ಪದ್ಯ ೧೮: ಜೈಮಿನಿ ಮುನಿಗಳು ಧರ್ಮಜನಿಗೆ ಯಾವ ಅಪ್ಪಣೆಯನ್ನು ನೀಡಿದರು?

ಇಂದೆಮಗೆ ಸಿದ್ಧಿಸಿತು ನಾನಾ
ದಂದುಗಂ ಬಡುವಾ ತಪಃ ಫಲ
ವೆಂದೆನುತ ಕೈಮುಗಿದು ದೂರ್ವಾಸನನು ಕೌಶಿಕನ
ವಂದ್ಯವೇದವ್ಯಾಸಧೌಮ್ಯರ
ನಂದು ಕುಶಲವ ಕೇಳಿ ಧರ್ಮಜ
ಗೆಂದ ನಡೆಸೈ ಕ್ರಿಯೆಯನೆಂದಾಜ್ಞಾಪಿಸಿದನೊಲಿದು (ಅರಣ್ಯ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಜೈಮಿನಿ ಮುನಿಗಳು ಸಾರ್ಥಕ ಭಾವದಿಂದ, ಇಂದು ನಮಗೆ ನಮ್ಮ ತಪಗಳ ಫಲವು ದೊರಕಿತು, ಹಲವಾರು ಕಷ್ಟಗಳನ್ನು ಸಹಿಸುತ್ತಾ ಮಾಡಿದ ಎಲ್ಲಾ ತಪಸ್ಸು ಫಲಿಸಿತು ಎಂದು ಹೇಳಿ ಶ್ರೀಕೃಷ್ಣನಿಗೆ ನಮಸ್ಕರಿಸಿ, ದೂರ್ವಾಸ, ಕೌಶಿಕ, ವೇದವ್ಯಾಸ, ಧೌಮ್ಯರ ಕುಶಲವನ್ನು ವಿಚಾರಿಸಿ, ಧರ್ಮಜ, ಇನ್ನು ನೀನು ಶ್ರಾದ್ಧ ಕಾರ್ಯವನ್ನು ಪ್ರಾರಂಭಿಸು ಎಂದು ಅಪ್ಪಣೆ ನೀಡಿದರು.

ಅರ್ಥ:
ಇಂದು: ಇವತ್ತು; ಎಮಗೆ: ನಮಗೆ; ಸಿದ್ಧಿಸು: ಗುರಿಮುಟ್ಟುವಿಕೆ, ಮೋಕ್ಷ; ದಂದುಗ: ತೊಡಕು; ತಪ: ತಪಸ್ಸು; ಫಲ: ಪ್ರಯೋಜನ; ಕೈಮುಗಿ: ನಮಸ್ಕರಿಸು; ವಂದ್ಯ: ವಂದಿಸು, ಪೂಜನೀಯ; ಕುಶಲ: ಕ್ಷೇಮ; ಕೇಳು: ಆಲಿಸು; ನಡೆಸು: ಮುಂದುವರಿಸು; ಕ್ರಿಯೆ: ಕಾರ್ಯ; ಆಜ್ಞಾಪಿಸು: ಅಪ್ಪಣೆಯನ್ನು ನೀಡು; ಒಲಿ: ಪ್ರೀತಿ;

ಪದವಿಂಗಡಣೆ:
ಇಂದ್+ಎಮಗೆ +ಸಿದ್ಧಿಸಿತು+ ನಾನಾ
ದಂದುಗಂ +ಬಡುವಾ +ತಪಃ +ಫಲವ್
ಎಂದೆನುತ+ ಕೈಮುಗಿದು+ ದೂರ್ವಾಸನನು+ ಕೌಶಿಕನ
ವಂದ್ಯ+ವೇದವ್ಯಾಸ+ಧೌಮ್ಯರನ್
ಅಂದು +ಕುಶಲವ +ಕೇಳಿ +ಧರ್ಮಜಗ್
ಎಂದ +ನಡೆಸೈ +ಕ್ರಿಯೆಯನೆಂದ್+ಆಜ್ಞಾಪಿಸಿದನ್+ಒಲಿದು

ಪದ್ಯ ೨: ಶ್ರೀಕೃಷ್ಣನು ಯಾರನ್ನು ಯಾವ ಸ್ಥಾನಕ್ಕೆ ನೇಮಿಸಲು ಹೇಳಿದನು?

ಮಾಡು ವಿಶ್ವೇದೇವರಿಬ್ಬರ
ರೂಢರೀ ದೂರ್ವಾಸಧೌಮ್ಯರ
ನೋಡಿ ಮಾಡೈ ಮುಖ್ಯಕ್ಷಣದಲಿ ವ್ಯಾಸಕೌಶಿಕರ
ಮಾಡು ಪ್ರಪಿತಾಮಹರ ಠಾವಿಗೆ
ಬೇಡಿಕೊಳ್ ಜೈಮಿನಿಯನತಿಥಿಗೆ
ಮಾಡು ನಮ್ಮನು ಶ್ರಾದ್ಧರಕ್ಷೆಗೆ ಭೂಪ ಕೇಳೆಂದ (ಅರಣ್ಯ ಪರ್ವ, ೩ ಸಂಧಿ, ೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಯುಧಿಷ್ಠಿರನಿಗೆ ಶ್ರಾದ್ಧದ ಕಾರ್ಯಕ್ಕೆ ಯಾರನ್ನು ಆಹ್ವಾನಿಸಲು ತಿಳಿಸಿದನು. ದೂರ್ವಾಸರು ಮತ್ತು ಧೌಮ್ಯರನ್ನು ವಿಶ್ವೇದೇವ ಸ್ಥಾನಕ್ಕೆ ಬೇಡಿಕೊಳ್ಳಲು, ವ್ಯಾಸ ಮತ್ತು ಕೌಶಿಕರನ್ನು ಪಿತೃ, ಪಿತಾಮಹ ಸ್ಥಾನಕ್ಕೆ, ಪ್ರಪಿತಾಮಹಸ್ಥಾನಕ್ಕೆ ಜೈಮಿನಿ ಮುನಿಗಳನ್ನು ಬೇಡಿಕೋ, ಹಾಗು ನನ್ನನ್ನು ವಿಷ್ಣು ಸ್ಥಾನಕ್ಕೆ ಕರೆ ಎಂದು ಕೃಷ್ಣನು ತಿಳಿಸಿದನು.

ಅರ್ಥ:
ಮಾಡು: ನೆರವೇರಿಸು; ರೂಢ: ಬಳಕೆಯಲ್ಲಿರುವ; ನೋಡು: ವೀಕ್ಷಿಸು; ಮುಖ್ಯ: ಪ್ರಮುಖ; ಪ್ರಪಿತಾಮಹ: ಅಜ್ಜನ ತಂದೆ, ಮುತ್ತಾತ; ಠಾವು: ಸ್ಥಳ; ಬೇಡು: ಕೇಳು; ಅತಿಥಿ: ಆಮಂತ್ರಣವನ್ನು ವಿಲ್ಲದ ಬರುವ ವ್ಯಕ್ತಿ; ರಕ್ಷೆ: ಕಾಪು, ಕಾಯುವಿಕೆ; ಭೂಪ: ರಾಜ;

ಪದವಿಂಗಡಣೆ:
ಮಾಡು +ವಿಶ್ವೇದೇವರ್+ಇಬ್ಬರ
ರೂಢರ್+ಈ+ ದೂರ್ವಾಸ+ಧೌಮ್ಯರ
ನೋಡಿ ಮಾಡೈ ಮುಖ್ಯ+ಕ್ಷಣದಲಿ+ ವ್ಯಾಸ+ಕೌಶಿಕರ
ಮಾಡು +ಪ್ರಪಿತಾಮಹರ+ ಠಾವಿಗೆ
ಬೇಡಿಕೊಳ್+ ಜೈಮಿನಿಯನ್+ಅತಿಥಿಗೆ
ಮಾಡು +ನಮ್ಮನು +ಶ್ರಾದ್ಧರಕ್ಷೆಗೆ+ ಭೂಪ +ಕೇಳೆಂದ

ಅಚ್ಚರಿ:
(೧) ಮುನಿಗಳ ಹೆಸರನ್ನು ಹೇಳಿರುವ ಪರಿ – ದೂರ್ವಾಸ, ಧೌಮ್ಯ, ವ್ಯಾಸ, ಕೌಶಿಕ, ಜೈಮಿನಿ

ಪದ್ಯ ೧೬: ಯಾವ ಪಾಪವು ಕೌಶಿಕನ ತಲೆಗೆ ಬಂದಿತು?

ಕಾಲವಶದಲಿ ಕೌಶಿಕನನಾ
ಕಾಲದೂತರು ತಂದರಾತನ
ಮೇಲುಪೋಗಿನ ಸುಕೃತ ದುಷ್ಕೃತವನು ವಿಚಾರಿಸಲು
ಮೇಲನರಿಯದೆ ಸತ್ಯದಲಿ ವಿ
ಪ್ರಾಳಿ ವಧೆಯಾತಂಗೆ ಬಂದುದು
ಹೇಳಲದು ಭೋಕ್ತವ್ಯವತಿಪಾತಕದ ಫಲವೆಂದ (ಕರ್ಣ ಪರ್ವ, ೧೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ಹಾಗೆಯೇ ಕಾಲ ಕಳೆಯಲು ಯಮದೂತರು ಕೌಶಿಕನನ್ನು ನರಕಕ್ಕೊಯ್ದರು. ಅವನು ಮಾಡಿದ ಪುಣ್ಯಪಾಪಕರ್ಮಗಳ ವಿಚಾರಣೆ ನಡೆಯಿತು. ಪರಿಣಾಮವನ್ನು ಲೆಕ್ಕಹಾಕದೆ ಸತ್ಯವನ್ನು ಹೇಳಿದುದರಿಂದ ಬ್ರಹ್ಮಹತ್ಯಾಪಾತಕವು ಅವನ ತಲೆಗೆ ಬಂದಿತು. ಬ್ರಹ್ಮಹತ್ಯೆಯು ಮಹಾಪಾಪದ ಕೃತ್ಯ.

ಅರ್ಥ:
ಕಾಲ: ಸಮಯ; ವಶ: ಅಧೀನ, ಅಂಕೆ, ಹತೋಟಿ; ಕಾಲದೂತ: ಯಮನ ಸೇವಕರು; ತಂದರು: ಬರಮಾಡು; ಪೋಗು: ಮಾಡಿದ, ಹೋಗು; ಸುಕೃತ: ಒಳ್ಳೆಯ ಕೆಲಸ; ದುಷ್ಕೃತ್ಯ: ಕೆಟ್ಟ ಕೆಲಸ; ವಿಚಾರ: ಪರ್ಯಾಲೋಚನೆ; ಮೇಲನರಿಯದೆ: ಪೂರ್ಣವನ್ನು ತಿಳಿಯದೆ; ಸತ್ಯ: ದಿಟ; ವಿಪ್ರಾಳಿ: ಬ್ರಾಹ್ಮಣರ ಗುಂಪು; ವಧೆ: ಸಾಯಿಸು, ನಾಶ; ಬಂದು: ಆಗಮಿಸು; ಹೇಳು: ತಿಳಿಸು; ಭೋಕ್ತ: ಅನುಭವಿಸು; ಪಾತಕ: ಪಾಪ; ಫಲ: ಫಲಿತಾಂಶ;

ಪದವಿಂಗಡಣೆ:
ಕಾಲ+ವಶದಲಿ +ಕೌಶಿಕನನ್+ಆ
ಕಾಲ+ದೂತರು +ತಂದರ್+ಆತನ
ಮೇಲುಪೋಗಿನ+ ಸುಕೃತ +ದುಷ್ಕೃತವನು +ವಿಚಾರಿಸಲು
ಮೇಲನರಿಯದೆ +ಸತ್ಯದಲಿ +ವಿ
ಪ್ರಾಳಿ +ವಧೆ+ಆತಂಗೆ+ ಬಂದುದು
ಹೇಳಲದು+ ಭೋಕ್ತವ್ಯವ್+ಅತಿಪಾತಕದ+ ಫಲವೆಂದ

ಅಚ್ಚರಿ:
(೧) ಕಾಲ, ಮೇಲು – ೧-೨, ೩-೪ ಸಾಲಿನ ಮೊದಲ ಪದ
(೨) ಸುಕೃತ, ದುಷ್ಕೃತ – ವಿರುದ್ಧ ಪದಗಳು

ಪದ್ಯ ೧೪: ಕೌಶಿಕನನ್ನು ಬೇಟೆಗಾರರು ಏನು ಕೇಳಿದರು?

ವನದೊಳೊಬ್ಬನು ಕೌಶಿಕಾಹ್ವಯ
ಮುನಿ ತಪಶ್ಚರಿಯದಲಿ ಸತ್ಯವೆ
ತನಗೆ ಸುವ್ರತವೆಂದು ಬಟ್ಟೆಯೊಲಿದ್ದನೊಂದುದಿನ
ವನಚರರು ಬೇಹಿನಲಿ ಭೂಸುರ
ಜನವ ಬೆಂಬತ್ತಿದರು ಕೌಶಿಕ
ಮುನಿಯ ಬೆಸಗೊಂಡರು ಮಹೀಸುರ ಮಾರ್ಗಸಂಗತಿಯ (ಕರ್ಣ ಪರ್ವ, ೧೭ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಧರ್ಮದ ಬಗ್ಗೆ ತಿಳಿಸಲು ಒಂದು ಪ್ರಸಂಗವನ್ನು ಹೇಳಲು ಪ್ರಾರಂಭಿಸಿದನು. ಹಿಂದೆ ಕೌರ್ಶಿಕನೆಂಬ ಮುನಿಯೊಬ್ಬನು ಕಾಡಿನಲ್ಲಿ ತಪಸ್ಸನ್ನು ಮಾಡುತ್ತಿದ್ದನು. ಸತ್ಯವೇ ವ್ರತವೆಂದು ಕೈಗೊಂಡಿದ್ದನು. ಒಂದಾನೊಂದು ದಿನ ಕಾಡಿನ ಜರನು ಬ್ರಾಹ್ಮಣರ ಬೆನ್ನುಹತ್ತಿ ಬರುತ್ತಾ, ಕೌಶಿಕನನ್ನು ಬ್ರಾಹ್ಮಣರು ಎತ್ತ ಹೋದರೆಂದು ಕೇಳಿದರು.

ಅರ್ಥ:
ವನ: ಅರಣ್ಯ; ಆಹ್ವಯ: ಕರೆಯುವಿಕೆ; ಮುನಿ: ಋಷಿ; ತಪಸ್ಸು: ಧ್ಯಾನ; ಸತ್ಯ: ದಿಟ, ನೈಜ; ಸುವ್ರತ: ಒಳ್ಳೆಯ ಆಚಾರ, ನಿಯಮ; ಬಟ್ಟೆ: ಹಾದಿ, ಮಾರ್ಗ; ದಿನ: ದಿವಸ; ವನಚರರು: ಬೇಟೆಗಾರರು; ಬೇಹು: ಗುಪ್ತಚಾರಿಕೆ; ಭೂಸುರ: ಬ್ರಾಹ್ಮಣ; ಜನ: ಮನುಷ್ಯರು; ಬೆಂಬತ್ತು: ಹಿಂಬಾಲಿಸು; ಬೆಸಗೊಳ್: ಕೇಳು; ಮಹೀಸುರ: ಬ್ರಾಹ್ಮಣ; ಮಾರ್ಗ: ದಾರಿ; ಸಂಗತಿ: ವಿಚಾರ;

ಪದವಿಂಗಡಣೆ:
ವನದೊಳ್+ಒಬ್ಬನು +ಕೌಶಿಕ+ಆಹ್ವಯ
ಮುನಿ +ತಪಶ್ಚರಿಯದಲಿ +ಸತ್ಯವೆ
ತನಗೆ +ಸುವ್ರತವೆಂದು +ಬಟ್ಟೆಯೊಲಿದ್ದನ್+ಒಂದುದಿನ
ವನಚರರು +ಬೇಹಿನಲಿ +ಭೂಸುರ
ಜನವ +ಬೆಂಬತ್ತಿದರು +ಕೌಶಿಕ
ಮುನಿಯ +ಬೆಸಗೊಂಡರು +ಮಹೀಸುರ +ಮಾರ್ಗ+ಸಂಗತಿಯ

ಅಚ್ಚರಿ:
(೧) ಭೂಸುರ, ಮಹೀಸುರ – ಬ್ರಾಹ್ಮಣ – ಸಮನಾರ್ಥಕ ಪದ
(೨) ಜೋಡಿ ಪದಗಳು: ಬೇಹಿನಲಿ ಭೂಸುರ; ಮಹೀಸುರ ಮಾರ್ಗಸಂಗತಿಯ

ಪದ್ಯ ೨೭: ದುರ್ಯೋಧನನು ಯಾವ ರಾಶಿಯವನೆಂದು ಹೇಳಿದನು?

ವ್ಯಾಸ ವಚನವನಾ ವಸಿಷ್ಠ ಮು
ನೀಶನೊಳುನುಡಿಗಳನು ಕೋವಿದ
ಕೌಶಿಕನ ಕಥನವನು ಕೈಕೊಳ್ಳದೆ ಸುಯೋಧನನು
ದೇಶವನು ಪಾಂಡವರಿಗೀವ
ಭ್ಯಾಸವೆಮ್ಮೊಳಗಿಲ್ಲನೀತಿಯ
ರಾಶಿಯಾನಹೆನೆನ್ನನೊಡಬಡಿಸುವಿರಿ ನೀವೆಂದ (ಉದ್ಯೋಗ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ವ್ಯಾಸರ ಮಾತು, ವಸಿಷ್ಠರ ಹಿತವಚನ, ವಿದ್ವಾಂಸರಾದ ಕೌಶಿಕ ಮುನಿಗಳ ವಿಚಾರ ಯಾವುದು ಸುಯೋಧನನ ಕಿವಿಗೆ ಬೀಳಲಿಲ್ಲ, ಅವರ ಮಾತನ್ನೊಪ್ಪದೆ ಪಾಂಡವರಿಗೆ ಭೂಮಿಯನ್ನು ಕೊಡವ ಅಭ್ಯಾಸ ನನಗಿಲ್ಲ, ನಾನು ಅನೀತಿಯ ರಾಶಿಯವನು, ನನ್ನನ್ನೇಕೆ ಒಪ್ಪಿಸಲು ಬರುತ್ತಿರುವಿರಿ ಎಂದು ಪ್ರಶ್ನಿಸಿದನು.

ಅರ್ಥ:
ವಚನ: ಮಾತು; ಮುನಿ: ಋಷಿ; ಮುನೀಶ: ಮುನಿಗಳಲ್ಲಿ ಶ್ರೇಷ್ಠನಾದವ; ಒಳು: ಒಳಿತು; ನುಡಿ: ಮಾತು; ಕೋವಿದ: ವಿದ್ವಾಂಸ; ಕಥನ: ವಿಚಾರ; ಕೈಕೊಳ್ಳು: ಒಪ್ಪಿಕೊ; ದೇಶ: ರಾಷ್ಟ್ರ; ಅಭ್ಯಾಸ: ರೂಢಿ; ಅನೀತಿ: ಕೆಟ್ಟ ಮಾರ್ಗ; ರಾಶಿ:ಗುಂಪು; ಒಡಬಡಿಸು: ಒಪ್ಪಿಸು;

ಪದವಿಂಗಡಣೆ:
ವ್ಯಾಸ+ ವಚನವನ್+ಆ+ ವಸಿಷ್ಠ+ ಮು
ನೀಶನ್+ಒಳುನುಡಿಗಳನು +ಕೋವಿದ
ಕೌಶಿಕನ +ಕಥನವನು +ಕೈಕೊಳ್ಳದೆ +ಸುಯೋಧನನು
ದೇಶವನು +ಪಾಂಡವರಿಗ್+ಈವ್
ಅಭ್ಯಾಸವ್+ಎಮ್ಮೊಳಗ್+ಇಲ್ಲ್+ಅನೀತಿಯ
ರಾಶಿಯಾನಹೆನ್+ಎನ್ನನೊಡಬಡಿಸುವಿರಿ+ ನೀವೆಂದ

ಅಚ್ಚರಿ:
(೧) ‘ಕ’ ಕಾರದ ಸಾಲು ಪದಗಳು – ಕೋವಿದ ಕೌಶಿಕನ ಕಥನವನು ಕೈಕೊಳ್ಳದೆ
(೨) ‘ವ’ಕಾರದ ತ್ರಿವಳಿ ಪದ – ವ್ಯಾಸ ವಚನವನಾ ವಸಿಷ್ಠ
(೩) ವಚನ, ನುಡಿ – ಸಮನಾರ್ಥಕ ಪದ

ಪದ್ಯ ೯: ಮತ್ತಾವ ಋಷಿಗಳು ಯಾಗಕ್ಕೆ ಆಗಮಿಸಿದರು?

ಚ್ಯವನ ಗೌತಮ ವೇಣುಜಂಘ
ಪ್ರವರ ಕೌಶಿಕ ಸತ್ಯತಪ ಭಾ
ರ್ಗವ ಸುಮಾಲಿ ಸುಮಿತ್ರ ಕಾಶ್ಯಪ ಯಾಜ್ಞವಲ್ಕ್ಯ ಋಷಿ
ಪವನ ಭಕ್ಷಕ ದೀರ್ಘತಮ ಗಾ
ಲವನು ಶಿತ ಶಾಂಡಿಲ್ಯ ಮಾಂಡ
ವ್ಯವರರೆಂಬ ಮಹಾಮುನೀಂದ್ರರು ಬಂದರೊಗ್ಗಿನಲಿ (ಸಭಾ ಪರ್ವ, ೮ ಸಂಧಿ, ೯ ಪದ್ಯ)

ತಾತ್ಪರ್ಯ:
ಯಾಗಕ್ಕೆ ಇನ್ನು ಹಲವಾರು ಮುನೀಂದ್ರರು ಆಗಮಿಸಿದರು. ಚ್ಯವನ, ಗೌತಮ, ವೇಣುಜಂಘ, ಕೌಶಿಕ, ಸತ್ಯತಪ, ಭಾರ್ಗವ, ಸುಮಾಲಿ, ಸುಮಿತ್ರ, ಕಾಶ್ಯಪ, ಯಾಜ್ಞವಲ್ಕ್ಯ, ಪವನಭಕ್ಷಕ, ದೀರ್ಘತಮ, ಗಾಲವ, ಶಿತ, ಶಾಂಡಿಲ್ಯ, ಮಾಂಡವ್ಯರೆಂಬ ಋಷಿಗಳು ಆಗಮಿಸಿದರು.

ಅರ್ಥ:
ಋಷಿ: ಮುನಿ; ಮಹಾ: ಶ್ರೇಷ್ಠ; ಒಗ್ಗು: ಸಮೂಹ, ಗುಂಪು;

ಪದವಿಂಗಡಣೆ:
ಚ್ಯವನ+ ಗೌತಮ +ವೇಣುಜಂಘ
ಪ್ರವರ +ಕೌಶಿಕ+ ಸತ್ಯತಪ+ ಭಾ
ರ್ಗವ +ಸುಮಾಲಿ +ಸುಮಿತ್ರ +ಕಾಶ್ಯಪ +ಯಾಜ್ಞವಲ್ಕ್ಯ +ಋಷಿ
ಪವನ +ಭಕ್ಷಕ +ದೀರ್ಘತಮ +ಗಾ
ಲವನು +ಶಿತ+ ಶಾಂಡಿಲ್ಯ+ ಮಾಂಡ
ವ್ಯವರರ್+ಎಂಬ+ ಮಹಾಮುನೀಂದ್ರರು+ ಬಂದರ್+ಒಗ್ಗಿನಲಿ

ಅಚ್ಚರಿ:
(೧) ೧೬ ಋಷಿಗಳನ್ನು ಹೆಸರಿಸಿರುವುದು