ಪದ್ಯ ೪: ಅಮರಾವತಿಯನ್ನು ಅರ್ಜುನನು ಹೇಗೆ ವರ್ಣಿಸಿದನು?

ಮುದದ ನೆಲೆ ಶುಭದಿನಕ್ಕೆ ಸೊಗಸಿನ
ಸದನ ಸೌಖ್ಯದ ಗರುಡಿ ಸೊಂಪಿನ
ಪದವಿ ಲೀಲೆಯ ತಾಣ ತಾಯ್ಮನೆ ಖೇಳಮೇಳವದ
ಮುದದ ಮಡು ಭೋಗೈಕ ನಿಧಿ ಸಂ
ಪದದ ಜನ್ಮಸ್ಥಳ ಮನೋರಥ
ದುದಯಗಿರಿ ಹಿಂದೀಸುದಿನವಮರಾವತೀ ನಗರ (ಅರಣ್ಯ ಪರ್ವ, ೧೩ ಸಂಧಿ, ೪ ಪದ್ಯ)

ತಾತ್ಪರ್ಯ:
ಹಿಂದಿನಿಂದ ಇಂದಿನವರೆಗೆ ನನ್ನ ಅಮರಾವತಿಯು ಸಂತೋಷದ ನೆಲೆಯಾಗಿತ್ತು. ಶುಭವು ಅಲ್ಲಿ ನೆಲೆಸಿತ್ತು, ಸೊಗಸಿನ ಸ್ಥಾನವಾಗಿತ್ತು, ಲೀಲಾವಿನೋದ ಸ್ಥಾನವಾಗಿತ್ತು, ಒಡನಾಡಿ ಸುಖಿಸಲು ತವರು ಮನೆಯಂತಿತ್ತು, ಮುದವು ಇಲ್ಲಿ ಮಡುಗಟ್ಟಿತ್ತು, ಭೋಗದ ನಿಧಿಯಾಗಿತ್ತು, ಸಂಪತ್ತಿನ ಜನ್ಮ ಸ್ಥಳವಾಗಿತ್ತು, ಮನೋರಥವು ಉದಿಸುವ ಜಾಗವಾಗಿತ್ತು.

ಅರ್ಥ:
ಮುದ: ಸಂತಸ; ನೆಲೆ: ಸ್ಥಾನ; ಶುಭ: ಮಂಗಳ; ಸೊಗಸು: ಚೆಲುವು; ಸದನ: ಆಲಯ; ಸೌಖ್ಯ: ಸುಖ, ನೆಮ್ಮದಿ; ಗರುಡಿ: ವ್ಯಾಯಾಮಶಾಲೆ; ಸೊಂಪು: ಸೊಗಸು, ಚೆಲುವು; ಪದವಿ: ಹುದ್ದೆ; ಲೀಲೆ: ಆನಂದ, ಸಂತೋಷ; ತಾಣ: ನೆಲೆ, ಬೀಡು; ತಾಯ್ಮನೆ: ತವರು; ಖೇಳ: ಆಟ; ಮೇಳ: ಸೇರುವಿಕೆ, ಕೂಡುವಿಕೆ; ಮಡು: ನದಿ, ಹೊಳೆ; ಭೋಗ: ಸುಖ, ಸೌಖ್ಯ; ನಿಧಿ: ಐಶ್ವರ್ಯ; ಸಂಪದ: ಐಶ್ವರ್ಯ, ಸಿರಿ; ಜನ್ಮ: ಹುಟ್ಟು; ಸ್ಥಳ: ಜಾಗ; ಮನೋರಥ: ಆಸೆ, ಬಯಕೆ; ಉದಯ: ಉದಿಸು, ಹುಟ್ಟು; ಗಿರಿ: ಬೆಟ್ಟ; ಹಿಂದೆ: ಮೊದಲು; ಈಸು: ಇಷ್ಟು; ದಿನ: ವಾರ; ಅಮರಾವತಿ: ಸ್ವರ್ಗ; ನಗರ: ಊರು;

ಪದವಿಂಗಡಣೆ:
ಮುದದ +ನೆಲೆ +ಶುಭದಿನಕ್ಕೆ +ಸೊಗಸಿನ
ಸದನ +ಸೌಖ್ಯದ +ಗರುಡಿ+ ಸೊಂಪಿನ
ಪದವಿ+ ಲೀಲೆಯ +ತಾಣ +ತಾಯ್ಮನೆ+ ಖೇಳ+ಮೇಳವದ
ಮುದದ +ಮಡು +ಭೋಗೈಕ +ನಿಧಿ +ಸಂ
ಪದದ +ಜನ್ಮಸ್ಥಳ +ಮನೋರಥದ್
ಉದಯಗಿರಿ +ಹಿಂದ್+ಈಸು+ದಿನವ್+ಅಮರಾವತೀ +ನಗರ

ಅಚ್ಚರಿ:
(೧) ಅಮರಾವತಿಯ ಹಿರಿಮೆ – ಮುದದ ಮಡು, ಭೋಗೈಕ ನಿಧಿ, ಸಂಪದದ ಜನ್ಮಸ್ಥಳ, ಮನೋರಥದುದಯಗಿರಿ

ಪದ್ಯ ೧: ಅರ್ಜುನನ ಮನಸ್ಥೈರ್ಯ ಹೇಗಿತ್ತು?

ಕೇಳು ಜನಮೇಜಯ ಧರಿತ್ರೀ
ಪಾಲ ಪಾರ್ಥನ ಮೈಯ ಹುಲುರೋ
ಮಾಳಿ ಹರಿಯದು ಮನುಮಥನ ಖಂಡೆಯದ ಗಾಯದಲಿ
ಬೀಳು ಕೊಟ್ಟಳು ಚಿತ್ರಸೇನನ
ನಾ ಲತಾಂಗಿ ಸರಸ್ರ ಸಂಖ್ಯೆಯ
ಖೇಳಮೇಳದ ಸತಿಯರನು ಕರೆಸಿದಳು ಹರುಷದಲಿ (ಅರಣ್ಯ ಪರ್ವ, ೯ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಅರ್ಜುನನ ತನುವಿನ ಒಂದು ಕೂದಲೂ ಕಾಮನ ಖಡ್ಗದ ಹೊಡೆತದಿಂದ ಮುಕ್ಕಾಗಲಿಲ್ಲ, ಇತ್ತ ಊರ್ವಶಿಯು ಚಿತ್ರಸೇನನನ್ನು ಕಳುಹಿಸಿ, ತನ್ನ ಸಾವಿರಾರು ಸೇವಕಿಯರನ್ನು ಕರೆಸಿದಳು.

ಅರ್ಥ:
ಕೇಳು: ಆಲಿಸು; ಧರಿತ್ರೀ: ಭೂಮಿ; ಧರಿತ್ರೀಪಾಲ: ರಾಜ; ಮೈಯ: ತನು; ಹುಲು: ಅಲ್ಪ; ರೋಮಾಳಿ: ಕೂದಲು; ಹರಿ: ಚಲಿಸು, ಸೀಳು; ಮನುಮಥ: ಕಾಮ; ಖಂಡೆಯ: ಕತ್ತಿ, ಖಡ್ಗ; ಗಾಯ: ಪೆಟ್ಟು; ಬೀಳುಕೊಡು: ತೆರಳು, ಕಳುಹಿಸು; ಲತಾಂಗಿ: ಸುಂದರಿ; ಸಹಸ್ರ: ಸಾವಿರ; ಸಂಖ್ಯೆ: ಎಣಿಕೆ; ಖೇಳ: ಆಟ; ಮೇಳ: ಗುಂಪು; ಸತಿ: ಹೆಂಗಸು; ಕರೆಸು: ಬರೆಮಾಡು; ಹರುಷ: ಸಂತಸ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಪಾರ್ಥನ +ಮೈಯ +ಹುಲು+ರೋ
ಮಾಳಿ+ ಹರಿಯದು +ಮನುಮಥನ +ಖಂಡೆಯದ +ಗಾಯದಲಿ
ಬೀಳು +ಕೊಟ್ಟಳು +ಚಿತ್ರಸೇನನನ್
ಆ +ಲತಾಂಗಿ +ಸರಸ್ರ +ಸಂಖ್ಯೆಯ
ಖೇಳಮೇಳದ +ಸತಿಯರನು +ಕರೆಸಿದಳು+ ಹರುಷದಲಿ

ಅಚ್ಚರಿ:
(೧) ಖೇಳಮೇಳ – ಪದದ ರಚನೆ
(೨) ಪಾರ್ಥನ ಸ್ಥೈರ್ಯ: ಪಾರ್ಥನ ಮೈಯ ಹುಲುರೋಮಾಳಿ ಹರಿಯದು ಮನುಮಥನ ಖಂಡೆಯದ ಗಾಯದಲಿ

ಪದ್ಯ ೧: ಪಾಂಡವರು ಕೌರವರೊಡನೆ ಐದು ವರ್ಷಗಳನ್ನು ಹೇಗೆ ಕಳೆದರು?

ಕೇಳು ಜನಮೇಜಯ ಧರಿತ್ರೀ
ಪಾಲ ನಿಮ್ಮಯ ಪೂರ್ವಜರು ಸಮ
ಪಾಳಿಗಳ ಸೇರುವೆಯೊಳಿದ್ದರು ಸಾನುರಾಗದಲಿ
ಖೇಳಮೇಳದ ಬೇಟೆಗಳ ವೈ
ಹಾಳಿಗಳ ಜೂಜಿನ ಸಮಂಜಸ
ಲೀಲೆಗಳ ಕೇಳಿಯಲಿ ಕಳೆದರು ವರುಷ ಪಂಚಕವ (ಆದಿ ಪರ್ವ, ೧೮ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ನಿಮ್ಮ ಪೂರ್ವಜರಾದ ಪಾಂಡವರು ಅವರ ಸಮಾನರಾದ ಕೌರವರೊಡನೆ ಹೊಂದಿಕೆಯಿಂದ, ಪ್ರೀತಿ ಮಮತೆಯಿಂದ, ಬೇಟೆ, ಕುದುರೆಸವಾರಿ, ಜೂಜು ಮೊದಲಾದ ಕ್ಷತ್ರಿಯರಿಗೆ ಉಚಿತವಾದ ಆಟಗಳನ್ನು ಆಡುತ್ತಾ ವಿನೋದದಿಂದ ಐದು ವರ್ಷಗಳನ್ನು ಕಳೆದರು.

ಅರ್ಥ:
ಕೇಳು: ಆಲಿಸು; ಧರಿತ್ರಿ: ಭೂಮಿ; ಧರಿತ್ರೀಪಾಲ: ರಾಜ; ಪೂರ್ವಜರು: ಹಿಂದಿನವರು, ಪೂರ್ವಿಕರು; ಸಮ: ಸರಿಸಮನಾದ; ಪಾಳಿಗ: ಪಕ್ಷ; ಸೇರುವೆ: ಹೊಂದಿಕೆ, ಮೇಳ; ಸಾನುರಾಗ: ಅನುರಾಗ, ಪ್ರೀತಿ; ಖೇಳ: ಕ್ರೀಡೆ, ಆಟ; ಮೇಳ: ಗುಂಪು; ಬೇಟೆ: ಕ್ರೂರ ಮೃಗಗಳನ್ನು ಕೊಲ್ಲುವುದು; ವೈಹಾಳಿ: ಕುದುರೆ ಸವಾರಿ;ಜೂಜು: ಪಗಡೆ; ಸಮಂಜಸ: ಸರಿಯಾದ, ಸೂಕ್ತವಾದ; ಲೀಲೆ: ಆಟ, ವಿನೋದ; ಕೇಳಿ: ವಿನೋದ, ಕ್ರೀಡೆ; ಕಳೆ: ಸಂದುಹೋಗು, ತೊರೆ; ಪಂಚ: ಐದು

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ನಿಮ್ಮಯ +ಪೂರ್ವಜರು +ಸಮ
ಪಾಳಿಗಳ +ಸೇರುವೆಯೊಳ್+ಇದ್ದರು +ಸಾನುರಾಗದಲಿ
ಖೇಳಮೇಳದ+ ಬೇಟೆಗಳ +ವೈ
ಹಾಳಿಗಳ +ಜೂಜಿನ+ ಸಮಂಜಸ
ಲೀಲೆಗಳ +ಕೇಳಿಯಲಿ+ ಕಳೆದರು+ ವರುಷ +ಪಂಚಕವ

ಅಚ್ಚರಿ:
(೧) ಕೇಳಿಯಲಿ ಕಳೆದರು – ಕ ಕಾರದ ಜೋಡಿ ಪದ
(೨) ಳ ಕಾರದಿಂದ ಕೊನೆಗೊಳ್ಳುವ ಪದ: ಲೀಲೆಗಳ, ವೈಹಾಳಿಗಳ, ಬೇಟೆಗಳ, ಖೇಳಮೇಳ, ಸಮಪಾಳಿಗಳ