ಪದ್ಯ ೭: ಭೀಷ್ಮನು ಯಾರ ಬಾಣಗಳಿಗೆ ಹೆದರುವೆನೆಂದನು?

ಹರಿಯ ಕೌಮೋದಕಿಯ ಹೊಯ್ಲನು
ಬೆರಳಲಾನುವೆನಖಿಲ ಕುಲಗಿರಿ
ಜರಿದು ಬೀಳುವಡಾನಲಾಪೆನು ನಖದ ಕೊನೆಗಳಲಿ
ಭರದಲಾದಿ ವರಾಹ ದಾಡೆಯ
ಲಿರಿದಡೆಯು ನರಸಿಂಹ ನಖದಲಿ
ಕೆರೆದಡೆಯು ಸೈರಿಸುವೆನಂನುವೆನರ್ಜುನನ ಶರಕೆ (ಭೀಷ್ಮ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ವಿಷ್ಣುವಿನ ಕೌಮೋದಕಿ ಗದೆಯ ಹೊಡೆತವನ್ನು ಬೆರಳ ತುದಿಯಿಂದ ತಪ್ಪಿಸಬಲ್ಲೆ, ಕುಲ ಪರ್ವತಗಳು ನನ್ನ ಮೇಲೆ ಜಾರಿ ಬಿದ್ದರೂ ಉಗುರಿನ ಕೊನೆಯಿಂದ ತಡೆಯಬಲ್ಲೆ, ಆದಿ ವರಾಹನು ಅವನ ಹಲ್ಲುಗಳಿಂದ ಇರಿದರೂ, ನರಸಿಂಹನು ತನ್ನ ಉಗುರುಗಳಿಂದ ಕೆರೆದರೂ ನಾನು ಸಹಿಸಬಲ್ಲೆ, ಆದರೆ ಅರ್ಜುನನ ಬಾಣಗಳಿಗೆ ನಾನು ಹೆದರುತ್ತೇನೆ ಎಂದು ಭೀಷ್ಮರು ನುಡಿದರು.

ಅರ್ಥ:
ಹರಿ: ವಿಷ್ಣು; ಕೌಮೋದಕಿ: ವಿಷ್ಣುವಿನ ಗದೆ; ಹೊಯ್ಲು: ಹೊಡೆತ; ಆನು: ಎದುರಿಸು; ಅಖಿಲ: ಎಲ್ಲಾ; ಕುಲಗಿರಿ: ದೊಡ್ಡ ಬೆಟ್ಟ; ಜರಿ: ಸೀಳೂ; ಬೀಳು: ಕೆಳಕ್ಕೆ ಕೆಡೆ, ಕುಸಿ; ಆಪು: ಸಾಮರ್ಥ್ಯ; ನಖ: ಉಗುರು; ಕೊನೆ: ತುದಿ; ಭರ: ವೇಗ; ಆದಿ: ಮೊದಲ; ವರಾಹ: ಹಂದಿ; ದಾಡೆ: ಹಲ್ಲು; ಇರಿ: ಚುಚ್ಚು; ಕೆರೆ: ಉಗುರಿನಿಂದ ಗೀಚು, ಗೀರು; ಸೈರಿಸು: ತಾಳು; ಅಂಜು: ಹೆದರು; ಶರ: ಬಾಣ;

ಪದವಿಂಗಡಣೆ:
ಹರಿಯ +ಕೌಮೋದಕಿಯ +ಹೊಯ್ಲನು
ಬೆರಳಲ್+ಆನುವೆನ್+ಅಖಿಲ +ಕುಲಗಿರಿ
ಜರಿದು +ಬೀಳುವಡ್+ಆನಲ್+ಆಪೆನು +ನಖದ +ಕೊನೆಗಳಲಿ
ಭರದಲ್+ಆದಿ +ವರಾಹ +ದಾಡೆಯಲ್
ಇರಿದಡೆಯು +ನರಸಿಂಹ +ನಖದಲಿ
ಕೆರೆದಡೆಯು +ಸೈರಿಸುವೆನ್+ಅಂಜುವೆನ್+ಅರ್ಜುನನ +ಶರಕೆ

ಅಚ್ಚರಿ:
(೧) ಇರಿ, ಜರಿ, ಹೊಯ್ಲು, ಕೆರೆ – ಹೊಡೆತ, ನೋವನ್ನು ಸೂಚಿಸುವ ಪದಗಳು

ಪದ್ಯ ೩೩: ಅರ್ಜುನನು ಕೋಟೆಯ ಮೇಲೆ ಹೇಗೆ ದಾಳಿ ಮಾಡಿದನು?

ಮುರಿದುದಮರರು ಮತ್ತೆ ಬೊಬ್ಬಿರಿ
ದುರುಬಿದೆನು ಹೆಸರೆನಿಸಿದಸುರರ
ತರಿದೆನದರೊಳು ಕೋಟಿ ಸಂಖ್ಯೆಯನೈಂದ್ರಬಾಣದೊಳು
ಹರಿದುದಮರಾರಿಗಳು ಕೋಟೆಯ
ಹೊರಗೆ ಸುರಬಲವೌಕಿ ಬಿಟ್ಟುದು
ತುರುಗಿತಮರರು ಖಳನದುರ್ಗದ ತುದಿಯ ತೆನೆಗಳಲಿ (ಅರಣ್ಯ ಪರ್ವ, ೧೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ದೇವತೆಗಳು ಸೋತು ಹಿಮ್ಮೆಟ್ಟಿದರು. ಆಗ ನಾನು ಗರ್ಜಿಸಿ ರಾಕ್ಷಸರ ಮೇಲೆ ಬಿದ್ದು ಕೋಟೆ ಸಂಖ್ಯೆಯಲ್ಲಿ ರಾಕ್ಷಸ ವೀರರನ್ನು ಕೊಂದೆನು. ರಾಕ್ಷಸರು ಓಡಿದರು ದೇವ ಸೈನ್ಯವು ರಾಕ್ಷಸರ ಊರ ಕೋಟೆಯವರೆಗೆ ನುಗ್ಗಿ ಕೊತ್ತಳಗಳನ್ನು ಹತ್ತಿತು.

ಅರ್ಥ:
ಮುರಿ: ಸೀಳು; ಅಮರ: ದೇವತೆ; ಬೊಬ್ಬಿರಿ: ಗರ್ಜಿಸು; ಉರುಬು: ಅತಿಶಯವಾದ ವೇಗ; ಅಸುರ: ರಾಕ್ಷಸ; ತರಿ: ಕಡಿ, ಕತ್ತರಿಸು; ಕೋಟಿ: ಅಸಂಖ್ಯಾತ; ಬಾಣ: ಶರ; ಹರಿ: ಸೀಳು; ಅಮರಾರಿ: ದಾನವ; ಹೊರಗೆ: ಆಚೆ; ಸುರ: ದೇವತೆ; ಔಕು: ನೂಕು; ಖಳ: ದುಷ್ಟ; ದುರ್ಗ: ಕೋಟೆ; ತುದಿ: ಕೊನೆ, ಅಗ್ರಭಾಗ; ತೆನೆ: ಕೋಟೆಯ ಮೇಲ್ಭಾಗ, ಕೊತ್ತಳ; ಹೆಸರು: ನಾಮ;

ಪದವಿಂಗಡಣೆ:
ಮುರಿದುದ್+ಅಮರರು +ಮತ್ತೆ +ಬೊಬ್ಬಿರಿದ್
ಉರುಬಿದೆನು +ಹೆಸರ್+ಎನಿಸಿದ್+ಅಸುರರ
ತರಿದೆನ್+ಅದರೊಳು +ಕೋಟಿ +ಸಂಖ್ಯೆಯನ್+ಐಂದ್ರ+ಬಾಣದೊಳು
ಹರಿದುದ್+ಅಮರಾರಿಗಳು+ ಕೋಟೆಯ
ಹೊರಗೆ+ ಸುರಬಲವ್+ಔಕಿ +ಬಿಟ್ಟುದು
ತುರುಗಿತ್+ಅಮರರು +ಖಳನ+ದುರ್ಗದ +ತುದಿಯ +ತೆನೆಗಳಲಿ

ಚ್ಚರಿ:
(೧) ಅಸುರ, ಅಮರಾರಿ – ಸಮನಾರ್ಥಕ ಪದ
(೨) ತರಿ, ಹರಿ, ಮುರಿ – ಪ್ರಾಸ ಪದಗಳು