ಪದ್ಯ ೧೧: ಯಾವ ಕಾರ್ಯವು ಧರ್ಮಕ್ಕೆ ಭಾರವಾದುದು?

ಮರಹಿನಲಿ ಮುಡುಹುವುದು ಧರ್ಮದ
ಹೊರಿಗೆಯಲ್ಲದು ನಿದ್ರೆಗೈದರ
ನಿರಿವುದೇನಿದು ಪಂಥವೇ ಪೌರಾಣಮಾರ್ಗದಲಿ
ಅರಿಯದಾರಂಭಿಸಿದೆವಿದರಲಿ
ಪರಿಸಮಾಪ್ತಿಯ ಕಂಡೆವಾದಡೆ
ನೆರೆ ಕೃತಾರ್ಥರು ವಿಘ್ನಶತವಡ್ಡೈಸದಿರವೆಂದ (ಗದಾ ಪರ್ವ, ೯ ಸಂಧಿ, ೧೧ ಪದ್ಯ)

ತಾತ್ಪರ್ಯ:
ಎಚ್ಚರವಿಲ್ಲದಿದ್ದಾಗ ಕೊಲ್ಲುವುದು ಧರ್ಮಮಾರ್ಗವಲ್ಲ. ನಿದ್ರಿಸುತ್ತಿರುವವರನ್ನು ಕೊಲ್ಲುವುದು ಯಾವ ಸನಾತನ ಧರ್ಮ ಮಾರ್ಗ? ತಿಳಿಯದೆ ಕಾರ್ಯಾರಮ್ಭ ಮಾಡಿದ್ದೇವೆ, ನೂರಾರು ವಿಘ್ನಗಳು ಬಾರದಿರುವುದಿಲ್ಲ. ಈ ಕೆಲಸ ಮುಗಿದರೆ ನಾವು ಕೃತಾರ್ಥರೇ ಸರಿ ಎಂದು ಹೇಳಿದನು.

ಅರ್ಥ:
ಮರಹು: ಮರವೆ, ವಿಸ್ಮೃತಿ, ಎಚ್ಚರವಿಲ್ಲದ ಸ್ಥಿತಿ; ಮುಡುಹು: ಕೊಲ್ಲು, ಸಾಯುವಂತೆ ಮಾಡು; ಧರ್ಮ: ಧಾರಣೆ ಮಾಡಿದುದು; ಹೊರಿಗೆ: ಭಾರ, ಹೊರೆ; ನಿದ್ರೆ: ಶಯನ; ಐದು: ಬಂದುಸೇರು; ಇರಿ: ಚುಚ್ಚು; ಪಂಥ: ಮಾರ್ಗ; ಪೌರಾಣ: ಹಿಂದೆ ನಡೆದ, ಪುರಾಣ; ಮಾರ್ಗ: ದಾರಿ; ಅರಿ: ತಿಳಿ; ಆರಂಭಿಸು: ಶುರುಮಾಡು; ಸಮಾಪ್ತಿ: ಕೊನೆ; ಕಂಡು: ನೋಡು; ನೆರೆ: ಗುಂಪು; ಕೃತಾರ್ಥ: ಧನ್ಯ; ವಿಘ್ನ: ತೊಡಕು; ಶತ: ನುರು; ಅಡ್ಡೈಸು: ಮಧ್ಯ ಬರುವುದು, ಅಡ್ಡಪಡಿಸು;

ಪದವಿಂಗಡಣೆ:
ಮರಹಿನಲಿ +ಮುಡುಹುವುದು +ಧರ್ಮದ
ಹೊರಿಗೆಯಲ್ಲದು+ ನಿದ್ರೆಗ್+ಐದರನ್
ಇರಿವುದೇನ್+ಇದು +ಪಂಥವೇ +ಪೌರಾಣ+ಮಾರ್ಗದಲಿ
ಅರಿಯದ್+ಆರಂಭಿಸಿದೆವ್+ಇದರಲಿ
ಪರಿಸಮಾಪ್ತಿಯ+ ಕಂಡೆವಾದಡೆ
ನೆರೆ +ಕೃತಾರ್ಥರು +ವಿಘ್ನಶತವ್+ಅಡ್ಡೈಸದಿರವೆಂದ

ಅಚ್ಚರಿ:
(೧) ಧರ್ಮಕ್ಕೆ ವಿರುದ್ಧವಾದುದು – ಮರಹಿನಲಿ ಮುಡುಹುವುದು ಧರ್ಮದ ಹೊರಿಗೆಯಲ್ಲದು
(೨) ಪಂಥ, ಮಾರ್ಗ – ಸಮಾನಾರ್ಥಕ ಪದಗಳು

ಪದ್ಯ ೨೨: ಕರ್ಣನು ಘಟೋತ್ಕಚನನ್ನು ಹೇಗೆ ಹೊಗಳಿದನು?

ಶಿವಶಿವಾ ಕೌರವನ ಸುಭಟರು
ದಿವಿಜರಿಗೆ ವೆಗ್ಗಳರು ನಿನಗಿಂ
ದಿವರು ಸೋತರು ಪೂತು ದಾನವ ನೀ ಕೃತಾರ್ಥನಲ
ಇವನ ಪಾಡಿನ ಸುಭಟರೇ ನ
ಮ್ಮವರು ಗೆಲವೇನಿವನದೇ ಮಾ
ಧವನ ಸೂತ್ರದ ಯಂತ್ರವಿದು ಲಯಕಾಲ ನಮಗೆಂದ (ದ್ರೋಣ ಪರ್ವ, ೧೬ ಸಂಧಿ, ೨೨ ಪದ್ಯ)

ತಾತ್ಪರ್ಯ:
ಶಿವ ಶಿವಾ, ದೇವತೆಗಳಿಗೂ ಮಿಗಿಲಾದ ಕೌರವನ ವೀರರು ಇಂದು ನಿನಗೆ ಸೋತರು. ಭಲೇ ರಾಕ್ಷಸ ನೀನೇ ಧನ್ಯ! ನಮ್ಮ ಪರಾಕ್ರಮಿಗಳು ಇವನಿಗೆ ಸೋಲುವಂಥವರೇ! ಗೆಲುವು ಇವನದೇ? ಇದು ಶ್ರೀಕೃಷ್ಣನ ಸೂತ್ರದ ಯಂತ್ರ. ನಮ್ಮ ನಾಶದ ಕಾಲ ಸಮೀಪಿಸಿದೆ ಎಂದು ಕರ್ಣನು ಉದ್ಗರಿಸಿದನು.

ಅರ್ಥ:
ಸುಭಟ: ಪರಾಕ್ರಮಿ, ಸೈನಿಕ; ದಿವಿಜ: ದೇವತೆ; ವೆಗ್ಗಳ: ಶ್ರೇಷ್ಠ; ಸೋಲು: ಪರಾಭವ; ಪೂತು: ಭಲೇ; ದಾನವ: ರಾಕ್ಷಸ; ಕೃತಾರ್ಥ: ಧನ್ಯ; ಪಾಡು: ರೀತಿ; ಗೆಲುವು: ಜಯ; ಮಾಧವ: ಕೃಷ್ಣ; ಸೂತ್ರ: ವಿಧಿ, ನಿಯಮ, ಕಟ್ಟಳೆ; ಯಂತ್ರ: ಉಪಕರಣ; ಲಯ: ನಾಶ; ಕಾಲ: ಸಮಯ;

ಪದವಿಂಗಡಣೆ:
ಶಿವಶಿವಾ +ಕೌರವನ +ಸುಭಟರು
ದಿವಿಜರಿಗೆ +ವೆಗ್ಗಳರು +ನಿನಗಿಂದ್
ಇವರು +ಸೋತರು +ಪೂತು +ದಾನವ +ನೀ +ಕೃತಾರ್ಥನಲ
ಇವನ +ಪಾಡಿನ +ಸುಭಟರೇ +ನ
ಮ್ಮವರು +ಗೆಲವೇನ್+ಇವನದೇ+ ಮಾ
ಧವನ +ಸೂತ್ರದ +ಯಂತ್ರವಿದು +ಲಯಕಾಲ +ನಮಗೆಂದ

ಅಚ್ಚರಿ:
(೧) ಘಟೋತ್ಕಚನನ್ನು ಹೊಗಳಿದ ಪರಿ – ಪೂತು ದಾನವ ನೀ ಕೃತಾರ್ಥನಲ

ಪದ್ಯ ೧೮: ದುರ್ಯೋಧನನು ಅಭಿಮನ್ಯುವನ್ನು ಹೇಗೆ ಕೊಂಡಾಡಿದನು?

ಹುರುಡ ಮರೆದೆನು ಮಗನೆ ಸಾಲದೆ
ಭರತಕುಲದಲಿ ನಿನ್ನ ಬೆಳವಿಗೆ
ಯೆರಡು ಕವಲನ್ವಯಕೆ ಕೊಡದೇ ಸುಗತಿ ಸಂಪದವ
ಕರುಳು ಬೀಳವೆ ತನ್ನ ಬಸುರಿಂ
ದುರುಳಿದವದಿರಲೇನು ಫಲ ಮ
ತ್ಸರವೆ ಪಾರ್ಥ ಕೃತಾರ್ಥನೆಂದನು ಕೌರವರ ರಾಯ (ದ್ರೋಣ ಪರ್ವ, ೫ ಸಂಧಿ, ೧೮ ಪದ್ಯ)

ತಾತ್ಪರ್ಯ:
ಮಗನೆ ಅಭಿಮನ್ಯು, ನಾನು ಛಲವನ್ನು ಮರೆತೆ, ಭರತವಂಶದ ಎರಡು ಕವಲುಗಳಿಗೂ ನೀನು ಸದ್ಗತಿಯ ಸಂಪತ್ತನ್ನು ಕೊಡದಿರುವೆಯಾ? ನನಗೂ ಮಕ್ಕಳಾಗಿದ್ದಾರೆ, ಅವರಿಂದ ಏನು ಪ್ರಯೋಜನ, ಹೊಟ್ಟೆ ಕಿಚ್ಚೇಕೆ, ಪಾರ್ಥನೇ ಇಂತಹ ಮಗನನ್ನು ಪಡೆದು ಧನ್ಯನಾಗಿದ್ದಾನೆ ಎಂದು ದುರ್ಯೋಧನನು ಉದ್ಗರಿಸಿದನು.

ಅರ್ಥ:
ಹುರುಡು: ಸ್ಪರ್ಧೆ; ಮರೆ: ನೆನಪಿನಿಂದ ದೂರಮಾಡು; ಮಗ: ಪುತ್ರ; ಕುಲ: ವಂಶ; ಬೆಳವು: ಏಳಿಗೆ; ಕವಲು: ದಾರಿ; ಅನ್ವಯ: ವಂಶ; ಸುಗತಿ: ಸದ್ಗತಿ; ಸಂಪದ: ಐಶ್ವರ್ಯ, ಸಂಪತ್ತು; ಕರುಳು: ಪಚನಾಂಗ; ಬೀಳು: ಕಳಚು; ಬಸುರು: ಹೊಟ್ಟೆ; ದುರುಳ: ದುಷ್ಟ; ಫಲ: ಪ್ರಯೋಜನ; ಮತ್ಸರ: ಹೊಟ್ಟೆಕಿಚ್ಚು; ಕೃತಾರ್ಥ: ಸಾರ್ಥಕ, ಧನ್ಯ; ರಾಯ: ರಾಜ;

ಪದವಿಂಗಡಣೆ:
ಹುರುಡ+ ಮರೆದೆನು +ಮಗನೆ +ಸಾಲದೆ
ಭರತಕುಲದಲಿ +ನಿನ್ನ +ಬೆಳವಿಗೆ
ಎರಡು+ ಕವಲ್+ಅನ್ವಯಕೆ +ಕೊಡದೇ+ ಸುಗತಿ+ ಸಂಪದವ
ಕರುಳು +ಬೀಳವೆ +ತನ್ನ +ಬಸುರಿಂದ್
ಉರುಳಿದ್+ಅವದಿರಲೇನು +ಫಲ +ಮ
ತ್ಸರವೆ +ಪಾರ್ಥ+ ಕೃತಾರ್ಥನೆಂದನು +ಕೌರವರ +ರಾಯ

ಅಚ್ಚರಿ:
(೧) ಅಭಿಮನ್ಯುವನ್ನು ಕೊಂಡಾಡಿದ ಪರಿ – ಕರುಳು ಬೀಳವೆ ತನ್ನ ಬಸುರಿಂದುರುಳಿದವದಿರಲೇನು ಫಲ

ಪದ್ಯ ೨೭: ಭೀಷ್ಮರ ಮಾತಿಗೆ ಅರ್ಜುನನು ಹೇಗೆ ಪ್ರತಿಕ್ರಯಿಸಿದನು?

ಎನಲು ಶಿವಶಿವ ಶಿವಮಹಾದೇ
ವೆನುತ ಕಿವಿಗಳ ಮುಚ್ಚಿದನು ಕಂ
ಬನಿಯನುಗುರಲಿ ಮಿಡಿದು ನೊಂದನು ಪಾರ್ಥ ಹೃದಯದಲಿ
ಎನಗೆ ಗೆಲವಾಯ್ತದು ಕೃತಾರ್ಥರು
ಜದದೊಳೆನ್ನವೊಲಾರು ಬಳಿಕೇ
ನೆನಗೆ ನಿಮ್ಮವೊಲಾರು ಹಗೆಗಳು ಜಗದೊಳುಂಟೆಂದ (ಭೀಷ್ಮ ಪರ್ವ, ೭ ಸಂಧಿ, ೨೭ ಪದ್ಯ)

ತಾತ್ಪರ್ಯ:
ಭೀಷ್ಮನ ಮಾತುಗಳನ್ನು ಕೇಳಿ ಅರ್ಜುನನು ಶಿವ ಶಿವಾ ಮಹಾದೇಆ ಎಂದುದ್ಗರಿಸಿ ಕಿವಿಗಳನ್ನು ಮುಚ್ಚಿಕೊಂಡನು ಕಂಬನಿಯನ್ನು ಉಗುರಲ್ಲಿ ಮಿಡಿದು, ಮನಸ್ಸಿನಲ್ಲಿ ಅತಿಶಯವಾಗಿ ನೋಮ್ದನು. ನಾನು ಗೆದ್ದೆ, ನನ್ನಂತಹ ಕೃತಾರ್ಥರು ಯಾರಿದ್ದಾರೆ? ಪಿತಾಮಹಾ ನಿನ್ನಂತಹ ವೈರಿಗಳು ನನಗೆ ಈ ಲೋಕದಲ್ಲಿ ಯಾರಿದ್ದಾರೆ ಎಂದನು.

ಅರ್ಥ:
ಎನಲು: ಹೀಗೆ ಹೇಳಲು; ಶಿವ: ಶಂಕರ; ಕಿವಿ: ಕರ್ಣ; ಮುಚ್ಚು: ಅಡಗಿಸು, ಮರೆಮಾಡು; ಕಂಬನಿ: ಕಣ್ಣೀರು; ಉಗುರು: ನಖ; ಮಿಡಿ: ತವಕಿಸು; ನೊಂದು: ನೋವನ್ನುಂಡು; ಹೃದಯ: ಎದೆ; ಗೆಲುವು: ಜಯ; ಕೃತಾರ್ಥ: ಮಾಡಬೇಕಾದ ಕೆಲಸವನ್ನು ಮಾಡಿ ಸಫಲತೆಯನ್ನು ಹೊಂದಿದವ, ಧನ್ಯ; ಜನ: ಮನುಷ್ಯ; ಬಳಿಕ: ನಂತರ; ಹಗೆ: ವೈರಿ; ಜಗ: ಪ್ರಪಂಚ;

ಪದವಿಂಗಡಣೆ:
ಎನಲು +ಶಿವಶಿವ+ ಶಿವಮಹಾದೇವ
ಎನುತ +ಕಿವಿಗಳ +ಮುಚ್ಚಿದನು +ಕಂ
ಬನಿಯನ್+ಉಗುರಲಿ +ಮಿಡಿದು +ನೊಂದನು +ಪಾರ್ಥ +ಹೃದಯದಲಿ
ಎನಗೆ +ಗೆಲವಾಯ್ತ್+ಅದು +ಕೃತಾರ್ಥರು
ಜನದೊಳ್+ಎನ್ನವೊಲ್+ಆರು +ಬಳಿಕೇನ್
ಎನಗೆ+ ನಿಮ್ಮವೊಲ್+ಆರು +ಹಗೆಗಳು +ಜಗದೊಳ್+ಉಂಟೆಂದ

ಅಚ್ಚರಿ:
(೧) ಅರ್ಜುನನ ದುಃಖ – ಕಿವಿಗಳ ಮುಚ್ಚಿದನು ಕಂಬನಿಯನುಗುರಲಿ ಮಿಡಿದು ನೊಂದನು ಪಾರ್ಥ ಹೃದಯದಲಿ

ಪದ್ಯ ೨೮: ವಿರಾಟನು ಧರ್ಮಜನಿಗೆ ಯಾರನ್ನು ತೋರಿಸಲು ಕೇಳಿದನು?

ಪೊಡವಿಯೊಡೆತನವೆಮಗೆ ಮಿಗೆ ಕ
ಟ್ಟೊಡೆಯ ಕೃಷ್ಣನು ಕೃಷ್ಣನೊಡಬ
ಟ್ಟೊಡೆ ವಿವಾಹ ನಿರಂತರಾಯವು ಚಿಂತೆಬೇಡೆನಲು
ಒಡಬಡಲಿ ಮೇಣಿರಲಿ ಗುರು ನಿ
ಮ್ಮಡಿ ಮುರಾರಿಯ ತೋರಿಸುವಿರಾ
ದೊಡೆ ಕೃತಾರ್ಥನು ತಾನೆನುತ ಹಿಗ್ಗಿದನು ಮತ್ಸ್ಯನೃಪ (ವಿರಾಟ ಪರ್ವ, ೧೧ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧರ್ಮಜನು ವಿರಾಟನಿಗೆ ಉತ್ತರಿಸುತ್ತಾ, ರಾಜ್ಯದೊಡೆಯರು ನಾವು, ನಮ್ಮ ಒಡೆಯನು ಶ್ರೀಕೃಷ್ಣನು, ಅವನೊಪ್ಪಿದರೆ ಮದುವೆಗೆ ಯಾವ ಅಡ್ಡಿಯೂ ಇಲ್ಲ, ಅವನನ್ನು ಕೇಳಬೇಕು ಎಂದನು. ವಿರಾಟನು ಧರ್ಮಜ ನೀನು ನನ್ನ ಗುರು, ನಿನ್ನ ಪಾದಗಳ ದಯೆಯಿಂದ ಕೃಷ್ಣನನ್ನು ತೋರಿಸಿದರೆ ಅದೇ ಪರಮಾರ್ಥ, ಮದುವೆಗೆ ಆತ ಒಪ್ಪಲಿ, ಬಿಡಲಿ ಅದು ಮುಖ್ಯವಲ್ಲ ಎಂದು ವಿರಾಟನು ಹೇಳಿದನು.

ಅರ್ಥ:
ಪೊಡವಿ: ಪೃಥ್ವಿ, ಭೂಮಿ; ಒಡೆತನ: ಯಜಮಾನತ್ವ; ಮಿಗೆ: ಮತ್ತು; ಕಟ್ಟೊಡೆ: ಬಂಧನಗಳ ಬಿಡಿಸು; ಒಡಬಟ್ಟು: ಒಪ್ಪು; ವಿವಾಹ: ಮದುವೆ; ನಿರಂತರ: ಯಾವಾಗಲು; ಚಿಂತೆ: ಯೋಚನೆ; ಬೇಡ: ಸಲ್ಲದು; ಒಡಬಡು: ಒಪ್ಪು; ಮೇಣ್: ಅಥವಾ, ಇಲ್ಲವೆ; ಗುರು: ಆಚಾರ್ಯ; ನಿಮ್ಮಡಿ: ನಿಮ್ಮ ಪಾದ; ಮುರಾರಿ: ಕೃಷ್ಣ; ತೋರಿಸು: ಕಾಣಿಸು; ಕೃತಾರ್ಥ: ಧನ್ಯ; ಹಿಗ್ಗು: ಸಂತೋಷ, ಆನಂದ; ನೃಪ: ರಾಜ;

ಪದವಿಂಗಡಣೆ:
ಪೊಡವಿ+ಒಡೆತನವ್+ಎಮಗೆ +ಮಿಗೆ +ಕ
ಟ್ಟೊಡೆಯ +ಕೃಷ್ಣನು +ಕೃಷ್ಣನ್+ಒಡಬ
ಟ್ಟೊಡೆ +ವಿವಾಹ +ನಿರಂತರಾಯವು+ ಚಿಂತೆ+ಬೇಡೆನಲು
ಒಡಬಡಲಿ +ಮೇಣಿರಲಿ +ಗುರು +ನಿ
ಮ್ಮಡಿ +ಮುರಾರಿಯ +ತೋರಿಸುವಿರಾ
ದೊಡೆ+ ಕೃತಾರ್ಥನು +ತಾನೆನುತ +ಹಿಗ್ಗಿದನು+ ಮತ್ಸ್ಯ+ನೃಪ

ಅಚ್ಚರಿ:
(೧) ಕೃಷ್ಣ, ಮುರಾರಿ – ಕೃಷ್ಣನ ಹೆಸರುಗಳು

ಪದ್ಯ ೧೯: ಅರ್ಜುನನು ಊರ್ವಶಿಯನ್ನು ಹೇಗೆ ನೋಡಿದನು?

ಏನು ಬಿಜಯಂಗೈದಿರಿತ್ತಲು
ಮಾನನಿಧಿ ಕುಳ್ಳಿರಿ ಸುರೇಂದ್ರನ
ಮಾನಿನಿಯರಭಿವಂದನೀಯರು ನಾವ್ ಕೃತಾರ್ಥರಲ
ಏನುಬೆಸಸೆನಗೇನು ಹದ ನಿಮ
ಗಾನು ಮಗನುಪಚಾರವೇಕೆ ಮ
ನೋನುರಾಗದಲರುಹಿಯೆಂದನು ಪಾರ್ಥನೂರ್ವಶಿಗೆ (ಅರಣ್ಯ ಪರ್ವ, ೯ ಸಂಧಿ, ೧೯ ಪದ್ಯ)

ತಾತ್ಪರ್ಯ:
ಊರ್ವಶಿಯನ್ನು ಕಂಡ ಅರ್ಜುನನು ಆಕೆಯ ಬಳಿ ಬಂದು, ಏನು ನೀವು ಇತ್ತ ದಯಮಾಡಿಸಿದಿರಿ, ಮಹಾಮಾನನಿಧಿಯಾದವರು ನೀವು, ದಯೆಯಿಟ್ಟು ಆಸೀನರಾಗಿರಿ, ನೀವು ಇಂದ್ರನ ಮಹಿಳೆ, ನಮಸ್ಕಾರಕ್ಕೆ ಯೋಗ್ಯರಾದವರು, ನಿಮ್ಮ ಅಪ್ಪಣೆಯನ್ನು ನೀಡಿರಿ, ಏನು ಹೇಳಲು ಬಂದಿರಿ, ನಾನು ನಿಮಗೆ ಮಗ, ಉಪಚಾರದ ಮಾತುಗಳನ್ನು ಬಳಸದೆ ಸಂತೋಷದಿಂದ ಹೇಳಿರಿ ಎಂದು ಅರ್ಜುನನು ಹೇಳಿದನು.

ಅರ್ಥ:
ಬಿಜಯಂಗೈ: ದಯಮಾಡಿಸಿದಿರಿ, ಬಂದಿರಿ; ಮಾನ: ಗೌರವ, ಮರ್ಯಾದೆ; ನಿಧಿ: ನಿಕ್ಷೇಪ, ಸಮುದ್ರ; ಮಾನನಿಧಿ: ಶ್ರೇಷ್ಠವಾದವ; ಕುಳ್ಳಿರಿ: ಆಸೀನರಾಗಿರಿ; ಸುರೇಂದ್ರ: ಇಂದ್ರ; ಸುರ: ದೇವತೆ; ಇಂದ್ರ: ಒಡೆಯ; ಮಾನಿನಿ: ಹೆಣ್ಣು; ಅಭಿವಂದನೆ: ಗೌರವದಿಂದ ಮಾಡುವ ನಮಸ್ಕಾರ; ಕೃತಾರ್ಥ: ಧನ್ಯ; ಬೆಸಸು: ಆಜ್ಞಾಪಿಸು; ಹದ: ರೀತಿ, ಸರಿಯಾದ ಸ್ಥಿತಿ; ಮಗ: ಸುತ; ಉಪಚಾರ: ಸತ್ಕಾರ; ಮನ: ಮನಸ್ಸು; ಅನುರಾಗ: ಪ್ರೀತಿ; ಅರುಹು: ತಿಳಿಸು, ಹೇಳು;

ಪದವಿಂಗಡಣೆ:
ಏನು +ಬಿಜಯಂಗೈದಿರ್+ಇತ್ತಲು
ಮಾನನಿಧಿ+ ಕುಳ್ಳಿರಿ +ಸುರೇಂದ್ರನ
ಮಾನಿನಿಯರ್+ಅಭಿವಂದನೀಯರು +ನಾವ್+ ಕೃತಾರ್ಥರಲ
ಏನು+ಬೆಸಸ್+ಎನಗೇನು +ಹದ +ನಿಮಗ್
ಆನು+ ಮಗನ್+ಉಪಚಾರವೇಕೆ+ ಮ
ನೋನುರಾಗದಲ್+ಅರುಹಿ+ಎಂದನು +ಪಾರ್ಥನ್+ಊರ್ವಶಿಗೆ

ಅಚ್ಚರಿ:
(೧) ಮಾನನಿಧಿ, ಮಾನಿನಿ – ಪದಗಳ ಬಳಕೆ

ಪದ್ಯ ೧೧೫: ಅರ್ಜುನನೇಕೆ ಹರ್ಷಿತನಾದನು?

ಮುರಹರನು ತಾನೆಮಗೆ ಗುರುವರ
ಗುರು ಚರಣಯುಗದಮಳ ಭಕ್ತಿಯ
ಲರಿದ ನಿಜಮೂರ್ತಿಯನು ಕಂಡು ಕೃತಾರ್ಥನಾದೆನೆಲ
ಹರಿದುದ ಘಕುಲವೆನುತ ಪುಳಕೋ
ತ್ಕರದ ಹರುಷದಲಿರ್ದನಾ ನರ
ಪರಮಗದುಗಿನ ವೀರನಾರಾಯಣನ ಕರುಣದಲಿ (ಅರಣ್ಯ ಪರ್ವ, ೭ ಸಂಧಿ, ೧೧೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನೇ ನಮಗೆ ಗುರು, ಗುರುಪಾದ ಕಮಲ ಭಕ್ತಿಯಿಂದರಿತ ನಿಜಮೂರ್ತಿಯನ್ನು ಕಂಡು ನಾನು ಕೃತಾರ್ಥನಾದೆ. ನನ್ನ ಪಾಪ ಸಂಕುಲವು ನಾಶವಾಯಿತು ಎಂದು ಯೋಚಿಸಿ ಗದುಗಿನ ವೀರನಾರಾಯಣ ಕರುಣೆಯನ್ನು ಸ್ಮರಿಸಿ ಅರ್ಜುನನು ಹರ್ಷಿತನಾದನು.

ಅರ್ಥ:
ಮುರಹರ: ಕೃಷ್ಣ; ಗುರು: ಆಚಾರ್ಯ; ವರ: ಶ್ರೇಷ್ಠ; ಚರಣ: ಪಾದ; ಯುಗಳ: ಎರಡು; ಅಮಳ: ನಿರ್ಮಲ; ಭಕ್ತಿ: ದೇವರು ಮತ್ತು ಗುರುಗಳಲ್ಲಿ ತೋರುವು ನಿಷ್ಠೆ; ಅರಿ: ತಿಳಿ; ನಿಜ: ದಿಟ; ಮೂರ್ತಿ: ರೂಪ; ಕಂಡು: ನೋಡಿ; ಕೃತಾರ್ಥ: ಧನ್ಯ; ಹರಿ: ಜಾರು, ನಾಶ; ಅಘ: ಪಾಪ; ಕುಲ: ವಂಶ; ಪುಳಕ: ರೋಮಾಂಚನ; ಉತ್ಕರ: ಸಮೂಹ; ಹರುಷ: ಸಂತಸ; ನರ: ಅರ್ಜುನ; ಪರಮ: ಶ್ರೇಷ್ಠ; ಕರುಣೆ: ದಯೆ;

ಪದವಿಂಗಡಣೆ:
ಮುರಹರನು +ತಾನೆಮಗೆ+ ಗುರು+ವರ
ಗುರು +ಚರಣಯುಗದ್+ಅಮಳ +ಭಕ್ತಿಯಲ್
ಅರಿದ+ ನಿಜಮೂರ್ತಿಯನು+ ಕಂಡು +ಕೃತಾರ್ಥ+ನಾದೆನೆಲ
ಹರಿದುದ್ + ಅಘಕುಲವ್+ಎನುತ +ಪುಳಕೋ
ತ್ಕರದ+ ಹರುಷದಲ್+ಇರ್ದನಾ +ನರ
ಪರಮ+ಗದುಗಿನ+ ವೀರನಾರಾಯಣನ+ ಕರುಣದಲಿ

ಅಚ್ಚರಿ:
(೧) ಮುರಹರ, ವೀರನಾರಾಯಣ – ಕೃಷ್ಣನ ಹೆಸರುಗಳ ಬಳಕೆ
(೨) ಅರ್ಜುನನ ಸಂತಸದ ಸ್ಥಿತಿ – ಹರಿದುದ ಘಕುಲವೆನುತ ಪುಳಕೋತ್ಕರದ ಹರುಷದಲಿರ್ದನಾ

ಪದ್ಯ ೭೭: ಶಿವನ ಜಯಘೋಷವು ಹೇಗಿತ್ತು?

ಜಯಜಯೆಂದುದು ನಿಖಿಳ ಜಗವ
ಕ್ಷಯನ ದರುಶನಕೆಂದು ಶ್ರುತಿಕೋ
ಟಿಯ ಗಡಾವಣೆ ಗಾಸಿಯಾದುದು ಹರನ ಘಲ್ಲಣೆಗೆ
ನಿಯತವೇನೋ ಜನ್ಮಶತಸಂ
ಚಯದೊಳರರೆ ಕೃತಾರ್ಥನರ್ಜುನ
ಜಯವೆನಲು ಮೊಳಗಿದವು ಭೇರಿಗಳಮರ ಕಟಕದಲಿ (ಅರಣ್ಯ ಪರ್ವ, ೭ ಸಂಧಿ, ೭೭ ಪದ್ಯ)

ತಾತ್ಪರ್ಯ:
ಲೋಕವೆಲ್ಲವೂ ಜಯಘೋಷದಲ್ಲಿ ಮುಳುಗಿತು. ಶಿವನ ದರ್ಶನಕ್ಕೆಂದು ಬಂದು ಅವರನ್ನು ಹೊಗಳಲು ಹೋದ ವೇದ ಘೋಷವು ಸಾಧ್ಯವಾಗದೆ ಗಾಸಿಗೊಂಡಿತು. ದೇವತೆಗಳು ಆಕಾಶದಲ್ಲಿ ಸೇರಿ ಅದೆಷ್ಟು ಜನ್ಮಗಳಲ್ಲಿ ಪುಣ್ಯವನ್ನು ಕೂಡಿಟ್ಟುಕೊಂಡಿದ್ದನೋ ಅರ್ಜುನನು ಈಗ ಶಿವನ ದರ್ಶನದಿಂದ ಕೃತಾರ್ಥನಾದ ಎಂದು ಹೊಗಳಿ ಭೇರಿಗಳನ್ನು ಬಾರಿಸಿದರು.

ಅರ್ಥ:
ಜಯ: ಉಘೇ; ನಿಖಿಳ: ಎಲ್ಲಾ; ಜಗ: ಪ್ರಪಂಚ; ಅಕ್ಷಯ: ಕ್ಷಯವಿಲ್ಲದುದು, ಪರಮಾತ್ಮ; ದರುಶನ: ನೋಟ; ಶ್ರುತಿ: ವೇದ; ಕೋಟಿ: ಲೆಕ್ಕವಿಲ್ಲದ; ಗಡಾವಣೆ: ಗಟ್ಟಿಯಾದ ಶಬ್ದ; ಗಾಸಿ: ತೊಂದರೆ, ಕಷ್ಟ; ಹರ: ಶಿವ; ಫಲ್ಲಣೆ: ಘಲ್ ಘಲ್ ಎಂಬ ಶಬ್ದ; ನಿಯತ: ನಿಶ್ಚಿತವಾದುದು; ಜನ್ಮ: ಹುಟ್ಟು; ಶತ: ನೂರು; ಸಂಚಯ: ಗುಂಪು, ಸಮೂಹ; ಕೃತಾರ್ಥ: ಧನ್ಯ; ಮೊಳಗು: ಧ್ವನಿ, ಸದ್ದು; ಭೇರಿ: ನಗಾರಿ, ದುಂದುಭಿ; ಅಮರ: ದೇವತೆ; ಕಟಕ: ಗುಂಪು;

ಪದವಿಂಗಡಣೆ:
ಜಯಜಯ+ಎಂದುದು +ನಿಖಿಳ +ಜಗವ್
ಅಕ್ಷಯನ +ದರುಶನಕೆಂದು +ಶ್ರುತಿ+ಕೋ
ಟಿಯ +ಗಡಾವಣೆ +ಗಾಸಿಯಾದುದು +ಹರನ +ಘಲ್ಲಣೆಗೆ
ನಿಯತವೇನೋ+ ಜನ್ಮ+ಶತ+ಸಂ
ಚಯದೊಳ್+ಅರರೆ+ ಕೃತಾರ್ಥನ್+ಅರ್ಜುನ
ಜಯವೆನಲು +ಮೊಳಗಿದವು+ ಭೇರಿಗಳ್+ಅಮರ +ಕಟಕದಲಿ

ಅಚ್ಚರಿ:
(೧) ಜಯ, ಸಂಚಯ, ಅಕ್ಷಯ – ಪ್ರಾಸ ಪದಗಳು

ಪದ್ಯ ೧೭: ಧೃತರಾಷ್ಟ್ರನಿಗೆ ವಿದುರನು ಏನು ಹೇಳಿದನು?

ಎಲೆ ವಿದುರ ಕೇಳೈ ಸುಯೋಧನ
ನುಳಿಯೆ ಸಕಲ ಮಹಾ ಪ್ರಧಾನರು
ನಳಿನನಾಭನನಿದಿರುಗೊಳಲಿ ಕೃತಾರ್ಥರಾದವರು
ಹೊಳಲು ಗುಡಿ ತೋರಣದಲೆಸೆಯಲಿ
ಕಳಸ ಕನ್ನಡಿ ಸಹಿತ ನಡೆಯಲಿ
ನಳಿನವದನೆಯರೆಂದು ನೇಮಿಸಿದನು ಮಹೀಪಾಲ (ಉದ್ಯೋಗ ಪರ್ವ, ೭ ಸಂಧಿ, ೧೭ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ವಿದುರನಿಗೆ ಕೃಷ್ಣನಿಗೆ ಸ್ವಾಗತವನ್ನು ಕೋರಲು ಅಪ್ಪಣೆಮಾಡಿದನು. ಎಲೈ ವಿದುರ ಕೇಳು, ಸುಯೋಧನನನ್ನು ಹೊರತುಪಡಿಸಿ ಎಲ್ಲಾ ಮಹಾ ಸಚಿವರು ಕೃಷ್ಣನನ್ನು ಎದುರುಗೊಂಡು ಕೃತಾರ್ಥರಾಗಲಿ. ಕೃಷ್ಣನ ಆಗಮನಕ್ಕೆ ಪಟ್ಟಣ ಗುಡಿಗಳೆಲ್ಲವೂ ತಳಿರು ತೋರಣಗಳಿಂದ ಸಿಂಗರಗೊಳ್ಳಲಿ, ಸುಮಂಗಲಿಯರು ಕಳಸ ಕನ್ನಡಿಹಿಡಿದು ಪೂರ್ಣಕುಂಭ ಸ್ವಾಗತವನ್ನು ನೀಡಲಿ ಎಂದು ಧೃತರಾಷ್ಟ್ರನು ವಿದುರನಿಗೆ ಅಪ್ಪಣೆ ಮಾಡಿದನು.

ಅರ್ಥ:
ಕೇಳು: ಆಲಿಸು; ನಳಿನ:ಕಮಲ; ನಳಿನನಾಭ:ಹೊಕ್ಕುಳಲ್ಲಿ ಕಮಲವುಳ್ಳವನು-ವಿಷ್ಣು; ಇದಿರು: ಎದುರು; ಕೃತಾರ್ಥ: ಮಾಡಬೇಕಾದ ಕೆಲಸವನ್ನು ಮಾಡಿ ಸಫಲತೆಯನ್ನು ಹೊಂದಿದವ, ಧನ್ಯ; ಹೊಳಲು: ಪಟ್ಟಣ, ನಗರ; ಗುಡಿ: ದೇವಸ್ಥಾನ; ತೋರಣ: ಹೆಬ್ಬಾಗಿಲು, ಹೊರಬಾಗಿಲು; ಎಸೆ: ಶೋಭಿಸು; ಕಳಸ: ಕುಂಭ; ಕನ್ನಡಿ: ದರ್ಪಣ; ಸಹಿತ: ಜೊತೆ; ನಡೆ: ಮುಂದೆಹೋಗು; ವದನ: ಮುಖ; ನಳಿನವದನೆ: ಸುಂದರಿಯರು; ನೇಮಿಸು: ಅಪ್ಪಣೆ ಮಾಡು, ಗೊತ್ತುಮಾಡು; ಮಹೀಪಾಲ: ರಾಜ; ಉಳಿ: ಹೊರತಾಗು;

ಪದವಿಂಗಡಣೆ:
ಎಲೆ +ವಿದುರ +ಕೇಳೈ +ಸುಯೋಧನನ್
ಉಳಿಯೆ +ಸಕಲ+ ಮಹಾ +ಪ್ರಧಾನರು
ನಳಿನನಾಭನನ್+ಇದಿರುಗೊಳಲಿ +ಕೃತಾರ್ಥರಾದವರು
ಹೊಳಲು +ಗುಡಿ +ತೋರಣದಲ್+ಎಸೆಯಲಿ
ಕಳಸ +ಕನ್ನಡಿ +ಸಹಿತ +ನಡೆಯಲಿ
ನಳಿನವದನೆಯರೆಂದು +ನೇಮಿಸಿದನು +ಮಹೀಪಾಲ

ಅಚ್ಚರಿ:
(೧) ನಳಿನ – ಪದದ ಬಳಕೆ, ನಳಿನನಾಭ, ನಳಿನವದನೆ

ಪದ್ಯ ೩೮: ಧೃತರಾಷ್ಟ್ರನು ಸನತ್ಸುಜಾತರಿಗೆ ಏನು ಹೇಳಿದನು?

ಲೇಸ ಮಾದಿದಿರೆನ್ನ ಚಿತ್ತದ
ಬೇಸರಿಕೆ ಬಯಲಾಯ್ತು ನಿಮ್ಮುಪ
ದೇಶದಿಂದೆ ಕೃತಾರ್ಥನಾದೆನು ಗೆಲಿದೆನಿಹಪರವ
ಗಾಸಿಯಾದುದು ರಾಗಲೋಭದ
ಮೀಸಲಳಿದುದು ನಿಮ್ಮ ಕೃಪೆಯಿಂ
ದೇಸುಧನ್ಯನೊತಾನು ಚಿತ್ತೈಸೊಂದು ಬಿನ್ನಪವ (ಉದ್ಯೋಗ ಪರ್ವ, ೪ ಸಂಧಿ, ೩೮ ಪದ್ಯ)

ತಾತ್ಪರ್ಯ:
ಸನತ್ಸುಜಾತರ ಮಾತುಗಳನ್ನು ಆಲಿಸಿದ ಧೃತರಾಷ್ಟ್ರನು, ಮುನಿವರ್ಯರೇ, ನೀವು ನೀಡಿದ ಉಪದೇಶ ಒಳ್ಳೆಯದಾಯಿತು, ನನ್ನ ಮನಸ್ಸಿನ ಬೇಸರ ಹೋಯಿತು, ನಿಮ್ಮ ಉಪದೇಶದಿಂದ ನಾನು ಕೃತಾರ್ಥನಾದೆ. ಇಹಪರಗಳೆರಡನ್ನೂ ನಾನು ಗೆದ್ದೆ, ಮೋಹ ನಾಶವಾಯಿತು, ಲೋಭವಿಲ್ಲದಾಯಿತು, ನಿಮ್ಮ ಕೃಪೆಯಿಂದ ಧನ್ಯನಾದೆ. ನನ್ನ ಒಂದು ಮನವಿಯನ್ನು ಸ್ವೀಕರಿಸಿ ಎಂದು ಹೇಳಿದನು.

ಅರ್ಥ:
ಲೇಸು: ಒಳ್ಳೆದು; ಮಾಡು: ನಡೆಸು; ಚಿತ್ತ: ಮನಸ್ಸು; ಬೇಸರ: ನೋವು, ತೊಳಲಾಟ; ಬಯಲಾಯ್ತು: ಹೊರಹೊಮ್ಮಿತು; ಉಪದೇಶ: ಬೋಧಿಸುವುದು, ಬುದ್ಧಿವಾದ; ಕೃತಾರ್ಥ: ಮಾಡಬೇಕಾದ ಕೆಲಸವನ್ನು ಮಾಡಿ ಸಫಲತೆಯನ್ನು ಹೊಂದಿದವ, ಧನ್ಯ; ಗೆಲಿದೆ: ಗೆದ್ದೆ, ಜಯ; ಇಹಪರ: ಈ ಲೋಕ ಮತ್ತು ಪರಲೋಕ; ಗಾಸಿ:ಆಯಾಸ, ದಣಿವು; ರಾಗ: ಪ್ರೀತಿ, ಮೋಹ; ಲೋಭ: ಅತಿಯಾಸೆ, ದುರಾಸೆ; ಮೀಸಲು: ಮುಡಿಪು, ಪ್ರತ್ಯೇಕತೆ; ಕೃಪೆ: ಕರುಣೆ, ದಯೆ; ಧನ್ಯ: ಕೃತಾರ್ಥ; ಚಿತ್ತೈಸು: ಗಮನವಿಡು; ಬಿನ್ನಹ: ಮನವಿ;

ಪದವಿಂಗಡಣೆ:
ಲೇಸ +ಮಾದಿದಿರ್+ಎನ್ನ +ಚಿತ್ತದ
ಬೇಸರಿಕೆ +ಬಯಲಾಯ್ತು +ನಿಮ್ಮ್+ಉಪ
ದೇಶದಿಂದೆ +ಕೃತಾರ್ಥನಾದೆನು+ ಗೆಲಿದೆನ್+ಇಹಪರವ
ಗಾಸಿಯಾದುದು +ರಾಗ+ಲೋಭದ
ಮೀಸಲ್+ಇಳಿದುದು +ನಿಮ್ಮ +ಕೃಪೆಯಿಂದ್
ಏಸು+ಧನ್ಯನೊ+ತಾನು+ ಚಿತ್ತೈಸ್+ಒಂದು +ಬಿನ್ನಪವ

ಅಚ್ಚರಿ:
(೧) ಕೃಪೆ, ಕೃತಾರ್ಥ – ಸಾಮ್ಯಾರ್ಥ ನೀಡುವ ಪದ