ಪದ್ಯ ೪೦: ಪಾಂಡವರೇಕೆ ದುಃಖಿಸಿದರು?

ಮಿಡಿದನರ್ಜುನ ಧನುವ ಯಮಳರು
ತುಡುಕಿದರು ಕಯ್ದುಗಳ ಸಾತ್ಯಕಿ
ಮಿಡುಕಿದನು ಮರುಗಿದರು ಪಂಚದ್ರೌಪದೀಸುತರು
ಒಡೆಯನಳಿವಿನಲೆಲ್ಲಿಯದು ನೃಪ
ನುಡಿದ ನುಡಿಯೆನುತನಿಲತನುಜನ
ಪಡೆ ಗಜಾಶ್ವವ ಬಿಗಿಯೆ ಗಜಬಜಿಸಿತು ಭಟಸ್ತೋಮ (ಗದಾ ಪರ್ವ, ೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ಅರ್ಜುನನು ಧನುಷ್ಟಂಕಾರ ಮಾಡಿದನು. ನಕುಲ ಸಹದೇವರು ಆಯುಧಗಳನ್ನು ಹಿದಿದರು. ಉಪಪಾಂಡವರೂ, ಸಾತ್ಯಕಿ, ದುಃಖಿಸಿದರು. ನಮ್ಮ ಒಡೆಯನು ಮರಣ ಹೊಂದಿದನೇ? ಧರ್ಮಜನ ಪ್ರತಿಜ್ಞೆ ಏನಾಯಿತು? ಎಂದುಕೊಂಡು ಆನೆ, ಕುದುರೆಗಳನ್ನು ಯುದ್ಧಕ್ಕೆ ಅನುವು ಮಾಡಿಕೊಂಡರು.

ಅರ್ಥ:
ಮಿಡಿ: ತವಕಿಸು; ಧನು: ಬಿಲ್ಲು; ಯಮಳ: ಅವಳಿ ಮಕ್ಕಳು; ತುಡುಕು: ಹೋರಾಡು, ಸೆಣಸು; ಕಯ್ದು: ಆಯುಧ; ಮಿಡುಕು: ಅಲುಗಾಟ, ಚಲನೆ; ಮರುಗು: ತಳಮಳ, ಸಂಕಟ; ಪಂಚ: ಐದು; ಸುತ: ಮಕ್ಕಳು; ಒಡೆಯ: ನಾಯಕ, ರಾಜ; ಅಳಿ: ನಾಶ; ನೃಪ: ರಾಜ; ನುಡಿ: ಮಾತಾಡು; ಅನಿಲ: ವಾಯು; ತನುಜ: ಮಗ; ಪಡೆ: ಗುಂಪು, ಸೈನ್ಯ; ಗಜ: ಆನೆ; ಅಶ್ವ: ಕುದುರೆ; ಬಿಗಿ: ಬಂಧಿಸು; ಗಜಬಜ: ಗೊಂದಲ; ಭಟ: ಸೈನಿಕ; ಸ್ತೋಮ: ಗುಂಪು;

ಪದವಿಂಗಡಣೆ:
ಮಿಡಿದನ್+ಅರ್ಜುನ +ಧನುವ +ಯಮಳರು
ತುಡುಕಿದರು +ಕಯ್ದುಗಳ+ ಸಾತ್ಯಕಿ
ಮಿಡುಕಿದನು +ಮರುಗಿದರು+ ಪಂಚ+ದ್ರೌಪದೀ+ಸುತರು
ಒಡೆಯನ್+ಅಳಿವಿನಲ್+ಎಲ್ಲಿಯದು +ನೃಪ
ನುಡಿದ +ನುಡಿಯೆನುತ್+ಅನಿಲತನುಜನ
ಪಡೆ +ಗಜಾಶ್ವವ+ ಬಿಗಿಯೆ +ಗಜಬಜಿಸಿತು +ಭಟಸ್ತೋಮ

ಅಚ್ಚರಿ:
(೧) ನುಡಿ ಪದದ ಬಳಕೆ – ನೃಪನುಡಿದ ನುಡಿಯೆನುತನಿಲತನುಜನ

ಪದ್ಯ ೧೩: ಭೀಮನು ದ್ರೋಣರ ರಥವನ್ನು ಹೇಗೆ ತಿರುಗಿಸಿದನು?

ಗಜರಿನಲಿ ಗಿರಿ ಬಿರಿಯೆ ದಿವಿಜ
ವ್ರಜ ಭಯಂಗೊಳೆ ಹೂಣೆ ಹೊಕ್ಕರಿ
ವಿಜಯನಿಟ್ಟಣಿಸಿದರೆ ಹಿಮ್ಮೆಟ್ಟಿದರೆ ಬಳಿಸಲಿಸಿ
ಸುಜನ ವಂದ್ಯನ ರಥವ ಹಿಡಿದನಿ
ಲಜನು ಮುಂಗೈಗೊಂಡು ಪಡೆ ಗಜ
ಬಜಿಸೆ ನಭಕೀಡಾಡಿದನು ಹಿಡಿ ಬುಗುರಿಯಂದದಲಿ (ದ್ರೋಣ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಬೆಟ್ಟಗಳು ಬಿರಿಯುವಂತೆ, ದೇವತೆಗಳು ಭಯಗೊಳ್ಳುವಂತೆ ಭೀಮನು ಗರ್ಜಿಸಿ ಮುನ್ನುಗ್ಗಲು, ವೈರಿಗಳ ಗೆಲುವನ್ನು ಅಟ್ಟಾಡಿಸಿಕೊಂಡು ಹೋದ ಪರಿಯಲ್ಲಿ, ದ್ರೋಣನು ಹಿಮ್ಮೆಟ್ಟಿದನು. ಭೀಮನು ಹಿಂದಕ್ಕೆ ನುಗ್ಗಿ ದ್ರೋಣನ ರಥವನ್ನು ಮುಂಗೈಯಿಂದ ಹಿಡಿದು ಮೇಲಕ್ಕೆತ್ತಿ ಹಿಡಿ ಬುಗುರಿಯಂತೆ ತಿರುಗಿಸಿ ಆಕಾಶಕ್ಕೆಸೆಯಲು ಕೌರವ ಸೈನ್ಯವು ಭಯದಿಮ್ದ ಕೂಗಿಕೊಂಡಿತು?

ಅರ್ಥ:
ಗಜರು: ಆರ್ಭಟಿಸು; ಗಿರಿ: ಬೆಟ್ಟ; ಬಿರಿ: ಸೀಳು; ದಿವಿಜ: ದೇವತೆ; ವ್ರಜ: ಗುಂಪು; ಭಯ: ಅಂಜು; ಹೂಣು: ಪ್ರತಿಜ್ಞೆಮಾಡು; ಹೊಕ್ಕು: ಸೇರು; ಅರಿ: ವೈರಿ; ವಿಜಯ: ಗೆಲುವು; ಹಿಮ್ಮೆಟ್ಟು: ಹಿಂದೆ ಸರಿ; ಬಳಿ: ಹತ್ತಿರ; ಬಳಿಸಲಿಸು: ಹಿಂದಟ್ಟಿಕೊಂಡು ಹೋಗು; ಸುಜನ: ಒಳ್ಳೆಯ ಮನುಷ್ಯ; ವಂದ್ಯ: ಗೌರವಿಸು; ರಥ: ಬಂಡಿ; ಹಿಡಿ: ಗ್ರಹಿಸು; ಅನಿಲಜ: ಭೀಮ; ಮುಂಗೈ: ಮುಂದಿನ ಹಸ್ತ; ಪಡೆ: ಗುಂಪು; ಗಜಬಜ: ಗಲಾಟೆ, ಕೋಲಾಹಲ; ನಭ: ಆಗಸ; ಈಡಾಡು: ಚೆಲ್ಲು; ಹಿಡಿ: ಗ್ರಹಿಸು;

ಪದವಿಂಗಡಣೆ:
ಗಜರಿನಲಿ +ಗಿರಿ +ಬಿರಿಯೆ +ದಿವಿಜ
ವ್ರಜ +ಭಯಂಗೊಳೆ +ಹೂಣೆ +ಹೊಕ್ಕ್+ಅರಿ
ವಿಜಯನ್+ಇಟ್ಟಣಿಸಿದರೆ +ಹಿಮ್ಮೆಟ್ಟಿದರೆ +ಬಳಿಸಲಿಸಿ
ಸುಜನ +ವಂದ್ಯನ +ರಥವ +ಹಿಡಿದ್+ಅನಿ
ಲಜನು +ಮುಂಗೈಗೊಂಡು +ಪಡೆ +ಗಜ
ಬಜಿಸೆ +ನಭಕ್+ಈಡಾಡಿದನು +ಹಿಡಿ +ಬುಗುರಿಯಂದದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನಭಕೀಡಾಡಿದನು ಹಿಡಿ ಬುಗುರಿಯಂದದಲಿ

ಪದ್ಯ ೪೫: ಆನೆ ಕುದುರೆಗಳನ್ನು ಯುದ್ಧಕ್ಕೆ ಹೇಗೆ ಸಿದ್ಧಪಡಿಸಿದರು?

ಕಡಿಯಣವನಾನೆಗಳ ಮೋರೆಗೆ
ತೊಡಿಸಿದರು ದಂತಿಗಳ ಹೆಗಲಲಿ
ನಿಡುನೊಗನ ಕಟ್ಟಿದರು ಕಿವಿಯಲಿ ಕೀಲುಗಳ ಸರಿಸಿ
ಜಡಿವ ಗುಳವನು ಹಾಯ್ಕಿ ಬೀಸಿದ
ರೊಡನೊಡನೆ ಹಕ್ಕರಿಕೆ ಜೋಡಿನ
ಲಡಸಿ ಗಾಲಿಯ ಬಿಗಿದು ಗಜಬಜಿಸಿತ್ತು ನೃಪಕಟಕ (ದ್ರೋಣ ಪರ್ವ, ೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಕಡಿವಾಣಗಲನ್ನು ಆನೆಗಳ ಮೋರೆಗೆ ತೊಡಿಸಿದರು. ಆನೆಗಳ ಕತ್ತಿನ ಮೇಲೆ ನೊಗವನ್ನ ಕಟ್ಟಿದರು. ಕಿವಿಯಲ್ಲಿ ಕೀಲುಗಳನ್ನು ಸರಿಸಿದರು. ಗುಳವನ್ನು ಜೋಡಿನೊಳಕ್ಕೆ ಸೇರಿಸಿ ಗಾಲಿಗೆ ಬಿಗಿದರು.

ಅರ್ಥ:
ಕಡಿವಾಣ: ಕುದುರೆಬಾಯಿಗೆ ಹಾಕುವ ಕಬ್ಬಿಣದ ಬಳೆಗೆ ಕಡಿವಾಣ ಎಂದು ಹೆಸರು; ಆನೆ: ಕುದುರೆ; ಮೋರೆ: ಮುಖ; ತೊಡಿಸು: ಜೋಡಿಸು; ದಂತಿ: ಆನೆ; ಹೆಗಲು: ಭುಜ; ನೊಗ: ಬಂಡಿಯನ್ನಾಗಲಿ, ನೇಗಿಲನ್ನಾಗಲಿ ಎಳೆಯಲು ಎತ್ತು, ಕುದುರೆಗಳ ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ಕಟ್ಟು: ನಿರ್ಮಿಸು; ಕಿವಿ: ಕರ್ಣ; ಕೀಲು: ಮರ್ಮ, ಅಗುಳಿ; ಸರಿಸು: ತಳ್ಳು; ಜಡಿ:ಸ್ರವಿಸು, ಗದರಿಸು; ಗುಳ: ಕುಂಟೆ, ನೇಗಿಲುಗಳ ತುದಿಗೆ ಜೋಡಿಸುವ ಕಬ್ಬಿಣದ ಪಟ್ಟಿ; ಹಾಯ್ಕು: ಇಡು, ಇರಿಸು; ಬೀಸು: ಬೀಸುವಿಕೆ, ತೂಗುವಿಕೆ; ಒಡನೆ: ಒಮ್ಮೆ; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಅಡಸು: ಬಿಗಿಯಾಗಿ ಒತ್ತು; ಗಾಲಿ: ಚಕ್ರ; ಬಿಗಿ: ಕಟ್ಟು, ಬಂಧಿಸು; ಗಜಬಜ: ಗೊಂದಲ; ನೃಪ: ರಾಜ; ಕಟಕ: ಸೈನ್ಯ;

ಪದವಿಂಗಡಣೆ:
ಕಡಿಯಣವನ್+ಆನೆಗಳ +ಮೋರೆಗೆ
ತೊಡಿಸಿದರು +ದಂತಿಗಳ +ಹೆಗಲಲಿ
ನಿಡುನೊಗನ +ಕಟ್ಟಿದರು +ಕಿವಿಯಲಿ +ಕೀಲುಗಳ +ಸರಿಸಿ
ಜಡಿವ +ಗುಳವನು +ಹಾಯ್ಕಿ +ಬೀಸಿದರ್
ಒಡನೊಡನೆ +ಹಕ್ಕರಿಕೆ +ಜೋಡಿನಲ್
ಅಡಸಿ +ಗಾಲಿಯ +ಬಿಗಿದು +ಗಜಬಜಿಸಿತ್ತು+ ನೃಪಕಟಕ

ಅಚ್ಚರಿ:
(೧) ಆನೆ, ದಂತಿ – ಸಮಾನಾರ್ಥಕ ಪದಗಳು

ಪದ್ಯ ೭೯: ಯಾರ ಸೈನ್ಯವು ದುರ್ಯೋಧನನ ಸಹಾಯಕ್ಕೆ ಬಂದಿತು?

ವಂಗನಂಬಟ್ಟನು ವರಾಳ ಕ
ಳಿಂಗ ಬರ್ಬರರಾನೆಗಳ ಥ
ಟ್ಟಿಂಗೆ ಕೈವೀಸಿದರು ಕೊಂಡರು ನಾಳಿವಿಲ್ಲುಗಳ
ವಂಗಡದಲೆಂಬತ್ತು ಸಾವಿರ
ತುಂಗ ಗಜಘಟೆ ಕವಿದವಿದಕಿ
ನ್ನಂಗವಿಸುವವರಾರೆನುತ ಗಜಬಜಿಸಿತರಿಸೇನೆ (ದ್ರೋಣ ಪರ್ವ, ೨ ಸಂಧಿ, ೭೯ ಪದ್ಯ)

ತಾತ್ಪರ್ಯ:
ವಂಗ, ಅಂಬಟ್ಟ, ವರಾಳ, ಕಳಿಂಗ, ಬರ್ಬರ ದೇಶಗಳ ರಾಜರು ತಮ್ಮ ಗಜ ಸೈನ್ಯವನ್ನು ಕೈಬೀಸಿ ಕರೆದು ಕೈಯಲ್ಲಿ ನಾಳಿವಿಲ್ಲುಗಳನ್ನು ಹಿಡಿದರು. ಎಂಬತ್ತು ಸಾವಿರ ಆನೆಗಳು ದೊರೆಯೆದುರಿನಲ್ಲಿ ಬಂದವು. ಇವನ್ನು ಎದುರಿಸುವವರಾರು ಎಂದು ಅವರ ಸೈನ್ಯವು ಕೊಲಾಹಲಹದಲ್ಲಿ ಮುಳುಗಿತು.

ಅರ್ಥ:
ಆನೆ: ಗಜ; ಥಟ್ಟು: ಗುಂಪು; ಕೈವೀಸು: ಸನ್ನೆ ಮಾಡು; ಕೊಂಡು: ತೆಗೆದುಕೋ; ವಿಲ್ಲು: ಬಿಲ್ಲು; ಗಜಘಟೆ: ಆನೆಗಳ ಗುಂಪು; ಕವಿ: ಆವರಿಸು; ಗಜಬಜ: ಕೋಲಾಹಲ; ಅರಿ: ವೈರಿ; ಸೇನೆ: ಸೈನ್ಯ; ತುಂಗ: ಶ್ರೇಷ್ಠ;

ಪದವಿಂಗಡಣೆ:
ವಂಗನ್+ಅಂಬಟ್ಟನು +ವರಾಳ +ಕ
ಳಿಂಗ +ಬರ್ಬರರ್+ಆನೆಗಳ +ಥ
ಟ್ಟಿಂಗೆ +ಕೈವೀಸಿದರು +ಕೊಂಡರು +ನಾಳಿ+ವಿಲ್ಲುಗಳ
ವಂಗಡದಲ್+ಎಂಬತ್ತು +ಸಾವಿರ
ತುಂಗ +ಗಜಘಟೆ +ಕವಿದವ್+ಇದಕಿನ್
ಅಂಗವಿಸುವವರಾರ್+ಎನುತ +ಗಜಬಜಿಸಿತ್+ಅರಿಸೇನೆ

ಅಚ್ಚರಿ:
(೧) ಸಹಾಯಕ್ಕೆ ಬಂದ ರಾಜ್ಯಗಳು – ವಂಗ, ಅಂಬಟ್ಟ, ವರಾಳ, ಕಳಿಂಗ, ಬರ್ಬರ

ಪದ್ಯ ೨: ಯುದ್ಧದಲ್ಲಿ ಯಾರು ಗರ್ಜಿಸಿದರು?

ಕೇಳು ಜನಮೇಜಯ ಧರಿತ್ರೀ
ಪಾಲ ಹಿಮಕರಕುಲಲಲಾಮರು
ಕಾಳೆಗಕೆ ಕೈದಟ್ಟಿ ಹರಿದುದು ಕಳನ ಚೌಕದಲಿ
ಆಳು ಗಜಮಜಿಸಿತ್ತು ರಾವುತ
ರೋಳಿ ಸೇರಿತು ಸರಸದಲಿ ದೆ
ಖ್ಖಾಳಿಸಿದುದಿಭರಥನಿಕಾಯದ ಬೆರಳ ಬೊಬ್ಬೆಯಲಿ (ಭೀಷ್ಮ ಪರ್ವ, ೩ ಸಂಧಿ, ೨ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಚಂದ್ರವಂಶದ ರಾಜರು ಕೈತಟ್ಟಿ ಯುದ್ಧಕ್ಕೆ ರಣರಂಗದಲ್ಲಿ ನಿಂತರು, ಕಾಲಾಳುಗಳು, ರಾವುತರು, ರಥಿಕರು, ಮಾವುತರು ಎಲ್ಲರೂ ಜೋರಾಗಿ ಗರ್ಜಿಸಿದರು.

ಅರ್ಥ:
ಕೇಳು: ಆಲಿಸು; ಧರಿತ್ರೀಪಾಲ: ರಾಜ; ಧರಿತ್ರೀ: ಭೂಮಿ; ಹಿಮಕರ: ಚಂದ್ರ; ಕುಲ: ವಂಶ; ಲಲಾಮ: ತಿಲಕ; ಕಾಳಗ: ಯುದ್ಧ; ಕೈದಟ್ಟಿ: ಜೋರಾಗಿ; ಹರಿ: ಚಲಿಸು; ಕಳ: ರಣರಂಗ; ಚೌಕ: ಅಂಗಳ; ಆಳು: ಸೈನಿಕ; ಗಜಬಜಿಸು: ಗೊಂದಲ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಓಳಿ: ಸಮೂಹ; ಸೇರು: ಜೊತೆಗೂಡು; ಸರಸ: ಚೆಲ್ಲಾಟ, ವಿನೋದ; ದೆಖ್ಖಾಳಿಸು: ಗರ್ಜಿಸು; ಇಭ: ಆನೆ; ರಥ: ಬಂಡಿ; ನಿಕಾಯ: ಗುಂಪು; ಬೆರಳ: ಅಂಗುಲಿ; ಬೊಬ್ಬೆ: ಗರ್ಜಿಸು, ಕೂಗು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಹಿಮಕರ+ಕುಲ+ಲಲಾಮರು
ಕಾಳೆಗಕೆ+ ಕೈದಟ್ಟಿ +ಹರಿದುದು +ಕಳನ +ಚೌಕದಲಿ
ಆಳು+ ಗಜಬಜಿಸಿತ್ತು +ರಾವುತರ್
ಓಳಿ +ಸೇರಿತು +ಸರಸದಲಿ+ ದೆ
ಖ್ಖಾಳಿಸಿದುದ್+ಇಭರಥ+ನಿಕಾಯದ +ಬೆರಳ +ಬೊಬ್ಬೆಯಲಿ

ಅಚ್ಚರಿ:
(೧) ಮಾವುತರು ಎಂದು ಹೇಳಲು – ಇಭರಥ ನಿಕಾಯ
(೨) ಗಜಬಜಿಸು, ಬೊಬ್ಬೆ, ದೆಖ್ಖಾಳಿ – ಸಾಮ್ಯಾರ್ಥ ಪದಗಳು

ಪದ್ಯ ೪೦: ಧರ್ಮಜನು ಯುಯುತ್ಸುವನ್ನು ಹೇಗೆ ಬರೆಮಾಡಿಕೊಂಡನು?

ಎನಗೆ ಭೀಮಾರ್ಜುನರವೊಲು ನೀ
ನನುಜನಲ್ಲದೆ ಬೇರೆ ನಿನ್ನಲಿ
ಮನವಿಭೇದವ ಬಲ್ಲೆನೇ ಬಾಯೆನುತ ಕೈವಿಡಿದು
ಜನಪನಭಯವನಿತ್ತು ಕೌರವ
ನನುಜನನುಕೊಂಡೊಯ್ದನಾಹವ
ದನುಕರಣೆಯಲಿ ಸೇನೆ ಗಜಬಜಿಸಿತ್ತು ಬೊಬ್ಬೆಯಲಿ (ಭೀಷ್ಮ ಪರ್ವ, ೨ ಸಂಧಿ, ೪೦ ಪದ್ಯ)

ತಾತ್ಪರ್ಯ:
ಶರಣಿಗೆ ಬಂದ ಯುಯುತ್ಸುವಿಗೆ ಧರ್ಮಜನು ಅಭಯವನ್ನಿತ್ತು, ನೀನು ನನಗೆ ಭೀಮಾರ್ಜುನರ ಸಮಾನ, ನೀನು ಬೇರೆಯೆಂಬ ಭಾವನೆ ನನಗಿಲ್ಲ, ಬಾ ಎಂಚು ಧರ್ಮಜನು ಅಭಯವನ್ನು ನೀಡಿ ಅವನನ್ನು ಕರೆದೊಯ್ದನು. ಸೈನ್ಯವು ಕದನ ಕುತೂಹಲದಿಂದ ಬೊಬ್ಬೆಯಿಡುತ್ತಿತ್ತು.

ಅರ್ಥ:
ಅನುಜ: ತಮ್ಮ; ಬೇರೆ: ಅನ್ಯ; ಮನ: ಮನಸ್ಸು; ವಿಭೇದ: ವ್ಯತ್ಯಾಸ, ಭಿನ್ನತೆ; ಬಲ್ಲೆ: ತಿಳಿ; ಬಾ: ಆಗಮಿಸು; ಕೈ: ಹಸ್ತ; ಜನಪ: ರಾಜ; ಅಭಯ: ರಕ್ಷಣೆ; ಒಯ್ಯು: ಕರೆದುಕೊಂಡು ಹೋಗು; ಆಹವ: ಯುದ್ಧ; ಅನುಕರಣೆ: ಮತ್ತೊಬ್ಬರು ಮಾಡಿದಂತೆ ಮಾಡುವುದು; ಗಜಬಜ:ಗದ್ದಲ; ಬೊಬ್ಬೆ: ಜೋರಾದ ಕೂಗು;

ಪದವಿಂಗಡಣೆ:
ಎನಗೆ+ ಭೀಮಾರ್ಜುನರವೊಲು +ನೀನ್
ಅನುಜನ್+ಅಲ್ಲದೆ +ಬೇರೆ +ನಿನ್ನಲಿ
ಮನ+ವಿಭೇದವ+ ಬಲ್ಲೆನೇ+ ಬಾ+ಎನುತ +ಕೈವಿಡಿದು
ಜನಪನ್+ಅಭಯವನಿತ್ತು +ಕೌರವನ್
ಅನುಜನ್+ಅನುಕೊಂಡೊಯ್ದನ್+ಆಹವದ್
ಅನುಕರಣೆಯಲಿ +ಸೇನೆ+ ಗಜಬಜಿಸಿತ್ತು +ಬೊಬ್ಬೆಯಲಿ

ಅಚ್ಚರಿ:
(೧) ಅನುಜ – ೨, ೫ ಸಾಲಿನ ಮೊದಲ ಪದ

ಪದ್ಯ ೧೨: ಕೀಚಕನೇಕೆ ಗಲಿಬಿಲಿಗೊಂಡನು?

ಸೂರೆವೋಯಿತು ಚಿತ್ತ ಕಂಗಳು
ಮಾರುವೋದವು ಖಳನ ಧೈರ್ಯವು
ತೂರಿ ಪೋದುದು ಕರಣದಲಿ ಕಳವಳದ ಬೀಡಾಯ್ತು
ಮೀರಿಪೊಗುವಂಗಜನ ಶರದಲಿ
ದೋರುವೋಯಿತು ಹೃದಯ ಕಣ್ಣುರಿ
ಗಾರಿಯಿವಳಾರೆನುತ ಗಜಬಜಿಸಿದನು ನಿಮಿಷದಲಿ (ವಿರಾಟ ಪರ್ವ, ೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಕೀಚಕನ ಹೃದಯವು ದ್ರೌಪದಿಯ ರೂಪಕ್ಕೆ ಸೂರೆಹೋಯಿತು; ಕಣ್ಣುಗಳು ಅವಳತ್ತ ನೆಟ್ಟು ಮೋಹಗೊಂಡವು, ಮನಸ್ಸಿನ ಧೈರ್ಯವು ಎತ್ತಲೋ ಹೋಗಿ ಬಿಟ್ಟಿತು, ಕಳವಳವು ಮನಸ್ಸಿನಲ್ಲಿ ಬೀಡುಬಿಟ್ಟಿತು, ಕಾಮನ ಬಾಣದ ಪ್ರವೇಶದಿಂದ ಹೃದಯದಲ್ಲಿ ಬಿರುಕುಬಿಟ್ಟಿತು, ತನ್ನ ರೂಪಿನಿಂದ ನನ್ನ ಕಣ್ಣುಗಳನ್ನು ಉರಿಸುವ ಇವಳಾರು ಯಾರು ಎಂದು ಚಡಪಡಿಸಿದನು.

ಅರ್ಥ:
ಸೂರೆ: ಕೊಳ್ಳೆ, ಲೂಟಿ; ಚಿತ್ತ: ಮನಸ್ಸು; ಕಂಗಳು: ನೋಟ; ಮಾರುವೋಗು: ಮೋಹಗೊಳ್ಳು; ಖಳ: ದುಷ್ಟ; ಧೈರ್ಯ: ಪರಾಕ್ರಮ; ತೂರು: ಹೊರಹಾಕು; ಪೋದು: ಹೋಗು; ಕರಣ: ಜ್ಞಾನೇಂದ್ರಿಯ; ಕಳವಳ: ಗೊಂದಲ; ಬೀಡು: ನೆಲೆ; ಮೀರು: ಉಲ್ಲಂಘಿಸು; ಅಂಗಜ: ಕಾಮ; ಶರ: ಬಾಣ; ಹೃದಯ: ಎದೆ; ಕಣ್ಣು: ನಯನ; ಉರಿ: ನೋಯಿಸು; ಗಜಬಜ: ಗಲಾಟೆ, ಕೋಲಾಹಲ; ನಿಮಿಷ: ಕಾಲದ ಪ್ರಮಾಣ; ತೋರು: ಕಾಣು;

ಪದವಿಂಗಡಣೆ:
ಸೂರೆವೋಯಿತು +ಚಿತ್ತ +ಕಂಗಳು
ಮಾರುವೋದವು+ ಖಳನ +ಧೈರ್ಯವು
ತೂರಿ +ಪೋದುದು +ಕರಣದಲಿ +ಕಳವಳದ +ಬೀಡಾಯ್ತು
ಮೀರಿ+ಪೊಗುವ್+ಅಂಗಜನ+ ಶರದಲಿ
ದೋರುವೋಯಿತು +ಹೃದಯ +ಕಣ್ಣುರಿಗ್
ಆರಿಯಿವಳ್+ಆರೆನುತ+ ಗಜಬಜಿಸಿದನು+ ನಿಮಿಷದಲಿ

ಅಚ್ಚರಿ:
(೧) ಕೀಚನಕ ಮನಸ್ಥಿತಿಯನ್ನು ವರ್ಣಿಸುವ ಪರಿ – ಸೂರೆವೋಯಿತು ಚಿತ್ತ; ಕಂಗಳು ಮಾರುವೋದವು; ಖಳನ ಧೈರ್ಯವು ತೂರಿ ಪೋದುದು; ಕರಣದಲಿ ಕಳವಳದ ಬೀಡಾಯ್ತು

ಪದ್ಯ ೪೫: ಗೋಗ್ರಹಣದ ವಾರ್ತೆಯನ್ನು ಆಸ್ಥಾನದಲ್ಲಿ ಯಾವ ಸ್ಥಿತಿ ನಿರ್ಮಾಣವಾಯಿತು?

ಕೇಳಿ ಬಿಸುಸುಯ್ದನು ವಿರಾಟ ನೃ
ಪಾಲನಿಂದಿನಲಳಿದನೇ ಕ
ಟ್ಟಾಳು ಕೀಚಕನೆನುತ ನೋಡಿದನಂದು ಕೆಲಬಲನ
ಆಳು ಗಜಬಜಿಸಿತ್ತು ಹಾಯಿಕು
ವೀಳೆಯವನಿಂದೆನಗೆ ತನಗೆಂ
ದೋಲಗದೊಳಬ್ಬರಣೆ ಮಸಗಿತು ಕದಡಿತಾಸ್ಥಾನ (ವಿರಾಟ ಪರ್ವ, ೫ ಸಂಧಿ, ೪೫ ಪದ್ಯ)

ತಾತ್ಪರ್ಯ:
ಗೋಗ್ರಹಣದ ಸುದ್ದಿಯನ್ನು ಕೇಳಿ ವಿರಾಟನು ನಿಟ್ಟುಸಿರು ಬಿಟ್ಟು ಅಯ್ಯೋ ಕೀಚಕನು ಈ ಹಿಂದೆ ಅಳಿದನೇ, ಅವನು ಇದ್ದಿದ್ದರೆ ಹೀಗೆ ಆಕ್ರಮಿಸುವ ಧೈರ್ಯ ಯಾರಿಗೂ ಬರುತ್ತಿರಲಿಲ್ಲ ಎಂದು ಉದ್ಗರಿಸಿ, ಸುತ್ತ ಮುತ್ತಲಿರುವವರನ್ನು ನೋಡಿದನು. ಆಸ್ಥಾನದಲ್ಲಿದ್ದ ಯೋಧರು ಯುದ್ಧ ಮಾಡಲು ನನಗೆ ವೀಳೆಯವನ್ನು ಕೊಡಿ ಎಂದು ಮುಂದೆ ಬಂದರು, ಆಸ್ಥಾನದಲ್ಲಿ ಕೋಲಾಹಲವಾಯಿತು.

ಅರ್ಥ:
ಕೇಳಿ: ಆಲಿಸಿ; ಬಿಸುಸುಯ್: ನಿಟ್ಟುಸಿರು ಬಿಡು; ನೃಪಾಲ: ರಾಜ; ಅಳಿ: ನಾಶವಾಗು; ಕಟ್ಟಾಳು: ನಂಬಿಕಸ್ಥ ಸೇವಕ; ನೋಡು: ವೀಕ್ಷಿಸು; ಕೆಲ: ಕೆಲವರು; ಬಲ: ಸೈನ್ಯ; ಆಳು: ಸೇವಕ; ಗಜಬಜ: ಗೊಂದಲ; ಹಾಯಿಕು:ಕಳಚು, ತೆಗೆ; ವೀಳೆ: ಆಮಂತ್ರಣ; ಓಲಗ: ದರ್ಬಾರು, ಆಸ್ಥಾನ; ಅಬ್ಬರಣೆ: ಕೋಲಾಹಲ; ಮಸಗು: ಹರಡು; ಕದಡು: ಕಲಕು;

ಪದವಿಂಗಡಣೆ:
ಕೇಳಿ +ಬಿಸುಸುಯ್ದನು +ವಿರಾಟ +ನೃ
ಪಾಲನಿಂದ್+ಇನಲ್+ಅಳಿದನೇ +ಕ
ಟ್ಟಾಳು +ಕೀಚಕನ್+ಎನುತ+ ನೋಡಿದನ್+ಅಂದು +ಕೆಲಬಲನ
ಆಳು +ಗಜಬಜಿಸಿತ್ತು +ಹಾಯಿಕು
ವೀಳೆಯವನ್+ಇಂದ್+ಎನಗೆ +ತನಗೆಂದ್
ಓಲಗದೊಳ್+ಅಬ್ಬರಣೆ+ ಮಸಗಿತು +ಕದಡಿತ್+ಆಸ್ಥಾನ

ಅಚ್ಚರಿ:
(೧) ಓಲಗ, ಆಸ್ಥಾನ – ಸಮನಾರ್ಥಕ ಪದ – ೬ ಸಾಲಿನ ಮೊದಲ ಮತ್ತು ಕೊನೆ ಪದ
(೨) ಆಳು – ೩, ೪ ಸಾಲಿನ ಮೊದಲ ಪದ