ಪದ್ಯ ೨೬: ಭೀಷ್ಮನು ವೇಗವಾಗಿ ಎಲ್ಲಿಗೆ ಬಂದನು?

ವಿರಹ ದಾವುಗೆ ಕಿಚ್ಚು ಭೂಮೀ
ಶ್ವರನ ಮುಸುಕಿತು ಬಲಿದವಸ್ಥೆಯ
ನರಸ ಬಣ್ಣಿಸಲರಿಯೆನೇಳೆಂಟೊಂಬತರ ಬಳಿಯ
ಮರಣವೀತಂಗೆಂಬ ಜನದು
ಬ್ಬರದ ಗುಜುಗುಜುವರಿದು ಯಮುನಾ
ವರನದಿಯ ತೀರಕ್ಕೆ ಬಂದನು ಭೀಷ್ಮ ವಹಿಲದಲಿ (ಆದಿ ಪರ್ವ, ೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ವಿರಹದ ಕುಲುಮೆಯ ಬೆಂಕಿಯು ಅವನನ್ನು ಆವರಿಸಿತು. ಆ ತಾಪವನ್ನು ಬಣ್ಣಿಸಲಾರೆ. ಏಳೋ, ಎಂಟೋ, ಒಂಬತ್ತು ದಿನಗಳಲ್ಲಿ ಇವನ ಮರಣವು ನಿಶ್ಚಿತವೆಂದು ಜನರು ಗುಜುಗುಜು ಮಾತನಾಡಿದರು. ಅದನ್ನು ಕೇಳಿ ಭೀಷ್ಮನು ಯಮುನಾ ನದಿಯ ತೀರಕ್ಕೆ ವೇಗದಿಂದ ಬಂದನು.

ಅರ್ಥ:
ವಿರಹ: ಅಗಲಿಕೆ, ವಿಯೋಗ; ದಾವು: ತಾಪ, ಧಗೆ; ಕಿಚ್ಚು: ಬೆಂಕಿ; ಭೂಮೀಶ್ವರ: ರಾಜ; ಮುಸುಕು: ಆವರಿಸು; ಬಲಿ: ಹೆಚ್ಚಾ, ಗಟ್ಟಿ; ಅವಸ್ಥೆ: ಸ್ಥಿತಿ; ಅರಸ: ರಾಜ; ಬಣ್ಣಿಸು: ವಿವರಿಸು; ಅರಿ: ತಿಳಿ; ಬಳಿ: ನಂತರ; ಮರಣ: ಸವು; ಉಬ್ಬರ: ಅತಿಶಯ; ಗುಜುಗುಜು: ಮಾತು; ಅರಿ: ತಿಳಿ; ನದಿ: ಸರೋವರ; ತೀರ: ದಡ; ಬಂದು: ಆಗಮಿಸು; ವಹಿಲ: ವೇಗ;

ಪದವಿಂಗಡಣೆ:
ವಿರಹ +ದಾವುಗೆ +ಕಿಚ್ಚು +ಭೂಮೀ
ಶ್ವರನ +ಮುಸುಕಿತು +ಬಲಿದ್+ಅವಸ್ಥೆಯನ್
ಅರಸ +ಬಣ್ಣಿಸಲ್+ಅರಿಯೆನ್+ಏಳೆಂಟೊಂಬತರ +ಬಳಿಯ
ಮರಣವ್+ಈತಂಗ್+ಎಂಬ +ಜನದ್
ಉಬ್ಬರದ +ಗುಜುಗುಜುವ್+ಅರಿದು +ಯಮುನಾ
ವರ+ನದಿಯ +ತೀರಕ್ಕೆ+ ಬಂದನು +ಭೀಷ್ಮ +ವಹಿಲದಲಿ

ಅಚ್ಚರಿ:
(೧) ವಿರಹದ ತೀವ್ರತೆಯನ್ನು ಹೇಳುವ ಪರಿ – ವಿರಹ ದಾವುಗೆ ಕಿಚ್ಚು ಭೂಮೀಶ್ವರನ ಮುಸುಕಿತು

ಪದ್ಯ ೪೨: ಚತುರಂಗ ಬಲವು ಹೇಗೆ ನಾಶವಾಯಿತು?

ಕೂಡೆ ಕಟ್ಟಿತು ಕಿಚ್ಚು ತೆರಪಿನ
ಲೋಡುವಡೆ ಗುರುಸುತನ ಶರ ಮಿ
ಕ್ಕೋಡುವಡೆ ಬಾಗಿಲುಗಳಲಿ ಕೃತವರ್ಮ ಕೃಪರೆಸುಗೆ
ಕೂಡೆ ಮುಮ್ಮುಳಿಯೋದುದೀ ಶರ
ಝಾಡಿಯಲಿ ಚತುರಂಗಬಲವ
ಕ್ಕಾಡಿತೇನೆಂಬೆನು ಯುಧಿಷ್ಠಿರನೃಪನ ಪರಿವಾರ (ಗದಾ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸುತ್ತಲೂ ಆಯುಧದ ಕಿಚ್ಚು, ಬಿಟ್ಟೋಡಿದರೆ ಅಶ್ವತ್ಥಾಮನ ಬಾಣಗಳು. ತಪ್ಪಿಸಿಕೊಂಡು ಹೋದರೆ ಬಾಗಿಲುಗಳಲ್ಲಿ ಕೃತವರ್ಮ, ಕೃಪರ ಬಾಣ ಪ್ರಯೋಗ. ಬಾಣಗಳ ಹೊಡೆತಕ್ಕೆ ಚತುರಂಗ ಬಲವು ನಾಶವಾಗಿ ಹೋಯಿತು.

ಅರ್ಥ:
ಕೂಡೆ: ಕೂಡಲೆ; ಕಟ್ಟು: ಬಂಧಿಸು; ಕಿಚ್ಚು: ಬೆಂಕಿ; ತೆರಪು: ಮಯ, ಸಂದರ್ಭ; ಓಡು: ಧಾವಿಸು; ಸುತ: ಮಗ; ಗುರು: ಆಚಾರ್ಯ; ಶರ: ಬಾಣ; ಬಾಗಿಲು: ಕದ; ಮುಮ್ಮುಳಿ: ರೂಪಗೆಟ್ಟು ನಾಶವಾಗು; ಝಾಡಿ: ಕಾಂತಿ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ನೃಪ: ರಾಜ; ಪರಿವಾರ: ಬಂಧುಜನ;

ಪದವಿಂಗಡಣೆ:
ಕೂಡೆ +ಕಟ್ಟಿತು +ಕಿಚ್ಚು +ತೆರಪಿನಲ್
ಓಡುವಡೆ +ಗುರುಸುತನ +ಶರ +ಮಿ
ಕ್ಕೋಡುವಡೆ +ಬಾಗಿಲುಗಳಲಿ +ಕೃತವರ್ಮ +ಕೃಪರೆಸುಗೆ
ಕೂಡೆ +ಮುಮ್ಮುಳಿಯೋದುದ್+ಈ+ ಶರ
ಝಾಡಿಯಲಿ+ ಚತುರಂಗ+ಬಲವ
ಕ್ಕಾಡಿತೇನೆಂಬೆನು +ಯುಧಿಷ್ಠಿರ+ನೃಪನ +ಪರಿವಾರ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೂಡೆ ಕಟ್ಟಿತು ಕಿಚ್ಚು
(೨) ಓಡು, ಮಿಕ್ಕೋಡು – ಪದಗಳ ಬಳಕೆ

ಪದ್ಯ ೭೭: ಕೌರವರಿಗೆ ಯಾವುದು ನಿಶ್ಚಿತವಾದುದು?

ಎಚ್ಚ ಶರವನು ಗದೆಯಲಣೆಯುತ
ಕಿಚ್ಚು ಹೊಕ್ಕಂದದಲಿ ರಥವನು
ಬಿಚ್ಚಿ ಬಿಸುಟನು ಸಾರಥಿಯನಾ ಹಯವನಾ ಧನುವ
ಕೊಚ್ಚಿದನು ಕೊಲೆಗಡಿಗನಿದಿರಲಿ
ಕೆಚ್ಚು ಮನದವರಾರು ಸೋಲವಿ
ದೊಚ್ಚತವಲೇ ನಿಮ್ಮ ಸೇನೆಗೆ ಭೂಪ ಕೇಳೆಂದ (ದ್ರೋಣ ಪರ್ವ, ೨ ಸಂಧಿ, ೭೭ ಪದ್ಯ)

ತಾತ್ಪರ್ಯ:
ಕೌರವರ ಬಾಣಗಳನ್ನು ಗದೆಯಿಂದ ಖಂಡಿಸಿ, ಅವರ ಸಾರಥಿಗಳು, ಕುದುರೆಗಳು, ಧನುಸ್ಸುಗಳನ್ನು ತುಂಡು ಮಾಡಿದನು. ಭೀಮನೆಂಬ ಕೊಲೆಗಡುಕನಿದಿರಿನಲ್ಲಿ ಧೈರ್ಯದಿಂದ ಹೋರಾಡುವವರಾರು? ಧೃತರಾಷ್ಟ್ರ ನಿಮ್ಮ ಸೇನೆಗೆ ಸೋಲೇ ಕಟ್ಟಿಟ್ಟ ಬುತ್ತಿ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಎಚ್ಚು: ಬಾಣ ಪ್ರಯೋಗ ಮಾಡು; ಶರ: ಬಾಣ; ಗದೆ: ಮುದ್ಗರ; ಅಣೆ: ತಿವಿ, ಹೊಡೆ; ಕಿಚ್ಚು: ಬೆಂಕಿ, ಅಗ್ನಿ; ಹೊಕ್ಕು: ಸೇರು; ರಥ: ಬಂಡಿ; ಬಿಚ್ಚು: ಬೇರೆಮಾಡು, ವಿಭಾಗಿಸು; ಬಿಸುಟು: ಹೊರಹಾಕು; ಸಾರಥಿ: ಸೂತ; ಹಯ: ಕುದುರೆ; ಧನು: ಬಿಲ್ಲು; ಕೊಚ್ಚು: ಪುಡಿ, ಹುಡಿ; ಕೊಲೆ: ಸಾಯಿಸು; ಇದಿರು: ಎದುರು, ಮುಂದೆ; ಕೆಚ್ಚು: ಸೊಕ್ಕು, ದರ್ಪ; ಮನ: ಮನಸ್ಸು; ಸೋಲು: ಪರಾಭವ; ಸೇನೆ: ಸೈನ್ಯ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಎಚ್ಚ +ಶರವನು +ಗದೆಯಲ್+ಅಣೆಯುತ
ಕಿಚ್ಚು +ಹೊಕ್ಕಂದದಲಿ +ರಥವನು
ಬಿಚ್ಚಿ +ಬಿಸುಟನು +ಸಾರಥಿಯನಾ +ಹಯವನಾ +ಧನುವ
ಕೊಚ್ಚಿದನು +ಕೊಲೆಗಡಿಗನ್+ಇದಿರಲಿ
ಕೆಚ್ಚು +ಮನದವರಾರು +ಸೋಲವಿದ್
ಒಚ್ಚತವಲೇ +ನಿಮ್ಮ +ಸೇನೆಗೆ +ಭೂಪ +ಕೇಳೆಂದ

ಅಚ್ಚರಿ:
(೧) ಕಿಚ್ಚು, ಕೆಚ್ಚು, ಕೊಚ್ಚು – ಪದಗಳ ಬಳಕೆ

ಪದ್ಯ ೬೧: ವಿರಾಟನು ಭೀಮನನ್ನು ಹೇಗೆ ಹೊಗಳಿದನು?

ಮೆಚ್ಚಿದನು ಭೂಪಾಲ ವಲಲನ
ಹಚ್ಚಿ ಕೊಂಡಾಡಿದನು ಮುನಿಯೊಳ
ಗೆಚ್ಚರಿಸಿದನು ಲೇಸ ಮಾಡಿದೆ ನಿನ್ನ ದೆಸೆಯಿಂದ
ಕಿಚ್ಚು ನಂದಿದ ತೆರನವೊಲು ಮಾ
ಯುಚ್ಚವಕೆ ಮಿಗಿಲಾಯ್ತು ಪೂತುರೆ
ನಿಚ್ಚಟದ ಸಾಹಸಿಕ ನೀನೆಂದುಲಿದನಾ ಮತ್ಸ್ಯ (ವಿರಾಟ ಪರ್ವ, ೪ ಸಂಧಿ, ೬೧ ಪದ್ಯ)

ತಾತ್ಪರ್ಯ:
ವಿರಾಟನು ಸಂತೋಷದಿಂದುಬ್ಬಿ, ವಲಲನನ್ನು ಬಹಳವಾಗಿ ಕೋಂಡಾಡಿದನು. ಅಂಕನಿಗೆ ನೀನು ಒಳ್ಳೆಯ ಕೆಲಸ ಮಾಡಿದೆ, ನಿನ್ನ ದೆಸೆಯಿಂದ ಉರಿಯು ನಂದಿದಂತಾಗಿ, ಉತ್ಸವಕ್ಕೆ ಅವಕಾಶವಾಯಿತು, ಎಂದು ಹೇಳಿ, ವಿರಾಟನು ಎಲೈ ವಲಲ ನೀನು ಮಹಾ ಸಾಹಸಿ ಎಂದು ಹೊಗಳಿದನು.

ಅರ್ಥ:
ಮೆಚ್ಚು: ಹೊಗಳು, ಪ್ರಶಂಶಿಸು; ಭೂಪಾಲ: ರಾಜ; ಹೆಚ್ಚು: ಅಧಿಕ; ಕೊಂಡಾಡು: ಪ್ರಶಂಶಿಸು; ಮುನಿ: ಯೋಗಿ; ಎಚ್ಚರ: ಹುಷಾರು, ಜೋಪಾನ; ಲೇಸು: ಒಳಿತು; ದೆಸೆ: ಕಾರಣ; ಕಿಚ್ಚು: ತಾಪ; ನಂದು: ಆರಿಸು; ತೆರೆ: ತೆರೆಯುವಿಕೆ, ಬಿಚ್ಚುವಿಕೆ; ಮಾಯುಚ್ಚವ: ಉತ್ಸವ; ಮಿಗಿಲು: ಅಧಿಕ; ಪೂತು: ಭಲೇ; ನಿಚ್ಚಟ: ಕಪಟವಿಲ್ಲದುದು; ಸಾಹಸಿ: ಪರಾಕ್ರಮಿ; ಉಲಿ: ಹೇಳು;

ಪದವಿಂಗಡಣೆ:
ಮೆಚ್ಚಿದನು+ ಭೂಪಾಲ +ವಲಲನ
ಹಚ್ಚಿ +ಕೊಂಡಾಡಿದನು +ಮುನಿಯೊಳಗ್
ಎಚ್ಚರಿಸಿದನು +ಲೇಸ +ಮಾಡಿದೆ +ನಿನ್ನ +ದೆಸೆಯಿಂದ
ಕಿಚ್ಚು +ನಂದಿದ +ತೆರನವೊಲು+ ಮಾ
ಯುಚ್ಚವಕೆ +ಮಿಗಿಲಾಯ್ತು +ಪೂತುರೆ
ನಿಚ್ಚಟದ +ಸಾಹಸಿಕ +ನೀನೆಂದ್+ಉಲಿದನಾ +ಮತ್ಸ್ಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಿಚ್ಚು ನಂದಿದ ತೆರನವೊಲು

ಪದ್ಯ ೪೨: ತ್ರಿಪುರಗಳು ಹೇಗೆ ಭಸ್ಮವಾದವು?

ಸರಳ ಮೊನೆಯಲಿ ಸಿಡಿದ ಕಿಡಿಯೊಂ
ದೆರಡರಲಿ ಬೆಂದುದು ಪುರತ್ರಯ
ವರಸ ಕೇಳೈ ಬಳಿಕ ಬಾಣದ ಬಾಯಿಧಾರೆಗಳ
ಹರನ ನಯನದ ಕಿಚ್ಚು ಕಾಣದು
ಪುರವನಾ ಖಾತಿಯಲಿ ಭೇದಿಸಿ
ಮುರಿಮುರಿದು ಸುಡತೊಡಗಿತಬುಜಭವಾಂಡ ಮಂಡಲವ (ಕರ್ಣ ಪರ್ವ, ೭ ಸಂಧಿ, ೪೨ ಪದ್ಯ)

ತಾತ್ಪರ್ಯ:
ಪಾಶುಪತಾಸ್ತ್ರದ ತುದಿಯಿಂದ ಸಿಡಿದ ಒಂದು ಕಿಡಿಗೆ ತ್ರಿಪುರಗಳೂ ಸುಟ್ಟು ಹೋದವು. ಶಲ್ಯ ಕೇಳು, ಅಸ್ತ್ರದ ಬಾಯಿಂದ ಹೊರಹೊಮ್ಮಿದ ಬೆಂಕಿಯ ಕಿಡಿ, ಶಿವನ ಬೆಂಕಿಯ ಕಣ್ಣಿನಿಂದ ಬಂದ ಉರಿಗೆ ಸುಡಲು ತ್ರಿಪುರಗಳೇ ಇರಲಿಲ್ಲ. ಆಗ ಅಗ್ನಿಜ್ವಾಲೆಯು ಬ್ರಹ್ಮಾಂಡ ಮಂಡಲವನ್ನು ಸುಡಲಾರಂಭಿಸಿತು.

ಅರ್ಥ:
ಸರಳು: ಬಾಣ; ಮೊನೆ: ಚೂಪು, ತುದಿ; ಸಿಡಿ: ಸ್ಫೋಟ; ಕಿಡಿ: ಬೆಂಕಿಯ ತುಣುಕು; ಬೆಂದು: ಸುಡು; ಪುರ: ಊರು; ತ್ರಯ: ಮೂರು; ಅರಸ: ರಾಜ; ಬಳಿಕ: ನಂತರ; ಕೇಳು: ಆಲಿಸು; ಬಾಣ: ಅಂಬು; ಬಾಯಿ: ಮುಂಭಾಗ; ಧಾರೆ: ಹರಿವು; ಹರ: ಶಿವ; ನಯನ: ಕಣ್ಣು; ಕಿಚ್ಚು: ಬೆಂಕಿಯ ಕಿಡಿ; ಕಾಣದು: ಗೋಚರಿಸದು; ಪುರ: ಊರು; ಖಾತಿ: ಕೋಪ, ಕ್ರೋಧ; ಭೇದಿಸು: ಒಳಹೊಕ್ಕು; ಮುರಿ: ಸೀಳು; ಸುಡು: ದಹಿಸು; ಅಬುಜಭವಾಂಡ: ಬ್ರಹ್ಮಾಂಡ; ಮಂಡಲ: ಜಗತ್ತು, ನಾಡಿನ ಒಂದು ಭಾಗ;

ಪದವಿಂಗಡಣೆ:
ಸರಳ +ಮೊನೆಯಲಿ +ಸಿಡಿದ +ಕಿಡಿಯೊಂದ್
ಎರಡರಲಿ+ ಬೆಂದುದು +ಪುರತ್ರಯವ್
ಅರಸ +ಕೇಳೈ +ಬಳಿಕ +ಬಾಣದ+ ಬಾಯಿಧಾರೆಗಳ
ಹರನ+ ನಯನದ+ ಕಿಚ್ಚು +ಕಾಣದು
ಪುರವನಾ +ಖಾತಿಯಲಿ +ಭೇದಿಸಿ
ಮುರಿಮುರಿದು +ಸುಡತೊಡಗಿತ್+ಅಬುಜಭವಾಂಡ +ಮಂಡಲವ

ಅಚ್ಚರಿ:
(೧) ಸರಳ, ಬಾಣ – ಸಮನಾರ್ಥಕ ಪದ
(೨) ಸಿಡಿ, ಕಿಡಿ – ಪ್ರಾಸ ಪದಗಳು
(೩) ಬ ಕಾರದ ತ್ರಿವಳಿ ಪದ – ಬಳಿಕ ಬಾಣದ ಬಾಯಿಧಾರೆಗಳ

ಪದ್ಯ ೫೫: ರಾಜನಾದವನು ಯಾವ ಗುಣಗಳನ್ನು ಬಿಡಬೇಕು?

ನೆಚ್ಚದಿರು ಸಿರಿಯನು ವೃಥಾ ಮದ
ಗಿಚ್ಚಿನುರಿಯಲಿ ಬೇಯದಿರು ಮಿಗೆ
ಬೆಚ್ಚಿ ಬೆದರದಿರೆಡರಿನಲಿ ಸತ್ಯವನು ಚಲಿಸದಿರು
ಮೆಚ್ಚದಿರಸತ್ಯವನು ಗುಣವನು
ಮುಚ್ಚದಿರು ಅಪಕೀರ್ತಿನಾರಿಯ
ಮೆಚ್ಚದಿರು ಮರುಳಾಗದಿರು ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೫೫ ಪದ್ಯ)

ತಾತ್ಪರ್ಯ:
ರಾಜನಾದವನು ಐಶ್ವರ್ಯವನ್ನು ಬಹಳ ನಂಬಬಾರದು, ವ್ಯರ್ಥವಾಗಿ ಮದದ ಬೆಂಕಿಯ ಜ್ವಾಲೆಯಲ್ಲಿ ಬೇಯಬಾರದು,
ಮತ್ತು ಕಷ್ಟಗಳು ಅಡಚಣೆಗಳು ಬಂದಾಗ ಹೆದರಿ ಬೆಚ್ಚುಬೀಳಬಾರದು, ಸತ್ಯವನ್ನು ಬಿಟ್ಟು ಕದಲಬಾರದು, ಅಸತ್ಯವನ್ನು ಮೆಚ್ಚಬಾರದು, ಒಳ್ಳೆಯ ಗುಣವನ್ನು ಮುಚ್ಚಿಡಬಾರದು, ಅಪಕೀರ್ತಿಯ ಮಾಯೆಯನ್ನು ಮೆಚ್ಚಬಾರದು ಮತ್ತು ಈ ಅಪಕೀರ್ತಿಯಾ ಮಾಯೆಗೆ ಸಿಲುಕಿ ಹುಚ್ಚನಾಗಬಾರದು, ಎಂದು ರಾಜನಿಗಿರಬೇಕಾದ ಗುಣಗಳನ್ನು ನಾರದರು ಯುಧಿಷ್ಠಿರನಿಗೆ ವಿವರಿಸಿದರು.

ಅರ್ಥ:
ನೆಚ್ಚು: ನಂಬಿಕೆ, ವಿಶ್ವಾಸ; ಮೆಚ್ಚು: ಒಲುಮೆ, ಪ್ರೀತಿ; ಸಿರಿ: ಐಶ್ವರ್ಯ; ವೃಥಾ:ವ್ಯರ್ಥವಾಗಿ; ಮದ: ಅಹಂಕಾರ; ಕಿಚ್ಚು: ತಾಪ, ಅಗ್ನಿ; ಉರಿ: ಜ್ವಾಲೆ; ಬೇಯು:ದಹಿಸು; ಬೆಚ್ಚಿ: ಭಯ; ಬೆದರು: ಹೆದರು; ಸತ್ಯ ನಿಜ; ಚಲಿಸು: ನಡೆಸು; ಅಸತ್ಯ: ಸುಳ್ಳು; ಗುಣ: ನಡೆ, ಸ್ವಭಾವ; ಮುಚ್ಚು: ಮರೆಮಾಡು; ಕೀರ್ತಿ: ಖ್ಯಾತಿ, ಯಶಸ್ಸು; ಮರುಳು: ಹುಚ್ಚು; ಭೂಪಾಲ: ರಾಜ;
ಮಿಗೆ: ಮತ್ತು; ಎಡರು: ವಿಘ್ನ, ಅಡಚಣೆ;

ಪದವಿಂಗಡಣೆ:
ನೆಚ್ಚದಿರು +ಸಿರಿಯನು +ವೃಥಾ +ಮದ
ಕಿಚ್ಚಿನ್+ಉರಿಯಲಿ +ಬೇಯದಿರು +ಮಿಗೆ
ಬೆಚ್ಚಿ +ಬೆದರದಿರ್+ಎಡರಿನಲಿ+ ಸತ್ಯವನು +ಚಲಿಸದಿರು
ಮೆಚ್ಚದಿರ್+ಅಸತ್ಯವನು +ಗುಣವನು
ಮುಚ್ಚದಿರು +ಅಪಕೀರ್ತಿ+ನಾರಿಯ
ಮೆಚ್ಚದಿರು +ಮರುಳಾಗದಿರು+ ಭೂಪಾಲ +ಕೇಳೆಂದ

ಅಚ್ಚರಿ:
(೧) ನೆಚ್ಚು, ಮೆಚ್ಚು, ಬೆಚ್ಚು, ಕಿಚ್ಚು, ಮುಚ್ಚು – ಚ್ಚು ಕಾರದಿಂದ ಕೊನೆಗೊಳ್ಳುವ ಪದಗಳು
(೨) ಅಪಕೀರ್ತಿನಾರಿಯ – ಎಂಬ ಪದಪ್ರಯೋಗ, ಅಪಕೀರ್ತಿ ಯನ್ನು ನಾರಿಗೆ ಹೋಲಿಸಿರುವುದು (ವಿಜಯಲಕ್ಷ್ಮಿ – ವಿಜಯವನ್ನು ಲಕ್ಶ್ಮಿಜೊತೆ ಕೂಡಿಸುವಹಾಗೆ)

ಪದ್ಯ ೬೨: ದುರ್ಯೋಧನ ತಂದೆಯ ಬಳಿ ಯಾವ ಕುತಂತ್ರದ ಉಪಾಯವನ್ನು ಹೇಳಿದನು?

ನೀರವಿಷವಿಕ್ಕಿದೆವು ಕಿಚ್ಚಿನ
ಭಾರವಣೆಯೇನಹುದೊ ಪುಣ್ಯವ
ಹೋರಿಸುವ ಒದಗಿದರೆ ಹೋಗಲಿ ನಮ್ಮ ಹಗೆ ಹರಿದು
ಓರಣಿಸಿತೈ ವೈರಿಗಳ ವಿ
ಸ್ತಾರ ಮೆರೆಯಲಿ ಜೀಯ ಜೂಜಿನ
ಬಾರುಗುತ್ತಿದು ನಿಮ್ಮ ಚಿತ್ತಕೆ ಬಹಡೆ ಮಾಡುವೆವು (ಆದಿ ಪರ್ವ, ೮ ಸಂಧಿ, ೬೨ ಪದ್ಯ)

ತಾತ್ಪರ್ಯ:
ತನ್ನ ಸ್ವಂತ ತಮ್ಮನ ಮಕ್ಕಳನ್ನು ಮುಗಿಸುವ ಉಪಾಯವನ್ನು ಕುರುಡು ಪ್ರೀತಿಯಿಂದ ಕುರುಡಾದ ಧೃತರಾಷ್ಟ್ರನು ಆಲಿಸಿದನು. ದುರ್ಯೋಧನನ್ನು ಬಾ ಮಗನೆ ಬಾ ನಿನ್ನ ನಿಶ್ಚಯವೇನು ಎಂದು ಕೇಳಿದಾಗ, ದುರ್ಯೋಧನನು ಹಿಂದಿನದೆಲ್ಲ ಜ್ಞಾಪಿಸುತ್ತ, ನಾವು ಪಾಂಡವರನ್ನು ಕಟ್ಟಿ ನೀರಿನಲ್ಲಿ ಹಾಕಿದೆವು, ವಿಷವಿಟ್ಟು ಕೊಲ್ಲಲು ಪ್ರಯತ್ನಿಸಿದೆವು, ಆದರೆ ಅವರು ಸಾಯಲಿಲ್ಲ. ಈಗ ಅವರನ್ನು ಬೆಂಕಿಯಲ್ಲಿ ಸುಡುವ ಉಪಾಯವನ್ನು ಮಾಡಿ ನೋಡುತ್ತೇನೆ. ನಮ್ಮ ಪುಣ್ಯದ ಮೇಲೆ ಭಾರಹಾಕಿ ಹೋರಾಡೋಣ, ಹೋಗುವ ಹಾಗಿದ್ದರೆ, ಶತ್ರುಗಳು ನಾಶವಾಗಿ ಹೋಗಲಿ, ತಪ್ಪಿತೋ ಶತ್ರುಗಳೇ ಮರೆಯಲಿ. ಇದೊಂದು ಜೂಜಿನ ಜಾವಟಿಯ ಹೊಡೆತ. ನಿಮ್ಮ ಮನಸ್ಸಿಗೆ ಬಂದರೆ ಮಾಡುತ್ತೇನೆ, ಎಂದು ಹೇಳಿದನು.

ಅರ್ಥ:
ನೀರ: ನೀರು, ಜಲ; ವಿಷ: ನಂಜು; ಕಿಚ್ಚು: ಬೆಂಕಿ, ಅಗ್ನಿ; ಭಾರವಣೆ: ಹೊರೆ, ಭಾರ; ಪುಣ್ಯ: ಸದಾಚಾರ, ಪರೋಪಕಾರ; ಹೋರಿಸುವ: ಭಾರ, ಹೊರೆ; ಒದಗು: ಒಲಿ,ದೊರಕು, ಉಂಟಾಗು; ಹಗೆ: ವೈರ; ಹರಿದು: ಚೂರು, ನಾಶ; ಓರಣ: ಸಾಲು, ಪಂಕ್ತಿ; ವಿಸ್ತಾರ: ವಿಶಾಲ, ಅಗಲವಾದ; ಮೆರೆ: ಹೊಳೆ, ಪ್ರಕಾಶಿಸು; ಜೀಯ: ಒಡೆಯ, ಯಜಮಾನ; ಜೂಜು: ದ್ಯೂತ; ಬಾರುಗುತ್ತು: ಚರ್ಮಪಟ್ಟಿಯ ಹೊಡೆತ; ಚಿತ್ತ: ಮನಸ್ಸು; ಬಹಡೆ: ಬಂದರೆ; ಮಾಡು:ತೊಡಗು;

ಪದವಿಂಗಡನೆ:
ನೀರ+ವಿಷ+ವಿಕ್ಕಿದೆವು +ಕಿಚ್ಚಿನ
ಭಾರವಣೆ+ಯೇನಹುದೊ+ ಪುಣ್ಯವ
ಹೋರಿಸುವ+ ಒದಗಿದರೆ+ ಹೋಗಲಿ +ನಮ್ಮ +ಹಗೆ +ಹರಿದು
ಓರಣಿಸಿತೈ +ವೈರಿಗಳ+ ವಿ
ಸ್ತಾರ+ ಮೆರೆಯಲಿ +ಜೀಯ +ಜೂಜಿನ
ಬಾರುಗುತ್ತಿದು +ನಿಮ್ಮ +ಚಿತ್ತಕೆ+ ಬಹಡೆ+ ಮಾಡುವೆವು

ಅಚ್ಚರಿ:
(೧) ಪಾಪದ ಕೆಲಸಕ್ಕೆ ಪುಣ್ಯದ ಭಾರ – ಪುಣ್ಯವ ಹೋರಿಸುವ ಒದಗಿದರೆ ಹೋಗಲಿ ನಮ್ಮ ಹಗೆ ಹರಿದು
(೨) ಹಗೆ ಹರಿದು, ಜೀಯ ಜೂಜಿನ – ಜೋಡಿ ಪದಗಳ ಬಳಕೆ