ಪದ್ಯ ೧೨: ಸೈರಂಧ್ರಿ ಏಕೆ ಕೋಪಗೊಂಡಳು?

ತರುಣಿ ಬಾ ಕುಳ್ಳಿರು ಮದಂತಃ
ಕರಣದೆಡರಡಗಿತ್ತು ಕಾಮನ
ದುರುಳುತನಕಿನ್ನಂಜುವೆನೆ ನೀನೆನಗೆ ಬಲವಾಗೆ
ಬಿರುದ ಕಟ್ಟುವೆನಿಂದುವಿಗೆ ಮಧು
ಕರಗೆ ಕೋಗಿಲೆಗೆಂದು ಖಳನ
ಬ್ಬರಿಸಿ ನುಡಿಯಲು ಖಾತಿಗೊಂಡಿಂತೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೧೨ ಪದ್ಯ)

ತಾತ್ಪರ್ಯ:
ತರುಣಿ, ಬಾ, ಇಲ್ಲಿ ಆಸೀನಳಾಗು, ನನ್ನ ಮನಸ್ಸಿನ ಆತಂಕವಉ ಕೊನೆಗೊಂಡಿದೆ, ನೀನು ನನಗೆ ಬೆಂಬಲವಾದರೆ, ಕಾಮನ ದುಷ್ಟತನಕ್ಕೆ ಹೆದರುವ ಗೋಜಿಲ್ಲ. ಚಂದ್ರ, ದುಂಬಿ, ಕೋಗಿಲೆಗಳಿಗೆ ಎದುರಾಗಿ ನಾನು ವಿಜಯಧ್ವಜವನ್ನು ಹಾರಿಸುತ್ತೇನೆ ಎಂದು ಕೀಚಕನು ಹೇಳಲು, ಕೋಪಗೊಂಡ ಸೈರಂಧ್ರಿ ಹೀಗೆ ನುಡಿದಳು.

ಅರ್ಥ:
ತರುಣಿ: ಹೆಣ್ಣು, ಸ್ತ್ರೀ; ಕುಳ್ಳಿರು: ಆಸೀನನಾಗು; ಅಂತಃಕರಣ: ಒಳಮನಸ್ಸು; ಎಡರು: ಕಳವಳ; ಅಡಗಿತು: ಮುಚ್ಚಿತು; ಕಾಮ: ಮನ್ಮಥ; ದುರುಳ: ದುಷ್ಟ; ಅಂಜು: ಹೆದರು; ಬಲ: ಬೆಂಬಲ; ಬಿರುದು: ಗೌರವ ಸೂಚಕ ಪದ; ಕಟ್ಟು: ಬಂಧಿಸು; ಇಂದು: ಚಂದ್ರ; ಮಧುಕರ: ದುಂಬಿ; ಕೋಗಿಲೆ: ಪಿಕ; ಅಬ್ಬರ: ಜೋರಾದ ಕೂಗು; ನುಡಿ: ಮಾತಾಡು; ಖಾತಿ: ಕೋಪ, ಕ್ರೋಧ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ತರುಣಿ +ಬಾ +ಕುಳ್ಳಿರು +ಮದ್+ಅಂತಃ
ಕರಣದ್+ ಎಡರ್+ಅಡಗಿತ್ತು +ಕಾಮನ
ದುರುಳುತನಕಿನ್ನ್+ಅಂಜುವೆನೆ+ ನೀನೆನಗೆ +ಬಲವಾಗೆ
ಬಿರುದ +ಕಟ್ಟುವೆನ್+ಇಂದುವಿಗೆ+ ಮಧು
ಕರಗೆ+ ಕೋಗಿಲೆಗೆಂದು +ಖಳನ್
ಅಬ್ಬರಿಸಿ+ ನುಡಿಯಲು+ ಖಾತಿಗೊಂಡ್+ಇಂತೆಂದಳ್+ಇಂದುಮುಖಿ

ಅಚ್ಚರಿ:
(೧) ತರುಣಿ, ಇಂದುಮುಖಿ – ದ್ರೌಪದಿಯನ್ನು ಕರೆದ ಪರಿ

ಪದ್ಯ ೫೫: ಮನ್ಮಥನು ಯಾರ ಕೊಲೆಗೆ ಅಣಿಯಾದನು?

ಹಾಸಿದೆಳೆದಳಿರೊಣಗಿದುದು ಹೊಗೆ
ಸೂಸಿದುದು ಸುಯಿಲಿನಲಿ ಮೆಲ್ಲನೆ
ಬೀಸುತಿರೆ ಸುಳಿವಾಳೆಯೆಲೆ ಬಾಡಿದುದು ಝಳಹೊಯ್ದು
ಆ ಶಶಿಯ ಕೋಗಿಲೆಯ ತುಂಬಿಯ
ನಾ ಸರೋಜವ ಮಲ್ಲಿಗೆಯ ಕೈ
ವೀಸಿದನು ಕುಸುಮಾಸ್ತ್ರನಾ ಕೀಚಕನ ಕಗ್ಗೊಲೆಗೆ (ವಿರಾಟ ಪರ್ವ, ೨ ಸಂಧಿ, ೫೫ ಪದ್ಯ)

ತಾತ್ಪರ್ಯ:
ಹಾಸಿದ್ದ ಎಳೆಯ ಚಿಗುರು ಕೀಚಕನ ಮೈಯ ಬಿಸಿಗೆ ಒಣಗಿ ಹೋಯಿತು, ಅವನು ಉಸಿರು ಬಿಟ್ಟಾಗ ಹೊಗೆ ಹೊರಹೊಮ್ಮಿತು, ಸುಳಿ ಬಾಳೆಯೆಲೆಯಿಂದ ಬೀಸಿದರೆ ಅವನ ಮೈ ಝಳಕ್ಕೆ ಅದು ಬಾಡಿ ಹೋಯಿತು, ಚಂದ್ರ, ಕೋಗಿಲೆ, ದುಂಬಿ, ಕನ್ನೈದಿಲೆ, ಮಲ್ಲಿಗೆಗಳನ್ನು ಕೈಬೀಸಿ ಕರೆದು ಮನ್ಮಥನು ಕೀಚಕನ ಕಗ್ಗೊಲೆಗೆ ಅಣಿಯಾದನು.

ಅರ್ಥ:
ಹಾಸು: ಹರಡು; ಎಲೆ: ಪರ್ಣ; ಒಣಗು: ಬಾಡು; ಹೊಗೆ: ಧೂಮ; ಸೂಸು: ಹೊರಹೊಮ್ಮು; ಸುಯಿಲು: ನಿಟ್ಟುಸಿರು; ಮೆಲ್ಲನೆ: ನಿಧಾನ; ಬೀಸು: ಹರಹು; ಸುಳಿ: ಆವರಿಸು, ಮುತ್ತು; ಬಾಳೆ: ಕದಳಿ; ಝಳ: ಕಾಂತಿ; ಶಶಿ: ಚಂದ್ರ; ಕೋಗಿಲೆ: ಪಿಕ; ತುಂಬಿ: ದುಂಬಿ, ಜೇನು ನೋಣ; ಸರೋಜ: ಕಮಲ; ಕೈವೀಸು: ಕೈಬೀಸಿ ಕರೆ; ಕುಸುಮ: ಹೂವು; ಅಸ್ತ್ರ: ಶಸ್ತ್ರ, ಆಯುಧ; ಕಗ್ಗೊಲೆ: ಭೀಕರವಾದ ವಧೆ;

ಪದವಿಂಗಡಣೆ:
ಹಾಸಿದ್+ಎಳೆದಳಿರ್+ಒಣಗಿದುದು +ಹೊಗೆ
ಸೂಸಿದುದು +ಸುಯಿಲಿನಲಿ +ಮೆಲ್ಲನೆ
ಬೀಸುತಿರೆ+ ಸುಳಿ+ಬಾಳೆಯೆಲೆ +ಬಾಡಿದುದು +ಝಳಹೊಯ್ದು
ಆ +ಶಶಿಯ+ ಕೋಗಿಲೆಯ+ ತುಂಬಿಯನ್
ಆ+ ಸರೋಜವ+ ಮಲ್ಲಿಗೆಯ +ಕೈ
ವೀಸಿದನು +ಕುಸುಮಾಸ್ತ್ರನ್+ಆ+ ಕೀಚಕನ +ಕಗ್ಗೊಲೆಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಹಾಸಿದೆಳೆದಳಿರೊಣಗಿದುದು ಹೊಗೆಸೂಸಿದುದು ಸುಯಿಲಿನಲಿ ಮೆಲ್ಲನೆ
ಬೀಸುತಿರೆ ಸುಳಿವಾಳೆಯೆಲೆ ಬಾಡಿದುದು ಝಳಹೊಯ್ದು

ಪದ್ಯ ೧೧: ಊರ್ವಶಿಯ ಸ್ನೇಹಿತೆಯರ ಬಳಿ ಯಾರು ಬಂದರು?

ಮೆಲುನುಡಿಗೆ ಗಿಣಿ ಹೊದ್ದಿದವು ಸರ
ದುಲಿಗೆ ಕೋಗಿಲೆಯೌಕಿದವು ಪರಿ
ಮಳದ ಪಸರಕೆ ತೂಳಿದವು ತುಂಬಿಗಳು ಡೊಂಬಿಯಲಿ
ಹೊಳೆವ ಮುಖಕೆ ಚಕೋರ ಚಯವಿ
ಟ್ಟಳಿಸಿದವು ನೇವುರದ ಬೊಬ್ಬೆಗೆ
ಸಿಲುಕಿದವು ಹಂಸೆಗಳು ಕಮಲಾನನೆಯ ಕೆಳದಿಯರ (ಅರಣ್ಯ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಊರ್ವಶಿಯ ಕೆಳದಿಯರ ಮೆಲುನುಡಿಗಳನ್ನು ಕೇಳಿ, ಗಿಣಿಗಳು ಅವರ ಬಳಿಗೆ ಬಂದವು, ಅವರ ಸಂಗೀತವನ್ನು ಕೇಳಿ ಕೋಗಿಲೆಗಳು ಹತ್ತಿರಕ್ಕೆ ಬಂದವು, ಅವರ ಅಂಗದ ಪರಿಮಳವನ್ನು ಮೂಸಿ ದುಂಬಿಗಳ ಹಿಂಡುಗಳು ಅವರ ಹತ್ತಿರಕ್ಕೆ ಬಂದವು, ಅವರ ಹೊಳೆಯುವ ಮುಖಗಳನ್ನು ನೋಡಿ ಚಂದ್ರ ಬಂದನೆಂದು ಚಕೋರ ಪಕ್ಷಿಗಳು ಹಾರಿ ಬಂದವು, ಅವರ ಕಾಲಂದುಗೆಯ ಸದ್ದಿಗೆ ಹಂಸಗಳು ಊರ್ವಶಿಯ ಸ್ನೇಹಿತೆಯರ ಬಳಿ ಬಂದವು.

ಅರ್ಥ:
ಮೆಲುನುಡಿ: ಮೃದು ವಚನ; ಗಿಣಿ: ಶುಕ; ಹೊದ್ದು: ಹೊಂದು, ಸೇರು; ಸರ: ಸ್ವರ, ದನಿ; ಉಲಿ: ಧ್ವನಿಮಾಡು, ಕೂಗು; ಔಕು: ಗುಂಪು, ಒತ್ತು; ಪರಿಮಳ: ಸುಗಂಧ; ಪಸರು: ಹರಡು; ತೂಳು: ಬೆನ್ನಟ್ಟು, ಹಿಂಬಾಲಿಸು; ತುಂಬಿ: ದುಂಬಿ, ಜೀನು; ಡೊಂಬಿ: ಗುಂಪು, ಸಮೂಹ; ಹೊಳೆ: ಪ್ರಕಾಶ; ಮುಖ: ಆನನ; ಚಕೋರ: ಚಾತಕ ಪಕ್ಷಿ; ಚಯ: ಕಾಂತಿ; ಇಟ್ಟಳಿಸು: ದಟ್ಟವಾಗು, ಒತ್ತಾಗು; ನೇವುರ: ಅಂದುಗೆ, ನೂಪುರ; ಬೊಬ್ಬೆ: ಜೋರಾದ ಶಬ್ದ; ಸಿಲುಕು: ಬಂಧನಕ್ಕೊಳಗಾಗು; ಹಂಸ: ಮರಾಲ; ಕಮಲಾನನೆ: ಕಮಲದಂತ ಮುಖ; ಕೆಳದಿ: ಗೆಳತಿ, ಸ್ನೇಹಿತೆ;

ಪದವಿಂಗಡಣೆ:
ಮೆಲು+ನುಡಿಗೆ+ ಗಿಣಿ +ಹೊದ್ದಿದವು +ಸರದ್
ಉಲಿಗೆ+ ಕೋಗಿಲೆ+ಔಕಿದವು+ ಪರಿ
ಮಳದ +ಪಸರಕೆ+ ತೂಳಿದವು +ತುಂಬಿಗಳು+ ಡೊಂಬಿಯಲಿ
ಹೊಳೆವ +ಮುಖಕೆ +ಚಕೋರ +ಚಯವಿ
ಟ್ಟಳಿಸಿದವು ನೇವುರದ +ಬೊಬ್ಬೆಗೆ
ಸಿಲುಕಿದವು +ಹಂಸೆಗಳು+ ಕಮಲಾನನೆಯ+ ಕೆಳದಿಯರ

ಅಚ್ಚರಿ:
(೧) ಹೊದ್ದಿದವು, ಔಕಿದವು, ತೂಳಿದವು, ವಿಟ್ಟಳಿಸಿದವು, ಸಿಲುಕಿದವು – ಪದಗಳ ಬಳಕೆ
(೨) ಗಿಣಿ, ಕೋಗಿಲೆ, ತುಂಬಿ, ಚಕೋರ , ಹಂಸೆ – ಉಪಮಾನಕ್ಕೆ ಬಳಸಿದುದು

ಪದ್ಯ ೧೨೪: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೩?

ಹೊಲಬುದಪ್ಪಿದ ಹುಲ್ಲೆ ಬೇಡನ
ಬಲೆಗೆ ಬಿದ್ದಂತಾದೆನೈ ಬಲು
ಹಳುವದಲಿ ತಾಯ್ಬಿಸುಟ ಶಿಶು ತಾನಾದೆನೆಲೆ ಹರಿಯೆ
ಕೊಲುವನೈ ಕಾಗೆಗಳಕಟ ಕೋ
ಗಿಲೆಯ ಮರಿಯನು ಕೃಷ್ಣ ಕರುಣಾ
ಜಲಧಿಯೇ ಕೈಗಾಯಬೇಕೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೨೪ ಪದ್ಯ)

ತಾತ್ಪರ್ಯ:
ದಾರಿ ತಪ್ಪಿದ ಜಿಂಕೆಯು ಬೇಡನು ಹಾಸಿದ ಬಲೆಯಲ್ಲಿ ಸಿಕ್ಕುಬೀಳುವ ಪರಿ ನನ್ನ ಸ್ಥಿತಿಯಾಗಿದೆ, ತಾಯಿಯು ಕಾಡಿನಲ್ಲಿ ಎಸೆದು ಹೋದ ಮಗುವಿನಂತೆ ನನ್ನ ಸ್ಥಿತಿಯಾಗಿದೆ, ಕಾಗೆಗಳು ಕೋಗಿಲೆಯ ಮರಿಯನ್ನು ಕೊಲ್ಲುತ್ತಿವೆ, ಕರುಣಾಸಮುದ್ರನಾದ ಶ್ರೀಕೃಷ್ಣನೇ ನೀನೇ ನನ್ನನ್ನು ರಕ್ಷಿಸಬೇಕೆಂದು ಕೃಷ್ಣನಲ್ಲಿ ಮೊರೆಯಿಟ್ಟಳು ದ್ರೌಪದಿ.

ಅರ್ಥ:
ಹೊಲಬು: ದಾರಿ, ಪಥ; ತಪ್ಪು: ಸರಿಯಲ್ಲದ; ಹುಲ್ಲೆ: ಜಿಂಕೆ; ಬೇಡ: ಬೇಟೆಯಾಡುವವ; ಬಲೆ: ಜಾಲ, ಬಂಧನ; ಬಿದ್ದು: ಬೀಳು; ಬಲು: ಬಹಳ; ಹಳುವ: ಕಾಡು; ತಾಯಿ: ಮಾತೆ; ಬಿಸುಟು: ಬಿಸಾಡಿ, ಹೊರಹಾಕು; ಶಿಶು: ಮಗು; ಹರಿ: ಕೃಷ್ಣ; ಕೊಲು: ಸಾಯಿಸು; ಕಾಗೆ: ಕಾಕಾ; ಕೋಗಿಲೆ: ಪಿಕ; ಮರಿ: ಎಳೆಯದು, ಕೂಸು; ಕರುಣಾಜಲಧಿ: ದಯಾಸಾಗರ; ಕೈಗಾಯು: ಕಾಪಾಡು; ಒರಲು: ಗೋಳಿಡು; ತರಳೆ: ಯುವತಿ;

ಪದವಿಂಗಡಣೆ:
ಹೊಲಬು+ ತಪ್ಪಿದ +ಹುಲ್ಲೆ +ಬೇಡನ
ಬಲೆಗೆ+ ಬಿದ್ದಂತಾದೆನೈ +ಬಲು
ಹಳುವದಲಿ +ತಾಯ್+ಬಿಸುಟ +ಶಿಶು +ತಾನಾದೆನೆಲೆ+ ಹರಿಯೆ
ಕೊಲುವನೈ+ ಕಾಗೆಗಳ್+ಅಕಟ+ ಕೋ
ಗಿಲೆಯ +ಮರಿಯನು +ಕೃಷ್ಣ +ಕರುಣಾ
ಜಲಧಿಯೇ +ಕೈಗಾಯಬೇಕೆಂದ್+ಒರಲಿದಳು+ ತರಳೆ

ಅಚ್ಚರಿ:
(೧) ಉಪಮಾನಗಳ ಬಳಕೆ – ಹೊಲಬುದಪ್ಪಿದ ಹುಲ್ಲೆ ಬೇಡನ ಬಲೆಗೆ ಬಿದ್ದಂತಾದೆನೈ; ಬಲು
ಹಳುವದಲಿ ತಾಯ್ಬಿಸುಟ ಶಿಶು ತಾನಾದೆನೆಲೆ; ಕೊಲುವನೈ ಕಾಗೆಗಳಕಟ ಕೋಗಿಲೆಯ ಮರಿಯನು

ಪದ್ಯ ೪: ಏನು ಹೇಳಿ ಶಲ್ಯನು ಸಾರಥಿಯಾಗಲೊಪ್ಪಿದನು?

ಈ ದುರಾಗ್ರಹ ನಿನ್ನ ಚಿತ್ತದೊ
ಳಾದುದೇ ತಪ್ಪೇನು ಕೋಗಿಲೆ
ಯಾದರಿಸಿದಡೆ ಬೇವು ಮಾವಹುದಾದಡೆಮಗೇನು
ಕಾದಿ ಗೆಲುವುದು ಬಾರಿ ಗುರು ಭೀ
ಷ್ಮಾದಿ ಭಟರೇನಾದರೈ ತಾ
ನಾದುದಾಗಲಿ ನಾವು ಸಾರಥಿಯಾದೆವೇಳೆಂದ (ಕರ್ಣ ಪರ್ವ, ೮ ಸಂಧಿ, ೪ ಪದ್ಯ)

ತಾತ್ಪರ್ಯ:
ದುರ್ಯೋಧನ ನಿನಗೇಕೆ ಈ ಮೊಂಡುತನ? ಇದರಲ್ಲಿ ತಪ್ಪೇನು, ಕೋಗಿಲೆಯು ಬೇವನ್ನೇ ಮಾವು ಎಂದು ತಿಳಿದರೆ ನಮಗೇನಂತೆ? ಈ ಕರ್ಣನು ಕಾದಿ ಗೆಲ್ಲುವೆನೆಂದೆ, ಹಾಗಾದರೆ ಭೀಷ್ಮ, ದ್ರೋಣರೇನಾದರು ಇದನ್ನು ಯೋಚಿಸಿದ್ದೀಯ? ಆದುದಾಗಲಿ ನಾನು ಸಾರಥಿಯಾಗಲು ಒಪ್ಪುತ್ತೇನೆ, ಮೇಲೇಳು ಎಂದು ಶಲ್ಯನು ದುರ್ಯೋಧನನಿಗೆ ಹೇಳಿದ.

ಅರ್ಥ:
ದುರಾಗ್ರಹ: ಹಟಮಾರಿತನ, ಮೊಂಡ; ಚಿತ್ತ: ಮನಸ್ಸು; ತಪ್ಪು: ಸರಿಯಿಲ್ಲದ; ಕೋಗಿಲೆ: ಕೋಕಿಲ, ಪಿಕ; ಆದರಿಸಿ: ಗೌರವಿಸು, ಪ್ರೀತಿ; ಮಾವು: ಚೂತ; ಕಾದಿ: ಗೆದ್ದು; ಗೆಲುವು: ಜಯ; ಬಾರಿ: ವಶ, ಅಧೀನ; ಗುರು: ಆಚಾರ್ಯ; ಆದಿ: ಮುಂತಾದ; ಭಟರು: ಸೈನಿಕರು; ಸಾರಥಿ: ರಥವನ್ನು ಓಡಿಸುವವ; ಏಳು: ಮೇಲೇಳು;

ಪದವಿಂಗಡಣೆ:
ಈ +ದುರಾಗ್ರಹ +ನಿನ್ನ +ಚಿತ್ತದೊಳ್
ಆದುದೇ +ತಪ್ಪೇನು +ಕೋಗಿಲೆ
ಆದರಿಸಿದಡೆ +ಬೇವು +ಮಾವಹುದ್+ಆದಡ್+ಎಮಗೇನು
ಕಾದಿ +ಗೆಲುವುದು +ಬಾರಿ +ಗುರು +ಭೀ
ಷ್ಮಾದಿ+ ಭಟರೇನಾದರೈ +ತಾನ್
ಆದುದಾಗಲಿ +ನಾವು +ಸಾರಥಿಯಾದೆವ್+ಏಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೋಗಿಲೆ ಯಾದರಿಸಿದಡೆ ಬೇವು ಮಾವಹುದಾದಡೆಮಗೇನು
(೨) ತಪ್ಪೇನು, ಎಮಗೇನು – ಪ್ರಾಸ ಪದಗಳ ಬಳಕೆ

ಪದ್ಯ ೧೮: ಶಲ್ಯನು ದುರ್ಯೋಧನನ ಹೋಲಿಕೆ ಏಕೆ ಸರಿಯಿಲ್ಲನೆಂದನು?

ಕೋಗಿಲೆಯ ಠಾಯಕ್ಕೆ ಬಂದುದು
ಕಾಗೆಗಳ ಧುರಪಥವದಂತಿರ
ಲಾಗಳಬುಜಾಸನನ ಸಾರಥಿತನವದೇನಾಯ್ತೊ
ಹೋಗಲದು ಸಾರಥ್ಯಕಾಯತ
ವಾಗಿ ಬಂದು ವಿರಿಂಚ ಮಕುಟವ
ತೂಗಿದನು ಹೊಗಳಿದನು ತ್ರಿಪುರ ನಿವಾಸಿಗಳ ಬಲುಹ (ಕರ್ಣ ಪರ್ವ, ೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ದುರ್ಯೋಧನನು ನೀವು ಕರ್ಣನಿಗೆ ಸಾರಥಿಯಾದರೆ ನನ್ನ ಅಭಿಮತವು ಸಿದ್ಧಿಸುವುದೆಂದ್ ಹೇಳುತ್ತಿರಲು, ಶಲ್ಯನು ಇದೇನು ನಿನ್ನ ಮಾತು ಕೋಗಿಲೆಯನ್ನು ಕಾಗೆಗೆ ಹೋಲಿಸುತ್ತಿರುವಂತಾಯಿತು, ನೀನು ಬ್ರಹ್ಮನ ಸಾರಥ್ಯವೇನಾಯಿತೆಂದು ಹೇಳು ಎಂದನು. ಆಗ ದುರ್ಯೋಧನನು ಸರಿ ಆ ಮಾತು ಹಾಗಿರಲಿ, ಬ್ರಹ್ಮನು ಆಗಮಿಸಿ, ದೇವತೆಗಳು ಬಿನ್ನಹಕ್ಕೆ ತನ್ನ ಸಮ್ಮತಿಯನ್ನು ತಲೆದೂಗುವುದರ ಮೂಲಕ ಸೂಚಿಸಿ ತ್ರಿಪುರವಾಸಿಗಳ ಬಳವನ್ನು ಪ್ರಶಂಶಿಸಿದನು.

ಅರ್ಥ:
ಕೋಗಿಲೆ: ಕೋಕಿಲ, ಪಿಕ; ಠಾಯ:ರಾಗಾಲಾಪನೆಯಲ್ಲಿ ಒಂದು ಲಯ; ಬಂದುದು: ಆಗಮಿಸು; ಕಾಗೆ: ಕಾಕ; ದುರ: ಯುದ್ಧ, ಕಾಳಗ; ಪಥ: ಮಾರ್ಗ; ಅಬುಜಾಸನ: ಬ್ರಹ್ಮ; ಅಬುಜ: ತಾವರೆ; ಆಸನ: ಕುಳಿತುಕೊಳ್ಳುವ ಪೀಠ; ಸಾರಥಿ: ರಥವನ್ನು ಓಡಿಸುವವ; ಹೋಗಲದು: ಹಾಗಿರಲಿ; ಆಯತ: ಅಣಿಗೊಳಿಸು; ಬಂದು: ಆಗಮಿಸಿ; ವಿರಿಂಚಿ: ಬ್ರಹ್ಮ; ಮಕುಟ: ಶಿರ; ತೂಗು: ಅಲ್ಲಾಡಿಸು; ಹೊಗಳು: ಪ್ರಶಂಶಿಸು; ತ್ರಿಪುರ: ಮೂರು ಊರುಗಳು; ನಿವಾಸಿ: ವಾಸಿಸುವ ಜನರು; ಬಲುಹ: ಬಲ, ಶಕ್ತಿ;

ಪದವಿಂಗಡಣೆ:
ಕೋಗಿಲೆಯ +ಠಾಯಕ್ಕೆ +ಬಂದುದು
ಕಾಗೆಗಳ +ಧುರಪಥವ್+ಅದಂತಿರಲ್
ಆಗಳ್+ಅಬುಜಾಸನನ +ಸಾರಥಿತನವದ್+ಏನಾಯ್ತೊ
ಹೋಗಲದು +ಸಾರಥ್ಯಕ್+ಆಯತ
ವಾಗಿ +ಬಂದು +ವಿರಿಂಚ +ಮಕುಟವ
ತೂಗಿದನು +ಹೊಗಳಿದನು +ತ್ರಿಪುರ +ನಿವಾಸಿಗಳ +ಬಲುಹ

ಅಚ್ಚರಿ:
(೧) ಅಬುಜಾಸನ, ವಿರಿಂಚ – ಬ್ರಹ್ಮನನ್ನು ಕರೆದ ಬಗೆ
(೨) ಉಪಮಾನದ ಪ್ರಯೋಗ – ಕೋಗಿಲೆಯ ಠಾಯಕ್ಕೆ ಬಂದುದು ಕಾಗೆಗಳ ಧುರಪಥವ್