ಪದ್ಯ ೨೧: ಧೃತರಾಷ್ಟ್ರನು ಸಂಜಯನಿಗೆ ಯಾವ ಪ್ರಶ್ನೆಗಳನ್ನಿಟ್ಟನು?

ಹೋಗಿ ತಳುವಿದೆ ಕೌರವೇಂದ್ರನ
ನೀಗಿದಳೆ ಜಯಲಕ್ಷ್ಮಿ ಪಾಂಡವ
ರಾಗುಹೋಗೇನಾಯ್ತು ಶಕುನಿಯ ಹಯದ ಮೋಹರವ
ತಾಗಿ ಮುರಿದನೆ ಭೀಮನೀ ಮೇ
ಲ್ಪೋಗಿನಾಹವವೇನು ರಾಯನ
ತಾಗು ಥಟ್ಟೇನಾಯ್ತು ಸಂಜಯ ತಿಳಿಯಹೇಳೆಂದ (ಗದಾ ಪರ್ವ, ೪ ಸಂಧಿ, ೨೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮಾತನಾಡುತ್ತಾ, ಸಂಜಯ ಹೋದವನು ಬಹಳ ತಡವಾಗಿ ಬಂದೆ. ಜಯಲಕ್ಷ್ಮಿಯು ಕೌರವನನ್ನು ತ್ಯಜಿಸಿ ಹೋದಳೇ? ಪಾಂಡವರ ಆಗುಹೋಗುಗಳೇನು? ಶಕುನಿಯ ಕುದುರೆಗಳ ದಳವನ್ನು ಭೀಮನು ಆಕ್ರಮಿಸಿ ಮುರಿದನೇ? ಕೌರವನ ಗತಿಯೇನು ಎಂದು ಪ್ರಶ್ನಿಸಿದನು.

ಅರ್ಥ:
ಹೋಗು: ತೆರಳು; ತಳುವು: ನಿಧಾನಿಸು; ನೀಗು: ನಿವಾರಿಸಿಕೊಳ್ಳು, ಪರಿಹರಿಸು; ಜಯಲಕ್ಷ್ಮಿ: ವಿಜಯಲಕ್ಷ್ಮಿ; ಆಗುಹೋಗು: ವಿಚಾರ; ಹಯ: ಕುದುರೆ; ಮೋಹರ: ಯುದ್ಧ; ತಾಗು: ಮುಟ್ಟು; ಮುರಿ: ಸೀಳು; ಆಹವ: ಯುದ್ಧ; ರಾಯ: ರಾಜ; ಥಟ್ಟು: ಗುಂಪು; ಹೇಳು: ಗೊತ್ತುಮಾಡು;

ಪದವಿಂಗಡಣೆ:
ಹೋಗಿ+ ತಳುವಿದೆ +ಕೌರವೇಂದ್ರನ
ನೀಗಿದಳೆ +ಜಯಲಕ್ಷ್ಮಿ+ ಪಾಂಡವರ್
ಆಗುಹೋಗೇನಾಯ್ತು +ಶಕುನಿಯ +ಹಯದ +ಮೋಹರವ
ತಾಗಿ +ಮುರಿದನೆ +ಭೀಮನೀ +ಮೇ
ಲ್ಪೋಗಿನ್+ಆಹವವೇನು +ರಾಯನ
ತಾಗು +ಥಟ್ಟೇನಾಯ್ತು +ಸಂಜಯ +ತಿಳಿಯ+ಹೇಳೆಂದ

ಅಚ್ಚರಿ:
(೧) ಧೃತರಾಷ್ಟ್ರನು ಕೌರವನು ಜಯಿಸನು ಎಂದು ಯೋಚಿಸಿದ ಎಂದು ಹೇಳುವ ಪರಿ – ಕೌರವೇಂದ್ರನ
ನೀಗಿದಳೆ ಜಯಲಕ್ಷ್ಮಿ
(೨) ಮೋಹರ, ಆಹವ – ಸಮಾನಾರ್ಥಕ ಪದ

ಪದ್ಯ ೩: ಸಂಜಯನು ಕೌರವನ ಯುದ್ಧವನ್ನು ಹೇಗೆ ವರ್ಣಿಸಿದನು?

ಅರಿದುದಿಲ್ಲಾ ಕೌರವೇಂದ್ರನ
ನರಸಿ ಶಕುನಿಯ ದಳವ ಮುತ್ತಿದ
ರಿರಿದರವರ ತ್ರಿಗರ್ತರನು ಸೌಬಲ ಸುಶರ್ಮಕರ
ಮುರಿದ ಬವರವ ಬಲಿದು ಗಜ ನೂ
ರರಲಿ ಹೊಕ್ಕನು ರಾಯನಹಿತರ
ಜರಿದು ಝಾಡಿಸಿ ಬೀದಿವರಿದನು ರಾಯದಳದೊಳಗೆ (ಗದಾ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ಸಂಜಯನು ತನ್ನ ಮಾತನ್ನು ಮುಂದುವರೆಸುತ್ತಾ, ನಿಮಗೆ ಇದು ತಿಳಿಯದೇ? ಪಾಂಡವರು ಕೌರವರನನ್ನು ಹುಡುಕುತ್ತಾ ಹೋಗಿ ಶಕುನಿಯ ಸೇನೆಯನ್ನು ಮುತ್ತಿದರು. ಸುಶರ್ಮ ಶಕುನಿಗಳನ್ನು ಕೊಂದರು. ಹೀಗೆ ಸೋತ ಮೇಲೆ ದೊರೆಯು ನೂರಾನೆಗಳೊಡನೆ ಪಾಂಡವರ ಸೇನೆಯನ್ನು ಸಂಹರಿಸುತ್ತಾ ನುಗ್ಗಿದನು.

ಅರ್ಥ:
ಅರಿ: ತಿಳಿ; ಅರಸು: ಹುಡುಕು; ದಳ: ಸೈನ್ಯ; ಮುತ್ತು: ಆವರಿಸು; ಇರಿ: ಚುಚ್ಚು; ಮುರಿ: ಸೀಳು; ಬವರ: ಕಾಳಗ, ಯುದ್ಧ; ಬಲಿ: ಗಟ್ಟಿಯಾಗು; ಗಜ: ಆನೆ; ನೂರು: ಶತ; ಹೊಕ್ಕು: ಸೇರು; ಅಹಿತ: ವೈರಿ; ಜರಿ: ಬಯ್ಯು; ಝಾಡಿಸು: ಒದರು; ಬೀದಿ: ವಿಸ್ತಾರ, ವ್ಯಾಪ್ತಿ; ರಾಯ: ರಾಜ; ದಳ: ಸೈನ್ಯ;

ಪದವಿಂಗಡಣೆ:
ಅರಿದುದಿಲ್ಲಾ +ಕೌರವೇಂದ್ರನನ್
ಅರಸಿ +ಶಕುನಿಯ+ ದಳವ +ಮುತ್ತಿದರ್
ಇರಿದರ್+ಅವರ +ತ್ರಿಗರ್ತರನು +ಸೌಬಲ +ಸುಶರ್ಮಕರ
ಮುರಿದ+ ಬವರವ +ಬಲಿದು +ಗಜ+ ನೂ
ರರಲಿ+ ಹೊಕ್ಕನು +ರಾಯನ್+ಅಹಿತರ
ಜರಿದು+ ಝಾಡಿಸಿ +ಬೀದಿವರಿದನು +ರಾಯದಳದೊಳಗೆ

ಅಚ್ಚರಿ:
(೧) ಕೌರವನ ಯುದ್ಧದ ವರ್ಣನೆ – ಮುರಿದ ಬವರವ ಬಲಿದು ಗಜ ನೂರರಲಿ ಹೊಕ್ಕನು ರಾಯನಹಿತರ
ಜರಿದು ಝಾಡಿಸಿ ಬೀದಿವರಿದನು
(೨) ಅರಿ, ಇರಿ, ಮುರಿ, ಜರಿ – ಪ್ರಾಸ ಪದಗಳು

ಪದ್ಯ ೩೭: ಮಂತ್ರಿಗಳು ಯಾವ ಅಭಿಪ್ರಾಯ ಪಟ್ಟರು?

ಅಂಗವಿಸುವವರಿಲ್ಲ ಭಟರಿಗೆ
ಭಂಗವಿಕ್ಕಿತು ಕೌರವೇಂದ್ರಗೆ
ಸಂಗರದ ಸಿರಿ ಸೊಗಸಿನಲಿ ಕಡೆಗಣ್ಣ ಸೂಸಿದಳು
ಮುಂಗುಡಿಯಲ್ಲಿನ್ನಾರು ನಮಗಾ
ವಂಗದಲಿ ಜಯವೇನು ಹದನರ
ಸಂಗೆ ಬಿನ್ನಹ ಮಾಡಿಯೆಂದರು ನಿಖಿಳ ಮಂತ್ರಿಗಳು (ದ್ರೋಣ ಪರ್ವ, ೧೮ ಸಂಧಿ, ೩೭ ಪದ್ಯ)

ತಾತ್ಪರ್ಯ:
ದ್ರೋಣನನ್ನು ತಡೆದು ನಿಲ್ಲಿಸುವವರೇ ಇಲ್ಲ. ಪಾಂಡವ ವೀರರೆಲ್ಲರೂ ಭಂಗಿತರಾದರು. ಯುದ್ಧದ ವಿಜಯಲಕ್ಷ್ಮಿ ಸುಯೋಧನನ ಕಡೆಗೆ ಸಂತೋಷದ ಕುಡಿನೋಟ ಬೀರಿದ್ದಾಳೆ. ಈಗ ಮುಮ್ದೆ ನಿಮ್ತು ಯುದ್ಧಮಾದುವವರಾರು? ನಾವು ಗೆಲ್ಲುವುದಾದರೂ ಹೇಗೆ? ಇದ್ದ ವಿಷಯವನ್ನು ದೊರೆಗೆ ಬಿನ್ನಹಮಾಡಿರೆಂದು ಎಲ್ಲಾ ಮಂತ್ರಿಗಳು ಹೇಳಿದರು.

ಅರ್ಥ:
ಅಂಗವಿಸು: ಬಯಸು; ಭಟ: ಸೈನಿಕ; ಭಂಗ: ಮುರಿಯುವಿಕೆ, ಚೂರು; ಸಂಗರ: ಯುದ್ಧ; ಸಿರಿ: ಐಶ್ವರ್ಯ; ಸೊಗಸು: ಎಲುವು; ಕಡೆಗಣ್ಣು: ಓರೆನೋಟ; ಸೂಸು: ಎರಚು, ಚಲ್ಲು, ಚಿಮ್ಮು; ಮುಂಗುಡಿ: ಮುಂದಿನ ತುದಿ, ಅಗ್ರಭಾಗ; ಅಂಗ: ಭಾಗ; ಜಯ: ಗೆಲುವು; ಹದ: ಸ್ಥಿತಿ; ಅರಸ: ರಾಜ; ಬಿನ್ನಹ: ಕೋರಿಕೆ; ನಿಖಿಳ: ಎಲ್ಲಾ; ಮಂತ್ರಿ: ಸಚಿವ;

ಪದವಿಂಗಡಣೆ:
ಅಂಗವಿಸುವವರಿಲ್ಲ +ಭಟರಿಗೆ
ಭಂಗವಿಕ್ಕಿತು +ಕೌರವೇಂದ್ರಗೆ
ಸಂಗರದ +ಸಿರಿ +ಸೊಗಸಿನಲಿ +ಕಡೆಗಣ್ಣ+ ಸೂಸಿದಳು
ಮುಂಗುಡಿಯಲ್+ಇನ್ನಾರು +ನಮಗಾ
ವಂಗದಲಿ +ಜಯವೇನು +ಹದನ್+ಅರ
ಸಂಗೆ +ಬಿನ್ನಹ +ಮಾಡಿ+ಎಂದರು +ನಿಖಿಳ +ಮಂತ್ರಿಗಳು

ಅಚ್ಚರಿ:
(೧) ಅಂಗ, ಭಂಗ – ಪ್ರಾಸ ಪದಗಳು
(೨) ಸ ಕಾರದ ತ್ರಿವಳಿ ಪದ – ಸಂಗರದ ಸಿರಿ ಸೊಗಸಿನಲಿ

ಪದ್ಯ ೪೭: ರಣವಾದ್ಯಗಳು ಹೇಗೆ ಉಲಿದವು?

ಸಿಡಿಲ ಕುಡುಹುಗಳಿಂದ ಕಮಲಜ
ಹೊಡೆಯಲಬುಜಭವಾಂಡ ಭೇರಿಯ
ಕಡುದನಿಗಳೆನಲೊದರಿದವು ನಿಸ್ಸಾಳ ಕೋಟಿಗಳು
ತುಡುಕಿದವು ತಂಬಟದ ದನಿ ಜಗ
ದಡಕಿಲನು ಫಡ ಕೌರವೇಂದ್ರನ
ತೊಡಕು ಬೇಡೆಂದೊದರುತಿದ್ದವು ಗೌರುಗಹಳೆಗಳು (ದ್ರೋಣ ಪರ್ವ, ೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ಬ್ರಹ್ಮನು ಸಿಡಿಲಿನ ಕುಡದಿಂದ ಬ್ರಹ್ಮಾಂಡ ಭೇರಿಯನ್ನು ಬಾರಿಸಿದನೋ ಎಂಬಂತೆ ಸಿಸ್ಸಾಳಗಳು ಸದ್ದುಮಾಡಿದವು. ತಮಟೆಯ ಸದ್ದು ಜಗದಡಕಿಲನ್ನು ಅಲುಗಾಡಿಸಿದವು. ಕೌರವನ ಗೊಂದಲ ಬೇಡವೆಂದೇನೋ ಎಂಬಂತೆ ರಣಕಹಳೆಗಳು ಒದರಿದವು.

ಅರ್ಥ:
ಸಿಡಿಲು: ಅಶನಿ; ಕುಡುಹು: ಬರೆಹಾಕುವ ಕುಡ, ಗುಳ; ಕಮಲಜ: ಬ್ರಹ್ಮ; ಹೊಡೆ: ಸೀಳು; ಅಬುಜಭವಾಂಡ: ಬ್ರಹ್ಮಾಂಡ; ಭೇರಿ: ನಗಾರಿ, ದುಂದುಭಿ; ಕಡು: ತುಂಬ; ದನಿ: ಶಬ್ದ; ಒದರು: ಕೊಡಹು, ಜಾಡಿಸು; ನಿಸ್ಸಾಳ: ಚರ್ಮವಾದ್ಯ; ಕೋಟಿ: ಅಸಂಖ್ಯಾತ; ತುಡುಕು: ಹೋರಾಡು, ಸೆಣಸು; ತಂಬಟ: ತಮಟೆ, ಚಪ್ಪಟೆಯಾದ ಚರ್ಮವಾದ್ಯ; ದನಿ: ಶಬ್ದ; ಜಗ: ಪ್ರಪಂಚ; ಅಡಕು: ನಿಯಮ, ರಾಶಿ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ತೊಡಕು: ಗೋಜು, ಗೊಂದಲ; ಬೇಡ: ತೊರೆ; ಗೌರು: ಕರ್ಕಶ ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ;

ಪದವಿಂಗಡಣೆ:
ಸಿಡಿಲ +ಕುಡುಹುಗಳಿಂದ +ಕಮಲಜ
ಹೊಡೆಯಲ್+ಅಬುಜಭವಾಂಡ +ಭೇರಿಯ
ಕಡುದನಿಗಳ್+ಎನಲ್+ಒದರಿದವು +ನಿಸ್ಸಾಳ +ಕೋಟಿಗಳು
ತುಡುಕಿದವು +ತಂಬಟದ +ದನಿ +ಜಗದ್
ಅಡಕಿಲನು +ಫಡ +ಕೌರವೇಂದ್ರನ
ತೊಡಕು +ಬೇಡೆಂದ್+ಒದರುತಿದ್ದವು +ಗೌರು+ಕಹಳೆಗಳು

ಅಚ್ಚರಿ:
(೧) ರೂಪಕದ ಪ್ರಯೋಗ – ಸಿಡಿಲ ಕುಡುಹುಗಳಿಂದ ಕಮಲಜಹೊಡೆಯಲಬುಜಭವಾಂಡ ಭೇರಿಯ
ಕಡುದನಿಗಳೆನಲ್

ಪದ್ಯ ೬೮: ಅರ್ಜುನನು ಕೌರವ ಸೈನ್ಯವನ್ನು ಹೇಗೆ ತಡೆದನು?

ಒಗ್ಗು ಮುರಿಯದೆ ಸೇನೆ ಮೊಳಗುವ
ಲಗ್ಗೆವರೆಯಲಿ ಹೆಣನ ತುಳಿದೊಡೆ
ಮುಗ್ಗಿ ಕವಿದುದು ಕೌರವೇಂದ್ರನ ಮೊಗದ ಸನ್ನೆಯಲಿ
ಹುಗ್ಗಿಗರ ಹುರಿ ಬಲುಹು ನಿಗುಚುವೆ
ನಿಗ್ಗರವ ನಿಲ್ಲೆನುತ ಸೇನೆಯ
ನಗ್ಗಡಲೊಳಿಕ್ಕಿದನು ಫಲುಗುಣನಗಣಿತಾಸ್ತ್ರದಲಿ (ವಿರಾಟ ಪರ್ವ, ೯ ಸಂಧಿ, ೬೮ ಪದ್ಯ)

ತಾತ್ಪರ್ಯ:
ಕೌರವನು ಮುಖದಿಂದ ಸನ್ನೆ ಮಾಡಲು ಸೈನ್ಯವು ಒಟ್ಟಾಗಿ ತಮಟೆಗಳನ್ನು ಬಾರಿಸುತ್ತಾ ರಣರಂಗದಲ್ಲಿ ಬಿದ್ದಿದ್ದ ಹೆಣಗಳನ್ನು ತುಳಿದು ಮುಂದುವರಿದು ಅರ್ಜುನನನ್ನು ಮುತ್ತಿತು. ಈ ಅಹಂಕಾರಿಗಳ ಆಟೋಪ ಬಲವಾಗಿದೆ, ಇವರ ಕೊಬ್ಬನ್ನು ಮುರಿದು ಸರಿಮಾಡುತ್ತೇನೆ ಎನ್ನುತ್ತಾ ಅರ್ಜುನನು ಅಸಂಖ್ಯಾತ ಬಾಣಗಳನ್ನು ಬಿಡಲು ಅದು ರಕ್ತಸಮುದ್ರವಾಗಿ ಕೌರವ ಸೈನ್ಯವನ್ನು ಮುಳುಗಿಸಿತು.

ಅರ್ಥ:
ಒಗ್ಗು: ಗುಂಪು, ಸಮೂಹ; ಮುರಿ: ಸೀಳು; ಸೇನೆ: ಸೈನ್ಯ; ಮೊಳಗು: ಧ್ವನಿ, ಸದ್ದು; ಲಗ್ಗೆ: ಮುತ್ತಿಗೆ; ಹೆಣ: ಪ್ರಾಣವಿಲ್ಲದ ಶರೀರ; ತುಳಿ: ಮೆಟ್ಟು; ಮುಗ್ಗು: ಕೆಡು, ನಾಶವಾಗು; ಕವಿ: ಆವರಿಸು; ಮೊಗ: ಮುಖ; ಸನ್ನೆ: ಗುರುತು; ಹುಗ್ಗಿಗ: ಶ್ರೇಷ್ಠ; ಹುರಿ: ಕೆಚ್ಚು, ಬಲ, ಗಟ್ಟಿತನ; ಬಲುಹು: ಶಕ್ತಿ; ನಿಗುಚು: ನೆಟ್ಟಗೆ ಮಾಡು; ನಿಗ್ಗರ: ನಿಗ್ರಹ; ನಿಲ್ಲು: ತಡೆ; ಸೇನೆ: ಸೈನ್ಯ; ಅಗ್ಗಡಲು: ರಕ್ತಜಲಧಿ; ಇಕ್ಕು: ಇಡು, ಇರಿಸು; ಅಗಣಿತ: ಲೆಕ್ಕವಿಲ್ಲದಷ್ಟು; ಅಸ್ತ್ರ: ಆಯುಧ, ಶಸ್ತ್ರ;

ಪದವಿಂಗಡಣೆ:
ಒಗ್ಗು +ಮುರಿಯದೆ +ಸೇನೆ +ಮೊಳಗುವ
ಲಗ್ಗೆವರೆಯಲಿ +ಹೆಣನ +ತುಳಿದೊಡೆ
ಮುಗ್ಗಿ +ಕವಿದುದು +ಕೌರವೇಂದ್ರನ +ಮೊಗದ +ಸನ್ನೆಯಲಿ
ಹುಗ್ಗಿಗರ+ ಹುರಿ +ಬಲುಹು +ನಿಗುಚುವೆ
ನಿಗ್ಗರವ+ ನಿಲ್ಲೆನುತ+ ಸೇನೆಯನ್
ಅಗ್ಗಡಲೊಳ್+ಇಕ್ಕಿದನು +ಫಲುಗುಣನ್+ಅಗಣಿತ+ಅಸ್ತ್ರದಲಿ

ಅಚ್ಚರಿ:
(೧) ರಣರಂಗದ ಭೀಕರತೆ – ಹೆಣನ ತುಳಿದೊಡೆ ಮುಗ್ಗಿ ಕವಿದುದು; ಸೇನೆಯನಗ್ಗಡಲೊಳಿಕ್ಕಿದನು

ಪದ್ಯ ೧೮: ಅರ್ಜುನನು ಕರ್ಣನಿಗೆ ಹೇಗೆ ಉತ್ತರಿಸಿದನು?

ಉಂಟು ನೀನಾಹವದೊಳಗೆ ಗೆಲ
ಲೆಂಟೆದೆಯಲಾ ನಿನ್ನ ಹೋಲುವ
ರುಂಟೆ ವೀರರು ಕೌರವೇಂದ್ರನ ಬಹಳ ಕಟಕದಲಿ
ಟೆಂಟಣಿಸದಿದಿರಾಗು ನಿನ್ನಯ
ಸುಂಟಿಗೆಯನಿತ್ತಖಿಳ ಭೂತದ
ನಂಟನರ್ಜುನನೆನಿಸಿಕೊಂಬೆನು ಕರ್ಣ ಕೇಳೆಂದ (ವಿರಾಟ ಪರ್ವ, ೯ ಸಂಧಿ, ೧೮ ಪದ್ಯ)

ತಾತ್ಪರ್ಯ:
ನಿಜ ಕರ್ಣ ನಿನ್ನ ಮಾತು ನಿಜ, ಕೌರವನ ಸೈನ್ಯದಲ್ಲಿ ಯುದ್ಧವನ್ನು ಗೆಲ್ಲಬಲ್ಲ ಎಂಟೆದೆ ವೀರನು ನಿನ್ನನ್ನು ಬಿಟ್ಟು ಇನ್ನಾವನಿದ್ದಾನೆ, ಹಿಂಜರಿಯದೆ ನಿಲ್ಲು, ನಿನ್ನ ಹೃದಯವನ್ನು ಕೊಟ್ಟು ಭೂತಗಣದ ನಂಟನೆಮ್ದು ಹೊಗಳಿಸಿಕೊಳ್ಳುತ್ತೇನೆ ಎಂದು ಅರ್ಜುನನು ಹೇಳಿದನು.

ಅರ್ಥ:
ಉಂಟು: ಅಹುದು; ಆಹವ: ಯುದ್ಧ; ಗೆಲು: ಜಯ; ಹೋಲು: ಸದೃಶವಾಗು; ವೀರ: ಶೂರ; ಬಹಳ: ತುಂಬ; ಕಟಕ: ಸೈನ್ಯ; ಟೆಂಟಣಿಸು: ನಡುಗು; ಇದಿರು: ಎದುರು; ಸುಂಟಿ: ಹೃದಯ; ಅಖಿಳ: ಎಲ್ಲಾ; ಭೂತ: ಜೀವರಾಶಿ; ನಂಟ: ಸಂಬಂಧಿಕ; ಕೇಳು: ಆಲಿಸು; ಎಂಟೆದೆ: ಶೂರ;

ಪದವಿಂಗಡಣೆ:
ಉಂಟು +ನೀನ್+ಆಹವದೊಳಗೆ+ ಗೆಲಲ್
ಎಂಟೆದೆಯಲಾ +ನಿನ್ನ +ಹೋಲುವರ್
ಉಂಟೆ +ವೀರರು +ಕೌರವೇಂದ್ರನ +ಬಹಳ +ಕಟಕದಲಿ
ಟೆಂಟಣಿಸದ್+ಇದಿರಾಗು +ನಿನ್ನಯ
ಸುಂಟಿಗೆಯನಿತ್+ಅಖಿಳ +ಭೂತದ
ನಂಟನ್+ಅರ್ಜುನನ್+ಎನಿಸಿಕೊಂಬೆನು +ಕರ್ಣ +ಕೇಳೆಂದ

ಅಚ್ಚರಿ:
(೧) ಕರ್ಣನನ್ನು ಹಂಗಿಸುವ ಪರಿ – ಉಂಟು ನೀನಾಹವದೊಳಗೆ ಗೆಲಲೆಂಟೆದೆಯಲಾ ನಿನ್ನ ಹೋಲುವ
ರುಂಟೆ ವೀರರು

ಪದ್ಯ ೨೪: ಅರ್ಜುನನು ಗಂಧರ್ವರಿಗೆ ಏನು ಹೇಳಿದ?

ಮೆಟ್ಟಿ ಹೆಣನನು ಖಚರಬಲ ಹುರಿ
ಗಟ್ಟಿ ತಲೆವರಿಗೆಯಲಿ ಪಾರ್ಥನ
ಕಟ್ಟಳವಿಯಲಿ ಚೂರಿಸಿದರುಬ್ಬಣದ ಮೊನೆಗಳಲಿ
ದಿಟ್ಟರಹಿರೋ ಕೌರವೇಂದ್ರನ
ಕಟ್ಟಿದಾತನ ಕರೆಯಿ ನಿಮ್ಮನು
ಮುಟ್ತಿದೊಡೆ ನೃಪನಾಣೆಯೆನುತೊಡಹಾಯ್ಸಿದನು ರಥವ (ಅರಣ್ಯ ಪರ್ವ, ೨೧ ಸಂಧಿ, ೨೪ ಪದ್ಯ)

ತಾತ್ಪರ್ಯ:
ಗಂಧರ್ವರು ಅತಿಶಯ ಧೈರ್ಯದಿಂದ ಒಂದಾಗಿ ಹೆಣಗಳನ್ನು ಮೆಟ್ಟಿ, ತಲೆಯನ್ನೇ ಮರೆಮಾಡಿ, ಅರ್ಜುನನಿಗೆ ಅತಿಹತ್ತಿರ ಬಂದು, ಉದ್ದನೆಯ ಮಚ್ಚುಗಳಿಂದ ಆಕ್ರಮಿಸಿದರು. ಅರ್ಜುನನು ನೀವು ನಿಜಕ್ಕೂ ವೀರರು ಧೀರರು, ನಿಮ್ಮನ್ನು ಧರ್ಮಜನಾಣೆ ಮುಟ್ಟುವುದಿಲ್ಲ. ಕೌರವನನ್ನು ಸೆರೆಹಿಡಿದವನನ್ನು ಕರೆಯಿರಿ ಎನ್ನುತ್ತಾ ರಥವನ್ನು ನಡೆಸಿದನು.

ಅರ್ಥ:
ಮೆಟ್ಟು: ತುಳಿತ; ಹೆಣ: ಮೃತದೇಹ; ಖಚರ: ಗಂಧರ್ವ; ಹುರಿ: ಕಟ್ಟು, ಪಾಶ; ಕಟ್ಟು: ಬಂಧಿಸು; ತಲೆ: ಶಿರ; ಕಟ್ಟಳೆ: ನಿಯಮ; ಉಬ್ಬಣ: ಚೂಪಾದ ಆಯುಧ; ಮೊನೆ:ಹರಿತವಾದುದು; ದಿಟ್ಟ: ಸಾಹಸಿ; ಕರೆ: ಬರೆಮಾಡು; ಮುಟ್ಟು: ಸೋಕು; ನೃಪ: ರಾಜ; ಆಣೆ: ಪ್ರಮಾಣ; ಹಾಯಿಸು: ಓಡಿಸು; ರಥ: ಬಂಡಿ;

ಪದವಿಂಗಡಣೆ:
ಮೆಟ್ಟಿ +ಹೆಣನನು +ಖಚರ+ಬಲ+ ಹುರಿ
ಗಟ್ಟಿ+ ತಲೆವರಿಗೆಯಲಿ +ಪಾರ್ಥನ
ಕಟ್ಟಳವಿಯಲಿ +ಚೂರಿಸಿದರ್+ಉಬ್ಬಣದ +ಮೊನೆಗಳಲಿ
ದಿಟ್ಟರಹಿರೋ +ಕೌರವೇಂದ್ರನ
ಕಟ್ಟಿದಾತನ+ ಕರೆಯಿ+ ನಿಮ್ಮನು
ಮುಟ್ಟಿದೊಡೆ +ನೃಪನಾಣೆ+ಎನುತ್+ಒಡಹಾಯ್ಸಿದನು +ರಥವ

ಅಚ್ಚರಿ:
(೧) ಮೆಟ್ತಿ, ಗಟ್ಟಿ, ಕಟ್ಟಿ, ಮುಟ್ಟಿ – ಪ್ರಾಸ ಪದಗಳು

ಪದ್ಯ ೩: ದುಶ್ಯಾಸನು ಕರ್ಣಾದಿಯರಿಗೆ ಏನು ಹೇಳಿದ?

ರವಿಯುದಯದಲಿ ಕೌರವೇಂದ್ರನ
ಭವನಕೈತಂದನು ಕುಠಾರರ
ಜವಳಿಯನು ಕರೆಸಿದನು ರಾಧಾಸುತನ ಸೌಬಲನ
ಅವನಿಪತಿ ಗಾಂಧಾರಿಯರು ಪಾಂ
ಡವರ ಮನ್ನಿಸಿ ಕಳುಹಿದರು ತ
ಮ್ಮವನಿಗೈದಿದರೆಂದನಾ ದುಶ್ಯಾಸನನು ನಗುತ (ಸಭಾ ಪರ್ವ, ೧೭ ಸಂಧಿ, ೩ ಪದ್ಯ)

ತಾತ್ಪರ್ಯ:
ಒಂದು ದಿನ ಉದಯಕಾಲದಲ್ಲಿ ದುಶ್ಯಾಸನನು ದುರ್ಯೋಧನನ ಭವನಕ್ಕೆ ಬಂದು ದುಷ್ಟರ ಜೋಡಿಗಳಾದ ಶಕುನಿ ಮತ್ತು ಕರ್ಣನನ್ನು ಕರೆಸಿದನು. ನಮ್ಮ ತಂದೆ ತಾಯಿ ಇಬ್ಬರು ಪಾಂಡವರನ್ನು ಮನ್ನಿಸಿ ಅವರು ಸೋತುದೆಲ್ಲವನ್ನೂ ಕೊಟ್ಟುಬಿಟ್ಟರು ಎಂದು ನಗುತ್ತಾ ಹೇಳಿದನು.

ಅರ್ಥ:
ರವಿ: ಸೂರ್ಯ; ಉದಯ: ಹುಟ್ಟು; ಭವನ: ಆಲಯ; ಐತಂದು: ಬಂದು; ಕುಠಾರ: ಕ್ರೂರಿ; ಜವಳಿ: ಜೋಡಿ; ಕರೆಸು: ಬರೆಮಾಡು; ಸುತ: ಮಗ; ರಾಧಾಸುತ: ಕರ್ಣ; ಸೌಬಲ: ಶಕುನಿ; ಅವನಿಪತಿ: ರಾಜ; ಮನ್ನಿಸು: ದಯಪಾಲಿಸು, ಅನುಗ್ರಹಿಸು; ಕಳುಹು: ಬೀಳ್ಕೊಡು; ಅವನಿ: ಭೂಮಿ; ನಗು: ಸಂತಸ; ಐದು: ಹೋಗಿಸೇರು;

ಪದವಿಂಗಡಣೆ:
ರವಿ+ಉದಯದಲಿ +ಕೌರವೇಂದ್ರನ
ಭವನಕ್+ಐತಂದನು +ಕುಠಾರರ
ಜವಳಿಯನು +ಕರೆಸಿದನು +ರಾಧಾಸುತನ+ ಸೌಬಲನ
ಅವನಿಪತಿ+ ಗಾಂಧಾರಿಯರು +ಪಾಂ
ಡವರ +ಮನ್ನಿಸಿ +ಕಳುಹಿದರು+ ತಮ್ಮ್
ಅವನಿಗ್+ಐದಿದರ್+ಎಂದನಾ +ದುಶ್ಯಾಸನನು+ ನಗುತ

ಅಚ್ಚರಿ:
(೧) ಕುಠಾರರ ಜವಳಿ – ಕರ್ಣ ಶಕುನಿಯರನ್ನು ಕರೆದ ಪರಿ
(೨) ಇವರ ದುಷ್ಟತನವು ಮತ್ತೆ ಹುಟ್ಟಲಾರಂಭಿಸಿತು ಎಂದು ಸೂಚಿಸಲು ರವಿಯುದಯ ಬಳಸಿರಬಹುದೇ?

ಪದ್ಯ ೨೭: ಮಿತ್ರಭಾವದಿಂದ ಯುಧಿಷ್ಠಿರನ ಜೊತೆ ಯಾರು ಸೇರಿದರು?

ವೀರ ಪಾರ್ಥನಿಗಿರುಳು ಸೋತಂ
ಗಾರವರ್ಮನು ಗಗನಚರ ಪರಿ
ವಾರ ಬಹಳದಿ ಬಂದು ಕಂಡನು ಕಲಿ ಯುಧಿಷ್ಠಿರನ
ಕೌರವೇಂದ್ರನ ನೋಯಿಸಿದ ಧುರ
ಧೀರ ಸಾಹಸ ಚಿತ್ರಸೇನನು
ದಾರ ಗುಣನಿಧಿ ಬಂದು ಕಂಡನು ಮಿತ್ರಭಾವದಲಿ (ಉದ್ಯೋಗ ಪರ್ವ, ೧೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ರಾತ್ರಿಯ ಯುದ್ಧದಲ್ಲಿ ಅರ್ಜುನನಿಗೆ ಸೋತಿದ್ದ ಗಂಧರ್ವ ಅಂಗಾರವರ್ಮನು ಹೆಚ್ಚಿನ ಪರಿವಾರದೊಡನೆ ಧರ್ಮಜನನನ್ನು ಕಂಡು ಅವನ ಜೊತೆ ಸೇರಿದನು. ಘೋಷಯಾತ್ರೆಯಲ್ಲಿ ಕೌರವನನ್ನು ಸೆರೆ ಹಿಡಿದಿದ್ದ ಚಿತ್ರಸೇನನು ಮಿತ್ರಭಾವದಿಂದ ಪಾಂಡವರ ಜೊತೆಗೂಡಿದನು.

ಅರ್ಥ:
ವೀರ: ಶೂರ; ಪಾರ್ಥ: ಅರ್ಜುನ; ಇರುಳು: ರಾತ್ರಿ; ಸೋತು: ಪರಾಜಯ; ಗಗನಚರ: ಆಕಾಶದಲ್ಲಿ ಚಲಿಸುವ; ಗಗನ: ಆಕಾಶ; ಚರ: ಚಲಿಸುವ; ಪರಿವಾರ: ಕುಟುಂಬ, ಸಂಸಾರ; ಬಹಳ: ತುಂಬ;ಬಂದು: ಆಗಮಿಸಿ; ಕಂಡು: ನೋಡಿ; ಕಲಿ: ಶೂರ; ನೋಯಿಸು: ಬೇನೆ, ಅಳಲು; ಧುರ: ಯುದ್ಧ, ಕಾಳಗ; ಧೀರ: ಶೂರ; ಸಾಹಸ: ಪರಾಕ್ರಮ, ಶೌರ್ಯ; ಉದಾರ: ಧಾರಾಳ ಸ್ವಭಾವದ; ಗುಣ: ಸ್ವಭಾವ; ನಿಧಿ: ಐಶ್ವರ್ಯ; ಮಿತ್ರ: ಸ್ನೇಹ; ಭಾವ: ಭಾವನೆ;

ಪದವಿಂಗಡಣೆ:
ವೀರ+ ಪಾರ್ಥನಿಗ್+ಇರುಳು +ಸೋತ್+
ಅಂಗಾರವರ್ಮನು +ಗಗನಚರ+ ಪರಿ
ವಾರ +ಬಹಳದಿ +ಬಂದು +ಕಂಡನು +ಕಲಿ +ಯುಧಿಷ್ಠಿರನ
ಕೌರವೇಂದ್ರನ +ನೋಯಿಸಿದ+ ಧುರ
ಧೀರ +ಸಾಹಸ +ಚಿತ್ರಸೇನನ್
ಉದಾರ +ಗುಣನಿಧಿ+ ಬಂದು +ಕಂಡನು +ಮಿತ್ರ+ಭಾವದಲಿ

ಅಚ್ಚರಿ:
(೧) ವೀರ, ಧೀರ, ಕಲಿ – ಸಮನಾರ್ಥಕ ಪದ
(೨) ಬಂದು ಕಂಡನು – ೩, ೬ ಸಾಲಿನಲ್ಲಿ ಬರುವ ಪದಗಳು

ಪದ್ಯ ೧೬: ದುರ್ಯೋಧನನು ಕರ್ಣನನ್ನು ಹೇಗೆ ನಡೆಸಿಕೊಂಡನು?

ಹಲವು ಮಾತೇನಖಿಳಜನವೆ
ನ್ನುಳಿವ ಸಹಿಸದು ಕೌರವೇಶ್ವರ
ನೊಲವು ತಪ್ಪಿದ ಬಳಿಕ ಜಗದೊಳಗಾಪ್ತಜನವಿಲ್ಲ
ಸಲಹಿದನು ಮನ್ನಣೆಯೊಳೆನಗ
ಗ್ಗಳಿಕೆಯಲ್ಲದೆ ಹೀನವೃತ್ತಿಯ
ಬಳಸಿ ನಡೆಸನು ಕೌರವೇಂದ್ರನನೆಂತು ಮರೆದಪೆನು (ಉದ್ಯೋಗ ಪರ್ವ, ೧೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಇನ್ನು ಹೆಚ್ಚಿನ ಮಾತಿನಿಂದೇನು? ಬಹಳಷ್ಟು ಜನರಿಗೆ ನಾನು ಬದುಕುಳಿವುದು ಇಷ್ಟವಿರಲಿಲ್ಲ, ಅಂತಹ ಸಂದರ್ಭದಲ್ಲಿ ಕೌರವನ ಒಲವು ದೊರೆಯಿತು, ಅವನ ಒಲವು ದೊರೆಯದಿದ್ದರೆ ನನಗೆ ಈ ಜಗತ್ತಿನಲ್ಲಿ ಯಾರೂ ಆಪ್ತರಿರಲಿಲ್ಲ. ನೀನು ಹೇಳಿದಂತೆ ನಾನು ಜೀಯ ಹಸಾದ ಎಂದು ಅವನನ್ನು ಓಲೈಸಲಿಲ್ಲ, ಬಾಯ್ದಂಬುಲಕ್ಕೆ ಕೈಯೊಡ್ಡಲಿಲ್ಲ. ಅವನು ನನ್ನನ್ನು ಮನ್ನಣೆಯಿಂದ ಕಾಪಾಡಿದ, ನನ್ನನ್ನು ಎತ್ತಿ ಹಿಡಿದನೇ ಹೊರತು ಹೀನ ವೃತ್ತಿಯಿಂದ ನಡೆಸಲಿಲ್ಲ ಎಂದು ಕರ್ಣನು ಕೃಷ್ಣನಿಗೆ ಹೇಳಿದನು.

ಅರ್ಥ:
ಹಲವು: ಬಹಳ; ಮಾತು: ನುಡಿ; ಅಖಿಳ: ಎಲ್ಲಾ, ಸರ್ವ; ಜನ: ಮನುಷ್ಯ, ಗುಂಪು; ಉಳಿವು: ಬದುಕು, ಜೀವಿಸು; ಸಹಿಸು: ತಾಳ್ಮೆ, ಅನುಭವಿಸು; ಒಲವು: ಪ್ರೀತಿ; ತಪ್ಪಿದ: ಕಳಚಿದ; ಬಳಿಕ: ನಂತರ; ಜಗ: ಪ್ರಪಂಚ; ಆಪ್ತ: ಹತ್ತಿರ; ಸಲಹು: ಕಾಪಾಡು, ರಕ್ಷಿಸು; ಮನ್ನಣೆ: ಗೌರವ; ಅಗ್ಗಳಿಕೆ: ದೊಡ್ಡಸ್ತಿಕೆ, ಶ್ರೇಷ್ಠತೆ; ಹೀನ: ಕೀಳು, ಕಳಪೆಯಾದುದು; ವೃತ್ತಿ: ಕೆಲಸ; ಬಳಸು: ಉಪಯೋಗಿಸು; ಮರೆ: ಹಿಂಭಾಗ, ಹಿಂಬದಿ, ನೆನಪಿನಿಂದ ದೂರ ಮಾಡು;

ಪದವಿಂಗಡಣೆ:
ಹಲವು +ಮಾತೇನ್+ಅಖಿಳ+ಜನವೆನ್
ಉಳಿವ +ಸಹಿಸದು +ಕೌರವೇಶ್ವರನ್
ಒಲವು +ತಪ್ಪಿದ +ಬಳಿಕ +ಜಗದೊಳಗ್+ಆಪ್ತ+ಜನವಿಲ್ಲ
ಸಲಹಿದನು +ಮನ್ನಣೆಯೊಳ್+ಎನಗ್
ಅಗ್ಗಳಿಕೆಯಲ್ಲದೆ+ ಹೀನ+ವೃತ್ತಿಯ
ಬಳಸಿ +ನಡೆಸನು +ಕೌರವೇಂದ್ರನನ್+ಎಂತು +ಮರೆದಪೆನು

ಅಚ್ಚರಿ:
(೧) ಹಲವು, ಒಲವು – ಪ್ರಾಸ ಪದಗಳು
(೨) ಕೌರವೇಶ್ವರ, ಕೌರವೇಂದ್ರ – ದುರ್ಯೋಧನನನ್ನು ಉದ್ದೇಶಿಸುವ ಬಗೆ