ಪದ್ಯ ೫೦: ಸುಯೋಧನನ ಪರಾಕ್ರಮವು ಎಂತಹುದು?

ಗೆಲಿದಡೈವರೊಳೊಬ್ಬನನು ಮಿ
ಕ್ಕುಳಿದವರು ಕಿಂಕರರು ಗಡ ನೀ
ತಿಳಿದು ನುಡಿದಾ ನಿನ್ನನಾಹವಮುಖಕೆ ವರಿಸಿದಡೆ
ಗೆಲಲು ಬಲ್ಲಾ ನೀನು ಫಲುಗುಣ
ಗೆಲುವನೇ ನಿನ್ನುಳಿದರಿಬ್ಬರು
ನಿಲುವರೇ ಕುರುಪತಿಯಘಾಟದ ಗದೆಯ ಘಾಯದಲಿ (ಗದಾ ಪರ್ವ, ೫ ಸಂಧಿ, ೫೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಮಾತನಾಡುತ್ತಾ, ಎಲೈ ಧರ್ಮಜ, ಒಬ್ಬನನ್ನು ಗೆದ್ದರೆ ಉಳಿದವರು ದಾಸರಾಗುತ್ತರೆ ಎಂದು ನೀನು ಹೇಳಿದೆ ಅಲ್ಲವೇ? ಇದನ್ನು ನೀನು ತಿಳಿದು ಹೇಳಿದೆಯಾ? ಯುದ್ಧಕ್ಕೆ ನಿನ್ನನ್ನು ಕರೆದರೆ ನೀಣು ಗೆಲ್ಲಬಲ್ಲೆಯಾ? ಅರ್ಜುನ ಗೆದ್ದಾನೇ? ನಕುಲ ಸಹದೇವರು ಅವನ ಗದೆಯ ಹೊಡೆತವನ್ನು ತಡೆದುಕೊಂಡು ನಿಲ್ಲಬಲ್ಲರೇ?

ಅರ್ಥ:
ಗೆಲಿದು: ಜಯಿಸು; ಉಳಿದ: ಮಿಕ್ಕ; ಕಿಂಕರ: ದಾಸ; ಗಡ: ಅಲ್ಲವೇ; ತಿಳಿ: ಅರಿ; ನುಡಿ: ಮಾತಾಡು; ಆಹವ: ಯುದ್ಧ; ಮುಖ: ಆನನ; ವರಿಸು: ಕೈಹಿಡಿ; ಗೆಲುವು: ಜಯ; ಬಲ್ಲ: ತಿಳಿದ; ನಿಲು: ನಿಲ್ಲು, ಎದುರಿಸು; ಘಾಟ: ಹೆಕ್ಕತ್ತು, ಹೊಡೆತ; ಘಾಯ: ಪೆಟ್ಟು; ಗದೆ: ಮುದ್ಗರ;

ಪದವಿಂಗಡಣೆ:
ಗೆಲಿದಡ್+ಐವರೊಳ್+ ಒಬ್ಬನನು+ ಮಿ
ಕ್ಕುಳಿದವರು+ ಕಿಂಕರರು +ಗಡ +ನೀ
ತಿಳಿದು +ನುಡಿದಾ+ ನಿನ್ನನ್+ಆಹವಮುಖಕೆ +ವರಿಸಿದಡೆ
ಗೆಲಲು +ಬಲ್ಲಾ +ನೀನು +ಫಲುಗುಣ
ಗೆಲುವನೇ+ ನಿನ್ನುಳಿದರಿಬ್ಬರು
ನಿಲುವರೇ+ ಕುರುಪತಿಯ+ಘಾಟದ +ಗದೆಯ +ಘಾಯದಲಿ

ಅಚ್ಚರಿ:
(೧) ಸುಯೋಧನನ ಪರಾಕ್ರಮದ ವರ್ಣನೆ – ಇನ್ನುಳಿದರಿಬ್ಬರು ನಿಲುವರೇ ಕುರುಪತಿಯಘಾಟದ ಗದೆಯ ಘಾಯದಲಿ

ಪದ್ಯ ೪೬: ಧರ್ಮಜನು ಯಾವ ಒಪ್ಪಂದದ ನುಡಿಯನ್ನು ಹೇಳಿದನು?

ನಿನಗೆ ಸೋಲವೆ ನಾವು ಭೂಕಾ
ಮಿನಿಯನಾಳ್ವೆವು ನಮ್ಮೊಳೊಬ್ಬರು
ನಿನಗೆ ಸೋತಡೆ ಮಿಕ್ಕ ನಾಲ್ವರು ನಿನಗೆ ಕಿಂಕರರು
ನಿನಗೆ ಹಸ್ತಿನಪುರದ ಸಿರಿ ಸಂ
ಜನಿತವೀ ಸಂಕೇತವೇ ಸಾ
ಧನ ನಿನಗೆ ನಮಗೆಂದು ನುಡಿದನು ಧರ್ಮಸುತ ನಗುತ (ಗದಾ ಪರ್ವ, ೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧರ್ಮಜನು ತನ್ನ ಮಾತನ್ನು ಮುಂದುವರೆಸುತ್ತಾ, ನೀನು ಸೋತರೆ ನಾವು ಭೂಮಿಯನ್ನಾಳುತ್ತೇವೆ, ನಮ್ಮಲೊಬ್ಬರು ನಿನ್ನೊಡನೆ ಹೋರಾಡಿ ಸೋತರೆ, ಉಳಿದವರು ನಿನ್ನ ಸೇವಕರು, ನಿನಗೆ ಹಸ್ತಿನಾಪುರದ ಐಶ್ವರ್ಯ ವಶವಾಗುತ್ತದೆ. ಇದೇ ನಮಗೂ ನಿಮಗೂ ಒಪ್ಪಂದ ಎಂದನು.

ಅರ್ಥ:
ಸೋಲು: ಪರಾಭವ; ಭೂ: ಭೂಮಿ; ಕಾಮಿನಿ: ಹೆಣ್ಣು; ಭೂಕಾಮಿನಿ: ಭೂದೇವಿ; ಆಳು: ರಾಜ್ಯಭಾರ ಮಾಡು; ಕಿಂಕರ: ದಾಸ, ಸೇವಕ; ಸಿರಿ: ಐಶ್ವರ್ಯ; ಸಂಜನಿತ: ಹುಟ್ಟಿದ; ಸಂಕೇತ: ಗುರುತು; ಸಾಧನ: ಗುರಿಮುಟ್ಟುವಿಕೆ; ನುಡಿ: ಮಾತಾಡು; ಸುತ: ಮಗ; ನಗು: ಹರ್ಷ;

ಪದವಿಂಗಡಣೆ:
ನಿನಗೆ +ಸೋಲವೆ +ನಾವು +ಭೂಕಾ
ಮಿನಿಯನ್+ಆಳ್ವೆವು+ ನಮ್ಮೊಳ್+ ಒಬ್ಬರು
ನಿನಗೆ +ಸೋತಡೆ +ಮಿಕ್ಕ +ನಾಲ್ವರು +ನಿನಗೆ +ಕಿಂಕರರು
ನಿನಗೆ +ಹಸ್ತಿನಪುರದ +ಸಿರಿ +ಸಂ
ಜನಿತವೀ +ಸಂಕೇತವೇ +ಸಾ
ಧನ +ನಿನಗೆ +ನಮಗೆಂದು +ನುಡಿದನು +ಧರ್ಮಸುತ +ನಗುತ

ಅಚ್ಚರಿ:
(೧) ಭೂಮಿಯನ್ನು ಭೂಕಾಮಿನಿ ಎಂದು ಕರೆದ ಪರಿ
(೨) ನಿನಗೆ – ೫ ಬಾರಿ ಪ್ರಯೋಗ; ೧, ೩, ೪ ಸಾಲಿನ ಮೊದಲ ಪದ

ಪದ್ಯ ೩೨: ಉತ್ತರನೇಕೆ ಅರ್ಜುನನನ್ನು ಒಡೆಯನೆಂದು ಹೇಳಿದ?

ನಡೆಗೊಳಿಸಿದನು ರಥವ ಮುಂದಕೆ
ನಡೆಸುತುತ್ತರ ನುಡಿದ ಸಾರಥಿ
ಕೆಡಿಸದಿರು ವಂಶವನು ರಾಯನ ಹಿಂದೆ ಹೆಸರಿಲ್ಲ
ಬಿಡು ಮಹಾಹವವೆನಗೆ ನೂಕದು
ತೊಡೆಯದಿರು ನೊಸಲಕ್ಕರವ ನೀ
ನೊಡೆಯ ಕಿಂಕರರಾಗಿಹೆವು ನಾವಿಂದು ಮೊದಲಾಗಿ (ವಿರಾಟ ಪರ್ವ, ೭ ಸಂಧಿ, ೩೨ ಪದ್ಯ)

ತಾತ್ಪರ್ಯ:
ಉತ್ತರನು ರಥವನ್ನು ಮುಂದಕ್ಕೆ ಚಲಿಸುತ್ತಾ, ಈಗ ನಾನು ಸಾರಥಿ, ನಾನು ಸತ್ತರೆ ನಮ್ಮಪ್ಪನ ಹೆಸರು ಹೇಳಲು ಇನ್ನೊಬ್ಬರಿಲ್ಲ, ನಮ್ಮ ವಂಶವನ್ನು ನಾಶಮಾಡಬೇಡ, ಈ ಮಹಾಯುದ್ಧವು ನನ್ನಕೈಯ್ಯಲ್ಲಾಗುವುದಿಲ್ಲ. ಬದುಕಬೇಕೆಂದು ಹಣೆಯ ಮೇಲೆ ಬರೆದಿರುವ ಅಕ್ಷರವನ್ನು ನೀನು ಅಳಿಸಬೇಡ, ಇಂದಿನಿಂದ ನೀನೇ ಒಡೆಯ ನಾನೆ ಸೇವಕನೆಂದು ತಿಳಿಸಿದ.

ಅರ್ಥ:
ನಡೆ: ಚಲಿಸು; ರಥ: ಬಂಡಿ; ಮುಂದೆ: ಎದುರು; ನುಡಿ: ಮಾತಾಡು; ಸಾರಥಿ: ಸೂತ; ಕೆಡಿಸು: ಹಾಳುಮಾದು; ವಂಶ: ಕುಲ; ರಾಯ: ರಾಜ; ಹಿಂದೆ: ಹಿಂಬದಿ; ಹೆಸರು: ನಾಮ; ಬಿಡು: ತೊರೆ; ಮಹಾಹವ: ದೊಡ್ಡ ಯುದ್ಧ; ನೂಕು: ತಳ್ಳು; ತೊಡೆ: ಒರಸು, ಅಳಿಸು; ನೊಸಲು: ಹಣೆ; ಅಕ್ಕರ: ಅಕ್ಷರ; ಒಡೆಯ: ರಾಜ, ಯಜಮಾನ; ಕಿಂಕರ: ಸೇವಕ;

ಪದವಿಂಗಡಣೆ:
ನಡೆಗೊಳಿಸಿದನು +ರಥವ +ಮುಂದಕೆ
ನಡೆಸುತ್+ಉತ್ತರ +ನುಡಿದ +ಸಾರಥಿ
ಕೆಡಿಸದಿರು +ವಂಶವನು +ರಾಯನ +ಹಿಂದೆ +ಹೆಸರಿಲ್ಲ
ಬಿಡು +ಮಹಾಹವವ್+ಎನಗೆ +ನೂಕದು
ತೊಡೆಯದಿರು+ ನೊಸಲ್+ಅಕ್ಕರವ+ ನೀನ್
ಒಡೆಯ +ಕಿಂಕರರ್+ಆಗಿಹೆವು +ನಾವಿಂದು +ಮೊದಲಾಗಿ

ಅಚ್ಚರಿ:
(೧) ಹಣೆಬರಹ ಎಂದು ಹೇಳಲು – ನೊಸಲಕ್ಕರ
(೨) ನಾನು ದಾಸನೆಂದು ಹೇಳುವ ಪರಿ – ನೀನೊಡೆಯ ಕಿಂಕರರಾಗಿಹೆವು ನಾವಿಂದು ಮೊದಲಾಗಿ

ಪದ್ಯ ೧೦೧: ದುರ್ಯೋಧನನು ವಿಕರ್ಣನನ್ನು ಹೇಗೆ ಹಂಗಿಸಿದನು?

ಅಹುದು ಕರ್ಣನ ನುಡಿ ವಿಕರ್ಣನು
ಬಹುವಚನ ಪಂಡಿತನು ಬಾಹಿರ
ನಹುದಲೇ ಕುರುರಾಜವಂಶದೊಳುದಿಸಿ ಫಲವೇನು
ಅಹಿತಹಿತ ವಿಜ್ಞಾನಿಯಲ್ಲದ
ಬೃಹದುದರ ಕಿಂಕರನ ನುಡಿ ಕಿಂ
ಗಹನವೇ ಕಲಿಕರ್ಣಯೆಂದನು ನಗುತ ಕುರುರಾಯ (ಸಭಾ ಪರ್ವ, ೧೫ ಸಂಧಿ, ೧೦೧ ಪದ್ಯ)

ತಾತ್ಪರ್ಯ:
ಕರ್ಣನ ಮಾತನ್ನು ಕೇಳಿ ದುರ್ಯೋಧನನು ನಗುತ್ತಾ, ನೀನು ಹೇಳಿದುದು ಸರಿಯಾಗಿದೆ ಕರ್ಣ, ವಿಕರ್ಣನು ತುಂಬ ಮಾತಾಡುತ್ತಾನೆ, ನಮ್ಮ ಜೊತೆ ಹುಟ್ಟಿ ಹೊರಗಿನವನಾಗಿದ್ದಾನೆ, ಇವನು ಕೌರವರನಲ್ಲಿ ಹುಟ್ಟಿದಕ್ಕಾದರೂ ಏನು ಪ್ರಯೋಜನ? ಒಳ್ಳೆಯದು ಕೆಟ್ಟದನ್ನು ಅರಿಯದ, ದೊಡ್ಡ ಹೊಟ್ಟೆಗೆ ದಾಸನಾದ ಇವನ ಮಾತು ಅಷ್ಟು ಸುಲಭವಾಗಿ ಒಪ್ಪತಕ್ಕದ್ದೇ? ಎಂದು ಕರ್ಣನಿಗೆ ಹೇಳಿದನು.

ಅರ್ಥ:
ಅಹುದು: ಹೌದು; ನುಡಿ: ಮಾತು; ಬಹು: ಬಹಳ; ವಚನ: ಮಾತು; ಪಂಡಿತ: ಕೋವಿದ; ಬಾಹಿರ: ಹೊರಗೆ; ರಾಜ: ನೃಪ; ವಂಶ: ಕುಲ; ಉದಿಸು: ಹುಟ್ಟು; ಫಲ: ಪ್ರಯೋಜನ; ಅಹಿತ: ವಿರೋಧ; ಹಿತ: ಒಳಿತು; ವಿಜ್ಞಾನಿ: ವಿಶೇಷವಾದ ಜ್ಞಾನವುಳ್ಳವನು; ಬೃಹತ್: ದೊಡ್ಡ; ಉದರ: ಹೊಟ್ಟೆ; ಕಿಂಕರ: ಆಳು, ಸೇವಕ; ನುಡಿ: ಮಾತು; ಕಿಂಗಹನ: ಏನುಮಹಾಕಷ್ಟ; ಕಲಿ: ಶೂರ; ನಗು: ಹಸನ್ಮುಖ; ರಾಯ: ರಾಜ;

ಪದವಿಂಗಡಣೆ:
ಅಹುದು +ಕರ್ಣನ +ನುಡಿ +ವಿಕರ್ಣನು
ಬಹುವಚನ +ಪಂಡಿತನು +ಬಾಹಿರನ್
ಅಹುದಲೇ +ಕುರುರಾಜವಂಶದೊಳ್+ಉದಿಸಿ +ಫಲವೇನು
ಅಹಿತ+ಹಿತ +ವಿಜ್ಞಾನಿಯಲ್ಲದ
ಬೃಹದ್+ಉದರ +ಕಿಂಕರನ+ ನುಡಿ +ಕಿಂ
ಗಹನವೇ+ ಕಲಿಕರ್ಣ+ಎಂದನು +ನಗುತ +ಕುರುರಾಯ

ಅಚ್ಚರಿ:
(೧) ವಿಕರ್ಣನನ್ನು ಹಂಗಿಸುವ ಪರಿ – ಬಹುವಚನ ಪಂಡಿತನು, ಬಾಹಿರನ್, ಅಹಿತಹಿತ ವಿಜ್ಞಾನಿಯಲ್ಲದ ಬೃಹದುದರ ಕಿಂಕರನ ನುಡಿ ಕಿಂಗಹನವೇ

ಪದ್ಯ ೬೦: ದ್ರೌಪದಿಯನ್ನು ಕರೆತರಲು ದುರ್ಯೋಧನನು ಯಾರನ್ನು ಕಳಿಸಿದನು?

ತಮ್ಮ ಬಾರೈ ಹೋಗು ದಿಟ ನೀ
ನಮ್ಮುವರೆ ಹಿಡಿದೆಳೆದು ತಾ ನೃಪ
ರೆಮ್ಮ ಕಿಂಕರರೈವರಿವರಿದ್ದೇನ ಮಾಡುವರು
ತಮ್ಮ ಕರ್ಮವಿಪಾಕ ಗತಿ ನೆರೆ
ತಮ್ಮನೇ ಕೆಡಿಸುವುದು ಧರ್ಮ ವಿ
ದೆಮ್ಮ ಕಾರಣವಲ್ಲ ನೀ ಹೋಗೆಂದನಾ ಭೂಪ (ಸಭಾ ಪರ್ವ, ೧೫ ಸಂಧಿ, ೬೦ ಪದ್ಯ)

ತಾತ್ಪರ್ಯ:
ದುರ್ಯೋಧನನು ದುಶ್ಯಾಸನನನ್ನು ಕರೆದು, ತಮ್ಮ ಇಲ್ಲಿ ಬಾ, ನೀನು ಒಪ್ಪುವುದಾದರೆ ದೌಪದಿಯನ್ನು ಹಿಡಿದು ಎಳೆದುಕೊಂಡು ಬಾ. ಪಾಂಡವರೈವರೂ ನಮ್ಮ ಸೇವಕರು. ಅವರು ಏನು ಮಾದುವ ಹಾಗಿದ್ದಾರೆ? ತಮ್ಮ ಕರ್ಮದ ಫಲವು ಪಕ್ವವಾದಾಗ ಅದು ಅವರನ್ನೇ ಕೆಡಿಸುತ್ತದೆ, ಇದು ನಮಗೆ ಸಂಬಂಧವಿಲ್ಲ. ನಾವು ಕಾರಣರು ಆಲ್ಲ, ತೆರಳು ಎಂದು ಹೇಳಿದನು.

ಅರ್ಥ:
ತಮ್ಮ: ಅನುಜ; ಬಾರೈ: ಆಗಮಿಸು; ಹೋಗು: ತೆರಳು; ದಿಟ: ಸತ್ಯ; ಅಮ್ಮು: ಸಾಧ್ಯ, ಸಾಮರ್ಥ್ಯ; ಹಿಡಿದು: ಬಂಧಿಸು; ಎಳೆ: ಸೆಳೆ; ನೃಪ: ರಾಜ; ಕಿಂಕರ: ದಾಸ; ಕರ್ಮ: ಕಾರ್ಯದ ಫಲ, ಧರ್ಮ; ವಿಪಾಕ: ಫಲ, ಪರಿಣಾಮ; ಗತಿ: ಇರುವ ಸ್ಥಿತಿ, ಅವಸ್ಥೆ; ನೆರೆ: ಹೆಚ್ಚಳ; ಕೆಡಿಸು: ಹಾಳುಮಾಡು; ಧರ್ಮ: ಧಾರಣೆ ಮಾಡುವುದು, ನಿಯಮ; ಕಾರಣ: ನಿಮಿತ್ತ; ಭೂಪ: ರಾಜ;

ಪದವಿಂಗಡಣೆ:
ತಮ್ಮ +ಬಾರೈ +ಹೋಗು +ದಿಟ +ನೀನ್
ಅಮ್ಮುವರೆ +ಹಿಡಿದೆಳೆದು +ತಾ +ನೃಪರ್
ಎಮ್ಮ +ಕಿಂಕರರ್+ಐವರ್+ಇವರಿದ್ದೇನ +ಮಾಡುವರು
ತಮ್ಮ +ಕರ್ಮ+ವಿಪಾಕ +ಗತಿ +ನೆರೆ
ತಮ್ಮನೇ +ಕೆಡಿಸುವುದು +ಧರ್ಮ +ವಿ
ದೆಮ್ಮ +ಕಾರಣವಲ್ಲ+ ನೀ +ಹೋಗೆಂದನಾ +ಭೂಪ

ಅಚ್ಚರಿ:
(೧) ದ್ರೌಪದಿಯನ್ನು ತರುವ ಬಗೆ – ಹಿಡಿದೆಳೆದು ತಾ
(೨) ದುರ್ಯೋಧನನ ಬಾಯಿಂದ ಧರ್ಮ ಕರ್ಮದ ಮಾತು – ತಮ್ಮ ಕರ್ಮವಿಪಾಕ ಗತಿ ನೆರೆ
ತಮ್ಮನೇ ಕೆಡಿಸುವುದು ಧರ್ಮ ವಿದೆಮ್ಮ ಕಾರಣವಲ್ಲ

ಪದ್ಯ ೮: ಕೃಷ್ಣನು ಕರ್ಣನಿಗೆ ಯಾವ ಆಸೆಗಳನ್ನು ತೋರಿದನು?

ನಿನಗೆ ಹಸ್ತಿನಪುರದ ರಾಜ್ಯದ
ಘನತೆಯನು ಮಾಡುವೆನು ಕೌರವ
ಜನಪ ಪಾಂಡವ ಜನಪರೋಲೈಸುವರು ಗದ್ದುಗೆಯ
ನಿನಗೆ ಕಿಂಕರವೆರಡು ಸಂತತಿ
ಯೆನಿಸಲೊಲ್ಲದೆ ನೀನು ದುರ್ಯೋ
ಧನನ ಬಾಯ್ದಂಬುಲಕೆ ಕೈಯಾನುವರೆ ಹೇಳೆಂದ (ಉದ್ಯೋಗ ಪರ್ವ, ೧೧ ಸಂಧಿ, ೮ ಪದ್ಯ)

ತಾತ್ಪರ್ಯ:
ಕರ್ಣನಿಗೆ ಕೃಷ್ಣನು ಆಸೆ ಆಮೀಶಗಳನ್ನು ನೀಡಲು ಶುರುಮಾಡಿದ. ನಿನಗೆ ಹಸ್ತಿನಾಪುರದ ರಾಜನೆಂಬ ಹಿರಿಮೆಯನ್ನು ಕೊಡಿಸುತ್ತೇನೆ. ಕೌರವ ಪಾಂಡವ ರಾಜರಿಬ್ಬರೂ ನಿನ್ನನ್ನು ಓಲಿಅಸಿಕೊಂಡಿರುತ್ತಾರೆ. ಈ ಎರಡು ಸಂತತಿಯವರೂ ನಿನಗೆ ಸೇವಕರೆನ್ನಿಸಿಕೊಳ್ಳುವ ಹಿರಿಮೆಯನ್ನು ತಿರಸ್ಕರಿಸಿ ದುರ್ಯೋಧನನ ಬಾಯ್ದಂಬುಲಕ್ಕೆ ಕೈಯೊಡ್ದಿನಿಲ್ಲುವೆಯಾ? ಎಂದು ಕೃಷ್ಣನು ಕರ್ಣನನ್ನು ಕೇಳಿದ.

ಅರ್ಥ:
ರಾಜ್ಯ: ರಾಷ್ಟ್ರ; ಘನತೆ: ಶ್ರೇಷ್ಠತೆ; ಜನಪ: ರಾಜ; ಓಲೈಸು:ಉಪಚರಿಸು; ಗದ್ದುಗೆ: ಪೀಠ; ಕಿಂಕರ: ಸೇವಕ; ಸಂತತಿ: ವಂಶ, ಪೀಳಿಗೆ; ಒಲ್ಲದೆ: ಇಷ್ಟಪಡದೆ; ಬಾಯ್ದಂಬುಲ: ಬಾಯಿಯಲ್ಲಿರುವ ತಾಂಬೂಲ;ಕೈಯಾನು: ಕೈಚಾಚಿ;

ಪದವಿಂಗಡಣೆ:
ನಿನಗೆ +ಹಸ್ತಿನಪುರದ +ರಾಜ್ಯದ
ಘನತೆಯನು +ಮಾಡುವೆನು +ಕೌರವ
ಜನಪ +ಪಾಂಡವ +ಜನಪರ್+ಓಲೈಸುವರು +ಗದ್ದುಗೆಯ
ನಿನಗೆ +ಕಿಂಕರವ್+ಎರಡು +ಸಂತತಿ
ಯೆನಿಸಲ್+ಒಲ್ಲದೆ +ನೀನು +ದುರ್ಯೋ
ಧನನ +ಬಾಯ್ದಂಬುಲಕೆ +ಕೈಯಾನುವರೆ+ ಹೇಳೆಂದ

ಅಚ್ಚರಿ:
(೧) ಜನಪ – ೩ ಸಾಲಿನಲ್ಲಿ ೨ ಬಾರಿ ಪ್ರಯೋಗ
(೨) ಕರ್ಣನನ್ನು ಹೀಯಾಳಿಸುವ ಬಗೆ: ದುರ್ಯೋಧನನ ಬಾಯ್ದಂಬುಲಕೆ ಕೈಯಾನುವರೆ

ಪದ್ಯ ೯೪: ಬ್ರಹ್ಮನ ಹಿರಿಮೆ ಎಂತಹದು?

ಮುನಿಗಳೇ ಮಾಣಿಯರು ಮಂತ್ರಾಂ
ಗನೆಯರೋಲೆಯಕಾತಿಯರು ಸುರ
ಜನವೆ ಕಿಂಕರಜನವು ಸೂರ್ಯಾದಿಗಳೆ ಸಹಚರರು
ಘನ ಚತುರ್ದಶವಿದ್ಯೆ ಪಾಠಕ
ಜನವಲೈ ಪಾಡೇನು ಪದುಮಾ
ಸನನ ಪರುಠವವಾ ಸಭೆಗೆ ಸರಿಯಾವುದೈ ನೃಪತಿ (ಸಭಾ ಪರ್ವ, ೧ ಸಂಧಿ, ೯೪ ಪದ್ಯ)

ತಾತ್ಪರ್ಯ:
ಬ್ರಹ್ಮನ ಆಸ್ಥಾನದ ಹಿರಿಮೆ ಎಂತಹುದೆಂದು ನಾರದರು ವಿವರಿಸುತ್ತಾ, ಮುನಿಗಳೇ ಬ್ರಹ್ಮನ ಊಳಿಗದ ಹುಡುಗರು, ಮಂತ್ರಾಭಿಮಾನಿದೇವತೆಗಳು ಓಲೆಕಾತಿಯರು, ದೇವತೆಗಳೇ ಆತನ ಸೇವಕರು, ಸೂರ್ಯನೇ ಮೊದಲಾದ ಗ್ರಹಗಳು ಅವನ ಸಹಚರರು, ಚತುರ್ದಶ ವಿದ್ಯೆಗಳು ಬ್ರಹ್ಮನ ವಂದಿಮಾಗಧರು, ಇವರೆಲ್ಲರು ಬ್ರಹ್ಮನ ಆಸ್ಥಾನದಲ್ಲಿರುವವರು, ಇದು ಬ್ರಹ್ಮನ ಹಿರಿಮೆ.

ಅರ್ಥ:
ಮುನಿ: ಋಷಿ; ಮಾಣಿ:ವಟು, ಬ್ರಹ್ಮಚಾರಿ, ಬಾಲಕ; ಮಂತ್ರ:ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅಂಗನೆ: ಸ್ತ್ರೀ; ಓಲೆಕಾತಿ:ಸೇವಕಿ; ಸುರ: ದೇವತೆ; ಜನ: ಸಮೂಹ; ಕಿಂಕರ:ಸೇವಕ; ಸೂರ್ಯ: ರವಿ; ಆದಿ: ಮುಂತಾದ; ಸಹಚರ: ಜೊತೆಯಲ್ಲಿ ಓಡಾಡುವವರು; ಘನ: ಶ್ರೇಷ್ಠ; ವಿದ್ಯೆ: ಜ್ಞಾನ; ಪಾಠಕ: ಹೊಗಳುಭಟ್ಟ; ಪಾಡು: ಹಾಡು; ಪದುಮ: ಕಮಲ; ಆಸನ: ಕುಳಿತಿರುವ; ಪರಠುವ: ಶ್ರೇಷ್ಠತೆ; ಸಭೆ: ದರ್ಬಾರು; ಸರಿ: ಸಮಾನ; ನೃಪತಿ: ರಾಜ;

ಪದವಿಂಗಡಣೆ:
ಮುನಿಗಳೇ +ಮಾಣಿಯರು +ಮಂತ್ರ
ಅಂಗನೆಯರ್+ಓಲೆಯಕಾತಿಯರು+ ಸುರ
ಜನವೆ +ಕಿಂಕರ+ಜನವು +ಸೂರ್ಯಾದಿಗಳೆ +ಸಹಚರರು
ಘನ +ಚತುರ್ದಶ+ವಿದ್ಯೆ +ಪಾಠಕ
ಜನವಲೈ+ ಪಾಡೇನು +ಪದುಮ
ಆಸನನ +ಪರುಠವವಾ+ ಸಭೆಗೆ +ಸರಿಯಾವುದೈ +ನೃಪತಿ

ಅಚ್ಚರಿ:
(೧) ಮಾಣಿ, ಓಲೆಕಾತಿ, ಕಿಂಕರ, ಸಹಚರ, ಪಾಠಕ – ಜೊತೆಯಲ್ಲಿರುವವರ ವಿವರ
(೨) ೧ ಸಾಲಿನ ಎಲ್ಲಾ ಪದ “ಮ” ಕಾರದಿಂದ ಪ್ರಾರಂಭ
(೩) “ಜನ” ಪದದ ಬಳಕೆ – ಸುರಜನ, ಕಿಂಕರಜನ, ಪಾಠಕಜನ
(೪) “ಪ” ಕಾರದ ಪದದ ಗುಂಪು – ಪಾಠಕಜನವಲೈ ಪಾಡೇನು ಪದುಮಾಸನನ ಪರುಠವವಾ