ಪದ್ಯ ೩೦: ಧರ್ಮಜನ ಮಂತ್ರಿಗಳು ಏನೆಂದು ಹೇಳಿದರು?

ನೆರೆ ಪರಿಚ್ಛೇದಿಸಿದ ಬಲ ಮು
ಕ್ಕುರಿಕಿತೋ ನಿಜಸೈನ್ಯಸಾಗರ
ಬರತುದೋ ಬಲುಗೈಗಳೆದೆಗಳ ಕೆಚ್ಚು ಕರಗಿತಲಾ
ಮುರಿದು ಬರುತಿದೆ ಸೃಂಜಯರು ಕೈ
ಮುರಿದರೇ ಪಾಂಚಾಲಭಟರೆಂ
ದೊರಲಿದುದು ಮಂತ್ರಿಗಳು ರಾಯನ ರಥದ ಬಳಸಿನಲಿ (ಗದಾ ಪರ್ವ, ೧ ಸಂಧಿ, ೩೦ ಪದ್ಯ)

ತಾತ್ಪರ್ಯ:
ದೃಢ ನಿರ್ಧಾರದಿಂದ ಶತ್ರು ಸೈನ್ಯವು ಮುತ್ತಲು ನಮ್ಮ ವೀರರ ಕೆಚ್ಚು ಕರಗಿಹೋಗಿ ನಮ್ಮ ಸೈನ್ಯಸಾಗರ ಬತ್ತುತ್ತಿದೆ. ಸೃಂಜಯರು ಪಾಂಚಾಲರು ಸೋತು ಬರುತ್ತಿದ್ದಾರೆ ಎಂದು ಧರ್ಮಜನ ರಥದ ಸುತ್ತಲಿದ್ದ ಮಂತ್ರಿಗಳು ಕೂಗಿಕೊಂಡರು.

ಅರ್ಥ:
ನೆರೆ: ಗುಂಪು; ಪರಿಚ್ಛೇದ: ಕತ್ತರಿಸುವುದು; ಬಲ: ಶಕ್ತಿ; ಮುಕ್ಕುರಿಸು: ಆತುರ ಪಡು; ನಿಜ: ದಿಟ, ತನ್ನ; ಸೈನ್ಯ: ಸೇನೆ; ಸಾಗರ: ಶರಧಿ; ಬರ: ಕ್ಷಾಮ, ಅಭಾವ; ಬಲು: ಬಹಳ; ಕೈ: ಹಸ್ತ; ಎದೆ: ಉರು; ಕೆಚ್ಚು: ಧೈರ್ಯ, ಸಾಹಸ; ಕರಗು: ಕಡಿಮೆಯಾಗು; ಮುರಿ: ಸೀಳು; ಭಟ: ಸೈನ್ಯ; ಒರಲು: ಅರಚು, ಕೂಗಿಕೊಳ್ಳು; ಮಂತ್ರಿ: ಸಚಿವ; ರಾಯ: ರಾಜ; ರಥ: ಬಂಡಿ; ಬಳಸು: ಆವರಿಸುವಿಕೆ, ಸುತ್ತುವರಿಯುವಿಕೆ;

ಪದವಿಂಗಡಣೆ:
ನೆರೆ +ಪರಿಚ್ಛೇದಿಸಿದ+ ಬಲ +ಮು
ಕ್ಕುರಿಕಿತೋ +ನಿಜಸೈನ್ಯಸಾಗರ
ಬರತುದೋ+ ಬಲು+ಕೈಗಳ್+ಎದೆಗಳ+ ಕೆಚ್ಚು +ಕರಗಿತಲಾ
ಮುರಿದು +ಬರುತಿದೆ +ಸೃಂಜಯರು +ಕೈ
ಮುರಿದರೇ +ಪಾಂಚಾಲ+ಭಟರೆಂದ್
ಒರಲಿದುದು +ಮಂತ್ರಿಗಳು +ರಾಯನ +ರಥದ +ಬಳಸಿನಲಿ

ಅಚ್ಚರಿ:
(೧) ಶಕ್ತಿಕುಂದಿತು ಎಂದು ಹೇಳುವ ಪರಿ – ನಿಜಸೈನ್ಯಸಾಗರ ಬರತುದೋ ಬಲುಗೈಗಳೆದೆಗಳ ಕೆಚ್ಚು ಕರಗಿತಲಾ

ಪದ್ಯ ೭೭: ಕೌರವರಿಗೆ ಯಾವುದು ನಿಶ್ಚಿತವಾದುದು?

ಎಚ್ಚ ಶರವನು ಗದೆಯಲಣೆಯುತ
ಕಿಚ್ಚು ಹೊಕ್ಕಂದದಲಿ ರಥವನು
ಬಿಚ್ಚಿ ಬಿಸುಟನು ಸಾರಥಿಯನಾ ಹಯವನಾ ಧನುವ
ಕೊಚ್ಚಿದನು ಕೊಲೆಗಡಿಗನಿದಿರಲಿ
ಕೆಚ್ಚು ಮನದವರಾರು ಸೋಲವಿ
ದೊಚ್ಚತವಲೇ ನಿಮ್ಮ ಸೇನೆಗೆ ಭೂಪ ಕೇಳೆಂದ (ದ್ರೋಣ ಪರ್ವ, ೨ ಸಂಧಿ, ೭೭ ಪದ್ಯ)

ತಾತ್ಪರ್ಯ:
ಕೌರವರ ಬಾಣಗಳನ್ನು ಗದೆಯಿಂದ ಖಂಡಿಸಿ, ಅವರ ಸಾರಥಿಗಳು, ಕುದುರೆಗಳು, ಧನುಸ್ಸುಗಳನ್ನು ತುಂಡು ಮಾಡಿದನು. ಭೀಮನೆಂಬ ಕೊಲೆಗಡುಕನಿದಿರಿನಲ್ಲಿ ಧೈರ್ಯದಿಂದ ಹೋರಾಡುವವರಾರು? ಧೃತರಾಷ್ಟ್ರ ನಿಮ್ಮ ಸೇನೆಗೆ ಸೋಲೇ ಕಟ್ಟಿಟ್ಟ ಬುತ್ತಿ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಎಚ್ಚು: ಬಾಣ ಪ್ರಯೋಗ ಮಾಡು; ಶರ: ಬಾಣ; ಗದೆ: ಮುದ್ಗರ; ಅಣೆ: ತಿವಿ, ಹೊಡೆ; ಕಿಚ್ಚು: ಬೆಂಕಿ, ಅಗ್ನಿ; ಹೊಕ್ಕು: ಸೇರು; ರಥ: ಬಂಡಿ; ಬಿಚ್ಚು: ಬೇರೆಮಾಡು, ವಿಭಾಗಿಸು; ಬಿಸುಟು: ಹೊರಹಾಕು; ಸಾರಥಿ: ಸೂತ; ಹಯ: ಕುದುರೆ; ಧನು: ಬಿಲ್ಲು; ಕೊಚ್ಚು: ಪುಡಿ, ಹುಡಿ; ಕೊಲೆ: ಸಾಯಿಸು; ಇದಿರು: ಎದುರು, ಮುಂದೆ; ಕೆಚ್ಚು: ಸೊಕ್ಕು, ದರ್ಪ; ಮನ: ಮನಸ್ಸು; ಸೋಲು: ಪರಾಭವ; ಸೇನೆ: ಸೈನ್ಯ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಎಚ್ಚ +ಶರವನು +ಗದೆಯಲ್+ಅಣೆಯುತ
ಕಿಚ್ಚು +ಹೊಕ್ಕಂದದಲಿ +ರಥವನು
ಬಿಚ್ಚಿ +ಬಿಸುಟನು +ಸಾರಥಿಯನಾ +ಹಯವನಾ +ಧನುವ
ಕೊಚ್ಚಿದನು +ಕೊಲೆಗಡಿಗನ್+ಇದಿರಲಿ
ಕೆಚ್ಚು +ಮನದವರಾರು +ಸೋಲವಿದ್
ಒಚ್ಚತವಲೇ +ನಿಮ್ಮ +ಸೇನೆಗೆ +ಭೂಪ +ಕೇಳೆಂದ

ಅಚ್ಚರಿ:
(೧) ಕಿಚ್ಚು, ಕೆಚ್ಚು, ಕೊಚ್ಚು – ಪದಗಳ ಬಳಕೆ

ಪದ್ಯ ೫೯: ಎಂತಹ ರಾವುತರು ಮುನ್ನುಗ್ಗಿದರು?

ನೂಲ ಹರಿಗೆಯ ಹೆಗಲ ಬಾರಿಯ
ತೋಳ ತೊರಿಯ ಲೌಡಿಗಳ ಕರ
ವಾಳ ತಳಪದ ಮಿಂಚುಗಳ ತನುಮನದ ಕೆಚ್ಚುಗಳ
ಸಾಲದಾವಣಿಅಲೆಯ ಗಂಟಲ
ಗಾಳಗತ್ತರಿಗರಗಸದ ಬಿರು
ದಾಳಿಗಳ ಛಲದಂಕರಾವುತರೊತ್ತಿ ನೂಕಿದರು (ಭೀಷ್ಮ ಪರ್ವ, ೪ ಸಂಧಿ, ೫೯ ಪದ್ಯ)

ತಾತ್ಪರ್ಯ:
ನೂಲಿನ ಗುರಾಣಿ, ಹೆಗಲಲ್ಲಿ ಹಗ್ಗ, ದೃಢವಾದ ತೋಳುಗಳಲ್ಲಿ ಹಿಡಿದ ಲೌಡಿ ಕತ್ತಿಗಳ ಹೊಳಪು, ಮನಸ್ಸಿನ ನಿಷ್ಠುರ ಪರಾಕ್ರಮ, ತಲೆಯ ಮೇಲೆ ದಾವಣಿಗಳು, ಅವಕ್ಕೆ ಕಟ್ಟಿದ ಗಂಟಲಿನ ಕೊಕ್ಕೆ, ಕತ್ತರಿ, ಗರಗಸಗಳು ಇವುಗಳಿಂದ ಕೂಡಿದ ಬಿರುದನ್ನುಳ್ಳವರೂ, ಛಲಗಾರರೂ ಆದ ರಾವುತರು ಮುನ್ನುಗ್ಗಿದರು.

ಅರ್ಥ:
ನೂಲು: ಬಟ್ಟೆ, ವಸ್ತ್ರ; ಹರಿಗೆ: ಗುರಾಣಿ; ಹೆಗಲು: ಭುಜ; ಬಾರಿ: ಬಲಿ, ಆಹುತಿ, ಲಗ್ಗೆ; ತೋಳ: ಭುಜ; ತೋರ: ದಪ್ಪನಾದ; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ಕರವಾಳ: ಕತ್ತಿ; ತಳಪಥ: ಕಾಂತಿ; ಮಿಂಚು: ಪ್ರಕಾಶ; ತನುಮನ: ದೇಹ ಮತ್ತು ಮನಸ್ಸು; ಕೆಚ್ಚು: ಧೈರ್ಯ, ಸಾಹಸ; ಸಾಲು: ಗುಂಪು, ಆವಳಿ; ದಾವಣಿ: ಕಟ್ಟು, ಬಂಧನ; ತಲೆ: ಶಿರ; ಗಂಟಲು: ಕೊರಳು; ಕತ್ತರಿ: ಒಂದು ಬಗೆಯ ಆಯುಧ; ಗರಗಸ: ಮರ ಕೊಯ್ಯುವ ಸಾಧನ, ಗಂಪ; ಬಿರುದ: ಬಿರುದುಳ್ಳವ; ಛಲ: ದೃಢ ನಿಶ್ಚಯ; ಅಂಕ: ಯುದ್ಧ; ರಾವುತ: ಕುದುರೆ ಸವಾರ, ಅಶ್ವಾರೋಹಿ; ನೂಕು: ತಳ್ಳು; ಗಾಳ: ಕೊಕ್ಕೆ;

ಪದವಿಂಗಡಣೆ:
ನೂಲ+ ಹರಿಗೆಯ+ ಹೆಗಲ+ ಬಾರಿಯ
ತೋಳ +ತೋರಿಯ +ಲೌಡಿಗಳ+ ಕರ
ವಾಳ +ತಳಪದ +ಮಿಂಚುಗಳ +ತನುಮನದ +ಕೆಚ್ಚುಗಳ
ಸಾಲ+ದಾವಣಿ+ತಲೆಯ +ಗಂಟಲ
ಗಾಳ+ಕತ್ತರಿ+ಗರಗಸದ +ಬಿರು
ದಾಳಿಗಳ +ಛಲದ್+ಅಂಕ+ರಾವುತರ್+ಒತ್ತಿ +ನೂಕಿದರು

ಅಚ್ಚರಿ:
(೧) ಹರಿಗೆ, ಲೌಡಿ, ಕರವಾಳ, ಕತ್ತರಿ, ಗರಗಸ – ಆಯುಧಗಳ ಹೆಸರು
(೨) ರಾವುತರ ತೋರಿದ ಪರಿ – ನೂಲ ಹರಿಗೆಯ ಹೆಗಲ ಬಾರಿಯ ತೋಳ ತೊರಿಯ ಲೌಡಿಗಳ ಕರ
ವಾಳ ತಳಪದ ಮಿಂಚುಗಳ ತನುಮನದ ಕೆಚ್ಚುಗಳ