ಪದ್ಯ ೧: ಪಾಂಡವರು ಕೊಳದ ಬಳಿ ಹೇಗೆ ಶಬ್ದವನ್ನು ಮಾಡಿದರು?

ಕೇಳು ಧೃತರಾಷ್ಟ್ರವನಿಪ ರಿಪು
ಜಾಲ ಜಡಿದುದು ಕೊಳನ ತಡಿಯಲಿ
ತೂಳಿದುದು ಬಲುಬೊಬ್ಬೆಯಬ್ಬರವಭ್ರಮಂಡಲವ
ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳ ಬಹುವಿಧ ವಾದ್ಯರವ ಹೆ
ಗ್ಗಾಳೆಗಳು ಚೀರಿದವು ಬೈಸಿಕೆ ಬಿಡೆ ಕುಲಾದ್ರಿಗಳ (ಗದಾ ಪರ್ವ, ೫ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಧೃತರಾಷ್ಟ್ರ ಕೇಳು, ಶತ್ರುಗಳು ಕೊಳದ ಸುತ್ತಲೂ ಗುಂಪುಗಟ್ಟಿ ಗರ್ಜಿಸಲಾರಂಭಿಸಿದರು. ಭೇರಿಗಳು ಮತ್ತೆ ಮತ್ತೆ ಬಡಿದವು. ಹೆಗ್ಗಾಳೆಗಳು ಚೀರಿದವು. ಅನೇಕ ವಾದ್ಯಗಳನ್ನು ಬಾರಿಸಿದರು. ಆ ಶಬ್ದಕ್ಕೆ ಕುಲಗಿರಿಗಳ ಬೆಸುಗೆ ಬಿಟ್ಟಿತು.

ಅರ್ಥ:
ಕೇಳು: ಆಲಿಸು; ಅವನಿಪ: ರಾಜ; ರಿಪು: ವೈರಿ; ಜಾಲ: ಗುಂಪು; ಜಡಿ: ಬೆದರಿಕೆ, ಗದರಿಸು; ಕೊಳ: ಸರೋವರ; ತಡಿ: ದಡ; ತೂಳ:ಆವೇಶ, ಉನ್ಮಾದ; ಬಲು: ಬಹಳ; ಬೊಬ್ಬೆ: ಆರ್ಭಟ, ಗರ್ಜನೆ; ಅಬ್ಬರ: ಆರ್ಭಟ; ಅಭ್ರ: ಆಗಸ; ಮಂಡಲ: ವರ್ತುಲಾಕಾರ, ಜಗತ್ತು; ಸೂಳವಿಸು: ಧ್ವನಿಮಾಡು, ಹೊಡೆ; ಲಗ್ಗೆ: ಮುತ್ತಿಗೆ, ಆಕ್ರಮಣ; ನಿಸ್ಸಾಳ: ಚರ್ಮವಾದ್ಯ; ಬಹುವಿಧ: ಬಹಳ; ವಾದ್ಯ: ಸಂಗೀತದ ಸಾಧನ; ಹೆಗ್ಗಾಳೆ: ದೊಡ್ಡ ಕಹಳೆ; ಚೀರು: ಗರ್ಜಿಸು, ಕೂಗು; ಬೈಸಿಕೆ: ಬೆಸುಗೆ, ಆಸನ, ಪದ; ಬಿಡೆ: ತೊರೆ; ಕುಲಾದ್ರಿ: ದೊಡ್ಡ ಬೆಟ್ಟ;

ಪದವಿಂಗಡಣೆ:
ಕೇಳು +ಧೃತರಾಷ್ಟ್ರ್+ಅವನಿಪ +ರಿಪು
ಜಾಲ +ಜಡಿದುದು +ಕೊಳನ +ತಡಿಯಲಿ
ತೂಳಿದುದು +ಬಲು+ಬೊಬ್ಬೆ+ಅಬ್ಬರವ್+ಅಭ್ರ+ಮಂಡಲವ
ಸೂಳವಿಸಿದವು +ಲಗ್ಗೆಯಲಿ +ನಿ
ಸ್ಸಾಳ +ಬಹುವಿಧ +ವಾದ್ಯ+ರವ+ ಹೆ
ಗ್ಗಾಳೆಗಳು +ಚೀರಿದವು +ಬೈಸಿಕೆ +ಬಿಡೆ +ಕುಲಾದ್ರಿಗಳ

ಅಚ್ಚರಿ:
(೧) ಒಂದೇ ಪದದ ರಚನೆ – ಬಲುಬೊಬ್ಬೆಯಬ್ಬರವಭ್ರಮಂಡಲವ

ಪದ್ಯ ೨೩: ಯುಧಿಷ್ಠಿರನ ಶ್ರೇಷ್ಠತೆ ಎಂತಹದು?

ಜಲಧಿ ಮೇರೆಯನೊದೆದು ಹಾಯಲಿ
ನೆಲನನಿಳುಹಲಿ ದಿಗಿಭವಿನಮಂ
ಡಲಕೆ ಕಾಳಿಕೆಯಿಡಲಿ ನಡೆದಾಡಲಿ ಕುಲಾದ್ರಿಗಳು
ಅಳುಪಲರಿವನೆ ಸತ್ಯಭಾಷೆಗೆ
ಕಲಿ ಯುಧಿಷ್ಠಿರ ನೃಪತಿಯನ್ವಯ
ತಿಲಕನಲ್ಲಾ ಕಂದ ಕೌರವಯೆಂದನಾ ಭೀಷ್ಮ (ವಿರಾಟ ಪರ್ವ, ೮ ಸಂಧಿ, ೨೩ ಪದ್ಯ)

ತಾತ್ಪರ್ಯ:
ಸಮುದ್ರವು ಎಲ್ಲೆ ತಪ್ಪಿ ಭೂಮಿಯ ಮೇಲೆ ಬರಲಿ, ದಿಗ್ಗಜಗಳು ಭೂಮಿಯನ್ನಿಳಿಸಲಿ, ಸೂರ್ಯ ಮಂಡಲವು ಕಪ್ಪಾಗಲಿ, ಕುಲಪರ್ವತಗಳು ನಡೆದಾಡಲಿ, ಕೊಟ್ಟ ಮಾತಿಗೆ ಧರ್ಮಜನು ತಪ್ಪುವನೇ? ಅವನು ಚಂದ್ರವಂಶಕ್ಕೆ ತಿಲಕಪ್ರಾಯನಾಗಿದ್ದಾನೆ ಎಂದು ಭೀಷ್ಮನು ಯುಧಿಷ್ಠಿರನ ಶ್ರೇಷ್ಠತೆಯನ್ನು ವಿವರಿಸಿದರು.

ಅರ್ಥ:
ಜಲಧಿ: ಸಾಗರ; ಮೇರೆ:ಎಲ್ಲೆ, ಗಡಿ; ಒದೆ: ಕಾಲಿನಿಂದ ತಳ್ಳು; ಹಾಯು: ನೆಗೆ, ಹಾರು; ನೆಲ: ಭೂಮಿ; ಇಳುಹು: ಕೆಳಗೆ ಬಾ; ದಿಗಿ: ದಿಕ್ಕು; ದಿಗಿಭ: ದಿಗ್ಗಜ; ಮಂಡಲ: ಜಗತ್ತು; ಕಾಳಿಕೆ: ಕೊಳಕು; ನಡೆ: ಓಡಾಡು; ಕುಲಾದ್ರಿ: ಕುಲಪರ್ವತ; ಅಳುಪು: ಅಲ್ಲಾಡು, ಬೆದರು; ಸತ್ಯ: ದಿಟ; ಭಾಷೆ: ಮಾತು; ಕಲಿ: ಶೂರ; ನೃಅಪ್ತಿ: ರಾಜ; ಅನ್ವಯ: ವಂಶ; ತಿಲಕ: ಶ್ರೇಷ್ಠ; ಕಂದ: ಮಗು;

ಪದವಿಂಗಡಣೆ:
ಜಲಧಿ +ಮೇರೆಯನ್+ಒದೆದು +ಹಾಯಲಿ
ನೆಲನನ್+ಇಳುಹಲಿ +ದಿಗಿಭವಿನ+ಮಂ
ಡಲಕೆ +ಕಾಳಿಕೆಯಿಡಲಿ +ನಡೆದಾಡಲಿ +ಕುಲಾದ್ರಿಗಳು
ಅಳುಪಲ್+ಅರಿವನೆ +ಸತ್ಯಭಾಷೆಗೆ
ಕಲಿ+ ಯುಧಿಷ್ಠಿರ +ನೃಪತಿ+ಅನ್ವಯ
ತಿಲಕನಲ್ಲಾ+ ಕಂದ +ಕೌರವ+ಎಂದನಾ +ಭೀಷ್ಮ

ಅಚ್ಚರಿ:
(೧) ಉಪಮಾನಗಳ ಬಳಕೆ – ಜಲಧಿ ಮೇರೆಯನೊದೆದು ಹಾಯಲಿನೆಲನನಿಳುಹಲಿ ದಿಗಿಭವಿನಮಂ
ಡಲಕೆ ಕಾಳಿಕೆಯಿಡಲಿ ನಡೆದಾಡಲಿ ಕುಲಾದ್ರಿಗಳು

ಪದ್ಯ ೭೩: ಮಾತಲಿಯು ಅರ್ಜುನನಿಗೆ ಏನು ವಿವರಿಸಿದನು?

ಅವನಿಪತಿ ಕೇಳಿಂದ್ರ ಸಾರಥಿ
ವಿವರಿಸಿದನರ್ಜುನಗೆ ಭೂಮಿಯ
ಭುವನಕೋಶದ ಸನ್ನಿವೇಶವನದ್ರಿ ಜಲಧಿಗಳ
ಇವು ಕುಲಾದ್ರಿಗಳಿವು ಪಯೋಧಿಗ
ಳಿವು ಮಹಾದ್ವೀಪಂಗಳಿವು ಮಾ
ನವರ ಧರಣೀ ಸ್ವರ್ಗ ಮೇಲಿನ್ನಿತ್ತ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೩ ಪದ್ಯ)

ತಾತ್ಪರ್ಯ:
ಎಲೈ ಜನಮೇಜಯ, ಇಂದ್ರನ ಸಾರಥಿಯಾದ ಮಾತಲಿಯು ಅರ್ಜುನನಿಗೆ ಭೂಮಿ, ವಿಶ್ವಕೋಶ, ಪರ್ವತಗಳು, ಸಮುದ್ರಗಳು ಎಲ್ಲವನ್ನೂ ವಿವರಿಸಿದನು. ಇವು ಕುಲಪರ್ವತಗಳು, ಇವು ಸಮುದ್ರಗಳು, ಇವು ಮಹಾದ್ವೀಪಗಳು, ಇದು ಮಾನವರ ಭೂಮಿ, ಇನ್ನು ಇತ್ತ ಸ್ವರ್ಗವನ್ನು ನೋಡು ಎಂದು ತೋರಿಸಿದನು.

ಅರ್ಥ:
ಅವನಿಪತಿ: ರಾಜ; ಕೇಳು: ಆಲಿಸು; ಇಂದ್ರ: ಶಕ್ರ; ಸಾರಥಿ: ರಥವನ್ನು ಓಡಿಸುವವ; ವಿವರಿಸು: ಹೇಳು; ಭೂಮಿ: ಧರಿತ್ರಿ; ಭುವನ: ಜಗತ್ತು, ಪ್ರಪಂಚ; ಸನ್ನಿವೇಶ: ಪರಿಸರ, ಸುತ್ತುಮುತ್ತ; ಅದ್ರಿ: ಬೆಟ್ಟ; ಜಲಧಿ: ಸಾಗರ; ಕುಲಾದ್ರಿ: ಬೆಟ್ಟ; ಪಯೋಧಿ: ಸಾಗರ; ಮಹಾ: ದೊಡ್ಡ; ದ್ವೀಪ: ನೀರಿನಿಂದ ಆವರಿಸಿರುವ ಭೂಮಿ; ಮಾನವ: ಮನುಷ್ಯ; ಧರಣಿ: ಭೂಮಿ; ಸ್ವರ್ಗ: ನಾಕ; ನೋಡು: ವೀಕ್ಷಿಸು;

ಪದವಿಂಗಡಣೆ:
ಅವನಿಪತಿ +ಕೇಳ್+ಇಂದ್ರ +ಸಾರಥಿ
ವಿವರಿಸಿದನ್+ಅರ್ಜುನಗೆ +ಭೂಮಿಯ
ಭುವನಕೋಶದ +ಸನ್ನಿವೇಶವನ್+ಅದ್ರಿ +ಜಲಧಿಗಳ
ಇವು +ಕುಲಾದ್ರಿಗಳ್+ಇವು +ಪಯೋಧಿಗಳ್
ಇವು +ಮಹಾ+ದ್ವೀಪಂಗಳ್+ಇವು+ ಮಾ
ನವರ +ಧರಣೀ +ಸ್ವರ್ಗ +ಮೇಲಿನ್ನಿತ್ತ +ನೋಡೆಂದ

ಅಚ್ಚರಿ:
(೧) ಭೂಮಿ, ಧರಣೀ, ಅವನಿ; ಜಲಧಿ, ಪಯೋಧಿ – ಸಮನಾರ್ಥಕ ಪದಗಳು