ಪದ್ಯ ೨೪: ಮಗುವನ್ನು ಸೂತನು ಹೇಗೆ ವರ್ಣಿಸಿದನು?

ತರಣಿಬಿಂಬದ ಮರಿಯೊ ಕೌಸ್ತುಭ
ವರಮಣಿಯ ಖಂಡದ ಕಣಿಯೊ ಮ
ರ್ತ್ಯರಿಗೆ ಮಗನಿವನಲ್ಲ ಮಾಯಾಬಾಲಕನೊ ಮೇಣು
ಇರಿಸಿ ಹೋದವಳಾವಳೋ ಶಿಶು
ವರನ ತಾಯ್ ನಿರ್ಮೋಹೆಯೈ ಹರ
ಹರ ಮಹಾದೇವೆನುತ ತೆಗೆದಪ್ಪಿದನು ಬಾಲಕನ (ಆದಿ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಆ ಸೂತನು ಇದು ಸೂರ್ಯಬಿಂಬದ ಮರಿಯೋ, ಕೌಸ್ತುಭ ಮಣಿಯ ತುಂಡೋ ಇರಬೇಕು. ಇವನು ಯಾವ ಮನುಷ್ಯನ ಮಗನೂ ಅಲ್ಲ , ಮಾಯಾಬಾಲಕನಿದ್ದರೂ ಇರಬಹುದು. ಇಮ್ತಹ ಉತ್ತಮವಾದ ಮಗುವನ್ನು ಪುತ್ರಮೋಹವಿಲ್ಲದ ಯಾವ ತಾಯಿಯು ಇಲ್ಲಿ ಇಟ್ಟು ಹೋದಳೋ, ಶಿವಶಿವಾ ಮಹಾದೇವಾ ಎನ್ನುತ್ತಾ ಆ ಮಗುವನ್ನೆತ್ತಿ ಅಪ್ಪಿಕೊಂಡನು.

ಅರ್ಥ:
ತರಣಿ: ಸೂರ್ಯ; ಬಿಂಬ: ಪ್ರಕಾಶ; ಮರಿ: ಚಿಕ್ಕವ; ಕೌಸ್ತುಭ: ಬೆಲೆಬಾಳುವ ಹರಳು; ವರ: ಶ್ರೇಷ್ಠ; ಮಣಿ: ರತ್ನ; ಖಂಡ: ಚೂರು; ಕಣಿ: ಆಕರ, ನೆಲೆ; ಮರ್ತ್ಯ: ಮನುಷ್ಯ; ಮಗ: ಪುತ್ರ; ಮಾಯಾ: ಗಾರುಡಿ; ಬಾಲಕ: ಹುಡುಗ; ಮೇಣು: ಇನ್ನು, ಹಾಗೂ; ಇರಿಸು: ಇಡು; ಹೋಗು: ತೆರಳು; ಶಿಶು: ಪಾಪು; ನಿರ್ಮೋಹೆ: ಆಸೆ ಇಲ್ಲದ; ಅಪ್ಪು: ಆಲಂಗಿಸು; ಬಾಲಕ: ಹುಡುಗ;

ಪದವಿಂಗಡಣೆ:
ತರಣಿಬಿಂಬದ +ಮರಿಯೊ +ಕೌಸ್ತುಭ
ವರಮಣಿಯ +ಖಂಡದ +ಕಣಿಯೊ +ಮ
ರ್ತ್ಯರಿಗೆ + ಮಗನಿವನಲ್ಲ +ಮಾಯಾ+ಬಾಲಕನೊ +ಮೇಣು
ಇರಿಸಿ+ ಹೋದವಳ್+ಆವಳೋ +ಶಿಶು
ವರನ +ತಾಯ್ +ನಿರ್ಮೋಹೆಯೈ+ ಹರ
ಹರ +ಮಹಾದೇವ್+ಎನುತ +ತೆಗೆದಪ್ಪಿದನು +ಬಾಲಕನ

ಅಚ್ಚರಿ:
(೧) ಮಗುವನ್ನು ವರ್ಣಿಸುವ ಪರಿ – ತರಣಿಬಿಂಬದ ಮರಿಯೊ ಕೌಸ್ತುಭವರಮಣಿಯ ಖಂಡದ ಕಣಿಯೊ

ಪದ್ಯ ೩೯: ಅಶ್ವತ್ಥಾಮನು ಹೇಗೆ ಸೇನೆಯನ್ನು ಕೊಂದನು?

ಲಾಯದಲಿ ಹೊಕ್ಕಿರಿದು ಕುದುರೆಯ
ಬೀಯ ಮಾಡಿದನಂತಕಂಗೆಯ
ಡಾಯುಧದ ಧಾರೆಯಲಿ ಕೊಟ್ಟನು ಕುಂಜರವ್ರಜವ
ರಾಯದಳ ಧರೆಯಂತೆ ನವಖಂ
ಡಾಯಮಾನವಿದಾಯ್ತು ಪಾಂಡವ
ರಾಯ ಕಟಕವ ಕೊಂದನಶ್ವತ್ಥಾಮ ಬೇಸರದೆ (ಗದಾ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಲಾಯವನ್ನು ಹೊಕ್ಕು ಆನೆ ಕುದುರೆಗಳನ್ನು ಕೊಚ್ಚಿ ಕೊಂದನು. ಭೂಮಿಯು ಒಂಬತ್ತು ಖಂಡಗಳಿಂದ ಕೂಡಿದಂತೆ ಪಾಂಡವ ಸೇನೆಯು ನವ ಖಂಡಮಯವಾಯಿತು. ಬೇಸರವಿಲ್ಲದೆ ಅಶ್ವತ್ಥಾಮನು ಸೇನೆಯನ್ನು ಕೊಂದನು.

ಅರ್ಥ:
ಲಾಯ: ಅಶ್ವಶಾಲೆ; ಹೊಕ್ಕು: ಸೇರು; ಕುದುರೆ: ಅಶ್ವ; ಬೀಯ: ವ್ಯಯ, ಖರ್ಚು; ಅಂತಕ: ಯಮ; ಆಯುಧ: ಶಸ್ತ್ರ; ಧಾರೆ: ವರ್ಷ; ಕೊಡು: ನೀಡು; ಕುಂಜರ: ಆನೆ; ವ್ರಜ: ಗುಂಪು; ರಾಯ: ರಾಜ; ದಳ: ಸೈನ್ಯ; ಧರೆ: ಭೂಮಿ; ನವ: ಹೊಸ; ಖಂಡ: ಮಾಂಸ; ಕಟಕ: ಸೈನ್ಯ; ಕೊಂದು: ಕೊಲ್ಲು; ಬೇಸರ: ನೋವು;

ಪದವಿಂಗಡಣೆ:
ಲಾಯದಲಿ +ಹೊಕ್ಕಿರಿದು +ಕುದುರೆಯ
ಬೀಯ +ಮಾಡಿದನ್+ಅಂತಕಂಗೆ+
ಅಡಾಯುಧದ +ಧಾರೆಯಲಿ +ಕೊಟ್ಟನು+ ಕುಂಜರ+ವ್ರಜವ
ರಾಯದಳ +ಧರೆಯಂತೆ+ ನವ+ಖಂಡ
ಆಯಮಾನವಿದಾಯ್ತು +ಪಾಂಡವ
ರಾಯ +ಕಟಕವ +ಕೊಂದನ್+ಅಶ್ವತ್ಥಾಮ +ಬೇಸರದೆ

ಅಚ್ಚರಿ:
(೧) ಲಾಯ, ಬೀಯ, ರಾಯ – ಪ್ರಾಸ ಪದಗಳು
(೨) ಸಾಯಿಸಿದನು ಎಂದು ಹೇಳುವ ಪರಿ – ಅಂತಕಂಗೆಯಡಾಯುಧದ ಧಾರೆಯಲಿ ಕೊಟ್ಟನು ಕುಂಜರವ್ರಜವ

ಪದ್ಯ ೮: ಸಂಜಯನು ಯಾರ ನಡಿಗೆಯನ್ನು ನೋಡಿದನು – ೧?

ಅರಸ ಕೇಳೈ ಸಂಜಯನು ಬರ
ಬರಲು ಕಂಡನು ದೂರದಲಿ ನಿರಿ
ಗರುಳ ಕಾಲ್ದೊಡಕುಗಳ ಖಂಡದ ಜಿಗಿಯ ಚಾರುಗಳ
ಕರಿಗಳೊಟ್ಟಿಲನೇರಿಳಿದು ಪೈ
ಸರಿಸಿ ಮಿದುಳಿನ ಚೋರು ಜೊಂಡಿನ
ತೊರಳೆಯಲಿ ದಡದಡಿಸಿ ಜಾರುತ ಬೀಳುತೇಳುವನ (ಗದಾ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಂಜಯನು ಬರ ಬರುತ್ತಾ ದೂರದಲ್ಲಿ ಕರುಳುಗಳು ಕಾಲಿಗೆ ತೊಡಕುತ್ತಾ ಇರಲು, ಮಾಂಸಖಂಡಗಳ ಅಂಟಿನಲ್ಲಿ ಜಾರುತ್ತಾ, ಆನೆಗಳ ರಾಶಿಗಳನ್ನು ಹತ್ತಿಳಿದು ಕೆಳಕ್ಕೆ ಬೀಳುತ್ತಾ ಮಿದುಳಿನ ಜೊಂಡು ಗುಲ್ಮಗಳನ್ನು ತುಳಿದು ವೇಗವಾಗಿ ಜಾರುತ್ತಾ, ಬೀಳುತ್ತಾ, ಏರುತ್ತಾ ಇದ್ದವನೊಬ್ಬನನ್ನು ನೋಡಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬರಲು: ಆಗಮಿಸು; ಕಂಡು: ನೋಡು; ದೂರ: ಬಹಳ ಅಂತರ; ನಿರಿ: ನೆರಿಗೆಯಂತಿರುವ ಕರುಳು; ಕಾಲು: ಪಾದ; ತೊಡಕು: ಸಿಕ್ಕಿಕೊಳ್ಳು; ಖಂಡ: ಚೂರು; ಜಿಗಿ: ಅಂಟು; ಜಾರು: ಬೀಳು; ಕರಿ: ಆನೆ; ಒಟ್ಟು: ಗುಂಪು; ಏರು: ಮೇಲೆ ಹತ್ತು; ಇಳಿ: ಕೆಳಕ್ಕೆ ಬಂದು; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಮಿದುಳು: ಮಸ್ತಿಷ್ಕ; ಜೋರು: ಹೆಚ್ಚಳ; ಜೊಂಡು: ತಲೆಯ ಹೊಟ್ಟು; ತೊರಳೆ: ಗುಲ್ಮ, ಪ್ಲೀಹ; ದಡದಡಿಸು: ವೇಗವಾಗಿ ನಡೆ; ಜಾರು: ಬೀಳು;

ಪದವಿಂಗಡಣೆ:
ಅರಸ +ಕೇಳೈ +ಸಂಜಯನು +ಬರ
ಬರಲು +ಕಂಡನು +ದೂರದಲಿ+ ನಿರಿ
ಗರುಳ +ಕಾಲ್ದೊಡಕುಗಳ+ ಖಂಡದ+ ಜಿಗಿಯ+ ಚಾರುಗಳ
ಕರಿಗಳ್+ಒಟ್ಟಿಲನ್+ಏರಿಳಿದು +ಪೈ
ಸರಿಸಿ +ಮಿದುಳಿನ +ಚೋರು +ಜೊಂಡಿನ
ತೊರಳೆಯಲಿ +ದಡದಡಿಸಿ+ ಜಾರುತ +ಬೀಳುತೇಳುವನ

ಅಚ್ಚರಿ:
(೧) ಚೋರು ಜೊಂಡಿನ, ಜಿಗಿಯ ಚಾರುಗಳ – ಪದಗಳ ಬಳಕೆ
(೨) ಬರಬರಲು, ದಡದಡಿಸಿ – ಪದಗಳ ಬಳಕೆ

ಪದ್ಯ ೨: ಧೃಷ್ಟದ್ಯುಮ್ನನು ದ್ರೋಣನನ್ನು ಹೇಗೆ ಸೀಳಿದನು?

ಐದಿ ಮುಂದಲೆವಿಡಿದು ಬಾಗಿಸಿ
ಕೊಯ್ದನಾತನ ಕೊರಳನೆಡದಲಿ
ಹೊಯ್ದು ಮುರಿದನು ಬರಿಯಲಪ್ಪಳಿಸಿದನು ಬೆನ್ನೆಲುವ
ಕೈದಣಿಯೆ ಕಡಿಖಂಡಮಯವೆನೆ
ಹೊಯ್ದು ರಥದಲಿ ಕೆದರಿ ಜಡಿದನ
ಡಾಯ್ದವನು ಕಡುಗೋಪದಲಿ ನೋಡಿದನು ರಿಪುಶಿರವ (ದ್ರೋಣ ಪರ್ವ, ೧೯ ಸಂಧಿ, ೨ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ದ್ರೋಣನ ಮುಂದಲೆಯನ್ನು ಹಿಡಿದು ಬಾಗಿಸಿ ಕೊರಳನ್ನು ಕೊಯ್ದು ಎಡಗೈಯಿಂದ ದೇಹವನ್ನು ಹೊಯ್ದು ಕೆಡವಿ ಬೆನ್ನೆಲುಬನ್ನು ಮುರಿದನು ಕೈದಣಿಯುವವರೆಗೂ ದೇಹವು ಮಾಂಸಮಯವಾಗುವಂತೆ ಖಡ್ಗದಿಂದ ಹೊಡೆದು ರಥದಲ್ಲಿ ಹರಡಿ ಕೋಪದಿಂದ ಅವನ ತಲೆಯನ್ನು ನೋಡಿದನು.

ಅರ್ಥ:
ಐದು: ಬಂದು ಸೇರು; ಮುಂದಲೆ: ತಲೆಯ ಮುಂಭಾಗ; ಹಿಡಿ: ಗ್ರಹಿಸು; ಬಾಗು: ಬೀಳು; ಕೊಯ್ದು: ಸೀಳು; ಕೊರಳು: ಗಂಟಲು; ಎಡ: ವಾಮಭಾಗ; ಹೊಯ್ದು: ಹೊಡೆ; ಮುರಿ: ಸೀಳು; ಅಪ್ಪಳಿಸು: ತಟ್ಟು, ತಾಗು; ಎಲುಬು: ಮೂಳೆ; ಬೆನ್ನು: ಹಿಂಭಾಗ; ಕೈ: ಹಸ್ತ; ದಣಿ: ಆಯಾಸಗೊಳ್ಳು; ಕಡಿ: ಸೀಳು; ಖಂಡ: ತುಂಡು; ರಥ: ಬಂಡಿ; ಕೆದರು: ಹರಡು; ಜಡಿ: ಕೊಲ್ಲು; ಅಡಹಾಯ್ದು: ಅಡ್ಡ ಬಂದು; ಕಡುಗೋಪ: ತುಂಬ ಕೋಪ; ನೋಡು: ವೀಕ್ಷಿಸು; ರಿಪು: ವೈರಿ; ಶಿರ: ತಲೆ;

ಪದವಿಂಗಡಣೆ:
ಐದಿ +ಮುಂದಲೆವಿಡಿದು +ಬಾಗಿಸಿ
ಕೊಯ್ದನ್+ಆತನ +ಕೊರಳನ್+ಎಡದಲಿ
ಹೊಯ್ದು +ಮುರಿದನು+ ಬರಿಯಲ್+ಅಪ್ಪಳಿಸಿದನು +ಬೆನ್ನೆಲುವ
ಕೈ+ದಣಿಯೆ +ಕಡಿ+ಖಂಡಮಯವ್+ಎನೆ
ಹೊಯ್ದು +ರಥದಲಿ+ ಕೆದರಿ+ ಜಡಿದನ್
ಅಡಾಯ್ದವನು+ ಕಡು+ಕೋಪದಲಿ +ನೋಡಿದನು +ರಿಪು+ಶಿರವ

ಅಚ್ಚರಿ:
(೧) ಹೊಯ್ದು – ೩, ೫ ಸಾಲಿನ ಮೊದಲ ಪದ
(೨) ಕೊಯ್ದು, ಹೊಯ್ದು, ಹಾಯ್ದು – ಪದಗಳ ಬಳಕೆ

ಪದ್ಯ ೨೧: ಎರಡೂ ಸೈನ್ಯದ ಯುದ್ಧವು ಹೇಗೆ ನಡೆಯಿತು?

ಕದಡಿದವು ಬಲವೆರಡು ಕಲ್ಪದೊ
ಳುದಧಿಯುದಧಿಯನೊದೆವವೊಲು ತಾ
ಗಿದರು ನೀಗಿದರಸುವ ನಸೆಮಸೆಗಕ್ಕುಡಿಸಿದವರು
ಬಿದಿರಿದರು ಕೊಯ್ದಲೆಗಳನು ಕಾ
ರಿದರು ಕರುಳನು ಕುಸುರಿ ಖಂಡದ
ಕದಳಿ ಮೈಗಳ ಚೂಣಿ ಮಲಗಿತು ತಾರು ಥಟ್ಟಿನಲಿ (ದ್ರೋಣ ಪರ್ವ, ೧೭ ಸಂಧಿ, ೨೧ ಪದ್ಯ)

ತಾತ್ಪರ್ಯ:
ಪ್ರಳಯಕಾಲದಲ್ಲಿ ಸಮುದ್ರವು ಸಮುದ್ರವನ್ನು ಸೇರುವಂತೆ ಎರಡೂ ಸೈನ್ಯಗಳು ಒಂದನ್ನೊಂದನ್ನು ತಾಗಿದವು. ವೀರರು ಕೈಮಾಡಿದರು. ಪ್ರಾಣಗಳನ್ನು ಕಳೆದುಕೊಂಡರು. ಅಲ್ಪಸ್ವಲ್ಪ ಗಾಯಗಳಿಂದ ಬಲಹೀನರಾದವರು ತಲೆ ಕೊಡವಿ ಕಂಪಿಸಿದರು. ತಲೆಕೊಯ್ದು ಸತ್ತರು, ಕರುಳನ್ನು ಹೊರಹಾಕಿದರು. ಬಾಳೆಯಗಿಡದಂತೆ ಮೈಯ ಮಾಂಸ ಖಂಡಗಳು ಕೊಚ್ಚಿದಂತಾಗಲು ಗುಂಪಾಗಿ ನೆಲಕ್ಕೆ ಬಿದ್ದವು.

ಅರ್ಥ:
ಕದಡು: ಕಲಕು; ಬಲ: ಶಕ್ತಿ; ಕಲ್ಪ: ಬ್ರಹ್ಮನ ಒಂದು ದಿವಸ, ಸಹಸ್ರಯುಗ, ಪ್ರಳಯ; ಉದಧಿ: ಸಾಗರ; ಒದೆ: ನೂಕು; ತಾಗು: ಮುಟ್ಟು; ನೀಗು: ನಿವಾರಿಸಿಕೊಳ್ಳು; ಅಸು: ಪ್ರಾಣ; ನಸೆಮಸೆ: ಕೈತೀಟೆಯ ಯುದ್ಧ; ಬಿದಿರು: ಕೆದರು, ಚೆದರು; ಕೊಯ್: ಸೀಳು; ತಲೆ: ಶಿರ; ಕಾರು: ಕೊಡವು; ಕರುಳು: ಪಚನಾಂಗ; ಕುಸುರಿ: ತುಂಡು; ಖಂಡ: ತುಂಡು, ಚೂರು; ಕದಳಿ: ಬಾಳೆಗಿಡ; ಮೈ: ತನು, ದೇಹ; ಚೂಣಿ: ಮೊದಲು; ಮಲಗು: ನಿದ್ರಿಸು; ತಾರು: ಸೊರಗು, ಬಡಕಲಾಗು; ಥಟ್ಟು: ಗುಂಪು;

ಪದವಿಂಗಡಣೆ:
ಕದಡಿದವು +ಬಲವ್+ಎರಡು +ಕಲ್ಪದೊಳ್
ಉದಧಿ+ಉದಧಿಯನ್+ಒದೆವವೊಲು +ತಾ
ಗಿದರು +ನೀಗಿದರ್+ಅಸುವ +ನಸೆಮಸೆಗಕ್ಕುಡಿಸಿದವರು
ಬಿದಿರಿದರು +ಕೊಯ್+ತಲೆಗಳನು +ಕಾ
ರಿದರು +ಕರುಳನು +ಕುಸುರಿ +ಖಂಡದ
ಕದಳಿ +ಮೈಗಳ +ಚೂಣಿ +ಮಲಗಿತು +ತಾರು +ಥಟ್ಟಿನಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕದಡಿದವು ಬಲವೆರಡು ಕಲ್ಪದೊಳುದಧಿಯುದಧಿಯನೊದೆವವೊಲು

ಪದ್ಯ ೪೩: ಸೈಂಧವನ ಶಿರವು ಯಾರ ಕೈಯಲ್ಲಿ ಬಿದ್ದಿತು?

ತುಡುಕಿ ಖಂಡವ ಕಚ್ಚಿ ನಭದಲಿ
ಗಿಡಿಗ ಹಾಯ್ವಂದದಲಿ ತಲೆಯನು
ಹಿಡಿದು ಹಾಯ್ದುದು ಬಾಣ ವೃದ್ಧಕ್ಷತ್ರನಿದ್ದೆಡೆಗೆ
ಕುಡಿತೆಯೆರಡರೊಳರ್ಘ್ಯಜಲವನು
ಹಿಡಿದು ಹಾಯ್ಕುವ ಸಮಯದಲಿ ತಲೆ
ನಡುವೆ ಬಿದ್ದುದು ಅರ್ಘ್ಯಜಲ ನವರಕ್ತಮಯವಾಗೆ (ದ್ರೋಣ ಪರ್ವ, ೧೪ ಸಂಧಿ, ೪೩ ಪದ್ಯ)

ತಾತ್ಪರ್ಯ:
ಮಾಂಸವನ್ನು ಕಚ್ಚಿಕೊಂಡು ಗಿಡುಗವು ಆಕಾಶದಲ್ಲಿ ಹಾರಿಹೋಗುವಂತೆ ಪಾಶುಪತಾಸ್ತ್ರವು ಸೈಂಧವನ ತಲೆಯಸಮೇತ ಜಯದ್ರಥನ ತಂದೆಯಾದ ವೃದ್ಧಕ್ಷತ್ರನ ಕಡೆಗೆ ಹೋಯಿತು. ಆಗ ವೃದ್ಧಕ್ಷತ್ರನು ಬೊಗಸೆಯಲ್ಲಿ ಅರ್ಘ್ಯ ಜಲವನ್ನು ಹಿಡಿದು ಇನ್ನೇನು ಅರ್ಘ್ಯವನ್ನು ಕೊಡಬೇಕು ಎನ್ನುವಷ್ಟರಲ್ಲಿ ಆ ತಲೆಯು ಅವನ ಬೊಗಸೆಯಲ್ಲಿ ಬಿದ್ದು ಬೊಗಸೆಯೆಲ್ಲಾ ರಕ್ತಮಯವಾಯಿತು.

ಅರ್ಥ:
ತುಡುಕು: ಹೋರಾಡು, ಸೆಣಸು; ಖಂಡ: ತುಂಡು, ಚೂರು; ಕಚ್ಚು: ಹಲ್ಲಿನಿಂದ ಹಿಡಿ; ನಭ: ಆಗಸ; ಗಿಡಿಗ: ಖಗ, ಹದ್ದು; ಹಾಯ್: ಹಾರು, ಜಿಗಿ; ತೆಲೆ: ಶಿರ; ಹಿಡಿ: ಗ್ರಹಿಸು; ಬಾಣ: ಸರಳು; ವೃದ್ಧಕ್ಷತ್ರ : ಮುದುಕ ಕ್ಷತ್ರಿಯ (ಸೈಂಧವನ ತಂದೆ); ಕುಡಿತೆ: ಬೊಗಸೆ, ಸೇರೆ; ಅರ್ಘ್ಯ: ದೇವತೆಗಳಿಗೂ ಪೂಜ್ಯರಿಗೂ ಕೈತೊಳೆಯಲು ಕೊಡುವ ನೀರು; ಜಲ: ನೀರು; ಹಿಡಿ: ಗ್ರಹಿಸು; ಹಾಯ್ಕು: ನೀಡು; ಸಮಯ: ಕಾಲ; ನಡುವೆ: ಮಧ್ಯೆ; ಬಿದ್ದು: ಬೀಳು; ನವ: ಹೊಸ; ರಕ್ತ: ನೆತ್ತರು;

ಪದವಿಂಗಡಣೆ:
ತುಡುಕಿ +ಖಂಡವ +ಕಚ್ಚಿ +ನಭದಲಿ
ಗಿಡಿಗ +ಹಾಯ್ವಂದದಲಿ +ತಲೆಯನು
ಹಿಡಿದು +ಹಾಯ್ದುದು +ಬಾಣ +ವೃದ್ಧಕ್ಷತ್ರನಿದ್ದೆಡೆಗೆ
ಕುಡಿತೆ+ಎರಡರೊಳ್+ಅರ್ಘ್ಯ+ಜಲವನು
ಹಿಡಿದು +ಹಾಯ್ಕುವ +ಸಮಯದಲಿ +ತಲೆ
ನಡುವೆ +ಬಿದ್ದುದು +ಅರ್ಘ್ಯಜಲ+ ನವರಕ್ತಮಯವಾಗೆ

ಅಚ್ಚರಿ:
(೧) ಹಾಯ್ವ, ಹಾಯ್ಕು, ಹಾಯ್ದು – ಹ ಕಾರದ ಪದದ ಬಳಕೆ
(೨) ಉಪಮಾನದ ಪ್ರಯೋಗ – ತುಡುಕಿ ಖಂಡವ ಕಚ್ಚಿ ನಭದಲಿ ಗಿಡಿಗ ಹಾಯ್ವಂದದಲಿ

ಪದ್ಯ ೨೦: ರಣಭೂಮಿಯ ದೃಶ್ಯ ಹೇಗಿತ್ತು?

ಹಾಯಿದವು ನರಿ ನಾಯಿಗಳು ಕಟ
ವಾಯಲೆಳಲುವ ಕರುಳಿನಲಿ ಬಸಿ
ವಾಯ ರಕುತದಲೋಡಿದವು ರಣಭೂತ ದೆಸೆದೆಸೆಗೆ
ಆಯುಧದ ಹರಹುಗಳ ತಲೆಗಳ
ಡೋಯಿಗೆಯ ಕಡಿ ಖಂಡಮಯದ ಮ
ಹಾಯತದ ರಣದೊಳಗೆ ಬಂದನು ಭೀಷ್ಮನಿದ್ದೆಡೆಗೆ (ದ್ರೋಣ ಪರ್ವ, ೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ರಣರಂಗದಲ್ಲಿ ನರಿನಾಯಿಗಳು ಕರುಳುಗಳು ಜೋತುಬಿದ್ದಿದ್ದ ಎಲುಬುಗಳನ್ನು ಕಚ್ಚಿಕೊಂಡು ಬೆಳಕು ಕೋಲಾಹಲಗಳಿಗೆ ಹೆದರಿ ಓಡಿದವು. ಬಾಯಲ್ಲಿ ರಕ್ತವು ಸೋರುತ್ತಿರಲು ರಣಭೂತಗಳು ದಿಕ್ಕು ದಿಕ್ಕುಗಳಿಗೆ ಓಡಿದವು. ಮುರಿದ, ಎಸೆದು ಬಿದ್ದ ಆಯುಧಗಳು ಎಲ್ಲೆಲ್ಲೂ ಕಂಡವು. ತಲೆಬುರುಡೆಗಳು ಮಾಂ‍ಸಖಂಡಗಳು ಎತ್ತೆತ್ತಲೂ ಹರಡಿದ್ದವು. ಕರ್ಣನು ಅಂತಹ ರಣಭೂಮಿಯಲ್ಲಿ ಭೀಷ್ಮನಿದ್ದೆಡೆಗೆ ಬಂದನು.

ಅರ್ಥ:
ಹಾಯಿ: ಮೇಲೆಬೀಳು, ಚಾಚು; ಕಟವಾಯ: ಬಾಯಿಯ ಕೊನೆ; ಎಳಲು: ಜೋಲುಬೀಳು, ನೇತಾಡು; ಕರುಳು: ಪಚನಾಂಗ; ಬಸಿ: ಒಸರು, ಸ್ರವಿಸು; ರಕುತ: ನೆತ್ತರು; ಓಡು: ಧಾವಿಸು; ಭೂತ: ದೆವ್ವ; ರಣ: ಯುದ್ಧ; ದೆಸೆ: ದಿಕ್ಕು; ಆಯುಧ: ಶಸ್ತ್ರ; ಹರಹು:ವಿಸ್ತಾರ, ವೈಶಾಲ್ಯ; ತಲೆ: ಶಿರ; ಡೋಯಿಗೆ: ಬುರುಡೆ; ಕಡಿ: ಕತ್ತರಿಸು; ಖಂಡ: ಸೀಳು; ಮಹಾಯತ: ವಿಶಾಲವಾದ; ಬಂದನು: ಆಗಮಿಸು;

ಪದವಿಂಗಡಣೆ:
ಹಾಯಿದವು +ನರಿ +ನಾಯಿಗಳು +ಕಟ
ವಾಯಲ್+ಎಳಲುವ +ಕರುಳಿನಲಿ +ಬಸಿ
ವಾಯ +ರಕುತದಲ್+ಓಡಿದವು +ರಣಭೂತ +ದೆಸೆದೆಸೆಗೆ
ಆಯುಧದ +ಹರಹುಗಳ +ತಲೆಗಳ
ಡೋಯಿಗೆಯ +ಕಡಿ +ಖಂಡಮಯದ +ಮ
ಹಾಯತದ +ರಣದೊಳಗೆ +ಬಂದನು +ಭೀಷ್ಮನಿದ್ದೆಡೆಗೆ

ಅಚ್ಚರಿ:
(೧) ರಣರಂಗದ ದೃಶ್ಯ – ಆಯುಧದ ಹರಹುಗಳ ತಲೆಗಳ ಡೋಯಿಗೆಯ ಕಡಿ ಖಂಡಮಯದ ಮಹಾಯತದ ರಣ

ಪದ್ಯ ೧೩: ರಣರಂಗವು ಯಾವುದರಿಂದ ಸಮೃದ್ಧವಾಗಿತ್ತು?

ಮಂಡಿಸಿತು ನೊರೆರಕುತ ಕರುಳಿನ
ಜೊಂಡು ಮಸಗಿತು ಕಡಿದ ಖಂಡದ
ದಿಂಡು ತಳಿತುದು ತೊಗಲ ಕೊಯ್ಲಿನ ಮುರಿದ ಮೂಳೆಗಳ
ಜೋಂಡೆ ನರಗಳ ಜುರಿತ ಮಿದುಳಿನ
ಹೊಂಡೆಯದ ತೊರಳಿಗಳ ಕೊರಳಿನ
ತುಂಡುಗಳ ಕಾಲಾಂತಕನ ಹೆಬ್ಬೆಳಸು ಹುಲುಸಾಯ್ತು (ಭೀಷ್ಮ ಪರ್ವ, ೯ ಸಂಧಿ, ೧೩ ಪದ್ಯ)

ತಾತ್ಪರ್ಯ:
ನೊರೆ ರಕ್ತ ಹರಿಯಿತು, ಕರುಳುಗಳ ಜೊಂಡು ಎಲ್ಲೆಡೆ ಬಿದ್ದವು. ತುಂಡಾದ ಮಾಂಸಖಂಡಗಳು, ಹರಿದ ಚರ್ಮ, ಮುರಿದ ಮೂಳೆಗಳು, ನರಗಳ ಜೋಂಡು, ಮಿದುಳಿನ ತೊರೆಳಿಗಳು, ಕತ್ತರಿಸಿದ ಕುತ್ತಿಗೆಗಳಿಂದ ಯಮನು ಸಮೃದ್ಧವಾದ ಸುಗ್ಗಿ ಮಾಡುತ್ತಿರುವನೋ ಎಂಬಂತಿತ್ತು.

ಅರ್ಥ:
ಮಂಡಿಸು: ಕುಳಿತುಕೊಳ್ಳು; ನೊರೆ: ಬುರುಗು, ಫೇನ; ರಕುತ: ನೆತ್ತರು; ಕರುಳು: ಪಚನಾಂಗ; ಜೊಂಡು: ನೀರಿನಲ್ಲಿ ಬೆಳೆಯುವ ಒಂದು ಬಗೆಯ ಹುಲ್ಲು; ಮಸಗು: ಕೆರಳು; ತಿಕ್ಕು; ಕಡಿ: ತುಂಡು, ಹೋಳು; ಖಂಡ: ತುಂಡು, ಚೂರು; ದಿಂಡು: ಶರೀರ, ದೇಹ; ತಳಿತ: ಚಿಗುರಿದ; ತೊಗಲು: ಚರ್ಮ, ತ್ವಕ್ಕು; ಕೊಯ್ಲು: ಕೊಯ್ಯುವಿಕೆ ಕಟಾವು; ಮುರಿ: ಸೀಳು; ಮೂಳೆ: ಎಲುಬು; ನರ: ಶಕ್ತಿ, ಸಾಮರ್ಥ್ಯ; ಜುರಿತ: ರಕ್ತಸ್ರಾವ; ಮಿದುಳು: ಮಸ್ತಿಷ್ಕ; ಕೊರಳು: ಕಂಠ; ತುಂಡು: ಚೂರು, ಭಾಗ, ಖಂಡ; ಕಾಲಾಂತಕ: ಯಮ; ಹೆಬ್ಬೆಳಸು: ಹೆಚ್ಚಾಗಿಸು, ವೃದ್ಧಿಸು; ಹುಲುಸು: ಹೆಚ್ಚಳ, ಸಮೃದ್ಧಿ;

ಪದವಿಂಗಡಣೆ:
ಮಂಡಿಸಿತು +ನೊರೆ+ರಕುತ +ಕರುಳಿನ
ಜೊಂಡು +ಮಸಗಿತು +ಕಡಿದ +ಖಂಡದ
ದಿಂಡು +ತಳಿತುದು +ತೊಗಲ +ಕೊಯ್ಲಿನ+ ಮುರಿದ+ ಮೂಳೆಗಳ
ಜೊಂಡೆ +ನರಗಳ +ಜುರಿತ+ ಮಿದುಳಿನ
ಹೊಂಡೆಯದ +ತೊರಳಿಗಳ+ ಕೊರಳಿನ
ತುಂಡುಗಳ+ ಕಾಲಾಂತಕನ+ ಹೆಬ್ಬೆಳಸು+ ಹುಲುಸಾಯ್ತು

ಅಚ್ಚರಿ:
(೧) ಜೊಂಡು, ದಿಂಡು, ತುಂಡು; ಕರುಳಿನ, ಮಿದುಳಿನ, ಕೊರಳಿನ – ಪ್ರಾಸ ಪದಗಳು
(೨) ರೂಪಕದ ಪ್ರಯೋಗ – ಕಾಲಾಂತಕನ ಹೆಬ್ಬೆಳಸು ಹುಲುಸಾಯ್ತು

ಪದ್ಯ ೧೭: ಚತುರಂಗ ಸೈನ್ಯದ ಸಾವೇಕೆ ಕೌತುಕವನ್ನು ತೋರಿತು?

ಪಿರಿದು ಮೊನೆಗುತ್ತಿನಲಿ ನೆತ್ತರು
ಸುರಿದುದಡಹೊಯ್ಲಿನಲಿ ಖಂಡದ
ಹೊರಳಿ ತುಳಿತುದು ಕಾಯವಜಿಗಿಜಿಯಾಯ್ತು ಲೌಡಿಯಲಿ
ಸರಳ ಚೌಧಾರೆಯಲಿ ಹಾಯ್ದವು
ಕರುಳು ಕಬ್ಬುನ ಕೋಲಿನಲಿ ಕ
ತ್ತರಿಸಿದವು ಕಾಲುಗಳು ಕೌತುಕವಾಯ್ತು ಚತುರಂಗ (ಭೀಷ್ಮ ಪರ್ವ, ೮ ಸಂಧಿ, ೧೭ ಪದ್ಯ)

ತಾತ್ಪರ್ಯ:
ಇರಿದಾಗ ನೆತ್ತರು ಚಿಮ್ಮಿ ಹಿರಿಯಿತು. ಪಕ್ಕದಿಂದ ಬೀಸಿದಾಗ ಮಾಂಸಖಂಡ ಹೊರಬಂತು. ಲೌಡಿಯ ಹೊಡೆತಕ್ಕೆ ದೇಹವು ಗಿಜಿಗಿಜಿಯಾಯ್ತು, ನಾಲ್ಕೂ ಕಡೆಯಿಂದ ಬಂದು ನಾಟಿದ ಬಾಣಗಳು ಕರುಳುಗಳನ್ನು ಹೊರ ತಂದವು. ಕಾಲುಗಳು ಕತ್ತರಿಸಿದವು. ಹೀಗೆ ಚತುರಂಗ ಸೈನ್ಯದ ಸಾವು ಕೌತುಕವನ್ನು ತಂದಿತು.

ಅರ್ಥ:
ಪಿರಿ: ದೊಡ್ಡ; ಮೊನೆ: ತುದಿ, ಚೂಪು; ಕುತ್ತು: ಚುಚ್ಚು, ತಿವಿ; ನೆತ್ತರು: ರಕ್ತ; ಸುರಿ: ಮೇಲಿನಿಂದ ಬೀಳು, ವರ್ಷಿಸು; ಹೊಯ್ಲು: ಏಟು, ಹೊಡೆತ; ಖಂಡ: ತುಂಡು, ಚೂರು; ಹೊರಳು: ತಿರುವು, ಬಾಗು; ತುಳಿ: ಮೆಟ್ಟುವಿಕೆ, ತುಳಿತ; ಕಾಯ: ದೇಹ; ಗಿಜಿಗಿಜಿ: ಅಸಹ್ಯ ಬರುವಂತೆ ಅಂಟಾಗಿರುವುದು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಸರಳ: ಬಾಣ; ಚೌಧಾರೆ: ನಾಲ್ಕು ಕಡೆಯ ಪ್ರವಾಹ; ಹಾಯ್ದು: ಹೊಡೆ; ಕರುಳು: ಪಚನಾಂಗ; ಕಬ್ಬು: ಇಕ್ಷುದಂಡ; ಕೋಲು: ಬಾಣ; ಕತ್ತರಿಸು: ಚೂರುಮಾಡು; ಕಾಲು: ಪಾದ; ಕೌತುಕ: ಆಶ್ಚರ್ಯ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಅಡವೊಯ್ಲು: ಅಡ್ಡ ಹೊಡೆತ;

ಪದವಿಂಗಡಣೆ:
ಪಿರಿದು +ಮೊನೆ+ಕುತ್ತಿನಲಿ +ನೆತ್ತರು
ಸುರಿದುದ್+ಅಡಹೊಯ್ಲಿನಲಿ +ಖಂಡದ
ಹೊರಳಿ +ತುಳಿತುದು +ಕಾಯವಜಿಗಿಜಿಯಾಯ್ತು +ಲೌಡಿಯಲಿ
ಸರಳ+ ಚೌಧಾರೆಯಲಿ+ ಹಾಯ್ದವು
ಕರುಳು +ಕಬ್ಬುನ +ಕೋಲಿನಲಿ+ ಕ
ತ್ತರಿಸಿದವು +ಕಾಲುಗಳು +ಕೌತುಕವಾಯ್ತು +ಚತುರಂಗ

ಅಚ್ಚರಿ:
(೧) ಕ ಕಾರದ ಸಾಲು ಪದ – ಕರುಳು ಕಬ್ಬುನ ಕೋಲಿನಲಿ ಕತ್ತರಿಸಿದವು ಕಾಲುಗಳು ಕೌತುಕವಾಯ್ತು

ಪದ್ಯ ೧: ರಣರಂಗವು ಹೇಗೆ ಕಂಡಿತು?

ಅಳಿದುದೆರಡರ ಚೂಣಿ ಮುಂಗುಡಿ
ಯೊಳಗೆ ಕಡಲಾಯ್ತರುಣ ಜಲದೊ
ಬ್ಬುಳಿಯ ಖಂಡದ ದೊಂಡೆಗಳು ಕೆಸರಿಡುವ ಮಿದುಳುಗಳ
ಕಳದ ಹೆಣನೊಟ್ಟಿಲಲಿ ಮೊಗಸುವೊ
ಡಳುಕಿದರು ಮನ್ನೆಯರು ಬಳಿಕರ
ನೆಲೆಗಳಲಿ ಸೂಳೈಸಿದವು ನಿಸ್ಸಾಳ ಕೋಟಿಗಳು (ಭೀಷ್ಮ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ಎರಡೂ ಕಡೆಯ ಮುಂಚೂಣೀಗಳು ನಾಶವಾದವು. ರಕ್ತ ಕಡಲಾಗಿ ನಿಂತಿತು. ರಕ್ತ ಮಾಂಸಖಂಡದ ತುಂಡುಗಳು, ಕೆಸರಿನಂತಹ ಮಿದುಳುಗಳು, ಹೆಣದ ರಾಶಿಗಳು, ಇವನ್ನು ನೋಡಿ ಸಾಮಂತ ರಾಜರು ಯುದ್ಧಕ್ಕೆ ಬೆದರಿದರು. ರಾಜರ ಸೇನಾನಾಯಕರ ಬೀಡುಗಳಲ್ಲಿ ಕಹಳೆಗಳು ಮೊಳಗಿದವು.

ಅರ್ಥ:
ಅಳಿ: ನಾಶ; ಚೂಣಿ: ಮುಂದಿನ ಸಾಲು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಕಡಲು: ಸಾಗರ; ಅರುಣ: ಕೆಂಪು ಬಣ್ಣ; ಜಲ: ನೀರು; ಉಬ್ಬು: ಹಿಗ್ಗು; ಖಂಡ: ತುಂಡು; ದೊಂಡೆ: ಗಂಟಲು, ಕಂಠ; ಕೆಸರು: ಬಗ್ಗಡ, ನೀರು ಬೆರೆತ ಮಣ್ಣು; ಮಿದುಳು: ಮೆದುಳು, ಮಸ್ತಿಷ್ಕ; ಕಳ:ಮಧುರವಾದ, ಇಂಪಾದ; ಹೆಣ: ಜೀವವಿಲ್ಲದ ಶರೀರ; ಮೊಗಸು: ಬಯಕೆ, ಅಪೇಕ್ಷೆ; ಅಳುಕು: ಹೆದರು; ಮನ್ನೆಯ: ಮೆಚ್ಚಿನ; ಬಳಿಕ: ನಂತರ; ನೆಲೆ: ಭೂಮಿ; ಸೂಳೈಸು: ಧ್ವನಿ ಮಾಡು; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ಕೋಟಿ: ಅಸಂಖ್ಯಾತ;

ಪದವಿಂಗಡಣೆ:
ಅಳಿದುದ್+ಎರಡರ +ಚೂಣಿ +ಮುಂಗುಡಿ
ಯೊಳಗೆ+ ಕಡಲಾಯ್ತ್+ಅರುಣ +ಜಲದ
ಉಬ್ಬುಳಿಯ +ಖಂಡದ +ದೊಂಡೆಗಳು+ ಕೆಸರಿಡುವ +ಮಿದುಳುಗಳ
ಕಳದ +ಹೆಣನ್+ಒಟ್ಟಿಲಲಿ+ ಮೊಗಸುವೊಡ್
ಅಳುಕಿದರು +ಮನ್ನೆಯರು +ಬಳಿಕರ
ನೆಲೆಗಳಲಿ+ ಸೂಳೈಸಿದವು+ ನಿಸ್ಸಾಳ +ಕೋಟಿಗಳು

ಅಚ್ಚರಿ:
(೧) ರಕ್ತದ ಕಡಲು ಎಂದು ಹೇಳಲು – ಕಡಲಾಯ್ತರುಣ ಜಲ