ಪದ್ಯ ೩೩: ಕರ್ಣನು ದುರ್ಯೋಧನನಿಗೆ ಏನು ಹೇಳಿದನು?

ಭಾನುಸುತ ಕುಳ್ಳಿರು ನದೀಸುತ
ನೇನನೆಂದನು ತನ್ನ ಚಿತ್ತ
ಗ್ಲಾನಿಯನು ಬಿಸುಟೇನ ನುಡಿದನು ಭಾವಶುದ್ಧಿಯಲಿ
ಏನನೆಂಬೆನು ಜೀಯ ಬಹಳ ಕೃ
ಪಾನಿಧಿಯಲಾ ಭೀಷ್ಮನನುಸಂ
ಧಾನವಿಲ್ಲದೆ ಬೆಸಸಿ ಕಳುಹಿದನೆಂದನಾ ಕರ್ಣ (ದ್ರೋಣ ಪರ್ವ, ೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಕರ್ಣನನ್ನು ತನ್ನ ಓಲಗದಲ್ಲಿ ಕಂಡ ದುರ್ಯೋಧನನು, ಕುಳಿತುಕೋ ಕರ್ಣ, ಭೀಷ್ಮನು ತನ್ನ ಚಿಂತೆಯನ್ನು ಮರೆತು ಭಾವಶುದ್ಧಿಯಿಂದ ಏನು ಹೇಳಿದನು ಎಂದು ದುರ್ಯೋಧನನು ಕೇಳಲು, ಕರ್ಣನು, ಒಡೆಯ ಭೀಷ್ಮನು ಕೃಪಾನಿಧಿ, ಏನನ್ನೂ ಕೆದಕದೆ ಯುದ್ಧ ಮಾಡಲಿ ಹೇಳಿ ಕಳುಹಿಸಿದನೆಂದನು.

ಅರ್ಥ:
ಭಾನುಸುತ: ರವಿಯ ಪುತ್ರ (ಕರ್ಣ); ಕುಳ್ಳಿರು: ಆಸೀನನಾಗು; ನದೀಸುತ: ಭೀಷ್ಮ; ಚಿತ್ತ: ಮನಸ್ಸು; ಗ್ಲಾನಿ: ಬಳಲಿಕೆ; ಬಿಸುಟು: ಹೊರಹಾಕು; ನುಡಿ: ಮಾತಾಡು; ಭಾವ: ಚಿತ್ತವೃತ್ತಿ, ಸಂವೇದನೆ; ಶುದ್ಧ: ನಿರ್ಮಲ; ಜೀಯ: ಒಡೆಯ; ಬಹಳ: ತುಂಬ; ಕೃಪ: ಕರುಣೆ; ಕೃಪಾನಿಧಿ: ಕರುಣೆಯ ನಿಧಿ; ಅನುಸಂಧಾನ: ಪರಿಶೀಲನೆ, ವಿಮರ್ಶೆ; ಬೆಸಸು: ಆಜ್ಞಾಪಿಸು, ಹೇಳು; ಕಳುಹು: ತೆರಳು;

ಪದವಿಂಗಡಣೆ:
ಭಾನುಸುತ +ಕುಳ್ಳಿರು +ನದೀಸುತನ್
ಏನನೆಂದನು +ತನ್ನ +ಚಿತ್ತ
ಗ್ಲಾನಿಯನು +ಬಿಸುಟ್+ಏನ +ನುಡಿದನು +ಭಾವ+ಶುದ್ಧಿಯಲಿ
ಏನನೆಂಬೆನು +ಜೀಯ +ಬಹಳ+ ಕೃ
ಪಾನಿಧಿಯಲಾ +ಭೀಷ್ಮನ್+ಅನುಸಂ
ಧಾನವಿಲ್ಲದೆ +ಬೆಸಸಿ +ಕಳುಹಿದನ್+ಎಂದನಾ +ಕರ್ಣ

ಅಚ್ಚರಿ:
(೧) ಭಾನುಸುತ, ನದೀಸುತ – ಪದಗಳ ಬಳಕೆ, ೧ ಸಾಲು
(೨) ಭೀಷ್ಮರನ್ನು ಹೊಗಳಿದ ಪರಿ – ಬಹಳ ಕೃಪಾನಿಧಿಯಲಾ ಭೀಷ್ಮ

ಪದ್ಯ ೫: ಯಾರ ಆಗಮನವನ್ನು ದೂತ ತಿಳಿಸಿದನು?

ಇದಕೆ ಕೃಷ್ಣಾಗಮನವೇ ಫಲ
ದುದಯ ವೈಸಲೆಯೆನುತಲಿರೆ ಬಂ
ದಿದಿರೆ ನಿಂದನು ದೂತನಮಲ ದ್ವಾರಕಾಪುರದ
ಇದೆ ಕೃಪಾನಿಧಿಬಂದನಸುರಾ
ಭ್ಯುದಯ ಘಾತಕ ಬಂದ ರಿಪುಬಲ
ಮದನಮದಹರ ಬಂದನಿದೆಯೆಮ್ದನು ಮಹೀಪತಿಗೆ (ಅರಣ್ಯ ಪರ್ವ, ೧೫ ಸಂಧಿ, ೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನ ಆಗಮನವನ್ನೇ ಈ ಶುಭಶಕುನಗಳೂ ಸೂಚಿಸುತ್ತಿರಬೇಕು ಎಂದುಕೊಳ್ಳುತ್ತಿರುವಾಗ, ದ್ವಾರಕೆಯಿಮ್ದ ದೂತನೊಬ್ಬನು ಬಂದು ಯುಧಿಷ್ಠಿರನ ಸಮ್ಮುಖದಲ್ಲಿ ನಿಂತನು. ಇದೋ ಕೃಪಾನಿಧಿ ಶ್ರೀಕೃಷ್ಣನು ಬಂದನು, ರಾಕ್ಷಸರ ಅಭ್ಯುದಯವನ್ನು ಮುರಿಯುವವನು ಬಂದನು, ಶತ್ರುಗಳೆಂಬ ಮನ್ಮಥನ ಮದವನ್ನು ದಹಿಸುವ ಶಿವನು ಬಂದನು ಎಂದು ಧರ್ಮಜನಿಗೆ ಹೇಳಿದನು.

ಅರ್ಥ:
ಆಗಮನ: ಬರುವಿಕೆ; ಫಲ: ಪ್ರಯೋಜನ; ಉದಯ: ಹುಟ್ಟು; ಐಸಲೆ: ಅಲ್ಲವೆ; ಬಂದು: ಆಗಮನ; ಇದಿರು: ಎದುರು; ನಿಂದನು: ನಿಲ್ಲು; ದೂತ: ಸೇವಕ; ಅಮಲ: ನಿರ್ಮಲ; ಪುರ: ಊರು; ಕೃಪಾನಿಧಿ: ಕರುಣಾಸಾಗರ; ಅಸುರ: ರಾಕ್ಷಸ; ಅಭ್ಯುದಯ: ಏಳಿಗೆ; ಘಾತ: ಹೊಡೆತ, ಪೆಟ್ಟು; ರಿಪು: ವೈರಿ; ಬಲ: ಶಕ್ತಿ; ಮದನ: ಮನ್ಮಥ; ಮದ: ಅಹಂಕಾರ; ಹರ: ಶಿವ; ಮಹೀಪತಿ: ರಾಜ;

ಪದವಿಂಗಡಣೆ:
ಇದಕೆ +ಕೃಷ್ಣಾಗಮನವೇ +ಫಲವ್
ಉದಯವ್ + ಐಸಲೆ+ಎನುತಲಿರೆ+ ಬಂದ್
ಇದಿರೆ +ನಿಂದನು +ದೂತನ್+ಅಮಲ +ದ್ವಾರಕಾಪುರದ
ಇದೆ+ ಕೃಪಾನಿಧಿ+ಬಂದನ್+ಅಸುರ
ಅಭ್ಯುದಯ +ಘಾತಕ +ಬಂದ +ರಿಪು+ಬಲ
ಮದನ+ಮದ+ಹರ +ಬಂದನಿದೆ+ಎಂದನು +ಮಹೀಪತಿಗೆ

ಅಚ್ಚರಿ:
(೧) ಕೃಷ್ಣನ ವರ್ಣನೆ – ಕೃಪಾನಿಧಿಬಂದನಸುರಾಭ್ಯುದಯ ಘಾತಕ ಬಂದ ರಿಪುಬಲ
ಮದನಮದಹರ ಬಂದನಿದೆಯೆಮ್ದನು ಮಹೀಪತಿಗೆ