ಪದ್ಯ ೪೯: ಅಭಿಮನ್ಯುವು ಯುದ್ಧಕ್ಕೆ ಹೇಗೆ ಸಿದ್ಧನಾದನು?

ಬಿಗಿದ ಗಂಡುಡಿಗೆಯಲಿ ಹೊನ್ನಾ
ಯುಗದ ಹೊಳೆವ ಕಠಾರಿಯನು ಮೊನೆ
ಮಗುಚಿ ಸಾದು ಜವಾಜಿ ಕತ್ತುರಿ ಗಂಧಲೇಪದಲಿ
ಮಗಮಗಿಪ ಹೊಂದೊಡರ ಹಾರಾ
ದಿಗಳಲೊಪ್ಪಂಬಡೆದು ನಸುನಗೆ
ಮೊಗದ ಸೊಂಪಿನಲಾಹವಕ್ಕನುವಾದನಭಿಮನ್ಯು (ದ್ರೋಣ ಪರ್ವ, ೪ ಸಂಧಿ, ೪೯ ಪದ್ಯ)

ತಾತ್ಪರ್ಯ:
ಪೌರುಷದ ಉಡುಗೆಯನ್ನು ತೊಟ್ಟು, ಬಂಗಾರದ ಹಿಡಿಕೆಯ ಕತ್ತಿಯನ್ನು ಒರೆಯಲ್ಲಿಟ್ಟು, ಸಾದು, ಜವಾಜಿ, ಕಸ್ತೂರಿ, ಗಂಧಗಳನ್ನು ಲೇಪಿಸಿಕೊಂಡು ಬಂಗಾರದ ಹಾರಾದಿಗಳಿಂದ ಶೋಭಿತನಾಗಿ, ಹಸನ್ಮುಖಿಯಾಗಿ ಅಭಿಮನ್ಯುವು ಯುದ್ಧಕ್ಕೆ ಅನುವಾದನು.

ಅರ್ಥ:
ಬಿಗಿ: ಬಂಧಿಸು, ಭದ್ರವಾಗಿ ಕಟ್ಟು; ಗಂಡುಡಿಗೆ: ಪೌರುಷದ ಬಟ್ಟೆ; ಉಡಿಗೆ: ಬಟ್ಟೆ; ಹೊನ್ನು: ಚಿನ್ನ; ಹೊಳೆ: ಪ್ರಕಾಶ; ಕಠಾರಿ: ಚೂರಿ, ಕತ್ತಿ; ಮೊನೆ: ಚೂಪಾದ; ಮಗುಚು: ಹಿಂದಿರುಗಿಸು; ಸಾದು: ಸಿಂಧೂರ; ಜವಾಜಿ:ಸುವಾಸನಾದ್ರವ್ಯ; ಕತ್ತುರಿ: ಕಸ್ತೂರಿ; ಗಂಧ: ಚಂದನ; ಲೇಪ: ಬಳಿಯುವಿಕೆ, ಹಚ್ಚುವಿಕೆ; ಮಗಮಗಿಪ: ಸುವಾಸನೆಯನ್ನು ಬೀರು; ಹೊಂದು: ಸೇರು; ಒಡರು: ತೊಡಗು; ಹಾರ: ಮಾಲೆ; ಒಪ್ಪು: ನಸುನಗೆ: ಹಸನ್ಮುಖ; ಮೊಗ: ಮುಖ; ಸೊಂಪು: ಸೊಗಸು, ಚೆಲುವು; ಆಹವ: ಯುದ್ಧ; ಅನುವು: ಆಸ್ಪದ, ಅನುಕೂಲ;

ಪದವಿಂಗಡಣೆ:
ಬಿಗಿದ +ಗಂಡುಡಿಗೆಯಲಿ +ಹೊನ್ನಾ
ಯುಗದ +ಹೊಳೆವ +ಕಠಾರಿಯನು +ಮೊನೆ
ಮಗುಚಿ +ಸಾದು +ಜವಾಜಿ +ಕತ್ತುರಿ +ಗಂಧ+ಲೇಪದಲಿ
ಮಗಮಗಿಪ+ ಹೊಂದ್+ಒಡರ +ಹಾರಾ
ದಿಗಳಲ್+ಒಪ್ಪಂಬಡೆದು+ ನಸುನಗೆ
ಮೊಗದ +ಸೊಂಪಿನಲ್+ಆಹವಕ್+ಅನುವಾದನ್+ಅಭಿಮನ್ಯು

ಅಚ್ಚರಿ:
(೧) ಗಂಡುಡಿಗೆ, ಸಾದು, ಜವಾಜಿ, ಕತ್ತುರಿ, ಗಂಧ, ಹಾರ – ಅಭಿಮನ್ಯು ಅಲಂಕಾರಗೊಂಡ ಪರಿ

ಪದ್ಯ ೨: ಪರ್ವತ ಪ್ರದೇಶದಲ್ಲಿ ಯಾವ ಗಾಳಿಯು ಬೀಸಿತು?

ಪರಮ ಧರ್ಮಶ್ರವಣ ಸೌಖ್ಯದೊ
ಳರಸನಿರೆ ಬದರಿಯಲಿ ಪೂರ್ವೋ
ತ್ತರದ ದೆಸೆವಿಡಿದೆಸೆಗಿತತಿಶಯ ಗಂಧ ಬಂಧುರದ
ಭರಣಿ ಮನ್ಮಥ ಪೋತವಣಿಜನ
ತರಣಿ ತರುಣ ಭ್ರಮರ ಸೇವಾ
ಸರಣಿಯೆನೆ ಸುಳಿದುದು ಸಮಿರಣನಾಮಹಾದ್ರಿಯಲಿ (ಅರಣ್ಯ ಪರ್ವ, ೧೧ ಸಂಧಿ, ೨ ಪದ್ಯ)

ತಾತ್ಪರ್ಯ:
ಬದರಿಕಾಶ್ರಮದಲ್ಲಿ ಯುಧಿಷ್ಠಿರನು ಧರ್ಮಶಾಸ್ತ್ರವನ್ನು ಶ್ರವಣ ಮಾಡುತ್ತಾ ಸುಖದಿಂದಿರಲು ಈಶಾನ್ಯ ದಿಕ್ಕಿನಿಂದ ಅತಿಶಯ ಸುಗಂಧ ದ್ರವ್ಯದ ಭರಣಿಯೋ, ಮರಿಮನ್ಮಥನೆಂಬ ವ್ಯಾಪಾರಿಯ ಸರಕುತುಂಬಿದ ದೋಣಿಯೋ ಮರಿದುಂಬಿಗಳ ಹಿಂಡಿನ ಸರಣಿಯೋ ಎನ್ನುವಂತಹ ಸುಗಂಧವಾಯುವು ಆ ಪರ್ವತ ಪ್ರದೇಶದಲ್ಲಿ ಬೀಸಿತು.

ಅರ್ಥ:
ಪರಮ: ಶ್ರೇಷ್ಠ; ಧರ್ಮ: ಧಾರಣೆ ಮಾಡಿದುದು; ಶ್ರವಣ: ಕೇಳು; ಸೌಖ್ಯ: ನೆಮ್ಮದಿ; ಅರಸ: ರಾಜ; ಪೂರ್ವೋತ್ತರ: ಈಶಾನ್ಯ; ದೆಸೆ: ದಿಕ್ಕು; ಎಸೆ: ತೋರು; ಅತಿಶಯ: ಹೆಚ್ಚು; ಗಂಧ: ಸುವಾಸನೆ; ಬಂಧುರ: ಚೆಲುವಾದ, ಸುಂದರವಾದ; ಭರಣಿ: ಕರಂಡಕ; ಮನ್ಮಥ: ಕಾಮ; ಪೋತ: ಮರಿ, ದೋಣಿ, ನಾವೆ; ತರಣಿ: ಸೂರ್ಯ,ದೋಣಿ, ಹರಿಗೋಲು; ತರುಣ: ಯೌವ್ವನ, ಚಿಕ್ಕವಯಸ್ಸಿನ; ಭ್ರಮರ: ದುಂಬಿ; ಸೇವೆ: ಚಾಕರಿ; ಸರಣಿ: ದಾರಿ, ಹಾದಿ; ಸುಳಿ: ಬೀಸು, ತೀಡು; ಸಮೀರ: ವಾಯು; ಅದ್ರಿ: ಬೆಟ್ಟ; ಮಹಾ: ದೊಡ್ಡ, ಶ್ರೇಷ್ಠ;

ಪದವಿಂಗಡಣೆ:
ಪರಮ+ ಧರ್ಮ+ಶ್ರವಣ +ಸೌಖ್ಯದೊಳ್
ಅರಸನಿರೆ+ ಬದರಿಯಲಿ +ಪೂರ್ವೋ
ತ್ತರದ +ದೆಸೆವಿಡಿದ್+ಎಸೆಗಿತ್+ಅತಿಶಯ +ಗಂಧ +ಬಂಧುರದ
ಭರಣಿ +ಮನ್ಮಥ +ಪೋತವಣಿಜನ
ತರಣಿ+ ತರುಣ+ ಭ್ರಮರ +ಸೇವಾ
ಸರಣಿಯೆನೆ +ಸುಳಿದುದು +ಸಮಿರಣನ್+ಆ+ಮಹ+ಅದ್ರಿಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭರಣಿ ಮನ್ಮಥ ಪೋತವಣಿಜನ ತರಣಿ ತರುಣ ಭ್ರಮರ ಸೇವಾ
ಸರಣಿಯೆನೆ ಸುಳಿದುದು ಸಮಿರಣನಾಮಹಾದ್ರಿಯಲಿ

ಪದ್ಯ ೭೬: ವಿದುರನು ಧೃತರಾಷ್ಟ್ರನ ಯೋಚನೆಗೆ ಹೇಗೆ ಉತ್ತರಿಸಿದನು?

ಮಾತು ಹೊಲಸಿನ ಗಂಧವಾಗಿದೆ
ಭೀತಿ ರಸದಲಿ ಮನ ಮುಳುಗಿತೀ
ಪ್ರೀತಿ ಮಾರಿಯ ಮುಸುಕನುಗಿವುದನಾರು ಕಲಿಸಿದರು
ಕೈತವದ ಕಣಿ ನಿನ್ನ ಮಗ ನೀ
ಸೋತೆಲಾ ಶಿವಶಿವ ಸುಖಾಂಗ
ದ್ಯೂತವೇ ಹಾ ಹಾಯೆನುತ ತಲೆದೂಗಿದನು ವಿದುರ (ಸಭಾ ಪರ್ವ, ೧೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನ ಮಾತನ್ನು ಕೇಳಿದ ವಿದುರನು, ನಿನ್ನ ಮಾತು ಹೊಲಸು ವಾಸನೆಯಿಂದ ತುಂಬಿದೆ, ನಿನ್ನ ಪ್ರೀತಿಯ ಮಾತುಗಳನ್ನು ಕೇಳಿ, ನನ್ನ ಮನಸ್ಸು ಭೀತಿಯಲ್ಲಿ ಮುಳುಗಿದೆ, ಮಾರಿಯ ಮುಸುಕನ್ನು ತೆಗೆಯುವುದನ್ನು ನಿನಗೆ ಯಾರು ಹೇಳಿಕೊಟ್ಟರು? ನಿನ್ನ ಮಗನು ಮೋಸದ ಗಣಿ, ಅವನ ಮಾತಿಗೆ ನೀನು ಒಪ್ಪಿದೆಯೋ? ಶಿವ ಶಿವಾ ಸುಖದ್ಯೂತಾ ಹಾಹಹಹ ಎಂದು ತಲೆದೂಗಿದನು ವಿದುರ.

ಅರ್ಥ:
ಮಾತು: ವಾಣಿ; ಹೊಲಸು: ಕೊಳಕು; ಗಂಧ: ವಾಸನೆ; ಭೀತಿ: ಭಯ; ರಸ: ಸಾರ; ಮನ: ಮನಸ್ಸು; ಮುಳುಗು: ಮುಚ್ಚಿಹೋಗು, ತೋಯು; ಪ್ರೀತಿ: ಒಲವು; ಮಾರಿ: ಕ್ಷುದ್ರದೇವತೆ; ಮುಸುಕು: ಆವರಿಸು, ಮುಚ್ಚು; ಉಗಿ: ಹೊರಹಾಕು; ಕಲಿಸು: ಹೇಳಿಕೊಟ್ಟರು; ಕೈತ: ಮೋಸ; ಕಣಿ: ಗಣಿ, ಆಕರ; ಮಗ: ಸುತ; ಸೋತೆ: ಪರಾಭವ ಹೊಂದು; ಸುಖ: ಸಂತಸ; ದ್ಯೂತ: ಜೂಜು, ಪಗಡೆ; ತಲೆ: ಶಿರ; ದೂಗು: ಅಲ್ಲಾಡಿಸು;

ಪದವಿಂಗಡಣೆ:
ಮಾತು +ಹೊಲಸಿನ +ಗಂಧವಾಗಿದೆ
ಭೀತಿ +ರಸದಲಿ +ಮನ +ಮುಳುಗಿತ್+ಈ
ಪ್ರೀತಿ +ಮಾರಿಯ +ಮುಸುಕನ್+ಉಗಿವುದನ್+ಆರು +ಕಲಿಸಿದರು
ಕೈತವದ +ಕಣಿ +ನಿನ್ನ +ಮಗ +ನೀ
ಸೋತೆಲಾ +ಶಿವಶಿವ+ ಸುಖಾಂಗ
ದ್ಯೂತವೇ +ಹಾ +ಹಾ+ಎನುತ +ತಲೆದೂಗಿದನು+ ವಿದುರ

ಅಚ್ಚರಿ:
(೧) ವಿದುರನ ಉತ್ತರವನ್ನು ಚಿತ್ರಿಸಿರುವ ಪದ್ಯ
(೨) ಕೆಟ್ಟ ಮಾತು ಎಂದು ಹೇಳಲು – ಮಾತು ಹೊಲಸಿನ ಗಂಧವಾಗಿದೆ
(೨) ಭಯವನ್ನುಂಟುಮಾಡುತ್ತದೆ ಎಂದು ಹೇಳಲು – ಭೀತಿ ರಸದಲಿ ಮನ ಮುಳುಗಿತೀ
(೪) ದುರ್ಯೋಧನನನ್ನು ಬಯ್ಯುವ ಪರಿ – ಕೈತವದ ಕಣಿ ನಿನ್ನ ಮಗ

ಪದ್ಯ ೭೧: ಭೀಮನ ಪಂಚೇದ್ರಿಯಗಳು ಹೇಗೆ ಹರ್ಷಿಸಿದವು?

ಕೆಡೆದ ಹಗೆಯೊರಲಿನಲಿ ಕಿವಿ ಎಡೆ
ಯುಡುಗದೀಕ್ಷಿಸಿ ಕಂಗಳಾ ಖಳ
ನೊಡಲ ಕಡಿಗೆಡಹಿನಲಿ ಮೈ ರಿಪುಮಾಂಸಗಂಧದಲಿ
ಬಿಡದೆ ನಾಸಿಕ ಖಳನ ರಕುತವ
ಕುಡಿದು ನಾಲಗೆ ಸೊಗಸೆ ಸೊಕ್ಕಿದ
ನೊಡನೊಡನೆ ಪಂಚೇಂದ್ರಿಯ ಪ್ರೀತಿಯಲಿ ಕಲಿಭೀಮ (ಕರ್ಣ ಪರ್ವ, ೧೯ ಸಂಧಿ, ೭೧ ಪದ್ಯ)

ತಾತ್ಪರ್ಯ:
ದುಶ್ಯಾಸನು ಕೂಗಿ ಕೆಳಗೆಬಿದ್ದುದನ್ನು ಭೀಮನ ಕಿವಿಗಳು ತುಂಬಿಕೊಂಡವು. ಆ ದುಷ್ಟನು ನೆಲದಮೇಲೆ ಕಡಿದು ಬಿದ್ದುದನ್ನು ಕಂಡು ಕಣ್ಣುಗಳು ನೋಡಿದವು. ಅವನ ಮಾಂಸದ ವಾಸನೆಯಿಂದ ಭೀಮನ ಮೂಗು ಸಂತೋಷಿಸಿತು. ಅವನ ರಕ್ತವನ್ನು ಕುಡಿದು ಅದರ ರುಚಿಯಿಂದ ನಾಲಗೆ ಹರ್ಷಿಸಿತು. ಹೀಗೆ ಭೀಮನ ಪಂಚೇದ್ರಿಯಗಳೂ ಸುಪ್ರೀತವಾಗಲು ಭೀಮನು ಮತ್ತೆ ಮತ್ತೆ ಸೊಕ್ಕಿದನು.

ಅರ್ಥ:
ಕೆಡೆ: ಬೀಳು, ಕುಸಿ; ಹಗೆ: ವೈರಿ; ಒರಲು: ಅರಚು, ಕೂಗಿಕೊಳ್ಳು; ಕಿವಿ: ಕರ್ಣ; ಎಡೆ: ಬಹಳವಾಗಿ, ಹೆಚ್ಚಾಗಿ; ಉಡುಗು: ಅಡಗಿಹೋಗು; ಈಕ್ಷಿಸು: ನೋಡು; ಕಂಗಳು: ಕಣ್ಣು, ನಯನ; ಖಳ: ದುಷ್ಟ; ಒಡಲು: ದೇಹ; ಕಡಿ: ಸೀಲು; ಮೈ: ತನು, ಶರೀರ; ರಿಪು: ವೈರಿ; ಮಾಂಸ: ಅಡಗು; ಗಂಧ: ವಾಸನೆ; ಬಿಡು: ತೊರೆ, ತ್ಯಜಿಸು; ನಾಸಿಕ: ಮೂಗು; ರಕುತ: ನೆತ್ತರು; ಕುಡಿ: ಪಾನಮಾಡು; ನಾಲಗೆ: ಜಿಹ್ವೆ; ಸೊಗಸು: ಅಂದ, ಚೆಲುವು; ಸೊಕ್ಕು: ಅಮಲು, ಮದ; ಒಡನೊಡನೆ: ಒಟ್ಟಿಗೆ; ಪಂಚೇದ್ರಿಯ: ಕಣ್ಣು, ಮೂಗು, ನಾಲಗೆ, ಕಿವಿ, ಸ್ಪರ್ಷ ಎಂಬ ಇಂದ್ರಿಯಕ್ಕೆ ಗೋಚರವಾಗುವ; ಪ್ರೀತಿ: ಒಲವು; ಕಲಿ: ಶೂರ;

ಪದವಿಂಗಡಣೆ:
ಕೆಡೆದ+ ಹಗೆ+ ಒರಲಿನಲಿ +ಕಿವಿ +ಎಡೆ
ಉಡುಗದ್+ಈಕ್ಷಿಸಿ +ಕಂಗಳ್+ಆ+ ಖಳನ್
ಒಡಲ +ಕಡಿಗೆಡಹಿನಲಿ +ಮೈ +ರಿಪು+ಮಾಂಸ+ಗಂಧದಲಿ
ಬಿಡದೆ +ನಾಸಿಕ+ ಖಳನ +ರಕುತವ
ಕುಡಿದು +ನಾಲಗೆ+ ಸೊಗಸೆ+ ಸೊಕ್ಕಿದನ್
ಒಡನೊಡನೆ +ಪಂಚೇಂದ್ರಿಯ +ಪ್ರೀತಿಯಲಿ +ಕಲಿಭೀಮ

ಅಚ್ಚರಿ:
(೧) ಭೀಮನ ಪಂಚೇದ್ರಿಯಗಳು ಹೇಗೆ ನಲಿದವು ಎಂಬ ಕವಿಯ ವಿವರಣೆ
(೨) ಜೋಡಿ ಪದಗಳು – ಪಂಚೇಂದ್ರಿಯ ಪ್ರೀತಿಯಲಿ; ಸೊಗಸೆ ಸೊಕ್ಕಿದ; ಖಳನೊಡಲ ಕಡಿಗೆಡಹಿನಲಿ

ಪದ್ಯ ೫೪: ರಾಜನಾದವನು ಯಾವುದನ್ನು ಗಮನಿಸಬೇಕು?

ಕುಸುಮ ಫಲ ತಾಂಬೂಲ ಗಂಧ
ಪ್ರಸರ ಭೋಜನಗಮನ ನೆನಹಿಂ
ದೆಸೆವ ಕಾರ್ಯದೊಳಿನಿಬರೊರಗಿದೊಡೊಬ್ಬನೆಚ್ಚರಿಕೆ
ಎಸೆಯಲನಿತುವನೊಬ್ಬನೇ ಭೋ
ಗಿಸುವಡವನೀಪಾಲರಿಗೆ ತಾ
ಸಸಿನವೆನಿಸದು ರಾಯ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೫೪ ಪದ್ಯ)

ತಾತ್ಪರ್ಯ:
ರಾಜನಾದವು ಎಷ್ಟು ಎಚ್ಚರದಿಂದಿರಬೇಕೆಂದು ಈ ಪದ್ಯದಲ್ಲಿ ತಿಳಿಸಲಾಗಿದೆ. ರಾಜನು ಹೂವು, ಹಣ್ಣು, ತಾಂಬೂಲ, ಗಂಧ, ಊಟ, ಗಮನ ಇವೆಲ್ಲವನ್ನು ಎಚ್ಚರಿಕೆಯಿಂದ ಅನುಭವಿಸಬೇಕು. ಜೊತೆಯವರು ಮಲಗಿದ್ದಾಗ ಎಚ್ಚರದಿಂದಿರಬೇಕು. ಒಬ್ಬನೇ ಈ ಕಾರ್ಯಗಳಲ್ಲಿ ತೊಡಗುವುದು ಯೋಗ್ಯವಲ್ಲ.

ಅರ್ಥ:
ಕುಸುಮ: ಹೂವು; ಫಲ: ಹಣ್ಣು; ತಾಂಬೂಲ: ಎಲೆ, ಅಡಿಕೆ; ಗಂಧ: ಚಂದನ; ಪ್ರಸರ: ಹರಡುವುದು, ವಿಸ್ತಾರ; ಭೋಜನ: ಊಟ; ಗಮನ: ಎಚ್ಚರ; ನೆನ: ನೆನಪು; ಎಸೆವ: ತೋರುವ, ಪ್ರಕಾಶಿಸು; ಕಾರ್ಯ: ಕೆಲಸ; ಇನಿಬರು: ಇಷ್ಟು ಜನ; ಒರಗು: ಕೆಳಕ್ಕೆ ಬಾಗು; ಎಚ್ಚರ: ಗಮನ ವಹಿಸು; ಅನಿತು: ಅಷ್ಟು; ಭೋಗಿಸು: ಅನುಭವಿಸು; ಅವನಿ: ಭೂಮಿ; ಅವನೀಪಾಲ: ರಾಜ; ಸಸಿನ: ಸರಳವಾದ್ದು, ಕ್ಷೇಮ; ರಾಯ: ರಾಜ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಕುಸುಮ +ಫಲ +ತಾಂಬೂಲ +ಗಂಧ
ಪ್ರಸರ +ಭೋಜನ+ಗಮನ +ನೆನಹಿಂದ್
ಎಸೆವ +ಕಾರ್ಯದೊಳ್+ಇನಿಬರ್+ಒರಗಿದೊಡ್+ಒಬ್ಬನ್+ಎಚ್ಚರಿಕೆ
ಎಸೆಯಲ್+ಅನಿತುವನ್+ಒಬ್ಬನೇ +ಭೋ
ಗಿಸುವಡ್+ಅವನೀಪಾಲರಿಗೆ+ ತಾ
ಸಸಿನವ್+ಎನಿಸದು +ರಾಯ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಕುಸುಮ, ಫಲ, ತಾಂಬೂಲ, ಗಂಧ, ಭೋಜನ, ಗಮನ – ಈ ೬ ವಿಷಯಗಳ ಬಗ್ಗೆ ರಾಜನಾದವನು ಎಚ್ಚರವಹಿಸಬೇಕು.
(೨) ರಾಯ, ಅವನೀಪಾಲ – ಸಮನಾರ್ಥಕ ಪದ

ಪದ್ಯ ೧೬: ಚಪ್ಪರದ ಸುತ್ತಲು ಸುವಾಸನೆ ಬರಲು ಕಾರಣವೇನು?

ವರಜವಾಜಿಯ ಶೃಂಗಗಳ ಕ
ರ್ಪೂರದ ತವಲಾಯಿಗಳ ಸಾದಿನ
ಭರಣಿಗಳ ಮೃಗನಾಭಿಗಳನಡಕಿದರು ಬಂಡಿಯಲಿ
ಸುರಿಸುರಿದು ಹಂತಿಗಳ ಹೊಂಗೊ
ಪ್ಪರಿಗೆಗಳ ತುಂಬಿದರು ಗಂಧದ
ಹಿರಿಯ ರಂಜಣಿಗೆಗಳ ಹಿಡಿದರು ಸುತ್ತುವಳಯದಲಿ (ಆದಿ ಪರ್ವ, ೧೨ ಸಂಧಿ, ೧೬ ಪದ್ಯ)

ತಾತ್ಪರ್ಯ:
ಜವಾಜಿಯ ಗುಡ್ಡೆಗಳು, ಕರ್ಪೂರದ ಪಾತ್ರೆಗಳು, ಸಾದಿನ ಭರಣಿಗಳು, ಕರ್ಪೂರಗಳನ್ನು ಬಂಡಿಯಲ್ಲಿ ಹೇರಿತಂದರು. ಬಂಗಾರದ ಪನ್ನೀರಿನ ಕೊಪ್ಪರಿಗೆಗಳಲ್ಲಿ ಸಾಲಾಗಿ ಸುರಿದರು. ಹೀಗೆ ಸುಗಂಧಮಯವಾದ ನೀರಿನ ಕೊಪ್ಪರಿಗೆಗಳನ್ನು ಚಪ್ಪರದ ಸುತ್ತಲೂ ಇಟ್ಟರು.

ಅರ್ಥ:
ವರ: ಶ್ರೇಷ್ಠ; ಜವಾಜಿ: ಪುನುಗು, ಒಂದು ಬಗೆಯ ಸುಗಂಧ ದ್ವವ್ಯ; ಶೃಂಗ: ಗುಡ್ಡ, ಔನತ್ಯ; ಕರ್ಪೂರ: ಸುಗಂಧ ದ್ರವ್ಯ; ತವಲಾಯಿ: ಕರ್ಪೂರವನ್ನು ಹಾಕಿ ಇರಿಸುವ ಕರಂಡ, ಭರಣಿ; ಸಾದಿ:ಸಾರಥಿ, ಆನೆಯ ಸವಾರ; ಭರಣಿ: ಡಬ್ಬಿ; ಮೃಗನಾಭಿ: ಕಸ್ತೂರಿ, ಒಂದು ಬಗೆಯ ಸುಗಂಧ ದ್ರವ್ಯ; ಅಡಕು: ಒಯ್ಯು, ಸಾಗಿಸು; ಬಂಡಿ: ರಥ; ಸುರಿ: ಚೆಲ್ಲು; ಹಂತಿ: ಸಾಲು; ಉಪ್ಪರಿಗೆ: ಮಹಡಿ, ಸೌಧ; ತುಂಬು: ಪೂರ್ಣ, ಭರ್ತಿ; ಗಂಧ: ಸುಗಂಧ ದ್ರವ್ಯ; ಹಿರಿಯ: ಶ್ರೇಷ್ಠ; ರಂಜಣಿಗೆ: ದೊಡ್ಡ ಪಾತ್ರೆ, ಕೊಪ್ಪ್ರಿಗೆ; ಹಿಡಿ: ಗ್ರಹಿಸು, ಕೈಕೊಳ್ಳು; ಸುತ್ತು: ಬಳಸು, ಆವರಿಸು; ವಳಯ: ವರ್ತುಲ, ಪರಿಧಿ, ಆವರಣ್;

ಪದವಿಂಗಡನೆ:
ವರ+ಜವಾಜಿಯ +ಶೃಂಗಗಳ+ ಕ
ರ್ಪೂರದ +ತವಲಾಯಿಗಳ +ಸಾದಿನ
ಭರಣಿಗಳ +ಮೃಗನಾಭಿಗಳನ್+ಅಡಕಿದರು +ಬಂಡಿಯಲಿ
ಸುರಿಸುರಿದು +ಹಂತಿಗಳ +ಹೊಂಗೊ
ಪ್ಪರಿಗೆಗಳ +ತುಂಬಿದರು +ಗಂಧದ
ಹಿರಿಯ +ರಂಜಣಿಗೆಗಳ+ ಹಿಡಿದರು+ ಸುತ್ತುವಳಯದಲಿ

ಅಚ್ಚರಿ:
(೧) ಜವಾಜಿ, ಕರ್ಪೂರ, ಮೃಗನಾಭಿ, ಗಂಧ – ಸುಗಂಧ ದ್ರವ್ಯಗಳು
(೨) ತವಲಾಯಿ, ರಂಜಣಿ, ಭರಣಿ, ಬಂಡಿ – ದೊಡ್ಡ ಪಾತ್ರೆಗಳನ್ನು ಸೂಚಿಸುವ ಪದ