ಪದ್ಯ ೧೭: ಕುಂತಿಯು ಆಟಕ್ಕೆ ಬೊಂಬೆಯನ್ನು ತರಲು ಯಾರನ್ನು ಸ್ಮರಿಸಿದಳು?

ಮಗುವುತನದಲಿ ಬೊಂಬೆಯಾಟಕೆ
ಮಗುವನೇ ತಹೆನೆಂದು ಬಂದಳು
ಗಗನನದಿಯಲಿ ಮಿಂದಳುಟ್ಟಳು ಲೋಹಿತಾಂಬರವ
ವಿಗಡಮುನಿಪನ ಮಮ್ತ್ರವನು ನಾ
ಲಗೆಗೆ ತಂದಳು ರಾಗ ರಸದಲಿ
ಗಗನಮಣಿಯನು ನೋಡಿ ಕಣ್ಮುಚ್ಚಿದಳು ಯೋಗದಲಿ (ಆದಿ ಪರ್ವ, ೩ ಸಂಧಿ, ೧೭ ಪದ್ಯ)

ತಾತ್ಪರ್ಯ:
ಕುಂತಿಯು ಚಿಕ್ಕವಳಾಗಿದ್ದಾಗ ಬೊಂಬೆಯಾಟವನ್ನಾಡುತ್ತಿದ್ದಳು. ಜೊತೆಯ ಹುಡುಗಿಯರು ಆಟದ ಮಗುವಿನ ಗೊಮ್ಬೆಯನ್ನು ಕುಂತಿಗೆ ಕೊಡಲಿಲ್ಲ, ದೂರ್ವಾಸರು ಉಪದೇಶಿಸಿದ ಮಂತ್ರಗಳು ಗೊತ್ತಿದ್ದುದರಿಂದ ತಾನು ಗೊಂಬೆಯ ಬದಲಿಗೆ ನಿಜವಾದ ಮಗುವನ್ನು ತರುತ್ತೇನೆಂದು ಹಟತೊಟ್ಟು ಗಂಗಾನದಿಗೆ ಹೋಗಿ ಸ್ನಾನಮಾಡಿ ಕೆಂಪುವಸ್ತ್ರವನ್ನುಟ್ಟು ದೂರ್ವಾಸರು ಉಪದೇಶಿಸಿದ ಮಂತ್ರವನ್ನು ಜಪಿಸುತ್ತಾ ಸೂರ್ಯನನ್ನು ಪ್ರೀತಿಯಿಂದ ನೋಡಿ ಕಣ್ಣುಮುಚ್ಚಿದಳು.

ಅರ್ಥ:
ಮಗು: ಚಿಕ್ಕವ; ಬೊಂಬೆ: ಗೊಂಬೆ; ಆಟ: ಕ್ರೀಡೆ; ತಹೆನು: ತರುವೆನು; ಬಂದಳು: ಆಗಮಿಸು; ಗಗನನದಿ: ಸುರನದಿ, ಗಂಗೆ; ಮಿಂದು: ತೋಯು, ಮುಳುಗು; ಲೋಹಿ: ಕೆಂಪುಬಣ್ಣ; ಅಂಬರ: ಬಟ್ಟೆ; ವಿಗಡ: ಶೌರ್ಯ, ಪರಾಕ್ರಮ; ಮುನಿ: ಋಷಿ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ನಾಲಗೆ: ಜಿಹ್ವೆ; ತಂದು: ಬರೆಮಾಡು; ರಾಗ: ಪ್ರೀತಿ, ಮೋಹ; ಗಗನಮಣಿ: ಸೂರ್ಯ; ನೋಡು: ವೀಕ್ಷಿಸು; ಕಣ್ಣು: ನಯನ; ಮುಚ್ಚು: ಮರೆಮಾಡು; ಯೋಗ: ಹೊಂದಿಸು;

ಪದವಿಂಗಡಣೆ:
ಮಗುವುತನದಲಿ +ಬೊಂಬೆ+ಆಟಕೆ
ಮಗುವನೇ +ತಹೆನೆಂದು +ಬಂದಳು
ಗಗನನದಿಯಲಿ +ಮಿಂದಳ್+ಉಟ್ಟಳು +ಲೋಹಿತಾಂಬರವ
ವಿಗಡಮುನಿಪನ+ ಮಂತ್ರವನು +ನಾ
ಲಗೆಗೆ +ತಂದಳು +ರಾಗ +ರಸದಲಿ
ಗಗನಮಣಿಯನು +ನೋಡಿ +ಕಣ್ಮುಚ್ಚಿದಳು +ಯೋಗದಲಿ

ಅಚ್ಚರಿ:
(೧) ಗಂಗೆಯನ್ನು ಗಗನನದಿ ಎಂದು ಕರೆದಿರುವುದು
(೨) ಗಗನ ಪದದ ಬಳಕೆ – ಗಗನನದಿ, ಗಗನಮಣಿ

ಪದ್ಯ ೩೮: ಯಕ್ಷ ಧರ್ಮಜನ ಸಂವಾದ – ೨

ಗಗನವಬುಧಿಗೆ ಸರಿ ಸರೋವರ
ಜಗಕೆ ಹಿತವನು ಶಕ್ರ ಮರ್ತ್ಯಾ
ಳಿಗಳ ಮಾತಾರೂಪು ಗೋವುಗಳದು ನಿದಾನಕಣ
ಬಗೆಯಲಗ್ಗದ ಸತ್ಯವೆಂಬುದು
ಗಗನಮಣಿಗೆಣೆಯೆನಲು ಚಿತ್ತಕೆ
ಸೊಗಸಿ ತಲೆದೂಗಿದನು ಮಗುಳಿಂತೆಂದನಾ ಖಚರ (ಅರಣ್ಯ ಪರ್ವ, ೨೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಆಕಾಶವು ಸಮುದ್ರಕ್ಕೆ ಸಮಾನವಾದ ಸರೋವರ, ಇಂದ್ರನೇ ಜಗತ್ತಿಗೆ ಹಿತವ ನೀಡುವವನು. ಮನುಷ್ಯರಿಗೆ ಗೋವೇ ತಾಯಿ, ಸತ್ಯವೆನ್ನುವುದು ಸೂರ್ಯ ಪ್ರಕಾಶಕ್ಕೆ ಸಮ, ಎಂದು ಧರ್ಮಜನು ಹೇಳಲು ಯಕ್ಷನು ತಲೆದೂಗಿ ಮತ್ತೆ ಕೇಳಿದನು.

ಅರ್ಥ:
ಗಗನ: ಆಗಸ; ಅಬುಧಿ: ಸಾಗರ; ಸರಿ: ಸಮಾನ; ಸರೋವರ: ಸರಸಿ; ಜಗ: ಪ್ರಪಂಚ; ಹಿತ: ಒಳ್ಳೆಯದು; ಶಕ್ರ: ಇಂದ್ರ; ಮರ್ತ್ಯಾಳಿ: ಮನುಷ್ಯರ ಗುಂಪು; ಮಾತೆ: ತಾಯಿ; ರೂಪ: ಆಕಾರ; ಗೋವು: ಆಕಳು; ನಿದಾನ: ಕಾರಣ, ನಿಮಿತ್ತ, ಮೂಲಕಾರಣ; ಬಗೆ: ಅಭಿಪ್ರಾಯ, ಮತ; ಅಗ್ಗ: ಶ್ರೇಷ್ಠ; ಸತ್ಯ: ನಿಜ, ದಿಟ; ಗಗನಮಣಿ: ಸೂರ್ಯ; ಎಣೆ: ಸಮ, ದಾಟಿ; ಎನಲು: ಹೇಳಲು; ಚಿತ್ತ: ಮನಸ್ಸು; ಸೊಗಸು: ಚೆಲುವು; ತಲೆ: ಶಿರ; ತೂಗು: ಅಲ್ಲಾಡಿಸು; ಮಗುಳು: ಮತ್ತೆ, ಪುನಃ; ಖಚರ: ಗಂಧರ್ವ;

ಪದವಿಂಗಡಣೆ:
ಗಗನವ್+ಅಬುಧಿಗೆ +ಸರಿ+ ಸರೋವರ
ಜಗಕೆ+ ಹಿತವನು +ಶಕ್ರ +ಮರ್ತ್ಯಾ
ಳಿಗಳ+ ಮಾತಾರೂಪು+ ಗೋವುಗಳ್+ ಅದು+ ನಿದಾನಕಣ
ಬಗೆಯಲ್+ಅಗ್ಗದ +ಸತ್ಯವೆಂಬುದು
ಗಗನಮಣಿಗ್+ಎಣೆ+ಎನಲು +ಚಿತ್ತಕೆ
ಸೊಗಸಿ+ ತಲೆದೂಗಿದನು +ಮಗುಳ್+ಇಂತೆಂದನಾ +ಖಚರ

ಅಚ್ಚರಿ:
(೧) ಗೋವಿನ ಮಹತ್ವ – ಮರ್ತ್ಯಾಳಿಗಳ ಮಾತಾರೂಪು ಗೋವುಗಳದು ನಿದಾನಕಣ
(೨) ಸೂರ್ಯನನ್ನು ಗಗನಮಣಿ ಪದದ ಬಳಕೆ

ಪದ್ಯ ೨: ಕರ್ಣನು ಸೂರ್ಯನಿಗೆ ಏನು ಹೇಳಿದನು?

ಮಗನೆ ಕೇಳೈ ಸುರಪನೆಯ್ದುವ
ನಗಡುಗೊಳಿಸಲು ಕವಚವನು ನೀ
ತೆಗೆದುಕೊಡದಿರು ಕುಂಡಲವ ನೀಡದಿರು ನೀನೆನಲು
ಮುಗಿದ ಕರದಲಿ ನುಡಿದನಾಗಳೆ
ಗಗನಮಣಿಯನು ನೋಡುತವೆ ಮಿಗೆ
ಸುಗಮವೇ ಸಂಸಾರ ನಿತ್ಯವೆ ತಾತ ಕೇಳೆಂದ (ಅರಣ್ಯ ಪರ್ವ, ೨೩ ಸಂಧಿ, ೨ ಪದ್ಯ)

ತಾತ್ಪರ್ಯ:
ಸೂರ್ಯನು ತನ್ನ ಪುತ್ರನ ಬಳಿ ಬಂದು, ಮಗೂ ನಿನ್ನನ್ನು ಹಾಳುಮಾಡಲು ಇಂದ್ರನು ಬಂದು ಬೇಡುತ್ತಾನೆ, ಆಗ ಅವನಿಗೆ ನಿನ್ನ ಕವಚ, ಕುಂಡಲವನ್ನು ಕೊಡಬೇಡ ಎಂದು ಹೇಳಲು, ಕರ್ಣನು ತಂದೆಗೆ ಕೈಮುಗಿದು ತಂದೆ, ಈ ಸಂಸಾರವು ಸರಾಗವೇ, ನಿತ್ಯವೇ ಹೇಳು ಎಂದು ಕೇಳಿದನು.

ಅರ್ಥ:
ಮಗ: ಸುತ; ಕೇಳು: ಆಲಿಸು; ಸುರಪ: ಇಂದ್ರ; ಐಯ್ದು: ಬಂದು ಸೇರು; ಅಗಡು: ತುಂಟತನ; ಕವಚ: ಹೊದಿಕೆ; ತೆಗೆ: ಹೊರತರು; ಕುಂಡಲ: ಕಿವಿಯ ಆಭರಣ; ಮುಗಿದ ಕರ: ನಮಸ್ಕಾರ; ಕರ: ಹಸ್ತ; ನುಡಿ: ಮಾತಾಡು; ಗಗನಮಣಿ: ಸೂರ್ಯ; ಗಗನ: ಆಗಸ; ನೋಡು: ವೀಕ್ಷಿಸು; ಮಿಗೆ: ಮತ್ತು; ಸುಗಮ: ಸರಾಗ; ಸಂಸಾರ: ಹುಟ್ಟು, ಜನ್ಮ; ನಿತ್ಯ: ಯಾವಾಗಲು; ತಾತ: ತಂದೆ; ಕೇಳು: ಆಲಿಸು;

ಪದವಿಂಗಡಣೆ:
ಮಗನೆ +ಕೇಳೈ +ಸುರಪನ್+ಐಯ್ದುವನ್
ಅಗಡುಗೊಳಿಸಲು +ಕವಚವನು +ನೀ
ತೆಗೆದುಕೊಡದಿರು+ ಕುಂಡಲವ +ನೀಡದಿರು +ನೀನ್+ಎನಲು
ಮುಗಿದ+ ಕರದಲಿ +ನುಡಿದನ್+ಆಗಳೆ
ಗಗನಮಣಿಯನು +ನೋಡುತವೆ +ಮಿಗೆ
ಸುಗಮವೇ +ಸಂಸಾರ +ನಿತ್ಯವೆ+ ತಾತ +ಕೇಳೆಂದ

ಅಚ್ಚರಿ:
(೧) ಕರ್ಣನ ನುಡಿ: ಸುಗಮವೇ ಸಂಸಾರ ನಿತ್ಯವೆ;

ಪದ್ಯ ೨೩: ಕೃಷ್ಣನ ದೇಹದಲ್ಲಿ ಏನೆಲ್ಲಾ ಇದೆ?

ಗಗನವೀತನ ನಾಭಿ ದಶದಿ
ಕ್ಕುಗಳು ಕಿವಿ ಫಣಿಲೋಕ ವಿಮಳಾಂ
ಘ್ರಿಗಳು ಧೃವನಿಂ ಮೇಲು ಭಾಗ ಮುರಾಮ್ತಕನ ಮುಕುಟ
ಗಗನಮಣಿ ಶಂಕರ ವಿರಿಂಚಾ
ದಿಗಳು ದೇವನ ರೋಮಕೂಪದೊ
ಳಗಣಿತಾಮರ ನಿಕರವಿಹುದಿದನರಿವರಾರೆಂದ (ಸಭಾ ಪರ್ವ, ೧೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಹೊಕ್ಕಳು ಆಕಾಶವಾಗಿದೆ, ಹತ್ತುದಿಕ್ಕುಗಳು ಇವನ ಕಿವಿ, ಪಾತಾಳಲೋಕವು ಇವನ ಪಾದಗಳು, ಇವನ ಕಿರೀಟವು ಧೃವ ನಕ್ಷತ್ರದ ಮೇಲಿದೆ. ಶಂಕರ, ಬ್ರಹ್ಮ, ಸೂರ್ಯ ಮತ್ತು ಲೆಕ್ಕವಿಲ್ಲದಷ್ಟು ದೇವತೆಗಳೂ ಇವನ ರೋಮಕೂಪಗಳಲ್ಲಿದ್ದಾರೆ ಎಂದು ಭೀಷ್ಮರು ಶ್ರೀಕೃಷ್ಣನ ವಿಶ್ವರೂಪವನ್ನು ವರ್ಣಿಸಿದರು.

ಅರ್ಥ:
ಗಗನ: ಆಗಸ, ಆಕಾಶ; ನಾಭಿ: ಹೊಕ್ಕಳು; ದಶ: ಹತ್ತು; ದಿಕ್ಕು: ದಿಸೆ; ಕಿವಿ: ಕರ್ಣ; ಫಣಿ: ಹಾವು, ಉರಗ; ಲೋಕ: ಜಗತ್ತು; ವಿಮಳ: ನಿರ್ಮಲ; ಅಂಘ್ರಿ: ಪಾದ; ಧೃವ: ನಕ್ಷತ್ರದ ಹೆಸರು; ಮೇಲು: ಅಗ್ರಭಾಗ; ಮುರಾಂತಕ: ಕೃಷ್ಣ; ಮುಕುಟ: ಕಿರೀಟ; ಗಗನಮಣಿ: ಸೂರ್ಯ; ಶಂಕರ: ಶಿವ; ವಿರಿಂಚಿ: ಬ್ರಹ್ಮ; ಆದಿ: ಮುಂತಾದ; ದೇವ: ಸುರ; ರೋಮ: ಕೂದಲು; ಕೂಪ:ಗುಂಡಿ, ಬಾವಿ; ಅಗಣಿತ: ಲೆಕ್ಕವಿಲ್ಲದಷ್ಟು; ಅಮರ: ದೇವತೆಗಳು; ನಿಕರ: ಗುಂಪು; ಅರಿ: ತಿಳಿ;

ಪದವಿಂಗಡಣೆ:
ಗಗನವ್+ಈತನ +ನಾಭಿ +ದಶದಿ
ಕ್ಕುಗಳು +ಕಿವಿ +ಫಣಿಲೋಕ +ವಿಮಳ+
ಅಂಘ್ರಿಗಳು +ಧೃವನಿಂ +ಮೇಲು +ಭಾಗ +ಮುರಾಂತಕನ +ಮುಕುಟ
ಗಗನಮಣಿ +ಶಂಕರ +ವಿರಿಂಚಾ
ದಿಗಳು +ದೇವನ +ರೋಮ+ಕೂಪದೊಳ್
ಅಗಣಿತ+ಅಮರ+ ನಿಕರವಿಹುದ್+ಇದನ್+ಅರಿವರಾರೆಂದ

ಅಚ್ಚರಿ:
(೧) ಸೂರ್ಯನಿಗೆ ಗಗನಮಣಿ ಎಂದು ಕರೆದಿರುವುದು
(೨) ಕೂದಲನ್ನು ರೋಮಕೂಪ ವೆಂದು ಕರೆದಿರುವುದು

ಪದ್ಯ ೩೪: ದುರ್ಯೋಧನನು ಹೊರಡುವಾಗ ಪರಿಸರದಲ್ಲಿ ಏನನ್ನು ಕಂಡನು?

ಹೊಗೆದುದಂಬರವವನಿ ನಡುಗಿತು
ಗಗನ ಮಣಿ ಪರಿವೇಷದಲಿ ತಾ
ರೆಗಳು ಹೊಳೆದವು ಸುರಿದುವರುಣಾಂಬುಗಳಧಾರೆಗಳು
ದಿಗುವಳಯದಲಿ ಧೂಮಕೇತುಗ
ಳೊಗೆದವೆನಲುತ್ಪಾತ ಕೋಟಿಯ
ಬಗೆಯದವನಿಪ ಪುರವ ಹೊರವಂಟನು ಸಗಾಢದಲಿ (ವಿರಾಟ ಪರ್ವ, ೫ ಸಂಧಿ, ೩೪ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಸೈನ್ಯದ ಜೊತೆಗೆ ವಿರಾಟನಗರಕ್ಕೆ ಹೊರಟನು, ಆಗ ಆಕಾಶದಲ್ಲಿ ಹೊಗೆಯು ಆವರಿಸಿತು, ಭೂಮಿ ನಡುಗಿತು, ಸೂರ್ಯನ ಸುತ್ತ ನಕ್ಷತ್ರಗಳು ಕಾಣಿಸಿದವು ಕೆಂಪುನೀರಿನ ಧಾರೆ ಸುರಿದವು, ಆಕಾಶದಲ್ಲಿ ಧೂಮಕೇತುಗಳು ಕಂಡವು. ಅನೇಕ ಉತ್ಪಾತಗಳನ್ನು ಲೆಕ್ಕಿಸದೆ ದುರ್ಯೋಧನನು ರಭಸದಲಿ ಊರನ್ನು ಬಿಟ್ಟು ಹೊರಟನು.

ಅರ್ಥ:
ಹೊಗೆ: ಧೂಮ; ಅಂಬರ: ಆಗಸ, ಬಾನು; ಅವನಿ: ಭೂಮಿ; ನಡುಗು: ಅಲುಗಾಡು; ಗಗನ: ಆಕಾಶ; ಮಣಿ: ಬೆಲೆಬಾಳುವ ಹರಳು; ಗಗನಮಣಿ: ಸೂರ್ಯ; ಪರಿವೇಷ: ಸುತ್ತುವರಿದಿರುವುದು, ಪ್ರಭಾವಳಿ; ತಾರೆ: ನಕ್ಷತ್ರ; ಹೊಳೆ: ಪ್ರಕಾಶಿಸು; ಸುರಿ: ಬೀಳು; ಅರುಣಾಂಬು: ಕೆಂಪುನೀರು; ಧಾರೆ; ವರ್ಷ; ದಿಗುವಳಯ: ದಿಕ್ಕು; ಧೂಮಕೇತು: ಉಲ್ಕೆ; ಒಗೆದವ್: ಹೊರಹಾಕು; ಅವನಿಪ: ರಾಜ; ಕೋಟಿ: ಲೆಕ್ಕಕ್ಕೆ ಸಿಗದ; ಪುರ: ಊರು; ಹೊರವಂಟ: ಹೊರಟನು; ಸಗಾಢ:ಜೋರು; ಉತ್ಪಾತ: ಅಪಶಕುನ;

ಪದವಿಂಗಡಣೆ:
ಹೊಗೆದುದ್+ಅಂಬರವ್+ಅವನಿ+ ನಡುಗಿತು
ಗಗನ ಮಣಿ +ಪರಿವೇಷದಲಿ +ತಾ
ರೆಗಳು +ಹೊಳೆದವು +ಸುರಿದುವ್+ಅರುಣಾಂಬುಗಳ+ಧಾರೆಗಳು
ದಿಗುವಳಯದಲಿ +ಧೂಮಕೇತುಗಳ್
ಒಗೆದವ್+ಎನಲ್+ಉತ್ಪಾತ +ಕೋಟಿಯ
ಬಗೆಯದ್+ಅವನಿಪ+ ಪುರವ+ ಹೊರವಂಟನು +ಸಗಾಢದಲಿ

ಅಚ್ಚರಿ:
(೧) ಗ್ರಹಣವನ್ನು ಸೂಚಿಸುವ ಸಾಲು – ಗಗನಮಣಿ ಪರಿವೇಷದಲಿ ತಾರೆಗಳು ಹೊಳೆದವು, ಸೂರ್ಯನ ಬೆಳಕಿಗೆ ತಾರೆಗಳ ಹೊಳೆಯಲು ಅಸಾಧ್ಯ, ಆದರೆ ಸೂರ್ಯನ ಪ್ರಭಾವಳಿಯಲ್ಲಿ ತಾರೆಗಳು ಹೊಳೆದವು ಎಂದರೆ ಸೂರ್ಯನ ಪ್ರಭಾವ ಕಡಿಮೆಯಾಗಿರಬಹುದು, ಎಂದರೆ ಸೂರ್ಯನಿಗೆ ಚಂದ್ರನು ಅಡ್ಡಬಂದ ಗ್ರಹಣವಾಗಿರಬೇಕೆಂದು ವಿವರಿಸಬಹುದು
(೨) ಅಪಶಕುನಗಳು: ಭೂಮಿ ನಡುಗಿತು, ಆಗಸದಲ್ಲಿ ಹೊಗೆಯು ಆವರಿಸುವುದು, ಕೆಂಪಾದ ನೀರಿನ ಮಳೆ, ಧೂಮಕೇತುವಿನ ಗೋಚರ, ಉತ್ಪಾತಗಳ ಬೀಳುವಿಕೆ
(೩) ಅವನಿ – ೧, ೬ ಸಾಲಿನ ಮೊದಲ ಪದದಲ್ಲಿ ಬರುವ ಪದ, ೧ ಸಾಲಿನಲ್ಲಿ ಭೂಮಿ ಯ ಅರ್ಥ, ೬ ಸಾಲಿನಲ್ಲಿ ರಾಜ ಎಂದು ಅರ್ಥ

ಪದ್ಯ ೬೭: ಅರ್ಜುನನಿಗೆ ಇಂದ್ರನು ಯಾವುದರಿಂದ ಗೌರವಿಸಿದನು?

ಖಗ ಚತುಷ್ಟಯ ಮಯ ಸಹಿತ ವುರಿ
ಯುಗುಳಿತುಳಿದ ಸಮಸ್ತ ಭೂತಾ
ಳಿಗಳನಾಹುತಿಗೊಂಡನಗ್ನಿ ಧನಂಜಯಾಜ್ಞೆಯಲಿ
ಗಗನದಿಂದಿಳಿತಂದು ಸುರಪತಿ
ಮಗನ ಮನ್ನಿಸಿಕೊಟ್ಟನಗ್ಗದ
ಗಗನಮಣಿಗೆಣೆಯೆನಿಪ ಮಕುಟವನೊಲಿದು ಪಾರ್ಥಂಗೆ (ಆದಿ ಪರ್ವ, ೨೦ ಸಂಧಿ, ೬೭ ಪದ್ಯ)

ತಾತ್ಪರ್ಯ:
ಅರ್ಜುನನ ಆಜ್ಞೆಯಂತೆ ನಾಲ್ಕು ಶಾಂರ್ಗಕ ಮರಿಗಳು ಮತ್ತು ಮಯನನ್ನು ಬಿಟ್ಟು ಉಳಿದೆಲ್ಲವನ್ನು ಅಗ್ನಿಯು ಆಹುತಿ ಪಡೆಯಿತು. ತನ್ನ ಮಗನ ಈ ಪರಾಕ್ರಮಕ್ಕೆ ಮೆಚ್ಚಿ ಇಂದ್ರನು ಸೂರ್ಯನಂತೆ ಹೊಳೆಯುವ ಕಿರೀಟವನ್ನು ಅರ್ಜುನನಿಗೆ ತೊಡಿಸಿ ಗೌರವಿಸಿದನು.

ಅರ್ಥ:
ಖಗ: ಹಕ್ಕಿ, ಪಕ್ಷಿ; ಚತುಷ: ನಾಲ್ಕು; ಸಹಿತ: ಜೊತೆ; ವುರಿ: ಅಗ್ನಿ; ಉಳಿದು: ಬದುಕಿರು; ಸಮಸ್ತ: ಎಲ್ಲಾ; ಭೂತಾಳಿ: ಜೀವರಾಶಿ; ಆಹುತಿ: ಬಲಿ; ಅಗ್ನಿ: ವಹ್ನಿ; ಆಜ್ಞೆ: ಅಪ್ಪಣೆ; ಗಗನ: ಆಗಸ; ಸುರಪತಿ: ಇಂದ್ರ; ಮಗ: ಪುತ್ರ; ಮನ್ನಿಸು: ಗೌರವಿಸು; ಅಗ್ಗ:ಶ್ರೇಷ್ಠ; ಗಗನಮಣಿ: ಸೂರ್ಯ; ಎಣೆ:ಸಮ; ಮಕುಟ:ಕಿರೀಟ; ಒಲಿದು: ಸಮ್ಮತಿಸು;

ಪದವಿಂಗಡಣೆ:
ಖಗ +ಚತುಷ್ಟಯ +ಮಯ +ಸಹಿತ +ವುರಿ
ಯುಗುಳಿತ್+ಉಳಿದ +ಸಮಸ್ತ +ಭೂತಾ
ಳಿಗಳನ್+ಆಹುತಿಗೊಂಡನ್+ಅಗ್ನಿ+ ಧನಂಜಯ+ಆಜ್ಞೆಯಲಿ
ಗಗನದಿಂದ್+ಇಳಿ+ತಂದು +ಸುರಪತಿ
ಮಗನ+ ಮನ್ನಿಸಿ+ಕೊಟ್ಟನ್+ಅಗ್ಗದ
ಗಗನಮಣಿಗ್+ಎಣೆ+ಯೆನಿಪ +ಮಕುಟವನ್+ಒಲಿದು +ಪಾರ್ಥಂಗೆ

ಅಚ್ಚರಿ:
(೧) ಗಗನ – ೪, ೬ ಸಾಲಿನ ಮೊದಲ ಪದ
(೨) ಮಗನ, ಗಗನ – ಪ್ರಾಸ ಪದ
(೩) ಧನಂಜಯ, ಪಾರ್ಥ – ಅರ್ಜುನನ ಹೆಸರು ೩, ೬ ಸಾಲಿನ ಕೊನೆ ಪದಗಳು

ಪದ್ಯ ೫೬: ಅಗ್ನಿಯ ಹೊಗೆಯ ಪ್ರಖರತೆ ಹೇಗಿತ್ತು?

ಹೊಗೆಯ ಹಬ್ಬುಗೆ ಸತ್ಯಲೋಕವ
ನುಗಿದುದುರಿನಾಲಗೆಯ ಗರವೊ
ಟ್ಟಗೆಯ ತೊಳಲಿಕೆ ತೆರಳಿಚಿತು ತೆತ್ತೀಸಕೋಟೆಗಳ
ಹಗಲಗಡಿತಕೆ ಹೊಕ್ಕುದೋ ಕಡೆ
ಮುಗಿಲ ಕಾಣೆನು ದಿವವನೆತ್ತಣ
ಗಗನಮಣಿ ನಕ್ಷತ್ರ ಚಂದ್ರಮರರಸ ಕೇಳೆಂದ (ಆದಿ ಪರ್ವ, ೨೦ ಸಂಧಿ, ೫೬ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅಗ್ನಿಯ ಹೊಗೆ ಎಷ್ಟರ ಮಟ್ಟಿಗೆ ಆವರಿಸಿತ್ತು ಎಂದರೆ, ಆ ಹೊಗೆ ಆಗಸವನ್ನು ದಾಟಿ ಸ್ವರ್ಗಲೋಕವನ್ನು ಹಬ್ಬಿತು, ಜ್ವಾಲೆಗಳ ಉರಿನಾಲಗೆಯು ದೇವತೆಗಳನ್ನು ಓಡಿಸಿತು. ಹಗಲಿನ ಈ ಕಡಿತಕ್ಕೆ ಆಕಾಶವೇ ಕಾಣಲಿಲ್ಲ. ಇನ್ನು ಸೂರ್ಯ ಚಂದ್ರ ನಕ್ಷತ್ರಗಳ ಮಾತೆಲ್ಲಿ.

ಅರ್ಥ:
ಹೊಗೆ: ಧೂಮ; ಹಬ್ಬುಗೆ: ಹರವು, ವಿಸ್ತಾರ; ಸತ್ಯಲೋಕ: ಸ್ವರ್ಗ; ಉಗಿ: ಹೊರಕ್ಕೆ ತೆಗೆ; ಉರಿ: ಬೆಂಕಿ; ನಾಲಗೆ: ಜಿಹ್ವೆ; ಗರವೊಟ್ಟಗೆ: ಗೃಹವಾಟಿಕೆ, ಮರೆಯಕೂಟ; ತೊಳಲಿಕೆ:ಬವಣೆ; ತೆರಳು: ಹೋಗು, ನಡೆ; ತೆತ್ತೀಸಕೋಟಿ: ಮೂವತ್ತ ಮೂರು ಕೋಟಿ; ಹಗಲು: ದಿನ; ಅಗಡಿತ: ಕಡಿತ; ಹೊಕ್ಕು:ಸೇರು; ಕಡೆ: ಕೊನೆ; ಮುಗಿಲು: ಆಗಸ; ಕಾಣು: ನೋಡು; ದಿವ:ದಿನ, ಆಗಸ; ಗಗನಮಣಿ: ಸೂರ್ಯ; ನಕ್ಷತ್ರ: ತಾರೆ; ಚಂದ್ರ: ಇಂದು; ಅರಸ: ರಾಜ;

ಪದವಿಂಗಡಣೆ:
ಹೊಗೆಯ +ಹಬ್ಬುಗೆ +ಸತ್ಯಲೋಕವನ್
ಉಗಿದುದ್+ಉರಿ +ನಾಲಗೆಯ +ಗರವೊ
ಟ್ಟಗೆಯ +ತೊಳಲಿಕೆ+ ತೆರಳಿಚಿತು +ತೆತ್ತೀಸಕೋಟೆಗಳ
ಹಗಲಗಡಿತಕೆ+ ಹೊಕ್ಕುದೋ +ಕಡೆ
ಮುಗಿಲ+ ಕಾಣೆನು +ದಿವವನ್+ಎತ್ತಣ
ಗಗನಮಣಿ +ನಕ್ಷತ್ರ +ಚಂದ್ರಮರ್+ಅರಸ +ಕೇಳೆಂದ

ಅಚ್ಚರಿ:
(೧) ಎಲ್ಲಾ ದೇವತೆಗಳು ಎಂದು ಸೂಚಿಸಲು ತೆತ್ತೀಸಕೋಟೆಗಳ ಪದ ಪ್ರಯೋಗ
(೨) “ತ” ಕಾರದ ತ್ರಿವಳಿ ಪದ – ತೊಳಲಿಕೆ ತೆರಳಿಚಿತು ತೆತ್ತೀಸಕೋಟೆಗಳ