ಪದ್ಯ ೨೨: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು – ೩?

ಎತ್ತಣೇಕಾದಶ ಚಮೂಪತಿ
ಯೆತ್ತಣೀಯೇಕಾಕಿತನ ತಾ
ನೆತ್ತ ಗಜಹಯ ರಥ ಸುಖಾಸನದತಿಶಯದ ಸುಳಿವು
ಎತ್ತಣೀ ಕೊಳುಗುಳದ ಕಾಲ್ನಡೆ
ಯೆತ್ತಣಾಹವದಭಿಮುಖತೆ ಬಳಿ
ಕೆತ್ತಣಪಜಯವಿಧಿಯ ಘಟನೆ ನೃಪಾಲ ನಿನಗೆಂದ (ಗದಾ ಪರ್ವ, ೩ ಸಂಧಿ, ೨೨ ಪದ್ಯ)

ತಾತ್ಪರ್ಯ:
ಹನ್ನೊಂದು ಅಕ್ಷೋಹಿಣಿ ಸೈನ್ಯದ ಒಡೆತನವೆಲ್ಲಿ? ಏಕಾಕಿಯಾಗಿ ಹೋಗುವುದೆಲ್ಲಿ? ಆನೆ, ಕುದುರೆ, ರಥಗಳ ಸುಖಾಸನದ ಮೇಲೆ ಮಾಡುತ್ತಿದ್ದ ಪ್ರಯಾಣವೆಲ್ಲಿ? ರಣರಂಗದಲ್ಲಿ ಕಾಲಿಂದ ನಡೆಯುತ್ತಿರುವುದೆಲ್ಲಿ? ಯುದ್ಧಾರಂಭಮಾಡಿ ಮುಂದೆ ಹೊರಟುದೇನು, ಸೋತು ಪಲಾಯನ ಮಾಡುವ ಈ ಗತಿಯೆಲ್ಲಿ? ಎಂದು ಸಂಜಯನು ದುರ್ಯೋಧನನನ್ನು ಕೇಳಿದನು.

ಅರ್ಥ:
ಎತ್ತಣ: ಎಲ್ಲಿಯ; ಏಕಾದಶ: ಹನ್ನೊಂದು; ಚಮೂಪತಿ: ಸೇನಾಧಿಪತಿ; ಏಕಾಕಿತನ: ಒಂಟಿತನ; ಗಜ: ಆನೆ; ಹಯ: ಕುದುರೆ; ರಥ: ಬಂಡಿ; ಸುಖಾಸನ: ಸಿಂಹಾಸನ; ಅತಿಶಯ: ಹೆಚ್ಚು; ಸುಳಿವು: ಚಿಹ್ನೆ, ಗುರುತು; ಕೊಳುಗುಳ: ಯುದ್ಧ, ರಣರಂಗ; ಕಾಲ್ನಡೆ: ನಡಿಗೆ; ಆಹವ: ಯುದ್ಧ; ಅಭಿಮುಖ: ಎದುರು; ಬಳಿಕ: ನಂತರ; ಅಪಜಯ: ಸೋಲು; ವಿಧಿ: ನಿಯಮ; ಘಟನೆ: ನಡೆದದ್ದು; ನೃಪಾಲ: ರಾಜ;

ಪದವಿಂಗಡಣೆ:
ಎತ್ತಣ್+ಏಕಾದಶ +ಚಮೂಪತಿ
ಎತ್ತಣೀ+ಏಕಾಕಿತನ +ತಾನ್
ಎತ್ತ +ಗಜ+ಹಯ +ರಥ +ಸುಖಾಸನದ್+ಅತಿಶಯದ +ಸುಳಿವು
ಎತ್ತಣೀ +ಕೊಳುಗುಳದ +ಕಾಲ್ನಡೆ
ಎತ್ತಣ+ಆಹವದ್+ಅಭಿಮುಖತೆ +ಬಳಿಕ್
ಎತ್ತಣ್+ಅಪಜಯ+ವಿಧಿಯ +ಘಟನೆ +ನೃಪಾಲ +ನಿನಗೆಂದ

ಅಚ್ಚರಿ:
(೧) ಎತ್ತಣ – ಪದದ ಬಳಕೆ
(೨) ಏಕಾದಶ, ಏಕಾಕಿತನನ – ಪದಗಳ ಬಳಕೆ