ಪದ್ಯ ೧೩: ಕೃಷ್ಣನು ಯಾವ ಮಾರ್ಗವನ್ನು ಸೂಚಿಸಿದನು?

ದಂಡನಯ ತರುಬಿದರೆ ಗುಣದಲಿ
ಖಂಡಿಸುವುದಿದಿರಾದ ತರುಗಳು
ದಿಂಡುಗೆಡೆವವು ತೊರೆಗೆ ಮಣಿದರೆ ಗೇಕು ಬದುಕುವುದು
ಚಂಡಬಲನೀ ಭೀಷ್ಮ ಮುಳಿದರೆ
ಖಂಡಪರಶುವ ಗಣಿಸನೆನೆ ಖರ
ದಂಡನಾಭನ ಮತಕೆ ನೃಪತಿ ಹಸಾದವೆನುತಿರ್ದ (ಭೀಷ್ಮ ಪರ್ವ, ೭ ಸಂಧಿ, ೧೩ ಪದ್ಯ)

ತಾತ್ಪರ್ಯ:
ಯುದ್ಧದಲ್ಲಿ ಅಸಾಧ್ಯವಾದರೆ ಸಾಮದಿಂದ ಗೆಲ್ಲಬೇಕು, ಪ್ರವಾಹ ಬಂದಾಗ ಅದರ ಭರಕ್ಕೆ ಮರಗಳೂ ಮುರಿದು ಬೀಳುತ್ತವೆ, ಆದರೆ ಗೇಕು ಎಂಬ ಹುಲ್ಲು ಪಕ್ಕಕ್ಕೆ ಬಾಗಿ ಉಳಿದುಕೊಳ್ಳುತ್ತದೆ, ಭೀಷ್ಮನು ಶಿವನನ್ನೂ ಲೆಕ್ಕಕ್ಕಿಟ್ಟಿಲ್ಲ ಎಂದು ಕೃಷ್ಣನು ಹೇಳಲು ಧರ್ಮಜನು ಮಹಾಪ್ರಸಾದ ಎಂದು ಅವನ ಮಾತಿಗೆ ಒಪ್ಪಿದನು.

ಅರ್ಥ:
ದಂಡ: ಶಿಕ್ಷೆ, ದಂಡನೆ, ಸಾಮ, ದಾನ, ಭೇದ ಮತ್ತು ದಂಡಗಳೆಂಬ ರಾಜನೀತಿಯ ನಾಲ್ಕು ಉಪಾಯ ಗಳಲ್ಲೊಂದು; ನಯ: ಶಾಸ್ತ್ರ ರಾಜನೀತಿ, ನುಣುಪು; ತರುಬು: ತಡೆ, ನಿಲ್ಲಿಸು, ಅಡ್ಡಗಟ್ಟು; ಗುಣ: ನಡತೆ; ಖಂಡಿಸು: ಸೀಳು; ಇದಿರು: ಎದುರು; ತರು: ಮರ; ದಿಂಡು: ಕಾಂಡ, ಬೊಡ್ಡೆ; ಕೆಡೆ: ಬಾಗು, ಬೀಳು; ತೊರೆ: ನದಿ, ಹೊಳೆ; ಮಣಿ: ಬಾಗು; ಗೇಕು: ಒಂದು ಬಗೆಯ ಹುಲ್ಲು; ಬದುಕು: ಜೀವಿಸು; ಚಂಡಬಲ: ಪರಾಕ್ರಮಿ; ಮುಳಿ: ಕೋಪ; ಖಂಡಪರಶು: ಶಿವ; ಗಣಿಸು: ಲೆಕ್ಕಿಸು; ಖರ: ವಿಶೇಷವಾಗಿ; ಖರದಂಡನಾಭ: ಹೊಕ್ಕಳಲ್ಲಿ ಕಮಲವನ್ನುಳ್ಳವನು, ಕೃಷ್ಣ; ಮತ: ವಿಚಾರ; ನೃಪ: ರಾಜ; ಹಸಾದ: ಅನುಗ್ರಹ, ದಯೆ;

ಪದವಿಂಗಡಣೆ:
ದಂಡನಯ +ತರುಬಿದರೆ +ಗುಣದಲಿ
ಖಂಡಿಸುವುದ್+ಇದಿರಾದ +ತರುಗಳು
ದಿಂಡುಗೆಡೆವವು+ ತೊರೆಗೆ+ ಮಣಿದರೆ+ ಗೇಕು +ಬದುಕುವುದು
ಚಂಡಬಲನೀ +ಭೀಷ್ಮ +ಮುಳಿದರೆ
ಖಂಡಪರಶುವ +ಗಣಿಸನ್+ಎನೆ +ಖರ
ದಂಡನಾಭನ+ ಮತಕೆ+ ನೃಪತಿ +ಹಸಾದ+ವೆನುತಿರ್ದ

ಅಚ್ಚರಿ:
(೧) ಉಪಮಾನದ ಪ್ರಯೋಗ – ತರುಗಳು ದಿಂಡುಗೆಡೆವವು ತೊರೆಗೆ ಮಣಿದರೆ ಗೇಕು ಬದುಕುವುದು

ಪದ್ಯ ೬: ಅರ್ಜುನನು ದೇವತೆಗಳನ್ನು ಹೇಗೆ ಬರೆಮಾಡಿಕೊಂಡನು?

ಕಂಡನನಿಬರ ಬರವನೊಲಿದಿದ
ರ್ಗೊಂಡವನರವರುಚಿತದಲಿ ಮುಂ
ಕೊಂಡು ಮನ್ನಿಸಿ ಮನವ ಪಡೆದನು ಲೋಕ ಪಾಲಕರ
ಖಂಡಪರಶುವಿನಸ್ತ್ರವನು ಕೈ
ಕೊಂಡೆ ನಿನಗೇನರಿದು ನೀನು
ದ್ದಂಡ ಬಲನೆಂದನಿಬರುಪಚರಿಸಿದನು ಫಲುಗುಣನ (ಅರಣ್ಯ ಪರ್ವ, ೮ ಸಂಧಿ, ೬ ಪದ್ಯ)

ತಾತ್ಪರ್ಯ:
ಅರ್ಜುನನು ಅವರೆಲ್ಲರೂ ಬಂದುದನ್ನು ಕಂಡು, ಸರಿಯಾದ ರೀತಿಯಲ್ಲಿ ಗೌರವಿಸಿ, ಲೋಕಪಾಲಕರ ಮನಸ್ಸನ್ನು ಗೆದ್ದನು. ಅವರೆಲ್ಲರೂ ನೀನು ಮಹಾಪರಾಕ್ರಮಶಾಲಿ, ಶಿವನ ಪಾಶುಪತಾಸ್ತ್ರವನ್ನು ಪಡೆದ ಮಹಾವೀರ, ನಿನಗೆ ಅಸಾಧ್ಯವಾದುದಾದರೂ ಏನು ಎಂದು ಅರ್ಜುನನನ್ನು ಹೊಗಳಿದರು.

ಅರ್ಥ:
ಕಂಡನು: ನೋಡಿದ; ಅನಿಬರ: ಅವರೆಲ್ಲರನ್ನು; ಬರವ: ಆಗಮನ; ಒಲಿ: ಪ್ರೀತಿ, ಒಲವು; ಇದರ್ಗೊಂಡು: ಎದುರುನೋಡು; ಉಚಿತ: ಸರಿಯಾದ; ಮುಂಕೊಂಡು: ಮುಂದೆ, ಅಗ್ರಭಾಗ; ಮನ್ನಿಸು: ಗೌರವಿಸು; ಮನ: ಮನಸ್ಸು; ಪಡೆ: ತೆಗೆದುಕೋ; ಲೋಕ: ಜಗತ್ತು; ಪಾಲಕ: ರಕ್ಷಕ; ಖಂಡ: ತುಂಡು, ಚೂರು; ಪರಶು: ಕೊಡಲಿ, ಕುಠಾರ; ಅಸ್ತ್ರ: ಶಸ್ತ್ರ; ಕೈಕೊಂಡು: ಪಡೆದು; ಅರಿ: ತಿಳಿ; ಉದ್ದಂಡ: ಪ್ರಬಲವಾದ, ಪ್ರಚಂಡ; ಬಲ: ಶಕ್ತಿ; ಉಪಚರಿಸು: ಸತ್ಕರಿಸು;

ಪದವಿಂಗಡಣೆ:
ಕಂಡನ್+ಅನಿಬರ+ ಬರವನ್+ಒಲಿದ್+ಇದ
ರ್ಗೊಂಡವನರವರ್+ಉಚಿತದಲಿ+ ಮುಂ
ಕೊಂಡು +ಮನ್ನಿಸಿ+ ಮನವ+ ಪಡೆದನು+ ಲೋಕ +ಪಾಲಕರ
ಖಂಡ+ಪರಶುವಿನ್+ಅಸ್ತ್ರವನು +ಕೈ
ಕೊಂಡೆ +ನಿನಗೇನ್+ಅರಿದು+ ನೀನ್
ಉದ್ದಂಡ +ಬಲನೆಂದ್+ಅನಿಬರ್+ಉಪಚರಿಸಿದನು+ ಫಲುಗುಣನ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮುಂಕೊಂಡು ಮನ್ನಿಸಿ ಮನವ

ಪದ್ಯ ೩೪: ಕರ್ಣನನು ಏನು ಹೇಳುತ್ತಾ ಕರ್ಣನಿಗೆ ಬಾಣವನ್ನು ಬಿಟ್ಟನು?

ಗಂಡುಗಲಿ ನೀ ಕಾಮನೈ ಕೈ
ಕೊಂಡೆವೈ ತಪ್ಪೇನು ನಾವೇ
ಖಂಡಪರಶುಗಳಾಗೆವೇ ಭವದೀಯ ವಿಗ್ರಹಕೆ
ಕಂಡೆ ನಿನ್ನನು ಸುಭಟವೇಷದ
ಭಂಡನೋ ಫಡ ಹೋಗೆನುತ ಪರಿ
ಮಂಡಳಿತ ಕೋದಂಡನೆಚ್ಚನು ಕರ್ಣರ್ಜುನನ (ಕರ್ಣ ಪರ್ವ, ೨೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ಆಹಾ ನೀನು ಗಂಡುಗಲಿ, ಮನ್ಮಥ, ಒಪ್ಪಿದೆ, ನಿನ್ನೊಡನೆ ಯುದ್ಧಮಾಡಲು ನಾನೇ ಶಿವ, ನಿನ್ನನ್ನು ನೋಡಿಯೇ ಬಲ್ಲೆ, ವೀರರ ವೇಷತೊಟ್ಟ ಭಂಡ ನೀನು ಎನ್ನುತ್ತಾ ಕರ್ಣನು ಕಿವಿವರೆಗೆ ಬಾಣಗಳನ್ನು ಸೆಳೆದು ಬಿಟ್ಟನು.

ಅರ್ಥ:
ಗಂಡುಗಲಿ: ಪರಾಕ್ರಮಿ; ಕಾಮ: ಮನ್ಮಥ; ಕೈಕೊಂಡೆ: ಒಪ್ಪಿಕೊಂಡೆ; ತಪ್ಪೇನು: ಸರಿಯಾಗಿದೆ, ಇದರಲ್ಲಿ ತಪ್ಪಿಲ್ಲ; ಖಂಡಪರಶು: ಶಿವ; ಭವದೀಯ: ನಿಮ್ಮ; ವಿಗ್ರಹ: ಪ್ರತಿಮೆ, ರೂಪ; ಕಂಡು: ನೋಡು; ಸುಭಟ: ಶ್ರೇಷ್ಠ ಸೈನಿಕ; ವೇಷ: ಉಡುಗೆ ತೊಡುಗೆ; ಭಂಡ: ನಾಚಿಕೆ ಇಲ್ಲದವನು; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಪರಿ: ವೈರಿ; ಮಂಡಳ:ನಾಡಿನ ಒಂದು ಭಾಗ; ಪರಿಮಂಡಳಿತ: ಎದುರು ಭಾಗದವರಿಗೆ; ಕೋದಂಡ: ಬಿಲ್ಲು; ಎಚ್ಚು: ಬಾಣ ಬಿಡು;

ಪದವಿಂಗಡಣೆ:
ಗಂಡುಗಲಿ +ನೀ +ಕಾಮನೈ +ಕೈ
ಕೊಂಡೆವೈ+ ತಪ್ಪೇನು +ನಾವೇ
ಖಂಡಪರಶುಗಳ್+ಆಗೆವೇ+ ಭವದೀಯ +ವಿಗ್ರಹಕೆ
ಕಂಡೆ+ ನಿನ್ನನು +ಸುಭಟ+ವೇಷದ
ಭಂಡನೋ +ಫಡ+ ಹೋಗೆನುತ+ ಪರಿ
ಮಂಡಳಿತ+ ಕೋದಂಡನ್+ಎಚ್ಚನು +ಕರ್ಣ್+ಅರ್ಜುನನ

ಅಚ್ಚರಿ:
(೧) ಕರ್ಣನು ಅರ್ಜುನನನ್ನು ಹಂಗಿಸುವ ಬಗೆ – ನಿನ್ನನು ಸುಭಟವೇಷದ ಭಂಡನೋ ಫಡ ಹೋಗೆನುತ

ಪದ್ಯ ೬೯: ಖಂಡಲಾತ್ಮಜಅರ್ಜುನನು ಭೀಮನನ್ನು ಹೇಗೆ ಕಂಡನು?

ಕಂಡನರ್ಜುನ ತ್ರಿಪುರದಹನದ
ಖಂಡಪರಶುವೊಲಿರ್ದ ಭೀಮನ
ದಂಡಿಯನು ಥಟ್ಟೈಸಿ ಭೂತಗಳೆಡಬಲದೊಳಿರಲು
ಚಂಡಬಲನಹನೈ ವೃಕೋದರ
ಗಂಡುಗಲಿಗಿದಿರಾವನೆನುತಾ
ಖಂಡಲಾತ್ಮಜನೆರಗಿದನು ಮುರವೈರಿಯಂಘ್ರಿಯಲಿ (ಕರ್ಣ ಪರ್ವ, ೧೯ ಸಂಧಿ, ೬೯ ಪದ್ಯ)

ತಾತ್ಪರ್ಯ:
ತ್ರಿಪುರ ದಹನ ಕಾಲದಲ್ಲಿ ಇದ್ದ ಶಿವನಂತೆ ಕಾಣುವ ಭೀಮನನ್ನು ಅರ್ಜುನನು ಕಂಡನು. ಅವನ ಸುತ್ತಲೂ ಭೂತಗಣಗಳು ನಿಂತಿದ್ದವು. ಭೀಮನು ಮಹಾಬಲಶಾಲಿ, ಗಂಡುಗಲಿ, ಅವನಿಗೆ ಎದುರಾಗಿ ನಿಲ್ಲಬಲ್ಲವರಾರು ಎನ್ನುತ್ತಾ ಅರ್ಜುನನು ಕೃಷ್ಣನ ಪಾದಗಳಿಗೆ ನಮಸ್ಕರಿಸಿದನು.

ಅರ್ಥ:
ಕಂಡು: ನೋಡು; ತ್ರಿಪುರ: ಮೂರುಊರು; ತ್ರಿಪುರದಹನ: ಮೂರು ಊರನ್ನು ಸಂಹರಿಸಿದವ (ಶಿವ); ಖಂಡ: ಖಂಡಿಸಿದ, ಧ್ವಂಸಮಾಡಿದ; ದಂಡಿ: ಘನತೆ, ಹಿರಿಮೆ; ಥಟ್ಟು:ಪಕ್ಕ, ಕಡೆ; ಭೂತ: ಶಿವಗಣ; ಎಡಬಲ: ಅಕ್ಕಪಕ್ಕ; ಚಂಡ: ಶೂರ, ಪರಾಕ್ರಮಿ; ವೃಕೋದರ: ತೋಳನಂತೆ ಹೊಟ್ಟೆಯುಳ್ಳವ (ಭೀಮ); ಗಂಡುಗಲಿ: ಪರಾಕ್ರಮಿ; ಇದಿರು: ಎದುರು; ಆತ್ಮಜ: ಮಗ; ಎರಗು: ನಮಸ್ಕರಿಸು; ಮುರವೈರಿ: ಕೃಷ್ಣ; ಅಂಘ್ರಿ: ಪಾದ; ಪರಶು: ಕೊಡಲಿ; ಖಂಡಪರಶು: ಶಿವ;

ಪದವಿಂಗಡಣೆ:
ಕಂಡನ್+ಅರ್ಜುನ +ತ್ರಿಪುರ+ದಹನದ
ಖಂಡಪರಶುವೊಲ್+ಇರ್ದ +ಭೀಮನ
ದಂಡಿಯನು +ಥಟ್ಟೈಸಿ +ಭೂತಗಳ್+ಎಡಬಲದೊಳ್+ಇರಲು
ಚಂಡಬಲನ್+ಅಹನೈ+ ವೃಕೋದರ
ಗಂಡುಗಲಿಗ್+ಇದಿರ್+ಆವನೆನುತಾ
ಖಂಡಲಾತ್ಮಜನ್+ಎರಗಿದನು +ಮುರವೈರಿ+ಅಂಘ್ರಿಯಲಿ

ಅಚ್ಚರಿ:
(೧) ಶಿವನನ್ನು ಕರೆದಿರುವ ಬಗೆ: ತ್ರಿಪುರದಹನದ ಖಂಡಪರಶುವೊಲಿರ್ದ

ಪದ್ಯ ೧೦: ಯಾರು ಭಂಡರೆಂದು ತಿಳಿಯದಾಗಿದೆ ಎಂದು ಶಲ್ಯನು ಏಕೆ ಹೇಳಿದನು?

ಕಂಡು ಮಾಡುವುದೇನು ಭೀಷ್ಮರು
ಕಂಡುದಿಲ್ಲಾ ಚಾಪವಿದ್ಯಾ
ಖಂಡಪರಶು ದ್ರೋಣನರ್ಜುನನನು ರಣಾಗ್ರದಲಿ
ಕಂಡು ನೀನೇಗುವೆ ಸುಯೋಧನ
ಭಂಡನೋ ಸಾರಥಿತನದ ನಾ
ಭಂಡನೋ ನೀ ಭಂಡನೋ ನಾವರಿಯೆವಿದನೆಂದ (ಕರ್ಣ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕರ್ಣಾ ನೀನು ಅರ್ಜುನನನ್ನು ಕಂಡು ಮಾಡುವುದಾದರೂ ಏನು? ಭೀಷ್ಮರು ಅವನೊಡನೆ ಯುದ್ಧದಲ್ಲಿ ಎದುರಿಸೆ ಏನಾದರು ಎಂದು ನೋಡಲಿಲ್ಲವೇ? ಧರ್ನುವಿದ್ಯಾ ಪ್ರವೀಣರಾದ ದ್ರೋಣರು ಅರ್ಜುನನನ್ನು ಎದುರಿಸೆ ಏನಾದರೆಂದು ನೀನು ಬಲ್ಲೆ, ಇನ್ನ ನೀನು ಅವನೆದುರು ಏನು ಏಗುವೆ? ದುರ್ಯೋಧನನು ಭಂಡನೋ, ಅವನ ಮಾತನ್ನು ಕೇಳಿ ನಿನಗೆ ಸಾರಥಿಯಾಗಲು ಒಪ್ಪಿದ ನಾನು ಭಂಡನೋ, ನೀನು ಭಂಡನೋ ಒಂದೂ ತಿಳಿಯದಾಗಿದೆ ಎಂದು ಶಲ್ಯನು ಹೇಳಿದನು.

ಅರ್ಥ:
ಕಂಡು: ನೋಡಿ; ಮಾಡು: ಕಾರ್ಯಪ್ರವೃತ್ತನಾಗು; ಚಾಪ: ಬಿಲ್ಲು; ಖಂಡಪರಶು: ಶಿವ, ಪರಶುರಾಮ; ರಣಾಗ್ರ: ಯುದ್ಧದ ಮುಂಬಾಗ; ಏಗು: ನಿಭಾಯಿಸು; ಭಂಡ: ನಾಚಿಕೆಗೆಟ್ಟವನು; ಅರಿ: ತಿಳಿ; ಸಾರಥಿ: ಸೂತ, ರಥವನ್ನು ಓಡಿಸುವವ;

ಪದವಿಂಗಡಣೆ:
ಕಂಡು +ಮಾಡುವುದೇನು +ಭೀಷ್ಮರು
ಕಂಡುದಿಲ್ಲಾ+ ಚಾಪ+ವಿದ್ಯಾ
ಖಂಡಪರಶು +ದ್ರೋಣನ್+ಅರ್ಜುನನನು +ರಣಾಗ್ರದಲಿ
ಕಂಡು +ನೀನೇಗುವೆ +ಸುಯೋಧನ
ಭಂಡನೋ+ ಸಾರಥಿತನದ+ ನಾ
ಭಂಡನೋ+ ನೀ +ಭಂಡನೋ +ನಾವರಿಯೆವಿದನೆಂದ

ಅಚ್ಚರಿ:
(೧) ಭಂಡ, ಕಂಡು ಪದದ ಬಳಕೆ – ೩ ಬಾರಿ ಪ್ರಯೋಗ