ಪದ್ಯ ೧೧: ಯಾವ ಭಾಷೆಯನ್ನು ಭೀಮನು ತೀರಿಸಿಕೊಂಡನು?

ಸಂದುದೇ ನೀ ಮೆಚ್ಚಿ ಸಭೆಯಲಿ
ಹಿಂದೆ ಮಾಡಿದ ಭಾಷೆ ಕುರುಡನ
ನಂದನರನಿಮ್ಮಡಿಸಿದೈವತ್ತನು ರಣಾಗ್ರದಲಿ
ಕೊಂದು ದುಶ್ಶಾಸನನ ಖಂಡವ
ತಿಂದು ರಕುತವ ಕುಡಿದು ಬಲುಗದೆ
ಯಿಂದ ನಿನ್ನಯ ತೊಡೆಯನುಡಿದೆನೆ ಭೂಪ ಕೇಳೆಂದ (ಗದಾ ಪರ್ವ, ೮ ಸಂಧಿ, ೧೧ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ಹಿಂದೆ ನಿನ್ನೆದುರಿನಲ್ಲೇ ಸಭೆಯಲ್ಲಿ ಮಾಡಿದ ಪ್ರತಿಜ್ಞೆಯನ್ನು ಪೂರೈಸಿದೆನಲ್ಲವೇ? ನೂರ್ವರು ಕೌರವರನ್ನು ಯುದ್ಧದಲ್ಲಿ ಕೊಂದು ದುಶ್ಶಾಸನನ ಮಾಂಸವನ್ನು ತಿಂದು ರಕ್ತವನ್ನು ಕುಡಿದು, ಗದೆಯಿಮ್ದ ನಿನ್ನ ತೊಡೆಗಳನ್ನು ಮುರಿದೆನಲ್ಲವೆ ದುರ್ಯೋಧನ ಹೇಳು ಎಂದು ಭೀಮನು ನುಡಿದನು.

ಅರ್ಥ:
ಸಂದು: ಪಡೆದ; ಮೆಚ್ಚು: ಹೊಗಳು, ಪ್ರಶಂಶಿಸು; ಸಭೆ: ದರ್ಬಾರು; ಹಿಂದೆ: ನಡೆದ ಘಟನೆ, ಭೂತಕಾಲ; ಭಾಷೆ: ನುಡಿ; ಕುರುಡ: ಅಂಧ; ನಂದನ: ಮಗ; ಇಮ್ಮಡಿ: ಎರಡು ಪಟ್ಟು; ರಣ: ಯುದ್ಧಭೂಮಿ; ಅಗ್ರ: ಮುಂಭಾಗ; ಕೊಂದು: ಸಾಯಿಸು; ಖಂಡ: ಮೂಳೆಯಿಲ್ಲದ ಮಾಂಸ; ರಕುತ: ನೆತ್ತರು; ಕುಡಿ: ಪಾನಮಾಡು; ಬಲುಗದೆ: ದೊಡ್ಡ ಮುದ್ಗರ; ತೊಡೆ: ಊರು; ಉಡಿ: ಮುರಿ; ಭೂಪ: ರಾಜ;

ಪದವಿಂಗಡಣೆ:
ಸಂದುದೇ +ನೀ +ಮೆಚ್ಚಿ+ ಸಭೆಯಲಿ
ಹಿಂದೆ +ಮಾಡಿದ +ಭಾಷೆ +ಕುರುಡನ
ನಂದನರನ್+ಇಮ್ಮಡಿಸಿದ್+ಐವತ್ತನು +ರಣಾಗ್ರದಲಿ
ಕೊಂದು +ದುಶ್ಶಾಸನನ +ಖಂಡವ
ತಿಂದು +ರಕುತವ +ಕುಡಿದು +ಬಲುಗದೆ
ಯಿಂದ +ನಿನ್ನಯ +ತೊಡೆಯನ್+ಉಡಿದೆನೆ +ಭೂಪ +ಕೇಳೆಂದ

ಅಚ್ಚರಿ:
(೧) ನೂರು ಜನರು ಎಂದು ಹೇಳಲು – ಇಮ್ಮಡಿಸಿದೈವತ್ತನು ಪದದ ಪ್ರಯೋಗ
(೨) ಕೊಂದು, ತಿಂದು, ಸಂದು – ಪ್ರಾಸ ಪದಗಳು

ಪದ್ಯ ೨೫: ಸಂಜಯನು ಯಾವ ವಿಷಯವನ್ನು ಹೇಳಲಿ ಎಂದು ಕೇಳಿದನು?

ಗೆಲಿದನರಸನು ಹಸ್ತಿನಾಪುರ
ದೊಳಗೆ ಕಟ್ಟಿಸುಗುಡಿಯನೆಂಬೆನೊ
ತಲೆಬಳಿಚಿ ತಾನೋಡಿ ಬದುಕಿದನೆಂಬೆನೋ ಮೇಣು
ಲಲನೆಯರಿಗೇನೊಸಗೆ ಕುರುಡನ
ನಳಿಸುವೆನೊ ನಗಿಸುವೆನೊ ತಾಯಿಗೆ
ಕಲಿಸು ಬುದ್ಧಿಯನೇನನೆಂಬೆನು ಭೂಪ ಕೇಳೆಂದ (ಗದಾ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಈಗು ಊರಿಗೆ ಹೋಗಿ ನಿನ್ನ ತಂದೆಗೆ ನಿನ್ನ ಮಗನು ವಿಜಯಶಾಲಿಯಾದ, ವಿಜಯಧ್ವಜವನ್ನು ಹಾರಿಸು ಎಂದು ಹೇಳಲೇ? ತಲೆ ತಪ್ಪಿಸಿಕೊಂಡು ಓಡಿಹೋಗಿ ಬದುಕಿದ ಎನ್ನಲೇ? ಅಂತಃಪುರದ ರಾಣಿಯರಿಗೆ ಯಾವ ಶುಭ ಸಂದೇಶವನ್ನು ನೀಡಲಿ? ಧೃತರಾಷ್ಟ್ರನನ್ನು ಅಳಿಸಲೋ, ನಗಿಸಲು ಏನು ಹೇಳಲಿ, ನಿನ್ನ ತಾಯಿಗೆ ನಾನು ಏನೆಂದು ಹೇಳಲಿ ಎಂದು ಸಂಜಯನು ಕೇಳಿದನು.

ಅರ್ಥ:
ಗೆಲಿ: ಜಯಿಸು; ಅರಸ: ರಾಜ; ಕಟ್ಟಿಸು: ನಿರ್ಮಿಸು; ಗುಡಿ: ಆಲಯ; ತಲೆ: ಶಿರ; ಬಳಚು: ಕತ್ತರಿಸು; ಓಡು: ಧಾವಿಸು; ಬದುಕು: ಜೀವಿಸು; ಮೇಣ್: ಅಥವಾ; ಲಲನೆ: ಹೆಣ್ಣು; ಒಸಗೆ: ಶುಭ; ಕುರುಡ: ಅಂಧ; ಅಳಿಸು: ರೋಧಿಸು; ನಗಿಸು: ಹರ್ಷ, ಸಂತೋಷ ಪಡಿಸು; ತಾಯಿ: ಮಾತೆ, ಅಮ್ಮ; ಕಲಿ: ಅಭ್ಯಾಸ ಮಾಡು, ತಿಳಿ; ಬುದ್ಧಿ: ತಿಳಿವು, ಅರಿವು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಗೆಲಿದನ್+ಅರಸನು+ ಹಸ್ತಿನಾಪುರ
ದೊಳಗೆ +ಕಟ್ಟಿಸು+ಗುಡಿಯನ್+ಎಂಬೆನೊ
ತಲೆಬಳಿಚಿ +ತಾನೋಡಿ +ಬದುಕಿದನ್+ಎಂಬೆನೋ +ಮೇಣು
ಲಲನೆಯರಿಗೇನ್+ಒಸಗೆ +ಕುರುಡನನ್
ಅಳಿಸುವೆನೊ +ನಗಿಸುವೆನೊ +ತಾಯಿಗೆ
ಕಲಿಸು +ಬುದ್ಧಿಯನ್+ಏನನೆಂಬೆನು +ಭೂಪ +ಕೇಳೆಂದ

ಅಚ್ಚರಿ:
(೧) ವಿರುದ್ಧ ಪದ – ಅಳಿಸು, ನಗಿಸು
(೨) ತ ಕಾರದ ಜೋಡಿ ಪದ – ತಲೆಬಳಿಚಿ ತಾನೋಡಿ
(೩) ಭೂಪ, ಅರಸ – ಸಮಾನಾರ್ಥಕ ಪದ

ಪದ್ಯ ೨೧: ಕೃಷ್ಣನು ಭರತಸಂತತಿಯ ಬಗ್ಗೆ ಏನು ಹೇಳಿದ?

ವರ ತಪಸ್ವಿನಿ ನೀನು ನಿನ್ನನು
ಕೆರಳಿಚಿದರೇ ಕುನ್ನಿಗಳು ಮಿಗೆ
ಭರತಸಂತತಿ ಫಲಿತ ಕದಳಿಯ ತೆರದೊಳಾಯಿತಲ
ಕುರುಡನರಿಯದೆ ಹೋದರೆಯು ಕಂ
ಗುರುಡರಾದರೆ ಭೀಷ್ಮ ವಿದುರಾ
ದ್ಯರು ಮಹಾದೇವೆನುತ ಮುರರಿಪು ತೂಗಿದನು ಶಿರವ (ಅರಣ್ಯ ಪರ್ವ, ೨ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕೃಷ್ಣನು ದ್ರೌಪದಿಯನ್ನು ಸಂತೈಸುತ್ತಾ, ದ್ರೌಪದಿ ನೀನು ಮಹಾ ಪತಿವ್ರತೆ, ತಪಸ್ವಿನಿ. ನಿನ್ನನ್ನು ಆ ಕುನ್ನಿಗಳು ಕೆರಳಿಸಿದರೇ? ಅಯ್ಯೋ! ಭರತ ಸಂತತಿಯು ಹಣ್ಣು ಬಿಟ್ಟ ಬಾಳೆಯಗಿಡದಂತಾಯಿತು. ಧೃತರಾಷ್ಟ್ರನು ಮಕ್ಕಳ ಮೋಹದಿಂದ ಕುರುಡ, ಅವನಿಗೆ ತಿಳಿಯಲಿಲ್ಲವೆಂದರೆ, ಕಣ್ಣಿದ್ದು ಭೀಷ್ಮ, ವಿದುರ ಮುಂತಾದವರು ಕುರುಡರಾದರೇ? ಶಿವ ಶಿವಾ ಎಂದು ಶ್ರೀಕೃಷ್ಣನು ತಲೆದೂಗಿದನು.

ಅರ್ಥ:
ವರ: ಶ್ರೇಷ್ಠ; ತಪಸ್ವಿನಿ: ಸಾಧ್ವಿ; ಕೆರಳಿಸು: ಉದ್ರಿಕ್ತವಾಗು, ರೇಗಿಸು; ಕುನ್ನಿ: ನಾಯಿ; ಮಿಗೆ: ಮತ್ತು; ಸಂತತಿ: ವಂಶ; ಫಲಿತ: ಹಣ್ಣು ಬಿಟ್ಟ; ಕದಳಿ: ಬಾಳೆ; ಕುರುಡ: ಅಂಧ; ಅರಿ: ತಿಳಿ; ಕಂಗುರುಡ: ಕಣ್ಣಿದ್ದು ಕುರುಡ; ಆದಿ: ಮೂಂತಾದ; ಮುರರಿಪು: ಕೃಷ್ಣ; ರಿಪು: ವೈರಿ; ತೂಗು: ಅಲ್ಲಾಡಿಸು; ಶಿರ: ತಲೆ;

ಪದವಿಂಗಡಣೆ:
ವರ +ತಪಸ್ವಿನಿ +ನೀನು +ನಿನ್ನನು
ಕೆರಳಿಚಿದರೇ +ಕುನ್ನಿಗಳು+ ಮಿಗೆ
ಭರತಸಂತತಿ+ ಫಲಿತ+ ಕದಳಿಯ+ ತೆರದೊಳ್+ಆಯಿತಲ
ಕುರುಡನ್+ಅರಿಯದೆ +ಹೋದರೆಯು+ ಕಂ
ಕುರುಡರಾದರೆ+ ಭೀಷ್ಮ+ ವಿದುರಾ
ದ್ಯರು +ಮಹಾದೇವ+ಎನುತ +ಮುರರಿಪು+ ತೂಗಿದನು +ಶಿರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಭರತಸಂತತಿ ಫಲಿತ ಕದಳಿಯ ತೆರದೊಳಾಯಿತಲ

ಪದ್ಯ ೩೬: ಶಿಶುಪಾಲನನ್ನು ಭೀಷ್ಮರು ಹೇಗೆ ಜರೆದರು?

ಏಕೆ ಕನ್ನಡಿ ಕುರುಡರಿಗೆ ತಾ
ನೇಕೆ ಸಾಳಗ ಶುದ್ಧ ಬಧಿರರಿ
ಗೇಕೆ ಮೂರ್ಖಸಮಾಜದಲಿ ಸಾಹಿತ್ಯ ಸನ್ನಾಹ
ಏಕೆ ಖಳರಿಗೆ ನಯ ವಿಧಾನ
ವ್ಯಾಕರಣ ಪಾಂಡಿತ್ಯ ಫಡ ಲೋ
ಕೈಕ ಪಾತಕನೆಂದು ನುಡಿದನು ಜರೆದು ದಾನವನ (ಸಭಾ ಪರ್ವ, ೧೦ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕುರುಡರಿಗೆ ಕನ್ನಡಿಯೇಕೆ? ಶುದ್ಧ ಕಿವುಡನಿಗೆ ಸಂಗೀತವೇಕೆ, ಮೂರ್ಖ ಸಮಾಜದಲ್ಲಿ ಸಾಹಿತ್ಯವೇಕೆ? ನಯವಿಧಾನದ ಪಾಂಡಿತ್ಯವು ಅಸುರರಿಗೇಕೆ? ಛೇ ನೀನು ಲೊಖೈಕ ಪಾತಕ ಎಂದು ಭೀಷ್ಮರು ಶಿಶುಪಾಲನನ್ನು ಜರೆದರು.

ಅರ್ಥ:
ಕನ್ನಡಿ: ಮುಕುರ; ಕುರುಡು: ಕಣ್ಣಿಲ್ಲದವ; ಸಾಳಗ: ಸಂಗೀತದ ವಾದ್ಯ; ಶುದ್ಧ: ಪೂರ್ಣ; ಬಧಿರ:ಕಿವುಡ; ಮೂರ್ಖ: ಮೂಢ; ಸಮಾಜ: ಗುಂಪು; ಸಾಹಿತ್ಯ: ಕಾವ್ಯ, ನಾಟಕ ಮುಂತಾದ ಸೃಜನಾತ್ಮಕ ಬರವಣಿಗೆ; ಸನ್ನಾಹ: ಅಣಿ ಮಾಡಿಕೊಳ್ಳುವುದು; ಖಳ: ದುಷ್ಟ; ನಯ: ನುಣುಪು, ಮೃದುತ್ವ; ವಿಧಾನ: ರೀತಿ; ವ್ಯಾಕರಣ: ಭಾಷೆಯ ನಿಯಮಗಳನ್ನು ತಿಳಿಸುವ ಶಾಸ್ತ್ರ; ಪಾಂಡಿತ್ಯ: ವಿದ್ವತ್ತು, ಜ್ಞಾನ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಲೋಕ: ಜಗತ್ತು; ಪಾತಕ: ದುಷ್ಟ; ನುಡಿ: ಮಾತಾಡು;

ಪದವಿಂಗಡಣೆ:
ಏಕೆ +ಕನ್ನಡಿ +ಕುರುಡರಿಗೆ +ತಾ
ನೇಕೆ +ಸಾಳಗ +ಶುದ್ಧ +ಬಧಿರರಿಗ್
ಏಕೆ+ ಮೂರ್ಖ+ಸಮಾಜದಲಿ +ಸಾಹಿತ್ಯ +ಸನ್ನಾಹ
ಏಕೆ+ ಖಳರಿಗೆ +ನಯ +ವಿಧಾನ
ವ್ಯಾಕರಣ +ಪಾಂಡಿತ್ಯ +ಫಡ +ಲೋ
ಕೈಕ+ ಪಾತಕನೆಂದು +ನುಡಿದನು +ಜರೆದು +ದಾನವನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಏಕೆ ಕನ್ನಡಿ ಕುರುಡರಿಗೆ, ಏಕೆ ಸಾಳಗ ಶುದ್ಧ ಬಧಿರರಿಗೆ,
ಏಕೆ ಮೂರ್ಖಸಮಾಜದಲಿ ಸಾಹಿತ್ಯ ಸನ್ನಾಹ, ಏಕೆ ಖಳರಿಗೆ ನಯವಿಧಾನ ವ್ಯಾಕರಣ ಪಾಂಡಿತ್ಯ
(೨) ಶಿಶುಪಾಲನನ್ನು ಬಯ್ಯುವ ಪರಿ – ಫಡ, ಲೋಕೈಕ ಪಾತಕ

ಪದ್ಯ ೫: ಮಾದ್ರೀ ಕುಮಾರರು ಏನೆಂದು ಯೋಚಿಸುತ್ತಾ ಹಿಂದಿರುಗಿದರು?

ಜಯಸಮರ ಜಾರಾಯ್ತು ತೆಗೆ ಪಾ
ಳೆಯಕೆ ಮರಳಿಚು ರಥವನಿನ್ನೆ
ಲ್ಲಿಯದು ನೆಲ ನೆರೆ ಕುದಿವ ಕುರುಡನ ಮಕ್ಕಳೇ ಕೊಳಲಿ
ನಿಯತವೆಮ್ಮಿಬ್ಬರಿಗೆ ರಾಯನ
ಲಯವೆ ಲಯವಿನ್ನೆನುತಲಾ ಮಾ
ದ್ರಿಯ ಕುಮಾರರು ದೊರೆ ಸಹಿತ ರಿಗುರಿದರು ಪಾಳೆಯಕೆ (ಕರ್ಣ ಪರ್ವ, ೧೪ ಸಂಧಿ, ೫ ಪದ್ಯ)

ತಾತ್ಪರ್ಯ:
ಯುದ್ಧದಲ್ಲಿ ಜಯವು ಜಾರಿ ಹೋಯಿತು, ರಥವನ್ನು ಪಾಳೆಯಕ್ಕೆ ಹಿಂದಿರುಗಿಸು, ಇನ್ನೆಲ್ಲಿಯ ರಾಜ್ಯ, ಹೊಟ್ಟೆಕಿಚ್ಚಿನಿಂದ ಕುದಿಯುತ್ತಿರುವ ಆ ಧೃತರಾಷ್ಟ್ರನ ಮಕ್ಕಳೇ ರಾಜ್ಯವನ್ನು ಇಟ್ಟುಕೊಳ್ಳಲಿ, ಧರ್ಮಜನ ಮರಣವೇ ನಮ್ಮ ಮರಣ, ಎಂದು ನೋವಿನಿಂದ ಮಾತಾಡುತ್ತಾ ನಕುಲ ಸಹದೇವರು ಅರಸನೊಡನೆ ಪಾಳೆಯಕ್ಕೆ ಹಿಂದಿರುಗಿದರು.

ಅರ್ಥ:
ಜಯ: ಗೆಲುವು; ಸಮರ: ಯುದ್ಧ; ಜಾರು: ಕೆಳಗೆ ಬೀಳು, ಕಳಚು; ತೆಗೆ: ಈಚೆಗೆ ತರು; ಪಾಳೆಯ: ಬೀಡು, ಶಿಬಿರ; ಮರಳು: ಹಿಂದಿರುಗು; ರಥ: ಬಂಡಿ; ನೆಲ: ಭೂಮಿ; ನೆರೆ: ಹೆಚ್ಚಳ, ಅತಿಶಯ; ಕುದಿ: ಅಸೂಯೆ, ಹೊಟ್ಟೆಕಿಚ್ಚು; ಕುರುಡ: ಕಣ್ಣು ಕಾಣದ; ಮಕ್ಕಳು: ಸುತ; ಕೊಳಲಿ: ತೆಗೆ, ಪಡೆ; ನಿಯತ: ನಿಶ್ಚಿತವಾದುದು; ಲಯ: ಮರಣ; ಕುಮಾರ: ಮಕ್ಕಳು; ದೊರೆ: ರಾಜ; ಸಹಿತ: ಜೊತೆ; ತಿರುಗು: ಹೊರಡು;

ಪದವಿಂಗಡಣೆ:
ಜಯಸಮರ +ಜಾರಾಯ್ತು +ತೆಗೆ +ಪಾ
ಳೆಯಕೆ +ಮರಳಿಚು+ ರಥವನ್+ಇನ್ನೆ
ಲ್ಲಿಯದು +ನೆಲ +ನೆರೆ +ಕುದಿವ+ ಕುರುಡನ +ಮಕ್ಕಳೇ +ಕೊಳಲಿ
ನಿಯತವ್+ಎಮ್ಮಿಬ್ಬರಿಗೆ +ರಾಯನ
ಲಯವೆ +ಲಯವ್+ಇನ್ನೆನುತಲ್+ಆ+ ಮಾ
ದ್ರಿಯ +ಕುಮಾರರು +ದೊರೆ +ಸಹಿತ +ತಿರುಗಿದರು +ಪಾಳೆಯಕೆ

ಅಚ್ಚರಿ:
(೧) ನೋವಿನ ದೃಶ್ಯವನ್ನು ತಿಳಿಸುವ ಪದ್ಯ
(೨) ದುರ್ಯೋಧನನನ್ನು – ಕುರುಡನ ಮಕ್ಕಳು ಎಂದು ಕರೆದುದು, ಧೃತರಾಷ್ಟ್ರನಲ್ಲಿಯ ಅವರ ನೋವು ಹೊರಬಂದಿರುವುದು

ಪದ್ಯ ೭೧: ಯಾರು ಸಾಕ್ಷಾತ್ ಪರಮಾತ್ಮನು?

ಪರರ ಪಟುತನ ವಾದದಲಿ ಮೂ
ಗರವೊಲಿಹ ಪರವಚನದುತ್ಕಟ
ದೊರೆಗೆ ಬಧಿರತ್ವವನು ಪರಗುಣ ದೋಷ ದರುಶನವು
ದೊರಕಿದೊಡೆ ಜಾತ್ಯಂಧನೆನಿಸುವ
ಪುರುಷನಾವವನವನು ಸಾಕ್ಷಾ
ತ್ಪರಮ ಪುರುಷೋತ್ತಮನಲೇ ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೭೧ ಪದ್ಯ)

ತಾತ್ಪರ್ಯ:
ಇತರರ ತೀಕ್ಷ್ಣವಾದ ವಾದವನ್ನು ಕೇಳಿ ಮೂಗನಂತೆ ಸುಮ್ಮನಿರುವವನೂ, ಪರರ ಕಠಿಣ ವಾಕ್ಯಗಳನ್ನು ಕಿವುಡನಂತೆ ಆಲಿಸದಿರುವವನೂ, ಪರರ ಗುಣ ದೋಷಗಳನ್ನು ಕಾಣದೆ ಹುಟ್ಟು ಕುರುಡನಂತಿರುವವನೂ ಸಾಕ್ಷಾತ್ ಪರಮಾತ್ಮನೇ ಆಗಿರುವನು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಪರರ: ಇತರ; ಪಟುತನ: ಸಾಮರ್ಥ್ಯ; ವಾದ: ಮಾತು, ಸಂಭಾಷಣೆ; ಮೂಗ: ಮಾತು ಬರದಿರುವ; ಪರ: ಬೇರೆಯವರ; ವಚನ: ಮಾತು; ಉತ್ಕಟ: ಉಗ್ರತೆ, ಸೊಕ್ಕಿದ; ದೊರೆ:ಸರಿಯಾದುದು, ರೀತಿ; ಬಧಿರ:ಕಿವುಡ; ಗುಣ: ನಡತೆ, ಸ್ವಭಾವ; ದೋಷ: ತಪ್ಪು, ಹುಳುಕು; ದರುಶನ: ನೋಡು; ಜಾತ್ಯಂಧ: ಹುಟ್ಟುಕುರುಡ; ಪುರುಷ: ಮನುಷ್ಯ; ಸಾಕ್ಷಾತ್: ನಿಜವಾದ; ಪುರುಷೋತ್ತಮ: ಶ್ರೇಷ್ಠ; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪರರ +ಪಟುತನ+ ವಾದದಲಿ+ ಮೂ
ಗರವೊಲ್+ಇಹ+ ಪರ+ವಚನದ್+ಉತ್ಕಟ
ದೊರೆಗೆ +ಬಧಿರತ್ವವನು +ಪರಗುಣ +ದೋಷ +ದರುಶನವು
ದೊರಕಿದೊಡೆ+ ಜಾತ್ಯಂಧನ್+ಎನಿಸುವ
ಪುರುಷನಾವವನ್+ಅವನು +ಸಾಕ್ಷಾ
ತ್ಪರಮ+ ಪುರುಷೋತ್ತಮನಲೇ +ಭೂಪಾಲ +ಕೇಳೆಂದ

ಅಚ್ಚರಿ:
(೧) ಪರ – ೩ ಬಾರಿ ಪ್ರಯೋಗ
(೨) ಮೂಗ, ಬಧಿರ, ಕುರುಡ – ಯಾವಾಗ, ಯಾರಜೋತೆ ಈ ರೀತಿಯಾಗಿರಬೇಕೆಂದು ತಿಳಿಸುವ ಪದ್ಯ