ಪದ್ಯ ೨೫: ಭೀಮನು ಹೇಗೆ ಕೌರವನನ್ನು ಪ್ರಚೋದಿಸಿದನು – ೨?

ಎಲವೊ ರಾಯನ ಪಟ್ಟದರಸಿಯ
ಸುಲಿಸಿದಾ ಛಲವೆಲ್ಲಿ ಹಗೆಗಳ
ಹಳುವದಲಿ ಹೊಗಿಸಿದೆನೆನಿಪ ಸುಮ್ಮಾನ ತಾನೆಲ್ಲಿ
ಖಳ ಶಿರೋಮಣಿ ನಿನ್ನ ತಲೆಗೂ
ದಲಲಿ ಕೈಗಳ ಕಟ್ಟಿ ಖೇಚರ
ನೆಳೆಯೆ ಬಿಡಿಸಿದರಾರು ಕೌರವ ಎಂದನಾ ಭೀಮ (ಗದಾ ಪರ್ವ, ೫ ಸಂಧಿ, ೨೫ ಪದ್ಯ)

ತಾತ್ಪರ್ಯ:
ಎಳೊ ಕೌರವ, ಹಿಂದೆ ಯುಧಿಷ್ಠಿರನ ಪಟ್ಟದ ರಾಣಿಯಾದ ದ್ರೌಪದಿಯ ಸೀರೆಯನ್ನು ಸಭೆಯಲ್ಲಿ ಸುಲಿಸಿದ ಛಲವು ಎಲ್ಲಿಗೆ ಹೋಯಿತು? ವೈರಿಗಳನ್ನು ಕಾಡಿಗಟ್ಟಿದೆನಂಬ ಸಂತೋಷ ಎಲ್ಲಿಗೆ ಹೋಯಿತು? ಎಲವೋ ದುಷ್ಟಶಿರೋಮಣಿ, ಗಂಧರ್ವನು ನಿನ್ನ ಕೂದಲುಗಳಿಂದ ನಿನ್ನ ಕೈಗಳನ್ನು ಕಟ್ಟಿ ಎಳೆದುಕೊಂಡು ಹೋದಾಗ ಬಿಡಿಸಿದವರು ಯಾರು?

ಅರ್ಥ:
ರಾಯ: ರಾಜ; ಪಟ್ಟದರಸಿ: ಮಹಾರಾಣಿ; ಪಟ್ಟ: ಸ್ಥಾನ; ಸುಲಿಸು: ಕಿತ್ತುಕೊಳ್ಳು; ಛಲ: ದೃಢ ನಿಶ್ಚಯ; ಹಗೆ: ವೈರ; ಹಳುವು: ಕಾಡು; ಹೊಗಿಸು: ಸೇರಿಸು; ಸುಮ್ಮಾನ: ಸಂತೋಷ; ಖಳ: ದುಷ್ತ; ಶಿರೋಮಣಿ: ಅಗ್ರಗಣ್ಯ, ಶ್ರೇಷ್ಠ; ಕೂದಲು: ರೋಮ; ಕೈ: ಹಸ್ತ; ಕಟ್ಟು: ಬಂಧಿಸು; ಖೇಚರ: ಗಗನದಲ್ಲಿ ಸಂಚರಿಸುವವ, ಗಂಧರ್ವ, ದೇವತೆ; ಎಳೆ: ನೂಲಿನ ಎಳೆ, ಸೂತ್ರ; ಬಿಡಿಸು: ಸಡಲಿಸು;

ಪದವಿಂಗಡಣೆ:
ಎಲವೊ +ರಾಯನ +ಪಟ್ಟದರಸಿಯ
ಸುಲಿಸಿದ+ಆ +ಛಲವೆಲ್ಲಿ +ಹಗೆಗಳ
ಹಳುವದಲಿ +ಹೊಗಿಸಿದೆನ್+ಎನಿಪ+ ಸುಮ್ಮಾನ +ತಾನೆಲ್ಲಿ
ಖಳ +ಶಿರೋಮಣಿ +ನಿನ್ನ +ತಲೆಗೂ
ದಲಲಿ +ಕೈಗಳ+ ಕಟ್ಟಿ +ಖೇಚರನ್
ಎಳೆಯೆ +ಬಿಡಿಸಿದರ್+ಆರು +ಕೌರವ +ಎಂದನಾ +ಭೀಮ

ಅಚ್ಚರಿ:
(೧) ದುರ್ಯೋಧನನನ್ನು ಖಳ ಶಿರೋಮಣಿ ಎಂದು ಕರೆದಿರುವುದು
(೨) ಹ ಕಾರದ ತ್ರಿವಳಿ ಪದ – ಹಗೆಗಳ ಹಳುವದಲಿ ಹೊಗಿಸಿದೆನೆನಿಪ

ಪದ್ಯ ೧೦: ಕೌರವರನ್ನು ಖೇಚರರಿಂದ ಯಾರು ರಕ್ಷಿಸಿದರು?

ಹಿಂದೆ ಗಳಹುವನಿವನು ಬಾಯಿಗೆ
ಬಂದ ಪರಿಯಲಿ ಪಾಂಡುತನಯರ
ಕೊಂದನಾಗಳೆ ಕರ್ಣನಿನ್ನಾರೊಡನೆ ಸಂಗ್ರಾಮ
ಹಿಂದೆ ಹಮ್ಮಿದ ಸಮರದೊಳು ನಡೆ
ತಂದು ಖೇಚರನಡಸಿ ಕಟ್ಟಿದ
ಡಂದು ನಿನ್ನನು ಬಿಡಿಸಿದವನರ್ಜುನನೊ ರವಿಸುತನೊ (ಭೀಷ್ಮ ಪರ್ವ, ೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ದ್ರೋಣರು ತಮ್ಮ ಮಾತನ್ನು ಮುಂದುವರೆಸುತ್ತಾ, ಈ ಕರ್ಣನು ಬೆನ್ನ ಹಿಂದೆ ಬಾಯಿಗೆ ಬಂದಂತೆ ಬೊಗಳುತ್ತಾನೆ, ಕರ್ಣನು ಪಾಂಡವರನ್ನು ಆಗಲೇ ಕೊಂದುಬಿಟ್ಟಿರುವನಲ್ಲಾ, ಇನ್ನಾರ ಜೊತೆಗೆ ಯುದ್ಧಮಾಡುತ್ತಾನೆ? ಹಿಂದೆ ಘೋಷಯಾತ್ರೆಯ ಸಮಯದಲ್ಲಿ ಗಂಧರ್ವನು ನಿನ್ನನ್ನು ಹೆಡೆಮುರಿಗೆ ಕಟ್ಟಿ ತೆಗೆದುಕೊಂಡು ಹೋದನಲ್ಲಾ, ಆಗ ನಿನ್ನನ್ನು ಬಿಡಿಸಿದವನು ಕರ್ಣನೋ ಅರ್ಜುನನೋ ಎಂದು ಕೇಳಿದರು.

ಅರ್ಥ:
ಹಿಂದೆ: ಮೊದಲು, ಪೂರ್ವದಲ್ಲಿ; ಗಳಹು: ಪ್ರಲಾಪಿಸು, ಹೇಳು; ಪರಿ: ರೀತಿ; ತನಯ: ಮಗ; ಕೊಂದು: ಸಾಯಿಸು; ಸಂಗ್ರಾಮ: ಯುದ್ಧ; ಹಮ್ಮು: ಅಹಂಕಾರ; ಸಮರ: ಯುದ್ಧ; ನಡೆ: ಚಲಿಸು; ಖೇಚರ: ಆಕಾಶದಲ್ಲಿ ಸಂಚರಿಸುವವನು; ಗಂಧರ್ವ; ಅಡಸು: ಆಕ್ರಮಿಸು, ಮುತ್ತು; ಕಟ್ಟು: ಬಂಧಿಸು; ಬಿಡಿಸು: ಕಳಚು, ಸಡಿಲಿಸು; ರವಿಸುತ: ಸೂರ್ಯನ ಮಗ (ಕರ್ಣ);

ಪದವಿಂಗಡಣೆ:
ಹಿಂದೆ +ಗಳಹುವನ್+ಇವನು +ಬಾಯಿಗೆ
ಬಂದ +ಪರಿಯಲಿ +ಪಾಂಡು+ತನಯರ
ಕೊಂದನ್+ಆಗಳೆ +ಕರ್ಣನ್+ಇನ್ನಾರೊಡನೆ +ಸಂಗ್ರಾಮ
ಹಿಂದೆ +ಹಮ್ಮಿದ+ ಸಮರದೊಳು +ನಡೆ
ತಂದು +ಖೇಚರನ್+ಅಡಸಿ +ಕಟ್ಟಿದಡ್
ಅಂದು +ನಿನ್ನನು +ಬಿಡಿಸಿದವನ್+ಅರ್ಜುನನೊ +ರವಿಸುತನೊ

ಅಚ್ಚರಿ:
(೧) ಸಂಗ್ರಾಮ, ಸಮರ – ಸಮನಾರ್ಥಕ ಪದ

ಪದ್ಯ ೪೨: ಯಾರನ್ನು ಸೇವಕನಾಗಿರಿಸುವೆ ಎಂದು ಭೀಷ್ಮನು ಹೇಳಿದನು?

ಕೇಳಿದೆವು ಹಿಂದಾದ ಖೇಚರ
ರೂಳಿಗವನಡಹಾಯ್ದು ನಿಮ್ಮುವ
ನೋಲಯಿಸಿದಂದವನು ನಿನಗದರಿಂದ ಪರಿಭವವ
ತಾಳದಂತಿರಲವರ ಕರೆಸುವೆ
ವೇಳು ಭೀಮಾರ್ಜುನರ ನಿನಗಿ
ನ್ನಾಳು ಕೆಲಸದೊಳಿರಿಸಿ ನಡೆಸುವೆವೆಂದನಾ ಭೀಷ್ಮ (ಅರಣ್ಯ ಪರ್ವ, ೨೨ ಸಂಧಿ, ೪೨ ಪದ್ಯ)

ತಾತ್ಪರ್ಯ:
ಭೀಷ್ಮನು ದುರ್ಯೋಧನನ ಮಾತನ್ನು ಕೇಳಿ ಆತನನ್ನು ಸಂತೈಸಲೆಂದು, ನೀನು ಗಂಧರ್ವರಿಗೆ ಸೋತುದನ್ನು ಅರ್ಜುನನು ನಿಮ್ಮನ್ನು ಬಿಡಿಸಿಕೊಂಡು ಬಂದುದನ್ನು ನಿನಗೆ ಅದರಿಂದಾದ ಅಪಮಾನವನ್ನು ಕೇಳಿದ್ದೇನೆ. ನೀನು ನಿರಶನವನ್ನು ಬಿಟ್ಟೇಳು. ಭೀಮಾರ್ಜುನರನ್ನು ಕರೆಸಿ ನಿನಗೆ ಆಳುಗಳಾಗಿರುವಂತೆ ನೇಮಿಸುತ್ತೇನೆ ಎಂದನು.

ಅರ್ಥ:
ಕೇಳು: ಆಲಿಸು; ಹಿಂದೆ: ಪೂರ್ವ; ಖೇಚರ: ಗಂಧರ್ವರು; ಊಳಿಗ: ಕೆಲಸ, ಕಾರ್ಯ; ಅಡಹಾಯ್ದು: ಇದಿರಿಸು, ಅಡ್ಡಬರು; ಓಲಯಿಸು: ಉಪಚರಿಸು; ಪರಿಭವ: ಸೋಲು; ತಾಳು: ಸೈರಿಸು; ಕರೆಸು: ಬರೆಮಾಡು; ಆಳು: ಸೇವಕ; ನಡೆಸು: ಚಲಿಸು, ನಡಗೆ, ಆಚರಿಸು;

ಪದವಿಂಗಡಣೆ:
ಕೇಳಿದೆವು +ಹಿಂದಾದ +ಖೇಚರರ್
ಊಳಿಗವನ್+ಅಡಹಾಯ್ದು +ನಿಮ್ಮುವನ್
ಓಲಯಿಸಿದ್+ಅಂದವನು +ನಿನಗ್+ಅದರಿಂದ +ಪರಿಭವವ
ತಾಳದಂತಿರಲ್+ಅವರ +ಕರೆಸುವೆವ್
ಏಳು +ಭೀಮಾರ್ಜುನರ +ನಿನಗಿನ್
ಆಳು +ಕೆಲಸದೊಳಿರಿಸಿ+ ನಡೆಸುವೆವ್+ಎಂದನಾ+ ಭೀಷ್ಮ

ಅಚ್ಚರಿ:
(೧) ಭೀಷ್ಮರ ಓಲೈಸುವ ಪ್ರಕ್ರಿಯೆ – ಆಳು ಕೆಲಸದೊಳಿರಿಸಿ ನಡೆಸುವೆವೆಂದನಾ ಭೀಷ್ಮ

ಪದ್ಯ ೩: ಧರ್ಮಜನು ಚಿತ್ರಸೇನನನ್ನು ಹೇಗೆ ಬೀಳ್ಕೊಟ್ಟನು?

ಮಾನಭಂಗವೆ ಬರಲಿ ಮೇಣಭಿ
ಮಾನವಾಲಿಂಗಿಸಲಿ ಚರಣದೊ
ಳಾನತರ ಪಾಲಿಸುವುದೇ ಕ್ಷತ್ರಿಯರ ಧರ್ಮವಿದು
ನೀನೆಮಗೆ ಬಾಂಧವನೆನ್ನುತ ಸ
ನ್ಮಾನದಲಿ ಕಳುಹಿಸಿದನು ಬಳಿಕು
ದ್ಯಾನದಲಿ ದೇವೇಂದ್ರನೆತ್ತಿದನಳಿದ ಖೇಚರರ (ಅರಣ್ಯ ಪರ್ವ, ೨೨ ಸಂಧಿ, ೩ ಪದ್ಯ)

ತಾತ್ಪರ್ಯ:
ಮಾನಭಂಗವಾಗಲಿ ಅಥವಾ ಸನ್ಮಾನವೇ ಬರಲಿ, ಶರಣಾಗತರಾದವರನ್ನು ರಕ್ಷಿಸುವುದು ಕ್ಷತ್ರಿಯರ ಧರ್ಮ, ನೀನಾದರೋ ನಮಗೆ ಬಾಂಧವನಲ್ಲವೇ ಎಂದು ಧರ್ಮಜನು ಅವನನ್ನು ಸನ್ಮಾನ ಮಾಡಿ ಕಳಿಸಿದನು. ಯುದ್ಧದಲ್ಲಿ ಸಾವನಪ್ಪಿದ ಗಂಧರ್ವರನ್ನು ಇಂದ್ರನು ಬದುಕಿಸಿದನು.

ಅರ್ಥ:
ಮಾನ: ಗೌರವ; ಮೇಣ್: ಅಥವ; ಅಭಿಮಾನ: ಹೆಮ್ಮೆ, ಅಹಂಕಾರ; ಆಲಿಂಗಿಸು: ತಬ್ಬಿಕೊ; ಆನತ: ಬಾಗಿದ, ನಮಸ್ಕರಿಸಿದ; ಚರಣ: ಪಾದ; ಪಾಲಿಸು: ರಕ್ಷಿಸು, ಕಾಪಾಡು; ಧರ್ಮ: ಧಾರಣೆ ಮಾಡಿದುದು; ಬಾಂಧವ: ಬಂಧು, ನೆಂಟ; ಸನ್ಮಾನ: ಮಾನ್ಯತೆ; ಕಳುಹಿಸು: ಬೀಳ್ಕೊಡು; ಉದ್ಯಾನ: ಉಪವನ; ದೇವೇಂದ್ರ: ಇಂದ್ರ; ಅಳಿ: ಸಾವು; ಎತ್ತು: ಮೇಲೇಳಿಸು; ಖೇಚರ: ಗಂಧರ್ವ;

ಪದವಿಂಗಡಣೆ:
ಮಾನಭಂಗವೆ+ ಬರಲಿ+ ಮೇಣ್+ಅಭಿ
ಮಾನವ್+ಆಲಿಂಗಿಸಲಿ +ಚರಣದೊಳ್
ಆನತರ +ಪಾಲಿಸುವುದೇ +ಕ್ಷತ್ರಿಯರ +ಧರ್ಮವಿದು
ನೀನೆಮಗೆ+ ಬಾಂಧವನ್+ಎನ್ನುತ +ಸ
ನ್ಮಾನದಲಿ+ ಕಳುಹಿಸಿದನು +ಬಳಿಕ್
ಉದ್ಯಾನದಲಿ +ದೇವೇಂದ್ರನ್+ಎತ್ತಿದನ್+ಅಳಿದ +ಖೇಚರರ

ಅಚ್ಚರಿ:
(೧) ಕ್ಷತ್ರಿಯರ ಧರ್ಮ – ಚರಣದೊಳಾನತರ ಪಾಲಿಸುವುದೇ ಕ್ಷತ್ರಿಯರ ಧರ್ಮವಿದು

ಪದ್ಯ ೨೩: ಪಾರ್ಥನು ಗಂಧರ್ವರ ಬಾಣವನ್ನು ಹೇಗೆ ಕೆಡಹಿದನು?

ಕೋಲಬಲುವಳೆಗೊಡ್ಡಿ ಹರಿಗೆಯ
ಮೇಳಯವ ಮರೆಗೊಂಡು ಖೇಚರ
ರಾಳು ನಿಂದೆಚ್ಚರು ನಿಹಾರದೊಳರ್ಜುನನ ರಥವ
ಕೋಲುಗಳನಾ ಹರಿಗೆ ಹಲಗೆಯ
ಮೇಳಯವನಾ ಮರೆಯಲುಗಿದೆಸು
ವಾಳನೊಂದಂಬಿನಲಿ ಸಂದಣಿಗೆಡಹಿದನು ಪಾರ್ಥ (ಅರಣ್ಯ ಪರ್ವ, ೨೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳಿಗೆ ಹರಿಗೆಯನ್ನು ಮರೆಯಾಗಿ ಕುದುರೆಯನ್ನು ಮರೆಯಾಗಿ ಒಡ್ಡಿ, ಅದರ ಹಿಂದೆ ನಿಂತು ಗಂಧರ್ವರು ಅರ್ಜುನನ ರಥವನ್ನು ಬಾಣಗಳಿಂದ ಹೊಡೆಯಲಾರಂಭಿಸಿದರು. ಗಂಧರ್ವರು ಒಡ್ಡಿದ ಹಲಗೆಗಳು, ಅದರ ಹಿಂದೆ ನಿಂತು ಅವರು ಹೊಡೆದ ಬಾಣಗಳು, ಅವನ್ನು ಹೊಡದವರು ಇವರೆಲ್ಲರನ್ನೂ ಒಂದೊಂದೇ ಬಾಣದಿಂದ ಅರ್ಜುನನು ಕೆಡಹುತ್ತಾ ಬಂದನು.

ಅರ್ಥ:
ಕೋಲ: ಬಾಣ; ಕೋಲದಬಲುವಳೆ: ಬಾಣದ ಹೆಚ್ಚಿನ ಮಳೆ; ಒಡ್ಡು: ಅರ್ಪಿಸು; ಹರಿಗೆ: ಚಿಲುಮೆ; ಮೇಳ: ಗುಂಪು; ಮರೆ:ಹಿಂಭಾಗ, ಹಿಂಬದಿ; ಖೇಚರ: ಗಂಧರ್ವ; ಆಳು: ಸೇವಕ; ನಿಂದು: ನಿಲ್ಲು ಎಚ್ಚು: ಬಾಣಪ್ರಯೋಗ ಮಾಡು; ನಿಹಾರ: ಮಂಜಿನಂತೆ ದಟ್ಟವಾದ ಮುಸುಕು; ರಥ: ಬಂಡಿ; ಹಲಗೆ: ಕುದುರೆ; ಹಲಗೆ: ಒಂದು ಬಗೆಯ ಗುರಾಣಿ, ಅಗಲವಾದ ಮರದ ಸೀಳು; ಉಗಿ: ಹೊರಹಾಕು; ಅಂಬು: ಬಾಣ; ಸಂದಣಿ: ಗುಂಪು; ಕೆಡಹು: ಬೀಳಿಸು;

ಪದವಿಂಗಡಣೆ:
ಕೋಲಬಲುವಳೆಗ್+ಒಡ್ಡಿ +ಹರಿಗೆಯ
ಮೇಳಯವ +ಮರೆಗೊಂಡು +ಖೇಚರರ್
ಆಳು+ ನಿಂದ್+ಎಚ್ಚರು +ನಿಹಾರದೊಳ್+ಅರ್ಜುನನ +ರಥವ
ಕೋಲುಗಳನಾ +ಹರಿಗೆ +ಹಲಗೆಯ
ಮೇಳಯವನಾ +ಮರೆಯಲ್+ಉಗಿದ್+ಎಸುವ್
ಆಳನ್+ಒಂದ್+ಅಂಬಿನಲಿ +ಸಂದಣಿ+ಕೆಡಹಿದನು +ಪಾರ್ಥ

ಅಚ್ಚರಿ:
(೧) ಹರಿಗೆಯ ಮೇಳ, ಹರಿಗೆ ಹಲಗೆಯ ಮೇಳ – ಪದಗಳ ಬಳಕೆ

ಪದ್ಯ ೩೩: ಗಂಧರ್ವ ಸೈನ್ಯದವರು ಹೇಗೆ ಗರ್ಜಿಸಿದರು?

ಗಿಳಿಯ ಹಿಂಡಿನ ಮೇಲೆ ಗಿಡುಗನ
ಬಳಗ ಕವಿವಂದದಲಿ ಸೂಟಿಯೊ
ಳಳವಿಗೊಡ್ಡಿನ ಚಾತುರಂಗವನಿಕ್ಕಡಿಯ ಮಾಡಿ
ಎಲೆ ಸುಯೋಧನ ಬೀಳು ಕೈದುವ
ನಿಳುಹಿ ಖೇಚರರಾಯನಂಘ್ರಿಯೊ
ಳೆಲವೊ ರವಿಸುತ ಹೋಗೆನುತ ಹೊಕ್ಕಿರಿದರುರವಣಿಸಿ (ಅರಣ್ಯ ಪರ್ವ, ೨೦ ಸಂಧಿ, ೩೩ ಪದ್ಯ)

ತಾತ್ಪರ್ಯ:
ಗಿಳಿಗಳ ಹಿಂಡಿನ ಮೇಲೆ ಗಿಡುಗಗಳು ಮುತ್ತುವಂತೆ, ಚತುರಂಗ ಸೈನ್ಯವನ್ನು ತುಂದು ತುಂಡಾಗಿ ಕತ್ತರಿಸಿದರು. ಬಳಿಕ ಎಲೋ ಸುಯೋಧನ ಆಯುಧವನ್ನು ಕೆಳಗಿಳಿಸಿ ಗಂಧರ್ವ ರಾಜನಿಗೆ ಶರಣಾಗು, ಎಲವೋ ಕರ್ಣ ನೀನು ಸಹ ಶರಣಾಗಲು ತೆರಳು ಎಂದು ಗರ್ಜಿಸಿದರು.

ಅರ್ಥ:
ಗಿಳಿ: ಶುಕ; ಹಿಂಡು: ಗುಂಪು; ಗಿಡುಗ: ಒಂದು ಬಗೆಯ ಹಕ್ಕಿ; ಬಳಗ: ಗುಂಪು, ಜೊತೆಯವರು; ಕವಿ: ಆವರಿಸು; ಸೂಟಿ: ವೇಗ, ರಭಸ; ಅಳವಿ: ಶಕ್ತಿ; ಗೊಡ್ಡು: ನಿಷ್ಫಲತೆ, ಅಂತಸ್ಸಾರವಿಲ್ಲದಿರುವುದು; ಚಾತುರಂಗ: ಚತುರಂಗ ಸೈನ್ಯ; ಇಕ್ಕಡಿ: ಕತ್ತರಿಸು; ಬೀಳು: ಎರಗು; ಕೈದು: ಆಯುಧ; ಇಳುಹಿ: ಕೆಳಗಿಳಿಸು; ಖೇಚರ: ಗಂಧರ್ವ; ರಾಯ: ರಾಜ; ಅಂಘ್ರಿ: ಪಾದ; ರವಿಸುತ: ಸೂರ್ಯನ ಮಗ (ಕರ್ಣ); ಹೋಗು: ತೆರಳು; ಹೊಕ್ಕಿರಿ: ಗರ್ಜಿಸು; ಉರವಣಿಸು: ಉತ್ಸಾಹದಿಂದಿರು;

ಪದವಿಂಗಡಣೆ:
ಗಿಳಿಯ +ಹಿಂಡಿನ +ಮೇಲೆ +ಗಿಡುಗನ
ಬಳಗ +ಕವಿವಂದದಲಿ+ ಸೂಟಿಯೊಳ್
ಅಳವಿಗೊಡ್ಡಿನ +ಚಾತುರಂಗವನ್+ಇಕ್ಕಡಿಯ +ಮಾಡಿ
ಎಲೆ +ಸುಯೋಧನ +ಬೀಳು +ಕೈದುವ
ನಿಳುಹಿ +ಖೇಚರರಾಯನ್+ಅಂಘ್ರಿಯೊಳ್
ಎಲವೊ +ರವಿಸುತ+ ಹೋಗೆನುತ +ಹೊಕ್ಕಿರಿದರ್+ಉರವಣಿಸಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಿಳಿಯ ಹಿಂಡಿನ ಮೇಲೆ ಗಿಡುಗನ ಬಳಗ ಕವಿವಂದದಲಿ

ಪದ್ಯ ೧೮: ಕರ್ಣನು ಹೇಗೆ ಗಂಧವರನ್ನು ಬೀಳಿಸಿದನು?

ಗಾಯವಡೆದರು ಕೆಲರು ನೆಲದಲಿ
ಲಾಯ ನೀಡಿತು ಕೆಲಬರಿಗೆ ಪೂ
ರಾಯದೆಸುಗೆಗೆ ಹಸುಗೆಯಾದರು ಭಟರು ದೆಸೆದೆಸೆಗೆ
ಆಯುಧದ ಮೆದೆಯೊಡ್ಡಿತಾಕ
ರ್ಣಾಯತಾಸ್ತ್ರವ ಕೆಣಕಿ ಖೇಚರ
ರಾಯದಳ ನುಗ್ಗಾಯ್ತು ದೊರೆಹೊಕ್ಕನು ಮಹಾಹವವ (ಅರಣ್ಯ ಪರ್ವ, ೨೦ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕರ್ಣನ ಬಾನಗಳಿಂದ ಕೆಲವರು ಗಾಯಗೊಂಡರು. ಕೆಲವರು ನೆಲದಲ್ಲಿ ಸಾಲಾಗಿ ಬಿದ್ದರು. ಕರ್ಣನ ಹೊಡೆತಕ್ಕೆ ಯೋಧರು ದಿಕ್ಕು ದಿಕ್ಕಿಗೆ ಓಡಿ ಹೋದರು. ಕರ್ಣನು ಮುರಿದ ಗಂಧರ್ವರ ಶಸ್ತ್ರಗಳು ಮೆದೆಯಾಗಿ ಬಿದ್ದವು. ಕಿವಿವರೆಗೆ ಹೆದೆಯನ್ನೆಳೆದು ಕರ್ಣನು ಬಿಟ್ಟ ಬಾಣಗಳಿಂದ ಗಂಧರ್ವರ ಸೈನ್ಯವು ಕಡಿದು ಬಿತ್ತು. ಚಿತ್ರಸೇನನೇ ಯುದ್ಧಕ್ಕೆ ಬಂದನು.

ಅರ್ಥ:
ಗಾಯ: ಪೆಟ್ಟು; ಕೆಲರು: ಸ್ವಲ್ಪ; ನೆಲ: ಭೂಮಿ; ಲಾಯ: ಸಾಲು, ಅಶ್ವಶಾಲೆ; ಪೂರಾಯ: ಪರಿಪೂರ್ಣ; ಎಸು: ಬಾಣ ಪ್ರಯೋಗ ಮಾಡು; ಹಸುಗೆ: ವಿಭಾಗ, ಹಂಚಿಕೆ; ಭಟ: ಸೈನ್ಯ; ದೆಸೆ: ದಿಕ್ಕು; ಆಯುಧ: ಶಸ್ತ್ರ; ಮೆದೆ: ಹುಲ್ಲಿನ ರಾಶಿ, ಒಡ್ಡು, ಗುಂಪು; ಕರ್ಣ: ಕಿವಿ; ಆಯತ: ಅಣಿಗೊಳಿಸು; ಕೆಣಕು: ಪ್ರಚೋದಿಸು; ಖೇಚರ: ಗಂಧರ್ವ; ರಾಯ: ಒಡೆಯ; ದಳ; ಸೈನ್ಯ; ನುಗ್ಗು: ತಳ್ಳಿಕೊಂಡು ಮುಂದೆ ಸರಿ; ದೊರೆ: ರಾಜ; ಹೊಕ್ಕು: ಸೇರು; ಮಹಾ: ದೊಡ್ಡ; ಆಹವ: ಯುದ್ಧ;

ಪದವಿಂಗಡಣೆ:
ಗಾಯವಡೆದರು+ ಕೆಲರು +ನೆಲದಲಿ
ಲಾಯ +ನೀಡಿತು +ಕೆಲಬರಿಗೆ +ಪೂ
ರಾಯದ್+ಎಸುಗೆಗೆ+ ಹಸುಗೆಯಾದರು +ಭಟರು +ದೆಸೆದೆಸೆಗೆ
ಆಯುಧದ +ಮೆದೆಯೊಡ್ಡಿತ್+ಆ+ಕ
ರ್ಣಾಯತ+ಅಸ್ತ್ರವ +ಕೆಣಕಿ +ಖೇಚರ
ರಾಯದಳ +ನುಗ್ಗಾಯ್ತು +ದೊರೆ+ಹೊಕ್ಕನು +ಮಹ+ಆಹವವ

ಅಚ್ಚರಿ:
(೧) ಗಾಯ, ಲಾಯ, ಪೂರಾಯ, ರಾಯ – ಪ್ರಾಸ ಪದಗಳು

ಪದ್ಯ ೧೫: ಹನುಮಂತ ಭೀಮನಲ್ಲಿ ಯಾವ ಪ್ರಶ್ನೆಯನ್ನು ಕೇಳಿದ?

ಮುರಿಯದಂತಿರೆ ಲಘುವಿನಲಿ ಹೆ
ಮ್ಮರನನೊಯ್ಯನೆ ನೆಮ್ಮಿ ಕುಳ್ಳಿ
ರ್ದರಿದಿಶಾಪಟ ನುಡಿಸಿದನು ಪವಮಾನ ನಂದನನ
ಭರವಿದೆಲ್ಲಿಗೆ ಮರ್ತ್ಯನೋ ಖೇ
ಚರನೊ ದೈತ್ಯನೊದಿವಿಜನೋಕಿ
ನ್ನರನೊ ನೀನಾರೆಂದು ಭೀಮನು ನುಡಿಸಿದನು ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಆ ಮೇಲೆ ಹನುಮಂತನು ಮಗ್ಗುಲಾಗಿ ಒಂದು ದೊಡ್ಡ ಮರಕ್ಕೆ ಬೆನ್ನು ನೀಡಿ ಸ್ವಲ್ಪ ಆ ಮರವು ಬೀಳದಂತೆ, ಅವನ ದೇಹವು ತಗುಲಿರುವಂತೆ ಕುಳಿತುಕೊಂಡನು. ವೇಗವಾಗಿ ಬರುತ್ತಿದ್ದ ಭೀಮನನ್ನು ಕಂಡು ಎಲ್ಲಿಗೆ ಹೋಗುತ್ತಿರುವೆ, ನೀನು ಮನುಷ್ಯನೋ, ಖೇಚರನೋ, ರಾಕ್ಷಸನೋ, ದೇವನೋ, ಕಿಂಪುರುಷನೋ, ನೀನಾರೆಂದು ಹನುಮನು ಪ್ರಶ್ನಿಸಿದನು.

ಅರ್ಥ:
ಮುರಿ: ಸೀಳು; ಲಘು: ಹಗುರ; ಹೆಮ್ಮರ: ದೊಡ್ಡ ವೃಕ್ಷ; ಒಯ್ಯನೆ: ಮೆಲ್ಲಗೆ; ನೆಮ್ಮು: ಆಧಾರವನ್ನು ಪಡೆ; ಕುಳ್ಳಿರ್ದ: ಆಸೀನನಾದ; ಅರಿ: ವೈರಿ; ದಿಶಾಪಟ: ಎಲ್ಲಾ ದಿಕ್ಕುಗಳಿಗೆ ಓಡಿಸುವವ; ನುಡಿಸು: ಮಾತಾಡು; ಪವಮಾನ: ಗಾಳಿ, ವಾಯು; ನಂದನ: ಮಗ; ಭರ: ರಭಸ; ಮರ್ತ್ಯ: ಮನುಷ್ಯ; ಖೇಚರ: ಗಂಧರ್ವ; ದೈತ್ಯ: ರಾಕ್ಷಸ; ದಿವಿಜ: ಸುರ, ದೇವತೆ; ಕಿನ್ನರ: ಕಿಂಪುರುಷ; ನುಡಿಸು: ಮಾತಾಡು;

ಪದವಿಂಗಡಣೆ:
ಮುರಿಯದಂತಿರೆ +ಲಘುವಿನಲಿ +ಹೆ
ಮ್ಮರನನ್+ಒಯ್ಯನೆ +ನೆಮ್ಮಿ +ಕುಳ್ಳಿರ್ದ್
ಅರಿದಿಶಾಪಟ+ ನುಡಿಸಿದನು +ಪವಮಾನ +ನಂದನನ
ಭರವಿದ್+ಎಲ್ಲಿಗೆ +ಮರ್ತ್ಯನೋ +ಖೇ
ಚರನೊ+ ದೈತ್ಯನೊ+ದಿವಿಜನೋ+ಕಿ
ನ್ನರನೊ +ನೀನಾರೆಂದು +ಭೀಮನು +ನುಡಿಸಿದನು +ಹನುಮ

ಅಚ್ಚರಿ:
(೧) ಹನುಮನನ್ನು ಕರೆದ ಪರಿ – ಅರಿದಿಶಾಪಟ
(೨) ಹಲವು ಬಗೆಯ ಜನರ ಪರಿಚಯ – ಮರ್ತ್ಯ, ಖೇಚರ, ದೈತ್ಯ, ದಿವಿಜ, ಕಿನ್ನರ

ಪದ್ಯ ೬೩: ಧರ್ಮಜನು ಪಣಕ್ಕೆ ಇಡಲು ಯಾವುದರ ಬಗ್ಗೆ ಚಿಂತಿಸಿದನು?

ಆಡಿದನು ನೃಪನಾಕ್ಷಣಕೆ ಹೋ
ಗಾಡಿದನು ಖೇಚರರ ಖಾಡಾ
ಖಾಡಿಯಲಿ ಝಾಡಿಸಿದ ಹಯವನು ಹತ್ತು ಸಾವಿರವ
ಹೂಡಿದನು ಸಾರಿಗಳ ಮರಳಿ
ನ್ನಾಡುವರೆ ಪಣವಾವುದೈ ಮಾ
ತಾಡಿಯೆನೆ ಮನದಲಿ ಮಹೀಪತಿ ಧನವ ಚಿಂತಿಸಿದ (ಸಭಾ ಪರ್ವ, ೧೪ ಸಂಧಿ, ೬೩ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಆಡಿದನು, ಗಂಧರ್ವರ ಜೊತೆ ಯುದ್ಧಮಾಡಿ ಗಳಿಸಿದ ಹತ್ತು ಸಾವಿರ ಕುದುರೆಗಳನ್ನು ಸೋತನು. ಶಕುನಿಯು ಮತ್ತೆ ಕಾಯಿಗಳನ್ನು ಹೂಡಿ, ಆಡುವುದಕ್ಕೆ ಇನ್ನಾವ ಪಣವನ್ನಿಡುವೆ ಎನ್ನಲು ಧರ್ಮಜನು ತನ್ನಲ್ಲಿದ್ದ ಧನದ ಬಗ್ಗೆ ಚಿಂತಿಸಿದನು.

ಅರ್ಥ:
ಆಡು: ಕ್ರಿಡೆಯಲ್ಲಿ ಪಾಲ್ಗೊಳ್ಳು; ನೃಪ: ರಾಜ; ಹೋಗು: ತೆರಳು; ಖೇಚರ: ಗಂಧರ್ವ; ಖಾಡಾಖಾಡಿ: ಮಲ್ಲಯುದ್ಧ; ಝಾಡಿ: ಕಾಂತಿ; ಹಯ: ಕುದುರೆ; ಹೂಡು: ಇಡು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಮರಳಿ: ಮತ್ತೆ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ಮಾತಾಡು: ತಿಳಿಸು; ಮನ: ಮನಸ್ಸು; ಮಹೀಪತಿ: ರಾಜ; ಧನ: ವಿತ್ತ, ಐಶ್ವರ್ಯ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಆಡಿದನು +ನೃಪನ್+ಆ+ಕ್ಷಣಕೆ +ಹೋಗ್
ಆಡಿದನು +ಖೇಚರರ+ ಖಾಡಾ
ಖಾಡಿಯಲಿ +ಝಾಡಿಸಿದ+ ಹಯವನು +ಹತ್ತು +ಸಾವಿರವ
ಹೂಡಿದನು+ ಸಾರಿಗಳ+ ಮರಳ್
ಇನ್ನಾಡುವರೆ +ಪಣವ್+ಆವುದೈ +ಮಾ
ತಾಡಿಯೆನೆ +ಮನದಲಿ +ಮಹೀಪತಿ +ಧನವ +ಚಿಂತಿಸಿದ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮಾತಾಡಿಯೆನೆ ಮನದಲಿ ಮಹೀಪತಿ
(೨) ಆಡಿದನು, ಹೂಡಿದನು – ಪ್ರಾಸ ಪದಗಳು