ಪದ್ಯ ೬೦: ದುರ್ಯೋಧನನು ಅಶ್ವತ್ಥಾಮನ ಪ್ರಮಾಣಕ್ಕೆ ಏನೆಂದು ಹೇಳಿದನು?

ಅಕಟ ಮರುಳೇ ಗುರುಸುತನ ಮತಿ
ವಿಕಳತನವನು ಕೃಪನು ಕೃತವ
ರ್ಮಕರು ಕಂಡಿರೆ ಪಾಂಡವರ ತಲೆ ತನಗೆ ಗೋಚರವೆ
ಬಕನ ಧರ್ಮಸ್ಥಿತಿಯವೊಲು ದೇ
ವಕಿಯ ಮಗ ಕಾದಿಹನಲೇ ಕೌ
ಳಿಕದ ಸಿದ್ಧನ ಕೃತಿಯನಾರಿಗೆ ಮೀರಬಹುದೆಂದ (ಗದಾ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ಮಾತನ್ನು ಮುಂದುವರೆಸುತ್ತಾ, ಕೃಪ, ಕೃತವರ್ಮ, ನೀವು ಅಶ್ವತ್ಥಾಮನ ಮರಳುತನದ ಮಾತುಗಳನ್ನು ಕೇಳಿದ್ದೀರೇ? ಪಾಂಡವರ ತಲೆ ಅವನಿಗೆ ಸಿಕ್ಕೀತೇ? ಕೃಷ್ಣನು ಬಕಧ್ಯಾನ ಮಾಡುತ್ತಾ ಅವರನ್ನು ಕಾದುಕೋಂಡಿದ್ದಾನೆ, ಆ ಕಪಟಸಿದ್ಧನ ಮಾಟವನ್ನು ಯಾರು ಮೀರಬಲ್ಲರು ಎಂದು ಹೇಳಿದನು.

ಅರ್ಥ:
ಅಕಟ: ಅಯ್ಯೋ; ಮರುಳ: ಮೂಢ, ದಡ್ಡ; ಸುತ: ಮಗ; ಮತಿ: ಬುದ್ಧಿ; ವಿಕಳ: ಭ್ರಮೆ, ಭ್ರಾಂತಿ; ಕಂಡು: ನೋಡು; ತಲೆ: ಶಿರ; ಗೋಚರ: ಕಾಣು, ತೋರು; ಬಕ: ಕಪಟಿ, ವಂಚಕ, ಕೃಷ್ಣನಿಂದ ಹತನಾದ ಒಬ್ಬ ರಾಕ್ಷಸ; ಧರ್ಮ: ಧಾರಣೆ ಮಾಡಿದುದು; ಸ್ಥಿತಿ: ಅವಸ್ಥೆ; ಮಗ: ಸುತ; ಕಾದಿಹ: ರಕ್ಷಿಸು; ಕೌಳಿಕ: ಕಟುಕ, ಮೊಸ; ಸಿದ್ಧ: ಅಲೌಕಿಕ ಸಾಮರ್ಥ್ಯವುಳ್ಳವನು; ಕೃತಿ: ಕಾರ್ಯ; ಮೀರು: ಉಲ್ಲಂಘಿಸು;

ಪದವಿಂಗಡಣೆ:
ಅಕಟ+ ಮರುಳೇ +ಗುರುಸುತನ +ಮತಿ
ವಿಕಳತನವನು +ಕೃಪನು +ಕೃತವ
ರ್ಮಕರು +ಕಂಡಿರೆ +ಪಾಂಡವರ +ತಲೆ +ತನಗೆ+ ಗೋಚರವೆ
ಬಕನ +ಧರ್ಮಸ್ಥಿತಿಯವೊಲು +ದೇ
ವಕಿಯ +ಮಗ +ಕಾದಿಹನಲೇ +ಕೌ
ಳಿಕದ +ಸಿದ್ಧನ+ ಕೃತಿಯನ್+ ಆರಿಗೆ +ಮೀರಬಹುದೆಂದ

ಅಚ್ಚರಿ:
(೧) ಕೃಷ್ಣನ ಸಾಮರ್ಥ್ಯವನ್ನು ಹೇಳುವ ಪರಿ – ಬಕನ ಧರ್ಮಸ್ಥಿತಿಯವೊಲು ದೇವಕಿಯ ಮಗ ಕಾದಿಹನಲೇ

ಪದ್ಯ ೧೭: ಭೀಮನು ಕೌರವನಿಗೆ ಹೇಗೆ ಉತ್ತರಿಸಿದನು?

ಶಕುನಿ ಕಲಿಸಿದ ಕಪಟದಲಿ ಕೌ
ಳಿಕದಲುಬ್ಬಿದಿರಿದರ ವಿಸ್ತಾ
ರಕರಲೇ ನಾವಿಂದಿನಲಿ ದುಶ್ಯಾಸನಾದಿಗಳ
ರಕುತಪಾನ ಭವತ್ಸಹೋದರ
ನಿಕರನಾಶನವರುಹುದೇ ಸು
ಪ್ರಕಟವಿದು ಜಗಕೆಂದು ಗದೆಯನು ತೂಗಿದನು ಭೀಮ (ಗದಾ ಪರ್ವ, ೬ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮನು ದುರ್ಯೋಧನನ್ನು ಬಯ್ಯುತ್ತಾ, ಎಲೈ ಕೌರವ, ಶಕುನಿಯಿಂದ ಕಪಟವನ್ನು ಕಲಿತು ಮೋಸದ ವಿಜಯಸಾಧಿಸಿ ಉಬ್ಬಿದಿರಿ. ಆಗ ಮಾಡಿದ್ದ ಶಪಥವನ್ನು ನಾವು ಈಗ ತೀರಿಸಿ ತೋರಿಸುತ್ತಿದ್ದೇವೆ. ದುಶ್ಯಾಸನ ರಕ್ತಪಾನ, ನಿನ್ನ ತಮ್ಮಂದಿರ ವಧೆಗಳನು ಈಗಾಗಲೇ ತೋರಿಸಿರುವೆ ಜಗತ್ತೇ ಅದನ್ನರಿತಿದೆ ಎಂದು ಭೀಮನು ಗರ್ಜಿಸಿದನು.

ಅರ್ಥ:
ಕಲಿಸು: ಹೇಳಿಕೊಡು; ಕಪಟ: ಮೋಸ; ಕೌಳಿಕ: ಕಟುಕ, ಮೋಸ; ಉಬ್ಬು: ಹೆಚ್ಚು; ವಿಸ್ತಾರ: ವಿಶಾಲತೆ; ಆದಿ: ಮುಂತಾದ; ರಕುತ: ನೆತ್ತರು; ಪಾನ: ಕುಡಿ; ಸಹೋದರ: ತಮ್ಮ; ನಿಕರ: ಗುಂಪು; ನಾಶ: ಹಾಳುಮಾಡು; ಅರುಹು: ತಿಳಿವಳಿಕೆ; ಪ್ರಕಟ: ಸ್ಪಷ್ಟವಾದುದು; ಜಗ: ಪ್ರಪಂಚ; ಗದೆ: ಮುದ್ಗರ; ತೂಗು: ಅಲ್ಲಾಡು;

ಪದವಿಂಗಡಣೆ:
ಶಕುನಿ +ಕಲಿಸಿದ +ಕಪಟದಲಿ +ಕೌ
ಳಿಕದಲ್+ಉಬ್ಬಿದಿರ್+ಇದರ +ವಿಸ್ತಾ
ರಕರಲೇ +ನಾವ್+ಇಂದಿನಲಿ +ದುಶ್ಯಾಸನಾದಿಗಳ
ರಕುತಪಾನ+ ಭವತ್+ ಸಹೋದರ
ನಿಕರ+ನಾಶನವ್+ಅರುಹುದೇ +ಸು
ಪ್ರಕಟವಿದು +ಜಗಕೆಂದು +ಗದೆಯನು +ತೂಗಿದನು +ಭೀಮ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕಲಿಸಿದ ಕಪಟದಲಿ ಕೌಳಿಕದಲುಬ್ಬಿದಿರಿದರ

ಪದ್ಯ ೨೧: ಪಣಕಿಟ್ಟ ಅರ್ಜುನನ ಸ್ಥಿತಿ ಏನಾಯಿತು?

ಮೇಲೆ ಹೇಳುವುದೇನು ಸಾರಿಯ
ಸಾಲು ಮುರಿದುದು ಸೆರೆಯ ಕಳವಿನ
ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ
ಹೇಳುವದರಿಂ ಮುನ್ನ ಶಕುನಿಗೆ
ಬೀಳುವುವು ಬೇಕಾದ ದಾಯವು
ಕೌಳಿಕದ ವಿಧಿಪಾಶ ತೊಡಕಿತು ಕೆಡಹಿತರ್ಜುನನ (ಸಭಾ ಪರ್ವ, ೧೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ಜನಮೇಜಯ ಇನ್ನು ಹೇಳುವುದೇನಿದೆ, ಪಗಡೆಯಾಟದಲ್ಲಿ ಧರ್ಮಜನು ಇಟ್ಟ ಕಾಯಿಯು ಮುರಿಯಿತು. ಮೋಸದಲ್ಲಿ ಪ್ರವೀಣರಾದವರ ಕೈಚಳಕವನ್ನು ಯಾರು ತಾನೇ ತಿಳಿಯಬಲ್ಲರು. ಶಕುನಿಯು ಇಂತಹ ಗರವು ತನಗೆ ಬೇಕೆಂದು ದಾಳಕ್ಕೆ ಹೇಳುವ ಮೊದಲೇ ಆ ಗರವು ಬೀಳುತ್ತಿತ್ತು. ಕ್ರೂರವಾದ ವಂಚನೆಯ ವಿಧಿ ಪಾಶವು, ಕಾಲಿಗೆ ತೊಡಕಿಕೊಂಡು ಅರ್ಜುನನನ್ನು ಕೆಡವಿತು.

ಅರ್ಥ:
ಮೇಲೆ: ಮುಂದಿನ, ನಂತರ; ಹೇಳು: ತಿಳಿಸು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಸಾಲು: ಪಂಕ್ತಿ; ಮುರಿ: ಸೀಳು; ಸೆರೆ: ಬಂಧನ; ಕಳವು:ಅಪಹರಣ ; ಕಾಲುಕೀಲ್ಗಳು: ಅಡಿ, ಬುಡ, ರೀತಿ; ಬಲ್ಲರು: ತಿಳಿದವರು; ಕುಟಿಲ: ಮೋಸ; ಕೋವಿದ: ಪಂಡಿತ; ಮುನ್ನ: ಮೊದಲೇ; ಬೇಕಾದ: ಇಚ್ಛಿಸಿದ; ದಾಯ: ಪಗಡೆಯಾಟದಲ್ಲಿ ಬೀಳುವ ಗರ; ಕೌಳಿಕ: ಕಟುಕ, ಮೋಸ, ವಂಚನೆ; ವಿಧಿ: ಹಣೆಬರಹ, ಅದೃಷ್ಟ; ತೊಡಕು: ಸಿಕ್ಕು, ಅಡ್ಡಿ, ಗೊಂದಲ; ಕೆಡಹು: ಬೀಳಿಸು, ಸಂಹರಿಸು;

ಪದವಿಂಗಡಣೆ:
ಮೇಲೆ +ಹೇಳುವುದೇನು+ ಸಾರಿಯ
ಸಾಲು +ಮುರಿದುದು +ಸೆರೆಯ +ಕಳವಿನ
ಕಾಲು +ಕೀಲ್ಗಳನಾರು+ ಬಲ್ಲರು +ಕುಟಿಲ +ಕೋವಿದರ
ಹೇಳುವದರಿಂ +ಮುನ್ನ +ಶಕುನಿಗೆ
ಬೀಳುವುವು +ಬೇಕಾದ+ ದಾಯವು
ಕೌಳಿಕದ +ವಿಧಿಪಾಶ+ ತೊಡಕಿತು +ಕೆಡಹಿತ್+ಅರ್ಜುನನ

ಅಚ್ಚರಿ:
(೧) ಅರ್ಜುನನ ಪಣವು ಸೋತಿತೆನ್ನಲು – ಕೌಳಿಕದ ವಿಧಿಪಾಸಶ ತೊಡಕಿತು ಕೆಡಹಿತರ್ಜುನನ
(೨) ದುಷ್ಟರನ್ನು ವಿವರಿಸುವ ಪರಿ – ಕಳವಿನ ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ

ಪದ್ಯ ೧೩: ದುರ್ಯೋಧನನು ಮನಸ್ಸಿನಲ್ಲಿ ಏಕೆ ಸಂತಸಪಟ್ಟನು?

ಬೀಳುಕೊಟ್ಟಳು ಬಳಿಕ ಕುರುನೃಪ
ನಾಲಯಕೆ ನಡೆತಂದು ಕುಂತಿಯ
ಕಾಲಿಗೆರಗಿದನಿವರನುಚಿತೋಕ್ತಿಯಲಿ ಮನ್ನಿಸಿದ
ಬಾಲಮೃಗವೊಳಗಾಯ್ತಲಾ ತೊಡು
ಕೋಲನೆಂದರು ನಗುತ ಮನದಲಿ
ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು (ಸಭಾ ಪರ್ವ, ೧೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಗಾಂಧಾರಿಯು ಪಾಂಡವರನ್ನು ಕಳಿಸಿಕೊಟ್ಟಳು. ಅವರೆಲ್ಲರು ಅವರ ಬೀಡಿಗೆ ಹಿಂದಿರುಗಿದರು. ದುರ್ಯೋಧನನು ಪಾಂಡವರ ಬೀಡಿಗೆ ಬಂದು ಕುಂತಿಗೆ ನಮಸ್ಕರಿಸಿದನು. ಎಲ್ಲರನ್ನೂ ಉಚಿತವಾದ ಮಾತುಗಳಿಂದ ಉಪಾರಿಸಿದನು. ಮೋಸಗಾರರು, ಕಪಟಿಗಳಾದ ದುರ್ಯೋಧನ, ಶಕುನಿಗಳು ಮನಸ್ಸಿನಲ್ಲಿಯೇ ನಕ್ಕು, ಮರಿ ಜಿಂಕೆಯು ಬಲೆಯಲ್ಲಿ ಬಿದ್ದಿದೆ, ಬಾಣವನ್ನು ಹೂಡು ಎಂದುಕೊಂಡರು.

ಅರ್ಥ:
ಬೀಳುಕೊಡು: ತೆರಳು; ಬಳಿಕ: ನಂತರ; ನೃಪ: ರಾಜ; ಆಲಯ: ಮನೆ; ನಡೆ: ಚಲಿಸು; ಕಾಲು: ಪಾದ; ಎರಗು: ನಮಸ್ಕರಿಸು; ಉಚಿತ: ಸರಿಯಾದ; ಉಕ್ತಿ: ಮಾತು; ಮನ್ನಿಸು: ಗೌರವಿಸು; ಬಾಲ: ಚಿಕ್ಕ; ಮೃಗ: ಜಿಂಕೆ; ತೊಡು: ಹೂಡು; ಕೋಲ: ಬಾಣ; ನಗುತ: ಸಂತಸ; ಮನ: ಮನಸ್ಸು; ಕೌಳಿಕ: ಕಟುಕ, ಕಸಾಯಿಗಾರ, ಮೋಸ; ಕುಹಕಿ: ಮೋಸಗಾರ;

ಪದವಿಂಗಡಣೆ:
ಬೀಳುಕೊಟ್ಟಳು +ಬಳಿಕ +ಕುರುನೃಪನ್
ಆಲಯಕೆ +ನಡೆತಂದು +ಕುಂತಿಯ
ಕಾಲಿಗ್+ಎರಗಿದನ್+ಇವರನ್+ಉಚಿತ+ಉಕ್ತಿಯಲಿ +ಮನ್ನಿಸಿದ
ಬಾಲ+ಮೃಗವೊಳಗಾಯ್ತಲಾ +ತೊಡು
ಕೋಲನ್+ಎಂದರು +ನಗುತ+ ಮನದಲಿ
ಕೌಳಿಕದ+ ಕುಹಕಿಗಳು+ ಕೌರವರಾಯ +ಶಕುನಿಗಳು

ಅಚ್ಚರಿ:
(೧) ದುರ್ಯೊಧನನ ಮನಸ್ಸಿನ ಸಂತಸ – ಬಾಲಮೃಗವೊಳಗಾಯ್ತಲಾ ತೊಡುಕೋಲನೆಂದರು ನಗುತ ಮನದಲಿ ಕೌಳಿಕದ ಕುಹಕಿಗಳು ಕೌರವರಾಯ ಶಕುನಿಗಳು
(೨) ಕ ಕಾರದ ತ್ರಿವಳಿ ಪದ – ಕೌಳಿಕದ ಕುಹಕಿಗಳು ಕೌರವರಾಯ

ಪದ್ಯ ೧೯: ಕೃಷ್ಣನ ಯಾವ ಪರಾಕ್ರಮವನ್ನು ವರ್ಣಿಸಲಿಲ್ಲ ಎಂದು ಶಿಶುಪಾಲ ಹೇಳಿದ?

ಆದರಿಸಿ ಬಣ್ಣಿಸಿದೆ ನಾಚದೆ
ಯಾದವನ ಕೌಳಿಕ ಪರಾಕ್ರಮ
ವಾದಿಯಾದ ಸಮಸ್ತಗುಣ ವಿಸ್ತಾರ ವೈಭವವ
ಆದರಾ ಗೋವಳರ ಹೆಂಡಿರ
ಹಾದರದ ಹೆಕ್ಕಳವ ಬಣ್ಣಿಸ
ದಾದೆ ನಿನಗೇಕಕಟ ನಾಚಿಕೆಯೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೈ ಭೀಷ್ಮ ನೀನು ಈ ಯಾದವನ ಸಮಸ್ತ ಪರಾಕ್ರಮದ ಮೋಸದ ಕೃತ್ಯಗಳನ್ನೆಲ್ಲಾ ವಿವರವಾಗಿ ವೈಭವಪೂರ್ಣವಾಗಿ ಹೇಳಿದ, ಆದರೆ ಗೋವಳರ ಹೆಂಡಿರ ಜೊತೆಗೆ ಇವನು ಮಾಡಿದ ಹಾದರವನ್ನು ಏಕೆ ವಿವರಿಸಲಿಲ್ಲ, ಅಯ್ಯೋ ನೀನಗೇಕೆ ನಾಚಿಕೆ ಎಂದು ಶಿಶುಪಾಲನು ಮೂದಲಿಸಿದನು.

ಅರ್ಥ:
ಆದರಿಸು: ಗೌರವಿಸು; ಬಣ್ಣಿಸು: ವರ್ಣಿಸು; ನಾಚು: ನಾಚಿಕೆಪಡು, ಸಿಗ್ಗಾಗು; ಕೌಳಿಕ:ಕಟುಕ, ಕಸಾಯಿಗಾರ, ಮೋಸ; ಪರಾಕ್ರಮ: ಶೌರ್ಯ; ವಾದಿ: ತರ್ಕಮಾಡುವವನು; ಸಮಸ್ತ: ಎಲ್ಲಾ; ಗುಣ: ನಡತೆ, ಸ್ವಭಾವ; ವಿಸ್ತಾರ: ವೈಶಾಲ್ಯ; ವೈಭವ: ಶಕ್ತಿ, ಸಾಮರ್ಥ್ಯ, ಆಡಂಬರ; ಗೋವಳ: ಗೋಪಾಲಕ; ಹೆಂಡಿರ: ಭಾರ್ಯ; ಹಾದರ: ವ್ಯಭಿಚಾರ, ಜಾರತನ; ಹೆಕ್ಕಳ: ಹೆಚ್ಚಳ, ಅತಿಶಯ; ಅಕಟ: ಅಯ್ಯೋ; ನಾಚಿಕೆ: ಲಜ್ಜೆ, ಸಿಗ್ಗು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಆದರಿಸಿ +ಬಣ್ಣಿಸಿದೆ +ನಾಚದೆ
ಯಾದವನ +ಕೌಳಿಕ +ಪರಾಕ್ರಮವ್
ಆದಿಯಾದ +ಸಮಸ್ತಗುಣ +ವಿಸ್ತಾರ +ವೈಭವವ
ಆದರ್+ಆ+ ಗೋವಳರ +ಹೆಂಡಿರ
ಹಾದರದ +ಹೆಕ್ಕಳವ +ಬಣ್ಣಿಸ
ದಾದೆ+ ನಿನಗೇಕ್+ಅಕಟ +ನಾಚಿಕೆ+ಎಂದನಾ +ಚೈದ್ಯ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೆಂಡಿರ ಹಾದರದ ಹೆಕ್ಕಳವ
(೨) ಬಣ್ಣಿಸಿದೆ, ಬಣ್ಣಿಸದಾದೆ – ಪದಗಳ ಬಳಕೆ
(೩) ಆದರಾ, ಹಾದರ – ಪದಗಳ ಬಳಕೆ