ಪದ್ಯ ೫೫: ಯಕ್ಷಸೈನಿಕರು ಏನೆಂದು ಚಿಂತಿಸಿದರು?

ಚೆಲ್ಲಿದರು ರಕ್ಕಸರು ಯಕ್ಷರು
ಬಿಲ್ಲ ಬಿಸುಟರು ಗುಹ್ಯಕರು ನಿಂ
ದಲ್ಲಿ ನಿಲ್ಲರು ಕಿನ್ನರರನಿನ್ನೇನು ಹೇಳುವೆನು
ಗೆಲ್ಲವಿದು ಲೇಸಾಯ್ತು ಮಾನವ
ನಲ್ಲ ನಮಗೀ ಭಂಗ ಭಯರಸ
ವೆಲ್ಲಿ ಭಾಪುರೆ ವಿಧಿಯೆನುತ ಚಿಂತಿಸಿತು ಭಟನಿಕರ (ಅರಣ್ಯ ಪರ್ವ, ೧೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ರಾಕ್ಷಸರು ಓಡಿದರು, ಯಕ್ಷರು ಬಿಲ್ಲುಗಳನ್ನು ಬಿಸಾಡಿದರು, ಗುಹ್ಯಕರು ನಿಂತಲ್ಲಿ ನಿಲ್ಲಲಿಲ್ಲ, ಕಿನ್ನರರ ಪಾಡನ್ನು ನಾನೇನು ಹೇಳಲಿ, ಇವನಾರೋ ನಮ್ಮನ್ನು ಜಯಿಸಿದ, ಖಂಡಿತವಾಗಿ ಇವನು ಮನುಷ್ಯನಲ್ಲ, ನಮಗೆ ಇಂತಹ ಭಯ ಅಪಮಾನಗಳು ವಿಧಿವಶದಿಂದಾದವು ಭಾಪುರೆ ವಿಧಿ ಎಂದು ಯಕ್ಷ ಯೋಧರು ಚಿಂತಿಸಿದರು.

ಅರ್ಥ:
ಚೆಲ್ಲು: ಹರಡು; ರಕ್ಕಸ: ರಾಕ್ಷಸ; ಯಕ್ಷ: ದೇವತೆಗಳ ಒಂದು ಗುಂಪು; ಬಿಲ್ಲು: ಚಾಪ; ಬಿಸುಟು: ಹೊರಹಾಕು; ಗುಹ್ಯಕ: ಯಕ್ಷ; ನಿಲ್ಲು: ಸ್ಥಿರವಾಗು; ಕಿನ್ನರ: ದೇವತೆಗಳ ಒಂದುವರ್ಗ, ಕುಬೇರನ ಪ್ರಜೆ; ಗೆಲುವು: ಜಯ; ಲೇಸು: ಒಳಿತು; ಮಾನವ: ನರ; ಭಂಗ: ಮುರಿ, ತುಂಡು; ಭಯ: ಭೀತಿ; ರಸ: ಸಾರ; ಭಾಪುರೆ: ಭಲೆ; ವಿಧಿ: ಸೃಷ್ಟಿಕರ್ತ, ಬ್ರಹ್ಮ; ಚಿಂತಿಸು: ಯೋಚಿಸು; ಭಟ: ಸೈನ್ಯ; ನಿಕರ: ಗುಂಪು;

ಪದವಿಂಗಡಣೆ:
ಚೆಲ್ಲಿದರು +ರಕ್ಕಸರು +ಯಕ್ಷರು
ಬಿಲ್ಲ +ಬಿಸುಟರು +ಗುಹ್ಯಕರು +ನಿಂ
ದಲ್ಲಿ +ನಿಲ್ಲರು +ಕಿನ್ನರರನ್+ಇನ್ನೇನು +ಹೇಳುವೆನು
ಗೆಲ್ಲವಿದು +ಲೇಸಾಯ್ತು +ಮಾನವ
ನಲ್ಲ +ನಮಗೀ +ಭಂಗ +ಭಯರಸ
ವೆಲ್ಲಿ +ಭಾಪುರೆ+ ವಿಧಿಯೆನುತ +ಚಿಂತಿಸಿತು +ಭಟನಿಕರ

ಅಚ್ಚರಿ:
(೧) ಭ ಕಾರದ ತ್ರಿವಳಿ ಪದ – ಭಂಗ ಭಯರಸವೆಲ್ಲಿ ಭಾಪುರೆ