ಪದ್ಯ ೧೫: ಸೈನ್ಯವನ್ನು ಹೇಗೆ ಸಜ್ಜುಮಾಡಿದನು?

ನೆರೆದ ನಿಜಸೇನಾಧಿಪರ ಸಂ
ವರಣೆಗಳ ನೋಡಿದನು ನೀಡಿದ
ನರಿಬಿರುದ ಮಂಡಳಿಕರಿಗೆ ಕಾಳೆಗದ ವೀಳೆಯವ
ಹರಿಗೆ ಹಲಗೆ ಕೃಪಾಣ ತೋಮರ
ಪರಶು ಕಕ್ಕಡೆ ಕೊಂತ ಮುದ್ಗರ
ಸುರಗಿಯತಿಬಳ ಪಾಯ್ದಳವ ನಿರಿಸಿದನು ವಳಯದಲಿ (ದ್ರೋಣ ಪರ್ವ, ೪ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮಹಾಶೂರನಾದ ಶತ್ರುಭಯಂಕರರಾದ ಮಂಡಳಿಕರ ಸೇನೆಗಳನ್ನು ನಿರೀಕ್ಷಿಸಿ ದ್ರೋಣನು ಅವರಿಗೆ ರಣವೀಳೆಯವನ್ನು ಕೊಟ್ಟನು. ಗುರಾಣಿ, ಕತ್ತಿ, ತೋಮರ, ಗಂಡುಕೊಡಲಿ, ಕಕ್ಕಡೆ, ಕುಂತ, ಮುದ್ಗರ, ಸುರಗಿಗಳನ್ನು ಹಿಡಿದ ಕಾಲಾಳುಗಳನ್ನು ವೃತ್ತಾಕಾರವಾಗಿ ನಿಲ್ಲಿಸಿದನು.

ಅರ್ಥ:
ನೆರೆದ: ಸೇರಿದ; ಸೇನಾಧಿಪ: ಸೇನೆಯ ಮುಖ್ಯಸ್ಥ; ಸಂವರಣೆ: ಶೇಖರಣೆ, ಸಜ್ಜು; ನೋಡು: ವೀಕ್ಷಿಸು; ನೀಡು: ಕೊಡು; ಅರಿಬಿರುದ: ಶತ್ರುಭಯಂಕರ; ಮಂಡಳಿಕ: ಸಾಮಂತ ರಾಜ; ಕಾಳೆಗ: ಯುದ್ಧ; ವೀಳೆ: ಆಮಂತ್ರಣ, ತಾಂಬೂಲ; ಹರಿಗೆ: ಪ್ರವಹಿಸು; ಹಲಗೆ: ಗುರಾಣಿ; ಕೃಪಾಣು: ಒಂದು ಬಗೆಯ ಆಯುಧ; ತೋಮರ: ಈಟಿಯಂತಹ ಒಂದು ಬಗೆಯ ಆಯುಧ; ಪರಶು: ಕೊಡಲಿ, ಕುಠಾರ; ಕಕ್ಕಡ: ದೀವಟಿಗೆ, ಪಂಜು; ಕುಂತ: ಈಟಿ, ಭರ್ಜಿ; ಮುದ್ಗರ: ಗದೆ; ಸುರಗಿ: ಸಣ್ಣ ಕತ್ತಿ, ಚೂರಿ; ಅತಿಬಲ: ಪರಾಕ್ರಮ; ಪಾಯ್ದಳ: ಸೈನ್ಯ; ಇರಿಸು: ಸಜ್ಜುಮಾಡು; ವಳಯ: ವರ್ತುಲ, ಪರಿಧಿ;

ಪದವಿಂಗಡಣೆ:
ನೆರೆದ +ನಿಜಸೇನಾಧಿಪರ+ ಸಂ
ವರಣೆಗಳ +ನೋಡಿದನು +ನೀಡಿದನ್
ಅರಿಬಿರುದ +ಮಂಡಳಿಕರಿಗೆ +ಕಾಳೆಗದ +ವೀಳೆಯವ
ಹರಿಗೆ +ಹಲಗೆ +ಕೃಪಾಣ +ತೋಮರ
ಪರಶು +ಕಕ್ಕಡೆ +ಕೊಂತ +ಮುದ್ಗರ
ಸುರಗಿ+ಅತಿಬಳ +ಪಾಯ್ದಳವ +ನಿರಿಸಿದನು +ವಳಯದಲಿ

ಅಚ್ಚರಿ:
(೧) ಆಯುಧಗಳ ಹೆಸರು – ಹಲಗೆ, ಕೃಪಾಣ, ತೋಮರ, ಪರಶು, ಕಕ್ಕಡ, ಕುಂತ, ಮುದ್ಗರ, ಸುರಗಿ

ಪದ್ಯ ೩೯: ಯಾವ ಖಡ್ಗಗಳನ್ನು ಯುದ್ಧದಲ್ಲಿ ಬಳಸಲಾಯಿತು?

ಖಡುಗ ತೋಮರ ಪರಶುಗಳ ಕ
ಕ್ಕಡೆಯ ಕುಂತದ ಪಿಂಡಿವಾಳದ
ಕಡುಗಲಿಗಳುರೆ ಮಗ್ಗಿದರು ತಗ್ಗಿದುದು ಯಮಲೋಕ
ಬಿಡದೆ ನಾಯಕವಾಡಿ ಚೂಣಿಯ
ಹಿಡಿದು ಕಾದಿತ್ತು ಭಯರಾಯರು
ದಡಿಯಕೈಯವರಿಂದ ಕವಿಸಿದರಂದು ಸಬಳಿಗರ (ಭೀಷ್ಮ ಪರ್ವ, ೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಖಡ್ಗ, ತೋಮರ, ಗಂಡುಕೊಡಲಿ, ಕಕ್ಕಡೆ, ಕುಂತ, ಭಿಂಡಿವಾಳಗಳನ್ನು ಹಿಡಿದ ವೀರರು ಹೋರಾಡಿ ಸತ್ತರು, ಯಮಲೋಕವು ಅವರ ಭಾರದಿಂದ ಕುಸಿಯಿತು. ನಾಯಕರು ತಮ್ಮ ಎದುರಿನಲ್ಲಿದ್ದವರೊಡನೆ ಕಾದಿದರು, ಆಗ ಎರಡೂ ಸೈನ್ಯಗಳ ರಾಜರು ಕೈಗೋಲು ಹಿಡಿದ ದೂತರ ಮುಖಾಂತರ ಈಟಿಯನ್ನು ಹಿಡಿದ ಯೋಧರು ಮುನ್ನುಗ್ಗಲು ಅಪ್ಪಣೆಯನ್ನು ನೀಡಿದರು.

ಅರ್ಥ:
ಖಡುಗ: ಕತ್ತಿ, ಕರವಾಳ; ತೋಮರ: ಈಟಿ; ಪರಶು: ಕೊಡಲಿ, ಕುಠಾರ; ಕಕ್ಕಡೆ: ಗರಗಸ; ಕುಂತ: ಈಟಿ, ಭರ್ಜಿ; ಪಿಂಡಿವಾಳ: ಈಟಿ; ಕಲಿ: ಶೂರ; ಉರೆ: ಅಧಿಕ; ಮಗ್ಗು: ಕುಂದು, ಕುಗ್ಗು; ತಗ್ಗು: ಕುಗ್ಗು, ಕುಸಿ; ಯಮಲೋಕ: ಅಧೋಲೋಕ; ಬಿಡು: ತೊರೆ; ನಾಯಕ: ಒಡೆಯ; ಚೂಣಿ: ಮೊದಲು; ಹಿಡಿ: ಬಂಧಿಸು; ಕಾದು: ಹೋರಾಡು; ಭಯ: ಅಂಜಿಕೆ; ರಾಯ: ರಾಜ; ದಡಿ: ಕೋಲು, ಜೀನು; ಕವಿಸು: ಆವರಿಸು, ಮುಸುಕು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು;

ಪದವಿಂಗಡಣೆ:
ಖಡುಗ +ತೋಮರ +ಪರಶುಗಳ +ಕ
ಕ್ಕಡೆಯ +ಕುಂತದ +ಪಿಂಡಿವಾಳದ
ಕಡುಗಲಿಗಳ್+ಉರೆ +ಮಗ್ಗಿದರು+ ತಗ್ಗಿದುದು +ಯಮಲೋಕ
ಬಿಡದೆ +ನಾಯಕವಾಡಿ+ ಚೂಣಿಯ
ಹಿಡಿದು +ಕಾದಿತ್ +ಉಭಯ+ರಾಯರು
ದಡಿಯಕೈ+ಅವರಿಂದ +ಕವಿಸಿದರ್+ಅಂದು +ಸಬಳಿಗರ

ಅಚ್ಚರಿ:
(೧) ಆಯುಧಗಳ ಹೆಸರು – ಖಡುಗ, ತೋಮರ, ಪರಶು, ಕಕ್ಕಡಿ, ಕುಂತ, ಪಿಂಡಿವಾಳ
(೨) ಬಹಳ ಜನ ಸತ್ತರು ಎಂದು ಹೇಳಲು -ತಗ್ಗಿದುದು ಯಮಲೋಕ

ಪದ್ಯ ೫೭: ದ್ರೌಪದಿಯು ಹೇಗೆ ಚಿಂತಿಸಿದಳು?

ಆವ ಗರಳವ ಕುಡಿವೆನೋ ಮೇ
ಣಾವ ಬೆಟ್ಟವನಡರಿ ಬೀಳ್ವೆನೊ
ಆವ ಮಡುವನು ಹೊಗುವೆನೋ ಹಾಸರೆಯ ಗುಂಪಿನಲಿ
ಆವ ಕುಂತವ ಹಾಯ್ವೆನೋ ಮೇ
ಣಾವ ಪಾವಕನೊಳಗೆ ಬೀಳ್ವೆನೊ
ಸಾವು ಸಮನಿಸದೆನಗೆನುತ ಮರುಗಿದಳು ಕಮಲಾಕ್ಷಿ (ವಿರಾಟ ಪರ್ವ, ೩ ಸಂಧಿ, ೫೭ ಪದ್ಯ)

ತಾತ್ಪರ್ಯ:
ನನಗೆ ತಾನಾಗಿ ಸಾವು ಬರುತ್ತಿಲ್ಲ, ಬದುಕು ಬೇಡವಾಗಿದೆ, ಅತೀವ ದುಃಖಿತಳಾದ ದ್ರೌಪದಿ ಚಿಂತಿಸುತ್ತಾ ನಾನು ಯಾವ ವಿಷವನ್ನು ಕುಡಿಯಲಿ, ಯಾವ ಬೆಟ್ಟವನ್ನು ಹತ್ತಿ ಮೇಲಿಂದ ಬೀಳಲಿ, ಯಾವ ಕಲ್ಲುಗುಂಡಿರುವ ಮಡುವಿನಲ್ಲಿ ಬೀಳಲಿ, ಯಾವ ಆಯುಧಕ್ಕೆ ನನ್ನನ್ನು ಒಡ್ಡಿ ಪ್ರಾಣವನ್ನು ಬಿಡಲಿ, ಯಾವ ಬೆಂಕಿಗೆ ಹಾಯಲಿ ಎಂದು ದ್ರೌಪದಿಯು ದುಃಖಿತಳಾಗಿ ಚಿಂತಿಸಿದಳು.

ಅರ್ಥ:
ಗರಳ: ವಿಷ; ಕುಡಿ: ಪಾನಮಾಡು; ಮೇಣ್: ಅಥವ; ಬೆಟ್ಟ: ಗಿರಿ; ಅಡರು: ಹತ್ತು; ಬೀಳು: ಕುಸಿ; ಮಡು: ಸುಳಿ; ಹೊಗು: ಸೇರು; ಹಾಸರೆ: ಪ್ರಯಾಣ; ಗುಂಪು: ಸಮೂಹ; ಕುಂತ:ಈಟಿ, ಭರ್ಜಿ; ಹಾಯ್ದು: ಹೊಡೆ, ಹಾರು; ಪಾವಕ: ಬೆಂಕಿ; ಸಾವು: ಮರಣ; ಸಮನಿಸು: ಘಟಿಸು, ದೊರಕು; ಮರುಗು: ದುಃಖಿಸು; ಕಮಲಾಕ್ಷಿ: ಕಮಲದಂತಹ ಕಣ್ಣುಳ್ಳವಳು;

ಪದವಿಂಗಡಣೆ:
ಆವ+ ಗರಳವ+ ಕುಡಿವೆನೋ +ಮೇಣ್
ಆವ +ಬೆಟ್ಟವನ್+ಅಡರಿ +ಬೀಳ್ವೆನೊ
ಆವ +ಮಡುವನು +ಹೊಗುವೆನೋ +ಹಾಸರೆಯ +ಗುಂಪಿನಲಿ
ಆವ +ಕುಂತವ +ಹಾಯ್ವೆನೋ +ಮೇಣ್
ಆವ +ಪಾವಕನೊಳಗೆ+ ಬೀಳ್ವೆನೊ
ಸಾವು +ಸಮನಿಸದ್+ಎನಗೆನುತ +ಮರುಗಿದಳು+ ಕಮಲಾಕ್ಷಿ

ಅಚ್ಚರಿ:
(೧) ಆತ್ಮಹತ್ಯೆಗೆ ಯೋಚಿಸುತ್ತಿರುವ ಪರಿ – ಗರಳ, ಬೆಟ್ಟ, ಪಾವಕ, ಮಡು, ಕುಂತ