ ಯಾವುದನ್ನು ಪಣಕ್ಕೆ ಇಟ್ಟನು?

ಅಗಣಿತದ ಧನವುಂಟು ಹಾಸಂ
ಗಿಗಳ ಹಾಯಿಕು ಸೋತ ವಸ್ತುವ
ತೆಗೆವನೀಗಳೆ ಶಕುನಿ ನೋಡಾ ತನ್ನ ಕೌಶಲವ
ದುಗುಣ ಹಲಗೆಗೆ ಹತ್ತುಮಡಿ ರೇ
ಖೆಗೆ ಗಜಾಶ್ವನಿಕಾಯ ರಥವಾ
ಜಿಗಳು ಸಹಿತಿದೆ ಸಕಲ ಸೈನಿಕವೆಂದನಾ ಭೂಪ (ಸಭಾ ಪರ್ವ, ೧೪ ಸಂಧಿ, ೬೪ ಪದ್ಯ)

ತಾತ್ಪರ್ಯ:
ಧರ್ಮರಾಯನು ಜೂಜಿನ ಜಾಲದಲ್ಲಿ ಸಂಪೂರ್ಣವಾಗಿ ಬಿದ್ದನು, ನನ್ನ ಬಳಿ ಲೆಕ್ಕವಿಲ್ಲದಷ್ಟು ಹಣವಿದೆ, ದಾಳವನ್ನು ಹಾಕು, ನಾನು ಈ ವರೆಗೆ ಸೋತದ್ದೆಲ್ಲವನ್ನೂ ಮತ್ತೆ ಗಳಿಸುತ್ತೇನೆ ಶಕುನಿ, ನನ್ನ ಚಮತ್ಕಾರವನ್ನು ನೋಡು. ಒಂದು ಹಲಗೆಗೆ ಒಡ್ಡಿದ ಎರಡಷ್ಟು ಮುಂದಿನ ಹಲಗೆಗೆ ಒಡ್ಡುತ್ತೇನೆ ಎಂದು ಹೇಳಿ ನನ್ನ ಸಮಸ್ತ ಚತುರಂಗ ಸೈನ್ಯವೂ ಇದೆ ಎಂದು ಯುಧಿಷ್ಠಿರನು ಶಕುನಿಗೆ ಹೇಳಿದನು.

ಅರ್ಥ:
ಅಗಣಿತ: ಲೆಕ್ಕವಿಲ್ಲದಷ್ಟು; ಧನ: ಹಣ; ಹಾಸಂಗಿ:ಜೂಜಿನ ದಾಳ, ಲೆತ್ತ; ಹಾಯಿಕು: ಹಾಕು; ಸೋಲು: ಪರಾಭವ; ವಸ್ತು: ಸಾಮಗ್ರಿ; ತೆಗೆ: ಹೊರತರು; ಕೌಶಲ: ಚಾಣಾಕ್ಷತೆ; ದುಗುಣ: ಎರಡು ಪಟ್ಟು, ಇಮ್ಮಡಿ; ಹಲಗೆ: ಮರ, ಲೋಹಗಳ ಅಗಲವಾದ ಹಾಗೂ ತೆಳುವಾದ ಸೀಳು; ಹತ್ತು: ದಶ; ಮಡಿ: ಪಟ್ಟು; ರೇಖೆ: ಸಾಲು, ಗೆರೆ; ಗಜ: ಆನೆ; ಅಶ್ವ: ಕುದುರೆ; ನಿಕಾಯ: ಗುಂಪು; ರಥ: ಬಂಡಿ; ವಾಜಿ: ಕುದುರೆ; ಸಹಿತ: ಜೊತೆ; ಸಕಲ: ಎಲ್ಲಾ; ಸೈನಿಕ: ಸೈನ್ಯ; ಭೂಪ: ರಾಜ;

ಪದವಿಂಗಡಣೆ:
ಅಗಣಿತದ+ ಧನವುಂಟು +ಹಾಸಂ
ಗಿಗಳ +ಹಾಯಿಕು +ಸೋತ +ವಸ್ತುವ
ತೆಗೆವನ್+ಈಗಳೆ +ಶಕುನಿ +ನೋಡಾ +ತನ್ನ+ ಕೌಶಲವ
ದುಗುಣ +ಹಲಗೆಗೆ +ಹತ್ತುಮಡಿ +ರೇ
ಖೆಗೆ +ಗಜ+ಅಶ್ವ+ನಿಕಾಯ +ರಥವಾ
ಜಿಗಳು +ಸಹಿತಿದೆ +ಸಕಲ +ಸೈನಿಕವೆಂದನಾ +ಭೂಪ

ಅಚ್ಚರಿ:
(೧) ಸ ಕಾರದ ತ್ರಿವಳಿ ಪದ – ಸಹಿತಿದೆ ಸಕಲ ಸೈನಿಕವೆಂದನಾ
(೨) ಯುಧಿಷ್ಠಿರನು ಜೂಜಿನಲ್ಲಿ ಜಾರಿದನೆಂದು ತಿಳಿಸುವ ಪರಿ – ದುಗುಣ ಹಲಗೆಗೆ ಹತ್ತುಮಡಿ ರೇ
ಖೆಗೆ