ಪದ್ಯ ೨೩: ಕೃಪಾಚಾರ್ಯರು ಯಾರನ್ನು ಸೇನಾಧಿಪತ್ಯಕ್ಕೆ ಸೂಚಿಸಿದರು?

ಆದಡಾ ಭೀಷ್ಮಾದಿ ಸುಭಟರು
ಕಾದಿ ನೆಗ್ಗಿದ ಕಳನ ಹೊಗುವಡೆ
ಕೈದುಕಾರರ ಕಾಣೆನೀ ಮಾದ್ರೇಶ ಹೊರತಾಗಿ
ಈ ದುರಂತರ ಸಮರಜಯ ನಿನ
ಗಾದಡೊಳ್ಳಿತು ಶಲ್ಯನಲಿ ಸಂ
ಪಾದಿಸಿರೆ ಸೇನಾಧಿಪತ್ಯವನರಸ ಕೇಳೆಂದ (ಶಲ್ಯ ಪರ್ವ, ೧ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕೃಪಾಚಾರ್ಯರು ಮುಂದುವರೆಸುತ್ತಾ, ಹಾಗಾದರೆ ಭೀಷ್ಮನೇ ಮೊದಲಾದ ಸುಭಟರು ಕುಸಿದ ರಣರಂಗವನ್ನು ಹೊಗಲು ಶಲ್ಯನನ್ನು ಬಿಟ್ಟರೆ ಇನ್ನಾವ ಆಯುಧಪಾಣಿಗಳೂ ನನಗೆ ಕಾಣುತ್ತಿಲ್ಲ. ಈ ಕೊನೆಯಿಲ್ಲದ ಯುದ್ಧದಲ್ಲಿ ಶಲ್ಯನಿಂದ ನೀನು ಜಯಿಸಿದರೆ ಒಳ್ಳೆಯದು, ಅವನಿಗೇ ಸೇನಾಧಿಪತ್ಯವನ್ನು ಕೊಡು ಎಂದು ಹೇಳಿದರು.

ಅರ್ಥ:
ಸುಭಟ: ಪರಾಕ್ರಮಿ; ಕಾದು: ಹೋರಾಡು; ನೆಗ್ಗು: ಕುಗ್ಗು, ಕುಸಿ; ಕಳ: ರಣರಂಗ; ಹೊಗು: ತೆರಳು; ಕೈದುಕಾರ: ಆಯುಧವನ್ನು ಹಿಡಿದವ; ಕಾಣು: ತೋರು; ಹೊರತು: ಅಲ್ಲದೆ, ವಿನಾ; ದುರಂತ: ದುರ್ಘಟನೆ; ಸಮರ: ಯುದ್ಧ; ಜಯ: ಗೆಲುವು; ಒಳ್ಳಿತು: ಸೂಕ್ತವಾದುದು; ಸಂಪಾದಿಸು: ಪಡೆ; ಅಧಿಪತ್ಯ: ಒಡೆಯತನ; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಆದಡ್+ಆ+ ಭೀಷ್ಮಾದಿ +ಸುಭಟರು
ಕಾದಿ +ನೆಗ್ಗಿದ +ಕಳನ +ಹೊಗುವಡೆ
ಕೈದುಕಾರರ +ಕಾಣೆನ್+ಈ+ ಮಾದ್ರೇಶ +ಹೊರತಾಗಿ
ಈ +ದುರಂತರ+ ಸಮರ+ಜಯ +ನಿನಗ್
ಆದಡ್+ಒಳ್ಳಿತು +ಶಲ್ಯನಲಿ +ಸಂ
ಪಾದಿಸಿರೆ +ಸೇನಾಧಿಪತ್ಯವನ್+ಅರಸ +ಕೇಳೆಂದ

ಅಚ್ಚರಿ:
(೧) ಆದಡ್ – ೧, ೫ ಸಾಲಿನ ಮೊದಲ ಪದ
(೨) ಕೈದುಕಾರ, ಸುಭಟ – ಸಾಮ್ಯಾರ್ಥ ಪದ

ಪದ್ಯ ೫೫: ಕೌರವನು ಘಟೋತ್ಕಚನನ್ನು ಹೇಗೆ ಹಂಗಿಸಿದನು?

ಹೆಣನನರಸುತ ರಕುತಪಾನಕೆ
ಸೆಣಸಿ ಶಾಕಿನಿ ಢಾಕಿನಿಯರೊಳು
ಹೆಣಗಿ ಗೆಲುವುದೆಯಾಯ್ತು ದಾನವವಿದ್ಯೆ ಜಗವರಿಯೆ
ರಣದೊಳಗ್ಗದ ಕೈದುಕಾರರ
ಕೆಣಕಿ ಗೆಲುವುದ ಕೇಳಿದರಿಯೆವು
ಹೆಣದಿನಿಹಿಗಳು ಹೇವ ಮಾರಿಗಳೆಂದನಾ ಭೂಪ (ದ್ರೋಣ ಪರ್ವ, ೧೫ ಸಂಧಿ, ೫೫ ಪದ್ಯ)

ತಾತ್ಪರ್ಯ:
ದುರ್ಯೋಧನನು ಉತ್ತರಿಸುತ್ತಾ, ಹೆಣವನ್ನು ಹುಡುಕುತ್ತಾ ರಕ್ತಪಾನ ಮಾಡಲು ಶಾಕಿನಿ, ಢಾಕಿನಿಯರೊಡನೆ ಗಜಳ ತೆಗೆದು ಗೆಲ್ಲುವುದೇ ನಿಮ್ಮ ರಾಕ್ಷಸವಿದ್ಯೆ, ಕಾಳಗದಲ್ಲಿ ವೀರರಾದವರನ್ನು ಕೆಣಕಿ ಯುದ್ಧಮಾಡಿ ರಾಕ್ಷಸರು ಗೆದ್ದುದನ್ನು ನಾನು ಕೇಳಿಲ್ಲ, ನೀವು ಹೆಣ ತಿನ್ನುವ ಮೊಂಡರೆಂದು ದುರ್ಯೋಧನನು ಘಟೋತ್ಕಚನನ್ನು ಹಂಗಿಸಿದನು.

ಅರ್ಥ:
ಹೆಣ: ಜೀವವಿಲ್ಲದ ದೇಹ; ಅರಸು: ಹುಡುಕು; ರಕುತ: ನೆತ್ತರು; ಪಾನ: ಕುಡಿ; ಸೆಣಸು: ಹೋರಾಡು; ಶಾಕಿನಿ: ರಾಕ್ಷಸಿ; ಢಾಕಿನಿ: ಒಂದು ಕ್ಷುದ್ರ ದೇವತೆ; ಹೆಣಗು: ಸೆಣಸು; ಗೆಲುವು: ಜಯ; ದಾನವ: ರಾಕ್ಷಸ; ಜಗ: ಪ್ರಪಂಚ; ಅರಿ: ತಿಳಿ; ರಣ: ಯುದ್ಧ; ಅಗ್ಗ: ಶ್ರೇಷ್ಠ; ಕೈದುಕಾರ: ಆಯುಧವನ್ನು ಹಿಡಿದ, ಪರಾಕ್ರಮಿ; ಕೆಣಕು: ರೇಗಿಸು; ಗೆಲುವು: ಜಯ; ಕೇಳು: ಆಲಿಸು; ಅರಿ: ತಿಳಿ; ತಿನಿ: ತಿನ್ನು; ಹೇವ: ಲಜ್ಜೆ, ಅವಮಾನ; ಮಾರಿ: ರಾಕ್ಷಸಿ; ಭೂಪ: ರಾಜ;

ಪದವಿಂಗಡಣೆ:
ಹೆಣನನ್+ಅರಸುತ +ರಕುತ+ಪಾನಕೆ
ಸೆಣಸಿ +ಶಾಕಿನಿ +ಢಾಕಿನಿಯರೊಳು
ಹೆಣಗಿ +ಗೆಲುವುದೆಯಾಯ್ತು +ದಾನವವಿದ್ಯೆ +ಜಗವ್+ಅರಿಯೆ
ರಣದೊಳ್+ಅಗ್ಗದ +ಕೈದುಕಾರರ
ಕೆಣಕಿ +ಗೆಲುವುದ +ಕೇಳಿದ್+ಅರಿಯೆವು
ಹೆಣ+ತಿನಿಹಿಗಳು +ಹೇವ +ಮಾರಿಗಳೆಂದನಾ +ಭೂಪ

ಅಚ್ಚರಿ:
(೧) ಘಟೋತ್ಕಚನನ್ನು ಹಂಗಿಸುವ ಪರಿ – ಹೆಣದಿನಿಹಿಗಳು ಹೇವ ಮಾರಿಗಳೆಂದನಾ ಭೂಪ
(೨) ಶಾಕಿನಿ, ಢಾಕಿನಿ – ಪ್ರಾಸ ಪದಗಳು
(೩) ರಾಕ್ಷಸರ ಕೆಲಸ – ಹೆಣನನರಸುತ ರಕುತಪಾನಕೆ ಸೆಣಸಿ ಶಾಕಿನಿ ಢಾಕಿನಿಯರೊಳು ಹೆಣಗಿ ಗೆಲುವುದೆಯಾಯ್ತು ದಾನವವಿದ್ಯೆ

ಪದ್ಯ ೨೬: ಅರ್ಜುನನು ಹೇಗೆ ಅಬ್ಬರಿಸಿದನು?

ಕಾದಿರೈ ಷಡುರಥರು ನೃಪತಿಗೆ
ಕಾದು ಕೊಡಿರೈ ಸೈಂಧವನನಿದು
ಕೈದುಕಾರರ ಠಾವು ಸಾಹಸಿಗರಿಗೆ ಸಮಯವಿದು
ಮೂದಲೆಗಳಿವು ಮುಟ್ಟುವಡೆ ಮುನಿ
ಸಾದಡೊಳ್ಳಿತು ನಿಪ್ಪಸರದಲಿ
ಕಾದುವಿರಲೈ ಕಾಣಲಹುದೆಂದೊರಲಿದನು ಪಾರ್ಥ (ದ್ರೋಣ ಪರ್ವ, ೧೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಎಲೈ ಆರು ಮಹಾರಥಿಕರೇ, ಈಗ ಯುದ್ಧಮಾಡಿ, ಸೈಂಧವನನ್ನು ಉಳಿಸಿಕೊಂಡಿರಿ, ಇದು ರಣರಂಗ ಶಸ್ತ್ರಧಾರಿಗಳ ಜಾಗ, ಸಾಹಸಿಗರಿಗೆ ತಮ್ಮ ಪೌರುಷವನ್ನು ತೋರಿಸಲು ಇದೇ ಸಮಯ. ನನ್ನ ಛೇಡಿಸುವಿಕೆ ನಿಮಗೆ ಕೋಪತಂದರೆ, ಅದು ಒಳಿತೇ ಆಯಿತು, ನೀವು ಅತಿ ಕಠೋರವಾಗಿ ನನ್ನೊಡನೆ ಕಾದುವಿರಿ, ಆಗ ನನ್ನ ಶೌರ್ಯ ನಿಮಗೆ ಕಾಣಿಸುತ್ತದೆ ಎಂದು ಅರ್ಜುನನು ಅಬ್ಬರಿಸಿದನು.

ಅರ್ಥ:
ಕಾದು: ಹೋರಾಟ, ಯುದ್ಧ; ಷಡು: ಆರು; ಷಡುರಥ: ಆರು ಮಹಾರಥಿಕರು; ಕೊಡು: ನೀಡು; ಕೈದುಕಾರ: ಆಯುಧವನ್ನು ಹಿಡಿದವ, ಯೋಧ; ಠಾವು: ಸ್ಥಳ, ತಾಣ; ಸಾಹಸಿ: ಪರಾಕ್ರಮಿ; ಸಮಯ: ಕಾಲ; ಮೂದಲೆ: ಛೇಡಿಸುವಿಕೆ; ಮುಟ್ಟು: ತಾಗು; ಮುನಿಸು: ಕೋಪಗೊಳ್ಳು; ಒಳ್ಳಿತು: ಒಳ್ಳೆಯದು; ನಿಪ್ಪಸರ: ಅತಿಶಯ, ಹೆಚ್ಚಳ; ಕಾದು: ಹೋರಾದು; ಕಾಣು: ತೋರು; ಒರಲು: ಅರಚು, ಕೂಗಿಕೊಳ್ಳು;

ಪದವಿಂಗಡಣೆ:
ಕಾದಿರೈ +ಷಡುರಥರು +ನೃಪತಿಗೆ
ಕಾದು+ ಕೊಡಿರೈ +ಸೈಂಧವನನ್+ಇದು
ಕೈದುಕಾರರ+ ಠಾವು +ಸಾಹಸಿಗರಿಗೆ+ ಸಮಯವಿದು
ಮೂದಲೆಗಳಿವು +ಮುಟ್ಟುವಡೆ +ಮುನಿ
ಸಾದಡೊಳ್ಳಿತು+ ನಿಪ್ಪಸರದಲಿ
ಕಾದುವಿರಲೈ +ಕಾಣಲಹುದೆಂದ್+ಒರಲಿದನು +ಪಾರ್ಥ

ಅಚ್ಚರಿ:
(೧) ರಣರಂಗವನ್ನು ವಿವರಿಸುವ ಪರಿ – ಇದು ಕೈದುಕಾರರ ಠಾವು ಸಾಹಸಿಗರಿಗೆ ಸಮಯವಿದು
(೨) ಮು ಕಾರದ ತ್ರಿವಳಿ ಪದ – ಮೂದಲೆಗಳಿವು ಮುಟ್ಟುವಡೆ ಮುನಿಸಾದಡೊಳ್ಳಿತು

ಪದ್ಯ ೪: ಸಾತ್ಯಕಿ ಭೂರಿಶ್ರವರ ಯುದ್ಧವನ್ನು ಯಾರು ಪ್ರಶಂಶಿಸಿದರು?

ಆದಡಿದ ಕೊಳ್ಳೆನುತ ಸಾತ್ಯಕಿ
ಕೋದನಭ್ರವನಂಬಿನಲಿ ಬಲು
ಹಾದನೈ ಮಝ ಎನುತ ಕಡಿದನು ಸೋಮದತ್ತಸುತ
ಕಾದುಕೊಳ್ಳೆನುತೆಚ್ಚನಂಬಿನ
ಬೀದಿವರಿ ಬಲುಹಾಯ್ತು ಖತಿಯಲಿ
ಕೈದುಕಾರರು ಮೆಚ್ಚಿಸಿದರಮರಾಸುರಾವಳಿಯ (ದ್ರೋಣ ಪರ್ವ, ೧೪ ಸಂಧಿ, ೪ ಪದ್ಯ)

ತಾತ್ಪರ್ಯ:
ಹಾಗಾದರೆ ಈ ಬಾಣಗಳ ರುಚಿಯನ್ನು ನೋಡು ಎನ್ನುತ್ತಾ ಸಾತ್ಯಕಿಯು ಆಕಾಶದ ತುಂಬ ಬಾಣಗಳನ್ನು ಬಿಟ್ಟನು. ಸೋಮದತ್ತನ ಮಗನಾದ ಭೂರಿಶ್ರವನು ಓಹೋ ಬಲಿತಿದ್ದಾನೆ, ಉಳಿದುಕೋ ಎನ್ನುತ್ತಾ ಬಾಣಗಲನ್ನು ಬಿಟ್ಟನು. ಬಾಣಗಳ ಓಡಾಟ ಹೆಚ್ಚಾಯಿತು. ಕೋಪದಿಂದ ಕಾದಾಡುತ್ತಿದ್ದ ಇಬ್ಬರ ಕಾಳಗವನ್ನು ದೇವ ದಾನವರಿಬ್ಬರ ಗುಂಪುಗಳು ಮೆಚ್ಚಿದವು.

ಅರ್ಥ:
ಕೊಳ್ಳು: ತೆಗೆದುಕೋ; ಅಭ್ರ: ಆಗಸ; ಕೋದು: ಸೇರಿಸು, ಪೋಣಿಸು; ಅಂಬು: ಬಾಣ; ಬಲು: ಬಹಳ; ಹಾಯ್ದು: ಮೇಲೆಬಿದ್ದು; ಮಝ: ಭಲೇ; ಕಡಿ: ಸೀಳು; ಸುತ: ಮಗ; ಕಾದು: ರಕ್ಷಣೆ; ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ಬೀದಿವರಿ: ಸುತ್ತಾಡು, ಅಲೆದಾಡು; ಬಲುಹು: ಬಹಳ; ಖತಿ: ಕೋಪ; ಕೈದು: ಆಯುಧ, ಶಸ್ತ್ರ; ಕೈದುಕಾರ: ಆಯುಧವನ್ನು ಧರಿಸಿದವ; ಮೆಚ್ಚಿಸು: ಪ್ರಶಂಶಿಸು; ಅಮರ: ದೇವತೆ: ಅಸುರ: ದಾನವ; ಆವಳಿ: ಗುಂಪು;

ಪದವಿಂಗಡಣೆ:
ಆದಡ್+ಇದ +ಕೊಳ್ಳೆನುತ +ಸಾತ್ಯಕಿ
ಕೋದನ್+ಅಭ್ರವನ್+ಅಂಬಿನಲಿ +ಬಲು
ಹಾದನೈ +ಮಝ +ಎನುತ +ಕಡಿದನು +ಸೋಮದತ್ತಸುತ
ಕಾದುಕೊಳ್ಳ್+ಎನುತ್+ಎಚ್ಚನ್+ಅಂಬಿನ
ಬೀದಿವರಿ +ಬಲುಹಾಯ್ತು +ಖತಿಯಲಿ
ಕೈದುಕಾರರು +ಮೆಚ್ಚಿಸಿದರ್+ಅಮರ+ಅಸುರ+ಆವಳಿಯ

ಅಚ್ಚರಿ:
(೧) ಭೂರಿಶ್ರವನ ಪರಿಚಯ – ಸೋಮದತ್ತಸುತ
(೨) ಅ ಕಾರದ ಪದಜೋಡಣೆ – ಮೆಚ್ಚಿಸಿದರಮರಾಸುರಾವಳಿಯ

ಪದ್ಯ ೬೦: ಕರ್ಣನು ಭೀಮನನ್ನು ಏನೆಂದು ಕೇಳಿದನು?

ಕೈದು ನೆರೆತೀರಿದರೆ ಹೆಣನೇ
ಕೈದುವಾದುವು ಪರಬಲಾಮ್ತಕ
ಕೈದುಕಾರರ ಕೈಯ ಬಾಯಲಿ ಭೀಮ ಸಿಲುಕಿದೆಲಾ
ಕಾದುಕೊಳ್ಳನೆ ಕೃಷ್ಣ ನಿನ್ನಯ
ಮೈದುನನು ಗಡ ಮರೆಯ ಹೊಗು ಹೋ
ಗೈಯದೆಯಹಳೋ ವಿಧವೆಯೋ ಪಾಂಚಾಲಿ ಹೇಳೆಂದ (ದ್ರೋಣ ಪರ್ವ, ೧೩ ಸಂಧಿ, ೬೦ ಪದ್ಯ)

ತಾತ್ಪರ್ಯ:
ಆಯುಧಗಳು ಮುಗಿದರೆ ಹೆಣಗಳೇ ನಿನ್ನ ಆಯುಧಗಲಾದವಲ್ಲವೇ? ಪರಬಲಕ್ಕೆ ಯಮನಂತಿರುವ ಶಸ್ತ್ರಧಾರಿಗಳ ಕೈಯಲ್ಲಿ, ಭೀಮಾ, ನೀನು ಸಿಕ್ಕಿಹಾಕಿಕೋಂಡೆ ನಿನ್ನ ಮೈದುನ ಕೃಷ್ಣನು ನಿನ್ನನ್ನು ಕಾಪಾದುವುದಿಲ್ಲವೇ? ಅವನಲ್ಲಿ ಮೊರೆಹೋಗು. ಈಗ ದ್ರೌಪದಿಯು ಮುತ್ತೈದೆಯೋ ಅಥವ ವಿಧವೆಯೋ ಹೇಳು ಎಂದು ಕರ್ಣನು ಕೇಳಿದನು.

ಅರ್ಥ:
ಕೈದು: ಆಯುಧ, ಶಸ್ತ್ರ; ನೆರೆ: ಪಕ್ಕ, ಗುಂಪು; ತೀರು: ಅಂತ್ಯ, ಮುಕ್ತಾಯ; ಹೆಣ: ಜೀವವಿಲ್ಲದ ಶರೀರ; ಪರಬಲ: ವೈರಿಸೈನ್ಯ; ಅಂತಕ: ಯಮ; ಕೈ: ಹಸ್ತ; ಸಿಲುಕು: ಬಂಧನಕ್ಕೊಳಗಾಗು; ಕಾದು: ಹೋರಾಟ, ಯುದ್ಧ; ಮೈದುನ: ತಂಗಿಯ ಗಂಡ; ಗಡ: ಅಲ್ಲವೇ; ಮರೆ: ಮೊರೆ, ಶರಣಾಗತಿ; ಹೊಗು: ತೆರಳು; ಐದೆ: ಸುವಾಸಿನಿ, ಸುಮಂಗಲಿ; ವಿಧವೆ: ಗಂಡನನ್ನು ಕಳೆದು ಕೊಂಡವಳು, ವಿತಂತು; ಪಾಂಚಾಲಿ: ದ್ರೌಪದಿ; ಹೇಳು: ತಿಳಿಸು;

ಪದವಿಂಗಡಣೆ:
ಕೈದು +ನೆರೆ+ತೀರಿದರೆ +ಹೆಣನೇ
ಕೈದುವಾದುವು +ಪರಬಲಾಂತಕ
ಕೈದುಕಾರರ +ಕೈಯ +ಬಾಯಲಿ +ಭೀಮ +ಸಿಲುಕಿದೆಲಾ
ಕಾದುಕೊಳ್ಳನೆ +ಕೃಷ್ಣ +ನಿನ್ನಯ
ಮೈದುನನು +ಗಡ +ಮರೆಯ +ಹೊಗು +ಹೋಗ್
ಐದೆಯಹಳೋ +ವಿಧವೆಯೋ +ಪಾಂಚಾಲಿ +ಹೇಳೆಂದ

ಅಚ್ಚರಿ:
(೧) ಕೈದು – ೧-೩ ಸಾಲಿನ ಮೊದಲ ಪದ
(೨) ಐದೆ, ವಿಧವೆ – ಪದಗಳ ಬಳಕೆ
(೩) ಭೀಮನನ್ನು ಪ್ರಚೋದಿಸುವ ಪರಿ – ಕಾದುಕೊಳ್ಳನೆ ಕೃಷ್ಣ ನಿನ್ನಯಮೈದುನನು ಗಡ ಮರೆಯ ಹೊಗು

ಪದ್ಯ ೪೪: ಧರ್ಮಜನು ಅಭಿಮನ್ಯುವಿಗೆ ಹೇಗೆ ಒಪ್ಪಿಗೆ ನೀಡಿದನು?

ಕೈದುಕಾರರ ಬಿಗುಹು ಘನ ನೀ
ಹೊಯ್ದು ಮೊದಲಲಿ ಬಿಡಿಸು ಬಳಿಕಾ
ವೈದಿ ನಿನ್ನನು ಕೂಡಿಕೊಂಬೆವು ಹೊಕ್ಕು ಬಳಿಸಲಿಸಿ
ಎಯ್ದೆ ಹಗೆಯಲಿ ಹೂಣಿ ಹೊಗದಿರು
ಮೈದೆಗೆದು ಕಾದುವುದು ಜಯಸಿರಿ
ಯೈದೆತನ ನಿನ್ನಿಂದ ಮೆರೆವುದು ಕಂದ ಕೇಳೆಂದ (ದ್ರೋಣ ಪರ್ವ, ೪ ಸಂಧಿ, ೪೪ ಪದ್ಯ
)

ತಾತ್ಪರ್ಯ:
ಧರ್ಮಜನು ಉತ್ತರಿಸುತ್ತಾ, ಶತ್ರುಭಟರು ಮಹಾಶಕ್ತಿಶಾಲಿಗಳು. ಮೊದಲು ಅವರೊಂದಿಗೆ ಹೋರಾಡಿ ದಾಇ ಮಾಡು. ನಾವು ಹಿಂದಿನಿಂದ ಬಂದು ನಿನ್ನನ್ನು ಸೇರುತ್ತೇವೆ. ಹೋಗಿ ಮೈಮರೆದು ಯುದ್ಧಮಾಡಬೇಡ, ನಿನ್ನನ್ನು ನೀನು ರಕ್ಷಿಸಿಕೊಂಡು ಯುದ್ಧಮಾಡು, ನಿನ್ನಿಂದ ನಮ್ಮ ಜಯಲಕ್ಷ್ಮಿಯ ಮುತ್ತೈದೆತನವು ಶೋಭಿಸುತ್ತದೆ ಎಂದು ಹೇಳಿದನು.

ಅರ್ಥ:
ಕೈದು: ಆಯುಧ; ಕೈದುಕಾರ: ಸೈನಿಕ; ಬಿಗುಹು: ಗಟ್ಟಿತನ; ಘನ: ಶ್ರೇಷ್ಠ; ಹೊಯ್ದು: ಹೊಡೆದು; ಮೊದಲು: ಮುಂಚೆ; ಬಿಡಿಸು: ಸಡಲಿಸು, ಕಳಚು; ಬಳಿಕ: ನಂತರ; ಆವ್: ನಾವು; ಐದು: ಬಂದುಸೇರು; ಕೂಡಿಕೊಂಬು: ಜೊತೆಗೂಡು; ಹೊಕ್ಕು: ಸೇರು; ಬಳಿ: ಹತ್ತಿರ; ಹಗೆ: ವೈರಿ; ಎಯ್ದು: ಹೋಗಿ ಸೇರು; ಹೂಣಿಗ: ಸಾಹಸಿಗ; ಹೊಗ: ತೆರಳು; ಮೈ: ದೇಹ; ಕಾದು: ಹೋರಾಡು; ಜಯಸಿರಿ: ಜಯಲಕ್ಷ್ಮಿ; ಜಯ: ಗೆಲುವು; ಐದೆತನ: ಮುತ್ತೈದೆತನ; ಮೆರೆ: ಪ್ರಜ್ವಲಿಸು; ಕಂದ: ಮಗು; ಕೇಳು: ಆಲಿಸು;

ಪದವಿಂಗಡಣೆ:
ಕೈದುಕಾರರ +ಬಿಗುಹು +ಘನ +ನೀ
ಹೊಯ್ದು +ಮೊದಲಲಿ +ಬಿಡಿಸು +ಬಳಿಕ
ಆವ್+ಐದಿ+ ನಿನ್ನನು +ಕೂಡಿಕೊಂಬೆವು+ ಹೊಕ್ಕು +ಬಳಿಸಲಿಸಿ
ಎಯ್ದೆ +ಹಗೆಯಲಿ +ಹೂಣಿ +ಹೊಗದಿರು
ಮೈದೆಗೆದು +ಕಾದುವುದು +ಜಯಸಿರಿ
ಐದೆತನ+ ನಿನ್ನಿಂದ +ಮೆರೆವುದು+ ಕಂದ +ಕೇಳೆಂದ

ಅಚ್ಚರಿ:
(೧) ಎಚ್ಚರಿಕೆಯ ನುಡಿಗಳು – ಎಯ್ದೆ ಹಗೆಯಲಿ ಹೂಣಿ ಹೊಗದಿರು ಮೈದೆಗೆದು ಕಾದುವುದು

ಪದ್ಯ ೩: ದ್ರೋಣನು ಎಷ್ಟು ದಿನ ಸೇನಾಧಿಪತಿಯಾಗಿದ್ದ?

ಐದು ದಿವಸದೊಳಹಿತ ಬಲವನು
ಹೊಯ್ದು ಹೊಡೆಕುಟ್ಟಾಡಿ ರಿಪುಗಳೊ
ಳೈದೆ ದೊರೆಗಳನಿರಿದು ಮೆರೆದನು ಭುಜಮಹೋನ್ನತಿಯ
ಕೈದುಕಾರರ ಗುರು ಛಡಾಳಿಸಿ
ಮೈದೆಗೆದು ನಿರ್ಜರ ರನಗರಿಗೆ
ಹಾಯ್ದನೆನಲುರಿ ಜಠರದಲಿ ಮೋಹರಿಸಿತವನಿಪನ (ದ್ರೋಣ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ದ್ರೋಣನು ಐದು ದಿವಸಗಳ ಕಾಲ ಯುದ್ಧಮಾಡಿ, ಶತ್ರು ಸೈನ್ಯವನ್ನು ಹೊಡೆದು ಕುಟ್ಟಿ, ವೈರಿರಾಜರನ್ನು ಸಂಹರಿಸಿ ತನ್ನ ಭುಜಬಲವನ್ನು ಮೆರೆದನು. ಆಯುಧದಾರಿಗಳ ಗುರುವಾದ ದ್ರೋಣನು ಆ ಬಳಿಕ ಅಮರಾವತಿಗೆ ಪ್ರಯಾಣ ಮಾಡಿದನು ಎಂದು ಸಂಜಯನು ಹೇಳಲು ಧೃತರಾಷ್ಟ್ರನ ಹೊಟ್ಟೆಯಲ್ಲಿ ಉರಿಬಿದ್ದಿತು.

ಅರ್ಥ:
ದಿವಸ: ದಿನ; ಅಹಿತ: ವೈರಿ; ಬಲ: ಸೈನ್ಯ; ಹೊಯ್ದು: ಹೋರಾಡು; ಹೊಡೆ: ಏಟು; ಕುಟ್ಟು: ಅಪ್ಪಳಿಸು; ರಿಪು: ವೈರಿ; ಐದು: ಬಂದುಸೇರು; ದೊರೆ: ರಾಜ; ಇರಿ: ಚುಚ್ಚು; ಮೆರೆ: ಹೊಳೆ; ಭುಜ: ಬಾಹು; ಮಹೋನ್ನತಿ: ಅತಿಶಯ, ಹೆಚ್ಚುಗಾರಿಗೆ; ಕೈದು: ಆಯುಧ; ಗುರು: ಆಚಾರ್ಯ; ಛಡಾಳಿಸು: ಪ್ರಜ್ವಲಿಸು, ಥಳಥಳಿಸು; ಮೈ: ತನು; ತೆಗೆ: ಹೊರತಉ; ನಿರ್ಜರ: ದೇವತೆ; ನಗರ: ಊರು; ಹಾಯ್ದು: ಹಾರು, ಉರಿ: ಬೆಂಕಿ; ಜಠರ: ಹೊಟ್ಟೆ; ಮೋಹರ: ಸೈನ್ಯ, ಯುದ್ಧ; ಅವನಿಪ: ರಾಜ;

ಪದವಿಂಗಡಣೆ:
ಐದು +ದಿವಸದೊಳ್+ಅಹಿತ +ಬಲವನು
ಹೊಯ್ದು +ಹೊಡೆ+ಕುಟ್ಟಾಡಿ +ರಿಪುಗಳೊಳ್
ಐದೆ+ ದೊರೆಗಳನ್+ಇರಿದು +ಮೆರೆದನು +ಭುಜ+ಮಹೋನ್ನತಿಯ
ಕೈದುಕಾರರ+ ಗುರು +ಛಡಾಳಿಸಿ
ಮೈದೆಗೆದು +ನಿರ್ಜರರ+ನಗರಿಗೆ
ಹಾಯ್ದನ್+ಎನಲ್+ಉರಿ+ ಜಠರದಲಿ+ ಮೋಹರಿಸಿತ್+ಅವನಿಪನ

ಅಚ್ಚರಿ:
(೧) ಸತ್ತನು ಎಂದು ಹೇಳಲು – ಕೈದುಕಾರರ ಗುರು ಛಡಾಳಿಸಿಮೈದೆಗೆದು ನಿರ್ಜರರ ನಗರಿಗೆಹಾಯ್ದನ್
(೨) ಐದು, ಹೊಯ್ದು, ಕೈದು – ಪ್ರಾಸ ಪದಗಳು

ಪದ್ಯ ೫: ಕರ್ಣನು ಯಾರಮೇಲೆ ಹೇಗೆ ಚಿತ್ರವನ್ನು ರಚಿಸಿದನು?

ಆದರೇನದು ಮತ್ತೆ ಕರ್ಣನ
ಕೈದುಕಾರತನಕ್ಕೆ ಸುಭಟರು
ಮೇದಿನಿಯೊಳಾರುಂಟು ಪಡಿ ದೈವಾಭಿಮುಖವುಳಿಯೆ
ಹೋದೆ ಹೋಗಿನ್ನೆನುತ ಕಣೆಗಳ
ಸಾದುಗಳ ತನಿವೀರರಸದಲಿ
ತೇದು ಚಿತ್ರವ ಬರೆದನರ್ಜುನನಂಗಭಿತ್ತಿಯಲಿ (ಕರ್ಣ ಪರ್ವ, ೨೬ ಸಂಧಿ, ೫ ಪದ್ಯ)

ತಾತ್ಪರ್ಯ:
ಶಲ್ಯನು ಇಳಿದುಹೋದರೇನು, ಸರ್ಪಾಸ್ತ್ರವು ಫಲಕೊಡದಿದ್ದರೇನು ಕರ್ಣನ ಬಿಲ್ಲುಗಾರಿಕೆಯ ಕೌಶಲಕ್ಕೆ ಈ ಭೂಮಿಯಲ್ಲಿ ಸರಿಸಾಟಿಯಾರಿರುವರು? ಆದರೆ ಈಗ ಕರ್ಣನಿಗೆ ದೈವವು ಎದುರು ನಿಂತಿದೆ, ಕರ್ಣನು ಬಾಣಗಳೆಂಬ ಸಾದುವನ್ನು ತನ್ನ ಪರಾಕ್ರಮವೆಂಬ ರಸದಲ್ಲಿ ತೇದು ಹೋಗು ಎಂದಬ್ಬರಿಸಿ ಅರ್ಜುನನ ದೇಹವೆಂಬ ಪಟದಲ್ಲಿ ರಕ್ತದ ಚಿತ್ರವನ್ನು ಬರೆದನು.

ಅರ್ಥ:
ಕೈದುಕಾರ: ಕೌಶಲ; ಕೈದು: ಆಯುಧ; ಸುಭಟ: ಪರಾಕ್ರಮಿ ಸೈನಿಕರು; ಮೇದಿನಿ: ಭೂಮಿ; ಪಡಿ: ಪ್ರತಿಯಾದುದು, ಎದುರು, ಸಾಟಿ; ದೈವ: ಭಗವಂತ; ಅಭಿಮುಖ: ಎದುರು; ಹೋಗು: ತೆರಳು; ಕಣೆ: ಬಾಣ; ಸಾದು: ಸಿಂಧೂರ; ಕುಂಕುಮ; ತನಿ:ಹೆಚ್ಚಾಗು, ಅತಿಶಯವಾಗು; ವೀರ: ಶೌರ್ಯ; ರಸ: ಸತ್ವ; ತೇಯು: ಉಜ್ಜು, ಸವೆಯಿಸು; ಚಿತ್ರ: ಬರೆದ ಆಕೃತಿ; ಬರೆ: ರಚಿಸು; ಅಂಗ: ದೇಹದ ಭಾಗ; ಭಿತ್ತಿ: ತುಂಡು, ಚೂರು;

ಪದವಿಂಗಡಣೆ:
ಆದರೇನ್+ಅದು+ ಮತ್ತೆ +ಕರ್ಣನ
ಕೈದುಕಾರತನಕ್ಕೆ+ ಸುಭಟರು
ಮೇದಿನಿಯೊಳ್+ಆರುಂಟು +ಪಡಿ+ ದೈವ+ಅಭಿಮುಖವುಳಿಯೆ
ಹೋದೆ +ಹೋಗಿನ್ನ್+ಎನುತ +ಕಣೆಗಳ
ಸಾದುಗಳ +ತನಿ+ವೀರರಸದಲಿ
ತೇದು +ಚಿತ್ರವ +ಬರೆದನ್+ಅರ್ಜುನನ್+ಅಂಗಭಿತ್ತಿಯಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ (ಅತಿ ವಿಶೇಷವಾದ ಕವಿಯ ಕಲ್ಪನೆ) – ಹೋದೆ ಹೋಗಿನ್ನೆನುತ ಕಣೆಗಳ ಸಾದುಗಳ ತನಿವೀರರಸದಲಿ ತೇದು ಚಿತ್ರವ ಬರೆದನರ್ಜುನನಂಗಭಿತ್ತಿಯಲಿ

ಪದ್ಯ ೨೫: ಕರ್ಣನು ಯಾರಿಗೆ ದೇವ?

ಕಾದಿ ನೊಂದೆನು ತಾನು ಬಳಿಕ ವೃ
ಕೋದರನೆಯಡಹಾಯ್ದನಾತನ
ಕಾದಿ ನಿಲಿಸಿ ಮದೀಯ ರಥವನು ಮತ್ತೆ ಕೆಣಕಿದನು
ಮೂದಲಿಸಿ ಸಹದೇವ ನಕುಲರು
ಕಾದಲಿವದಿರ ಮುರಿದನಗ್ಗದ
ಕೈದುಕಾರರ ದೇವ ಕರ್ಣನ ಗೆಲುವರಾರೆಂದ (ಕರ್ಣ ಪರ್ವ, ೧೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅರ್ಜುನ, ನಾನು ಯುದ್ಧ ಮಾಡಿ ನೋವುಂಡೆ, ಆಮೇಲೆ ಭೀಮನೇ ಅಡ್ಡಗಟ್ಟಲು ಅವನೊಡನೆ ಕಾದಿ ನಿಲ್ಲಿಸಿ ಮತ್ತೆ ನನ್ನ ರಥವನ್ನು ತಡೆದನು. ಆಗ ನಕುಲ ಸಹದೇವರು ಅವನನ್ನು ಮೂದಲಿಸಿ ತಡೆದು ಕಾದಿದರು, ಆದರೆ ಕರ್ಣನು ಅವರನ್ನೂ ಗೆದ್ದ. ಶಸ್ತ್ರಧಾರರಿಗೆ ಈತನೇ ದೇವ ಅವನನ್ನು ಗೆಲ್ಲುವವರಾರು ಎಂದು ಧರ್ಮಜನು ಕರ್ಣನ ಪರಾಕ್ರಮವನ್ನು ಅರ್ಜುನನಿಗೆ ಹೇಳಿದನು.

ಅರ್ಥ:
ಕಾದಿ: ಹೋರಾಡಿ; ನೊಂದು: ಬೇಸರ; ಬಳಿಕ: ನಂತರ; ವೃಕೋದರ: ತೋಳದಂತ ಹೊಟ್ಟೆ (ಭೀಮ); ಅಡಹಾಯ್ದು: ಮಧ್ಯಬಂದು; ನಿಲಿಸು: ತಡೆ; ಮದೀಯ: ತನ್ನ; ರಥ: ಬಂಡಿ; ಕೆಣಕು: ರೇಗಿಸು, ಪ್ರಚೋದಿಸು; ಮೂದಲಿಸು: ಹಂಗಿಸು; ಇವದಿರು: ಇಷ್ಟು ಜನ; ಮುರಿ: ಸೀಳು; ಅಗ್ಗ: ಶ್ರೇಷ್ಠ; ಕೈದುಕಾರ: ಆಯುಧ ಹಿಡಿದ ಸೈನಿಕ; ದೇವ: ಭಗವಂತ; ಗೆಲುವು: ಜಯ;

ಪದವಿಂಗಡಣೆ:
ಕಾದಿ +ನೊಂದೆನು +ತಾನು +ಬಳಿಕ +ವೃ
ಕೋದರನೆ +ಅಡಹಾಯ್ದನ್+ಆತನ
ಕಾದಿ +ನಿಲಿಸಿ+ ಮದೀಯ +ರಥವನು +ಮತ್ತೆ +ಕೆಣಕಿದನು
ಮೂದಲಿಸಿ+ ಸಹದೇವ +ನಕುಲರು
ಕಾದಲ್+ಇವದಿರ+ ಮುರಿದನ್+ಅಗ್ಗದ
ಕೈದುಕಾರರ+ ದೇವ +ಕರ್ಣನ +ಗೆಲುವರಾರೆಂದ

ಅಚ್ಚರಿ:
(೧) ಕರ್ಣನನ್ನು ಹೊಗಳುವ ಬಗೆ – ಅಗ್ಗದ ಕೈದುಕಾರರ ದೇವ

ಪದ್ಯ ೨೮: ರಾಕ್ಷಸರು ದೇವತೆಗಳನ್ನು ಹೇಗೆ ಓಡಿಸಿದರು?

ಕಾದ ಲೋಹದ ಹಳಿಯವೊಲು ಕೆಂ
ಪಾದವಸುರರ ಮೋರೆಗಳು ತಿದಿ
ಯೂದುಗಿಚ್ಚಿನ ಹೊದರಿನಂತಿರೆ ಬಿಡದೆ ಭುಗಿಲಿಡುತ
ಸೇದುವೆರಳಿನ ತಿರುವಿನಂಬಿನ
ವಾದಿನೆಸುಗೆಯ ಬಿರುದರಗ್ಗದ
ಕೈದುಕಾರರು ಕೆಣಕಿದಮರರ ಹೊಟ್ಟ ತೂರಿದರು (ಕರ್ಣ ಪರ್ವ, ೭ ಸಂಧಿ, ೨೮ ಪದ್ಯ)

ತಾತ್ಪರ್ಯ:
ದಾನವರ ಮುಖಗಳು ಕಾದ ಕಬ್ಬಿಣದ (ಲೋಹ) ಸರಳಿನಂತೆ ಕೆಂಪಾದವು. ಕೆಂಡದ ಮೇಲೆ ಬರುವ ತಿದಿಯ ಗಾಳಿಯಂತೆ ರಾಕ್ಷಸರು ಉರಿಯುತ್ತಾ ಬೆರಳಿನಿಂದ ಬಾಣಗಳನ್ನೆಳೆದು ದೇವತೆಗಳ ಮೇಲೆ ಬಿಟ್ಟು ಒಲೆಗೆ ಹೊಟ್ಟನ್ನು ತೂರುವಂತೆ ದೇವತೆಗಳನ್ನೋಡಿಸಿದರು.

ಅರ್ಥ:
ಕಾದ: ಬಿಸಿಯಾದ; ಲೋಹ: ಖನಿಜ ಧಾತು; ಹಳಿ: ಲೋಹದ ಪಟ್ಟಿ; ಕೆಂಪು: ರಕ್ತವರ್ಣ; ಅಸುರ: ದಾನವ; ಮೋರೆ: ಮುಖ; ತಿದಿ: ಕಮ್ಮಾರ ಕಬ್ಬಿಣಕಾಯಿಸಲು ಒಲೆಯಬೆಂಕಿಯನ್ನು ಉರಿಸಲು ಗಾಳಿ ಊದುವ ಚರ್ಮದ ಪದರಗಳ ಚೀಲ; ಊದು: ಬೀಸು, ತೀಡು; ಕಿಚ್ಚು: ಬೆಂಕಿ, ಅಗ್ನಿ; ಹೊದರು: ಗುಂಪು, ಸಮೂಹ; ಬಿಡು: ತೊರೆ, ತ್ಯಜಿಸು; ಭುಗಿಲಿಡು: ಭುಗಿಲ್ ಎಂದು ಶಬ್ದ ಮಾಡು; ಸೇದು:ಮುದುಡು, ಸಂಕೋಚಗೊಳ್ಳು; ಬೆರಳು: ಅಂಗುಲಿ; ತಿರುವು: ತಿರುಗಿಸು; ಅಂಬು: ಬಾಣ; ಎಸಗು: ಮಾಡು; ಬಿರು: ಬಿರುಸಾದುದು; ಅಗ್ಗ:ಹಗುರ; ಕೈದುಕಾರ: ಕತ್ತಿಯನ್ನು ಹಿಡಿದ ಸೈನಿಕ; ಕೆಣಕು: ಪ್ರಚೋದಿಸು; ಅಮರ: ದೇವತೆ; ಹೊಟ್ಟು: ವ್ಯರ್ಥವಾದ; ತೂರು: ನೂಕು, ಹೋರಹಾಕು;

ಪದವಿಂಗಡಣೆ:
ಕಾದ +ಲೋಹದ +ಹಳಿಯವೊಲು +ಕೆಂ
ಪಾದವ್+ಅಸುರರ +ಮೋರೆಗಳು +ತಿದಿ
ಯೂದು+ ಕಿಚ್ಚಿನ +ಹೊದರಿನಂತಿರೆ+ ಬಿಡದೆ +ಭುಗಿಲಿಡುತ
ಸೇದು +ಬೆರಳಿನ +ತಿರುವಿನ್+ಅಂಬಿನ
ವಾದಿನ್+ಎಸುಗೆಯ +ಬಿರುದರ್+ಅಗ್ಗದ
ಕೈದುಕಾರರು +ಕೆಣಕಿದ್+ಅಮರರ +ಹೊಟ್ಟ +ತೂರಿದರು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾದ ಲೋಹದ ಹಳಿಯವೊಲು ಕೆಂಪಾದವಸುರರ ಮೋರೆಗಳು