ಪದ್ಯ ೪೯: ಕುರುಕ್ಷೇತ್ರವನ್ನು ಯಾವುದಕ್ಕೆ ಅರ್ಜುನನು ಹೋಲಿಸಿದನು?

ಎಲವೊ ಕೌರವ ಹಿಂದೆ ವಂಚಿಸಿ
ಕಳವಿನಲಿ ಜೂಜಾಡಿ ರಾಜ್ಯವ
ಗೆಲಿದ ಗರ್ವವನುಗುಳು ಸಮರ ದ್ಯೋತಕೇಳಿಯಲಿ
ಹಲಗೆಯೈ ಕುರುಭೂಮಿ ಕೌರವ
ಕುಲದ ತಲೆ ಸಾರಿಗಳು ನೆರೆಯಲಿ
ಗೆಲಲು ಬಂದೆನು ಕೊಳ್ಳು ಹಾಸಂಗಿಗಳನೆನುತೆಚ್ಚ (ದ್ರೋಣ ಪರ್ವ, ೧೦ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅರ್ಜುನನು ಉತ್ತರಿಸುತ್ತಾ, ಎಲವೋ ಕೌರವ, ಹಿಂದೆ ಮೋಸದ ಕಳ್ಳಜೂಜನ್ನಾಡಿ ಗೆದ್ದ ಗರ್ವವನ್ನು ಉಗುಳು, ಈಗ ಕುರುಕ್ಷೇತ್ರವೇ ಪಗಡೆಯ ಹಾಸು, ಕೌರವ ಕುಲದವರ ತಲೆಗಳೇ ಕಾಯಿಗಳು, ಅವೆಲ್ಲ ಬಂದು ನಿಲ್ಲಲಿ, ಕಡಿದು ಹಾಕುತ್ತೇನೆ, ಇದೋ ದಾಳವನ್ನುರುಳಿಸಿದ್ದೇನೆ ಎಂದು ಹೇಳುತ್ತಾ ಅರ್ಜುನನು ಬಾಣಗಳನ್ನು ಬಿಟ್ಟನು.

ಅರ್ಥ:
ಹಿಂದೆ: ಪುರಾತನ, ಕಳೆದ; ವಂಚನೆ: ಮೋಸ; ಕಳ: ರಣರಂಗ; ರಾಜ್ಯ: ರಾಷ್ಟ್ರ; ಗೆಲಿ: ಜಯಿಸು; ಗರ್ವ: ಅಹಂಕಾರ; ಉಗುಳು: ಹೊರಹಾಕು; ಸಮರ: ಯುದ್ಧ; ದ್ಯೋತ:ಹೊಳಪು; ಕೇಳಿ: ಕ್ರೀಡೆ; ಹಲಗೆ: ಪಲಗೆ, ಅಗಲವಾದ ಹಾಗೂ ತೆಳುವಾದ ಸೀಳು; ತಲೆ: ಶಿರ; ಕುಲ: ವಂಶ; ಸಾರಿ: ಕಾಯಿ; ನೆರೆ; ಗುಂಪು; ಹಾಸಂಗಿ: ಜೂಜಿನ ದಾಳ, ಲೆತ್ತ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಎಲವೊ +ಕೌರವ +ಹಿಂದೆ +ವಂಚಿಸಿ
ಕಳವಿನಲಿ +ಜೂಜಾಡಿ +ರಾಜ್ಯವ
ಗೆಲಿದ +ಗರ್ವವನ್+ಉಗುಳು +ಸಮರ+ ದ್ಯೋತ+ಕೇಳಿಯಲಿ
ಹಲಗೆಯೈ +ಕುರುಭೂಮಿ +ಕೌರವ
ಕುಲದ +ತಲೆ +ಸಾರಿಗಳು +ನೆರೆಯಲಿ
ಗೆಲಲು +ಬಂದೆನು +ಕೊಳ್ಳು +ಹಾಸಂಗಿಗಳನ್+ಎನುತ್+ಎಚ್ಚ

ಅಚ್ಚರಿ:
(೧) ಕುರುಕ್ಷೇತ್ರವನ್ನು ಪಗಡೆಗೆ ಹೋಲಿಸಿದ ಪರಿ – ಹಲಗೆಯೈ ಕುರುಭೂಮಿ ಕೌರವ ಕುಲದ ತಲೆ ಸಾರಿಗಳು

ಪದ್ಯ ೧: ಕೌರವನು ಯಾರನ್ನು ಪರಿಮಿತಕ್ಕೆ ಕರೆದನು?

ಕೇಳು ಜನಮೇಜಯ ಧರಿತ್ರೀ
ಪಾಲ ಕೌರವರಾಯನಲ್ಲಿಗೆ
ಕಾಳಗದ ಕಾತರಿಗರಿವರಟ್ಟಿದರು ಭಟ್ಟರನು
ಕೇಳಿದನು ಕುರುಭೂಮಿಯಲಿ ರಿಪು
ಜಾಲದುದಯವನಂದು ಕುರುಕುಲ
ಮೌಳಿ ಕರೆಸಿದನಾಪ್ತರನು ಪರಿಮಿತಕೆ ಮಂತ್ರಿಗಳ (ಭೀಷ್ಮ ಪರ್ವ, ೧ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಯುದ್ಧದ ಕಾತರತೆಯಲ್ಲಿದ್ದ ಪಾಂಡವರು ಕೌರವನಲ್ಲಿ ದೂತರನ್ನು ಕಳಿಸಿದರು, ಯುದ್ಧರಂಗದಲ್ಲಿ ಶತ್ರುಗಳು ಸಿದ್ಧರಾಗಿರುವುದನ್ನು ಕೇಳಿದ ಕೌರವನು ಮಂತ್ರಾಲೋಚನೆಗಾಗಿ ಆಪ್ತರನ್ನೂ ಮಂತ್ರಿಗಳನ್ನೂ ಕರೆಸಿದನು.

ಅರ್ಥ:
ಧರಿತ್ರೀ: ಭೂಮಿ; ಪಾಲ: ಒಡೆಯ; ರಾಯ: ರಾಜ; ಕಾಳಗ: ಯುದ್ಧ; ಕಾತರ: ಕಳವಳ; ಅರಿ: ತಿಳಿ; ಅಟ್ಟು: ಕಳಿಸು; ಭಟ್ಟ: ದೂತ; ಕೇಳು: ಆಲಿಸು; ರಿಪು: ವೈರಿ; ಜಾಲ: ಗುಂಪು; ಉದಯ: ಹುಟ್ಟು; ಮೌಳಿ: ಶಿರ, ಕಿರೀಟ; ಕರೆಸು: ಬರೆಮಾಡು; ಆಪ್ತ: ಹತ್ತಿರದ; ಪರಿಮಿತ: ಸ್ವಲ್ಪ; ಮಂತ್ರಿ: ಸಚಿವ;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕೌರವರಾಯನಲ್ಲಿಗೆ
ಕಾಳಗದ+ ಕಾತರಿಗ್+ಅರಿವರ್+ಅಟ್ಟಿದರು +ಭಟ್ಟರನು
ಕೇಳಿದನು +ಕುರುಭೂಮಿಯಲಿ +ರಿಪು
ಜಾಲದ್+ಉದಯವನ್+ಅಂದು +ಕುರುಕುಲ
ಮೌಳಿ +ಕರೆಸಿದನ್+ಆಪ್ತರನು +ಪರಿಮಿತಕೆ +ಮಂತ್ರಿಗಳ

ಅಚ್ಚರಿ:
(೧) ಧರಿತ್ರೀಪಾಲ, ರಾಯ – ಸಮನಾರ್ಥಕ ಪದ
(೨) ಕೌರವರಾಯ, ಕುರುಕುಲಮೌಳಿ – ದುರ್ಯೋಧನನನ್ನು ಕರೆದ ಪರಿ

ಪದ್ಯ ೫: ದುರ್ಯೋಧನನು ಯಾವ ಭೂಮಿಯನ್ನು ಪಾಂಡವರಿಗೆ ಕೊಟ್ಟನು?

ಭೂಮಿಯೊಳಗರ್ಧವನು ಬೇಡಿದೊ
ಡಾ ಮಹೀಪತಿಯೈವರಿಗೆ ಸಂ
ಗ್ರಾಮ ಭೂಮಿಯನೈದೆ ಕೊಟ್ಟನು ನಿಮ್ಮೊಳಪ್ರಿಯನು
ಸಾಮದಲಿ ಸೊಗಸಿಲ್ಲ ನೀವ್ ನಿ
ಸ್ಸೀಮರಾದೊಡೆ ಜೋಡಿಸುವುದು
ದ್ಧಾಮ ಕುರುಭೂಮಿಯಲಿ ಕುಳವರಿದವರ ಪತಿಕರಿಸಿ (ಉದ್ಯೋಗ ಪರ್ವ, ೧೨ ಸಂಧಿ, ೫ ಪದ್ಯ)

ತಾತ್ಪರ್ಯ:
ಅರ್ಧ ಭೂಮಿಯನ್ನು ನಾನು ನಿಮಗಾಗಿ ಕೇಳಿದರೆ, ಅವನು ನಿಮಗೆ ಯುದ್ಧಭೂಮಿಯನ್ನು ನೀಡಿದನು. ನಿಮ್ಮಲ್ಲಿ ಅವನಿಗೆ ಸ್ವಲ್ಪವೂ ಪ್ರೇಮವಿಲ್ಲ. ಸಂಧಿಯೆನ್ನುವುದರಲ್ಲಿ ಹುರುಳಿಲ್ಲ. ನೀವು ಚತುರರಾದರೆ, ಕುರುಕ್ಷೇತ್ರದಲ್ಲಿ ಅವರ ಸೈನ್ಯಕ್ಕೆ ಪ್ರತಿಯಾಗಿ ಸೈನ್ಯವನ್ನು ಜೋಡಿಸುವುದು ಸರಿಯಾದ ಮಾರ್ಗ ಎಂದು ಕೃಷ್ಣನು ಹೇಳಿದನು.

ಅರ್ಥ:
ಭೂಮಿ: ಧರಿತ್ರಿ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಬೇಡು: ಕೇಳು; ಮಹೀಪತಿ: ರಾಜ; ಮಹೀ: ಭೂಮಿ; ಸಂಗ್ರಾಮ: ಯುದ್ಧ; ಕೊಡು: ನೀಡು; ಅಪ್ರಿಯ: ಪ್ರೀತಿಯಿಲ್ಲದವ; ಸಾಮ: ಸಂಧಿ; ಸೊಗಸು: ಚೆಲುವು; ನಿಸ್ಸೀಮ: ಪ್ರವೀಣ; ಜೋಡಿಸು: ಸೇರಿಸು; ಉದ್ಧಾಮ: ಶ್ರೇಷ್ಠ; ಕುಳ: ಕುಲ, ವಂಶ; ಇದಿರು: ಎದುರು; ಪತಿಕರಿಸು: ಅಂಗೀಕರಿಸು;

ಪದವಿಂಗಡಣೆ:
ಭೂಮಿಯೊಳಗ್+ಅರ್ಧವನು +ಬೇಡಿದೊಡ್
ಆ +ಮಹೀಪತಿ+ ಐವರಿಗೆ+ ಸಂ
ಗ್ರಾಮ +ಭೂಮಿಯನೈದೆ+ ಕೊಟ್ಟನು +ನಿಮ್ಮೊಳ್+ಅಪ್ರಿಯನು
ಸಾಮದಲಿ +ಸೊಗಸಿಲ್ಲ +ನೀವ್ +ನಿ
ಸ್ಸೀಮರಾದೊಡೆ +ಜೋಡಿಸುವುದ್+ಉ
ದ್ಧಾಮ +ಕುರುಭೂಮಿಯಲಿ +ಕುಳವರಿದವರ +ಪತಿಕರಿಸಿ

ಅಚ್ಚರಿ:
(೧) ಭೂಮಿ, ಮಹೀ – ಸಮನಾರ್ಥಕ ಪದ
(೨) ಸಾಮ, ನಿಸ್ಸೀಮ, ಸಂಗ್ರಾಮ, ಉದ್ಧಾಮ – ಪ್ರಾಸ ಪದಗಳು